ಕೆ ಎಸ್ ನ ಕವಿನೆನಪು 39 : ನಡಿಗೆ ಬೆತ್ತ ಪ್ರಕರಣ.
ಯಾರಾದರು ಸ್ನೇಹಿತರು ಅಥವಾ ಅಭಿಮಾನಿಗಳು ವಿಶ್ವಾಸದಿಂದ ನೀಡಿದ ಸ್ಮರಣಿಕೆಗಳನ್ನೋ, ಅಥವಾ ನಿತ್ಯುಪಯುಕ್ತ ವಸ್ತುಗಳನ್ನೋ ಬಹಳ ಜತನದಿಂದ ಕಾಪಾಡಿಕೊಳ್ಳುವ, ಅವರ ಔದಾರ್ಯವನ್ನು ನೆನಪಿಸಿಕೊಳ್ಳುವ ತಂದೆಯವರ ಸ್ವಭಾವ ಕೆಲವು ಸಾರಿ ವಿಚಿತ್ರವೆನಿಸುತ್ತಿತ್ತು..ಈ ವಸ್ತುಗಳು ಕಣ್ಣೆದುರು ಕಾಣದಿದ್ದರೆ ಅವರ ತಹತಹ ಹೇಳತೀರದು. ಅದಕ್ಕೆ ಸಾಕ್ಷಿ ಈ ನಡಿಗೆ ಬೆತ್ತ ಪ್ರಕರಣ.
ಮೈಸೂರಿನಲ್ಲಿ 2000 ದ ವರ್ಷದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲು ಬಂದಿದ್ದಾಗ, ನಮ್ಮ ಮನೆಗೂ ಬಂದು ಒಂದು ದಿನ ಇದ್ದರು. ತಾವು ಐದು ಜನ ಬರುತ್ತಿರುವುದಾಗಿಯೂ, ನನ್ನ ಮಗನ ಮನೆ ಇದ್ದರೂ ಅವರಿಗೆ ತೊಂದರೆಯಾಗುವುದೆಂದೂ, ಆದ್ದರಿಂದ ವಸತಿಗೃಹದಲ್ಲಿ ವ್ಯವಸ್ಥೆ ಮಾಡಬೇಕೆಂದು ಸಂಘಟಕರಿಗೆ ಹೇಳಿದ್ದರು.
ನಮ್ಮ ಮನೆಯಿಂದ ಹೊರಡುವಾಗ ವರಾಂಡದಲ್ಲೇ ಇಟ್ಟಿದ್ದ ಅವರ ನಡಿಗೆ ಬೆತ್ತ ಕಾಣಲಿಲ್ಲ. ಅವಸರದಲ್ಲಿ ಮನೆಯವರೆಲ್ಲರೂ ಹುಡುಕಿದರೂ ಸಿಗಲಿಲ್ಲ. ಎಲ್ಲಿದ್ದರೂ ಹುಡುಕಿ ಬೆಂಗಳೂರಿಗೆ ಬಂದಾಗ ತಂದುಕೊಡುತ್ತೇನೆಂದು ಭರವಸೆ ನೀಡಿದೆ.
“ಈಗಲೇ ಸಿಕ್ಕಿದ್ದರೆ ಚೆನ್ನಾಗಿತ್ತು. ಅದು ಕೆ ವಿ ಸುಬ್ಬಣ್ಣ ಕೊಟ್ಟದ್ದು…” ಇತ್ಯಾದಿ ಪ್ರವರ ಒಪ್ಪಿಸಲು ಆರಂಭಿಸಿದರು. ನನ್ನ ತಮ್ಮ ಚನ್ನಪಟ್ಟಣದಲ್ಲಿ ಹೊಸದೊಂದು ನಡಿಗೆ ಬೆತ್ತ ತೆಗೆದುಕೊಂಡು ಹೋಗೋಣ ಬನ್ನಿ ಎಂದು ಹೇಳಿ ಕರೆದುಕೊಂಡು ಹೋದ.
“ಮುಂದಿನ ಸಾರಿ ಬಂದಾಗ ಜಾಗ್ರತೆ ತೊಗೊಂಡು ಬಾ” ಎಂದು ಮತ್ತೊಮ್ಮೆ ನನಗೆ ಆದೇಶ ನೀಡಿ ಭಾರವಾದ ಮನಸ್ಸಿನಿಂದ ಹೊರಟರು.
ಮಾರನೆಯ ದಿನ ಮನೆಕೆಲಸದವಳು ಕಸ ಗುಡಿಸುತ್ತಿದ್ದಾಗ, ಸೋಫಾದ ಕೆಳಗೆ ನಡಿಗೆ ಬೆತ್ತ ಕಾಣಿಸಿಕೊಂಡಿತು.ಸದ್ಯ ಒಂದು ತಲೆನೋವು ಕಳೀತು.ಇನ್ನು ತಲುಪಿಸುದಷ್ಟೇ ಬಾಕಿ ಎಂದುಕೊಂಡೆ. ದಿನ ಕಳೆದಂತೆ ನನಗೆ ಹಾಗೂ ನನ್ನ ಶ್ರೀಮತಿಗೆ ಆ ನಡಿಗೆ ಬೆತ್ತದ ಬಗ್ಗೆ ಒಂದು ತೆರನಾದ ಅವಿನಾಭಾವ ಬೆಳೆಯತೊಡಗಿತು. ಅದನ್ನು ನೋಡಿದಾಗಲೆಲ್ಲ ಅಪ್ಪನ ಸ್ವಭಾವವೇ ಕಣ್ಣ ಮುಂದೆ ಅನಾವರಣಗೊಂಡಂತೆ ಭಾಸವಾಗುತ್ತಿತ್ತು. ಆ ಕಾರಣಕ್ಕೆ ಅದನ್ನು ವಾಪಸು ಕೊಡಬಾರದೆಂದು ತೀರ್ಮಾನಿಸಿದೆವು.
ಒಂದೆರಡು ತಿಂಗಳು ಬಿಟ್ಟು ಮನೆಗೆ ಹೋದಾಗ ಅಪ್ಪನದು ಒಂದೇ ಪ್ರಶ್ನೆ ”ಎಲ್ಲಿ ವಾಕಿಂಗ್ ಸ್ಟಿಕ್ ?”
“ಇವತ್ತು ಬಸ್ ನಲ್ಲಿ ಬಂದೆ, ಕಾರ್ ನಲ್ಲಿ ಬಂದಾಗ ತರುತ್ತೇನೆ”
“ಬಸ್ ನಲ್ಲಿ ತಂದರೆ ಏನು ಮಾನಕ್ಕೆ ಕುಂದಕ?” ಅವರ ಸವಾಲು.
ಅಮ್ಮ ಜೋರುದನಿಯಲ್ಲಿ “ಬಂದವರ ಯೋಗಕ್ಷೇಮ ವಿಚಾರಿಸೋದು ಬಿಟ್ಟು ಏನು ನಿಮ್ಮ ತಕರಾರು?”ಎಂದಾಗ
“ಹಾಗಲ್ವೇ,ಅದು…”
“ ಕೆ ವಿ ಸುಬ್ಬಣ್ಣ ಸಾಗರದಿಂದ ಕಳಿಸಿದ್ದು,ಪೋಲಿಸ್ ಇನ್ಸ್ಪೆಕ್ಟರ್ ತಂದು ಕೊಟ್ಟದ್ದು” ಈ ಕಥೆ ಯಾರಿಗೆ ಗೊತ್ತಿಲ್ಲ , ಕೇಳಿ ಕೇಳಿ ಸಾಕಾಗಿದೆ“ ಎಂದರು ಅಮ್ಮ.
ಇತ್ತೀಚೆಗೆ ಆ ವಾಕಿಂಗ್ ಸ್ಟಿಕ್ ಪ್ರಾಯೋಗಿಕವಾಗಿಯೂ ನಮಗೆ ಉಪಯೋಗಕ್ಕೆ ಬರತೊಡಗಿತು. ಕೈಗೆಟುಕದ ಕರಿಬೇವು ಕೊಂಬೆ ಸೆಳೆದುಕೊಳ್ಳಲು ಅದರ ಬಾಗು ನೆರವಾಗುತ್ತಿತ್ತು. ಮನೆಗೆ ನುಗ್ಗಿದ ನಾಯಿ, ಹಸು ಇತ್ಯಾದಿ ಪ್ರಾಣಿಗಳು,ಶಾಲೆಗೆ ಚಕ್ಕರ್ ಹೊಡೆದು ಮನೆಯ ಹಿತ್ತಿಲಲ್ಲಿದ್ದ ಸೀಬೆ,ಅಂಜೂರದತ್ತ ಕಲ್ಲು ಬೀಸುತ್ತಿದ್ದ ಮಕ್ಕಳು ಇವರನ್ನು ಬೆದರಿಸುವ ಸುಲಭ ಸಾಧನವಾಯಿತು.
ನಮ್ಮ ತೀರ್ಮಾನದಂತೆ ಈ ಬಾರಿಯೂ ಬರಿಗೈಯಲ್ಲಿ ಹೋದೆ. ಅವರ ಮೊದಲ ಪ್ರಶ್ನೆ ”ಎಲ್ಲಿ ವಾಕಿಂಗ್ ಸ್ಟಿಕ್,ಕಾರ್ ನಲ್ಲಿ ಬಂದಿದೀಯೋ ಬಸ್ ನಲ್ಲೋ?”
“ಕಾರ್ ನಲ್ಲೇ ಬಂದಿದೀನಿ.ತರೋದು ಮರೆತುಹೋಯಿತು.”
“ಮರತುಹೋಯಿತೇ? ನಿಮ್ಮಂಥ ಮರೆಗುಳಿಗಳೆಲ್ಲ ನಮ್ಮ ಭೀಮಪ್ಪ ನಾಯಕ್ ಹತ್ತಿರ ಒಂದು ದಿನ ಕೆಲಸ ಮಾಡೋಕ್ಕೆ ಆಗ್ತಿರಲಿಲ್ಲ.”
ನಮ್ಮ ತಂದೆಯವರು ಸೇವೆಯಲ್ಲಿದ್ದಾಗ ಗೃಹಮಂಡಳಿ ಅಧ್ಯಕ್ಷರಾಗಿದ್ದ ಭೀಮಪ್ಪ ನಾಯಕ್ ಕೊರಟಗೆರೆ ಮೂಲದವರು. ಅತ್ಯಂತ ಕಟ್ಟುನಿಟ್ಟಿನ ವ್ಯಕ್ತಿ. ಅಂಥವರ ಹತ್ತಿರವೂ ನಮ್ಮ ತಂದೆ ಅವರ ಆಪ್ತ ಕಾರ್ಯದರ್ಶಿಯಾಗಿ ತಮ್ಮ ಕಾರ್ಯಶೈಲಿಯಿಂದ ಒಳ್ಳೆಯ ಹೆಸರು ಪಡೆದಿದ್ದರು.
ಇಷ್ಷರಲ್ಲಿ ನನಗೆ ಬೆಂಗಳೂರಿಗೆ ವರ್ಗವಾಯಿತು. ನಮ್ಮ ತಂದೆಯವರಿದ್ದ ಮನೆಯ ಹತ್ತಿರವೇ ಮನೆ ಮಾಡಿ ವಿಷಯ ತಿಳಿಸಲು ಹೋದೆ. “ಲಗ್ಗೇಜ್ ಜತೆ ವಾಕಿಂಗ್ ಸ್ಟಿಕ್ ತಂದಿದೀಯೊ?” ಎಂದು ಕೇಳಿದರು.
“ಹೌದು “
“ಯಾಕೆ ತರಲಿಲ್ಲ?”
“ತಂದು ಕೊಡುತ್ತೇನೆ?”ಎಂದೆ.
ಅಷ್ಟರಲ್ಲಿ ಅವರು ಮನೆಯಲ್ಲಿ ಜಾರಿಬಿದ್ದು ತಡೆಯ ಮೂಳೆ ಮುರಿದುಹೋಗಿ ಅನುಗ್ರಹ ವಿಠಲ ನರ್ಸಿಂಗ್ ಹೋಮ್ನಲ್ಲಿ ಶಸ್ತ್ರಚಿಕಿತ್ಸೆಯಾಗಿ ಹಾಸಿಗೆ ಹಿಡಿಯುವಂತಾಯಿತು. ಆದರೂ ಅದನ್ನು ವಾಪಸು ಕೊಡುವವರೆಗೆ ಬಿಡಲಿಲ್ಲ.ವಾಪಸು ಕೊಟ್ಟಾಗ ಆಮೂಲಾಗ್ರ ಅದರ ಮೈದಡವಿ ಪಕ್ಕದಲ್ಲಿಸಿಕೊಂಡು “ಲೇ ವಾಕಿಂಗ್ ಸ್ಟಿಕ್ ಬಂತು” ಎಂದರು.
ಅಮ್ಮ “ಆಗಲಿ,ಗಸಗಸೆ ಪಾಯಸ ಮಾಡೋಣ “ಎಂದರು. ಪಾಯಸಗಳಲ್ಲಿ ಗಸಗಸೆ ಪಾಯಸ ನಮ್ಮ ತಂದೆಯವರಿಗೆ ಇಷ್ಟವಾದದ್ದು.
ನಮ್ಮ ತಂದೆಯವರು ನಿಧನರಾದ ಸಮಯದಲ್ಲೂ ಆ ವಾಕಿಂಗ್ ಸ್ಟಿಕ್ ಅವರ ಪಕ್ಕದಲ್ಲೇ ವಿರಾಜಿಸುತ್ತಿತ್ತು.
(ಮುಂದುವರಿಯುವುದು)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31745
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಕೆಲವೊಮ್ಮೆ ಕೆಲವೊಂದು ವಸ್ತುಗಳ ಜೊತೆ ಇರುವ ಅನುಬಂಧವೇ ಹಾಗೆ, ಅದು ಯಾವಾಗಲೂ ಹತ್ತಿರ ಇದ್ದಾಗಲೇ ನೆಮ್ಮದಿ, ಕವಿಗಳಿಗೂ ಹೀಗೆಯೇ ಆಗಿರಬಹುದು.
ಆಹಾ.. ನಡಿಗೆ ಬೆತ್ತದ ಪ್ರವರ ಬಹಳ ಚೆನ್ನಾಗಿದೆ ಸರ್! ಸುಮಾರಾಗಿ ಎಲ್ಲರಲ್ಲೂ ಇದೇ ಮನಸ್ಥಿತಿ ಇರುವುದನ್ನು ಕಾಣಬಹುದು… ತಮಗೆ ಪ್ರಿಯವಾದ ವಸ್ತು ಕಾಣದಿದ್ದರೆ ಮನಸ್ಸಿನಲ್ಲಿ ಏನೋ ತಹತಹ!