ನಾಳೆಗಾಗಿ
ಸತ್ತ ನೆನ್ನೆಯ ಶವಗಳೆದುರಿಗೆ
ಕಣ್ಣೀರ್ಗರೆದು ನರಳಿ
ಹೊರಳಾಡುವುದೇಕೆ?
ಸತ್ತ ನೆನ್ನೆಗಳ ರಾಶಿಯಲಿ
ಜೀವಂತಿಕೆಯ ಬೆದಕಿ
ದಕ್ಕಿದ ಜೀವದ್ರವವ
ನಿರ್ಭಾವಗಳಿಗೆ ಲಸಿಕೆಯಾಗಿಸಿ
ವರ್ತಮಾನದ ಸುಳ್ಳು ಭರವಸೆ
ಪೊಳ್ಳು ಬಾಳಿನ
ಬೂಟಾಟಿಕೆಗೆ, ನಯವಂಚಕತನಕೆ
ಕೊಕ್ ಕೊಟ್ಟು ಸೆಟೆಯುವ ಬದಲಿಗೆ
ನಗುವ ಲೇಪಿಸಿಕೊಳಬಾರದೇಕೆ?
ತಾನೇ ಬಿತ್ತಿಕೊಂಡ ಬೇಗುದಿಗಳ
ಉಸಿರಗಟ್ಟಿಸಿ
ಹೆಸರಿಲ್ಲದಂತೆ ಹೆಡೆಮುರಿ ಕಟ್ಟಿ
ಮಸಣಕೆಸೆದು
ಮನೋಹರಗಳ ಮುಸುಕದೆರೆದು
ಮಾಸಿದ ಕಂದಿದ
ಕೆಂದಾವರೆಯ ಮೊಗಕೆ
ಬಾವಿಗಿಳಿದ ನಯನಗಳಿಗೆ
ಒಂದರೆಘಳಿಗೆ ಮುದವ ಸವರುವ
ಬಾರೇ…..ನೆನ್ನೆಗಳ ನನಸೇ…….
-ಬಿ.ಕೆ.ಮೀನಾಕ್ಷಿ, ಮೈಸೂರು.
ಕವನ ಚೆನ್ನಾಗಿದೆ. ಧನ್ಯವಾದಗಳು
ವಾಹ್ ಅರ್ಥಪೂರ್ಣ ವಾಗಿದೆ ಕವನ ಹೌದು ಭರವಸೆಯೇ ಬಾಳಿನ ಬೆಳಕು ಒಳ್ಳೆಯ ಸಂದೇಶ ಹೊತ್ತು ಒಡಮೂಡಿದ ಕವನ.ಚಿಂತನೆಗೆ ಹಚ್ಚುವ ಕವನ.ಅಭಿನಂದನೆಗಳು ಗೆಳತಿ ಮೀನಾ.
ನೋವು ಕೊಡುವ ವಿಚಾರಗಳನ್ನು ಮರೆತು ಸಾಗಿದಷ್ಟು ನೆಮ್ಮದಿ.
ಹೌದು. ನೋವು ತರುವ ನಿನ್ನೆಯ ನೆನಪುಗಳು ಬೇಕೆ?
ಅರ್ಥಪೂರ್ಣ ಕವನ
ಕವನಸೂಪರ್ ಅಮ್ಮಾ