ಕರೆ
ಆ ಅಧಿಕಾರಿ ಬಹಳ ಶಿಸ್ತಿನಿಂದ ಕ್ವಾರ್ಟೆಸ್ಸಿನಿಂದ ಹೊರಬಿದ್ದ. ಗೇಟಿನ ಹೊರಗೆ ಆ ಕಟ್ಟಡಕ್ಕಿಂತ ಕೊಂಚ ಹಿಂದೆ ರಸ್ತೆ ಬದಿಯಲ್ಲಿ ಅವನ ಸರಕಾರಿ ವಾಹನ ನಿಂತಿತ್ತು. ಪಕ್ಕದ ಕಂಪೌಂಡಿನೊಳಗೆ ಬೇರು ಇಳಿಸಿದ್ದರೂ ರಸ್ತೆಯ ಅರ್ಧಭಾಗಕ್ಕೆಲ್ಲಾ ನೆರಳು ಹಾಸಿದ್ದ ದಟ್ಟ ಹಸುರಿನ ಮರವನ್ನೇ ನೋಡುತ್ತಾ ಮುಂದೆ ಎರಡು ಹೆಜ್ಜೆ ನಡೆದು ಅಧಿಕಾರಿ ನಿಂತ. ಕಾರು ನಿಧಾನವಾಗಿ ಉರುಳುತ್ತಾ ಅವನ ಹತ್ತಿರ ಬಂದು ನಿಂತಿತು.
ಡ್ರೈವರ್ ಓಡಿ ಬಂದು ಬಾಗಿಲು ತೆಗೆಯುವ ಸರ್ಕಸ್ಸನ್ನು ಮಾಡಲಿಲ್ಲ. ಅದೆಲ್ಲಾ ತನಗೆ ಸೇರದು ಎಂದು ಈ ಸರಕಾರಿ ಮನುಷ್ಯ ಎಂದೋ ಹೇಳಿಯಾಗಿತ್ತು. ತನ್ನಷ್ಟಕ್ಕೆ ಬಾಗಿಲೆಳೆದುಕೊಂಡು ಹಿಂದಿನ ಸೀಟಿನಲ್ಲಿ ಕುಳಿತ ಅಧಿಕಾರಿಗೆ ಸಲಾಂ ಸಾಬ್’ ಎಂದ ಡ್ರೈವರ್ ರಫೀಕ. ‘ರಫೀಕ್, ನಾರಾಯಣಿ ಆಸ್ಪತ್ರೆಯತ್ತ ನಡಿ’ ಎಂದು ಹೇಳಿ ಜೇಬಿನಿಂದ ಮೊಬೈಲ್ ತೆಗೆದು ಅದರತ್ತ ಚಿತ್ತ ಹರಿಸಿದ.
ಕಾರು ನಿಧಾನವಾಗಿ ತನ್ನ ವೇಗ ಹೆಚ್ಚಿಸಿಕೊಳ್ಳುತ್ತಾ ರಸ್ತೆ ಮುಂದಿನ ತಿರುವಿನಲ್ಲಿ ಎಡಕ್ಕೆ ಹೊರಳಿತು. ರಫೀಕ್ ಮುಂದಿನ ಕನ್ನಡಿಯಲ್ಲಿ ಸಾಹೇಬರ ಚಹರೆಯಲ್ಲಿ ಏನಾದರು ವ್ಯತ್ಯಾಸ ಇದೆಯೇ ಎನ್ನುವುದನ್ನು ಕಂಡುಹಿಡಿಯಲು ಪ್ರಯತ್ನಿಸಿದ. ಕಾರು ಚಲಾಯಿಸುತ್ತಿರುವಾಗ ಒಂದೆರೆಡು ಸೆಕೆಂಡಿಗಿಂತೂ ಹೆಚ್ಚು ಸಮಯ ರಸ್ತೆ ಮೇಲೆ ನಿಗಾ ಇಡದೆ ಇರುವುದಕ್ಕೆ ಸಾಧ್ಯವಿಲ್ಲದ್ದರಿಂದ ರಫೀಕ್ ಮುಂದಿನ ಸಿಗ್ನಲ್ಲಿನಲ್ಲಿ ಸಾಹೇಬರನ್ನು ಕೂಲಂಕಷ ಗಮನಿಸುವ ಎಂದು ಕಣ್ಣನ್ನು ಪುನಃ ರಸ್ತೆಯತ್ತ ನೆಟ್ಟ.
ಸ್ವಲ್ಪ ಸಮಯದಲ್ಲೇ ಅಧಿಕಾರಿಯ ಫೋನು ಸದ್ದು ಮಾಡಿತು. ಮೊಬೈಲ್ನತ್ತ ನೋಡಿದ ಆತ ಕರೆಯನ್ನು ಸ್ವೀಕರಿಸದೆ ಬಂದ್ ಮಾಡಿ, ಕಿಟಿಕಿಯ ಗಾಜನ್ನು ಪೂರ್ಣ ಮೇಲಕ್ಕೇರಿಸಿ ಹೊರಕ್ಕೆ ದೃಷ್ಟಿ ನೆಟ್ಟ. ತದೇಕಚಿತ್ತದಿಂದ ಹೊರಗೆ ನೋಡುತ್ತಿದ್ದ ಅಧಿಕಾರಿಯನ್ನು ಸುಮ್ಮನಿರಲು ಬಿಡೆ ಎಂದು ಪ್ರತಿಜ್ಞೆ ಮಾಡಿದಂತೆ, ಆತನ ಮೊಬೈಲ್ ಪುನಃ ರಿಂಗುಣಿಸಿತು.
‘ಮೇಲಾಫಿಸರದ್ದೋ ಮಂತ್ರಿಯದ್ದೋ ಇರಬೇಕು. ಇಲ್ಲಾ ಊರಿಗೆ ಬಾಣಂತನಕ್ಕೆ ಹೋಗಿರುವ ಸಾಹೇಬರ ಹೆಂಡತಿಯದ್ದಿರಬಹುದೇನೋ’ ಎಂದು ಯೋಚಿಸಿದ ರಫೀಕನಿಗೆ, ‘ಸಾಹೇಬರಿಗೆ ಬಂದ ಕರೆ ಮೊನ್ನೆಯ ಆ ವಿಷಯ ತಿಳಿಸೋಕೆ ಮಾಡಿರೋದು ಇರಬಹುದಾ!?’ ಎಂತಲೂ ಅನ್ನಿಸಿತು. ಹಾಗೆ ಅನ್ನಿಸಿದ್ದೇ ತಡ ರಫೀಕನಿಗೆ ಮೈಯೆಲ್ಲಾ ಕಿವಿಯಾಯಿತು. ಮೊದಲೇ ಕೆಂಪಗಿದ್ದ ರಫೀಕ ಈಗ ಕಾತರಿಸಿದ ಕಾರಣ ಉದ್ವೇಗಕ್ಕೆ ಒಳಗಾಗಿ ರಕ್ತ ಸಂಚಾರ ಹೆಚ್ಚಾಗಿ, ಆತ ಮತ್ತೂ ಕೆಂಪಾಗಿ ಕಂಡ. ಆದರೆ, ಕಾತರಿಸಿದ ರಫೀಕನ ಕಿವಿಗಳನ್ನು ಕರೆ ಸ್ವೀಕರಿಸದ ಅಧಿಕಾರಿ ಪುನಃ ನಿರಾಸೆಗೊಳಿಸಿದ.
ರಫೀಕ ತಲೆ ಕೊಡವಿಕೊಂಡು ಕಾರನ್ನು ಸಾವಧಾನವಾಗಿ ಚಲಾಯಿಸುತ್ತಾ ಒನ್ ವೇ ರಸ್ತೆಯಲ್ಲಿ ನಾಲ್ಕು ಮಾರು ಮುಂದೆ ಸಾಗಿಸಿ ಎಡಕ್ಕೆ ತಿರುಗಿದ. ನಿಧಾನವಾಗಿ ತಿರುವಿನ ಇಳಿಜಾರಿನಲ್ಲಿ ಇಳಿಯುತ್ತಿದ್ದಂತೆ ಮತ್ತೊಮ್ಮೆ ಫೋನಿನ ಶಬ್ದವಾಯಿತು. ಆದರೆ ಈ ಬಾರಿ ಬಂದ ಆ ಕರೆಯು ಅಧಿಕಾರಿಯದ್ದು ಆಗಿರದೆ, ರಫೀಕನ ಮೊಬೈಲ್ನಿಂದಾಗಿತ್ತು. ಅಂಗಿ ಜೇಬಿನಲ್ಲಿದ್ದ ಫೋನನ್ನು ಡ್ರೈವಿಂಗ್ ಮಾಡುತ್ತಾ ರಫೀಕ ಹೊರಗೆ ತೆಗೆಯಲಾರ. ‘’ಎಷ್ಟೇ ತುರ್ತಿದ್ದರೂ ಕಾರು ಚಲಾಯಿಸುವಾಗ ಫೋನ್ ಬಂದರೆ ಡ್ರೈವಿಂಗ್ ಮಾಡುತ್ತಾ ಮಾತನಾಡಬಾರದು. ತುರ್ತು ಕರೆ ಆದರೆ ರಸ್ತೆ ಪಕ್ಕ ನಿಲ್ಲಿಸಿ ಮಾತನಾಡಬೇಕು ರಫೀಕ್” ಎಂದು ಈ ಮೊದಲೇ ಬಹಳ ಸ್ಟ್ರಿಕ್ಟ್ ಆದ ಹುಕುಂ ಆಗಿತ್ತು. ಆದರೆ ಸಾಹೇಬರು ಕುಳಿತಿರುವಾಗ ತಾನು ಮಾತ್ರ ದೊಡ್ಡಾಫೀಸರನ ಹಾಗೆ ಕಾರನ್ನು ರಸ್ತೆ ಬದಿ ನಿಲ್ಲಿಸಿ ಫೋನಿಗೆ ಕಿವಿಹಚ್ಚುವುದು ಯಾವ ನ್ಯಾಯವೆಂದು ರಫೀಕ ಎಂದಿಗೂ ತನ್ನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ತನಗೆ ಬರುವುದು ತಲೆ ಹೋಗುವಂತಹ ತುರ್ತಿನ ಕೆಲಸಗಳು ಅಲ್ಲವೆಂದೂ, ಸಾಲ ಕೇಳಿಕೊಂಡು ಬರುವ ಸಂಬಂಧಿಕರದ್ದೋ ಸ್ನೇಹಿತರದ್ದೋ ಆಗಿರುವ ಕರೆಗಳನ್ನು ಸ್ವೀಕರಿಸದಿದ್ದರೆ ತನಗೇ ಮನಸ್ಸಿಗೆ ಸಮಾಧಾನವೆಂದೂ ಆತ ಭಾವಿಸಿದ್ದ. ತೀರಾ ಅಷ್ಟು ಅರ್ಜೆಂಟಿದ್ದರೆ, ಫೋನು ಮಾಡುವವರು ಮೂರುನಾಕು ಬಾರಿಯಾದರೂ ಮಾಡಿಯೇಮಾಡಿತ್ತಾರೆ. ಆಗ ಬೇಕಿದ್ದರೆ ತಾನು ರಸ್ತೆ ಬದಿಗೆ ಕಾರನ್ನು ನಿಲ್ಲಿಸಿ ಕರೆ ಸ್ವೀಕರಿಸುವುದು ನ್ಯಾಯವೆಂದೂ ಆತ ತನ್ನಷ್ಟಕ್ಕೆ ನಿರ್ಧರಿಸಿದ್ದ. ಹಾಗಾಗಿ ಎಡಗೈಯಲ್ಲಿ ಸ್ಟೇರಿಂಗನ್ನು ತಿರುಗಿಸುತ್ತಾ, ಬಲಗೈಯಿಂದ ಜೇಬನ್ನು ಅದುಮಿ ಮೊಬೈಲನ್ನು ನಿಶಬ್ದಗೊಳಿಸಿದ.
ಕಾರು ನಲವತ್ತರ ಸ್ಪೀಡನ್ನು ದಾಟದೇ ಸಾವಕಾಶ ಸಾಗುತ್ತಿತ್ತು. ರಫೀಕನ ಮನಸ್ಸು ಸಹ ಅಷ್ಟೇ ನಿಧಾನವಾಗಿ ಹಳೆಯ ಯಾವಯಾವುದೋ ವಿಚಾರಗಳನ್ನು ನೆನಪಿಸಿಕೊಂಡು ಚಲಿಸತೊಡಗಿತು…
ಕಳೆದ ಜುಲೈನ ಕಡೆಯ ಭಾನುವಾರದಲ್ಲಿ ಅಧಿಕಾರಿಯ ಪರ್ಸನಲ್ ಕಾರಿನಲ್ಲಿ ಆತ ಮತ್ತು ರಫೀಕ್ ಇಬ್ಬರೂ ಸವಣೂರಿಗೆ ಹೋಗಿ ಬರುವ ಪ್ರಸಂಗ ಬಂದಿತ್ತು. ರಫೀಕನೇ ಡ್ರೈವರ್ ಆಗಿದ್ದರೂ ದೂರದ ಪಯಣವಾದ್ದರಿಂದ ಆಗಾಗ್ಗೆ ಅಧಿಕಾರಿಯೂ ಕಾರನ್ನು ಚಲಾಯಿಸುತ್ತಿದ್ದ. ಸವಣೂರು ಅಧಿಕಾರಿಯ ಹೆಂಡತಿಯ ತವರು ಮನೆ. ಅಂತಿಮ ಕ್ರಿಯೆಯಲ್ಲಿ ಭಾಗವಹಿಸುವ ಸಲುವಾಗಿ ಅವರು ಹೋಗುತ್ತಿದ್ದರು. ಅಧಿಕಾರಿಯ ಹೆಂಡತಿಯ ಸ್ವಂತ ಅಣ್ಣನ ಮಗನ ಸಾವಾಗಿತ್ತು. ಕಾಲೇಜಿನ ಓದು ಓದುತ್ತಿದ್ದ ಆ ಹುಡುಗನದ್ದು ಇನ್ನೂ ಇಪ್ಪತ್ತರ ವಯಸ್ಸು. ಅಂತಹ ಹುಡುಗನಿಗೆ ದಿಢೀರನೆ ಬಂದೆರಗಿದ ಸಾವು ಮನೆಯವರನ್ನೆಲ್ಲಾ ಇನ್ನಿಲ್ಲದಂತೆ ಕಂಗಾಲು ಮಾಡಿತ್ತು.
ಚೊಚ್ಚಲ ಹೆರಿಗೆಯಲ್ಲಿ ರಕ್ತಸ್ರಾವ ಅಧಿಕವಾಗಿ ನಿತ್ರಾಣಳಾಗಿದ್ದ ಅಧಿಕಾರಿಯ ಹೆಂಡತಿ ಸಹ ಕೊನೆಯ ಬಾರಿ ಪ್ರೀತಿಯ ಅಣ್ಣನ ಮಗನ ಮುಖ ನೋಡಲು ಬರುವುದಾಗಿ ಗೋಳಾಡಿದ್ದಳು. ಈಗ ಹೊರಗೆ ಪರಿಸ್ಥಿತಿ ಸರಿ ಇಲ್ಲದಿರುವುದರಿಂದ ಸಣ್ಣಮಗುವಿನೊಡನೆ ಆಕೆ ಹೊರಹೋಗುವುದು ಬೇಡವೆಂದೂ, ಆಕೆಯ ಪರವಾಗಿ ಸಾವಿನ ಮನೆಗೆ ತಾನೇ ಹಾಜರಿ ಹಾಕಿಬರುವೆನೆಂದೂ ಅಧಿಕಾರಿ ಮತ್ತು ಮನೆಯ ಇತರರು ಹೇಳಿದ ಮೇಲೆಯೇ ಆಕೆ ಸ್ವಲ್ಪ ಸಮಾಧಾನವಾದಂತೆ ಕಂಡದ್ದು.
ಆದರೆ ಅಧಿಕಾರಿಗೂ ಸಹ ವಿಷಯ ತಿಳಿದ ತಕ್ಷಣ ಹೊರಡುವಂತಿರಲಿಲ್ಲ. ಆತ ನಗರದಿಂದ ಹೊರಗೆ ಹೋಗದೇ ಇರುವುದಕ್ಕೆ ಹಲವು ಕಾರಣಗಳು ಬಲವಾಗಿಯೇ ಇದ್ದವು. ಕಳೆದ ಐದಾರು ತಿಂಗಳುಗಳಿಂದ ವ್ಯಾಪಕವಾಗಿ ಹರಡುತ್ತಿದ್ದ ಕೊರೋನಾ ವೈರಸ್ಸಿನ ಸಾಂಕ್ರಾಮಿಕ ಹಬ್ಬುವಿಕೆಯನ್ನು ಸಂಭಾಳಿಸುವ ಸಲುವಾಗಿ ರಚಿಸಲಾಗಿದ್ದ ಕೋವಿಡ್ ಮ್ಯಾನೇಜ್ಮೆಂಟ್ ಟೀಂ ನಲ್ಲಿ ನೋಡಲ್ ಅಧಿಕಾರಿಯಾಗಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದನಾತ. ಸಂಕಷ್ಟದ ಈ ಸಮಯದಲ್ಲಿ ಬಹಳ ಕ್ರಮವಹಿಸಿ ಸರಕಾರ ತನ್ನೆಲ್ಲ ಶಕ್ತಿಯನ್ನು ಸಂಚಯಿಸಿಕೊಂಡು ರೋಗ ನಿರೋಧಿಸಲು ಕಾರ್ಯಪ್ರವೃತ್ತವಾಗಿತ್ತು. ವಸ್ತುಸ್ಥಿತಿ ಹೀಗಿರುವಾಗ ತನಗೆ ರಜೆ ಸಿಗಲಾರದು ಎಂದೇ ಅಧಿಕಾರಿ ಭಾವಿಸಿದ್ದ. ಆದರೆ ಆತ ತನ್ನ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ, ರಜೆಯ ಮಂಜೂರಾತಿಗೆ ಬೇಡಿಕೆ ಇಡುತ್ತಿದ್ದಂತೆಯೇ ರಜೆ ಮಂಜೂರಾಗಿತ್ತು.
ಕಳೆದೆರಡು ತಿಂಗಳುಗಳಿಂದ ಅತೀ ಜಾಗರೂಕರಾಗಿ ಕರ್ತವ್ಯ ನಿರ್ವಹಿಸಿದ್ದ ಅವರು ಸಾವಿಗೆ ಹೋಗಿದ್ದ ಆ ದಿನ ಮಾತ್ರ, ಹೆಣದ ಬಳಿ ನಿಕಟವಾಗಿ ಕೂತು, ಎದೆಯುದ್ದ ಬೆಳೆದಿದ್ದ ಮಗನ ಶವವನ್ನು ತಬ್ಬಿಕೊಂಡು ಗಟ್ಟಿಯಾಗಿ ಅಳುತ್ತಿದ್ದ ಹುಡುಗನ ಅಪ್ಪನನ್ನು ನೋಡಿ ಸಂತೈಸದೇ ದೂರ ಉಳಿಯುವಂತೆಯೇ ಇರಲಿಲ್ಲ. ಕರಳುಕಿತ್ತು ಬರುವಂತೆ ರೋಧಿಸುತ್ತಿದ್ದ ತಬ್ಬಲಿತಂದೆಯ ಮೈದಡವಿ ಸಮಾಧಾನ ಮಾಡಲೇಬೇಕಾಯ್ತು. ಹಾಗೆಯೇ ಸಾವಿಗೆ ಬಂದ ಇತರೆ ಸಂಬಂಧಿಕರೊಡನೆಯೂ ಒಡನಾಡಿದರು. ರಫೀಕನೂ ಸಹ ಅಧಿಕಾರಿ ಜೊತೆಗೇ ಇದ್ದು ಅವರಿಂದ ಆಗಾಗ್ಗೆ ಫೋನು ಕೈಚೀಲಗಳನ್ನು ಪಡೆಯುವುದು, ಅಶಕ್ತರಾದ ಕೆಲವರನ್ನು ಮನೆಯಿಂದ ಸ್ಮಶಾನ, ಸ್ಮಶಾನದಿಂದ ಮನೆಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಬರುವುದನ್ನು ಮಾಡಿದ್ದನು.
ಶವಸಂಸ್ಕಾರ ಮುಗಿಸಿ ಹೊರಟು ನಿಂತ ಅಧಿಕಾರಿಗೆ, ಹುಡುಗನ ತಂದೆ ಒಂದು ಬದಿಗೆ ಕರೆದು, ‘ ಹೆಣವನ್ನು ಕೋವಿಡ್ ಪರೀಕ್ಷೆಗೆ ಗುರಿಪಡಿಸಿ ಅನಂತರ ನಮಗೆ ಹಸ್ತಾಂತರ ಮಾಡಿದರು. ರಿಸಲ್ಟ್ ಏನಾಗುತ್ತೋ ಅಂತ ನಮಗೆ ಆತಂಕವಾಗುತ್ತಿದೆ.’ ಎನ್ನುತ್ತಾ, ‘ಫಲಿತಾಂಶವನ್ನು ಇನ್ನು ಕೆಲವು ದಿನಗಳಲ್ಲಿ ತಿಳಿಸುವುದಾಗಿ ಹೇಳಿರುತ್ತಾರೆ. ನೀವೂ ಸಹ ಊರಿಗೆ ಹೋದ ಮೇಲೆ ತಕ್ಷಣ ಮನೆಗೆ ಹೋಗದೆ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಸ್ವಲ್ಪದಿನ ಕ್ವಾರಂಟೈನ್ ನಲ್ಲಿದ್ದು ಫಲಿತಾಂಶ ಬಂದ ಮೇಲೆ ಮನೆಗೆ ಹೋಗಿ, ಮನೇಲಿ ಬಾಣಂತಿ ಮಗು ಇರುವುದರಿಂದ ಸೂಕ್ಷ್ಮವಾಗಿರಿ’ ಎಂದು ಕಕ್ಕುಲಾತಿಯಲ್ಲಿ ಹೇಳಿದ್ದರು. ಸಾವಿಗೆ ಬಂದಿದ್ದ ಹತ್ತಾರು ಜನರಿಗೂ ಅದೇ ವಿಷಯ ಹೇಳುತ್ತಾ, ಯಾರೂ ಗಾಬರಿಯಾಗುವುದು ಬೇಡ, ‘ಯಾವುದಕ್ಕೂ ನೀವೂ ಊರಿಗೆ ಹೋದ ಮೇಲೆ ಕೋವಿಡ್ ಪರೀಕ್ಷೆ ಮಾಡಿಸಿಬಿಡಿ’ ಎಂದು ಕಣ್ಣೊರೆಸಿಕೊಂಡಿದ್ದರು.
ಅಧಿಕಾರಿ ಹಾಗೂ ರಫೀಕ್ ಇಬ್ಬರೂ ಆ ಹುಡುಗನ ಸಾವಿಗೆ ಮರುಗಿದಷ್ಟೇ ಈಗ ತಮ್ಮಿಬ್ಬರ ಕೋವಿಡ್ ಪರೀಕ್ಷೆಯ ಚಿಂತೆಯನ್ನೂ ಹತ್ತಿಸೊಂಡು ನಗರದತ್ತ ಹೊರಟಿದ್ದರು. .
ಕೊರೋನ ಬಂದರೆ ಬದುಕು ಮುಗಿಯಿತು ಎಂದೇ ಗಾಬರಿ ಮಾಡಿಸುತ್ತಿದ್ದ ಆರಂಭದ ದಿನಗಳಲ್ಲಿ ಕೋವಿಡ್ ಸೋಂಕಿನ ಫಲಿತಾಂಶವೂ ಬೇಗನೆ ಸಿಗುವಂತಿರಲಿಲ್ಲ. ಸೋಂಕಿನಿಂದ ಸಾವಿಗೆ ಒಳಗಾಗಿರಬಹುದಾದ ಹುಡುಗನ ಶವಸಂಸ್ಕಾರದ ಅನಂತರ ನಗರಕ್ಕೆ ಮರಳಿದವರೇ ಅಧಿಕಾರಿ ಹಾಗೂ ರಫೀಕ್ ತಮ್ಮ ತಮ್ಮ ಮನೆಗಳಿಗೆ ನೇರವಾಗಿ ಹೋಗದೆ ಕೋವಿಡ್ ಟೆಸ್ಟ್ಗೆ ಸ್ಯಾಂಪಲ್ ಕಳಿಸಿ ಸ್ವಯಂನಿರ್ಬಂಧ ಹೇರಿಕೊಂಡು ಕ್ವಾರ್ರ್ಟೆಸ್ಸಿನಲ್ಲಿ ಬಂಧಿಗಳಾಗಿದ್ದರು. ಅವರಿಬ್ಬರೂ ಹೋಂ ಕ್ವಾರಂಟೈನ್ ಗೆ ಒಳಗಾಗಿ ಇಂದಿಗೆ ವಾರ ಕಳೆದಿತ್ತು. ಇಬ್ಬರಿಗೂ ರೋಗದ ಲಕ್ಷಣಗಳು ಕಾಣದಿದ್ದರೂ ಕೋವಿಡ್ ಟೆಸ್ಟ್ ಮಾಡಿಸಲು ನಿರ್ಧರಿಸಿಕೊಂಡು ‘ನಾರಾಯಣಿ ಆಸ್ಪತ್ರೆ’ಯತ್ತ ಹೊರಟಿದ್ದರು.
ರಫೀಕನ ನೆನಪಿನ ಸುರುಳಿ ಮತ್ತಷ್ಟು ಸಾವಕಾಶ ಬಿಚ್ಚಿಕೊಳ್ಳುತ್ತಿತ್ತೇನೋ ಅಷ್ಟರಲ್ಲಿ ಅಧಿಕಾರಿಯ ಮೊಬೈಲ್ ರಿಂಗಣಿಸಿತು. ಅದುವರೆವಿಗೂ ಯಾವುದೇ ಕರೆಯನ್ನು ಸ್ವೀಕರಿಸದಿದ್ದ ಆತ ಈಗ ಬಂದ ಕರೆಗಾಗಿಯೇ ಕಾಯುತ್ತಿದ್ದವರಂತೆ, ತಕ್ಷಣ ಸ್ವೀಕರಿಸಿ, ‘’ಹಲೋ, ಹೇಳೀ.. ಹಾ, ಹೌದಾ ಹೌದಾ, ವೆರಿಗುಡ್ ಒಳ್ಳೆಯದಾಯ್ತು ಬಿಡಿ. ಸದ್ಯ ಕಳಂಕ ತಪ್ಪಿತು. ನಿಜ ನಿಜಾ.., ಬೇರೆ ಏನಾದರೂ ಅನಾಹುತವಾಗಿದ್ದರೆ ನಮ್ಮಿಂದಲೇ ಎಂದು ಗಾಬರಿಯಾಗಬೇಕಾದ ಆತಂಕವೂ ನಿಮಗೆ ತಪ್ಪಿತು.’’
ಆ ಕಡೆಯ ಮಾತನಾಡುತ್ತಿದ್ದವರಿಗೆ ಸ್ವಲ್ಪಹೊತ್ತು ಕಿವಿಗೊಟ್ಟರು. ಆಮೇಲೆ, “ ಹೃದಯ ಸಂಬಂಧಿ ಖಾಯಿಲೆಯಾ? ಯಾರಿಗೂ ಮೊದಲೇ ಗೊತ್ತಿರಲಿಲ್ವಾ? ಛೇ, ಆದದ್ದು ಆಗಿಹೋಯ್ತು. ಮತ್ತೊಮ್ಮೆ ಥ್ಯಾಂಕ್ಸ್ ನಿಮಗೆ. ನಾನು ಆಮೇಲೆ ಮಾತನಾಡ್ತೀನಿ” ಎಂದು ಹೇಳಿ ಫೋನ್ ಇಟ್ಟ ಅಧಿಕಾರಿಯ ಮುಖದಲ್ಲಿ ಮೂಡಿದ ನಿರಾಳತೆಯನ್ನು ರಫೀಕ ಕನ್ನಡಿಯೊಳಗಿಂದಲೇ ಗುರುತಿಸಿದ. ಮೆಲುದನಿಯಲ್ಲಿ ‘ ಸಾಬ್ ಏನಂತೆ ವಿಷ್ಯ?’ ಎಂದು ಸ್ವಲ್ಪ ಹಿಂಜರಿಕೆಯಿಂದಲೇ ಕೇಳಿದ.
‘ರಫೀಕ್, ಈಗ ಆಫೀಸಿನತ್ತ ನಡೆ ಆಸ್ಪತ್ರೆ ಬೇಡ. ಡಾಕ್ಟರ್ ಈಗ ತಾನೇ ಕರೆ ಮಾಡಿದ್ರು’ ಎನ್ನುತ್ತಾ ದೊಡ್ಡ ದನಿಯಲ್ಲಿ ಹೇಳುತ್ತಾ, ‘ಆಫೀಸ್ ತಲಪುತ್ತಲೇ ನೀನೂ ಮನೆಗೆ ಫೋನ್ ಮಾಡಿಬಿಡು. ಸಂಜೆ ಇಬ್ಬರೂ ಸ್ವಲ್ಪ ಬೇಗ ಮನೆಗೆ ಹೋಗುವ. ನಮ್ಮ ಹುಡುಗ ತೀರಿಕೊಂಡದ್ದು ಕೋವಿಡ್ನಿಂದ ಅಲ್ಲವಂತೆ. ಆ ಹುಡುಗನ ಕೋವಿಡ್ ಟೆಸ್ಟ್ ನೆಗೆಟೀವ್ ಬಂದಿದೆ. ಹಾಗೆಯೇ ಮೊನ್ನೆ ನಮ್ಮ ಸ್ಯಾಂಪಲ್ ಪಡೆದಿದ್ದರಲ್ಲ ಅದೂ ನೆಗೆಟಿವ್ ಅಂತೆ.’ ಎಂದವರೇ ಪುನಃ ದೊಡ್ಡ ನಗೆ ನಗುತ್ತಾ ಫೋನ್ ಕೈಗೆ ತೆಗೆದುಕೊಂಡರು.
– ವಸುಂಧರಾ ಕದಲೂರು.
ಅರ್ಥಪೂರ್ಣವಾಗಿದೆ….
ಸಕಾಲಿಕ ವಸ್ತುವನ್ನೊಳಗೊಂಡ ಕಥೆ ಚೆನ್ನಾಗಿಮೂಡಿ ಬಂದಿದೆ.ಅಭಿನಂದನೆಗಳು ಮೇಡಂ
ಇವತ್ತಿನ ಪರಿಸ್ಥಿತಿಗೆ ತಕ್ಕಂತೆ ಕಥೆ ಹೆಣೆದ ರೀತಿ ಚೆನ್ನಾಗಿದೆ.
ವಾಸ್ತವಿಕ ಬರಹ
ಸಕಾಲಿಕ ಕತೆ..ಚೆನ್ನಾಗಿದೆ.
ಕೋವಿಡ್ ಸುತ್ತ ಹೆಣೆದ ಸುಖಾಂತ್ಯದ ಕಥೆ ಇಷ್ಟವಾಯ್ತು.