ಪ್ರಜಾಪತಿಯೆನಿಸಿದ ಕಶ್ಯಪ
ರಾತ್ರಿವೇಳೆ ಆಕಾಶದಲ್ಲಿ ಏಳು ನಕ್ಷತ್ರಗಳ ಸಮೂಹವನ್ನು ಕಾಣುತ್ತೇವೆ. ಈ ಸಪ್ತಋಷಿ ಮಂಡಲವನ್ನು ನೋಡುವುದರಿಂದ ಅಂದಿನ ಪಾಪ ಪರಿಹಾರ ಎಂದು ಹಿರಿಯರಿಂದ ಕೇಳಿದ್ದೇವೆ. ಅಲ್ಲಿ ಕಾಣುವ ಸಪ್ತಋಷಿಗಳೆಂದರೆ ಯಾರೆಲ್ಲ.?.. ಅವರೇ ಕಶ್ಯಪ, ಅತ್ರಿ, ಭಾರದ್ವಾಜ, ವಸಿಷ್ಠ, ವಿಶ್ವಾಮಿತ್ರ, ಜಮದಗ್ನಿ, ಗೌತಮ, ಇವರು ಗೋತ್ರ ಪ್ರವರ್ತರು, ಸಪ್ತಋಷಿಗಳ ಹೆಸರಿನಲ್ಲಿ ಸಪ್ತಗೋತ್ರಗಳು, ತಮ್ಮದು ಯಾವ ಗೋತ್ರವೆಂದು ತಿಳಿಯದವರು ಕಶ್ಯಪಗೋತ್ರವೆಂದು ಹೇಳಬಹುದೆಂದು ಧರ್ಮಶಾಸ್ತ್ರಗಳು ಹೇಳುತ್ತವೆ. ಅಂದರೆ, ನಮ್ಮ ಪೂರ್ವಿಕರು ಈ ಸಪ್ತಋಷಿಗಳಲ್ಲಿ ಒಬ್ಬನು ಎಂದ ಹಾಗಾಯ್ತು.
ಗೋತ್ರ ಪ್ರವರ್ತರಲ್ಲಿ ಮೊದಲನೆಯವನೇ ಕಶ್ಯಪ ಮುನಿ. ಇವನು ಮರೀಚಿಯ ಮಗ. ಈತನ ತಾಯಿ ಕರ್ದಮ ಪುತ್ರಿಯಾದ ಕಲೆ. ಅದಿತಿ, ದಿತಿ, ಕದು, ಮನಿ ಮೊದಲಾದ ದಕ್ಷನ ಹದಿಮೂರು ಮಂದಿ ಪುತ್ರಿಯರು ಇವನ ಹೆಂಡತಿಯರು. ಈತನಿಗೆ ಹದಿನೇಳು ಮಂದಿ ಪುತ್ರಿಯರೆಂದೂ ಭಾಗವತದಲ್ಲಿ ಹೇಳಿದೆ.
ಈತನೊಬ್ಬ ಸೃಷ್ಟಿಕರ್ತ, ದೇವತೆಗಳು, ದೈತ್ಯರು, ದಾನವರು, ಸಿದ್ದರು, ಪ್ರಾಣಿ, ಪಕ್ಷಿ, ಮರ ಬಳ್ಳಿಗಳಿಗೂ ತಂದೆ ಯಾರೆಂದು ಕೇಳಿದರೆ… ಜೀವಿಗಳೆಲ್ಲರಿಗೂ ಆ ಪರಮಾತ್ಮನೇ ತಂದೆಯೆಂದು ಪ್ರತಿಯೊಬ್ಬರೂ ಹೇಳುವುದು ಸಹಜ. ಅದು ಎಲ್ಲರೂ ಒಪ್ಪತಕ್ಕ ಮಾತೂ ಹೌದು. ಆದರೆ ಸೃಷ್ಟಿಕರ್ತನು ಇದಕ್ಕೆ ಒಬ್ಬನನ್ನು ಅಥವಾ ಯಾವುದಾದರೂ ಮಾಧ್ಯಮವನ್ನು ಹೇತುವನ್ನಾಗಿಸುತ್ತಾನೆ. ಮಹರ್ಷಿಗಳೂ ಆದಿಯಲ್ಲಿ ಸೃಷ್ಟಿ ಬೆಳೆಸಿದುದರಿಂದ ಪ್ರಜಾಪತಿಗಳೆನಿಸಿದರು. ಅವರ ಮುಖಾಂತರ ಜೀವರಾಶಿಗಳ ಉತ್ಪತ್ತಿಯಾಗುತ್ತದೆ. ಕಶ್ಯಪನಿಗೆ ‘ಅದಿತಿ’ಯಲ್ಲಿ ದೇವತೆಗಳೂ ‘ದಿತಿ’ಯಲ್ಲಿ ರಾಕ್ಷಸರೂ,’ದನು’ವಿನಲ್ಲಿ ದಾನವರೂ, ‘ಕಾಲೆ’ಯಲ್ಲಿ ಕಾಲಕೇಯರೂ ‘ಗನಾಯ’ವಿನಲ್ಲಿ ಸಿದ್ದರೂ, ‘ಕ್ರೋದೆ’ಯಲ್ಲಿ ಪ್ರಾಣಿಗಳೂ, ‘ಪ್ರಾಧೆ’ಯಲ್ಲಿ ಗಂಧರ್ವರೂ, ವಿನತೆಯಲ್ಲಿ ಅರುಣ, ಗರುಡರೂ, ಕಪಿಯಲ್ಲಿ ಗೋವುಗಳೂ, ‘ಮುನಿ’ಯಲ್ಲಿ ಅಪ್ಸರೆಯರೂ, ‘ಕದ್ರು’ವಿನಲ್ಲಿ ಸರ್ಪಗಳೂ, ‘ಸುರಸೆ’ಯಲ್ಲಿ ಯಕ್ಷರೂ, ‘ಇಲೆ’ಯಲ್ಲಿ ಮರ-ಬಳ್ಳಿ-ಹುಲ್ಲುಗಳೂ, ತಾಮ್ರೆಯಲ್ಲಿ ಅಶ್ವ,,ಗದಮನ, ಹದ್ದುಗಳೂ ಮಕ್ಕಳಾಗಿ ಹುಟ್ಟಿದರು.
ಈ ಕಶ್ಯಪನಿಗೆ ಅದೆಷ್ಟು ಮಂತ್ರ ಶಕ್ತಿಯಿತ್ತೆಂದರೆ…? ಒಂದೆರಡು ಉದಾಹರಣೆಯನ್ನು ನೋಡೋಣ. ಒಮ್ಮೆ ಭೂಮಿಯಲ್ಲಿ ದುಷ್ಟರೇ ತುಂಬಿ ಅವರಿಂದ ಪೀಡಿತಳಾದ ಭೂಮಾತೆ ರಸಾತಳಕ್ಕೆ ಇಳಿಯುತ್ತಿರಲು ಕಶ್ಯಪನು ತನ್ನ ತಪೋಶಕ್ತಿಯಿಂದ ಭೂಮಿಯನ್ನೆತ್ತಿ ತನ್ನ ಊರುವಿನಲ್ಲಿ (ತೊಡೆಯಲ್ಲಿ) ಧರಿಸಿದನಂತೆ. ಇದಕ್ಕಾಗಿ ಭೂಮಿಗೆ ಉರ್ವಿ ಎಂಬ ಹೆಸರು ಬಂತು ಎಂಬುದಾಗಿ ಮಹಾಭಾರತದ ಶಾಂತಿ ಪರ್ವದಲ್ಲಿ ಹೇಳಿದೆ.
ಶಮೀಕ ಋಷಿಯ ಪುತ್ರನಾದ ಶೃಂಗಿಯಿಂದ ಪರೀಕ್ಷಿದ್ರಾಜನಿಗೆ ಸರ್ಪಕಚ್ಚಿ ಸಾಯುವಂತೆ ಶಾಪ ಹೊಂದಲಾಗಿ ಆ ಶಾಪದಿಂದ ಆತನನ್ನು ಉಳಿಸುವುದಕ್ಕಾಗಿ ಕಶ್ಯಪನು ಹೋಗುತ್ತಿದ್ದ. ಆಗ ‘ತಕ್ಷಕ’ನು (ಸರ್ಪರಾಜ) ಎದುರಾಗಿ ಬಂದು ಒಂದು ದೊಡ್ಡ ಆಲದ ಮರವನ್ನು ಕಚ್ಚಿದನು. ಅದು ಕೂಡಲೇ ಬುದಿಯಾಗಿ ಬಿತ್ತು. ಕಶ್ಯಪನು ತನ್ನ ಮಂತ್ರಶಕ್ತಿಯಿಂದ ಮರವನ್ನು ಮೊದಲಿನಂತೆ ಮಾಡಲು ‘ತಕ್ಷಕ’ನು ಬೆರಗಾದನು. ಆದರೆ ತಕ್ಷಕನು ಕಶ್ಯಪನನ್ನು ಹಿಂದೆ ಕಳುಹಿಸಿದನು. ಪರಶುರಾಮರಿಂದ ಈತನಿಗೆ ಭೂಮಿಯು ದಾನವಾಗಿ ಕೊಡಲ್ಪಟ್ಟಿತು. ಮತ್ತೆ ಭೂಮಿಗೆ ಕಾಶ್ಯಪಿ ಎಂಬ ಹೆಸರೂ ಸೇರಿತು.
ವರುಣನ ಗೋವುಗಳನ್ನು ಈ ಮುನಿಯು ಕಡವಾಗಿ ತಂದು ತನ್ನ ಇಬ್ಬರು ಪತ್ನಿಯರ ಮಾತುಕೇಳಿ ಹಿಂದೆ ಕೊಡದುದರಿಂದ ವರುಣನ ಶಾಪಕ್ಕೆ ಗುರಿಯಾಗಿ ವಸುದೇವ, ದೇವಕಿ, ರೋಹಿಣಿಯರಾಗಿ ಜನ್ಮವೆತ್ತಿದರು. ದನಗಳನ್ನು ವಸುದೇವನು ನಿರ್ಬಂಧಿಸಿದುದರಿಂದ ಅವನಿಗೆ ಸ್ವಲ್ಪ ದಿನದಮಟ್ಟಿಗೆ ಕಾರಾಗೃಹವಾಸ ಪ್ರಾಪ್ತವಾಯಿತು.ಆದರೆ… ಶ್ರೀಕೃಷ್ಣನ ಲೀಲೆಯಿಂದ ಅದೆಲ್ಲವೂ ಪವಾಡದಂತೆ ಬಿಡುಗಡೆಯಾಯಿತು. ದೇವ ದೇವನ ಪಿತನಾಗುವ ಭಾಗ್ಯವೂ ದೊರೆಯಿತು. !
-ವಿಜಯಾ ಸುಬ್ರಹ್ಮಣ್ಯ, ಕುಂಬಳೆ
ಸಾಕಷ್ಟು ಅಪರೂಪದ ವಿಚಾರಗಳಿಂದ ಕೂಡಿದ ಪೌರಾಣಿಕ ಕಥೆಗಳು. ಮಾಹಿತಿಪೂರ್ಣ.
ಪೌರಾಣಿಕ ಮಾಹಿತಿ ಕೊಟ್ಟಿದ್ದಕ್ಕೆ ಅಭಿನಂದನೆಗಳು ಮೇಡಂ.
ಮಹಾಮುನಿ ಕಶ್ಯಪರ ಬಗೆಗೆ ಅಪರೂಪದ ಪೌರಾಣಿಕ ಕಥಾ ಮಾಹಿತಿಯನ್ನು ಹೊತ್ತ ಲೇಖನ ಬಹಳ ಚೆನ್ನಾಗಿದೆ ವಿಜಯಕ್ಕ.