ಕೆ ಎಸ್‌ ನ ಕವಿನೆನಪು 36 : ‘ಮೈಸೂರ ಮಲ್ಲಿಗೆ’ ಗ್ರಂಥಸ್ವಾಮ್ಯದ ದುರಂತ

Spread the love
Share Button

ಕವಿ ಕೆ ಎಸ್‌ ನ

ಪ್ರೊ.ಜಿ ವಿ ಯವರು ನಮ್ಮ ತಂದೆ ಭಾಗವಹಿಸಿದ್ದ ಒಂದು ಸಮಾರಂಭದಲ್ಲಿ ಮಾತನಾಡುತ್ತ “ಈ ನರಸಿಂಹಸ್ವಾಮಿಯ ಕಾವ್ಯವೆಲ್ಲ ಸೊಗಸು,ಆದರೆ ಕಾಪಿರೈಟ್ ವ್ಯವಹಾರ ಮಾತ್ರ ಹೊಲಸು.” ಎಂದಿದ್ದರು. ಕೆ ಎಸ್ ನ ತಮ್ಮ ‘ಮೈಸೂರ ಮಲ್ಲಿಗೆ’ ಹಾಗೂ ಇತರ ಎರಡು ಕೃತಿಗಳ ಗ್ರಂಥಸ್ವಾಮ್ಯ ಹಕ್ಕನ್ನು ಮಾರಾಟ ಮಾಡಿದುದರ ಬಗ್ಗೆ ಹೀಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.

ಆ ನಿಟ್ಟಿನಲ್ಲಿ ಮೊದಲ ಸಾಲಿನಲ್ಲಿ ಬರುವುದು ಮೈಸೂರ ಮಲ್ಲಿಗೆ ಗ್ರಂಥಸ್ವಾಮ್ಯದ ಮಾರಾಟದ ಪ್ರಸಂಗ. 1945 ರ ಮುನ್ನ ತಮ್ಮ ಅನಾರೋಗ್ಯದ ಖರ್ಚುಗಳು ಹಾಗು ಇತರ ಕುಟುಂಬದ ವೆಚ್ಚಗಳಿಗಾಗಿ ಕೃತಿಯ ಗ್ರಂಥಸ್ವಾಮ್ಯದ ಹಕ್ಕನ್ನು ಎಂಟು ನೂರು ರೂಪಾಯಿಗಳಿಗೆ,ಮೈಸೂರಿನ ಡಿ ವಿ ಕೆ ಮೂರ್ತಿ ಎನ್ನುವವರಿಗೆ ಮಾರಾಟ ಮಾಡಬೇಕಾಯಿತು.ಇದು ಮತ್ತಿಬ್ಬರ ಕೈ ಬದಲಾಗಿ ಅಂತಿಮವಾಗಿ ಬೆಂಗಳೂರಿನ ಸ್ಟಾಂಡರ್ಡ್ ಬುಕ್ ಡಿಪೋ ನವರ ಸುಪರ್ದಿಗೆ ಬಂದಿತು.

ಮೂವತ್ತಕ್ಕೂ ಹೆಚ್ಚು ಬಾರಿ ಮರುಮುದ್ರಣವಾಗಿದ್ದರೂ ಕವಿಗೆ ರಾಯಧನ ಇರಲಿ, ಒಂದು ಗೌರವ ಪ್ರತಿಯೂ ಲಭ್ಯವಾಗುತ್ತಿರಲಿಲ್ಲ. ಹೀಗೆ ತನಗೆ ಅಪಾರವಾದ ಕೀರ್ತಿ ತಂದುಕೊಟ್ಟ ಕೃತಿ ಕಂಡವರ ಮನೆಯ ಗಳಿಕೆಯ ಸಾಧನವಾದುದ್ದನ್ನು ಕಣ್ಣಿಂದ ನೋಡುವುದಷ್ಟೆ ಕವಿಗೆ ಸಿಕ್ಕ ಭಾಗ್ಯ.ಇದರ ಜತೆಗೆ ವಿಷಯ ತಿಳಿಯದ ಅಜ್ಞಾನಿಗಳು “ಅವರಿಗೇನು ಬಡತನ? ಆ ಪುಸ್ತಕದಿಂದ ಬೇಕಾದಷ್ಟು ದುಡ್ಡು ಬರುತ್ತೆ.” ಎನ್ನುತ್ತಿದ್ದ ಪೊಳ್ಳುಮಾತುಗಳಿಗೂ ಬರವಿರಲಿಲ್ಲ.

ಒಮ್ಮೆ ಯಾರೋ ನಮ್ಮ ತಂದೆಯವರನ್ನು “ಹೀಗೆ ಏಕೆ ಮಾರಾಟ ಮಾಡಿದಿರಿ.ಅದೊಂದು ನಿಮ್ಮ ಬಳಿ ಇದ್ದಿದ್ದರೆ, ಎಷ್ಟೋ ತಾಪತ್ರಯ ನೀಗುತ್ತಿತ್ತು ಅಲ್ಲವೆ? ” ಎಂದು ಪ್ರಶ್ನಿಸಿದಾಗ “ಆ ಕೃತಿ ಅಷ್ಟೊಂದು ಮಾರಾಟ ಆಗುತ್ತೆ ಅಂತ ಯಾರಿಗೆ ಗೊತ್ತಿತ್ತು?” ಎಂದು ಉತ್ತರಿಸಿದ್ದರು ನಮ್ಮ ತಂದೆ.

ಮೈಸೂರ ಮಲ್ಲಿಗೆ ಗ್ರಂಥಸ್ವಾಮ್ಯದ ಹಕ್ಕು 2003 ರಲ್ಲಿ ನಮ್ಮ ತಂದೆಯವರು ನಿಧನರಾಗುವ ಆರು ತಿಂಗಳ ಮೊದಲು, ಅವರ ಹಿತೈಷಿಗಳ ಹಾಗೂ ಅಭಿಮಾನಿಗಳ ಅವಿರತ ಹೋರಾಟದ ಫಲವಾಗಿ ವಾಪಸು ಬಂತು. ಆದರೆ ಪ್ರಕಾಶಕರು ಪ್ರತಿ ಬಾರಿಯೂ ತಾವೇ ಮರುಮುದ್ರಣ ಮಾಡಬೇಕೆಂದೂ, ರಾಯಧನದ ಮೊತ್ತ ಹಾಗೂ ಪ್ರತಿಗಳ ಸಂಖ್ಯೆ ತಮ್ಮ ನಿರ್ಧಾರದಂತೆ ಆಗಬೇಕೆಂದು ಷರತ್ತು ಹಾಕಿದ್ದರು. ಗ್ರಂಥಸ್ವಾಮ್ಯದ ಹಕ್ಕು ವಾಪಸು ಬಂದಿರುವುದರಿಂದ ಕವಿಗೆ ಭಾವನಾತ್ಮಕ ಸಂತೋಷ ಉಂಟಾಗಿದೆ. ಆದ್ದರಿಂದ ಈ ವಿಷಯವನ್ನು ದೊಡ್ಡದು ಮಾಡುವುದು ಬೇಡ ಎಂದು ಹಿತೈಷಿಗಳು ಸಲಹೆ ನೀಡಿದರು.

ಇಂದು ಮೈಸೂರ ಮಲ್ಲಿಗೆ ಕೃತಿಯ ತಾಂತ್ರಿಕ ಪುಟದಲ್ಲಿ ಗ್ರಂಥಸ್ವಾಮ್ಯದ ಹಕ್ಕು ಲೇಖಕರದು ಎಂದು ನಮೂದಾಗಿದೆ ಮತ್ತು ರಾಯಧನ ಶೇ 10 ಅಥವಾ 15) ಬರುತ್ತಿದ್ದು, ನಮ್ಮ ಕುಟುಂಬದವರು ನಿರ್ವಹಿಸುತ್ತಿರುವ ಕೆ ಎಸ್ ನ ಟ್ರಸ್ಟ್ ಗೆ ಸಂದಾಯವಾಗುತ್ತಿದೆ. ಜತೆಗೆ  ಪ್ರತಿ ಮರುಮುದ್ರಣವಾದಾಗ ಹತ್ತು ಪ್ರತಿಗಳನ್ನು ನೀಡುತ್ತಿದ್ದಾರೆ.

ಅದೇ ರೀತಿ 1945  ರಲ್ಲಿ ಕುಟುಂಬ ವೆಚ್ಚ ನಿರ್ವಹಣೆಗೆ ಐರಾವತ ಕವನ ಸಂಕಲನದ ಹಕ್ಕು ಅದೇ ಡಿವಿ ಕೆ ಮೂರ್ತಿಯವರಿಗೆ ಕೇವಲ ಇನ್ನೂರು ರೂಪಾಯಿಗಳಿಗೆ ಮಾರಾಟವಾಗಿತ್ತು. ಈ ಪ್ರವೃತ್ತಿಗಳು ನಮ್ಮ ತಂದೆಯವರಿಗೂ ಖೇದ ತಂದಿತ್ತು. 1990 ರಲ್ಲಿ ಯಾವುದೋ ಪತ್ರಿಕೆಗೆ ನೀಡಿದ್ದ ಒಂದು ಸಂದರ್ಶನದಲ್ಲಿ ನಮ್ಮ ತಂದೆ “ಒಂದಂತೂ ನಿಜ, ಯಾವ ಕಾರಣಕ್ಕೂ ಕಾಪಿರೈಟ್ ಮಾರಬಾರದು ಎಂದು ನನ್ನ ಅನುಭವಕ್ಕೆ ಬಂದಿದೆ” ಎಂದಿದ್ದರು.

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:    http://surahonne.com/?p=31544


-ಕೆ ಎನ್ ಮಹಾಬಲ

(ಕೆ ಎಸ್ ನ ಪುತ್ರ, ಬೆಂಗಳೂರು)

3 Responses

  1. ನಯನ ಬಜಕೂಡ್ಲು says:

    ಸರ್ ನಿಮ್ಮ ಸರಣಿ ಲೇಖನ ಮಾಲೆ ಯಿಂದ ಕವಿಗಳ ಬದುಕಿನಲ್ಲಿ ನಡೆದ ಬಹಳಷ್ಟು ಘಟನೆಗಳು ಬೆಳಕಿಗೆ ಬರುತ್ತಿದೆ. ಹೆಚ್ಚಿನವರ ಮನಸಲ್ಲಿ ಖ್ಯಾತ ರ ಬದುಕು ಹೂವಿನ ಹಾಸಿಗೆ ಆಗಿತ್ತು ಅನ್ನುವ ಭಾವವೇ. ಅದನ್ನು ದೂರ ಮಾಡಿ ಸತ್ಯವನ್ನು ಬಯಲು ಗೊಳಿಸುವ ಲೇಖನ

  2. ಪ್ರಸಿದ್ಧ ಬರಹಗಾರರ ಬದುಕು ಬವಣೆಗಳು ಅನಾವರಣಗೊಳ್ಳುತ್ತಿರುವ ಲೇಖನ ಬಹಳ ಚೆನ್ನಾಗಿದೆ ಮೂಡಿ ಬರುತ್ತಿದೆ.ನಿರೂಪಣೆ ಅಚ್ಚುಕಟ್ಟಾಗಿದೆ.ಅಭನಂದನೆಗಳು ಸಾರ್.

  3. ಶಂಕರಿ ಶರ್ಮ says:

    ಅಬ್ಬಾ.. ಬಡತನ ಏನೆಲ್ಲಾ ಮಾಡಿಸುತ್ತದೆ.. ಅದರಿಂದಾಗಿ ಕವಿಗಳು ಅನುಭವಿಸಿದ ಮಾನಸಿಕ ಹಿಂಸೆ..ಎಲ್ಲವನ್ನೂ ಬಿಚ್ಚಿಟ್ಟರುವ ತಮ್ಮ ಲೇಖನವು ಕವಿಗಳ ಬಾಳಿನ ಇನ್ನೊಂದು ಮುಖವನ್ನು ಪರಿಚಯಿಸಿದೆ. ಈ ಲೇಖನ ಮಾಲೆಯು ಅದ್ಭುತವಾಗಿ ಮೂಡಿಬರುತ್ತಿದೆ. ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: