ಅಸ್ಥಿಯನ್ನು ಶರೀರಸ್ಥವಾಗಿ ದಾನ ಮಾಡಿದ ದಧೀಚಿ

Spread the love
Share Button

            ಪೂರ್ವದಲ್ಲಿ ಲೋಕಕಲ್ಯಾಣಕ್ಕಾಗಿ, ಸತ್ಪುರುಷರ ರಕ್ಷಣೆಗಾಗಿ ದೇವಮಾನವರು  ತ್ಯಾಗ, ಬಲಿದಾನಗಳನ್ನು ಮಾಡುತ್ತಿದ್ದರು. ರಾಕ್ಷಸರಿಂದ, ಚೋರರಿಂದ, ದೇಶದ್ರೋಹಿಗಳಿಂದ ರಕ್ಷಿಸಲು ತಮ್ಮ ದೇಹವನ್ನೇ ಮುಡಿಪಾಗಿಸುತ್ತಿದ್ದರು. ಕೆಲವು ವೇಳೆ ಯಾವುದಕ್ಕೂ ಬಗ್ಗದ ರಾಕ್ಷಸರಿಂದ ದೇವತೆಗಳಿಗೆ ಬಹಳ ಉಪಟಳವಾಗುತ್ತಿತ್ತು. ಈ ಸಂದರ್ಭದಲ್ಲಿ ದೇವತೆಗಳ ಒಡೆಯನಾದ ದೇವೆಂದ್ರನನ್ನು ಮುಂದಿಟ್ಟುಕೊಂಡು ಬ್ರಹ್ಮನಲ್ಲಿಗೋ ವಿಷ್ಣುವಿನಲ್ಲಿಗೋ ಹೋಗಿ ಪರಿಹಾರ ಕೇಳುತ್ತಿದ್ದರು.

ಇಂತಹ ಒಂದು ಸಂದರ್ಭದಲ್ಲಿ ದೇವತೆಗಳಿಗೆ ಕಾಲ-ಕೇಯರೆಂಬ ರಾಕ್ಷಸರಿಂದ ಬಹಳ ಹಿಂಸೆ ಅನುಭವಿಸಬೇಕಾಗಿ ಬಂತು. ಅವರು ವೃತ್ರಾಸುರನೆಂಬ ಪ್ರಬಲ ರಾಕ್ಷಸನನ್ನು ಆಶ್ರಯಿಸಿ ಅವನ ಬೆಂಬಲದಿಂದ ಶಕ್ತ್ಯಾಯುಧಗಳಿಂದ ಕೂಡಿದವರಾಗಿ ಅನೇಕ, ವಿವಿಧ ಹಿಂಸೆಯನ್ನು, ತ್ರಾಸವನ್ನು ಕೊಡುತ್ತಿದ್ದರು. ಹೀಗಿರಲು ದೇವತೆಗಳು ದೇವೇಂದ್ರನನ್ನು ಮುಂದಿಟ್ಟುಕೊಂಡು ರಕ್ಷಣೆ ಒದಗಿಸಬೇಕೆಂದು ಪ್ರಾರ್ಥಿಸುವುದಕ್ಕಾಗಿ ಬ್ರಹ್ಮನಲ್ಲಿಗೆ ಹೋದರು. ಬ್ರಹ್ಮನು ಅವರನ್ನು ಬರಮಾಡಿಕೊಂಡು ಬಂದ ಕಾರ್ಯವನ್ನು ಪ್ರಶ್ನಿಸಿದನು. ದೇವತೆಗಳು ತಮಗೊದಗಿದ ಕಷ್ಟವನ್ನು ನಿವೇದಿಸಿಕೊಂಡರು. ಆಗ ಬ್ರಹ್ಮನು ಅತಿ ಭಯಂಕರವಾದ ಈ ವೃತ್ರಾಸುರನನ್ನು ಸಂಹರಿಸುವ ಬಗೆ ಹೇಗೆ ? ಎಂಬುದಾಗಿ ಚಿಂತಿಸಿದನು. ಆಗ ಬ್ರಹ್ಮನಿಗೆ ದಧೀಚಿ ಮಹರ್ಷಿ ನೆನಪಿಗೆ ಬಂದನು. ಮಹಾತ್ಮನಾದ ದಧೀಚಿ ಮಹರ್ಷಿಯು  ಬ್ರಹ್ಮಮಾನಸ ಪುತ್ರನಾದ ಅಥರ್ವಣ ಋಷಿಯ ಮಗ. ಈತನ ತಾಯಿ ಕರ್ದಮನ ಪುತ್ರಿಯಾದ ಶಾಂತಿ.  ಧೃತವ್ರತ ಮತ್ತು ಅಥರ್ವಶಿರರು. ಈತನ ಸಹೋದರರು. ಈತನ ಪತ್ನಿಯು ಪ್ರಾತೀಥ್ಯೇಯಿ. ಇವನ ಮಗ ಪಿಪ್ಪಲಾದ. ಇಂದ್ರನು ದಧೀಚಿಗೆ ಪ್ರವರ್ಗ ವಿದ್ಯೆಯನ್ನೂ ಮಧುವಿದ್ಯೆಯನ್ನೂ ಉಪದೇಶ ಮಾಡಿ ‘ಇದನ್ನು ಬೇರೆಯವರಿಗೆ ತಿಳಿಸಬಾರದು. ಒಂದು ವೇಳೆ ತಿಳಿಸಿದರೆ ನಿನ್ನ ತಲೆಯನ್ನು ಕಡಿಯುತ್ತೇನೆ’ ಎಂದನು. ಈ ವಿಷಯ ತಿಳಿದ ಅಶ್ವಿನಿ ದೇವತೆಗಳು ದಧೀಚಿಯ ತಲೆಯನ್ನು ಛೇದಿಸಿ ಇಟ್ಟು ಕುದುರೆಯ ರುಂಡವನ್ನು ಈ ಮುಂಡಕ್ಕೆ ಜೋಡಿಸಿದಧೀಚಿಗೆ ಇಂದ್ರ ಉಪದೇಶ ಮಾಡಿದ ವಿದ್ಯೆಯನ್ನು ಕಲಿತರು. ಇಂದ್ರನು ತಿಳಿದು ದಧೀಚಿಯ ತಲೆಯನ್ನು ಹಾರಿಸಿದನು. ಆಗ ಅಶ್ವಿನಿ ದೇವತೆಗಳು ಅಡಗಿಸಿಟ್ಟ ತಲೆಯನ್ನು ದಧೀಚಿಗೆ ಜೋಡಿಸಿದರು.

ದೇವತೆಗಳೆಲ್ಲ ಈತನಲ್ಲಿ ಶಸ್ತ್ರಾಸ್ತ್ರಗಳನ್ನುಅಡಗಿಸಿಟ್ಟು ಹೋದರು. ಅವರು ಅದನ್ನು ಮತ್ತೆಕೊಂಡು ಹೋಗಲು ಬಾರದೆ ಅದು ಹಾಳಾಗುವುದರಿಂದ ಅವನ್ನೆಲ್ಲ ಜಲದಲ್ಲಿ ಅಭಿಮಂತ್ರಿಸಿ ಪಾನಮಾಡಿ ತನ್ನ ಮೂಳೆಗಳಲ್ಲಿ ಶೇಖರಿಸಿಟ್ಟು ಕೊಂಡನು ದಧೀಚಿ ಮಹರ್ಷಿ. ಒಂದಷ್ಟು ಹೊತ್ತು ಯೋಚಿಸಿದ ಬ್ರಹ್ಮನು ದೇವತೆಗಳಿಗೆ ಹೀಗೆ ಹೇಳಿದನು. ಭೂಲೋಕದಲ್ಲಿ ಮಹಾತ್ಮನಾದ ‘ದಧೀಚಿ’  ಎಂಬ ಹೆಸರಿನ ಮಹರ್ಷಿಯೊಬ್ಬನಿದ್ದಾನೆ. ನೀವೆಲ್ಲರೂ ಇಂದ್ರನೊಡಗೂಡಿಕೊಂಡು ಮಹರ್ಷಿಯ ಬಳಿಗೆ ಹೋಗಿ ಮೊದಲು ಅವನಿಂದ ವರವೊಂದನ್ನು ಯಾಚಿಸಿ, ಆತನು ಸುಪ್ರೀತನಾಗಿ ನಿಮಗೆ ವರ ಕೊಡುವನು. ಒಡನೆಯೇ ಅವನನ್ನು ಮೂರು ಲೋಕಗಳಿಗೂ  ಕಲ್ಯಾಣವನ್ನುಂಟು ಮಾಡುವ ಸಲುವಾಗಿ ನಿನ್ನ ಆಸ್ಥಿಗಳನ್ನು ದಯಪಾಲಿಸಬೇಕು ಎಂದು ಪ್ರಾರ್ಥಿಸಿರಿ. ಆತನು ತಾನು ಕೊಟ್ಟ ಮಾತಿಗೆ ತಪ್ಪದೆ ನಿಮಗೆ ತನ್ನ ಮೂಳೆಗಳನ್ನು ಕೊಡಲು ಪ್ರಾಣ ತೊರೆಯುವನು.

ಅವನ ಅಸ್ಥಿಗಳಿಂದ ಬಹಳ ಶಕ್ತಿಯುತವಾದ ವಜ್ರಾಯುಧವನ್ನು ಸಿದ್ದಗೊಳಿಸಿ ಆ ವಜ್ರಾಯುಧದಿಂದಲೇ ಇಂದ್ರನು ವೃತ್ರಾಸುರನನ್ನು ಸಂಹರಿಸುವನು. ಇದುವೇ ವೃತಾಸುರನ ಮರಣದ ರಹಸ್ಯ, ಇನ್ನು ತಡಮಾಡದೆ ನಾನು ಹೇಳಿದ ರೀತಿಯಲ್ಲಿ ಕಾರ್ಯವನ್ನು ಸಾಧಿಸಿರಿ ಎಂದು ಬೀಳ್ಕೊಟ್ಟನು.

ಬ್ರಹ್ಮನಿಂದ ಈ ರೀತಿಯಾಗಿ ಆದೇಶ ಪಡೆದ ದೇವೇಂದ್ರ ಸಮೇತರಾದ ದೇವತೆಗಳು ಅಲ್ಲಿಂದ ಹೊರಟು ಶ್ರೀಮನ್ನಾರಾಯಣನನ್ನು ಸಂದರ್ಶಿಸಿ ಅವನಿಗೂ ಎಲ್ಲ ವಿಷಯಗಳನ್ನು ನಿವೇದಿಸಿ ಅವನನ್ನೆ ಮುಂದಿಟ್ಟುಕೊಂಡು ದಧೀಚಿ ಮಹರ್ಷಿಯ ಆಶ್ರಮಕ್ಕೆ ಬಂದರು. ಸರಸ್ವತೀ ನದೀತೀರದಲ್ಲಿ ದಧೀಚಿ ಮಹರ್ಷಿಯ ಆಶ್ರಮವಿತ್ತು. ಅಲ್ಲಿ ಸೂರ್ಯನ ತೇಜಸ್ಸಿಗೆ ಸಮಾನವಾದ ದಿವ್ಯ ತೇಜಸ್ಸಿನ ಮಹರ್ಷಿಯನ್ನವರು ಕಂಡರು, ಆತನ ಪಾದಾರವಿಂದಗಳಿಗೆ ನಮಸ್ಕರಿಸಿ ಬ್ರಹ್ಮನ ಆದೇಶಾನುಸಾರ ವರವನ್ನು ಕೇಳಿದರು.  ಯಾವ ವರವನ್ನಾದರೂ ಕರುಣಿಸುವನೆಂದು ದಧೀಚಿಯು ಪ್ರತಿಜ್ಞೆ ಮಾಡಿದ.ಆಮೇಲೆ ವೃತ್ರಾಸುರನ ಸಂಹಾರಕ್ಕಾಗಿ ಶರೀರಸ್ಥವಾಗಿರುವ ತಮ್ಮ ಅಸ್ತಿಯನ್ನು ದಯಪಾಲಿಸಬೇಕೆಂದು ಕೇಳಿಕೊಂಡರು.

ಆಗ ಮಹರ್ಷಿಯು ದೇವತೆಗಳಿರಾ, ಒಬ್ಬ ಘೋರ ರಾಕ್ಷಸನು ನಿರ್ನಾಮವಾಗಿ ನಿಮ್ಮೆಲ್ಲರಿಗೂ ಹಿತವನ್ನುಂಟು ಮಾಡುವುದಾದರೆ ನನ್ನ ದೇಹವನ್ನು ಈಗಲೇ ಪರಿತ್ಯಾಗ ಮಾಡುವೆನು ಎಂದು ಹೇಳಿ ತನ್ನ ಪಾರ್ಥಿವ ಶರೀರವನ್ನು ತೊರೆದನು.

ಆ ಅಸ್ಥಿಯನ್ನು ತೆಗೆದುಕೊಂಡು ದೇವತೆಗಳು ದೇವಶಿಲ್ಪಿಯಾದ ವಿಶ್ವಕರ್ಮನ ಬಳಿಗೆ ಹೋದರು. ಅಲ್ಲಿ ಆತನಿಗೂ ಬ್ರಹ್ಮನ ಆಶಯವನ್ನು ತಿಳಿಸಿದರು. ವಿಶ್ವಕರ್ಮನು ಪರಮ ಪ್ರೀತನಾಗಿ ದಧೀಚಿ ಮಹರ್ಷಿಯ ಮೂಳೆಗಳಿಂದ ಭಯಂಕರವಾದ ವಜ್ರಾಯುಧವನ್ನು ನಿರ್ಮಿಸಿದನು. ಮತ್ತೆ ದೇವೇಂದ್ರನಿಗೆ ಇಂತೆಂದನು ‘ಮಹೇಂದ್ರಾ,ಈ ದಿವ್ಯವಾದ ವಜ್ರಾಯುಧದಿಂದ ಶತ್ರುಗಳೆಲ್ಲರನ್ನೂ ನಿರ್ಮೂಲ ಮಾಡಿ ನಿನ್ನ ಅನುಯಾಯಿಗಳಾದ ದೇವತೆಗಳಿಂದ ಸ್ವರ್ಗಲೋಕವನ್ನು ಸುಖವಾಗಿ ಪರಿಪಾಲಿಸು’ ಎಂದನು.

ದೇವೆಂದ್ರನಿಗೆ ಬಹುಬೇಗ ವೃತ್ರಾಸುರನನ್ನು ಸಂಹರಿಸಲಾಗಲಿಲ್ಲ. ವ್ಯಾಕುಲಗೊಂಡ ಇಂದ್ರನು ಶ್ರೀ ಮನ್ನಾರಾಯಣನ ಮೊರೆ ಹೊಕ್ಕು ಆತನ ಬಲದ ಒಂದಂಶವನ್ನೂ ಪಡೆದುಕೊಂಡು ಹೋರಾಡಿ ಸಂಹರಿಸಿದನು. ಲೋಕ ಕಲ್ಯಾಣಾರ್ಥವಾಗಿ ತನ್ನ ದೇಹದ ಹಂಗು ತೊರೆದು ಶರೀರಸ್ಥವಾಗಿ ಪರಿತ್ಯಾಗ ಮಾಡಿದ ದಧೀಚಿ ಮಹರ್ಷಿಯು ಮೇರುರತ್ನಗಳ ಸಾಲಿನಲ್ಲಿ ಶೋಭಿಸುತ್ತಾನೆ. ಈತನ ಕಥೆಯಿಂದ ಮಾನವರ ಜೀವನದ ಸಾರ್ಥಕತೆ ಏನು ಎಂಬುದು ನಮ್ಮ ಮುಂದೆ ನಿಲ್ಲುತ್ತದೆ. ಪ್ರತಿಯೊಬ್ಬನೂ ಲೋಕಕ್ಕಾಗಿ ಬದುಕಬೇಕು. ಅಷ್ಟು ವಿಶಾಲವಾಗಿ ಅಸಾಧ್ಯವಾದರೆ ದೇಶಕ್ಕಾಗಿ, ಇಲ್ಲದಿದ್ದರೆ… ರಾಜ್ಯಕ್ಕಾಗಿ ಬೇಡ…ಊರಿಗಾಗಿ ಇನ್ನೂ ಸಂಕ್ಷಿಪ್ತವಾಗಿ ಹೇಳುವುದಿದ್ದರೆ ಕುಟುಂಬಕ್ಕಾಗಿ ತನ್ನ ವರಹಿತಕ್ಕಾಗಿಯಾದರೂ ಬದುಕು ಎಂಬ ಸಂದೇಶವನ್ನು ಈ ಕಥೆ ಸಾರುತ್ತಿದೆ.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

5 Responses

 1. Anonymous says:

  ಪ್ರಕಟಿಸಿದ ಹೇಮಮಾಲಾ ಹಾಗೂ ಓದಿದ ಸಾಹಿತ್ಯ ಪ್ರೇಮಿಗಳಿಗೆ ಎಲ್ಲರಿಗೂ ಧನ್ಯವಾದಗಳು

 2. Meghana Kanetkar says:

  ದಧೀಚಿ ಮಹರ್ಷಿಯ ಬಗ್ಗೆ ಅಜ್ಜನ ಮನೆಯಲ್ಲಿ ನಡೆಯುತ್ತಿದ್ದ ಭಾಗವತ ಸಪ್ತಾಹದಲ್ಲಿ ಕೇಳಿದ್ದೆ. ನಿಮ್ಮ ಬರಹದಲ್ಲಿ ಇನ್ನಷ್ಟು ಹೆಚ್ಚು ತಿಳಿಯಿತು.

 3. ಬಿ.ಆರ್.ನಾಗರತ್ನ says:

  ಪೌರಾಣಿಕ ಕಥೆಗಳನ್ನು ಚೆಂದವಾಗಿ ಚೌಕಟ್ಟಿನಲ್ಲಿ ಕಟ್ಟಿಕೊಡುವ ನಿಮ್ಮ ಬರವಣಿಗೆ ಗೆ ನನ್ನದೊಂದು ನಮನ ಮೇಡಂ.

 4. ನಯನ ಬಜಕೂಡ್ಲು says:

  ಕತೆಯನ್ನು ಮೊದಲು ಕೇಳಿದ್ದರೂ ಇಲ್ಲಿ ಅಪರೂಪದ ಮಾಹಿತಿಗಳು ದೊರೆತವು.

 5. ಶಂಕರಿ ಶರ್ಮ says:

  ನಮ್ಮ ಪುರಾಣದಲ್ಲಿರುವ ರೋಚಕ ಕಥೆಗಳು ನಿಜಕ್ಕೂ ಅದ್ಭುತ! ಸೊಗಸಾದ ಕಥೆಯೊಂದರ ನಿರೂಪಣೆ ಬಹಳ ಚಂದ ಇದೆ ವಿಜಯಕ್ಕ..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: