ಲಹರಿ

ನೆನಪಿನಂಗಳಕ್ಕೆ ಮನವು ಜಾರಿದಾಗ…………..

Share Button

ನೆನಪುಗಳು ಅದೆಷ್ಟು ಸುಂದರ! ಮೊಗೆದಷ್ಟೂ ಆಳ. ಅಗಾಧ. ಸವಿದಷ್ಟೂ ಖಾಲಿಯಾಗದ ಅಕ್ಷಯ ಪಾತ್ರೆ. ಎಂದೆಂದಿಗೂ ಸುಮಧುರ. ಆಗಿಂದೊಮ್ಮೆ, ಈಗಿಂದೊಮ್ಮೆ ಸ್ಮ್ರತಿ ಪಟಲದಿಂದ ಜಿಗಿಯುತ್ತಾ, ನಮ್ಮ ಮನಸ್ಸಿಗೆ ಮುದ ನೀಡುವ ಈ ನೆನಪುಗಳು ನನಗೆ ಸದಾ ಖುಷಿ ಕೊಡುತ್ತಲೇ ಇರುತ್ತವೆ. ಬಹುಶ: ನನ್ನ ಬಾಲ್ಯದ ದಿನಗಳನ್ನು ನೆನೆಯುವುದಾದರೆ, ನಾನು ಹುಟ್ಟಿ ಬೆಳೆದ ಆ ಮಂಗಳೂರಿಗೂ ಇಂದಿನ ಮಂಗಳೂರಿಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದು. ನನ್ನ ಊರು ಬೋಳಾರದ ಸಮಿಪದ ಜೆಪ್ಪು ಎಂಬ ಗ್ರಾಮದಲ್ಲಿದೆ. ಐದೂವರೆ ದಶಕಗಳ ಸುಂದರ ಬದುಕಿನ ಚಿತ್ರಣ ನನ್ನ ಕಣ್ಣ ಮುಂದೆ ಬಂದಾಗ ಈಗಲೂ ಮೈಮನ ಪುಳಕ ಗೊಳ್ಳುತ್ತದೆ.

ಕಳೆದ ಐದೂವರೆ ದಶಕಗಳಿಂದ ನಾನು ಗಮನಿಸಿದಂತೆ, ಆ ಪುಟ್ಟ ಗ್ರಾಮದಲ್ಲಾದ ಬದಲಾವಣೆಗಳು ವರ್ಣನಾತೀತ. ನಾನು ವಾಸವಾಗಿದ್ದ ಮನೆಯ ಸಮೀಪದಲ್ಲಿ ಬಹಳ ವರ್ಷಗಳ ಹಿಂದೆ ಗೇರುಬೀಜ ಸಂಸ್ಕರಿಸುವ ಕಾರ್ಖಾನೆಯೊಂದಿತ್ತು. ಬ್ರಿಟಿಷ್ ದೊರೆಗಳ ಕಾಲದಿಂದಲೂ ಈ ಕಾರ್ಖಾನೆ ಇತ್ತೆಂದು ಹಿರಿಯವರು ಹೇಳಿದ ನೆನೆಪು. ಈ ಕಾರ್ಖಾನೆಯು ಬಹುತೇಕ ಜನರಿಗೆ ಅನ್ನ ನೀಡುವ ಉದ್ಯೋಗ ಕೇಂದ್ರವಾಗಿತ್ತು. ಬೆಳ್ಳಂಬೆಳ್ಳಿಗ್ಗೆ ಕಾರ್ಮಿಕರು ಧಾವಂತದಿಂದ ಕಾರ್ಖಾನೆಯತ್ತ ದಾಪುಗಾಲು ಹಾಕುತ್ತಾ ಧಾವಿಸುವುದನ್ನು ನಾನು ಚಿಕ್ಕವಳಿದ್ದಾಗ ಕಂಡಿದ್ದೆ. ಒಮ್ಮೊಮ್ಮೆ ಕಾರ್ಮಿಕ ಸಂಘಟನೆಗಳು ಕರೆ ನೀಡಿದಾಗ ಎಲ್ಲಾ ಕಾರ್ಮಿಕರು ಒಗ್ಗಟ್ಟಾಗಿ, ಶಿಸ್ತಿನಿಂದ, ಮೆರವಣಿಗೆಯಲ್ಲಿ ಸಾಗುವುದು, ಘೋಷಣೆಗಳನ್ನು ಕೂಗುವುದು ಸರ್ವೇಸಾಮಾನ್ಯವಾಗಿತ್ತು. ಇಂತಹಾ ಜಾಥಾಗಳನ್ನು ಕಾಣಲು ಮನೆಯಿಂದ ಓಡಿ ಹೊರಗೆ ಬಂದು ಗೇಟಿನ ಬಳಿ ಬಂದು ನಿಲ್ಲುತ್ತಿದ್ದೆವು. ಅವುಗಳನ್ನು ನೋಡುವುದೇ ಒಂದು ರೀತಿಯ ಮಜವಾಗಿತ್ತು. ನಾವು ಸುಮಾರು ಒಂದೇ ಓರಗೆಯ ಹತ್ತಾರು ಮಕ್ಕಳು ಕೇಕೆ ಹಾಕಿ ಸಂಭ್ರಮಿಸುತ್ತಿದ್ದೆವು.

ಇನ್ನೊಂದು ನಾನು ಮರೆಯಲಾಗದ ಘಟನೆ, ನಾವು ಚಿಕ್ಕವರಿರುವಾಗ, ಪ್ರತೀ ಗುರುವಾರ ತಪ್ಪದೆ ಮನೆಯ ಹಿಂದಿನ ಓಣಿಯಲ್ಲಿ ಒಬ್ಬ ಕುರುಡ ತನ್ನ ಸುಶ್ರಾವ್ಯ ದ್ವನಿಯಿಂದ ಸುಮಧುರ ಗೀತೆಯನ್ನು ಹಾಡುವ ಅವನ ಕಂಠಸಿರಿಯ ನೆನಪು, ಪ್ರತೀ ಮಧ್ಯಾಹ್ನ ತಪ್ಪದೇ ಬರುವ ಕಾಂತಪ್ಪಣ್ಣನ ಬೆಲ್ಲದ ಐಸ್‌ಕ್ಯಾಂಡಿ . ಅದನ್ನು ಕೊಳ್ಳಲು ಹಿರಿಯರ ಕಣ್ಣು ತಪ್ಪಿಸಿ ಒಂದೂವರೆ ಕಾಲಿನಲ್ಲಿ ನಿಲ್ಲುತ್ತಿದ್ದ ನೆನಪು.

 

(ಸಾಂದರ್ಭಿಕ ಚಿತ್ರ, ಅಂತರ್ಜಾಲದಿಂದ)

ಆಗ ಮಲೇರಿಯಾ, ಚಿಕನ್‌ಗುನ್ಯ, ಡೇಂಗ್ಯೊ ಇತ್ಯಾದಿ ರೋಗ, ರುಜಿನಗಳು ಇರಲಿಲ್ಲ. ರಸ್ತೆಯ ಬದಿಯಲ್ಲಿ ಇರುತ್ತಿದ್ದ ಸಾರ್ವಜನಿಕ ನಳ್ಳಿಯ ನೀರನ್ನೇ ಕುಡಿದು ಬಾಯಾರಿಕೆ ಇಂಗಿಸುವ ಕಾಲ. ಆ ನಳ್ಳಿಯ ಪಕ್ಕ ಯಾರಾದರೂ ನೀರನ್ನು ಪೋಲು ಮಾಡಿದಲ್ಲಿ ಶಿಕ್ಷಿಸಲಾಗುವುದು. ಎಂಬ ಪುಟ್ಟ ಫ಼ಲಕವನ್ನು ನೇತು ಹಾಕಿರುತ್ತಿದ್ದರು. ಈ ಫ಼ಲಕವನ್ನು ನೋಡಿ ಅಂಜಿಕೆಯಿಂದಲೇ ನಳ್ಳಿಯ ನೀರನ್ನು ಯಥೇಚ್ಚ ವಾಗಿ ಕುಡಿದು, ಪೋಲು ಮಾಡಿ ಆನಂದಿಸುತ್ತಿದ್ದೆವು. ಸಾಯಂಕಾಲದ ಸಮಯದಲ್ಲಿ ಅನೇಕ ಜನರು ನಳ್ಳಿಯ ಪಕ್ಕ ಸ್ನಾನ ಮಾಡುವುದು, ಬಟ್ಟೆ ಒಗೆಯುವುದು, ವಾಹನಗಳನ್ನು ತೊಳೆಯುವುದು ಇತ್ಯಾದಿಗಳನ್ನು ಮಾಡುತ್ತಿದ್ದರು.

ಇನ್ನು ಹಬ್ಬ, ಹರಿದಿನಗಳಲ್ಲಿ ನಾವು ಅನುಭವಿಸಿದ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.ಚೌತಿಯ ದಿನಗಳಂದು ಎರಡು ದಿನ ಮೊದಲೇ ಕಬ್ಬಿನ ಕಟ್ಟು ಎಲ್ಲರ ಮನೆಯ ಮುಂದೆ ಅಲಂಕರಿಸುತ್ತಿತ್ತು. ಗಣೇಶೋತ್ಸವ ಅಂದೇ ಶುರುವಾಗುತ್ತಿತ್ತು. ನವರಾತ್ರಿ ದಿನಗಳಲ್ಲಂತೂ ತರಹೇವಾರಿ ವೇಷಗಳು, ಹುಲಿ, ಕರಡಿ ಕುಣಿತಗಳು, ಪ್ರತೀ ರಾತ್ರಿ ಬರುವ ಸಿರಿವೇಷಗಳು, ಆ ವೇಷಗಳ ಹಿಂದೆ ಹೋಗಿ, ಬಳಿಕ ನಮ್ಮ ಮನೆಗೊ ಕರೆ ತಂದು ಹಿರಿಯರಿಂದ ಬೈಸಿಕೊಂಡ ದಿನಗಳು ಇಂದೂ ನೆನೆಪಿದೆ. ನವರಾತ್ರಿಯ ಕೊನೆಯ ದಿನದಂದು ಮಾರಿಗುಡಿಯ ಮಾರಿಯಮ್ಮನನ್ನು ರಥದಲ್ಲಿ ಕರೆತಂದು ನಮ್ಮ ಮನೆಯ ಮುಂದಿನ ಗುಜ್ಜರಕೆರೆಯಲ್ಲಿ ಮೂರ್ತಿಗೆ ಜಳಕಗೈದು, ಅರಳೀಕಟ್ಟೆಯಲ್ಲಿ ಪೂಜೆ, ಪುನಸ್ಕಾರ ನಡೆಸುತ್ತಿದ್ದ ವೈಭವದ ನೆನಪು ಸದಾ ಹಸಿರು.ಇನ್ನು ದೀಪಾವಳಿಯ ಸಂಭ್ರಮವಂತೂ ಹೇಳತೀರದು. ಸಾಯಂಕಾಲ ಹೊತ್ತಿಗೆ ಹಂಡೆಗೆ ನೀರು ತುಂಬಿಸಿದ ಬಳಿಕ ಘಂಟೆಯ ನಿನಾದ, ನಮ್ಮ ಮನೆಯಲ್ಲೇ ಮೊದಲು ಎಂದು ಸ್ನೇಹಿತರೊಡನೆ ಜಗಳವಾಡಿದ್ದ ದಿನಗಳು, ಪಟಾಕಿಯ ರೀಲುಗಳನ್ನು ಹೊತ್ತಿಸಿದ್ದು, ಅಂಗಡಿ ಪೂಜೆಯಂದು ಸಿಗುವ ಅವಲಕ್ಕಿ, ಲಾಡಿಗೋಸ್ಕರ ಸುಮ್ಮನೆ ಅಂಗಡಿಗೆ ಪದೇ ಪದೇ ಹೋಗಿಬರುತ್ತಿದ್ದ ದಿನಗಳು ನೆನೆಪಿನ ಬುತ್ತಿಯಲ್ಲಿದ್ದು ಈಗಲೂ ನಗು ತರಿಸುತ್ತವೆ. ಇನ್ನು ವರ್ಷದ ಕೊನೆಯಲ್ಲಿ ಬರುವ ಡಿಸೆಂಬರ್ ತಿಂಗಳಿನ 31 ರಂದು ಅಜ್ಜನನ್ನು ತಯಾರಿಸಿ, ಕೂರಿಸಿ, ಮಧ್ಯರಾತ್ರಿಯಿಡಿ ಕುಣಿದು, ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದ ದಿನಗಳನ್ನು ಮರೆಯಲಸಾಧ್ಯ.

ಬಾಲ್ಯದ ಅತ್ಯಮೂಲ್ಯ ದಿನಗಳನ್ನು ಕಳೆದ ನನ್ನ ಗ್ರಾಮ ಜೆಪ್ಪುವಿನ ನೆನೆಪು ಚಿರನೂತನ. ನಾನು ಕಲಿತ ಶಾಲೆ, ಆಡಿದ ಮೈದಾನ, ನಡೆದಾಡಿದ ಓಣಿಗಳು, ಆ ರಸ್ತೆಗಳು ಈಗ ಮಹತ್ತರ ಬದಲಾವಣೆಯನ್ನು ಕಂಡಿವೆ. ಕಾಲ ಚಕ್ರ ತಿರುಗುತ್ತಲೇ ಇದೆ. ಆದರೆ ನನ್ನ ತಲೆಮಾರಿನವರು ಕಳೆದ ಆ ಬಾಲ್ಯದ ದಿನಗಳು ಬಹುಶ: ನಮಗೆಲ್ಲರಿಗೂ ಸುವರ್ಣ ಯುಗದ ಕಾಲವೆಂದರೂ ತಪ್ಪಾಗಲಾರದು. ಈಗಲೂ ಅಲ್ಲಿಗೆ ಹೋದಾಗ ಹಿಂದಿನ ದಿನಗಳನ್ನು ನೆನೆದು ಕಣ್ಣುಮಂಜಾಗುವುದು. ಈಗಿನ ಪೀಳಿಗೆಯ ಮಕ್ಕಳಿಗೆ ಇಂತಹ ದಿನಗಳು ಸಿಗುತ್ತಿಲ್ಲವಲ್ಲಾ ಎಂಬುದೇ ಖೇದದ ಸಂಗತಿ.

-ಡಾ.ಶೈಲಾರಾಣಿ, ಮಂಗಳೂರು

23 Comments on “ನೆನಪಿನಂಗಳಕ್ಕೆ ಮನವು ಜಾರಿದಾಗ…………..

  1. ನಮಸ್ಕಾರ, ಎಲ್ಲರಿಗೂ ಬಾಲ್ಯದ ನೆನಪುಗಳು ಪುಳಕ,
    ಸವಿ ಸುಂದರ ಮಾಲೆ,,,

  2. ಬಹಳ ಸೊಗಸಾದ ಲೇಖನ. ಓದುಗರ ಬಾಲ್ಯ ಜೀವನದ ನೆನಪು ಮರುಕಳಿಸಿತು.

  3. ನೆನಪುಗಳೇ ಹೀಗೆ ಮೊಗೆದಷ್ಟು ಮಧುರತನ ತರುತ್ತವೆ.ಸುಂದರ ಲೇಖನ ಮೇಡಂ

  4. ಬಾಲ್ಯದ ಸುಂದರ ನೆನಪುಗಳ ಮಾಲೆ,ಹಬ್ಬ ಹರಿದಿನಗಳು, ಶಾಲಾದಿನಗಳ ನೆನಪು ತಂದಿತು..ಸುಂದರ ನಿರೂಪಣೆ

  5. ಬಾಲ್ಯದ ಮಧುರ ನೆನಪಿನೊಂದಿಗೆ ಬೆಸೆದುಕೊಂಡಿರುವ ನಮ್ಮೆಲ್ಲರ ಜೀವನದ ಕಾಲಘಟ್ಟವು ನೀವಂದಂತೆ ನಿಜವಾಗಿಯೂ ಸ್ವರ್ಣಕಾಲ. ನಮ್ಮೆಲ್ಲರನ್ನೂ ಆ ಕಾಲಕ್ಕೆ ಕರೆದೊಯ್ದು ಬೆಲ್ಲದ ಐಸ್ ಕ್ಯಾಂಡಿ ತಿನಿಸಿದಿರಿ!.. ಧನ್ಯವಾದಗಳು ಮೇಡಂ.

Leave a Reply to Dr. Geetha M L Cancel reply

 Click this button or press Ctrl+G to toggle between Kannada and English

Your email address will not be published. Required fields are marked *