ಸವಿಯಾದ ಸುರಹೊನ್ನೆ
ದೂರವಾಣಿ ಇಲಾಖೆಯಲ್ಲಿ ವೃತ್ತಿಪರಳಾಗಿದ್ದು ಅಲ್ಲಿಂದ ನಿವೃತ್ತಳಾದ ಬಳಿಕ ಏನು ಮಾಡಬೇಕೆಂದು ತೋಚಲಿಲ್ಲ. ನಮ್ಮ ಗೆಳತಿ ಹೇಮಮಾಲಾರು, ತಾವು ಉದ್ಯೋಗದಲ್ಲಿದ್ದ ಅಂತರಾಷ್ಟ್ರೀಯ ಕಂಪೆನಿಯಿಂದ ಸ್ವಯಂನಿವೃತ್ತಿ ಪಡೆದ ಬಳಿಕ ಪ್ರವೃತ್ತಿಯಾಗಿ ಅವರಿಷ್ಟದ “ಸುರಹೊನ್ನೆ” ಎಂಬ ಅಂತರ್ಜಾಲ ಪತ್ರಿಕೆಯೊಂದನ್ನು ನಡೆಸುತ್ತಿರುವ ಬಗ್ಗೆ ತಿಳಿಸಿದರು. ಅದರಲ್ಲಿ, ಆರಂಭಿಕ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ, ಬರೆಯುವ ಹವ್ಯಾಸವಿರುವ ಎಲ್ಲರಿಗೂ, ಎಲ್ಲಾ ತರಹದ ಸದಭಿರುಚಿ ಲೇಖನ, ಕವನಗಳನ್ನು ಕಳುಹಿಸುವಂತೆ ಆಹ್ವಾನಿಸುತ್ತಿದ್ದರು. ಪ್ರಕಟವಾದ ಬರಹಗಳು ಓದುಗರಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವುಗಳ ಜೊತೆಗೆ ಸೂಕ್ತ ಚಿತ್ರಗಳ ಅಳವಡಿಕೆ ಇವರ ಹೆಗ್ಗಳಿಕೆ.
ಹಾಗೆಯೇ ನನಗೂ ಏನಾದರೂ ಬರೆದು ಕಳುಹಿಸುವಂತೆ ಉತ್ತೇಜಿಸುವುದರ ಜೊತೆಗೆ ಸೂಕ್ತ ಸಲಹೆಗಳನ್ನೂ ಇತ್ತರು. ನನ್ನ ಮೊತ್ತ ಮೊದಲ ಲೇಖನವು 2015ರ ಅಕ್ಟೋಬರದಲ್ಲಿ “ಸುರಹೊನ್ನೆ”ಯಲ್ಲಿ ಪ್ರಕಟವಾಯಿತು. ಅದು ಅಲ್ಪ ಸ್ವಲ್ಪ ಬರೆಯುವ ಹವ್ಯಾಸಕ್ಕೂ ನಾಂದಿಯಾಗಿ, ನನ್ನ ನೂರಾರು(106) ಬರಹ, ಕವನ,ಪ್ರವಾಸ ಕಥನ ಇತ್ಯಾದಿಗಳು ಸಹೃದಯಿ ಓದುಗರನ್ನು ತಲಪಲು ಕಾರಣವಾಯಿತು. ಈ ಸಲದ ಹೊಸ ವರ್ಷದ ಕೊಡುಗೆಯಾಗಿ ‘ಸುರಹೊನ್ನೆಯ ಸಿರಿ’ ಮತ್ತು ‘ಸುರಹೊನ್ನೆಯ ಸುರಭಿ’ ಅಭಿನಂದನಾ ಪತ್ರಗಳನ್ನು ಸೂಕ್ತ ಲೇಖಕರಿಗೆ ನೀಡುವುದರ ಮೂಲಕ ಅವರನ್ನು ಪ್ರೋತ್ಸಾಹಿಸಿರುವುದು ನಿಜಕ್ಕೂ ಅಭಿನಂದನೀಯ. ಈ ಅಭಿನಂದನಾ ಪತ್ರಗಳನ್ನು ಪಡೆಯುವ ಭಾಗ್ಯ ನನ್ನದಾಗಿರುವುದು ನಿಜಕ್ಕೂ ನನ್ನ ಬರವಣಿಗೆಯ ಪಯಣದಲ್ಲಿ ಅತ್ಯಂತ ಆನಂದದ ವಿಷಯ.
. ಲೇಖನಗಳ ವಿವಿಧತೆಯನ್ನು ಕಾಪಾಡಲು ಹಾಗೂ ಓದುಗರಿಗೆ ಅನುಕೂಲವಾಗುವಂತೆ ಬೊಗಸೆಬಿಂಬ, ಲಹರಿ, ಬೆಳಕು-ಬಳ್ಳಿ, ಪಯಣ, ಪುಸ್ತಕ ಪರಿಚಯ, ವ್ಯಕ್ತಿಪರಿಚಯ, ಸೂಪರ್ ಪಾಕ, ಯೋಗ, ಆರೋಗ್ಯ, ಇಂಚರ ಮುಂತಾದ ವೇದಿಕೆಗಳ ಬೆಳಕಿಂಡಿಗಳನ್ನು ಲಗತ್ತಿಸುವುದರ ಜೊತೆಗೆ ಪತ್ರಿಕೆಯ ಸಂಪಾದಕಿಯಾಗಿ ಅದರ ಅಂದವನ್ನು ಹೆಚ್ಚಿಸಿದ್ದಾರೆ. ಓದುಗ ಬಂಧುಗಳ ಮೆಚ್ಚುಗೆ, ಅಭಿಪ್ರಾಯ, ಸಲಹೆ ಸೂಚನೆಗಳಿಗೆ ಆದ್ಯತೆಯನ್ನು ನೀಡಿ ಈ ಸುರಗಿಮಾಲೆಯು ತನ್ನ ಸುಗಂಧವನ್ನು ಎಲ್ಲೆಲ್ಲೂ ಹರಡುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಇದೆಲ್ಲದರ ಜೊತೆಗೆ ಈ ಅಂತರ್ಜಾಲ ಪತ್ರಿಕೆಯ ನಿರ್ವಹಣೆಯ ವೆಚ್ಚವನ್ನು ತಮ್ಮ ಕೈಯಿಂದಲೇ ವ್ಯಯಿಸಿಕೊಂಡು, ಯಾವುದೇ ಆದಾಯವನ್ನು ಇದರಿಂದ ನಿರೀಕ್ಷಿಸದೆ, ತಮ್ಮ ಮನಃತೃಪ್ತಿಗೋಸ್ಕರ ಮಾತ್ರ ಕಳೆದ ಆರು ವರ್ಷಗಳಿಂದ ಎಡೆಬಿಡದೆ ನಿರ್ವಹಿಸಿಕೊಂಡು ಬಂದಿರುವುದು ಬಹು ಪ್ರಶಂಸನೀಯ ಹಾಗೂ ಅವರ ಸಹೃದಯತೆಗೆ ಸಾಕ್ಷಿಯಾಗಿರುತ್ತದೆ. ಪ್ರತೀ ಗುರುವಾರದಂದು “ಸುರಹೊನ್ನೆ”ಯಲ್ಲಿ ಹೊಸ ಲೇಖನಗಳ ಪ್ರಕಟಣೆ ಹಾಗೂ ಫೇಸ್‌ಬುಕ್‌ನಲ್ಲಿ “ಸುರಹೊನ್ನೆ ಲೇಖಕ ವಾಚಕರ ಬಳಗ” ವೆಂಬ ಗುಂಪನ್ನು ನಿರ್ವಹಿಸುತ್ತಾ ಅದರಲ್ಲಿಯೂ ಆ ಲೇಖನಗಳನ್ನು ಪ್ರಕಟಿಸಿ ಲೇಖನಗಳು ಹೆಚ್ಚು ಹೆಚ್ಚು ಓದುಗರನ್ನು ತಲಪಲು ಕಾರಣರಾಗಿರುತ್ತಾರೆ.
. ಈ ಕ್ಷೇತ್ರದಲ್ಲಿ ಬರಬಹುದಾದಂತಹ ಯಾವುದೇ ತೊಂದರೆಗಳನ್ನು ನಿವಾರಿಸಿಕೊಳ್ಳುತ್ತಾ, ಈ ಅಂತರ್ಜಾಲ ಪತ್ರಿಕೆಯನ್ನು ಎಡೆಬಿಡದೆ ನಡೆಸುತ್ತಾ, ಇದೀಗ ಏಳನೇ ವಸಂತದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಈ ಪುಟ್ಟ ಕಂದ, ನಮ್ಮೆಲ್ಲರ ಪ್ರೀತಿ, ಅಭಿಮಾನದ ‘ಸುರಹೊನ್ನೆ’ಯು ಬೆಳೆದು ನಾಡಿನಾದ್ಯಂತ ಕೀರ್ತಿ ತುಂಬಿ ಬೆಳಗಲೆಂದು ನಾವೆಲ್ಲರೂ ಆಶಿಸೋಣ.
ನನ್ನ ಪ್ರೀತಿಯ ಸುರಹೊನ್ನೆ ಬಳಗಕ್ಕೆ ಶುಭ ಹಾರೈಕೆಗಳು…..
‘ಸು’ರಗಿ ಸೌರಭವನು ತಾನು ಹರಡುತ
‘ರ’ಸಯುತ ಲೇಖನಗಳನು ಸದಾ ಪ್ರಕಟಿಸುತ
‘ಹೊನ್ನೆ’ಯ ಮರದಂತೆ ಸಕಲರಿಗಾಶ್ರಯ ನೀಡುತ
‘ಬಳಗ’ ಬೆಳಗುತಿರಲಿ ಬಾನೆತ್ತರ ಬೆಳೆಯುತ
-ಶಂಕರಿ ಶರ್ಮ, ಪುತ್ತೂರು.
ಬಹಳ ಚಂದ ಹೇಳಿದ್ರಿ ಮೇಡಂ, ಸುರಹೊನ್ನೆಯ ಬಗ್ಗೆ, ಹೇಮಕ್ಕನ ಬಗ್ಗೆ.
ಧನ್ಯವಾದಗಳು ನಯನಾ ಮೇಡಂ.
ಈ ಪ್ರೀತಿಗೆ, ಅಭಿಮಾನಕ್ಕೆ ಅಭಾರಿ.ನಮ್ಮ ಶ್ರಮ ಸಾರ್ಥಕವಾಯಿತು.
ಹೃತ್ಪೂರ್ವಕ ನಮನಗಳು.
ಓದುತ್ತಾ ಖುಷಿಯಾಯಿತು ಮೇಡಂ ಚಂದ ಬರೆದಿದ್ದೀರಿ
ತಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ಮೇಡಂ.