ಆದಿ ಯೋಗಿ ಶಿವ

Share Button

ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಗಿತ್ತಯ್ಯಾ॒

ಅಲ್ಲಮ ಪ್ರಭುವಿನ ಈ ವಚನ ಶಿವನ ಸ್ವರೂಪವನ್ನು ನಮ್ಮ ಮುಂದೆ ತೆರೆದಿಡುತ್ತದೆ. ವಿಶ್ವದ ಆದಿ ಶೂನ್ಯ, ವಿಶ್ವದ ಅಂತ್ಯ ಶೂನ್ಯ ವಿಶ್ವದ ಅಸ್ತಿತ್ವದ ಮೂಲವೇ ಶೂನ್ಯ. ಸಮಸ್ತ ವಿಶ್ವಕ್ಕೆ ಆಧಾರವಾಗಿರುವ ಎಲ್ಲೆಯಿಲ್ಲದ ಈ ಶೂನ್ಯವೇ ‘ಶಿವ.’ ‘ಶಿವ ಎಂದರೆ ಯಾವುದು ಅಲ್ಲವೋ ಅದು’ ಎಂದು ಸದ್ಗುರು ಅರ್ಥೈಸಿದ್ದಾರೆ. ಹಬ್ಬ ಎಂದಾಕ್ಷಣ ಸಡಗರ ಸಂಭ್ರಮಗಳಿಂದ, ಚೆಂದದ ಉಡುಗೆ ಧರಿಸಿ, ಬಗೆ ಬಗೆಯ ಭಕ್ಷ್ಯಗಳನ್ನು ತಯಾರಿಸಿ, ದೇವರಿಗೆ ವಿಶೇಷವಾದ ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯ ನಮ್ಮದು. ಆದರೆ ಶಿವರಾತ್ರಿ ಒಂದು ವಿಶಿಷ್ಟವಾದ ಆಚರಣೆ. ಶಿವನು ಅಲಂಕಾರ ಪ್ರಿಯನಲ್ಲ. ಹುಲಿಯ ಚರ್ಮವನ್ನು ಧರಿಸಿ, ಭಸ್ಮಧಾರಿಯಾದ ಶಿವನ ವಾಸ ಕೈಲಾಸ ಪರ್ವತದಲ್ಲಿ. ಆದಿಗುರುವಾದ ಶಿವನ ಆರಾಧನೆಯೇ ಶಿವರಾತ್ರಿ. ಆದಿಯೋಗಿಯೂ ಆದ ಶಿವನ ಆರಾಧನೆಯನ್ನು ಶಿವರಾತ್ರಿಯಂದು ಉಪವಾಸ, ಜಾಗರಣೆ, ಶಿವನಾಮ ಸ್ಮರಣೆಯೊಂದಿಗೆ ಮಾಡುವರು.

ಹರ ಹರ ಮಹದೇವ, ಶಂಭೋ ಶಂಕರ, ಜೈ ಭೋಲೇನಾಥ್ ಎಂದು ಭಕ್ತಾದಿಗಳು ಉದ್ಗರಿಸುತ್ತಾ ಶಿವನನ್ನು ಪೂಜಿಸುವರು. ಭೋಲೇನಾಥನೆಂಬ ಹೆಸರು ಹೊತ್ತ ಶಿವ ಸರಳತೆ, ಪ್ರಾಮಾಣಿಕತೆ ಹಾಗೂ ನಿಷ್ಕಲ್ಮಷ ಮನಸ್ಸುಗಳ ಪ್ರತೀಕ. ಶಿವರಾತ್ರಿಯಂದು ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದೆಡೆಗೆ ದಾರಿತೋರು ಎಂದು ಮಂಗಳಕರನಾದ ಶಿವನನ್ನು ಪ್ರಾರ್ಥಿಸುವುದೇ ಈ ಹಬ್ಬದ ಮಹತ್ವ. ಆದಿಯೋಗಿ ಶಿವನು ಆದಿಗುರು ಎಂದೇ ಪ್ರಖ್ಯಾತ. ಹಿಮಾಲಯದ ತಪ್ಪಲಲ್ಲಿರುವ ಕಾಂತಿ ಸರೋವರದ ಬಳಿ ಶಿವನು ಸಪ್ತ್ರರ್ಷಿಗಳಿಗೆ ಯೋಗಶಾಸ್ತ್ರದ 112  ಜ್ಞಾನಶಾಖೆಗಳನ್ನು ಬೋಧಿಸಿದನೆಂದೂ ಆರು ಜನ ಮಹರ್ಷಿಗಳನ್ನು ವಿಶ್ವದ ನಾನಾಕಡೆ ಯೋಗಶಾಸ್ತ್ರವನ್ನು ಬೋಧಿಸಲು ಕಳುಹಿಸಿದನೆಂಬ ಪ್ರತೀತಿ ಇದೆ. ಸಪ್ತರ್ಷಿಗಳಲ್ಲಿ ಒಬ್ಬರಾದ ಅಗಸ್ತ್ಯ ಮುನಿಗಳು ಭಾರತದ ಉದ್ದಗಲಕ್ಕೂ ಸಂಚರಿಸಿ ಯೋಗವನ್ನು ಪ್ರಸಾರ ಮಾಡಿದರೆಂಬ ನಂಬಿಕೆಯೂ ಇದೆ. ಯೋಗದಿಂದ ಶಾರೀರಿಕ ಸಧೃಡತೆ, ಮಾನಸಿಕ ಸ್ಥಿರತೆ, ಹಾಗೂ ಆಧ್ಯಾತ್ಮಿಕ ಅರಿವು ಮೂಡಿ ಮಾನವ ಉತ್ತಮವಾದ ಜೀವನ ನಡೆಸುವಲ್ಲಿ ಸಫಲನಾಗುವನು. ಜೊತೆಗೇ ಸ್ವಸ್ಥ ಸಮಾಜದ ನಿರ್ಮಾಣವೂ ಆಗುವುದು. ಯೋಗವು ಯಾವುದೇ ಒಂದು ಜಾತಿ, ಮತ, ಪಂಥಕ್ಕೆ ಸಂಭಂಧಿಸಿದುದಲ್ಲ. ಇದು ಕ್ರಮಬದ್ಧವಾದ, ವೈಜ್ಞಾನಿಕವಾದ ಕೌಶಲ. ಯೋಗವು ಮಾನವನು ಆರೋಗ್ಯವಾಗಿ, ಶಾಂತಿಯಿಂದ, ನೆಮ್ಮದಿಯಿಂದ ಜೀವನ ನಡೆಸುವುದನ್ನು ಕಲಿಸುತ್ತದೆ. ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗದಲ್ಲಿ – ಯಮ, ನಿಯಮಗಳು ಸಾರ್ವತ್ರಿಕ ಹಾಗೂ ವೈಯುಕ್ತಿಕ ಮೌಲ್ಯಗಳನ್ನು ಕಲಿಸಿದರೆ, ಆಸನ, ಪ್ರಾಣಾಯಾಮಗಳು ಶಾರೀರಿಕ ಸಧೃಡತೆ ನೀಡುತ್ತವೆ. ಪ್ರತ್ಯಾಹಾರ, ಧಾರಣಗಳು ಇಂದ್ರಿಯ ನಿಗ್ರಹ, ಸಂಯಮ ಕಲಿಸಿದರೆ, ಧ್ಯಾನ, ಸಮಾಧಿಗಳು ಆತ್ಮಸಾಕ್ಷಾತ್ಕಾರದೆಡೆ ಕರೆದೊಯ್ಯುತ್ತವೆ. ಯೋಗವು ಮಾನವನನ್ನು ಮಹಾದೇವನನ್ನಾಗಿಸುವುದು. ಇದು ಒಂದು ಅಂತರ್ಮುಖೀ ಪಯಣ.

ಇನ್ನು ಹಬ್ಬದ ಪೌರಾಣಿಕ ಮಹತ್ವವನ್ನು ತಿಳಿಯೋಣವೇ? ಶಿವ ಪುರಾಣದಲ್ಲಿ – ಶಿವರಾತ್ರಿಯಂದು ಶಿವ ಪಾರ್ವತಿಯರ ವಿವಾಹ ಮಹೋತ್ಸವದ ಆಚರಣೆ ಎಂದೇ ಹೇಳಲಾಗಿದೆ. ಸತಿಯು ಅಗ್ನಿ ಪ್ರವೇಶ ಮಾಡಿದಾಗ ವಿಚಲಿತನಾದ ಶಿವ, ತಾಂಡವ ನೃತ್ಯವಾಡಿದ ರಾತ್ರಿ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವವಾದ ಹಾಲಾಹಲವನ್ನು ಸೇವಿಸಿದ ಕರಾಳ ರಾತ್ರಿಯೂ ಇದೇ. ಭಗೀರಥನ ಪ್ರಾರ್ಥನೆಗೆ ಮೆಚ್ಚಿ ಗಂಗೆಯನ್ನು ಮುಕ್ತಗೊಳಿಸಿದ ರಾತ್ರಿ ಹಾಗೂ ಬೇಡರ ಕಣ್ಣಪ್ಪನಿಗೆ ಒಲಿದ ರಾತ್ರಿ ಇದು. ಸ್ಕಂದ ಪುರಾಣದಲ್ಲಿ ಶಿವರಾತ್ರಿಯಂದೇ, ಶಿವನು ಲಿಂಗರೂಪದಲ್ಲಿ ವಿಷ್ಣು ಮತ್ತು ಬ್ರಹ್ಮನಿಗೆ ದರ್ಶನವಿತ್ತನೆಂಬ ನಂಬಿಕೆಯೂ ಇದೆ. ಲಿಂಗಾಕಾರವು ಶಿವಶಕ್ತಿಯರ ಸಂಗಮದ ಸಂಕೇತವೂ ಹೌದು.

ಅರ್ಧನಾರೀಶ್ವರನಾದ ಶಿವ – ಸ್ತ್ರೀ ಮತ್ತು ಪುರುಷರಲ್ಲಿರಬೇಕಾದ ಸಮಸ್ತ ಗುಣ ಲಕ್ಷಣಗಳನ್ನು ಒಳಗೊಂಡ ಪರಿಪೂರ್ಣ ಶಕ್ತಿಯಾಗಿ ನಮ್ಮ ಮುಂದೆ ನಿಲ್ಲುವನು. ಚಂದ್ರನನ್ನು ಧರಿಸಿದ ಶಶಿಧರನು ಕಾಲಾತೀತನೂ ಹೌದು, ನಮ್ಮ ಪೂರ್ವಜರು ಚಂದ್ರನನ್ನು ಸಮಯದ ಅಧಿಪತಿಯಾಗಿ, ಕಾಲವನ್ನು ಸೂಚಿಸುವ ಸಂಕೇತವಾಗಿ ಬಿಂಬಿಸಿದ್ದಾರೆ. ಗಂಗೆಯನ್ನು ತಲೆಯ ಮೇಲೆ ಹೊತ್ತ ಗಂಗಾಧರನು ನೀರಿನ ರಭಸವನ್ನು ತಗ್ಗಿಸಲು ತನ್ನ ಜಟೆಗಳಿಂದ ಗಂಗೆಯನ್ನು ಬಂಧಿಸಿದ ಎಂಬ ಪ್ರತೀತಿ ಇದೆ. ನಂತರ ಭಗೀರಥನ ಪ್ರಾರ್ಥನೆಯನ್ನು ಮನ್ನಿಸಿ ಅವಳನ್ನು ಮುಕ್ತಗೊಳಿಸಿದ. ಈ ಘಟನೆಯನ್ನು ವೈಜ್ಞಾನಿಕವಾಗಿ ಅರ್ಥೈಸಿದರೆ – ರಭಸವಾಗಿ ಸುರಿಯುವ ಮಳೆಯಿಂದ ಭೂಮಿಯ ಸವಕಳಿಯನ್ನು ತಡೆಯಲು ಮರಗಿಡಗಳ ಅಗತ್ಯ ಇದೆಯಷ್ಟೇ. ಈ ಮರಗಿಡಗಳನ್ನು ಶಿವನ ಜಟೆಗೆ ಹೋಲಿಸಬಹುದಲ್ಲವೇ?

ಮುಕ್ಕಣ್ಣನೆಂದೇ ಕರೆಯಲ್ಪಡುವ ಶಿವನ ಮೂರನೆಯ ಕಣ್ಣು ನಮ್ಮ ಅರಿವಿನ ಒಳಗಣ್ಣು ಎಂದು ಪ್ರತಿಪಾದಿಸಬಹುದು. ನಮ್ಮ ನಮ್ಮ ಅನುಭವಕ್ಕೆ ದಕ್ಕುವ ಸತ್ಯವನ್ನು ಮಾತ್ರ ಬಾಹ್ಯ ಕಣ್ಣುಗಳು ಗ್ರಹಿಸಬಹುದು. ಆದರೆ ಅರಿವಿನ ಒಳಗಣ್ಣಿಗೆ ಸಂಪೂರ್ಣ ಸತ್ಯದ ಅರಿವು ಮೂಡುವುದು. ಶಿವನ ಮೂರನೆಯ ಕಣ್ಣು ದುಷ್ಟಶಕ್ತಿಗಳನ್ನು ಸಂಹರಿಸುವ ಪ್ರತೀಕವೂ ಆಗಿದೆ. ಸಮುದ್ರ-ಮಂಥನದ ಸಮಯದಲ್ಲಿ ಉದ್ಭವಿಸಿದ ಹಾಲಾಹಲವನ್ನು ಪ್ರಾಶನ ಮಾಡಿ ಶಿವ ನೀಲಕಂಠನಾದ ಎಂಬ ಪ್ರತೀತಿಯೂ ಇದೆ. ಯೋಗಿಗಳು ಕಂಡಂತೆ ಗಂಟಲಿನ ಪ್ರದೇಶದಲ್ಲಿರುವ ವಿಶುದ್ಧಿ ಚಕ್ರವು ಜಾಗೃತಗೊಂಡಾಗ ವಿಷವನ್ನೂ, ಕೆಟ್ಟ ಆಲೋಚನೆಗಳನ್ನು, ಚಿಂತನೆಗಳನ್ನೂ ತಡೆಯಬಲ್ಲದು. ಇನ್ನು ನಾಗಾಭರಣನೆಂದೇ ಹೆಸರು ಹೊತ್ತ ಶಿವನು ಸುತ್ತಿಕೊಂಡಿರುವ ಸರ್ಪಗಳು ಜಾಗೃತಗೊಂಡ ಕುಂಡಲಿನೀ ಶಕ್ತಿಯ ಸಂಕೇತ. ಸರ್ಪದ ಹಾಗೆ ಸುರುಳಿ ಸುತ್ತಿ ಮೂಲಾಧಾರ ಚಕ್ರದಲ್ಲಿರುವ ಮಲಗಿರುವ ಕುಂಡಲಿನೀ ಜಾಗೃತಗೊಂಡಾಗ ಬುಸುಗುಡುತ್ತಾ ರಭಸದಿಂದ ಸುಷುಮ್ನದಲ್ಲಿ ಸಂಚರಿಸುತ್ತಾ ಮೂಲಾಧಾರ ಚಕ್ರದಿಂದ ಆಜ್ಞಾಚಕ್ರದೆಡೆಗೆ ಸಾಗುವುದು. ಕುಂಡಲನಿಯು ಧ್ಯಾನಶಕ್ತಿ ಕೇಂದ್ರಗಳಾದ ಚಕ್ರಗಳ ಮೂಲಕ ಸಾಗುತ್ತಾ ಬ್ರಹ್ಮ ಗ್ರಂಥಿ, ವಿಷ್ಣು ಗ್ರಂಥಿ ಹಾಗೂ ರುದ್ರ ಗ್ರಂಥಿಗಳನ್ನು ಬೇಧಿಸಿ ಮೇಲೇರಿ ಸಹಸ್ರಾರ ಚಕ್ರದಲ್ಲಿ ಲೀನವಾಗುವುದು. ಮೇರುದಂಡದ ಕೆಳಭಾಗದಲ್ಲಿರುವ ಮೂಲಾಧಾರ ಚಕ್ರ ಜಾಗೃತಗೊಂಡಾಗ ಆರೋಗ್ಯ, ಆನಂದ ಲಭಿಸಿದರೆ, ಜನನೇಂದ್ರಿಯದ ಬಳಿ ಇರುವ ಸ್ವಾದಿಷ್ಟಾನ ಚಕ್ರವು ಸಕ್ರಿಯವಾದಾಗ ಅಹಂಕಾರ ದೂರವಾಗುವುದು. ನಾಭಿಯಲ್ಲಿರುವ ಮಣಿಪೂರಕ ಚಕ್ರವು ಚೈತನ್ಯಪೂರ್ಣವಾದಾಗ ಅಪಾರವಾದ ವಿದ್ಯೆ ದೊರಕುವುದು. ಹೃದಯದಲ್ಲಿ ನೆಲೆಸಿರುವ ಅನಾಹತ ಚಕ್ರವು ಜಾಗೃತಗೊಂಡಾಗ ಇಂದ್ರಿಯ ನಿಗ್ರಹ ಹಾಗೂ ಸೃಜನಶೀಲತೆ ಲಭಿಸುವುದು. ಕಂಠದಲ್ಲಿರುವ ವಿಶುದ್ಧಿ ಚಕ್ರ ಜಾಗೃತವಾದಾಗ ಚಿತ್ತಶಾಂತಿ, ಆಯುಷ್ಯ ದೊರೆಯುವುದು. ಕುಂಡಲಿನೀ ಶಕ್ತಿಯು ಸಹಸ್ರಾರ ಚಕ್ರದಲ್ಲಿ ಲೀನವಾದಾಗ ಸಾಧಕನಿಗೆ ಆತ್ಮಸಾಕ್ಷಾತ್ಕಾರವಾಗುವುದು. ಅಭಿಷೇಕಪ್ರಿಯನಾದ  ಶಿವನ ನೆತ್ತಿಯ ಮೇಲೆ ಸದಾ ಅಮೃತಬಿಂದುಗಳ ಸಿಂಚನ ಆಗುವುದು. ಇದು ಸಹಸ್ರಾರ ಚಕ್ರದಿಂದ ಸ್ರವಿಸುವ ಅಮೃತಬಿಂದುಗಳ ಸಂಕೇತವಾಗಿ ನಿಲ್ಲುತ್ತದೆ.

ಬ್ರಹ್ಮಾಂಡದ ಕೇಂದ್ರ ಬಿಂದುವಾದ ಕೈಲಾಸ ಪರ್ವತದಲ್ಲಿ ಧ್ಯಾನಮಗ್ನನಾಗಿ ಕುಳಿತಿರುವ ಶಿವನ ಅನುಯಾಯಿಗಳಾದ ಗಣಂಗಳು ಚಿತ್ರ ವಿಚಿತ್ರವಾದ ಆಕಾರಗಳಲ್ಲಿ ಗೋಚರಿಸಿದರೂ ಆನಂದ ಪರವಶವಾದವರಂತೆ ತೋರುವರು. ಎಲ್ಲ ಶಿವಾಲಯಗಳಲ್ಲೂ ಶಿವಲಿಂಗದ ಮುಂದೆ ಪ್ರತಿಷ್ಠಾಪಿಸಲ್ಪಟ್ಟ ನಂದಿಯ ವಿಗ್ರಹ ತಾಳ್ಮೆಯ ಪ್ರತೀಕವಾಗಿ ನಿಲ್ಲುವುದು. ಶಿವನ ವಾಣಿಯನ್ನು ಕೇಳಲು ಕಾದು ಕುಳಿತಂತೆ ತೋರುವುದು. ಬಂಧರಹಿತನೂ, ಅಲಂಕಾರ ರಹಿತನೂ ಆದ ಶಿವನ ಕೊರಳಲ್ಲಿರುವ ರುದ್ರಾಕ್ಷಿ ಮಾಲೆಯು-ರುದ್ರನ ಅಕ್ಷವೆಂಬ ಪ್ರತೀತಿ ಇದೆ. ಧ್ಯಾನಮಗ್ನನಾಗಿದ್ದ ಶಿವ ತನ್ನ ಕಣ್ಣು ತೆರೆದಾಗ ಉದುರಿದ ಆನಂದ ಬಾಷ್ಪಗಳೇ ರುದ್ರಾಕ್ಷಿಯಾಯಿತು ಹಾಗೂ ಜನರ ದುಃಖವನ್ನು ದೂರಮಾಡುವ ಶಕ್ತಿಯನ್ನು ರುದ್ರಾಕ್ಷಿ ಹೊಂದಿದೆ ಎಂಬ ನಂಬಿಕೆಯೂ ಇದೆ. ಶಿವನು ತನ್ನ ಕೈಯಲ್ಲಿ ಹಿಡಿದಿರುವ ತ್ರಿಶೂಲವು ಇಡಾ, ಪಿಂಗಳ ಹಾಗೂ ಸುಷುಮ್ನಾ ನಾಡಿಗಳ ಸಂಕೇತವೆಂದು ಯೋಗಶಾಸ್ತ್ರದಲ್ಲಿ ಹೇಳಲಾಗಿದೆ. ಪುರಾಣಗಳಲ್ಲಿ ತ್ರಿಶೂಲವು ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗೂ ಜ್ಞಾನಶಕ್ತಿಗಳ ಕೇಂದ್ರಬಿಂದು ಎಂದು ಪ್ರತಿಪಾದಿಸಲಾಗಿದೆ.

ಶಿವನ ಉಡುಗೆಯಾದ ಹುಲಿಚರ್ಮವು ಅಖಂಡವಾದ ಶಕ್ತಿಯ ಸಂಕೇತವಾಗಿ ನಿಲ್ಲುವುದು. ಶಿವನು ಹಿಡಿದಿರುವ ಡಮರುಗದಲ್ಲಿ ಸೃಷ್ಟಿಯ ನಾದ ಅಡಗಿದೆ. ಶಿವನಿಗೆ ಪ್ರಿಯವಾದ ಬಿಲ್ವಪತ್ರೆಯು ಬ್ರಹ್ಮ, ವಿಷ್ಣು ಹಾಗೂ ಮಹೇಶ್ರರರ ಸಂಗಮ. ಶಿವನನ್ನು ಆರಾಧಿಸುವ ಪಂಚಾಕ್ಷರ ಮಂತ್ರ ‘ನಮಃ ಶಿವಾಯ’ ದಲ್ಲಿ ಪ್ರಕೃತಿಯಲ್ಲಿರುವ ಪಂಚಭೂತಗಳೂ ಅಡಗಿವೆ. ‘ನ’ ಕಾರದಲ್ಲಿ ಅಗ್ನಿತತ್ವ, ‘ಮ’ಕಾರದಲ್ಲಿ ವಾಯುತತ್ವ, ‘ಶಿ’ಕಾರದಲ್ಲಿ ಆಕಾಶತತ್ವ, ‘ವ’ಕಾರದಲ್ಲಿ ಭೂಮಿತತ್ವ ಹಾಗೂ ‘ಯ’ಕಾರದಲ್ಲಿ ಜಲತತ್ವ ಅಡಗಿದೆ. ಈ ಮಂತ್ರ ಪಠಣದಿಂದ ತನು ಮನಗಳೆಲ್ಲಾ ಶುದ್ಧಿಯಾಗಿ ಸಾಧಕನು ಧ್ಯಾನದ ಸ್ಥಿತಿ ತಲುಪುವನು. ಈ ಪಂಚಭೂತಗಳ ಸಿದ್ಧಿಗಾಗಿಯೇ ದಕ್ಷಿಣ ಭಾರತದಲ್ಲಿ ಐದು ದೇವಾಲಯಗಳನ್ನು ನಿರ್ಮಿಸಿರುವರು. ಭೂಮಿ ತತ್ವದ ಸಿದ್ಧಿಗಾಗಿ ಕಂಚಿಯ ಏಕಾಂಬರೇಶ್ವರ, ಅಗ್ನಿತತ್ವದ ಸಿದ್ದಿಗಾಗಿ ತಿರುವಣ್ಣಾಮಲೆಯ ಅರುಣಾಚಲೇಶ್ವರ, ಜಲತತ್ವದ ಪ್ರತೀಕವಾದ ಶ್ರೀರಂಗಂನ ಜಂಬುಕೇಶ್ವರ, ವಾಯು ತತ್ವದ ಸಿದ್ಧಿಗಾಗಿ ಕಾಳಹಸ್ತಿಯ ಶ್ರೀಕಾಳಹಸ್ತೇಶ್ವರ, ಆಕಾಶತತ್ವದ ಸಾಕ್ಷಿಯಾಗಿ ಚಿದಂಬರಂನ ನಟರಾಜ ದೇವಾಲಯ ನಿರ್ಮಿಸಲ್ಪಟ್ಟಿವೆ.

ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾದ ಜ್ಯೋರ್ತಿಲಿಂಗಗಳ ಸ್ಮರಣೆ ಮಾಡುತ್ತಾ ಈ ಶಿವರಾತ್ರಿ ಹಬ್ಬವನ್ನು ಆಚರಿಸೋಣವೇ?
ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಮ್,
ಉಜ್ಜಯಿನ್ಯಾಂ ಮಹಾಕಾಲಮೋಂಕಾರ ಮಮಲೇಶ್ವರೇ,
ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಮ್,
ಸೇತುಬಂಧೇತು ರಾಮೇಶಂ ನಾಗೇಶಂ ದಾರುಕಾವನೇ,
ಹಿಮಾಲಯೇತು ಕೇದಾರಂ ತ್ರಯಂಬಕಂ ಗೌತಮೀತಟೆ
ವಾರಣಾಸ್ಯಂತು ವಿಶ್ವೇಶಂ ಘುಶ್ನೇಶಂ ಚ ಶಿವಾಲಯೇ.

ಹುಟ್ಟು ಸಾವಿನ ವೃತ್ತವನ್ನು ಬೇಧಿಸಿ ಮುಕ್ತಿಪಥದಲ್ಲಿ ಸಾಗುವ ಆತ್ಮವು ಪರಮಾತ್ಮನಲ್ಲಿ ಲೀನವಾಗುವ ಪುಣ್ಯಕಾಲವೇ ಶಿವರಾತ್ರಿ ಹಬ್ಬ. ಮಾಯೆಯಂತಹ ಬಂಧನ ಇಲ್ಲ, ಯೋಗದಂತಹ ಶಕ್ತಿ ಇಲ್ಲ, ಜ್ಞಾನದಂತಹ ಮಿತ್ರನಿಲ್ಲ, ಅಹಂಕಾರದಂತಹ ಶತ್ರು ಇಲ್ಲ ಎಂಬುದೇ ಈ ಶಿವರಾತ್ರಿಯ ಹಬ್ಬದ ಸಂದೇಶ ಅಲ್ಲವೇ?

-ಡಾ.ಗಾಯತ್ರಿದೇವಿ ಸಜ್ಜನ್

ಗ್ರಂಥ ಋಣ:- ಸದ್ಗುರುವಿನ ಸಂವಾದಗಳು, ಅಂರ್ತಜಾಲ

5 Responses

  1. sudha says:

    Very informative article. thanks dr. gayathri devi

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ

  3. Savithri bhat says:

    ಶಿವರಾತ್ರಿ ಯ ವಿಶೇಷ ಮಹತ್ವ ಪೂರ್ಣ ಲೇಖನ ಚೆನ್ನಾಗಿದೆ

  4. ಶಂಕರಿ ಶರ್ಮ says:

    ಶಿವರಾತ್ರಿಯ ಮಹತ್ವದ ಜೊತೆಗೆ ಆಚರಣೆಯ ವಿಶೇಷತೆಗಳನ್ನೂ ಸವಿಸ್ತಾರವಾಗಿ ತಿಳಿಯಪಡಿಸಿದ ಸೊಗಸಾದ ಸಕಾಲಿಕ ಲೇಖನ..ಧನ್ಯವಾದಗಳು ಮೇಡಂ.

  5. Anonymous says:

    Lekhana swarasya poornavagi moodi bandise. Shivaratri habbada aacharaneyinda siguva phalahalannu marmikavagi prasthutha padisalaagide.
    Vandanegalu.
    MythraManju

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: