ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 10
‘ಕಛ್ ಮ್ಯೂಸಿಯಂ’
ಐನಾ ಮಹಲ್ ಮತ್ತು ಪ್ರಾಗ್ ಮಹಲ್ ಅರಮನೆಗಳನ್ನು ನೋಡಿ, ಒಂದೆರಡು ಕಿ.ಮೀ ಪ್ರಯಾಣಿಸಿ ‘ಕಛ್ ಮ್ಯೂಸಿಯಂ’ಗೆ ಭೇಟಿ ಕೊಟ್ಟೆವು. ಎಲ್ಲಾ ಮ್ಯೂಸಿಯಂಗಳಲ್ಲಿ ಇರುವಂತೆ ಇಲ್ಲಿಯೂ ಸ್ಥಳೀಯ ವೈಶಿಷ್ತ್ಯಗಳು, ಆಳಿದ ರಾಜರಾಣಿಯ ಪಟಗಳು, ಆಯುಧಗಳು, ಸಿಂಹಾಸಗಳು, ಸ್ಥಳೀಯ ಬುಡಕಟ್ಟು ಜನರ ಜೀವನ ಶಿಲಿಯನ್ನು ನಿರೂಪಿಸುವ ಗುಡಿಸಲುಗಳು, ಜಾನಪದ ಕಲೆಗಳು, ರಣ್ ಉತ್ಸವದ ವಿವರಗಳು, ಕಛ್ ನ ಪ್ರಸಿದ್ಧವಾದ ಕಸೂತಿ, ಬಟ್ಟೆ ಮೇಲೆ ಬಣ್ಣದ ಚಿತ್ತಾರ ಮೂಡಿಸುವ ಬಾಂದನಿ, ಬಾಟಿಕ್, ಕನ್ನಡಿ ವಿನ್ಯಾಸಗಳು ಇತ್ಯಾದಿ ಇದ್ದುವು. ಎರಡು ಮಹಡಿಯ ಭವ್ಯ ಬಂಗಲೆಯಾದ ಈ ಮ್ಯೂಸಿಯಂ ಅನ್ನು ನೋಡಿ, ಅಲ್ಲಿ ಪ್ರದರ್ಶಿಸಲಾದ ಮಾಹಿತಿಯನ್ನು ಓದಿ ಮನನ ಮಾಡಿಕೊಳ್ಳಲು ಒಂದು ದಿನವೇ ಬೇಕು. ನಮಗೆ ಕೊಟ್ಟ ಕಾಲು ಗಂಟೆ ಅವಧಿಯಲ್ಲಿ ಕೇವಲ ಒಂದು ಸುತ್ತು ಹಾಕಿ ಬಂದೆವು.
ಅಲ್ಲಿ ಓದಿದ ಒಂದು ಪ್ರಾತ್ಯಕ್ಷಿಕೆಯಲ್ಲಿದ್ದ ಪ್ರಕಾರ, ಕಛ್ ರಾಜರು ಬಹಳ ಸ್ವಾಭಿಮಾನಿ ಹಾಗೂ ಕಲಾ ಪೋಷಕರಾಗಿದ್ದರು. ಅವರು ಬ್ರಿಟಿಷರಿಗೆ ತಲಬಾಗದೆ ರಾಜ್ಯಭಾರ ಮಾಡುತ್ತಿದ್ದರು. ಮುಖ್ಯನಗರಗಳಿಂದ ಬಹಳ ದೂರದಲ್ಲಿದ್ದುದರಿಂದಲೂ, ಒಣ ಭೂಮಿಯಾಗಿದ್ದುದರಿಂದಲೂ ಬ್ರಿಟಿಷರಿಗೂ ಕಛ್ ಆಕರ್ಷಕವೆನಿಸಿರಲಿಲ್ಲ. ಹಾಗಾಗಿ, ಇಲ್ಲಿ ಬ್ರಿಟಿಷರ ಆಡಳಿತ ಕುರುಹುಗಳು ಕಾಣಸಿಗುವುದಿಲ್ಲ.
‘ಛತ್ತಡಿ’ ಸ್ಮಾರಕಗಳು
ಹೋಟೆಲ್ ಗೆ ಹಿಂತಿರುಗುವ ದಾರಿಯಲ್ಲಿ ‘ಛತ್ತಡಿ’ ಎಂಬಲ್ಲಿ ಬಸ್ಸು ನಿಂತಿತು. ಭುಜ್ ನ ರಾಜವಂಶಸ್ಥರ ಸ್ಮಾರಕವಿದೆ. ಕೆಲವು ಸಮಾಧಿಗಳುಳ್ಳ ಪ್ರದೇಶವಿದು. ಸ್ಮಾರಕಗಳ ಸಮುಚ್ಛಯವಾದರೂ ಸುಂದರವಾದ ಅರಮನೆಯು ಪಾಳುಬಿದ್ದಂತೆ ಕಾಣಿಸುತ್ತಿತ್ತು. 2001 ರಲ್ಲಿ ಭುಜ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿ ಬಹಳಷ್ಟು ಹಾನಿಯಾಗಿದೆ. ಮುರಿದ ಕಲ್ಲಿನ ಕಂಭಗಳು, ಉರುಳಿಬಿದ್ದ ಕಮಾನುಗಳು ಇತ್ಯಾದಿ ಇರುವ ಈ ಸ್ಥಳವು ಒಂದು ಕಾಲದಲ್ಲಿ ವೈಭವೋಪೇತವಾಗಿದ್ದು ಆಮೇಲೆ ಪಾಳುಬಿದ್ದ ಹಂಪೆಯನ್ನು ನೆನಪಿಸಿತು. ಅಲ್ಲಿ ಮಾತನಾಡಿದ ಸ್ಥಳೀಯರೊಬ್ಬರು ಹೇಳಿದ ಪ್ರಕಾರ, ಇತ್ತೀಚಿನ ವರೆಗೂ ಈ ಪ್ರದೇಶಕ್ಕೆ ಪ್ರವಾಸಿಗಳು ಬರುತ್ತಿರಲಿಲ್ಲ. 1999 ರಲ್ಲಿ ಬಿಡುಗಡೆಯಾದ ‘ಹಮ್ ದಿಲ್ ದೆ ಚುಕೆ ಸನಂ’ ಹಿಂದಿ ಸಿನೆಮಾದ ಹಾಡಿನ ಕೆಲವು ಭಾಗಗಳನ್ನು ಇಲ್ಲಿ ಚಿತ್ರೀಕರಿಸಿದ ಮೇಲೆ ಇದು ಕೂಡ ಭುಜ್ ನ ಪ್ರಮುಖ ಪ್ರವಾಸಿ ಸ್ಥಳವೆಂದು ಗುರುತಿಸಲ್ಪಟ್ಟಿತು.
ಕಛ್ ನ ಬಹುತೇಕ ಸ್ಥಳಗಳು ಜೀವಿಸಲು ಅನುಕೂಲವಲ್ಲದ ಮರುಭೂಮಿಯಾಗಿದ್ದುದರಿಂದ ಯಾರಿಗೂ ಬೇಡವಾಗಿತ್ತು. ಆದರೆ ಮಾನ್ಯ ನರೇಂದ್ರ ಮೋದಿಯವರು ದೂರದರ್ಶಿತ್ವದಿಂದ ಆರಂಭಿಸಿದ ‘ರಣ್ ಉತ್ಸವ’ವು ಕಛ್ ಗೆ ಮಾತ್ರವಲ್ಲದೆ ಗುಜರಾತ್ ಗೆ ಪ್ರವಾಸಿ ಮನ್ನಣೆ ದೊರಕಿಸಿಕೊಟ್ಟು, ಸ್ಥಳೀಯ ಆರ್ಥಿಕತೆಯನ್ನು ಹೆಚ್ಚಿಸಲು ಉತ್ತಮ ಪರಿಣಾಮ ಬೀರಿತು.
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=31236
-ಹೇಮಮಾಲಾ.ಬಿ
(ಮುಂದುವರಿಯುವುದು)
ಎಂಥಹ ನೆನಪು ನಿನ್ನದು ಗೆಳತಿ ಈ ಸ್ಥಳಗಳನ್ನು ನಾನು ನೋಡಿದ್ದರೂ ಮಂಡೆಯಲ್ಲಿ ಉಳಿದಿರುವುದು ಕೇವಲ ಒಂದೆರಡು.. ಮತ್ತೆ ನೆನಪು ಮೂಡಿ ಬರುವುದಕ್ಕೆ ಸಹಾಯ ವಾಗುತ್ತಿದೆ ನಿಮ್ಮ ಪ್ರವಾಸಿ ಲೇಖನ.ಅಭಿನಂದನೆಗಳು ಹೇಮಾ.
ಸೊಗಸಾಗಿದೆ ಪ್ರವಾಸ ಕಥನ. ಇದರಲ್ಲಿ ಬರುವ ಇತಿಹಾಸ ಸಂಬಂಧಿ ವಿಚಾರಗಳು ಕುತೂಹಲಕಾರಿಯಾಗಿವೆ.
ನಾವು ನಿಮ್ಮ ಜೊತೆ ಪ್ರವಾಸಕ್ಕೆ ಹೋಗಿ ಬಂದ ಅನುಭವ ವಂದನೆಗಳು
ಕಛ್ ನ ಐತಿಹಾಸಿಕ ಹಿನ್ನೆಲೆ ಬಹಳ ರೋಚಕವಾಗಿದೆ. ಬಹಳ ಸೊಗಸಾದ ನಿರೂಪಣೆಯ ಪ್ರವಾಸ ಕಥನ ತುಂಬಾ ಚೆನ್ನಾಗಿದೆ.
ಪ್ರವಾಸ ಕಥನ ಸೊಗಸಾಗಿದೆ.