ಹೂವೇ ಈ ಲೇಖನಕೆ ಸ್ಫೂರ್ತಿ!
ಹೂವುಗಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ಹೆಂಗಳೆಯರಿಗೆ ಹೂವುಗಳೆಂದರೆ ಅತೀವ ಪ್ರೀತಿ. “ಹೂವು ಚೆಲುವೆಲ್ಲಾ ತಂದೆಂದಿತು, ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಿತು” ಎಂಬ ಹಾಡೇ ಇದೆಯಲ್ಲವೇ? ನೋಡುಗರ ಕಣ್ಣುಗಳಿಗೆ ಸೌಂದರ್ಯ ಉಣಬಡಿಸುವ ಹೂವುಗಳ ವೈವಿಧ್ಯ ಲೋಕವೇ ಇದೆ. ಕೆಲವು ಹೂವುಗಳು ಬಣ್ಣ ಮಾತ್ರದಿಂದ ಗಮನ ಸೆಳೆದರೆ, ಇನ್ನು ಕೆಲವು ಹೂವುಗಳು ತಮ್ಮ ಸುವಾಸನೆಯಿಂದ ನಮ್ಮನ್ನು ಆಕರ್ಷಿಸುತ್ತವೆ. ಇನ್ನು ಕೆಲವು ಹೂಗಳು ಬಣ್ಣ ಹಾಗೂ ಸುವಾಸನೆ ಎರಡರಿಂದಲೂ ನಮಗೆ ಪ್ರಿಯವಾಗುವುದು. ವಿವಿಧ ಬಣ್ಣದ ಹೂವುಗಳನ್ನು ಬಿಡಿಯಾಗಿ ಅಥವಾ ಹಾರ ಕಟ್ಟಿ ದೇವರ ಪೂಜೆಗೆ ಉಪಯೋಗಿಸುವರು. ಶುಭ ಸಮಾರಂಭಗಳಲ್ಲಿ ಹೂವುಗಳು ಬೇಕೇ ಬೇಕು. ಹಾಗೆಯೇ ಮೃತರಿಗೆ ಅಂತಿಮ ನಮನ ಸಲ್ಲಿಸುವುದೂ ಕೂಡಾ ಹೂವುಗಳಿಂದಲೇ. ಅಭಿನಂದನೆ ಸಲ್ಲಿಸಲು, ಗೌರವ ಅರ್ಪಿಸಲು, ಪ್ರೀತಿ ವ್ಯಕ್ತಪಡಿಸಲು ಕೂಡಾ ಬಳಸುವುದು ಹೂವುಗಳನ್ನೇ! ಹೂವುಗಳು ಬೆಸೆವ ಭಾವ ಬಂಧಗಳಿಗೆ ಎಣೆಯಿಲ್ಲ. ಹೂವುಗಳ ಲೋಕದ ಬಗ್ಗೆ ಬರೆದು ಮುಗಿಸಲು ಸಾಧ್ಯವೇ? ನಾನೇನು ಹೇಳ ಹೊರಟಿದ್ದೇನೆ ಅನ್ನುವುದನ್ನು ನೀವೇ ಓದಿ ನೋಡಿ.
ಕೆಲವು ವರ್ಷಗಳ ಹಿಂದೆ ದೊಡ್ಡಮ್ಮನ ಮನೆಗೆ ಹೋಗಿದ್ದಾಗ ಅವರ ಮನೆಯಂಗಳದ ಬದಿಯಲ್ಲಿ ತನ್ನೊಡಲ ತುಂಬಾ ಅಚ್ಚ ಬಿಳಿಯ ಹೂವುಗಳನ್ನು ತುಂಬಿಕೊಂಡ ಕಾಕಡಾ ಮಲ್ಲಿಗೆ ಗಿಡ ನನ್ನ ಮನ ಸೆಳೆಯಿತು. ಆ ಗಿಡದ ಒಂದು ಗೆಲ್ಲು ತಂದು ಮನೆಯ ಕೈತೋಟದಲ್ಲಿ ನೆಟ್ಟಿದ್ದೆ. ಕೆಲವೇ ಸಮಯದಲ್ಲಿ ಹುಲುಸಾಗಿ ಬೆಳೆದು ಹೂವುಗಳನ್ನು ನೀಡಲಾರಂಭಿಸಿದ ಗಿಡ ಪ್ರತಿವರ್ಷವೂ ಹೂವುಗಳನ್ನು ಬಿಡುವ ಕಾಯಕ ಮುಂದುವರಿಸಿದೆ. ದೇವರ ಪೂಜೆಗೆ ಬೇಕಾದಷ್ಟು ಹೂವು ಸಿಗುವ ಖುಷಿ. ನನಗೋ ಹೂವುಗಳನ್ನು ಮುಡಿಯುವುದೆಂದರೆ ತುಂಬಾ ಖುಷಿ. ಇತ್ತೀಚಿನ ದಿನಗಳಲ್ಲಿ ಹೂವು ಮುಡಿಯುವವರ ಸಂಖ್ಯೆ ಕಡಿಮೆಯೇ. ಹೂವು ಮುಡಿಯುವ ಕಾರಣ “ಈ ಮೇಡಂ ತೀರಾ ಸಂಪ್ರದಾಯಸ್ಥರಿರಬೇಕು” ಅಂತ ಅನ್ನಿಸಿಕೊಂಡದ್ದೂ ಇದೆ. ಆ ಮಾತಂತಿರಲಿ. ಗಿಡದ ತುಂಬಾ ಕಾಕಡಾ ಮಲ್ಲಿಗೆ ಹೂವುಗಳಿದ್ದಾಗ, ಮಾಲೆ ಕಟ್ಟಿ ಮುಡಿದು ಸಂಭ್ರಮಿಸುತ್ತೇನೆ. ಸಮಯ ಸಿಕ್ಕಿದರೆ, ನನ್ನ ವಿಭಾಗದಲ್ಲಿರುವವರಿಗೂ ಮಾಲೆ ತಂದು ಕೊಡುವುದೂ ಖುಷಿಯೇ ನನಗೆ. ಜೀವನದ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸುವುದರಲ್ಲಿ ತಪ್ಪಿಲ್ಲ ತಾನೇ?
ಕಾಕಡಾ ಮಲ್ಲಿಗೆ ಹೂವಿನ ಮಾಲೆ ಮುಡಿದಾಗಲೆಲ್ಲಾ ಹೆಚ್ಚಿನವರು ಕೇಳುವ ಪ್ರಶ್ನೆ-“ನಿಮ್ಮ ಮನೆಯಲ್ಲಿಯೇ ಆದದ್ದಾ?”. ಯುವ ಸಹೋದ್ಯೋಗಿಗಳ ಪ್ರಶ್ನೆ-“ನೀವೇ ಕಟ್ಟಿದ್ದಾ? ನಿಮಗೆ ಹೂವು ಕಟ್ಟಲು ಗೊತ್ತಿದೆಯಾ?”. “ನಿಮಗೆ ಮಾಲೆ ಕಟ್ಟಲು ಯಾವಾಗ ಸಮಯ ಸಿಗುತ್ತದೆ?” ಅಂತ ಕೆಲವರ ಪ್ರಶ್ನೆ. ಇನ್ನೊಬ್ಬರು ಸಹೋದ್ಯೋಗಿ “ನಮ್ಮ ಮನೆಯಲ್ಲೂ ಈ ಹೂವುಗಳಿವೆ. ದೇವರಿಗೆ ಮಾತ್ರ ಇಡುತ್ತೇನೆ” ಅಂದರೆ ಇನ್ನೊಬ್ಬ ಸಹೋದ್ಯೋಗಿ “ತಲೆಗೆ ಮುಡಿದರೆ ಚಂದ ಕಾಣುತ್ತದೆ ಅಲ್ವಾ? ನಾನು ಮಾಲೆ ಕಟ್ಟಿ ದೈವಕ್ಕೆ ಕೊಡುತ್ತೇನೆ” ಅನ್ನುತ್ತಿದ್ದರು. ಹೂವುಗಳು ಹೇರಳವಾಗಿ ಸಿಗುವಾಗ ದಿನಾಲೂ ಮಾಲೆಯಾಗಿಸಿ ಮುಡಿಯುವ ನನ್ನ ಹೆಸರು ಗೊತ್ತಿಲ್ಲದ ವಿದ್ಯಾರ್ಥಿಗಳು “ತಲೆಗೆ ಹೂವಿಡುವ ಮೇಡಂ” ಅಂತ ಗುರುತಿಸುವರೆಂದು ನನಗೆ ಇತ್ತೀಚೆಗೆ ಗೊತ್ತಾಯಿತು. ಒಂದು ದಿನ ಹೂವು ಮುಡಿಯದಿದ್ದರೂ, “ಮೇಡಂ, ಇವತ್ತೇನು ಹೂವು ಮುಡಿದಿಲ್ಲ?” ಅಂತ ಕೇಳುವ ವಿದ್ಯಾರ್ಥಿಗಳೂ ಇದ್ದಾರೆ.
ನನ್ನ ಕಿರಿಯ ಸಹೋದ್ಯೋಗಿಯೊಬ್ಬರು ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು. “ಮನೆಯಲ್ಲಿ ಬೆಳೆದ ಹೂವುಗಳಲ್ಲವೇ? ಮಾಲೆ ಕಟ್ಟಿ ಕೊಟ್ಟರೆ ಖಂಡಿತಾ ಬೇಡ ಅನ್ನಲಾರರು” ಅನ್ನುವ ನಂಬಿಕೆಯೊಡನೆ ಅವರಿಗೆ ಒಂದು ದಿನ ಕಾಕಡಾ ಮಲ್ಲಿಗೆ ಹೂವಿನ ಮಾಲೆ ತಂದು ಕೊಟ್ಟೆ. ಅವರಂತೂ ವಿಪರೀತ ಖುಷಿಪಟ್ಟು “ಮೇಡಂ, ನನಗೊಂದು ಹೆಣ್ಣು ಮಗುವಾಗಲಿ ಅಂತ ಆಶೀರ್ವಾದ ಮಾಡಿ. ಮೊದಲಿನದು ಗಂಡು ಮಗು. ಈ ಸಲವಾದರೂ ಹೆಣ್ಣು ಮಗು ಆಗಬೇಕು ಅಂತ ಆಸೆ ನನಗೆ” ಅಂದರು. ಅವರ ಆಸೆ ನೆರವೇರಿದ್ದು ನಿಜವಾಗಿಯೂ ಸಂತಸದ ವಿಷಯ.
ಕಾಲೇಜಿನ ಕಛೇರಿಯಲ್ಲಿ ಕಾರ್ಯ ನಿರ್ವಹಿಸುವ ಒಬ್ಬರು ಕಿರಿಯ ಸಹೋದ್ಯೋಗಿಯಂತೂ ಒಂದು ದಿನ “ಮೇಡಂ, ನನಗೊಂದು ದಿನ ಹೂವುಗಳನ್ನು ತಂದುಕೊಡುವಿರಾ? ಮಾಲೆ ನಾನೇ ಕಟ್ಟುತ್ತೇನೆ” ಅಂತ ಸಂಕೋಚ ಬಿಟ್ಟು ಕೇಳಿಯೇ ಬಿಟ್ಟರು. “ಅದಕ್ಕೇನಂತೆ, ತಂದುಕೊಡುವೆ” ಅಂದೆ ನಾನು. ಮರುದಿವಸ ಮಾಲೆ ತಂದು ಕೊಟ್ಟಾಗ, ತುಂಬಾ ಖುಷಿ ಪಟ್ಟರು.
“ಮೇಡಂ, ನಿಮ್ಮ ಹತ್ತಿರ ಒಂದು ಸಣ್ಣ ರಿಕ್ವೆಸ್ಟ್. ನನಗೂ ಒಂದು ಗಿಡ ತಂದು ಕೊಡಬಹುದೇ?” ಅಂತ ಇನ್ನೊಬ್ಬರ ಬೇಡಿಕೆ.
ಪ್ರೀತಿಸಲು ಕಾರಣವು ಬೇಕಿಲ್ಲವಂತೆ. ಹಾಗೆ ಇದ್ದುದರಲ್ಲಿಯೇ ಖುಷಿ ಪಡಲು ಸಣ್ಣ ಸಣ್ಣ ಕಾರಣಗಳೂ ಕಾರಣವಾಗುತ್ತವೆ. ಉಳಿದವರಿಗೆ ನಗಣ್ಯ ಅನ್ನುವಂತಹ ವಿಷಯಗಳಲ್ಲೂ ಖುಷಿಪಡಲು ಸಾಧ್ಯ ಅಂತ ಅರಿವಾದದ್ದು ವಾಟ್ಸಾಪ್ ಸ್ಟೇಟಸ್ ಹಾಗೂ ಮುಖಪುಟದ ಪೋಸ್ಟುಗಳ ಮೂಲಕ. ಒಂದು ದಿನ ಕಾಕಡಾ ಮಲ್ಲಿಗೆಯ ದೊಡ್ಡ ಗೊಂಚಲೊಂದರ ಚಿತ್ರದ ಜೊತೆ “ಹಲವು ಸೋದರರೆನಗೆ” ಅಂತ ಶಿರೋನಾಮೆ ಹಾಕಿದ ಚಿತ್ರವನ್ನು ವಾಟ್ಸಾಪ್ ಸ್ಟೇಟಸಿನಲ್ಲಿ ಹಾಕಿದಾಗ, ಮೆಚ್ಚುಗೆಯ ಮಹಾಪೂರವೇ ಹರಿದು ಬಂತು. “ಗಿಡದೊಡಲ ತುಂಬಾ ಅರಳಿದ ಹೂಗಳು” ಅನ್ನುವ ಶಿರೋನಾಮೆಯ ಚಿತ್ರಕ್ಕೂ ಹಲವರ ಮೆಚ್ಚುಗೆಭರಿತ ಪ್ರತಿಕ್ರಿಯೆಗಳು ಹರಿದು ಬಂದವು.
ಈ ಹೂವಿನ ಮಾಲೆ ಮುಡಿದುದೇ ಕಾರಣವಾಗಿ ಬೆಸೆದ ಭಾವಬಂಧಗಳಿಗೆ ಅಕ್ಷರ ರೂಪ ಕೊಡುವ ಮನಸ್ಸಾಯಿತು. ಪ್ರತಿ ದಿನವೂ ಮುಡಿದ ಕಾಕಡಾ ಮಲ್ಲಿಗೆ ಹೂವಿನ ಮಾಲೆ “ಹೂವೊಂದು, ಭಾವ ಹಲವು” ಅನ್ನುವ ಜೊತೆಗೆ ಹೂವಿನ ಸೌಂದರ್ಯದ ಮಹಾನ್ ಶಕ್ತಿಯ ಪರಿಚಯ ಮಾಡಿಸಿತು.
-ಡಾ. ಕೃಷ್ಣಪ್ರಭ ಎಂ, ಮಂಗಳೂರು
ನಮಸ್ಕಾರ, ಹೂವಿನ ಭಾವಲಹರಿ ಓದುತ್ತಾ
ನನ್ನ ಬಾಲ್ಯದ ಲೋಕ ನೆನಪಾಯಿತು,ನಿಮ್ಮ ಹಾಗೇ ಮದುವೆಗೆ ಮುಂಚೆ ನನ್ನ ಮುಡಿಯಲ್ಲಿ ಒಂದು ದಿನವೂ ಹೂವಿನ ಮಾಲೆ ತಪ್ಪಿರಲಿಲ್ಲ,,ಎಲ್ಲಾ ಬಗೆಯ ಹೂಗಳನ್ನು ಕಟ್ಟಿದ್ದೇನೆ,ಮುಡಿದಿದ್ದೇನೆ,,,ದೇವರ ಗುಡಿಗೆ ಹೋಗಿ ಕೊಟ್ಟಿದ್ದೇನೆ,,,ಸೊಗಸಾದ ಸುಂದರ ಭಾವಲಹರಿಯ ಬರಹ ಮೇಡಂ,, ಧನ್ಯವಾದಗಳು
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮಂತೆಯೇ ನಾನೂ ಸಹಾ ಎಲ್ಲಾ ಹೂವುಗಳನ್ನು ಮುಡಿದಿದ್ದೇನೆ. ಹೂವು ಮುಡಿಯುವುದು ಇಷ್ಟ.
ನಂಗೆ ನಿಮ್ಮ ಲೇಖನ ತುಂಬಾ ಇಷ್ಟ ಆಯ್ತು.ಹೂ ಮುಡಿಯುವುದು ಎಂದರೆ ನಂಗೂ ಇಷ್ಟ..ದಿನಾ ಬ್ಯಾಂಕಿಗೆ ಹೋಗುವಾಗ ತಲೆಯಲ್ಲಿ ಒಂದು ಹೂವಾದರೂ ಸಿಕ್ಕಿಸುತ್ತಿದ್ದೆ.ಒಂದು ದಿನ ಇಲ್ಲದಿದ್ದರೆ ” ಇದೇನು ಇವತ್ತು ನಿಮ್ಮ ತಲೆಲಿ ಹೂವಿಲ್ಲ” ಅಂತ ಫ್ರೆಂಡ್ಸ್ ಕೇಳುವಷ್ಟು.ಸೇವಂತಿಗೆಯಾದರೆ ದಿನಾ ಒಂದೊಂದು..
ಹೂವು ಮುಡಿದಾಗ, ಅದರ ಸೌಂದರ್ಯವೂ ಹಲವರ ಗಮನ ಸೆಳೆಯುವುದಂತೂ ನಿಜ. ಕೆಲವೊಮ್ಮೆ ಕೆಲವು ಹೂವುಗಳ ಗಾಢ ಪರಿಮಳ ಕೆಲವರಿಗೆ ತಲೆನೋವು ತರಿಸುವುದೂ ಉಂಟು. ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು
ಬದುಕಲ್ಲಿ ಖುಷಿಯಾಗಿ ಇರುವ ಬಗೆಯನ್ನು ಲೇಖನದಲ್ಲಿ ಬಹಳ ಸೊಗಸಾಗಿ ಹೂವಿನಷ್ಟೇ ಅಂದವಾಗಿ ಹೇಳಿದ್ರಿ ಮೇಡಂ.
ಪ್ರೀತಿಯ ಪ್ರತಿಕ್ರಿಯೆಗೆ ಮನ ತುಂಬಿ ಬಂತು ನಯನ. ಚಿಕ್ಕ ಚಿಕ್ಕ ಖುಷಿಯನ್ನು ಅನುಭವಿಸುವುದರಿಂದ ಬದುಕಿನಲ್ಲಿ ಉತ್ಸಾಹ ಜಾಸ್ತಿ ಆಗುವುದು
ಹೂವಿನ ಬಗೆಗೆ ಬರೆದಿರುವ ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ.ನನ್ನನ್ನು ಬಾಲ್ಯದ ನೆನಪನಂಗಳಕ್ಕೆ ಕರೆದುಕೊಂಡು ಹೋಯಿತು.ಚಿಕ್ಕಂದಿನಲ್ಲಿ ದಟ್ಟವಾದ ಕೇಶರಾಶಿ ಹೊಂದಿದ್ದ ನನಗೆ ನನ್ನ ಹೆತ್ತಮ್ಮ ಎರಡು ಜಡೆ ಹೆಣೆದು ಬಾರದಂತೆ ಮುಗಿಸುತ್ತಿದ್ದರು.ಅದೂ ನಮ್ಮ ಹಿತ್ತಲಿನ ಅಂಗಳದಲ್ಲಿದ್ದು ಕಾಕಡ ಕನಕಾಂಬರಿ ಸೇರಿಸಿ ಕಟ್ಟಿದ್ದು.ಈಗಲೂ ಹೊವೆಂದರೆ ಬಹಳ ಇಷ್ಟ ಆದರೆ ಅಷ್ಟು ದಟ್ಟ ಕೇಶವಿಲ್ಲ.ಒಟ್ಟಿನಲ್ಲಿ ಹಿರಿಯರು ಹೇಳುವಂತೆ ಹೂ ಹಂಚಿಮುಡಿ ಹಣ್ಣು ಕೊಟ್ಟು ತಿನ್ನು ಅಂತ.ಅಭಿನಂದನೆಗಳು ಮೇಡಂ.
ಹೌದು, ಕಾಕಡಾ ಮತ್ತು ಕನಕಾಂಬರ ಹೂವು ಸೇರಿಸಿ ಕಟ್ಟಿದರೆ, ಮಾಲೆಯ ಅಂದ ಹೆಚ್ಚುವುದು. ಪ್ರೀತಿಯ ಪ್ರತಿಕ್ರಿಯೆಗೆ ಧನ್ಯವಾದಗಳು
ಹೂವಿನ ಬಗ್ಗೆ ಚೆನ್ನಾಗಿ ವಿವರಿಸಿದಿರಿ ಪ್ರಭಾ ರವರೇ..
ನಿಮ್ಮ ಆಪ್ತ ಪ್ರತಿಕ್ರಿಯೆಗೆ ಧನ್ಯವಾದಗಳು ಅಕ್ಕ
ಹೂವಿನ ಬಗ್ಗೆ ಬರೆದುದು ಖುಷಿ ಆಯಿತು.ನಾನು ಹೂ ಮುಡಿಯದೇ ಎಲ್ಲೂ ಹೊರಡುವುದು ಕಡಿಮೆ.ನನ್ನ ಮಕ್ಕಳೂ ಅದೇ ರೀತಿ.ಕೋಲೇಜ್ಗೆ ಹೋಗುವಾಗ ಹೂಮುಡಿಯದೇ ಹೋಗ್ತ್ತಿರಲಿಲ್ಲ.
ಹೌದು, ಹೂವು ಇಟ್ಟರೆ ಅದೇನೋ ಖುಷಿ ಮನಸ್ಸಿಗೆ. ಮನೆಯಲ್ಲರಳುವ ಹೂವುಗಳನ್ನು ಮಾಲೆಯಾಗಿಸುವುದೂ ಇಷ್ಟದ ಕೆಲಸವೇ. ಪ್ರೀತಿಯ ಪ್ರತಿಕ್ರಿಯೆಗೆ ಮನದಾಳದ ವಂದನೆಗಳು ಅಕ್ಕ
ವಾಹ್.. ಶಾಲೆಗೆ ಹೋಗುವಾಗ ಇದ್ದ ಬದ್ದ ಹೂಗಳನ್ನೆಲ್ಲಾ ಮುಡಿಯುತ್ತಿದ್ದ ನನಗೆ ಈಗಲೂ ಹೂ ಮುಡಿಯಲು ಆಸೆ. ಹೆಲ್ಮೆಟ್ ನಿಂದಾಗಿ ನಿರಾಸೆಯಾದರೂ ಬಿಡುವುದಿಲ್ಲ. ಬ್ಯಾಗಲ್ಲಿ ಇರಿಸಿಕೊಂಡು, ಇಳಿದಮೇಲೆ ಮುಡಿಯುವೆ..ಹೇಗಿದೆ ನನ್ನ ಐಡಿಯಾ? ಹೂವಿನಷ್ಟೇ ಚಂದದ ಲೇಖನ.
ವಾವ್, ಒಳ್ಳೆ ಐಡಿಯಾ.. ಅಂತೂ ಹೂವು ನಳನಳಿಸಬೇಕು ಅಲ್ಲವೇ ಶಂಕರಿ ಅಕ್ಕ? ಹೂಗಳ ಹಾಗೂ ಹೂಮಾಲೆಯ ಜೊತೆ ಒಡನಾಟ ಮನಸ್ಸಿಗೆ ಹಿತ ನೀಡುವುದು. ಪ್ರತಿಕ್ರಿಯೆಗೆ ವಂದನೆಗಳು
ಹೂವಿನ ಬಗ್ಗೆ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ..
ನಾನೂ ಶಾಲೆಗೆ ಹೋಗುವಾಗ ಪ್ರತಿದಿನ ಹೂ ಮುಡಿಯುತ್ತಿದ್ದೆ..ನನಗೆ “ಮಲ್ಲಿಗೆ ಅಕ್ಕ ” ಎಂದೇ ಕರೆಯುತ್ತಿದ್ದರು..ನಿಮ್ಮ ಲೇಖನ ಬಾಲ್ಯದ ನೆನಪನ್ನು ಮರುಕಳಿಸಿತು.