ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 11

Share Button

 
 

ಕಛ್ ನ ಮರುಭೂಮಿಯತ್ತ

ಹೋಟೆಲ್ ತುಳಸಿಗೆ ಬಂದು, ಮಧ್ಯಾಹ್ನದ ಊಟ ಮುಗಿಸಿ   ಪ್ರಯಾಣ ಮುಂದುವರಿಯಿತು. ಅಲ್ಲಿಂದ  ಮೂವತ್ತು ಕಿಮೀ ದೂರದಲ್ಲಿರುವ ಕಛ್ ನ ಮರುಭೂಮಿಯಲ್ಲಿ ‘ರಣ್ ಉತ್ಸವ’ ಜರುಗುತ್ತದೆ. ರಸ್ತೆಯಲ್ಲಿ ಕಾಣಸಿಗುವ  ಮರುಭೂಮಿಯ ಪ್ರವೇಶ ದ್ವಾರದಲ್ಲಿ ಟಿಕೆಟ್ ಪಡೆಯಬೇಕು. ಸುತ್ತಲೂ ಕುರುಚಲು ಗಿಡಗಳು, ಮರಳು ಇರುವ ದಾರಿಯಲ್ಲಿ ಬಸ್ಸು ಮುಂದುವರಿಯಿತು. ನಮ್ಮ ವಾಸ್ತವ್ಯಕ್ಕೆ ಕಾಯ್ದಿರಿಸಲಾಗಿದ್ದ  ‘ನೋವಾ ಪಟ್ಗರ್’ ಎಂಬಲ್ಲಿಗೆ ಕರೆತಂದರು. ಬಿಳಿ ಬಣ್ಣದ ಕ್ಯಾನ್ ವಾಸ್ ಬಟ್ಟೆಯಿಂದ ರಚಿಸಲಾದ ಟೆಂಟ್ ಗಳು ಚೆನ್ನಾಗಿದ್ದುವು.  ಭದ್ರವಾಗಿ ಗೋಡೆ ಇಲ್ಲ ಎನ್ನುವುದು ಬಿಟ್ಟರೆ, ಟೆಂಟ್ ನಲ್ಲಿ ಬೆಡ್, ಕಪಾಟು, ವಾತಾನುಕೂಲತೆ, ಸ್ನಾನದ ಕೋಣೆ ಇತ್ಯಾದಿ ಸೌಲಭ್ಯಗಳಿದ್ದುವು. ಅಲ್ಲಿ ನಮ್ಮ  ಲಗೇಜು ಇರಿಸಿ, ಚಹಾ ಪಕೋಡಾ ಸೇವಿಸಿದೆವು.

ಅನತಿ  ದೂರದಲ್ಲಿ ಸಮುದ್ರ ತೀರದಲ್ಲಿರುವ ‘ ದೋರ್ಡೋ ‘ ಎಂಬಲ್ಲಿಗೆ ನಮ್ಮನ್ನು ಕರೆದೊಯ್ದರು.  ರಣ್ ಉತ್ಸವ ನಡೆಯುವುದು ಇಲ್ಲಿಯೆ. ಇಲ್ಲಿ ಸೂರ್ಯಾಸ್ತ ಚೆಂದ. ‘ರಣ್ ‘ ಎಂದರೆ ಗುಜರಾತಿ ಭಾಷೆಯಲ್ಲಿ ಮರುಭೂಮಿ ಎಂದರ್ಥ. ಅರಬೀ ಸಮುದ್ರದ ತೀರವಾದರೂ ಇಲ್ಲಿ  ಮರಳಿಲ್ಲ. ..  ಕಿನಾರೆಯುದ್ದಕ್ಕೂ ಸಮುದ್ರದ ಅಲೆಗಳ ಅಬ್ಬರವಿಲ್ಲ.  ಗಾಳಿಗೆ ತೆವಳಿಕೊಂಡು ಬರುವ ನೀರು ಬಿಸಿಲಿಗೆ ಇಂಗಿ ಹೋಗಿ ಉಪ್ಪು ಉಳಿಯುವುದರಿಂದ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಬಿಳಿ ಉಪ್ಪಿನ ಮರುಭೂಮಿ ಕಾಣಿಸುತ್ತದೆ. . ಗಟ್ಟಿಯಾದ ಮರಳು ಮಣ್ಣಿನ ಮೇಲೆ ಬಿಳಿ ಉಪ್ಪಿನ ಹರಳುಗಳು ಇರುವುದರಿಂದ ಇಲ್ಲಿಗೆ ವೈಟ್ ರಣ್, ಸಫೇದ್ ರಣ್  ಎಂದೂ ಕರೆಯುತ್ತಾರೆ.

ಸಫೇದ್ ರಣ್, ಬಿಳಿ ಮರುಭೂಮಿ

ದೋರ್ಡೋ ವೀಕ್ಷಣೆ..

ನಮ್ಮ ವಸತಿಯಿಂದ  5 ಕಿ.ಮೀ ದೂರದಲ್ಲಿದ್ದ ‘ದೋರ್ಡೋ’ ಈ ಭಾಗದ ಕಡಲತೀರ. ಇಲ್ಲಿಯ  ಮುಖ್ಯದ್ವಾರದಿಂದ ವೀಕ್ಷಣಾ ಗೋಪುರವನ್ನು ತಲಪಲು  ಅಂದಾಜು 1.5 ಕಿ.ಮೀ ನಡೆಯಬಹುದು, ಅಥವಾ ಒಂಟೆ ಸವಾರಿ ಮಾಡಬಹುದು. ಒಂಟೆ ಹಾಗೂ ಕುದುರೆಗಳಿಂದ ಎಳೆಯಲ್ಪಡುವ ಗಾಡಿಗಳೂ ಬಾಡಿಗೆಗೆ ಲಭ್ಯವಿದೆ. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣಿಸುವ ಬಿಳಿ ಉಪ್ಪಿನ ಮಣ್ಣುಹಾಸಿನಲ್ಲಿ ಸೂರ್ಯನು ಮರೆಯಾಗುವ ದೃಶ್ಯ ಮನಮೋಹಕ. ಸೀಗಲ್ ಮತ್ತು ಫ್ಲೆಮಿಂಗ್ ನಂತಹ ವಲಸೆ ಹಕ್ಕಿಗಳೂ ಕೆಲವು ಕಾಣಿಸಿದುವು. ಇನ್ನು ಸಾಹಸ ಪ್ರಿಯರಿಗೆ ಹಲವಾರು ಅಡ್ವೆಂಚರ್ ಗೇಮ್ ಗಳಿವೆ.  ಪ್ರಶಾಂತವಾದ ವಾತಾವರಣದಲ್ಲಿ, ಹುಣ್ಣಿಮೆ ಚಂದಿರನ ಬೆಳಕಲ್ಲಿ, ಉಪ್ಪಿನ ಮರುಭೂಮಿಯಲ್ಲಿ ಅಡ್ಡಾಡಿದ ಅನುಭವ ಅವಿಸ್ಮರಣೀಯ.

ಹಿಂತಿರುಗಿ ಬರುವಾಗ ಒಂಟೆಗಾಡಿಯಲ್ಲಿ ಪ್ರಯಾಣಿಸಿ ‘ರಣ್ ಉತ್ಸವ’ ನಡೆಯುವ ಜಾಗಕ್ಕೆ ಬಂದೆವು. ಅನತಿ ದೂರದಲ್ಲಿ ವಿಶಾಲವಾದ ‘ಟೆಂಟ್ ಸಿಟಿ’ ಕಾಣಿಸುತ್ತಿತ್ತು. ಅಗಲವಾದ   ರಸ್ತೆಯ ಇಕ್ಕೆಲದಲ್ಲಿಯೂ   ಕಛ್ ನ ಕರಕುಶಲ ಅಲಂಕಾರಿಕ ವಸ್ತುಗಳು,  ಕಸೂತಿ ಬಟ್ಟೆ, ಶಾಲು ಮೊದಲಾದುವುಗಳನ್ನು ಮಾರುವ ಅಂಗಡಿಗಳಿದ್ದವು. ಅಲ್ಲಲ್ಲಿ ಚಹಾ, ತಿಂಡಿ, ಪಾನೀಯದ ಅಂಗಡಿಗಳೂ ಮೇಳೈಸಿದ್ದುವು. ಸಂಗೀತ/ಮನೋರಂಜನಾ ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ವೇದಿಕೆಗಳು ಅಲ್ಲಲ್ಲಿ ಕಂಡುಬಂದುವಾದರೂ, ಬಹುತೇಕ ವೇದಿಕೆಗಳಲ್ಲಿ ಆ ದಿನ ಕಾರ್ಯಕ್ರಮವಿದ್ದಂತಿರಲಿಲ್ಲ.

 

ಟೆಂಟ್ ಒಳಗೊಂದು ಮನೆಯಾ ಮಾಡಿದೊಡೆಂತಯ್ಯ

ಅಷ್ಟಿಷ್ಟು ಸುತ್ತಾಡಿ, ಒಂದಿಷ್ಟು ಕನ್ನಡಿಗಳುಳ್ಳ ಕಸೂತಿ ಶಾಲುಗಳನ್ನು ಸ್ಮರಣಿಕೆಗಾಗಿ ಖರೀದಿಸಿ, ಸ್ಥಳೀಯ  ಚಾಟ್ಸ್ ಸೇವಿಸಿ, ನಮ್ಮ ಟೆಂಟ್ ಗೆ ಹಿಂತಿರುಗಿದೆವು. ರಾತ್ರಿಯೂಟದ ನಂತರ ಟೆಂಟ್ ನ ಮುಂದೆ ಇದ್ದ ವಿಶಾಲವಾದ ಅಂಗಳದಲ್ಲಿ  ಸೌದೆ ಉರಿ ಹಚ್ಚಿ  ‘ಕ್ಯಾಂಪ್ ಫೈರ್ ‘ ಆರಂಭವಾಯಿತು. ಕಚ್ಚೆ ಧರಿಸಿ, ತಲೆಗೆ ಪೇಟಾ ಸುತ್ತಿದ್ದ ಸ್ಥಳೀಯ ಕಲಾವಿದರು ಸುಮಾರು ಒಂದು ಗಂಟೆಯ ಕಾಲ ಹಾಡು ಹೇಳಿ ರಂಜಿಸಿದರು. ನಮಗೆ ಮರುದಿನ  ಬೇಗನೇ ಹೊರಡಲಿದ್ದುದರಿಂದ  ಅನಿವಾರ್ಯವಾಗಿ ‘ಕ್ಯಾಂಪ್  ಫೈರ್’ ಜಾಗದಿಂದ  ವಿಶ್ರಾಂತಿಗಾಗಿ ನಿರ್ಗಮಿಸಿದೆವು.

‘ರಣ್ ಉತ್ಸವ’ ಕ್ಕೆ ಬರುವ ಪ್ರವಾಸಿಗರು ಅಪರೂಪವೆನಿಸುವ ಉಪ್ಪು ಮರುಭೂಮಿಯಲ್ಲಿ ನಡೆದಾಡಿ , ಬೆಳದಿಂಗಳನ್ನು ಕಣ್ತುಂಬಿಸಿ, ಒಂಟೆ ಸವಾರಿ ಮಾಡಿ,  ಗುಜರಾತಿನ ಸ್ಥಳೀಯ ಊಟೋಪಚಾರ ಸವಿದು, ಕಛ್ ಉಡುಗೆ ಧರಿಸಿ, ಆಸಕ್ತಿ ಇದ್ದರೆ ಸಾಹಸಮಯ ಕ್ರೀಡೆಗಳಲ್ಲಿಯೂ ಭಾಗವಹಿಸಿ , ಟೆಂಟ್ ನಲ್ಲಿ ನಿದ್ರಿಸುವ ವಿಶಿಷ್ಟ ಅನುಭವಗಳನ್ನು ಪಡೆಯಬಹುದು.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=31308

-ಹೇಮಮಾಲಾ.ಬಿ

9 Responses

  1. B.k.meenakshi says:

    ಸುಂದರ ಕಥನ

  2. Dharmanna dhanni says:

    ಪ್ರವಾಸ ಕಥನ ಚೆನ್ನಾಗಿದೆ. ಖುಷಿ ಆಯಿತು. ಧನ್ಯವಾದಗಳು

  3. ಬಿ.ಆರ್.ನಾಗರತ್ನ says:

    ಪ್ರವಾಸ ಕಥನ ಆಕರ್ಷಕವಾಗಿ ಕುತೂಹಲದಿಂದ ಮುಂದುವರೆಯುತ್ತಿದೆ.ಅಭಿನಂದನೆಗಳು ಹೇಮಾ

  4. ನಯನ ಬಜಕೂಡ್ಲು says:

    ಅಲ್ಲಿನ ಸಾಂಪ್ರದಾಯಿಕ ಉಡುಗೆ, ರಣ್ ಉತ್ಸವ್ ಎಲ್ಲವೂ ಚಂದ.

  5. ಶಂಕರಿ ಶರ್ಮ says:

    ಕಛ್ ನ ವಿಶೇಷವಾದ ಬಿಳಿ ಉಪ್ಪಿನ ಮರುಭೂಮಿಯು ಬಹಳ ಕುತೂಹಲಕಾರಿಯಾಗಿದೆ. ಅಲ್ಲಿಯ ಸಂಸ್ಕೃತಿಯೊಂದಿಗೆ ಕಳೆದ ಕ್ಷಣಗಳು, ಬಟ್ಟೆ ಡೇರೆ ವಾಸ ಎಲ್ಲದರ ನಿರೂಪಣೆ ಬಹಳ ಸೊಗಾಸಾಗಿದೆ. ಧನ್ಯವಾದಗಳು.

  6. ASHA nooji says:

    ಸೂಪರ್ ..ನನಗೂ ಹೋದಂತೆ ಭಾಸವಾಯಿತು

  7. Savithri bhat says:

    ಎಂದಿನಂತೆ ಸುಂದರ ಪ್ರವಾಸ ಕಥನ,ಚಿತ್ರಗಳು

  8. sudha says:

    it brought back beautiful memories of rann of kutch. very nice article

  9. ರಾಜಸ್ಥಾನದ ಪ್ರವಾಸದ ನೆನಪುಗಳು ಮನದಲ್ಲಿ ಮೂಡಿ ಬಂದವು
    ಸುಂದರವಾದ ಪ್ರವಾಸ ಕಥನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: