ರೇ…….
ಪರರು ಸಹನೆ ಕಳೆದುಕೊಂಡು, ಅಸಹನೆಗೆ ನಿನ್ನನ್ನೇ ದೂಷಿಸಿದಾಗಲೂ ನೀನು ಸಹನೆಯಿಂದಿದ್ದರೆ
ಅನುಮಾನಿಸಿ ನಿಂದಿಸಿದಾಗಲೂ ಅವರ ಬಿರುನುಡಿಗಳಿಗೆ ಕಿವಿಯಾಗಿ, ನಿನ್ನನ್ನೇ ನೀ ನಂಬಬಲ್ಲೆಯಾದರೆ
ಒಳಿತಿಗಾಗಿ ಕಾಯುವ, ಕಾಯುವ ಅರೆಕ್ಷಣವೂ ಬೇಸರಿಸಿಕೊಳ್ಳದ ಗುಣ ಬೆಳೆಸಿಕೊಂಡರೆ
ಅತೀ ವಿನಯವಂತನಾಗದೆ, ಅತೀ ಬುದ್ದಿವಂತಿಕೆ ತೋರದೆ
ಅಪಮಾನಕ್ಕೆ ಮರು ಅಪಮಾನ ಮಾಡದೇ ನೀ ಸುಮ್ಮನಿದ್ದರೆ
ಕಂಡ ಕನಸುಗಳು ನಿನ್ನ ಆವರಿಸಿದಂತೆ
ಚಿಂತೆಗಳು ನಿನ್ನ ಗುರಿ ತಪ್ಪಿಸಿದಂತೆ ನಡೆದುಕೊಂಡರೆ
ಸೋಲು-ಗೆಲುವುಗಳೆರಡಕ್ಕೂ ಒಂದೇ ರೀತಿ ಸ್ಪಂದಿಸಿ,
ನುಡಿದ ಸತ್ಯಗಳ ಅರಗಿಸಿಕೊಂಡು,
ಮೊನಚು ಮಾತುಗಳಿಗೆ, ಮೂರ್ಖ ಸಲಹೆಗಳಿಗೆ ಕಿವಿಗೊಡದೆ ಹೋದರೆ
ಬದುಕನ್ನೇ ಕಸಿದ ನೆನಪುಗಳ ರಾಶಿಯೆದುರು ತಲೆಬಾಗದೆ, ತಲೆ ಎತ್ತುವ ಬಲವಿದ್ದರೆ
ಸೋಲು-ಅಪಮಾನಗಳಿಗೆ ಸಣ್ಣ ನಿಟ್ಟುಸಿರೂ ಹಾಕದೆ
ಹೊಸದೊಂದು ಗುರಿ ಸಾಧನೆಗೆ ಗೆಲುವುಗಳನ್ನೆಲ್ಲ ಗುಡ್ಡೆ ಹಾಕಿ ಬಲಿಕೊಡಲು ನೀ ಸಿದ್ಧನಾದರೆ
ಪಡೆದುದೆಲ್ಲವ ಕಳೆದುಕೊಂಡು, ಮತ್ತೆ ಹೊಸ ಹೆಜ್ಜೆ ಆರಂಭಿಸುವ ಧೈರ್ಯ ನಿನಗಿದ್ದರೆ
ತೋಳ್ಬಲ ಕುಸಿದು, ದೇಹ ಬಲ ಕಳೆದುಕೊಂಡಾಗಲೂ
ಬರೀ ಆತ್ಮಬಲದಿಂದ ಗೆಲ್ಲುವ ಛಲ ಉಳಿಸಿಕೊಂಡರೆ
ಜನರ ನೂರು ಕೆಡುಕಗಳ ನಡುವೆಯೂ ಒಳ್ಳೆಯತನವೊಂದಿದ್ದರೆ
ರಾಜರೊಂದಿಗಿರುವಾಗಲೂ, ಬಡ ಜನರ ಸಂಕಟ ಅರಿಯಬಲ್ಲೆಯಾದರೆ
ಸ್ನೇಹಿತ -ಶತೃಗಳ ಕಟುನುಡಿಗಳು ನಿನ್ನ ಬಾಧಿಸದಿದ್ದರೆ
ಪ್ರಪಂಚದೊಳಗಿದ್ದೂ, ಪ್ರಾಪಂಚಿಕತೆಯಿಂದ ದೂರ ಉಳಿಯಬಲ್ಲೆಯಾದರೆ,
ಸಿಕ್ಕ ಪ್ರತಿ ನಿಮಿಷಕ್ಕೂ ನ್ಯಾಯ ಒದಗಿಸಬಲ್ಲೆಯಾದರೆ
ಖಂಡಿತವಾಗಿಯೂ ನಿನ್ನೊಬ್ಬ ಮನುಷ್ಯನಾಗುತ್ತಿ
ಮೂಲ :ರೂಡಿಯಾರ್ಡ್ ಕೆಪ್ಲಿಂಗ್
ಕನ್ನಡಕ್ಕೆ -ರಾಜೇಶ್ವರಿ
ಅರ್ಥಪೂರ್ಣವಾಗಿದೆ
ಸಂತೋಷದ ಬದುಕಿಗೆ ಬೇಕಾದ ಸರಳ ಸೂತ್ರಗಳನ್ನೊಳಗೊಂಡ ಬರಹ
ಎಷ್ಟೊಂದು “ರೇ” ಗಳು.. ಮನುಷ್ಯನ ಜೀವನದಲ್ಲಿ!! ಬಹು ಅರ್ಥಗರ್ಭಿತ ಕವನದ ಅನುವಾದವು ಬಹಳ ಸೊಗಸಾಗಿ ಮೂಡಿ ಬಂದಿದೆ..ಧನ್ಯವಾದಗಳು ಮೇಡಂ.