ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 13
‘ದ್ವಾರಕಾಧೀಶ್ ಕೀ ಜೈ’
ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅರಮನೆಯಿದ್ದ ಜಾಗದಲ್ಲಿ, ಅವನ ಮರಿಮೊಮ್ಮಗನಾದ ವಜ್ರನಾಭನು ವಿಶ್ವಕರ್ಮನ ಮೂಲಕ ‘ದ್ವಾರಕಾಧೀಶನ’ ಮಂದಿರವನ್ನು ಕಟ್ಟಿಸಿದನೆಂಬ ನಂಬಿಕೆ.. ಇಲ್ಲಿರುವ ಮೂಲವಿಗ್ರಹವು 2500 ವರ್ಷಗಳಷ್ಟು ಹಳೆಯದು. ದ್ವಾರಕೆಯು ಹಲವಾರು ಬಾರಿ ನೀರಿನಲ್ಲಿ ಮುಳುಗಿತ್ತು. ಹಾಗಾಗಿ ಕಾಲಘಟ್ಟದಲ್ಲಿ ಮಂದಿರದ ಮರುನಿರ್ಮಾಣ ನಡೆದಿತ್ತು.ಶ್ರೀ ಶಂಕರಾಚಾರ್ಯರು ಇಲ್ಲಿಗೆ ಬಂದಿದ್ದಾಗ ಶಾರದಾಪೀಠವನ್ನು ಸ್ಥಾಪಿಸಿದರು. ಅವರು ಸ್ಥಾಪಿಸಿದ ಚರ್ತುಧಾಮಗಳಲ್ಲಿ ದ್ವಾರಕೆಯೂ ಒಂದು.
ಈಗ ಗೋಮತೀ ನದೀತೀರದಲ್ಲಿರುವ ಕಂಗೊಳಿಸುತ್ತಿರುವ 16 ನೆಯ ಶತಮಾನದಲ್ಲಿ ರಾಜಾ ಜಗತ್ ಸಿಂಗ್ ರಾತೋಡ್ ಕಟ್ಟಿಸಿದನು. ಹಾಗಾಗಿ ಈ ಮಂದಿರಕ್ಕೆ ಜಗತ್ಮಂದಿರ ಎಂಬ ಹೆಸರು ಇದೆ. ಹಳದಿ ಬಣ್ಣದ ಮರಳುಕಲ್ಲಿನಿಂದ ಕಟ್ಟಲಾದ ಚಾಲುಕ್ಯ ಶೈಲಿಯ ಅದ್ಭುತ ಶಿಲ್ಪಕಲಾವೈಭವವನ್ನು ಹೊಂದಿದ ದೇವಾಲಯವಿದು 72 ಸ್ಥಂಭಗಳುಳ್ಳ, ಐದು ಅಂತಸ್ತಿನ ಗೋಪುರವು 256 ಅಡಿ ಎತ್ತರವಿದೆ. ಗೋಪುರದ ಸದಾ ಕಾಲ ಸೂರ್ಯ ಅಥವಾ ಚಂದ್ರರನ್ನು ಬಿಂಬಿಸುವ ದ್ವಜ ಹಾರಾಡುತ್ತಿರುತ್ತದೆ. ಮಂದಿರದ ಅರ್ಚಕರು ದಿನಕ್ಕೆ ಐದು ಬಾರಿ ಈ ಗೋಪುರವನ್ನು ಹತ್ತಿ ಧ್ವಜವನ್ನು ಬದಲಾಯಿಸುವುದು ಇಲ್ಲಿನ ಸಂಪ್ರದಾಯ. ಈ ದೇವಾಲಯಕ್ಕೆ ಸ್ವರ್ಗ ದ್ವಾರ ಮತ್ತು ಮೋಕ್ಷ ದ್ವಾರಗಳೆಂದು ಎರಡು ದ್ವಾರಗಳಿವೆ. ದ್ವಾರಕಾಧೀಶ ದೇಗುಲವು ಸಾರ್ವಜನಿಕ ದರ್ಶನಕ್ಕಾಗಿ ಬೆಳಗ್ಗೆ 7 ರಿಂದ ರಾತ್ರಿ 9.30ರವರೆಗೆ ತೆರೆದಿರುತ್ತದೆ. ಮಧ್ಯದಲ್ಲಿ 12.30 ರಿಂದ 5ರವರೆಗೆ ಮುಚ್ಚಿರುತ್ತದೆ.
ನಮ್ಮ ತಂಡದವರ ಜೊತೆಗೆ ನಿಯೋಜಿಸಲಾಗಿದ್ದ ಸ್ಥಳೀಯ ‘ಪಂಡಾ’ ಒಬ್ಬರು ನಮ್ಮನ್ನು, ‘ಮೋಕ್ಷ ದ್ವಾರದ ಮೂಲಕ ದೇವಾಲಯದ ಒಳಗೆ ಕರೆದೊಯ್ದರು. ಆಗ ಸಂಜೆ ಆಗಿತ್ತು. ಸಂಜೆ 0730 ಗಂಟೆಯಿಂದ 0745 ರ ವರೆಗೆ ಜರಗುವ ‘ಸಂಧ್ಯಾ ಆರತಿ’ಯನ್ನು ನೋಡಲು ಅನುಕೂಲವಾಗುವಂತೆ ಸರದಿ ಸಾಲಿನಲ್ಲಿ ನಿಲ್ಲಿಸಿದರು. ಆ ಸಮಯದಲ್ಲಿ ಸರದಿ ಸಾಲು ಮುಂದೆ ಹೋಗುವುದಿಲ್ಲ. ಅಲ್ಲಿ ಹಿಡಿಸುವಷ್ಟು ಜನರಿಗೆ, ಬಹುಶ: ಸುಮಾರು 100 ಗೆ ಮಾತ್ರ ಆ ಸಮಯದಲ್ಲಿ ‘ಆರತಿ’ಯ ದರ್ಶನ ಲಭ್ಯವಾಗುವುದು. ವೈಭವೋಪೇತವಾಗಿ ಅಲಂಕರಿಸಿದ ದ್ವಾರಕಾಧೀಶನ ಮೂರ್ತಿಗೆ ಮಂತ್ರೋಚ್ಛಾರಣೆಯೊಂದಿಗೆ, ಮಂಗಳವಾದ್ಯಗಳು ಹಾಗೂ ಭಾವುಕ ಭಕ್ತರ ಘೋಷದೊಂದಿಗೆ ‘ಸಂಧ್ಯಾ ಆರತಿ’ಯು ಬಹಳ ಸೊಗಸಾಗಿ ನೆರವೇರಿತು. ಅನಂತರ, ಮಂದಿರದ ಇನ್ನೊಂದು ಭಾಗದಲ್ಲಿರುವ ‘ಸ್ವರ್ಗ ದ್ವಾರ’ದ ಮೂಲಕ ಹೊರಗೆ ಬಂದೆವು. ‘ಪಂಡಾ’ ಅವರ ಮಾರ್ಗದರ್ಶನದಲ್ಲಿ, ಅದೇ ಆವರಣದಲ್ಲಿರುವ ಕೃಷ್ಣನ ಅಷ್ಟಪತ್ನಿಯರು, ಬಲರಾಮ, ದೇವಕಿ ಮೊದಲಾದವರ ಗುಡಿಗಳಿಗೂ ಭೇಟಿ ಕೊಟ್ಟೆವು.
ಅನ್ನದಾನ. ತುಲಾಭಾರ
ತನ್ನ ಬಾಲ್ಯದ ಗೆಳೆಯ ಸುದಾಮನು ಪ್ರೀತಿಯಿಂದ ‘ಅವಲಕ್ಕಿ’ಕೊಟ್ಟ ಕಾರಣ ಶ್ರೀಕೃಷ್ಣನ ಮಂದಿರಗಳಲ್ಲಿ ಅವಲಕ್ಕಿಯ ನೈವೇದ್ಯ ವಿಶೇಷವಾಗಿರುತ್ತದೆ. ಭಕ್ತರು ತಮ್ಮ ಶಕ್ಯಾನುಸಾರ ಅನ್ನದಾನಕ್ಕೆ ನೋಂದಾಯಿಸಲು ಅವಕಾಶವಿರುತ್ತದೆ. ಒಂದು ದಿನದ ಅನ್ನದಾನಕ್ಕೆ ರೂ.750/-. ನಮ್ಮ ತಂಡದ ಹೆಚ್ಚಿನವರು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ನಮ್ಮ ಹೆಸರಿನಲ್ಲಿ ಸಂಕಲ್ಪ ಮಾಡಿಸಿ, ದಂಪತಿಗೆ ಹಳದಿ ಬಣ್ಣದ ಶಾಲನ್ನು ಕತ್ತಿಗೆ ಹೊದಿಸಿ, ಸ್ವಲ್ಪ ಅಕ್ಕಿಯನ್ನು ಪ್ರಸಾದವಾಗಿ ಕೊಟ್ಟ ಅರ್ಚಕರು ಇದನ್ನು ನಿಮ್ಮ ಮನೆಗೊಯ್ದು, ಅಕ್ಕಿ ಡಬ್ಬಕ್ಕೆ ಸೇರಿಸಿ. ಅನ್ನ ಅಕ್ಷಯವಾಗಲಿ, ಪಾಯಸ ಮಾಡಿ ಸೇವಿಸಿ ಎಂದು ಆಶೀರ್ವದಿಸಿದರು.
ಸತ್ಯಭಾಮೆಯು ಒಂದು ಬಾರಿ ತನ್ನ ಧನ-ಕನಕಾದಿಗಳನ್ನು ತಕ್ಕಡಿಯ ಒಂದು ತಟ್ಟೆಯಲ್ಲಿರಿಸಿ ಶ್ರೀಕೃಷ್ಣನನ್ನು ಇನ್ನೊಂದು ತಟ್ಟೆಯಲ್ಲಿರಿಸಿ ತೂಗಿದಾಗ ತಕ್ಕಡಿ ಮೇಲೇರಲಿಲ್ಲ, ಆದರೆ ರುಕ್ಮಿಣಿಯು ಭಕ್ತಿಯಿಂದ ಒಂದೆಸಳು ತುಳಸಿಯನ್ನು ತಕ್ಕಡಿಯಲ್ಲಿರಿಸಿದಾಗ ತುಲಾಭಾರ ಸಂಪನ್ನವಾಯಿತು ಎಂಬ ಕತೆಯನ್ನು ಓದಿದ್ದೇವೆ. ಇದಕ್ಕೆ, ಪೂರಕವಾಗಿ, ದ್ವಾರಕೆಯಲ್ಲಿ ತುಲಾಭಾರ ಸೇವೆ ನಡೆಯುತ್ತದೆ. ಅಕ್ಕಿ, ಅವಲಕ್ಕಿ, ಬೇಳೆ, ಗೋಧಿಹಿಟ್ಟು,ಎಣ್ಣೆ, ಬೆಲ್ಲ ಒಣಮೆಣಸು ಮತ್ತು ಉಪ್ಪು ಇಷ್ಟನ್ನು ಒಳಗೊಂಡಿದ್ದ ಚೀಲವನ್ನು ತುಲಾಭಾರಕ್ಕೆ ಉಪಯೋಗಿಸುತ್ತಿದ್ದುದನ್ನು ಕಂಡೆವು. ಹಲವಾರು ಮಂದಿ ತಮ್ಮ ತೂಕಕ್ಕೆ ಸಮನಾದ ಆಹಾರವಸ್ತುಗಳನ್ನು ಕೊಡುವ ಮೂಲಕ ತುಲಾಭಾರ ಸೇವೆಯನ್ನು ಮಾಡುತ್ತಿದ್ದರು.
ನಮ್ಮ ತಂಡದ ಎಲ್ಲರಿಗೂ ‘ಪಂಡಾ’ ಅವರ ಮಾರ್ಗದರ್ಶನದಲ್ಲಿ, ಸ್ಥಳಮಾಹಿತಿ ಹಾಗೂ ಮಾಡಬಹುದಾದ ಸೇವೆಗಳ ಬಗ್ಗೆ ವಿವರ ಲಭಿಸಿ ಅನುಕೂಲವಾಯಿತು. ಅವರು ಸಕಾಲದಲ್ಲಿ ನಮ್ಮನ್ನು ಸರದಿ ಸಾಲಿನಲ್ಲಿ ನಿಲ್ಲಿಸಿದ ಕಾರಣ, ನಮಗೆ ಸಂಧ್ಯಾ ಆರತಿ ಹಾಗೂ ಶಯನ ಆರತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಸಂತೋಷಪಡಲು ಸಾಧ್ಯವಾಯಿತು. ಶ್ರೀಕೃಷ್ಣನ ಲೀಲೆಗಳಿಗೆ ಸಾಕ್ಷಿಯಾದ ದ್ವಾರಕೆಗೆ ಭೇಟಿಕೊಟ್ಟು, ದ್ವಾರಕಾಧೀಶನ ಪೂಜೆಯನ್ನು ಕಣ್ತುಂಬಾ ನೋಡಿದ ಎಲ್ಲರಿಗೂ ಧನ್ಯತಾಭಾವ ಉಂಟಾಯಿತು. ‘ಪಂಡಾ’ ಅವರಿಗೆ ಶಕ್ಯಾನುಸಾರ, ದಕ್ಷಿಣೆ ಕೊಟ್ಟು ನಮ್ಮ ಹೋಟೆಲ್ ಗೆ ಮರಳಿದೆವು.
(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=31485
-ಹೇಮಮಾಲಾ.ಬಿ
ಬಹಳ ಸುಂದರ ವಿವರಣೆ.ಎರಡು ವರುಷದ ಹಿಂದೆ ನಾವೂ ಭೇಟಿ ಕೊಟ್ಟದ್ದು ನೆನಪಾಯಿತು
ಗೆಳತಿ ಹೇಮಾನಿಮ್ಮ ಪ್ರವಾಸದ ಬರಹಕ್ಕೆ ನನ್ನದೊಂದು ಪುಟ್ಟ ನಮನ ಕಂಡ್ರಿ ಸೊಗಸಾದ ನಿರೂಪಣೆ ಅಭಿನಂದನೆಗಳು
ಮಾಹಿತಿಪೂರ್ಣ ಪ್ರವಾಸಕಥನ ತುಂಬಾ ಚೆನ್ನಾಗಿದೆ.
ದ್ವಾರಕಾಧೀಶ ಮಂದಿರದ ಬಗೆಗಿನ ಸೂಕ್ಷ್ಮ ಪರಿಚಯ, ಅನ್ನದಾನ, ತುಲಾಭಾರ ಸೇವೆಗಳ ವಿವರಗಳನ್ನು ಒಳಗೊಂಡ ಪ್ರವಾಸಕಥನವು ಮನಸ್ಸಿಗೆ ಮುದನೀಡಿತು.
Very nice