‘ನೆಮ್ಮದಿಯ ನೆಲೆ’-ಎಸಳು 7
(ಇದುವರೆಗಿನ ಕಥಾಸಾರಾಂಶ: ಸುಕನ್ಯಾಳ ಮನಸ್ಸಿನಲ್ಲಿ ತನ್ನ ಬಾಲ್ಯ, ತೌರುಮನೆ ಹೀಗೆ ಗತಕಾಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದೆ. ಆಕೆಗೆ ಮದುವೆಯ ಪ್ರಸ್ತಾಪ ಬಂದು, ನಂಜನಗೂಡಿನ ವರನೊಂದಿಗೆ ವಿವಾಹ ನಿಶ್ಚಯವಾಯಿತು, ಸರಳ ವಿವಾಹ ಸುಸೂತ್ರವಾಗಿ ನೆರವೇರಿ, ನಂಜನಗೂಡಿನಲ್ಲಿರುವ ಪತಿಗೃಹ ಸೇರಿದಳು….ಮುಂದಕ್ಕೆ ಓದಿ)
ಮಾರನೆಯ ದಿನ ನನ್ನವರು ಮಾವನವರು ಅವರವರ ಕೆಲಸಗಳಿಗೆ ಹೋದರು. ನನ್ನತ್ತೆಯವರೂ ಎಲ್ಲ ಕೆಲಸಗಳನ್ನು ಮುಗಿಸಿ ಜಮೀನಿನ ಹತ್ತಿರ ಹೋಗಿ ಬರುತ್ತೇನೆಂದರು. ಆಗ ‘ನಾನು ಬರಬಹುದೇ?’ ಎಂದೆ. ‘ಅದಕ್ಕೇನು ಬಾ, ಅಂದ ಹಾಗೆ ನಿನಗೆ ದೂರ ನಡೆದು ಅಭ್ಯಾಸವಿದೆಯಾ? ಒಂದು ಫರ್ಲಾಂಗಿಗಿಂತ ತುಸು ಹೆಚ್ಚಾಗಬಹುದು. ನಮಗೆಲ್ಲ ರೂಢಿಯಾಗಿಬಿಟ್ಟಿದೆ. ಆಗಿಂದಾಗ್ಗೆ ಹೋಗಿ ಬರುತ್ತೇನಲ್ಲಾ’ ಎಂದರು.
‘ನಾವುಗಳು ಸಿಟಿಯಲ್ಲಿದ್ದರೂ ಒಡಾಡುವುದನ್ನು ರೂಢಿಸಿಕೊಂಡೇ ಬೆಳೆದಿದ್ದೇವೆ. ಒಂದೆರಡು ಕಿಲೋಮೀಟರಾದರೂ ನಡೆಯಬಲ್ಲೆ’ ಎಂದೆ. ಸರಿ ಎಂದು ಒಟ್ಟಿಗೆ ಹೊರಟೆವು. ದಾರಿಯುದ್ದಕ್ಕೂ ಸಿಕ್ಕ ಪರಿಚಯಸ್ಥರಿಗೆ ನನ್ನ ಪ್ರವರ ಹೇಳುತ್ತಾ ಜಮೀನಿದ್ದ ಸ್ಥಳ ತಲುಪಿದೆವು. ‘ಮಗೂ ಸುಕನ್ಯಾ, ಇದೇ ನೋಡು ನಮ್ಮ ಜಮೀನು ಮತ್ತು ಹೈನುಗಾರಿಕೆ ಸ್ಥಳ’ ಎಂದರು. ನಾನು ಅತ್ತ ಕಣ್ಣು ಹಾಯಿಸಿದೆ. ಎಸ್ಟೇಟುಗಳಿಗೆ ಇದ್ದಂತೆ ಕಾಂಪೌಂಡು, ಗೇಟು ಕಾಣಿಸಿತು. ನನ್ನಪ್ಪನ ಜಮೀನು, ತೋಟಗಳನ್ನು ನೋಡಿದ್ದ ನನಗೆ ಇದು ಹೊಸದಾಗಿ ಕಾಣಿಸಿತು. ಅಲ್ಲಿ ಸುತ್ತ ತಟ್ಟಿಗೆ ಬೇಲಿ, ಬಾಗಿಲು ಇತ್ತು. ಗೇಟಿನ ಒಳಹೊಕ್ಕುತ್ತಿದ್ದಂತೆ ಎಲ್ಲಿಂದಲೋ ತೋಳದಂತಹ ನಾಯಿಯೊಂದು ಓಡಿಬಂತು. ನನಗೋ ಚಿಕ್ಕಂದಿನಿಂದಲೂ ನಾಯಿಗಳೆಂದರೆ ತುಂಬ ಭಯ. ಹೆದರುತ್ತಾ ಅತ್ತೆಯ ಹಿಂದೆ ನಿಂತುಕೊಂಡೆ. ‘ಅದೇನೂ ಮಾಡಲ್ಲ. ನಿನ್ನನ್ನು ನೋಡಿಲ್ಲವಲ್ಲ, ಅದಕ್ಕೇ’ ಎನ್ನುತ್ತಾ ಅತ್ತೆಯವರು ‘ಏ ಬೈರಾ, ಬಾಯಿಲ್ಲಿ’ ಎಂದು ಅದನ್ನು ಕೈಯಿಂದ ತಳ್ಳಿದರು. ಸದ್ದು ಕೇಳಿದ ನಮ್ಮತ್ತೆಯವರ ಭಂಟ ಮಾದ ಓಡಿಬಂದು ‘ಓ ! ಚಿಕ್ಕಮ್ಮಾವ್ರೂ ಬಂದವ್ರೆ’, ಎಂದು ಎದುರುಗೊಂಡ. ‘ಹೂ ನಾನೂ ಬರುತ್ತೇನೆ ಅಂದಳು, ಕರೆದುಕೊಂಡು ಬಂದೆ. ಬೆಳಗ್ಗೆ ಗೌರಿಗೆ ಹುಷಾರಿಲ್ಲ ಎಂದಿದ್ದೆ, ಈಗ ಹೇಗಿದ್ದಾಳೆ?. ನಾನು ಹೇಳಿದ್ದ ಸೊಪ್ಪನ್ನು ಅರೆದಿಟ್ಟಿದ್ದೀಯಾ? ‘ಎಂದು ಕೇಳಿದರು.
ಅವನು ತಲೆಯಾಡಿಸಿದ್ದನ್ನು ನೋಡಿ ‘ಹೌದಾ ಸರಿ’ ಎಂದು ನನ್ನ ಕಡೆಗೆ ತಿರುಗಿ ‘ಸುಕನ್ಯಾ ಮಾದನ ಜೊತೆಯಲ್ಲಿ ಹೋಗಿ ಒಂದು ಸುತ್ತು ಎಲ್ಲವನ್ನೂ ನೋಡಿಕೊಂಡು ಬಾ. ನಾನು ಸ್ವಲ್ಪ ಹಸುವಿಗೆ ಔಷಧಿ ತಯಾರು ಮಾಡಿ ಕುಡಿಸಬೇಕು’ ಎಂದರು. ಓ ಗೌರಿ ಅಂದರೆ ಹಸುವಿನ ಹೆಸರು ಎಂದು ಗೊತ್ತಾಯಿತು. ಆದರೆ ಇವರು ಔಷಧಿ? ಅನುಮಾನಿಸುತ್ತಲೇ ‘ನೀವು ಹಸುವಿಗೆ ಔಷಧಿ’ ಎಂದೆ.
‘ಹಾ, ನಾನೇ ಹಿರಿಯರಿಂದ ಅಲ್ಪಸ್ವಲ್ಪ ನಾಟಿವೈದ್ಯ ಕಲಿತಿದ್ದೇನೆ. ಪಶುಗಳಿಗೆ , ಮನುಷ್ಯರಿಗೆ ಇಬ್ಬರಿಗೂ’ ಎಂದು ನಕ್ಕರು. ಹಾಗೇ ‘ಲೋ ಮಾದ ಇಡೀ ಜಮೀನು ಸುತ್ತಿಸಬೇಡ. ಬರಿ ಹಿತ್ತಲು, ಕೊಟ್ಟಿಗೆ ತೋರಿಸಿಕೊಂಡು ಬಾ’ ಎಂದು ತಾಕೀತು ಮಾಡಿದರು.
ಮಾದ ‘ಬನ್ನೀ ಅಮ್ಮ’ ಎಂದು ಮುಂದೆ ಹೊರಟ. ಆತನನ್ನು ನಾನು ಹಿಂಬಾಲಿಸಿದೆ. ‘ನೋಡಿ ಇದು ಐದು ಎಕರೆ ನಾಲ್ಕು ಗುಂಟೆ ಇದೆ. ಇದರಲ್ಲಿ ತೋಟ ಅಂತ ಬೇರೆ ಮಾಡಿಲ್ಲ. ಹಿತ್ತಲು ಅಂತ ಮಾಡಿದ್ದೇವೆ. ಅಲ್ಲಿ ತೆಂಗು, ಸೀಬೆ, ಹಲಸು, ಸಪೋಟ ಮರಗಳಿವೆ. ಒಂದೆರಡು ಸಾಲು ಬಾಳೆ ಗಿಡಗಳಿವೆ. ಇದೋ ನೋಡಿ ಕರಿಬೇವಿನ ಗಿಡಗಳು, ತುಳಸಿ, ಒಂದೆಲಗ, ಶುಂಠಿ, ನಾಗದಾಳಿ, ದೊಡ್ಡಪತ್ರೆ, ಬಿಳಿ ದಾಸವಾಳ, ಇನ್ನೂ ಕೆಲವು ಗಿಡಗಳ ಹೆಸರು ನನಗೆ ಗೊತ್ತಿಲ್ಲ. ಇವನ್ನೆಲ್ಲ ದೊಡ್ಡಮ್ಮನವರೇ ಹಾಕಿಸಿದ್ದಾರೆ. ಔಷಧಿಗೆ ಬೇಕಾಗುತ್ತದೆಂದು. ಇಲ್ಲಿ ನೋಡಿ ಹೂವಿನ ಗಿಡಗಳಿವೆ, ವೀಳೇದೆಲೆ ಅಂಬು, ಪಕ್ಕದಲ್ಲೆಲ್ಲಾ ಸೊಪ್ಪಿನ ಮಡಿಗಳು. ಸ್ವಲ್ಪ ಜೋಪಾನವಾಗಿ ಹೆಜ್ಜೆ ಇಡಿ. ಅಲ್ಲಿ ಕಾಣುತ್ತಲ್ಲಾ ಅದೇ ಹಸುಗಳನ್ನು ಕಟ್ಟಲು ಮಾಡಿರುವ ಕೊಟ್ಟಿಗೆ’ ಎಂದ.’ ಮಾದಪ್ಪಾ ಇಲ್ಲಿ ಎಷ್ಟು ಹಸುಗಳಿವೆ?’ ಎಂದು ಕೇಳಿದೆ.
‘ಅವ್ವಾ ಮೊದಲು ಐನಾತಿ ಹಸುಗಳು, ನಾಡ ಹಸುಗಳೂ ಸೇರಿ ಹತ್ತರ ಮೇಲಿದ್ದೋ, ಆದರೆ ಈಗ ನಾಡಹಸುಗಳು ಆರು ಇದ್ದಾವಷ್ಟೇ. ಡೈರಿ ಬಿಟ್ಟು ಬರೀ ಮನೆಗಳು, ಮೆಸ್ಸು, ಹೋಟೆಲ್‌ಗಳಿಗೆ ಮಾತ್ರ ಹಾಲಾಕುವುದು’. ‘ಐನಾತಿ ಹಸುಗಳು ಎಂದರೆ?’ ‘ಅದೇ ಅವ್ವ ಸೀಮೇಹಸುಗಳು. ಅವು ಬಾಳಾ ಸೂಕ್ಷ್ಮ. ಅದಕ್ಕೇ ದೊಡ್ಡಮ್ಮೋರು ಅವನ್ನು ಕೈಬಿಟ್ಟು ಸಾಕುಬಿಡು, ಇವನ್ನೇ ಕೈಲಾಗುವಷ್ಟು ದಿನ ನೋಡಿಕೊಂಡರಾಯತು’ ಎಂದರು. ‘ಬನ್ನಿ’ ಎಂದ. ಕೊಟ್ಟಿಗೆಯೂ ಭದ್ರವಾದ ಕಟ್ಟಡವೇ. ಒಳಹೊಕ್ಕೆ, ವಿಶಾಲವಾದ ಜಾಗ. ಒಂದು ಹಸುವಿಗೂ ಮತ್ತೊಂದಕ್ಕೂ ಇದ್ದ ಅಂತರವೆಷ್ಟಿತ್ತೆಂದರೆ ಅವುಗಳು ಸರಾಗವಾಗಿ ಎದ್ದುಕೂಡಲು, ಮಲಗಲು, ಅನುವಾಗುವಂತಿತ್ತು. ಹುಲ್ಲು ಹಾಕುವ ಗೋಂದಿಗೆ, ಹಗ್ಗ ಕಟ್ಟುವ ಗೂಟ, ಸಮಿಪದಲ್ಲೇ ನೀರು ಕುಡಿಯಲು ತುಂಬಿದ ತೊಟ್ಟಿ, ಹಾಗೇ ತಲೆಯೆತ್ತಿ ನೋಡಿದಾಗ ಮೇಲಿನಿಂದ ಇಳಿಬಿಟ್ಟಿದ್ದ ಸೊಳ್ಳೆಪರದೆ ಕಾಣಿಸಿತು. ‘ಮಾದಪ್ಪ ಇಲ್ಲಿ ಸೊಳ್ಳೆ ಪರದೆ ಏಕೆ?’ ಎಂದು ಕೇಳಿದೆ. ‘ಹೂನ್ರಮ್ಮಾ, ಇದು ಹಸುಗಳಿಗೆ ರಾತ್ರಿ ಸುತ್ತಲೂ ಬರುವಂತೆ ಇಳಿಬಿಡುತ್ತೇವೆ. ಸ್ವಲ್ಪ ಮಟ್ಟಿಗೆ ಗುಂಗಾಡು, ನೊಣಗಳು, ಇವುಗಳ ಬಾಧೆ ತಪ್ಪುತ್ತದೆ’ ಎಂದ.
ಎಲ್ಲೂ ಸಗಣಿ, ಗಂಜಲದ ದಟ್ಟವಾಸನೆ ಮೂಗಿಗೆ ಬಡಿಯಲಿಲ್ಲ. ಶುಚಿಯಾಗಿತ್ತು. ಕೊಟ್ಟಿಗೆಯನ್ನು ತೊಳೆದಾಗ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದ ಒಳಚರಂಡಿಯಿತ್ತು. ‘ಅಬ್ಬಾ ! ಯಾವ ಇಂಜಿನಿಯರೂ ಇಷ್ಟೊಂದು ತಲೆ ಉಪಯೋಗಿಸಲಾರರು’ ಎಂದುಕೊಂಡೆ.
‘ಹಃ ಹಃ ಅಮ್ಮಾ ಅವರ್‍ಯಾರು ಗೊತ್ತೇ? ದೊಡ್ಡಮ್ಮೋರು, ಬಹಾಳ ಬುದ್ಧಿವಂತರು. ಮೂಕಜೀವಿಗಳನ್ನು ಮನುಷ್ಯರಂತೆಯೇ ಕಾಣುವ ದೇವತೆ. ಆಯಿತು ಇಲ್ಲಿಂದ ಮುಂದಕ್ಕೆಲ್ಲಾ ಹೊಲ ಇದೆ ತಾಯಿ. ಅಲ್ಲಿ ಕಾಳುಕಡಿಗಳು, ರಾಗಿ, ಹರಳು, ಹತ್ತಿ, ಮೆಣಸಿನಕಾಯಿ, ಕಾಲಕ್ಕೆ ತಕ್ಕಂತೆ ಕಡಲೇಕಾಯಿ, ಅವರೇಕಾಯಿ, ಎಲ್ಲವನ್ನೂ ಬೆಳೆಯುತ್ತೇವೆ’ ಎಂದ. ಸರಿಯೆನ್ನುತ್ತಾ ಇಬ್ಬರೂ ಅತ್ತೆಯವರಿದ್ದ ಜಾಗಕ್ಕೆ ಬಂದೆವು. ಅವರು ‘ನೋಡು ಮಾದ, ಗೌರಿಗೆ ಈಗ ಔಷಧಿ ಹಾಕಿದ್ದೇನೆ. ಮಿಕ್ಕದ್ದನ್ನು ನಿನ್ನ ಹೆಂಡತಿಯ ಕ್ಯಯಲ್ಲಿ ಕೊಟ್ಟಿದ್ದೇನೆ. ಒಳಗಿಟ್ಟಿದ್ದಾಳೆ. ರಾತ್ರಿ ಒಂದು ಸಾರಿ ಹಾಕು, ಎಲ್ಲಾ ಸರಿ ಹೋಗುತ್ತೆ. ಏನೂ ಆಗಿಲ್ಲ. ಹೊಟ್ಟೆ ಉಬ್ಬರವಷ್ಟೇ, ಹುಳುಗಳು ಜಾಸ್ತಿಯಾಗಿರಬೇಕು. ಒಂದೆರಡು ದಿನದಲ್ಲಿ ಸರಿಯಾಗುತ್ತಾಳೆ’ ಎಂದರು. ಹಾಗೇ ನಾನು ಬೇಡವೆಂದರೂ ಕೇಳದೇ ರಿಕ್ಷಾ ತರಿಸಿ ಇಬ್ಬರೂ ಅದರಲ್ಲಿ ಮನೆಗೆ ಹಿಂದಿರುಗಿದೆವು.
ಬೆಳಗ್ಗೆ ನಮ್ಮವರು, ಮಾವನವರು ಅವರವರ ಕೆಲಸಗಳಿಗೆ ತೆರಳಿದ ಮೇಲೆ ನಾನು ಅತ್ತೆಯವರಿಗೆ ಸಣ್ಣಪುಟ್ಟ ಸಹಾಯ ಮಾಡುವುದು, ಮಧ್ಯಾನ್ಹ ಊಟವಾದಮೇಲೆ ರೆಸ್ಟ್, ನಂತರ ಸಮಾಜಕ್ಕೆ ಹೋಗಿ ತರಗತಿ ನಡೆಸುವುದು, ಸಂಜೆ ಮಾವನವರು ಊರಿನಲ್ಲಿದ್ದ ದಿನಗಳಲ್ಲಿ ಭಜನೆ, ಪ್ರವಚನಗಳಲ್ಲಿ ಭಾಗವಹಿಸುವುದು, ರಜೆಯಿದ್ದಾಗ ಒಮ್ಮೊಮ್ಮೆ ಮೈಸೂರಿಗೆ ಹೋಗಿ ಹೆತ್ತವರನ್ನು ಮಾತನಾಡಿಸಿಕೊಂಡು ಬರುವುದು, ಹೀಗೇ ಚಟುವಟಿಕೆಗಳನ್ನು ರೂಢಿಸಿಕೊಂಡೆ. ಅತ್ತೆ ಮಾವನವರಿಗಂತೂ ನಾನು ಅಚ್ಚುಮೆಚ್ಚಿನ ಸೊಸೆಯಾಗಿಬಿಟ್ಟೆ. ನನ್ನವರು ಬಾಯಿಬಿಟ್ಟು ಏನೂ ಹೇಳದಿದ್ದರೂ ‘ನಮ್ಮೂರು, ನಮ್ಮವರು ನಿನಗೆ ಹಿಡಿಸಿದಂತಿದೆ’ ಎನ್ನುತ್ತಿದ್ದರು.
‘ಅಂದರೆ ನಿಮ್ಮ ಮಾತಿನ ಅರ್ಥ, ನೀವು ನನಗೆ ಹಿಡಿಸಿಲ್ಲವೆಂದೇನು?’ ಎಂದು ಛೇಡಿಸಿದಾಗ ನಕ್ಕು ಸುಮ್ಮನಾಗುತ್ತಿದ್ದರು. ಅವರ ಕಣ್ಣಿನಲ್ಲಿಯೇ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.
ಮೈಸೂರಿಗೆ ಹೋದಾಗಲೆಲ್ಲ ಅಣ್ಣ, ಅತ್ತಿಗೆ, ಮಕ್ಕಳನ್ನು ನೋಡಬೇಕು, ಮಾತನಾಡಿಸಬೇಕು ಎಂಬ ಮನಸ್ಸಾಗುತ್ತಿತ್ತು. ಆದರೆ ಅವರುಗಳು ನಾನು ಬಂದಿದ್ದೇನೆಂದು ಗೊತ್ತಾದರೂ ಮನೆಗೆ ಬರಲು ಉತ್ಸಾಹ ತೋರಿಸುವುದಾಗಲೀ, ತಮ್ಮ ಮನೆಗೆ ನನ್ನನ್ನು ಆಹ್ವಾನಿಸುವುದಾಗಲೀ ಮಾಡದೇ ಫೋನಿನಲ್ಲೇ ಔಪಚಾರಿಕವಾಗಿ ಮಾತನಾಡಿ ಮುಗಿಸುತ್ತಿದ್ದರು. ಇನ್ನು ನನ್ನಕ್ಕನದೂ ಅದೇ ಹಣೆಬರಹ, ಅವಳಿಂದ ಬಾ ಒಂದೆರಡು ದಿನವಿದ್ದು ಹೋಗುವೆಯಂತೆ ಎಂಬ ಒಂದು ಸೊಲ್ಲೂ ಬರುತ್ತಿರಲಿಲ್ಲ. ಈ ಮೊದಲೂ ನಾನು ಆಲೋಚಿಸುತ್ತಿದ್ದ ಸಂಬಂಧದ ಸೇತುವೆ ಕನಸಿನ ಮಾತೇ ಆಗುತ್ತದೇನೋ ನೋಡೋಣ. ಮಕ್ಕಳು ಮರಿಯಾದಾಗ ಬದಲಾಗಬಹುದೇನೋ ಎಂದುಕೊಂಡೆ. ಆ ದಿನವೂ ದೂರವಿಲ್ಲ ಎಂಬಂತೆ ನಾನು ತಾಯಿಯಾಗುವ ಸೂಚನೆ ಕಂಡುಬಂತು. ಎರಡೂ ಕಡೆಯ ಹಿರಿಯರಿಗೂ ಹಿಗ್ಗೋ ಹಿಗ್ಗು. ವಿಷಯ ತಿಳಿದ ಅಪ್ಪ ಅಮ್ಮ ಮೈಸೂರಿನಿಂದ ನಂಜನಗೂಡಿಗೇ ಬಂದರು. ಪರಸ್ಪರ ಕುಶಲೋಪರಿ ಮುಗಿದು ಊಟಕ್ಕೆ ಕುಳಿತಾಗ ನನ್ನಮ್ಮ ‘ನೀವುಗಳು ಏನೂ ತಿಳಿದುಕೊಳ್ಳದಿದ್ದರೆ ಒಂದು ಮಾತು’ ಎಂದು ಪ್ರಾರಂಭಿಸಿದರು.
‘ಹೇಳಿ ಅತ್ತೆ, ಇದರಲ್ಲಿ ತಿಳಿದುಕೊಳ್ಳುವುದು ಏನಿದೆ?’ ಎಂದರು ನನ್ನವರು.
‘ನಮ್ಮ ಮಗಳು ಈಗ ಮೈದುಂಬಿಕೊಂಡಿದ್ದಾಳೆ, ಹೆರಿಗೆ ಮೈಸೂರಿನಲ್ಲೇ ತಾಯಿಮನೆಯಲ್ಲಿ ಆಗಬೇಕಾದ್ದು ಸಂಪ್ರದಾಯ. ಅದಕ್ಕೆ ಒಬ್ಬರೇ ಡಾಕ್ಟರರ ಹತ್ತಿರ ಮೊದಲಿನಿಂದಲೂ ಚೆಕಪ್ ಮಾಡಿಸಿಕೊಂಡರೆ ಉತ್ತಮ. ಇಲ್ಲಿದ್ದರೆ ಪದೇಪದೇ ಪ್ರಯಾಣ ಮಾಡುವುದು ಕಷ್ಟವಾಗುತ್ತೆ. ಅದಕ್ಕೇ ಆಕೆ ನಮ್ಮಲ್ಲೇ ಇರಲೆಂದು ಕೇಳಿಕೊಳ್ಳುತ್ತೇವೆ ಅಲ್ಲಿಯೇ ಬಿಡಿ’ ಎಂದರು.
‘ಅತ್ತೆಯವರೇ, ನಿಮ್ಮ ಆತಂಕ ಸಹಜವೇ. ನಮ್ಮೂರು ಮೈಸೂರಿನಷ್ಟು ದೊಡ್ಡ ಊರಲ್ಲದಿದ್ದರೂ ಅನುಭವಿ ಡಾಕ್ಟರುಗಳಿದ್ದಾರೆ. ಜೊತೆಗೆ ನಮ್ಮ ಅಮ್ಮ ಈ ವಿಷಯದಲ್ಲಿ ಹೆಚ್ಚಿನ ತಿಳುವಳಿಕೆ ಹೊಂದಿದ್ದಾರೆ. ನೀವೇನೂ ಹೆದರಬೇಡಿ. ಹೆರಿಗೆಯಾದ ಮೇಲೆ ಮೈಸೂರಿಗೆ ಕರೆದುಕೊಂಡು ಹೋಗುವಿರಂತೆ. ಅಲ್ಲಿ ನೀವಿಬ್ಬರೇ. ಇಲ್ಲಿಯಾದರೆ ಅಮ್ಮ, ಅಪ್ಪ, ಅಲ್ಲದೆ ಅಕ್ಕಪಕ್ಕದಲ್ಲಿ ಎಲ್ಲರೂ ಇದ್ದಾರೆ’ ಎಂದರು.
‘ಅದೆಲ್ಲಾ ಸರಿಯಪ್ಪಾ, ಆದರೂ ಚೊಚ್ಚಲ ಹೆರಿಗೆ ತಾಯಿ ಮನೆಯಲ್ಲಿ…ಅಲ್ಲದೆ ನೀನು ಆಗಲೇ ಹೇಳಿದಿಯಲ್ಲ ನಿಮ್ಮ ತಾಯಿಯವರು.. ‘ಎಂದು ಮುಂದೇನೂ ಹೇಳಲಾರದೆ ತಡವರಿಸಿದರು ನನ್ನಮ್ಮ.
‘ನೋಡೀಮ್ಮ, ನಿಮ್ಮ ಅನುಮಾನಗಳನ್ನೆಲ್ಲ ಪಕ್ಕಕ್ಕಿಡಿ. ನಿಮ್ಮ ಮಗಳು ಈ ಮನೆಗೆ ಸೊಸೆಯಾಗಿ ಬಂದಿದ್ದಾಳೆ. ಅವಳು ನಮ್ಮವಳೇ ಆಗಿದ್ದಾಳೆ. ಯೋಚಿಸಬೇಡಿ. ಯಾರಾದರೂ ಏನಂದುಕೊಳ್ಳುತ್ತಾರೆಂಬ ಸಲ್ಲದ ಯೋಚನೆ ಮಾಡಬೇಡಿ. ನಾವು ಕಣ್ಣಿನ ರೆಪ್ಪೆಯಂತೆ ಅವಳನ್ನು ನೋಡಿಕೊಳ್ಳುತ್ತೇವೆ. ಈ ಮೊದಲು ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಸೂಲಗಿತ್ತಿಯರು ಇಲ್ಲದ ಕಾಲದಲ್ಲಿ ಸ್ವತಃ ನನ್ನಾಕೆಯೇ ಅಲ್ಲಿಗೆ ಹೋಗಿ ಹೆರಿಗೆ ಮಾಡಿಸಿ ಬರುತ್ತಿದ್ದಳು. ಅವಳಿಗೆ ಆ ವಿದ್ಯೆ ಕರಗತವಾಗಿದೆ. ಈಗ ಇಲ್ಲೆಲ್ಲ ಅನುಕೂಲಗಳೂ ಬಂದಿರುವುದರಿಂದ ಹೋಗುವುದನ್ನು ನಿಲ್ಲಿಸಿದ್ದಾಳೆ. ಆದರೂ ಕೆಲವರು ಈಗಲೂ ಸಲಹೆ, ಸೂಚನೆಗಳನ್ನು ಪಡೆದುಕೊಳ್ಳಲು ಮನೆಗೆ ಬರುತ್ತಿರುತ್ತಾರೆ. ನಮ್ಮ ದಯಾನಂದ ಹೇಳಿದಂತೆ ನಮ್ಮಕುಟುಂಬ ವೈದ್ಯರು ನಿರ್ಮಲಾ ಅಂತ, ಬಹಳ ಒಳ್ಳೆಯವರು. ಅನುಭವಿಗಳು. ಹೆರಿಗೆಯ ದಿನಗಳು ಹತ್ತಿರ ಬಂದಾಗ ನೀವೇ ಇಲ್ಲಿಗೆ ಬಂದಿರಿ. ಹೆರಿಗೆಯ ನಂತರ ಕರೆದುಕೊಂಡು ಹೋಗುವಿರಂತೆ. ವಯಸ್ಸಾದ ಜೀವಿಗಳು, ಆತಂಕ ಸಹಜ. ಹಾಗಂತ ನಾವೇನು ಹರೆಯದವರಲ್ಲ. ಇಲ್ಲಿ ನಮಗೆ ಅನುಕೂಲತೆಗಳು ಹೆಚ್ಚು. ಇದರ ಮೇಲೆ ನಿಮ್ಮ, ಮತ್ತು ನಮ್ಮ ಸೊಸೆಯ ಇಷ್ಟ’ ಎಂದರು ನಮ್ಮ ಮಾವನವರು.
ಇವೆಲ್ಲ ಮಾತುಗಳನ್ನು ಆಲಿಸಿದ ನಾನು ನಮ್ಮತ್ತೆ ಮಹಾತಾಯಿ ಇನ್ನೂ ಏನೇನು ಕಲಿತಿದ್ದಾರೋ ಎಂದು ಮನದಲ್ಲೇ ಆಶ್ಚರ್ಯಪಟ್ಟೆ. ಆದಿನ ನಮ್ಮಲ್ಲಿ ತಂಗಿದ್ದ ನನ್ನ ಹೆತ್ತವರು ಸಂಜೆ ದೇವಸ್ಥಾನಕ್ಕೆ ಹೋಗಬೇಕೆಂದು ಅಪೇಕ್ಷೆಪಟ್ಟರು. ನನ್ನತ್ತೆ ‘ಮಗೂ ಸುಕನ್ಯಾ ಅವರನ್ನು ನೀನೇ ಕರೆದುಕೊಂಡು ಹೋಗಿ ಬಾ’ ಎಂದರು.
ದೇವರ ದರ್ಶನ ಪಡೆದು ಬಸವಣ್ಣನ ಮೂರ್ತಿಯ ಪಕ್ಕದಲ್ಲಿದ್ದ ವಿಶಾಲವಾದ ಪ್ರಾಂಗಣದಲ್ಲಿ ಕುಳಿತೆವು. ‘ಇಂಥಹ ಮನೆಗೆ ಸೊಸೆಯಾಗಿ ಬರಲು ನೀನು ಪುಣ್ಯ ಮಾಡಿದ್ದೆ ಕೂಸೇ ‘ಎಂದು ಅಮ್ಮ ಹೇಳಿದರೆ ನನ್ನಪ್ಪ ‘ಲೇ ಭಾಗೀ ಅವರು ಸೂಕ್ಷ್ಮ ದೃಷ್ಟಿಯುಳ್ಳವರು. ಯಾವ ವಿಷಯವನ್ನೂ ಕೆದಕಿ ಕೇಳದಿದ್ದರೂ ನನ್ನ ಅಕ್ಕರೆಯ ಗಂಡುಮಕ್ಕಳು ನಮ್ಮ ಬಗಲಲ್ಲೇ ಇದ್ದರೂ ಹೇಗೆ ನಡೆದುಕೊಳ್ಳುತ್ತಾರೆಂದು ಕಂಡು ಹಿಡಿದುಬಿಟ್ಟಿದ್ದಾರೆ. ಹೊತ್ತಲ್ಲದ ಹೊತ್ತಿನಲ್ಲಿ ಏನಾದರೂ ಆದರೆ ವಯಸ್ಸಾದ ನಾವಿಬ್ಬರೇ ಒದ್ದಾಡುವುದು ಬೇಡವೆಂದು ಈ ಏರ್ಪಾಡು ಅರ್ಥವಾಯಿತೇ?’ ಎಂದರು. ‘ಹೂಂ, ಅದಿರಲಿ ಮಗಳೇ ನಿನ್ನ ಅಭಿಪ್ರಾಯವೇನು? ನಿನಗೆ ಮೈಸೂರಿಗೆ ಬರಲು ಆಸೆಯಿದ್ದರೆ ಹೇಳು. ಏನಾದರೂ ಏರ್ಪಾಡು ಮಾಡಿಕೊಳ್ಳುತ್ತೇವೆ ‘ ಎಂದರು ಅಮ್ಮ.
‘ಇಷ್ಟೊಂದು ಅಕರಾಸ್ಥೆಯಿಂದ ನೋಡಿಕೊಳ್ಳುವವರಿರುವಾಗ ನಾವೂ ಅವರು ಹೇಳಿದಂತೆ ನಡೆದುಕೊಳ್ಳುವುದು ಉಚಿತವಾದದ್ದು. ಇದಕ್ಕೆ ನನ್ನ ಸಹಮತವಿದೆ. ನೀವುಗಳೇ ಅನುಕೂಲವಾದಾಗ ಬಂದುಹೋಗುತ್ತಿರಿ’ ಎಂದೆ. ‘ಸರಿಯಮ್ಮಾ’ ಎಂದರು ಇಬ್ಬರೂ. ಮನೆಗೆ ಹಿಂದಿರುಗಿದೆವು. ಮಾರನೆಯ ದಿನ ಅಪ್ಪ, ಅಮ್ಮ ಮೈಸೂರಿಗೆ ಹಿಂದಿರುಗಿದರು.
ಸುದ್ಧಿ ತಿಳಿದ ಅಣ್ಣ, ಅತ್ತಿಗೆಯರು ಫೋನಿನಲ್ಲೇ ನನ್ನನ್ನು ಅಭಿನಂದಿಸಿ ಶುಭಾಶಯಗಳನ್ನು ಹೇಳಿ ಮುಗಿಸಿದರು. ನನ್ನವರ ಸೋದರ, ಸೋದರಿಯರು ತಮ್ಮ ಕೆಲಸಕ್ಕೆ ರಜೆಹಾಕಿ ನಮ್ಮಲ್ಲಿಗೆ ಬಂದು ಒಂದೆರಡು ವಾರಕಾಲ ಒಟ್ಟಿಗೇ ಇದ್ದು ಹಿಂದಿರುಗಿದರು. ಅವರಿಗೆಲ್ಲ ನಾನು ನಂಜನಗೂಡಿನಲ್ಲೇ ಹೆರಿಗೆಯವರೆಗೆ ವರೆಗೆ ಇರುತ್ತೇನೆಂಬುದು ಅಚ್ಚರಿಯ ಸಂಗತಿಯಾಗಿತ್ತು. ನನ್ನವರು ಯಾರಿಗೂ ಸುಳಿವನ್ನು ಬಿಟ್ಟುಕೊಡದೆ ತಮ್ಮ ಉದ್ದೇಶವನ್ನು ಈಡೇರಿಸಿಕೊಂಡರೆಂದು ನನಗೆ ಮಾತ್ರ ಅರ್ಥವಾಯ್ತು. ಆ ಗುಟ್ಟನ್ನು ಬಿಟ್ಟುಕೊಡದೆ ‘ನಾನು ಮುಂದೆ ಹೋಗುವುದು ಇದ್ದೇ ಇದೆ. ಹಿರಿಯರ ಜೊತೆ ಕೆಲವು ವರ್ಷಗಳು ಇರೋಣವೆಂದು ಇದ್ದೇನೆ’ ಎಂದೆ. ‘ಪರವಾಗಿಲ್ಲ, ಸಿಟಿಯಲ್ಲಿ ಬೆಳೆದವರಾದರೂ ಇಲ್ಲಿನ ವಾತಾವರಣಕ್ಕೆ ಬೇಸರಪಟ್ಟುಕೊಳ್ಳದೆ ಇದ್ದೀರಾ ‘ಎಂದು ತಾರೀಫು ಮಾಡಿದರು. ನಾನು ನಕ್ಕು ಸುಮ್ಮನಾದೆ.
ನಾನು ಕಂಡಂತೆ ನಮ್ಮ ಅತ್ತೆಯಾಗಲೀ, ಮಾವನವರಾಗಲೀ ಅದುಬೇಕು, ಇದು ಬೇಕೆಂದು ಮಕ್ಕಳನ್ನು ಕೇಳಿದ್ದನ್ನು ನೋಡಲೇ ಇಲ್ಲ. ನನ್ನವರನ್ನೂ ಸೇರಿ ಪ್ರೀತಿಯಿಂದ ಏನನ್ನಾದರೂ ತಂದುಕೊಟ್ಟರೆ ನಿರಾಕರಿಸದೆ ತೆಗೆದುಕೊಳ್ಳುತ್ತಿದ್ದರು. ಆದರೆ ಮತ್ಯಾವುದಾದರೂ ಸಂದರ್ಭದಲ್ಲಿ ಅದಕ್ಕಿಂತಲೂ ಹೆಚ್ಚಿನದಾದ ಉಡುಗೊರೆಯನ್ನು ಕೊಟ್ಟುಬಿಡುತ್ತಿದ್ದರು. ಅದೇ ನಮ್ಮ ತಂದೆಯ ಮನೆಯಲ್ಲಿ ಅಕ್ಕನ ಬೇಡಿಕೆಗಳು ಒಂದು ತೆರನಾದರೆ, ಅಣ್ಣಂದಿರದ್ದು ಮತ್ತೊಂದು ರೀತಿಯದಾಗಿತ್ತು. ಏನಾದರೊಂದು ನೆಪ ಹುಡುಕಿ ತುಂಬ ಸಂಕಟಕ್ಕೆ ಸಿಕ್ಕಿಕೊಂಡಿದ್ದೇವೆ ಎಂಬಂತೆ ಬಿಂಬಿಸಿ ಹಣ ವಸೂಲಿ ಮಾಡುತ್ತಿದ್ದರು.
ಸಮಾಜದಲ್ಲಿ ಮಹಿಳೆಯರಿಗೆ ತರಗತಿಗಳನ್ನು ನಡೆಸಲು ಹೋಗುತ್ತಿದ್ದೆ. ಈಗ ಅಲ್ಲಿಗೆ ಹೋಗುವುದೋ ಬೇಡವೋ ಎಂದು ನನ್ನವರನ್ನು ಕೇಳಲೇ? ಬೇಡ ಆ ಮನುಷ್ಯ ಎಲ್ಲದಕ್ಕೂ ನಿನ್ನಿಷ್ಟ ಎಂದುಬಿಡುತ್ತಾರೆ. ಅತ್ತೆಯನ್ನು ಕೇಳಲೇ? ಮಾವನವರು ಏನೆನ್ನುತ್ತಾರೋ? ಎಂಬ ಜಿಜ್ಞಾಸೆಯಲ್ಲಿರುವಾಗಲೇ ಸಮಾಜದ ಕಾರ್ಯದರ್ಶಿಗಳಿಂದ ಫೋನ್ ಬಂದೇಬಿಟ್ಟಿತು. ವಿಷಯ ತಿಳಿದಿದ್ದ ‘ಅವರು ಏನು ಮಾಡುತ್ತೀರಾ ಸುಕನ್ಯಾ? ಪಾಠಗಳು ಅರ್ಧಕ್ಕೇ ನಿಂತುಹೋಗುತ್ತವೆ. ಈ ಬ್ಯಾಚಿನವರಿಗೆ ಪ್ರಾರಂಭಿಸಿರುವ ಸ್ವೆಟರ್, ಟೇಬಲ್‌ಕ್ಲಾತ್, ವಗೈರೆ ಮುಗಿಸಿಕೊಟ್ಟರೆ ಆ ನಂತರ ನಿಮ್ಮ ಹೆರಿಗೆಯಾಗಿ ನೀವು ಹಿಂದಿರುಗುವವರೆಗೂ ಇಲ್ಲಿಯೇ ಕಲಿತಿರುವ ಒಂದಿಬ್ಬರಿಂದ ಬೇಸಿಕ್ ತರಗತಿ ನಡೆಸಕೊಡುವಂತೆ ಏರ್ಪಾಡು ಮಾಡಿಕೊಳ್ಳುತ್ತೇವೆ. ನೀವೇನು ಹೇಳ್ತೀರಿ?’ ಎಂದು ಕೇಳಿದರು. ನಾನು ಉತ್ತರ ಹೇಳಲು ತಡಬಡಾಯಿಸುತ್ತಿದ್ದಾಗ ಅಲ್ಲೇ ಇದ್ದ ಅತ್ತೆ ಯಾರೆಂದು ಕೇಳಿ ತಾವೇ ನನ್ನಿಂದ ಫೋನ್ ತೆಗೆದುಕೊಂಡು ‘ನನ್ನ ಸೊಸೆ ಬರುತ್ತಾಳೆ, ನಾನೇ ಕರೆದುಕೊಂಡು ಬಂದು ಬಿಟ್ಟುಹೋಗುತ್ತೇನೆ. ಯೋಚಿಸಬೇಡಿ. ಪ್ರಾರಂಭಿಸಿರುವ ತರಗತಿಗಳನ್ನು ಮುಗಿಸಿಕೊಡುತ್ತಾಳೆ. ಆನಂತರ ಕೆಲವು ತಿಂಗಳು ಸಂಭಾಳಿಸಿಕೊಳ್ಳಿ’ ನಂತರ ಬರುತ್ತಾಳೆ ಎಂದು ಹೇಳಿ ಸಮಸ್ಯೆಗೆ ಪರಿಹಾರ ಸೂಚಿಸಿದರು.
‘ಮಗು ಸುಕನ್ಯಾ, ನೀನೇನೂ ರೋಗಿಯಲ್ಲ, ಈ ಸಮಯದಲ್ಲಿ ಲವಲವಿಕೆಯಿಂದ ಇರಬೇಕು. ಅಲ್ಲಿಗೆ ಹೋಗಿಬರುವುದರಿಂದ ನಾಲ್ಕು ಜನರೊಡನೆ ಕಲೆತು, ಬೆರೆತು ಉತ್ಸಾಹದಿಂದ ಇರಲು ಸಾಧ್ಯ. ನಿನಗೆ ಸುಸ್ತು, ಸಂಕಟ, ಎನ್ನಿಸಿದರೆ ನನಗೆ ಹೇಳು’ ಎಂದರು. ನಾನು ‘ಅತ್ತೆ ನನಗೇನೂ ಇಲ್ಲ. ಚೆನ್ನಾಗಿದ್ದೇನೆ’ ಎಂದೆ. ‘ಹಾಗಾದರೆ ಸರಿ’ ಎಂದು ಅಂದಿನಿಂದ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟು, ಮತ್ತೆ ಮನೆಗೆ ಕರೆತರಲು ಬರುವ ತಾಯಂದಿರಂತೆ ತರಗತಿಗಳಿದ್ದ ದಿನಗಳಲ್ಲಿ ಮಾಡುತ್ತಿದ್ದರು. ನಮ್ಮ ಮನೆಯಿಂದ ಸೀದಾ ಒಂದೇರಸ್ತೆ, ಎಲ್ಲಿಯೂ ತಿರುವುಗಳಿರಲಿಲ್ಲ. ಹೆಚ್ಚಿನ ವಾಹನ ಸಂಚಾರದ ದಟ್ಟಣೆಯೂ ಇರುತ್ತಿರಲಿಲ್ಲ. ನನಗೂ ಆ ಏರ್ಪಾಡು ಉಪಯುಕ್ತವಾಗಿತ್ತು. ನಾನು ಮದುವೆಯಾಗಿ ಇಲ್ಲಿಗೆ ಬಂದ ಹೊಸತರಲ್ಲಿದ್ದ ಮುಜುಗರ ಮಾಯವಾಗಿ ಸ್ನೇಹ ಸಂಬಂಧ, ಒಡನಾಟಗಳು ಬೆಳೆದು ಜನರೂ ಸಂಕೋಚಗಳನ್ನು ಬದಿಗೊತ್ತಿ ಸಲೀಸಾಗಿ ಬೆರೆಯುತ್ತಿದ್ದರು.
ಹೆತ್ತವರು ಮಾತುಕೊಟ್ಟಂತೆ ಆಗಿಂದಾಗ್ಗೆ ಬಂದು ಹೋಗುತ್ತಿದ್ದರು. ಬರುವ ಮೊದಲು ಏನಾದರೊಂದು ಮಾಡಿಕೊಂಡು ಬರಲೇ? ಎಂದು ಕೇಳುವುದು, ನಾನು ಏನೂ ಬೇಡವೆಂದುತ್ತರಿಸುವುದು ನಡೆದೇ ಇತ್ತು. ಆಗೆಲ್ಲಾ ಅತ್ತೆಯವರು ‘ಬೇಡವೆನ್ನಬೇಡ ಸುಕನ್ಯಾ, ನಿಮ್ಮ ಅಮ್ಮನ ಕೈರುಚಿ ತಿನ್ನಬೇಕೆನ್ನಿಸಿದರೆ ಕೇಳಿ ಮಾಡಿಕೊಂಡು ಬರುವಂತೆ ಹೇಳು ನಾನೇನೂ ತಿಳಿದುಕೊಳ್ಳುವುದಿಲ್ಲ’. ಎನ್ನುತ್ತಿದ್ದರು. ಡಾಕ್ಟರರ ಕಣ್ಗಾವಲು, ಅತ್ತೆಯ ಆರೈಕೆ, ನನ್ನವರ ಪ್ರೀತಿ, ಹೆತ್ತವರ ಕಾಳಜಿ, ಇವೆಲ್ಲದರಿಂದ ನನ್ನ ಮನತುಂಬಿ ಬರುತ್ತಿತ್ತು. ನೆಮ್ಮದಿ ನೆಲೆಸಿತ್ತು. ಹುಟ್ಟಲಿರುವ ಕಂದನ ಬಗ್ಗೆ ಕನಸು ಕಟ್ಟುವುದರಲ್ಲಿ ದಿನಗಳು ಸರಿದುಹೋದುದೇ ಅರಿವಾಗಲಿಲ್ಲ.
ಅಂತೂ ಮದುವೆಯಾದ ಎರಡನೆಯ ವರ್ಷಕ್ಕೆ ಗಂಡುಮಗುವಿನ ತಾಯಾದೆ. ಹುಟ್ಟಿದ ಘಳಿಗೆ ಬಹಳ ಚೆನ್ನಾಗಿದೆ ಎಂದು ನಮ್ಮ ಮಾವನವರು ದೇವಸ್ಥಾನದ ಮುಖ್ಯ ಅರ್ಚಕರಿಂದ ಕುಂಡಲಿ ಬರೆಸಿ ತಂದರು. ಆ ಅಕ್ಷರದಿಂದ ಪ್ರಾರಂಭವಾಗುವ ಹೆಸರಿಡಬೇಕೆಂದು ತಿಳಿಸಿದರು.
(ಮುಂದುವರಿಯುವುದು)
ಈ ಕಾದಂಬರಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=31317
-ಬಿ.ಆರ್ ನಾಗರತ್ನ, ಮೈಸೂರು
ಇನ್ನೂ ಓದಬೆಕೆನಿಸಿತು.ಧನ್ಯವಾದಗಳು
ಕಥೆಯಲ್ಲಿ ಬಂದ ಹಳ್ಳಿ, ತೋಟ, ಗದ್ದೆ, ದನಕರು ಈ ಎಲ್ಲವೂ ಒಂದು ರೀತಿ ಮನಸಿಗೆ ಹಿತ ನೀಡುವಂತಹ ವಿಚಾರಗಳು,ಓದುವಾಗಲೂ ಏನೋ ಖುಷಿ
ಹಳ್ಳಿ ಸೊಗಡಿನ ಕಥೆ ಅತ್ಮೀಯವಾಗಿ ಓದಿಸಿಕೊಂಡು ಹೋಗುತ್ತದೆ. ಸುಕನ್ಯಾಳ ನೆಮ್ಮದಿಯ ಜೀವನ ಕಂಡು ನಮಗೂ ನೆಮ್ಮದಿಯಾಯಿತು
ಕಥೆ ತುಂಬಾ ಸೊಗಸಾಗಿದೆ. ಮುಂದಿನ ಭಾಗದ ನಿರೀಕ್ಷೆ ಯಲ್ಲಿ…
ಸಾಹಿತ್ಯ ಸಹೃದಯರಿಗೆ ನನ್ನ ಧನ್ಯವಾದಗಳು.
ಹಳ್ಳಿ ಸೊಗಡಿನ ನಿರೂಪಣೆ ನಿಜಕ್ಕೂ ಸುಂದರ . ಕಥೆಯನ್ನು ಓದುತ್ತಾ ಹೋದಂತೆಲ್ಲಾ ಹಳ್ಳಿ ಜೀವನದ ಸೊಬಗು ಕಣ್ಮುಂದೆ ಬಂದು ನನಗೆ ನನ್ನ ಬಾಲ್ಯದ ನೆನಪು ಮರುಕಳಿಸಿತು. ನಾಯಿ ಮೇಲಿನ ಭಯ, ಜಮೀನು, ಜಾನುವಾರುಗಳು, ಅತ್ತೆ ಸೊಸೆಯ ಬಾಂಧವ್ಯ, ಅತ್ತೆಯ ಬದುಕಿನ ನೈಪುಣ್ಯತೆ ಒಟ್ಟಾರೆಯಾಗಿ ಚಂದದ ಕಥೆ .
ಮುಂದಿನ ಭಾಗದ ನಿರೀಕ್ಷೆಯೊಂದಿಗೆ ಧನ್ಯವಾದಗಳು .
ಧನ್ಯವಾದಗಳು ಗೆಳತಿ
ಧನ್ಯವಾದಗಳು
ಒಳ್ಳೆಯ ಕಥೆ…ಹಳ್ಳಿಯ ಸೊಗಡು ಚೆನ್ನಾಗಿ ಬಿಂಬಿಸಲ್ಪಟ್ಟಿದೆ
ಸೊಗಸಾಗಿ ಮೂಡಿ ಬರುತ್ತಿದೆ ಸುಕನ್ಯಾಳ ಸಂಸಾರದ ಕಥೆ, ಹಳ್ಳಿಯ ಸೊಬಗು ಮೆಲಕು ಹಾಕುವಂತಿದೆ, ನಾನಂತೂ ಕಥೆಯ ಪಾತ್ರದಾರಿ ಆಗಿ ಹೋಗಿರುತ್ತೇನೆ, ಮುಂದಿನ ಕಥೆಗೆ ಕಾಯುತಿರುವೆ..
ನನ್ನ ಕಥೆ ನೆನಪಾಗುತ್ತಿದೆ. ನನ್ನ ಅತ್ತೆ ಸಹ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು