‘ಕಾಗೆ ಮುಟ್ಟಿದ ನೀರು’ ಏಕಾಂತದಿಂದ ಲೋಕಾಂತದೆಡೆಗೆ…….
ಚದುರಿ ಬಿದ್ದ ಆತ್ಮದ ತುಣುಕುಗಳು ಒಂದೆಡೆ ಸೇರಿದ ಚರಿತ್ರೆ ಡಾ.ಪುರುಪೋತ್ತಮ ಬಿಳಿಮಲೆಯವರ ಆತ್ಮಚರಿತ್ರೆ ಕಾಗೆ ಮುಟ್ಟಿದ ನೀರು. ಕೃತಿಯಲ್ಲಿ ಪ್ರಾಮಾಣಿಕವಾಗಿ , ನಿಷ್ಕಲ್ಮಶವಾಗಿ ಎಲ್ಲವನ್ನು ತೆರೆದು ಹೇಳಿದ್ದು ಇವರ ಕವಿಧರ್ಮದ ಮನಸ್ಸು ಆತ್ಮಚರಿತ್ರೆಯಲ್ಲಿ ಯಾರು ಸಂಪೂರ್ಣ ಸತ್ಯ ಹೇಳಲಾರರು ಎಂಬುದನ್ನು ಕವಿಯೋರ್ವರು ಉಲ್ಲೇಖಿಸಿದನ್ನು ಓದಿರುವೆ. ಇವರೆ ಹೇಳುವಂತೆ “ಇದರಲ್ಲಿ ಎಲ್ಲವನ್ನು ಬರೆದಿದ್ದೇನೆ ಎಂದಲ್ಲ ,ಆದರೆ ಬರೆದದಷ್ಟು ನಿಜವೆ” ಎಂಬ ಮಾತು ಪ್ರಾರಂಭದಲ್ಲಿಯೆ ಕೃತಿಯ ಬಗ್ಗೆ ಅಭಿಮಾನ ಉಕ್ಕುವಂತೆ ಮಾಡುತ್ತದೆ. ಏಕೆಂದರೆ ಅನಾವಶ್ಯಕ, ಹೇಳಲೆಬಾರದು ಎಂಬುದನ್ನು ಅಪೂರ್ಣವಾಗಿ ಹೇಳುವುದಕ್ಕಿಂತ ಹೇಳಿದಷ್ಟನ್ನು ನೈಜ್ಯವಾಗಿ ಹೇಳಿದರೆ ಅದಕ್ಕೆ ಬೆಲೆ ಹೆಚ್ಚು. ತಮ್ಮ ವೈಯುಕ್ತಿಕ ಬದುಕಿನ ವಿಚಾರಗಳನ್ನು ಮುಖ್ಯವೆನಿಸುವಷ್ಟು ಹೇಳಿ , ಸಮಾಜಮುಖಿಯಾಗಿ ತಾವು ತೊಡಗಿಸಿಕೊಂಡಿರುವ ವಿಚಾರ ಕೃತಿಯಲ್ಲಿ ಹೆಚ್ಚಿದೆ. ಅದಕ್ಕಾಗಿ ಕಾಗೆ ಮುಟ್ಟಿದ ನೀರು ಏಕಾಂತದಿಂದ ಲೋಕಾಂತದೆಡೆಗೆ ಎಂದು ಹೇಳಿರುವೆ. ಇವರ ಜೀವನದ ರೋಚಕತೆ ಹಳ್ಳಿಯ ಬಡ ಮಕ್ಕಳಿಗೆ ಸ್ಪೂರ್ತಿಯ ಸೆಲೆ. ಇವರ ದೇಹಕ್ಕೆ ವಯಸ್ಸಾದಷ್ಟು ಮನಸ್ಸಿಗೆ ಖಂಡಿತ ವಯಸ್ಸಾಗಿಲ್ಲ ಎಂಬುದು ನಾನಾ ರೀತಿಯ ಖಾಯಿಲೆಗಳನ್ನು ದೇಹ ಮೆಟ್ಟಿನಿಂತಿರುವುದೆ ಸಾಕ್ಷಿ. ಇವರ ಕೃತಿ ವಿಶಿಷ್ಟವಾಗುವುದು ತಮಗಿಂತ ವಯಸ್ಸಿನಲ್ಲಿಯು, ವೃತ್ತಿಯಲ್ಲಿಯು ಕಿರಿಯನಾಗಿರುವವರನ್ನು ಗೌರವಿಸುವ ಗುಣ, ಉಪಕಾರ ಸ್ಮರಣೆ, ಸ್ನೇಹಗುಣ , ಸಹಾಯ ಗುಣ, ಹಾಸ್ಯಭರಿತ ಮಾತುಗಳು, ಮನುಷ್ಯರಲ್ಲಿ ಜಾತಿಯೆಂದರೆ ಅದು ಗಂಡು ಮತ್ತು ಹೆಣ್ಣು ಮಾತ್ರ ಎಂಬ ನಂಬಿಕೆ, ಕುಟುಂಬ ಪ್ರೀತಿ, ಕೆಟ್ಟದ್ದು ಮಾಡಿದವರಿಗು ಒಳ್ಳೆದು ಬಯಸುವುದು, ಊಟ ನೀಡಿ ಆದರಿಸಿದವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಇತ್ಯಾದಿ. ಇಲ್ಲಿ ಅಂತರಂಗದ ಮಾತುಗಳನ್ನು ಹೇಳುವ ದಾರಿಯಲ್ಲಿ ಸಹೃದಯತೆ ಇದೆ.
ರೋಯ್ತಾ ಎಂಬ ಹಳ್ಳಿ ಹುಡುಗ ದೆಹಲಿಯ ಪ್ರತಿಷ್ಠಿತ ಜೆಎನ್ ಯು ಸಂಸ್ಥೆಯ ಪ್ರೊಫೆಸರ್ ಆಗಿ ಬೆಳೆದ ಹಂತಗಳು ದೇದಿಪ್ಯಮಾನ .ಕೃತಿಯ ಮೊದಲ ಅಧ್ಯಾಯವಾದ ‘ವಿದ್ಯೆ ಇಲ್ಲದ ಜಾತಕದವನು ಹುಟ್ಟಿದ್ದು ಮಾತ್ರವಲ್ಲ ಶಾಲೆಗೆ ಹೋದದ್ದು’ ಪ್ರತಿ ಮನುಷ್ಯನು ತಿಳಿದುಕೊಳ್ಳಲೆಬೇಕಾದ ಇವರ ಅನುಭವ . ಲೇಖಕರ ತಂದೆಗೆ ಜಾತಕ, ಪಂಚಾಂಗಗಳಲ್ಲಿ ಅಪಾರವಾದ ನಂಬಿಕೆ. ಹಾಗಾಗಿ ಮಗ ಬಿಳಿಮಲೆಯವರು ಜನಿಸಿದಾಗ ಜಾತಕ ಬರೆಯಿಸಿದರು. ಅದರಲ್ಲಿ ಈ ಜಾತಕದವನಿಗೆ ವಿದ್ಯಾಯೋಗವಿಲ್ಲ ಎಂದು ಬರೆದರು. ಆದರೆ ವಾಸ್ತವವಾಗಿ ಇದು ಸಂಪೂರ್ಣ ವಿರುದ್ಧವಾಗಿರುವ ವೈರುದ್ಯವು ಜನತೆಗೆ ಅತ್ಯಂತ ದೊಡ್ಡ ಪಾಠ. ತಂದೆಯಿಂದ ಬಳುವಳಿಯಾಗಿ ಬಂದಂತಹ ಯಕ್ಷಗಾನದ ಬಗ್ಗೆ ಆಸಕ್ತಿ , ತಿಳುವಳಿಕೆ ಮತ್ತು ಅದರಲ್ಲಿ ತೊಡಗಿಸಿಕೊಂಡು ಈ ಕಲೆಯ ಉಳಿವಿಗಾಗಿ ಗಂಬೀರವಾಗಿ ತೊಡಗಿಸಿಕೊಳ್ಳುತ್ತಾರೆ. ಎರಡು ಸಲ ವಿದೇಶ ನೆಲದಲ್ಲಿ ಇವರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನಗೊಂಡದ್ದೆ ಇದಕ್ಕೆ ನಿದರ್ಶನ. ನಮ್ಮ ನೆಲದ ಕಲೆಯೊಂದನ್ನು ಕಾಯ ವಾಚ ಮನಸಾ ಸಂಘಟಿಸಿ ಅದನ್ನು ಇತರ ಸಂಸ್ಕೃತಿಯ ಮುಂದೆ ಎದ್ದು ನಿಲ್ಲಿಸಬೇಕೆಂಬ ಅಭಿಲಾಷೆ ಇದೆಯಲ್ಲ ಇದೊಂದು ಮಹತ್ತರವಾದ ಸಾಧನೆ . ಇದರಂತೆ ನಮ್ಮ ಹಳ್ಳಿ ಆಟಗಳ ಕುರಿತು ವಿದೇಶದಲ್ಲಿ ಬೆಳಕು ಚೆಲ್ಲಿದ್ದಾರೆ. ಮೊದಲ ಹತ್ತು ಅಧ್ಯಾಯಗಳಲ್ಲಿ ಸಂಪೂರ್ಣ ಇವರ ಬಾಲ್ಯದ ಚಿತ್ರಣ ನಮ್ಮಂತರಂಗವನ್ನು ತೋಯಿಸುತ್ತದೆ. ಶಾಲೆಗೆ ಹೋಗಲು ಪ್ರತಿದಿನ ಆರೇಳು ಕಿಲೋಮೀಟರ್ ದಟ್ಟಡವಿಯಲ್ಲಿ ನಡೆಯುವುದು ಮತ್ತು ಹಳ್ಳವೊಂದನ್ನು ದಾಟುವ ವಿಚಾರ ಆ ಬಾಲಕನ ಮನೋಧೈರ್ಯ ಹೇಗಿದ್ದಿರಬಹುದೆಂದು ಅನಿಸದೆ ಇರುವುದಿಲ್ಲ. ಒಂದು ದಿನವಂತು ಮಳೆಗಾಲದ ದಿನ ಹಳ್ಳ ದಾಟಿಸಲು ಅಮ್ಮ ಬರಲೆ ಇಲ್ಲವೆಂದು ಮರದ ಕೆಳಗೆ ಮಳೆಯಲ್ಲಿ ರಾತ್ರಿ ಕಳೆದ ಸಂಗತಿ ಸಂಪೂರ್ಣ ಅವರ ಜೀವನದ ಹೋರಾಟಕ್ಕು ಪೂರಕವಾಗಿ ನಿಲ್ಲುವ ವಾಸ್ತವ. ಆ ಸಣ್ಣ ಪ್ರಾಯದಿಂದಲೆ ಜ್ಞಾನವೃದ್ಧಿಯ ಬಗ್ಗೆ ಇದ್ದ ಹಪಾಹಪಿ ಯುವಜನಾಂಗವೆಲ್ಲ ಅಭಿಮಾನ ಪಡುವಂತದ್ದು.
ತಂದೆ ತಮ್ಮ ಆದಾಯದ ಅಂದಾಜು ಮಾಡಿ ವೃತ್ತಿಪರ ಕೋರ್ಸ್ ವೊಂದಕ್ಕೆ ಕೊಕ್ಕರ್ಣೆಯಲ್ಲಿ ದಾಖಲಾತಿ ಮಾಡಿಸಿದರು . ಓದಿನ ವಿಚಾರದಲ್ಲಿ ತನ್ನ ಗುರಿ ಇನ್ನು ಹೆಚ್ಚಿಗೆ ಎಂಬುದನ್ನು ತಾನೆ ಮನಗಂಡು ತನಗೆ ತಾನೆ ಸುಬ್ರಹ್ಮಣ್ಯಕ್ಕೆ ಬಂದು ಪಿಯುಸಿ ಗೆ ಸೇರಿಕೊಂಡರು. ಅಲ್ಲೂ ಮಾರ್ಗದರ್ಶನ ಸರಿಯಾಗಿಲ್ಲದೆ ವಿಜ್ಞಾನ ವಿಭಾಗ ಆರಿಸಿಕೊಂಡು ನಪಾಸಾದಾಗ ತನ್ನ ದಾರಿ ಇದಲ್ಲ ಅಂತ ಮನಗಂಡು ಮತ್ತೆ ಗುರಿಯ ದಾರಿಯಲ್ಲಿ ನಡೆದು ಡಾಕ್ಟರೇಟ್ ಪಡಕೊಂಡದ್ದು ಇತಿಹಾಸ. ಜಾನಪದ, ಭಾಷೆ,ಸಂಶೋಧನೆ, ಸಂಸ್ಕ್ರತಿ ಗಳ ಬಗ್ಗೆ ಅಧ್ಯಯನಗಳಲ್ಲಿ ವಿಶೇಷ ಆಸಕ್ತಿ. ಇತಿಹಾಸದ ಅವಶೇಷಗಳನ್ನು ಉಳಿಸಿಕೊಳ್ಳುವುದರ ಬಗ್ಗೆ ತೀವ್ರ ಆಸಕ್ತಿ ವಹಿಸುತ್ತಿದ್ದರು. ಇತಿಹಾಸದ ನೆನಪುಗಳನ್ನು ನಾಶ ಮಾಡಿಕೊಳ್ಳುವುದರಿಂದ ಉಂಟಾಗಬಹುದಾದ ನಷ್ಟಗಳ ಬಗ್ಗೆ ನಮ್ಮ ಜನರಿಗಿನ್ನು ತಿಳುವಳಿಕೆ ಇಲ್ಲವಲ್ಲ ಎಂದು ಮರುಕದಿಂದ ನುಡಿಯುತ್ತಾರೆ. ಇವರ ಅಧ್ಯಯನಶೀಲ ಆಸಕ್ತಿಗೆ ಉದಾಹರಣೆಯಾಗಿ ಮೊದಲು ಉದ್ಯೋಗಕ್ಕೆ ಸೇರಿದ ಸುಳ್ಯ ಕಾಲೇಜ್ ನಲ್ಲಿ ಸರ್ವ ಸೌಲಭ್ಯಗಳಿದ್ದಾಗ್ಯೂ , ಶೈಕ್ಷಣಿಕ ವಾತಾವರಣ ಇನ್ನೂ ಹೆಚ್ಚು ಲಭ್ಯತೆ ಇರುವ ಕಡೆಗೆ ಹೋಗುತ್ತೇನೆ ಎಂದು ಬೀಳ್ಗೊಡುವಾಗ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಅಧ್ಯಯನಗಳ ಅತಿಯಾದ ದಾಹ ಮತ್ತು ಮೋಹ ಅವರನ್ನು ದೇಶ ವಿದೇಶಗಳಲ್ಲಿಯು ಸೆಮಿನಾರ್ ನೀಡುವಷ್ಟು ಬೆಳೆಯಿಸಿದವು. ಎಲ್ಲಿ ಹೋದರು ಅಲ್ಲಿನ ಭಾಷೆ, ಜನಪದ, ಸಂಸ್ಕೃತಿಯ ಅಧ್ಯಯನ ಮಾಡಿ ನಂತರ ಅದರ ಮೂಲವನ್ನು ತನ್ನ ಬಂಟಮಲೆಯ ನೆಲಕ್ಕೆ ಅಲ್ಲಿನ ಸಂಸ್ಕೃತಿಗೆ ತುಲನೆ ಮಾಡಿ ಹೇಳುವುದು ಇವರ ವೈಶಿಷ್ಟ್ಯತೆ.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸಾಂಸ್ಕೃತಿಕ ಸಮುಚ್ಛಯ ನಿರ್ಮಾಣಗೊಳ್ಳಲು ಶ್ರಮಿಸಿದ್ದು ಸರ್ವ ಕನ್ನಡಿರು ತಲೆದೂಗುವಂತದ್ದು. ಪ್ರಾಮಾಣಿಕತೆ ಬಿಳಿಮಲೆಯವರ ಬಹು ದೊಡ್ಡ ಆಸ್ತಿ. ಇದುವೆ ಕಾರಣಕ್ಕಾಗಿ ಜೀವನದಲ್ಲಿ ಬಹುದೊಡ್ಡ ಅನುಭವ ಮತ್ತು ಜ್ಞಾನ ತಂದುಕೊಟ್ಟ ಹಂಪಿ ವಿಶ್ವವಿದ್ಯಾಲಯವನ್ನು ಬೇಸರದಿಂದಲೆ ಬಿಟ್ಟು ಕರ್ನಾಟಕವನ್ನೆ ತೊರೆದರು. ನನಗೆ ಸಿಕ್ಕ ಹುದ್ದೆಗೆ ನ್ಯಾಯ ಒದಗಿಸಲು ಸದಾ ಬದ್ಧನಾಗಿದ್ದೇನೆ ಎಂದು ಹೇಳುವ ಬಿಳಿಮಲೆಯವರು ಹಾಗೆ ನಡೆದುಕೊಂಡಿದ್ದರು. ಸಂಶೋಧನೆ ಇವರ ನೆಚ್ಚಿನ ವಿಷಯವಾದ್ದರಿಂದ ಹಂಪೆಯಲ್ಲಿ ಇದರ ಸಂಪೂರ್ಣ ಪ್ರಯೋಜನವನ್ನು ಪಡಕೊಂಡರು . ಅದೆಷ್ಟೋ ವರ್ಷಗಳ ದುಡಿಮೆಯ ನಂತರ ದೆಹಲಿಯ ‘ವಸಂತ ಕುಂಜ’ದಲ್ಲಿ ಸ್ವಂತ ಮನೆ ನಿರ್ಮಿಸುವಾಗ ಹುಟ್ಟಿದೂರಾದ ಕೂತ್ಕುಂಜವನ್ನು ನೆನಪಿಸಿಕೊಂಡು , ತನ್ನೆರಡು ಊರುಗಳಲ್ಲಿ ಕುಂಜಗಳಿರುವ ಕಾಕತಾಳೀಯವನ್ನು ಚಕಿತದಿಂದ ಕಾಣುತ್ತಾರೆ. ಆ ಕ್ಷಣದ ಸ್ಮರಣೆಯನ್ನೆಲ್ಲ ಕೃತಿಯಲ್ಲಿ ಹಿಡಿದಿಟ್ಟಿರುವುದು ಈ ಕ್ಷಣದ ಸುಂದರ ನೆನಪುಗಳು ಬಿಳಿಮಲೆಯವರಿಗೆ. ಕೃತಿಯಲ್ಲಿ ಹತಾಶೆಯ ಭಾವ , ಸಫಲತೆಗಳು ,ಭಾವೋದ್ವೇಗ, ನಿರಾಶೆ, ಅಪಾರ ಖುಷಿ , ದುಃಖ, ನೋವು , ಸಂತಸ ಇವುಗಳನ್ನೆಲ್ಲ ಬರಹದಲ್ಲಿ ಕಟ್ಟಿಕೊಟ್ಟ ತೀವ್ರತೆ ನೋಡಿದಾಗ ಎಲ್ಲವನ್ನು ಹೇಳಿಕೊಳ್ಳುವ ಅಪೂರ್ವ ವೇದಿಕೆಯೆ ಈ ಆತ್ಮಚರಿತ್ರೆ.
ಕಾಗೆ ಮುಟ್ಟಿದ ನೀರು ಕೃತಿಯಲ್ಲಿ ನಾವೆಲ್ಲರೂ ಮೆಚ್ಚುವ ಅಂಶವೆಂದರೆ ತನ್ನನ್ನೆ ತಾನು ಹಾಸ್ಯ ಮಾಡಿಸಿಕೊಂಡು ನಗಿಸಿದ್ದಾರೆ. ಇದು ವ್ಯಕ್ತಿಯ ಮೇರು ವ್ಯಕ್ತಿತ್ವ ವನ್ನು ಸೂಚಿಸುತ್ತದೆ. ಯಾಕೆಂದರೆ ತನ್ನನ್ನೆ ತಾನು ಹಾಸ್ಯಕ್ಕೆ ವಸ್ತುವಾಗಿಸಿಕೊಂಡರೆ ಇದರಿಂದ ಯಾರಿಗು ನೋವಿಲ್ಲ . ಇಲ್ಲಿ ತಾವು ಬರೆದದ್ದೆಲ್ಲ ತಮ್ಮದೆ ವಿಚಾರಗಳಾದರು ಆತ್ಮಚರಿತ್ರೆ ಎಂಬುದು ಸಾಹಿತ್ಯದ ಒಂದು ಪ್ರಕಾರವು ಹೌದು . ಯಾಕೆಂದರೆ ಓದುವ ಭರದಲ್ಲಿ ಹಾಸ್ಯದಿಂದ ಮುಖದಲ್ಲಿ ನಗು ಲೇಪಿಸಿ ಬರುತ್ತದೆ ಮತ್ತು ಅಳು ಬರುವಂತಹ ಹಲವಾರು ಸನ್ನಿವೇಶಗಳು ಬರುತ್ತವೆ. ಹೀಗೆ ಭಾವನೆಗಳಲ್ಲಿ ಸ್ಪಂದನೆ ಕಂಡುಬಂದರೆ ಅದು ಬರಹಗಾರನ ಬಹು ದೊಡ್ಡ ಸಾರ್ಥಕ್ಯ ಭಾವ . ನಮ್ಮ ಕರಾವಳಿಯ ಭೂತರಾಧನೆಯ ವಿಚಾರವನ್ನು ಅಲಲ್ಲಿ ನಿದರ್ಶನವಾಗಿ ಬಳಸುತ್ತಾ ದೊಡ್ಡ ಭೂತಗಳಿಗೆ ನೆಲೆ ಮಾಡಿ ನಿಲ್ಲಿಸುತ್ತಾರೆ ನಮ್ಮಂತಹ ಸಣ್ಣ ಭೂತಗಳು ನೆಲೆ ಇಲ್ಲದೆ ಸದಾ ಅಲೆದಾಡುತ್ತಾ ಇರಬೇಕು ಎಂಬುದನ್ನು ಹಾಸ್ಯ ವಾಗಿ ಹೇಳಿದರು ಇದರ ಹಿಂದಿರುವ ಗಂಭೀರತೆ ಮಾರ್ಮಿಕವಾಗಿ ನಮ್ಮನ್ನು ತಟ್ಟುತ್ತದೆ.
ತಮ್ಮ ಜೀವನದಲ್ಲಿ ಎದುರಾಗುವ ಪ್ರತಿ ನೋವು ನಲಿವುಗಳನ್ನು ಧನಾತ್ಮಕವಾಗಿ ನೋಡುವ ಕ್ರಮ ಎಲ್ಲ ವ್ಯಕ್ತಿಗಳಿಗೆ ಖಂಡಿತ ಬರುವಂತದ್ದಲ್ಲ . ತಮ್ಮ ವೈಯುಕ್ತಿಕ ಮತ್ತು ಸಾಮಾಜಿಕ ಬದುಕಿನೆರಡರಲ್ಲಿಯು ಇವರ ಈ ಚಿಂತನೆ ಇದೆ. ಸದಾ ಏನನ್ನಾದರು ಮಾಡುತ್ತಲೇ ಇರಬೇಕೆಂಬ ತುಡಿತ ಮತ್ತು ಹೊಸತನ ಹುಡುಕುವ ಗುಣ ಇವರಲ್ಲಿರುವ ಜೀವನೋತ್ಸಾಹ. ಮಡದಿ ಶೋಭನಾರ ನಿಷ್ಕಲ್ಮಶ ಪ್ರೀತಿ ಮತ್ತು ತ್ಯಾಗ ಇವರ ಯಶಸ್ಸಿನ ಗುಟ್ಟಲ್ಲೊಂದು .ಇವರ ಬಗ್ಗೆ ಹೇಳದಿದ್ದರೆ ಈ ಕೃತಿಯ ಬಗ್ಗೆ ಹೇಳುವುದು ಅಪೂರ್ಣವಾಗಿಬಿಡುತ್ತದೆ. ಕಿಡ್ನಿ ಕಸಿ ಮಾಡಬೇಕೆಂಬ ವಿಚಾರವನ್ನು ಮೊದಲು ಪ್ರಸ್ತಾಪಿಸಿ ಅನೀರೀಕ್ಷಿತ ಆಶ್ಚರ್ಯವನ್ನು ನೀಡಿದವರು ಪತ್ನಿ ಶೋಭನಾರವರೆ ಹೊರತು ವೈದ್ಯರು ಅಲ್ಲ , ಸ್ವತಃ ಬಿಳಿಮಲೆಯವರು ಅಲ್ಲ! ಕಿಡ್ನಿ ಕಸಿಯೆ ಉತ್ತಮ ಎಂಬ ಸ್ಪಷ್ಟ ನಿರ್ಧಾರ ತೆಗೆದುಕೊಂಡ ನಂತರ ಎಲ್ಲಿಂದ? ಹೇಗೆ? ಎಂಬ ಪ್ರಶ್ನೆ ಬಂದ ಕೂಡಲೆ ಅದಕ್ಕು ಮೊದಲು ಉತ್ತರವನ್ನು ಕೊಟ್ಟವರು ಪತ್ನಿ ಶೋಭನ. ತಾನೆ ಕಿಡ್ನಿ ಕೊಡುವುದು ಎಂಬ ಅಚಲ ನಿರ್ಧಾರದ ಹಿಂದೆ ಸಂಪೂರ್ಣ ಬದುಕಿನ ಗಟ್ಟಿತನದ ಅರಿವು ನಮಗಾಗುತ್ತದೆ. “1980 ರಲ್ಲಿ ಹೃದಯ ಕೊಟ್ಟವಳು ಈಗ ಕಿಡ್ನಿ ತೆಗೆದುಕೊ ಎನ್ನುತ್ತಿದ್ದಾಳೆ , ಅದೂ ಅತ್ಯಂತ ನಿರ್ಮಲ ಚಿತ್ತದಲ್ಲಿ …” ಎಷ್ಟೊಂದು ಅಪ್ಯಾಯಮಾನವಾಗಿ ಬಿಳಿಮಲೆಯವರು ಇದನ್ನು ಹೇಳಿಕೊಂಡಿದ್ದಾರೆ ಎಂದರೆ ನಮ್ಮ ಹೃದಯವು ತಲ್ಲಣಿಸಿ ಹೋಗುತ್ತದೆ. ಪ್ರೀತಿಗೆ ಇದಕ್ಕಿಂತ ಬೇರೆ ಅರ್ಥ ಹುಡುಕುವುದು ಬೇಡ ಅಲ್ಲವೇ? ಇನ್ನೂ ಒಂದು ಅಂಶವೆಂದರೆ ಕಿಡ್ನಿ ಕಸಿಗೆ ದಿನ ನಿಗದಿಯಾಗಿ ಆಸ್ಪತ್ರೆ ಸೇರಿದ ದಿನ ಶೋಭನಾರ ತಂದೆ ಮೃತರಾದ ಸುದ್ದಿ! ಇಂತ ಕಾಕತಾಳೀಯ ಬರಸಿಡಿಲನ್ನು ಒಡಲಲ್ಲಿಟ್ಟುಕೊಂಡು ಎಲ್ಲವನ್ನು ನಿಭಾಯಿಸಿದ್ದು ಶೋಭನಾರ ಹೆಣ್ಣು ಮನಸ್ಸು. ಇವರಿಗೆ ಸ್ತ್ರೀ ಎಂದರೆ ಅಷ್ಟೇ ಸಾಕಾ?
ಜೀವನ ಪಯಣದ ಪ್ರತಿ ನಿಲ್ದಾಣದಲ್ಲಿ ಹತ್ತಿದವರು, ಇಳಿದವರು, ಸಹಪಯಣಿಗರು ಎಲ್ಲರನ್ನು ಗೌರವದಿಂದ ನಡೆಸಿಕೊಂಡಿದ್ದಾರೆ ಮತ್ತು ಸ್ಮರಿಸಿಕೊಂಡಿದ್ದಾರೆ. ನಮ್ಮ ಮನಸ್ಸಿಗೆ ಒಳಿತು -ಕೆಡುಕುಗಳನ್ನು ವಿಶ್ಲೇಷಿಸುವ ಗುಣ ಇರುವುದನ್ನು ಬೇಕಾದ ಸಂಧರ್ಭದಲ್ಲಿ ಬಳಸಿಕೊಂಡು ಗೆದ್ದಿದ್ದಾರೆ. ಹಳ್ಳಿ ಹೈದ ದಿಲ್ಲಿಯವರೆಗಿನ ಬದುಕಿನುದ್ದಕ್ಕು ಪಡೆದ ವಿಶ್ವಾಸವೆ ಇವರ ಸಾಧನೆಗೆ ಬುನಾದಿ. ಅಮ್ಮ ತನ್ನ ಅಮ್ಮನ ಮನೆಯ ಆಸ್ತಿ ಮಾರಿ ಮಗನನ್ನು ಓದಿಸಿದ್ದು ನೂರು ಪ್ರತಿಶತ ಸಾರ್ಥಕ. ಕಾಗೆ ಮುಟ್ಟಿದ ನೀರು ಎಂಬ ಶೀರ್ಷಿಕೆ ಇರಿಸಿರುವ ಹಿನ್ನೆಲೆಯು ಕುತೂಹಲಕಾರಿ ಸಂಗತಿಯಾಗಿ ನಮ್ಮನ್ನು ಆಕರ್ಷಿಸುತ್ತದೆ. ತನ್ನ ನಿಲುವುಗಳಿಗೆ ಬದ್ಧರಾಗಿ ಬದುಕಿದ ಆದರ್ಶ ವ್ಯಕ್ತಿ ಬಿಳಿಮಲೆಯವರ ಕೃತಿ ಸರ್ವರ ಜಾಡ್ಯವನ್ನು , ಮೂಢನಂಬಿಕೆಗಳನ್ನು ಅಳಿಸಿ ಹಾಕುವ ಹೊಸತನ ಹೊಂದಿದೆ. ಇವರ ಜೀವನದಲ್ಲಿ ಏನೆಲ್ಲ ಆಗಿದೆ ಅದೆಲ್ಲ ಒಳ್ಳೆದಕ್ಕೆ ಎಂದು ಯಾಕೋ ಬಲವಾಗಿ ಅನಿಸಿದೆ.
-ಸಂಗೀತ ರವಿರಾಜ್ , ಮಡಿಕೇರಿ
ನಾನು ಓದಿದ ಅತ್ಯುತ್ತಮ ಆತ್ಮಕತೆಗಳಲ್ಲಿ ಇದೂ ಒಂದು…..
ಉತ್ತಮ ಪುಸ್ತಕ ಪರಿಚಯ
ಆಪ್ತ ಅನಿಸಿಕೆ
ಬಹಳ ಸೊಗಸಾದ ಪುಸ್ತಕ ವಿಮರ್ಶೆಯೊಂದಿಗೆ ಬರಹದ ಸೂಕ್ಷ್ಮ ಪರಿಚಯ ಆಪ್ತವೆನಿಸಿತು.
ತುಂಬು ಹೃದಯದ ಧನ್ಯವಾದಗಳು ಸುರಹೊನ್ನೆಯ ಹೇಮಕ್ಕ ಮತ್ತು ತಂಡಕ್ಕೆ
ಬರಹ ಮೆಚ್ಚಿದವರಿಗೆಲ್ಲ ತುಂಬು ಹೃದಯದ ಧನ್ಯವಾದಗಳು
ಚೆನ್ನಾಗಿ ಬರೆದಿರುವೆ ಸಂಗೀತ
ಪುಸ್ತಕವನ್ನು ಓದಿ ತುಂಬ ಆಪ್ತವಾಗಿ ಬರೆದಿದ್ದೀರಿ. ನಾವು ನೀವೆಲ್ಲ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಹಾಗಾಗಿ ಇದು ನಮ್ಮೆಲ್ಲರ ಆತ್ಮ ಚರಿತ್ರೆಯೂ ಹೌದು. ತಮ್ಮ ಸಹೃದಯತೆಗೆ ಕೃತಜ್ಞತೆಗಳು
Spr madam …