ಹುಬ್ಬಳ್ಳಿ ಪರಿಚಯ

Share Button

ನಮಸ್ಕಾರ್ರಿ ಬರ್ರಿ ಬರ್ರಿ ತಣ್ಣ ನೀರ ಅದಾವ ತೊಗೊರಿ ಕೈಕಾಲ ಮಾರಿ ತೊಕ್ಕೊರಿ ಬಿಸಲಾಗ ಬಂದೀರಿ. ಕುಂದರ್ರಿ ಆರಾಮ ಮಾಡ್ರಿ. ಚಹಾ ಕುಡಿತಿರೇನು?

ಕೇಳೊದೇನ ಬಂತು ನಮ್ಮ ಹುಬ್ಬಳ್ಳಿಗ ಬಂದಮ್ಯಾಲ ಚಹಾ ಕುಡಿಯಾಕಬೇಕ… ಮತ್ತ ಬರೆ ಚಹಾ ಅಷ್ಟ ಅಲ್ಲ ಬಿಸಿ ಬಿಸಿ ಚಹಾದ ಜೋಡಿ ಗರಮಾ ಗರಮ್ ಮಿರ್ಚಿ ಭಜಿ, ಘಮಘಮ ಗಿರ್ಮಿಟ್ ಇದ್ರ ಚಹಾಕ್ಕೊಂದು ಕಳ್ಯಾ ಇರ್ತದ ನೋಡ್ರಿ. ಅಂದಂಗ ಈ ಗಿರ್ಮಿಟ್ ಐತಲಾ.. ಅದು ಹುಬ್ಬಳ್ಯಾಗ ಎಲ್ಲೆ ಮಾಡ್ಲಿ ಸಿದ್ದಾರೂಢ ಮಠದ ಕಡೆ ಮಾಡು  ಟೇಸ್ಟ್ ನ ಬೀಟ್ ಮಾಡಾಕ ಆಗಂಗಿಲ್ಲ. ಹಂಗ ಮಿರ್ಚಿ ಭಜಿನ್ಯಾಗು ನಮ್ಮ ಭಿಲ್ಲಾ ನ ಬೀಟ್ ಮಾಡಾಕ ಆಗಂಗಿಲ್ಲ.

ಅರೆ ಲಗು ಲಗು ಕುಡಿರೆಲಾ ಹುಬ್ಬಳ್ಳಿ ಸುತ್ತಾಡ್ಸಾಕ ಕರ್ಕೊಂಡು ಹೋಗ್ತಿನಿ ನಾ ನಿಮಗ. ನೀವು ಇವತ್ತ  ಗಂಡು  ಮೆಟ್ಟಿದ  ನಾಡು  ನಮ್ ಹುಬ್ಬಳ್ಳಿ ಗ ಬಂದೀರಿ. ನಿಮಗ ನಮ್ಮೂರ ಪರಿಚಯ ಮಾಡ್ಸಲಾರ್ದ ಕಳಸಾಕ ಆಕೇತೆನ  ಹೇಳ್ರಿ!!

ಈಗ ನಾವು ಬಂದಿರೊದು ನಮ್ಮ ಸಿದ್ಧಾರೂಢ ಮಠಕ್ಕ. ಸದ್ಗುರು ಶ್ರೀ ಸಿದ್ಧಾರೂಢ ಮಹಾರಾಜರು (ಮಹಾರಾಷ್ಟ್ರ ಕಡೆ ಸಿದ್ಧ ಪುರುಷರಿಗೆ ಮಹರಾಜರು ಅಂತಾರ) ಒಬ್ಬ ಮಹಾನ್ ಶಿವ ಭಕ್ತ ಮತ್ತು ಪವಾಡ ಪುರುಷ. ಎಡಕ್ಕ ಕೈಲಾಸ ಮಂಟಪ, ಬಲಕ್ಕ ಶ್ರೀ ಸಿದ್ಧಾರೂಢರ ಗುಡಿ ನಡಬರಕ ಅವರ ಪರಮಾಪ್ತ ಶಿಷ್ಯ ಗುರುನಾಥರ ಗುಡಿ ಅದ. ಅಲ್ಲಿಂದ ಮುಂದ ನಡಕೊಂಡು ಹೋದ್ರ ಸಿದ್ಧಾರೂಢರು ದಿನಾಲೂ ಪೂಜಾ ಮಾಡ್ತಿದ್ದ ಈಶ್ವರ ಲಿಂಗ ಅದ. ಅಲ್ಲೆ ಸಮೀಪ ಒಂದು ಕೆರೆ ಅದ. ಪ್ರತಿ ವರ್ಷ ಶಿವರಾತ್ರಿಯ ಸಮಯದಾಗ ಇಲ್ಲಿ ಜಾತ್ರೆ ನಡಿತದ ರಥೋತ್ಸವ, ಪಲ್ಲಕ್ಕಿ, ಕೌದಿ ಪೂಜಾ ಎಲ್ಲಾ ನಡಿತದ. ರಾಜ್ಯ ಮತ್ತು ಹೊರ ರಾಜ್ಯದಿಂದ ಲಕ್ಷಾಂತರ ಮಂದಿ ಜಾತ್ರಿಗ ಬರ್ತಾರ. ಇದಷ್ಟ ಅಲ್ಲ, ಪ್ರತಿ ವರ್ಷ ಕಾರ್ತಿಕ ಮಾಸದಾಗ  ಲಕ್ಷ ದೀಪೋತ್ಸವ ನಡಿತದ.

ಸದ್ಗುರು ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ

ಸುಮಾರು 29-30 ವರ್ಷದ ಹಿಂದ  ನಮ್ಮ ವರನಟ ಡಾ. ರಾಜಕುಮಾರ್  ರವರ ಆಕಸ್ಮಿಕ ಸಿನೆಮಾದ  “ಹುಟ್ಟಿದರೆ  ಕನ್ನಡ  ನಾಡಲ್ಲಿ ಹುಟ್ಟಬೇಕು”  ಹಾಡಿನ ಚಿತ್ರೀಕರಣ ನಮ್ ಹುಬ್ಬಳ್ಯಾಗ ನಡದಿದ್ದು. ಟಿವ್ಯಾಗ ಆ ಹಾಡು ನೋಡಿದ್ರ ನಿಮಗ ನಮ್ಮ ಹುಬ್ಬಳ್ಳಿ ಆಗ ಹೆಂಗಿತ್ತು ಅಂತ ಗೊತ್ತಾಗ್ತದ. ಇದಷ್ಟ ಅಲ್ಲ, ಈವರೆಗೂ ಭಾಳಷ್ಟು ಕನ್ನಡ ಚಲನಚಿತ್ರಗಳು ಇಲ್ಲೆ ಚಿತ್ರೀಕರಣಗೊಂಡ್ಯಾವ.

ಈಗ ನಾವು ಹೊಂಟಿರೊದು ಬೇಂಗೇರಿಗೆ. ನಮ್ ಹುಬ್ಬಳ್ಳಿ ಅಂತರಾಷ್ಟ್ರೀಯ ಮಟ್ಟದಾಗ ಫೇಮಸ್ ಅದ ಅಂದ್ರ ಅದಕ್ಕ ಕಾರಣ ಈ ಬೇಂಗೇರಿ.  ಯಾಕ ಅಂತೀರಿ!?.. ನಮ್ಮ ರಾಷ್ಟ್ರ ಧ್ವಜ… ಅದ ರೀ ಪ್ರತಿ ವರ್ಷ ಸ್ವಾತಂತ್ರ್ಯದಿನಾಚರಣೆ ದಿನ ನಮ್ಮ  ದೆಹಲಿಯ ಕೆಂಪುಕೋಟೆ ಮ್ಯಾಲ ಹಾರಿಸೊ ಭಾರತದ ತ್ರಿವರ್ಣ ಧ್ವಜ ಇಲ್ಲೆ ನಮ್ ಹುಬ್ಬಳ್ಳಿಯ ಬೆಂಗೇರಿನ್ಯಾಗ ಸಿದ್ಧ ಮಾಡೊದು.

ನಡೀರಿ ಹೋಗೊಣ. ಈಗ ನಾ ನಿಮಗ ಕರ್ಕೊಂಡು ಹೊಂಟಿರೊ ಜಾಗ ಇತಿಹಾಸಕ್ಕ ಸೇರಿದ್ದು. ವಾಣಿಜ್ಯ ನಗರಿ, ಛೋಟಾ ಮುಂಬಯಿ, ಅವಳಿನಗರ(ಟ್ವಿನ್ ಸಿಟಿ) ಅಂತೆಲ್ಲ ಕರಿಸ್ಕೊಳೊ ನಮ್ ಹುಬ್ಬಳ್ಯಾಗ ಸುಮಾರು  900 ವರ್ಷ ಪ್ರಾಚೀನದ ಬಾದಾಮಿ ಚಾಲುಕ್ಯರಿಂದ ನಿರ್ಮಿಸಲಾದ ಒಂದು ದೇವಸ್ಥಾನ ಅದ ಅಂತ ಗೊತ್ತೇನ ನಿಮಗ? ಅದ  ಚಂದ್ರಮೌಳೀಶ್ವರ  ದೇವಸ್ಥಾನ.

ಚಂದ್ರಮೌಳೀಶ್ವರ  ದೇವಸ್ಥಾನ.

ಉಣಕಲ್ ಕೆರೆ ಸಮೀಪ ಬರ್ತದ. ಹ್ಞಂ ಉಣಕಲ್ ಕೆರೆ ಅಂದಮ್ಯಾಲ ನೆನಪಾತು. ಈ ಉಣಕಲ್ ಕೆರೆ ಮಧ್ಯದಾಗ ಸ್ವಾಮಿ ವಿವೇಕಾನಂದರ ಪುತ್ಥಳಿ ಅದ. ಇಲ್ಲಿ ದೋಣಿ ವಿಹಾರ ಮಾಡ್ತಾರ. ಸುತ್ತಮುತ್ತಲಿನ ಪ್ರದೇಶಗಳಿಗೆ ಈ ಕೆರೆ ನೀರ ಜೀವಾಳ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯವ್ರು ಇಲ್ಲೊಂದು ಉದ್ಯಾನವನ ನಿರ್ಮಿಸ್ಯಾರ. ದಿನ ಮುಂಜಾನೆ ಮತ್ತ ಸಂಜೀಕ ಮಂದಿ ವಾಕಿಂಗ್ ಬರ್ತಾರ. ಸಂಕ್ರಾಂತಿ ಹಬ್ಬದ ದಿನ ಮನಿಮಂದಿ ಎಲ್ಲಾ ಕೂಡಿ ಬುತ್ತಿ ಕಟಗೊಂಡ ಬಂದು ಒಟ್ಟಾಗಿ ಕೂತು ಊಟ ಮಾಡ್ತಾರ. ಇಲ್ಲೆ ಉಣಕಲ್ ದಾಗನ ಭಾಳ ವರುಷಗಳ ಹಿಂದ ಒಬ್ಬರು ಸಿದ್ಧ ಪುರುಷರು ನೆಲೆಸಿದ್ರು. ಅವರಿಗೆ ಮಂದಿ ಪ್ರೀತಿಯಿಂದ ಸಿದ್ದಪ್ಪಜ್ಜ ಅಂತಾರ. ಸಿದ್ದಪ್ಪಜ್ಜನ ಗುಡಿನು ಅದ. ಇಲ್ಲೂ ಜಾತ್ರಿ ನಡಿತದ ವರ್ಷಕ್ಕೊಮ್ಮೆ.

ಈಗ ನಾವು ಬಂದಿರೊದುನೃಪತುಂಗಬೆಟ್ಟಕ್ಕ. ಫಾರೆಸ್ಟ್ ಕಾಲೊನಿ ಆಸುಪಾಸು ಬೆಟ್ಟ ಇರೊದು. ಹುಬ್ಬಳ್ಳಿಯ ಅತಿದೊಡ್ಡ ಉದ್ಯಾನವನ ಇದು. ಇಲ್ಲಿರೊ ಪ್ಯಾರಾಬೊಲ ಮ್ಯಾಲ ನಿತ್ಕೊಂಡು ಒಮ್ಮೆ ಕಣ್ಣರಳಿಸಿ ಸುತ್ತಲೂ ನೋಡಿದ್ರ ನಮ್ ಇಡೀ ಹುಬ್ಬಳ್ಳಿ ಮಹಾನಗರದ ಪಕ್ಷಿನೋಟ ನಿಮಗ ಸಿಗ್ತದ. ಇಲ್ಲೂ ಸಹ ದಿನ ಮುಂಜಾನೆ ಸಂಜಿಕ ಮಂದಿ ವಾಕಿಂಗ್ ಬರ್ತಾರ. ಇಲ್ಲಿ ಒಂದು ಬಯಲು ರಂಗ ಮಂದಿರ  ಅದ. ಇಲ್ಲಿ ಹೆಚ್ಚು ಕಡಿಮಿ ಪ್ರತಿ ವಾರಾಂತ್ಯದಾಗ ಸಂಗೀತ ನೃತ್ಯ ಕಾರ್ಯಕ್ರಮ ನಡಿತದ.

ಬರ್ರಿ ಹೋಗೊಣ. ಇನ್ನೂ ಭಾಳ ಅದ ನೋಡ್ಲಿಕ. ಇಂದಿರಾ ಗ್ಲಾಸ್ ಹೌಸ್ ನೋಡಿ ಅಲ್ಲಿಂದ ಊಟಕ್ಕ ಹೋಗೊಣ. ಇಂದಿರಾ ಗ್ಲಾಸ್ ಹೌಸ್ ಬಗ್ಗೆ ಸ್ಪೆಷಲ್ ಆಗಿ ಏನ್ ಹೇಳಬೇಕಾಗಿಲ್ಲ. ನಿಮ್ ಬೆಂಗಳೂರಿನ ಲಾಲಬಾಗ್ ನ್ಯಾಗ ಗ್ಲಾಸ್ ಹೌಸ್ ಅದ ಅಲಾ ಸೇಮ್ ಅಲ್ಲಿ ಹೆಂಗ್ ಫಲ-ಪುಷ್ಪ ಪ್ರದರ್ಶನ, ಕೃಷಿ ಉತ್ಪನ್ನ ಪ್ರದರ್ಶನ-ಮಾರಾಟ ಎಲ್ಲಾ ನಡೀತದಲಾ ಸೇಮ್ ಹಂಗ ಇಲ್ಲೂ. ಬೆಂಗಳೂರಿನ ಕಬ್ಬನ್ ಪಾರ್ಕ್ ನ್ಯಾಗ ಪುಟಾಣಿ ಟ್ರೇನ್ ಅದ ಅಲಾ. ಸೇಮ್ ಟು ಸೇಮ್ ನಮ್ ಹುಬ್ಬಳ್ಳಿ ಇಂದಿರಾ ಗ್ಲಾಸ್ ಹೌಸ್ ನ್ಯಾಗು ಅದ. ಮೈಸೂರು ಕೆ.ಆರ್.ಎಸ್. ಬೃಂದಾವನ ಉದ್ಯಾನ ದಾಗ ಮ್ಯೂಸಿಕಲ್ ಫೌಂಟೆನ್ ಅದ ಅಲಾ. ಸೇಮ್ ಇಲ್ಲೂ ಹಂಗ ಅದ.

ಈಗ ಮಧ್ಯಾಹ್ನ ಊಟದ ಸಮಯ. ಇಲ್ಲೆ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದ ಎದುರಿಗೆ ಬಸವೇಶ್ವರ ಖಾನಾವಳಿ ಅದ. ಅಲ್ಲಿ ನಮ್ ಉತ್ತರ ಕರ್ನಾಟಕದ ಜವಾರಿ ಊಟ ಮಾಡಬೇಕ ನೀವು. ಆಹಾಹಾ!! ತಿಂದ್ರ ಬಿಡಂಗಿಲ್ಲ… ಗೋಧಿ ಹುಗ್ಗಿ; ಶೇಂಗಾ ಹೋಳಿಗಿ; ಬಿಸಿ ಜೋಳದ ರೊಟ್ಟಿ; ಶೇಂಗಾ ಹಿಂಡಿ; ಗುರೆಳ್ಳ-ಅಗಸಿ ಚಟ್ನಿ; ರಂಜಕ; ಕಾಳು ಪಲ್ಯ; ಎಣ್ಣೆಗಾಯಿ ಪಲ್ಯ; ಜುಣಕದ ವಡಿ; ಬಾಜುಕ ಒಂದಿಷ್ಟು ಹಸಿ ಮೆಂತೆ ಸೊಪ್ಪು ಮತ್ತು ಈರುಳ್ಳಿ ತೊಪ್ಪಲ, ಮೂಲಂಗಿ, ಸೌತಿಕಾಯಿ; ಗಟ್ಟಿ ಮೊಸರು; ಅನ್ನ; ನುಗ್ಗಿಕಾಯಿ ಸಾಂಬಾರ್; ಟೊಮ್ಯಾಟೊ ಸಾರು; ಕಡಗಾಯಿ ಉಪ್ಪಿನಕಾಯಿ; ಖಾಂದಾ ಭಜಿ; ಮಸಾಲ ಮಜ್ಜಿಗೆ. ಅಲ್ಲಿಗೆ ಪರಮಾತ್ಮ ಸಂತೃಪ್ತಿ…!!!

ಚಿತ್ರಮೂಲ: ಅಂತರ್ಜಾಲ

ಇಲ್ಲೆ ನೋಡ್ರಿ ಸ್ವಲ್ಪ ಮುಂದ ಹೋದ್ರ ಕಾಣೊದು ಕಿತ್ತೂರು ರಾಣಿ ಚೆನ್ನಮ್ಮ ವೃತ್ತ. ಈ ವೃತ್ತದ ಮಧ್ಯದಾಗ ರಾಣಿ ಚೆನ್ನಮ್ಮನ ಪ್ರತಿಮೆ ಅದ. ಈ ವೃತ್ತದಿಂದ ಹುಬ್ಬಳ್ಳಿಯ ಬೇರೆ ಬೇರೆ ಕಡೆ ಹೋಗ್ಲಿಕ್ಕ ಮಾರ್ಗ ಅದ. ಇಲ್ಲಿಂದ  ಹುಬ್ಬಳ್ಳಿ  ರೈಲ್ವೇ ಜಂಕ್ಷನ್  ಅಂದ್ರ ನೈಋತ್ಯ ರೈಲ್ವೇ ನಿಲ್ದಾಣ;  ಹುಬ್ಬಳ್ಳಿಯ ಮಿನಿ ವಿಧಾನಸೌಧ; ಬ್ರಿಟಿಷರ ಕಾಲದ ಲ್ಯಾಮಿಂಗ್ಟನ್ ಶಾಲೆ;  ಅಲ್ಲದ..  ದಾಜೀಬಾನ ಪೇಟ, ಜನತಾ ಬಜಾರ, ಷಾಹ ಬಜಾರ, ದುರ್ಗದ ಬೈಲ್ ಮುಂತಾದ ಶಹರ ಬಜಾರ್ (ಸಿಟಿ ಮಾರ್ಕೆಟ್) ಗೆ ಹೋಗಬಹುದು.

ಒಹ್! ಮರೆತಿದ್ದೆ ನೋಡ್ರಿ… ಚೆನ್ನಮ್ಮ ವೃತ್ತದ ಹಿಂದ ಒಂದು ದೊಡ್ಡ ಮೈದಾನ ಕಾಣ್ಲಿಕತ್ತದ ಅಲಾ!! ಅದು ಈದ್ಗಾ  ಮೈದಾನ   ಅಂತ.    ಅಲ್ಲಿಂದಲೇ  ಸಾಕಷ್ಟು ಚಳವಳಿ,  ಆಂದೋಲನ ಎಲ್ಲಾ ಶುರುವಾಗಿದ್ದು. ಪ್ರತಿವರ್ಷ ಪವಿತ್ರ ರಮಜಾನ್ ಹಬ್ಬದ ದಿನ ಮುಸಲ್ಮಾನ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ನಡಿತದ. ಹಂಗ ಮಾವಿನ ಹಣ್ಣಿನ ಸೀಜನ್ ನ್ಯಾಗ ಮಾವು ಮೇಳ ಸಹ ನಡಿತದ. ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ತಾವು ಬೆಳೆದ ವಿವಿಧ ತಳಿಯ ಮಾವುಗಳನ್ನ ತಂದು ಇಲ್ಲಿ ಮಾರಾಟ ಮಾಡ್ತಾರ.

ಇಲ್ಲಿಂದ ನಾವು ಗೋಕುಲ ರೋಡ ಕಡೆ ಹೋಗ್ತಿದಿವಿ. ಈ ರಸ್ತೆ ಸುಪ್ರಸಿದ್ಧ ಎಮ್.ಎಮ್.ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಿಂದ ಶುರುವಾಗಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹೊಸ ಬಸ್ ನಿಲ್ದಾಣದಿಂದ ಹಾದು ಹೋಗಿ, ಹುಬ್ಬಳ್ಳಿಯ ವಿಮಾನ  ನಿಲ್ದಾಣಕ್ಕ ಸೇರ್ತದ. ಹಂಗ ಸ್ವಲ್ಪ ಮುಂದ ಹೋದ್ರ ನಮ್ಮ ಹೆಮ್ಮೆಯ ಶ್ರೀಮತಿ ಸುಧಾಮೂರ್ತಿಯವರ ಇನ್ಫೋಸಿಸ್ ಕಂಪನಿ ಅದ. ಅಲ್ಲಿಂದ  ಹಂಗ  ಒಂದಷ್ಟು ದೂರ ಕ್ರಮಿಸಿದ್ರ ನಮಗ ದುಮ್ಮವಾಡ ಕೆರೆ, ಅಲ್ಲಿಂದ ಮುಂದ  ನುಗ್ಗೀಕೇರಿ  ಹನುಮಪ್ಪನ  ಗುಡಿ ಸಿಗ್ತದ.  ಹಂಗ ಒಂದು ರೌಂಡ್ ಹಾಕಿ ಬಂದ್ರ ನವನಗರ. ಅಲ್ಲಿ ಇಸ್ಕಾನ್ ಶ್ರೀಕೃಷ್ಣ ದೇವಸ್ಥಾನ ಅದ. ಮುಂದ ಹೋದ್ರ ಧಾರವಾಡ. ಇನ್ನೊಮ್ಮೆ ಬಂದಾಗ ಅಲ್ಲೂ ತಿರುಗಾಡಾಕ ಹೋಗೊಣಂತ. ಈ ಸರ್ತಿ ಹುಬ್ಬಳ್ಳಿ ಒಂದ ಸಾಕು. ಈಗ ವಾಪಸ್ ಹೋಗೊಣ.

ನವನಗರ ಆದಮ್ಯಾಲ ಸತ್ತೂರು ಅಂತ ಒಂದು ಹಳ್ಳಿ ಸಿಗ್ತದ. ಇಲ್ಲಿ, ನಮ್ಮ ಹೆಮ್ಮೆಯ ಧರ್ಮಶ್ರೀ ಶ್ರೀ ವೀರೇಂದ್ರ ಹೆಗ್ಗಡೆಯವರು ಕಟ್ಟಿಸಿದ ಎಸ್.ಡಿ.ಎಮ್. ಮೆಡಿಕಲ್  ಕಾಲೇಜ್  & ಆಸ್ಪತ್ರೆ  ಹಾಗೂ ಎಸ್.ಡಿ.ಎಮ್. ಇಂಜಿನಿಯರಿಂಗ್ ಕಾಲೇಜ್ ಅದ.  ಈಗ ಬರೊದೇ ವಿದ್ಯಾನಗರ. ಇಲ್ಲಿಂದ ನಮ್ ಹುಬ್ಬಳ್ಳಿಗೆ ವಿದ್ಯಾಕಾಶಿ ಅಂತನೂ ಹೆಸರು ಬಂತು. ಹೆಂಗ ಅಂತೀರಿ!?.  ಕಲಿಯುಗದ ಸಪ್ತರ್ಷಿಗಳು ಅಂತ ಕೆಎಲ್ ಇ ಸಂಸ್ಥೆಯ ಏಳು ಮುಖ್ಯ ಸಂಸ್ಥಾಪಕರನ್ನ ಕರೀತಾರ. ಇಲ್ಲಿ ಶತಮಾನ ಕಂಡ ಕೆ ಎಲ್ ಇ ವಿದ್ಯಾ ಸಂಸ್ಥೆಯ ತಾಂತ್ರಿಕ ವಿಶ್ವವಿದ್ಯಾಲಯ, ಕಲಾ- ವಾಣಿಜ್ಯ-ವಿಜ್ಞಾನ ಹಾಗೂ ಕಾನೂನು ಮಹಾವಿದ್ಯಾಲಯ ಅದ. ರಾಜ್ಯದ ಬೇರೆ ಬೇರೆ ಕಡೆಯಿಂದ ಇಲ್ಲಿಗೆ ಓದ್ಲಿಕ್ಕ ಬರ್ತಾರ. ಇಲ್ಲಿನ ಪ್ರತಿಷ್ಟಿತ ಕಾಲೇಜಲ್ಲಿ ವ್ಯಾಸಂಗ ಮಾಡಿದವ್ರು ದೇಶ-ವಿದೇಶ ದ ಪ್ರಸಿದ್ಧ ಸಂಘ-ಸಂಸ್ಥೆಗಳಲ್ಲಿ ಉನ್ನತ ಹುದ್ದೆಯೊಳಗ ಇದಾರ. ಮತ್ತ ಉತ್ತರ ಕರ್ನಾಟಕ ಭಾಗದ ಬಹುತೇಕ ರಾಜಕಾರಣಿಗಳು ಎಲ್ಲರೂ ಇಲ್ಲೆ ತಮ್ಮ ವ್ಯಾಸಂಗ ಮಾಡಿದ್ದು.

ಅಷ್ಟ ಅಲ್ಲ ವಿದ್ಯಾನಗರ ದಾಗ ಕರ್ನಾಟಕ ಮೆಡಿಕಲ್ ಕಾಲೇಜು(ಕೆ.ಎಮ್.ಸಿ.) ಅಥವಾ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ(ಕಿಮ್ಸ್/KIMS) ಸಹ ಅದ. ಅದೊಂದ ಅಲ್ಲ, ಔಷಧ ವಿಜ್ಞಾನ ಮಹಾವಿದ್ಯಾಲಯ, ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ & ಮ್ಯಾನೇಜ್ಮೆಂಟ್ ಕಾಲೇಜ್ ಸಹ ಅದಾವ. ಅಷ್ಟ ಅಲ್ಲ, ಹುಬ್ಬಳ್ಳಿಯ ಕೆ.ಎಲ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಸೇರಿ ನಿರ್ಮಿಸಿ ನಡಿಸ್ತಿರೊ ಕೆ.ಎಲ್.ಇ. ಧ್ವನಿ ಅನ್ನೊ ಎಫ್.ಎಮ್. ಸ್ಟೇಷನ್ ಸಹ ಅದ.  ಮತ್ತೂ ಒಂದು ಹೆಮ್ಮೆಯ ವಿಷಯ ಅಂದ್ರ, ಶ್ರೀಮತಿ ಸುಧಾ ಮೂರ್ತಿಯವರ ಸಂಬಂಧಿ  ಶ್ರೀ  ಗುರುರಾಜ  ದೇಶಪಾಂಡೆಯವರ  ದೇಶಪಾಂಡೆ ಫೌಂಡೇಶನ್ ಅದ. ಇಲ್ಲಿ, ಯುವ ಜನಾಂಗದವರ ಉನ್ನತ ಶಿಕ್ಷಣ ಮತ್ತ ಭವಿಷ್ಯಕ್ಕ ಅನುಕೂಲ ಆಗೊಹಂತ ತರಬೇತಿ ಶಿಬಿರಗಳು ನಡಿತದ. ಮತ್ತ, ಯುವ ಸಮೂಹದವ್ರಿಗೆ ಸ್ಟಾರ್ಟ್ ಅಪ್ ಕಂಪನಿಗಳನ್ನ ಹುಟ್ಟು ಹಾಕ್ಲಿಕ್ಕೆ ಬೇಕಾದಂತಹ ಐಡಿಯಾಗಳು ಹಾಗೂ ಸೌಲಭ್ಯಗಳನ್ನ ಕೊಡ್ತಾರ.

ಬರೀ ವಸ್ತು ಮತ್ತ ಸ್ಥಳದ ಬಗ್ಗೆ ನ ಹೇಳೊದ ಆತು. ನಮ್ಮೂರ ಸಾಧಕರ ಬಗ್ಗೆ ನು ಸ್ಮರಿಸಾಕ ಬೇಕು. ಹಿಂದೂಸ್ತಾನಿ ಸಂಗೀತದಾಗ ದೇಶಕ್ಕ ಅಪಾರ ಕೊಡುಗೆ ಕೊಟ್ಟಂತ ಕೀರ್ತಿ ನಮ್ಮ ಹುಬ್ಬಳ್ಳಿ-ಧಾರವಾಡಕ್ಕ ಸಲ್ಲತದ. ಯಾಕಂದ್ರ ಹಿಂದೂಸ್ತಾನಿ ಸಂಗೀತದ ಘಟಾನುಘಟಿಗಳಾದ ಪಂಡಿತ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಶ್ರೀಮತಿ  ಸಂಗೀತ  ಕಟ್ಟಿ  ಎಲ್ಲರೂ ನಮ್ಮೂರಿನವರೇ. ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಚಲನಚಿತ್ರ ರಂಗಕ್ಕೂ ಸಾಕಷ್ಟು ಮೇಧಾವಿಗಳನ್ನ ನೀಡಿದಂತ ಕೀರ್ತಿ ನಮ್ಮ ಹುಬ್ಬಳ್ಳಿ-ಧಾರವಾಡಕ್ಕ ಅದ. ಪಾಟೀಲ ಪುಟ್ಟಪ್ಪ ನವರಿಂದ ಮೊದಲಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಬಾಳಿ ಬದುಕಿದ ಊರು ನಮ್ಮ ಹುಬ್ಬಳ್ಳಿ-ಧಾರವಾಡ.

ಇನ್ನು ನಮ್ಮೂರಿನ ಮೂಲಭೂತ ಸೌಕರ್ಯದ ವಿಷಯಕ್ಕ ಬಂದ್ರ ರಸ್ತೆಗಳೇನೊ ಛಲೊ ಅದಾವ. ಆದ್ರ ಭಯಂಕರ ಧೂಳ್ ರೀ ಯಪ್ಪ. ನಮ್ಮ ಅವಳಿನಗರ ನು ನಿಮ್ಮ ಬೆಂಗಳೂರಿನ ಹಂಗ ಫ್ಲೈ ಓವರ್, ಅಂಡರ್ ಪಾಸ್ ಎಲ್ಲಾ ಕಂಡದ. ಸರ್ಕಾರದಿಂದ  ಸ್ಮಾರ್ಟ್ ಸಿಟಿ  ಅಂತ ಘೋಷಣೆ ಆದಮ್ಯಾಲಂತು ಭಾರೀ ಸೌಲಭ್ಯಗಳು ಲಭಿಸಕತ್ತಾವ.  ಬಿ.ಆರ್.ಟಿ.ಎಸ್.  ಯೋಜನೆದಾಗ  ಚಿಗರಿ ಬಸ್ ಅಂತ.. ಥೇಟ್ ಚಿಗರಿ ಗತೆನ ಓಡ್ತದ ಹಂಗಾಗಿ ಅದಕ್ಕ ಈ ಹೆಸರು. ಸೇಮ್ ನಿಮ್ಮ ಬೆಂಗಳೂರಿನ ಮೆಟ್ರೋ ರೈಲು ಇದ್ದಂಗ ಅದ. ಆದ್ರ ಇದು ರೋಡ್ ಮ್ಯಾಲ ಓಡಾಡೊ ಬಸ್, ಅಷ್ಟ ವ್ಯತ್ಯಾಸ. ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ಸಿನಿಮಾ ಥಿಯೇಟರ್, ಸುಸಜ್ಜಿತ ತ್ರೀ ಸ್ಟಾರ್ ಹೋಟೆಲ್ ಗಳು ಎಲ್ಲಾ ಅದಾವ.

ಶೀಗಿ ಹುಣ್ಣಿಮಿಯಂದು ಭೂಮಿ ಪೂಜೆ ( ಚಿತ್ರಮೂಲ: ಅಂತರ್ಜಾಲ)

ಮತ್ತೂ ಒಂದು ವಿಷಯ ಹೇಳಾಕಬೇಕು ನೋಡ್ರಿ.. ಗೌರಿ ಗಣೇಶ ಹಬ್ಬದ ಸಂದರ್ಭದಾಗ ಸಾರ್ವಜನಿಕ ಗಣೇಶ ಉತ್ಸವ ಎಷ್ಟು ವಿಜೃಂಭಣೆಯಿಂದ ನಡೀತದ. ಇಲ್ಲಿ ನಡೆಯೊ ಸಾರ್ವಜನಿಕ ಗಣೇಶ ಉತ್ಸವ ಭಾರತದಾಗ ಮೊದಲು ಮುಂಬೈ-ಪುಣೆ ನಂತರ ಎರಡನೇ ಸ್ಥಾನದಾಗ ಇರೊದು ಅಂದ್ರ ಅದು ನಮ್ಮ ಹುಬ್ಬಳ್ಳಿ. ಇಲ್ಲಿ ಶೀಗಿ ಹುಣ್ಣಿಮಿಗೆ ರೈತರು ತಮ್ಮ ಮನಿ ಮಂದಿ ಜೋಡಿ ತಮ್ಮ ಹೊಲಕ್ಕ ಹೋಗಿ ಭೂಮಿ ತಾಯಿಗೆ ಪೂಜಾ ಮಾಡಿ ಚೆರಗ (ತಾವು ಬೆಳೆದ ಬೆಳೆಯಿಂದ ತಯಾರಿಸಿದ ಅಡುಗೆಯನ್ನು ಭೂತಾಯಿಗೆ ನೈವೇದ್ಯ ಅರ್ಪಿಸುವುದು.) ಚೆಲ್ಲಿ ನಂತರ ಎಲ್ಲಾರು ಒಟ್ಟಿಗ ಕುಂತು ಊಟ ಮಾಡಿ ಬರ್ತಾರ. ಇನ್ನು ಗೌರಿ ಹುಣ್ಣಿಮಿಗೆ ಹೆಣ್ಣು ಮಕ್ಕಳಿಗೆ ಸಂಜಿ ಮುಂದ ಸೀರಿ ಉಡಿಸಿ ಸಕ್ಕರಿ ಗೊಂಬಿಯ ಆರತಿ ಮಾಡ್ತಾರ.

ಹೇಳಾಕ ಕೂತ್ರ ಮುಗಿಯುದಿಲ್ಲ. ನೋಡಾಕ ನಿತ್ರ ಸಾಕಾಗುದಿಲ್ಲ. ಅಷ್ಟು ಚಂದ ಅದ ನಮ್ಮೂರು. ಇಲ್ಲಿನ ಭಾಷಾ ಶೈಲಿನ ಒಂಥರಾ ವಿಶೇಷ. ಇಲ್ಲಿಯ ಮಂದಿ ಮನಸ್ಸಂತೂ ಅಪ್ಪಟ ಬಂಗಾರ. ಇಲ್ಲಿನ ಜನರ ನೇರ ನಡೆ-ನುಡಿ ಗೆ ಹೆಸರು ನಮ್ಮ ಹುಬ್ಬಳ್ಳಿ-ಧಾರವಾಡ. ಮತ್ತ ಮತ್ತ ಬರ್ತಾ ಇರ್ರಿ. ಹ್ಞಂ ನಿಮ್ಮೂರಿಗ ವಾಪಸ್ ಹೋಗೊ ಮುಂದ ಒಂದು ಕೆಜಿ  ಧಾರವಾಡ ಪೇಡ, ಪಾಪಡಿ  ಚಟ್ನಿ ಕೊಟ್ಟು ಕಳಸ್ತಿನಿ ತೊಗೊಂಡು ಹೋಗಾಕ ಮರೀಬ್ಯಾಡ್ರಿ…

– ಮೇಘನಾ ದುಶ್ಯಲಾ, ಹುಬ್ಬಳ್ಳಿ

9 Responses

  1. ಬಿ.ಆರ್.ನಾಗರತ್ನ says:

    ವಾ ಚಲೋ ವತ್ನಾಗೆ ಹುಬ್ಬಳ್ಳಿಯನ್ನು ಒಂದು ಸುತ್ತು ಹಾಕಿ ಅಲ್ಲಿ ನಾ ಊಟದ ವೈಶಿಷ್ಟ್ಯ ಹೇಳಿ ಬಾಯಲ್ಲಿ ನೀರೂರಿಸುವ ಹಾಗಿದೆ ರೀ ನಿಮ್ಮ ಲೇಖನ.ಅದಕ್ಕೆ ನನ್ನದೊಂದು ನಮಸ್ಕಾರ ರೀ.

  2. ನಯನ ಬಜಕೂಡ್ಲು says:

    ಆಹಾ… ಬಹಳ ಛಲೋ ಐತ್ರಿ ನೀವು ಮಾಡಿಸಿರೋ ಹುಬ್ಬಳ್ಳಿ ಪರಿಚಯ, ಐತಿಹಾಸಿಕ ಹಿನ್ನಲೆ ಹೊಂದಿರುವ ಊರು.

  3. Hema says:

    ನಾಲ್ಕು ವರ್ಷಗಳ ಮೊದಲು ಹುಬ್ಬಳ್ಳಿಗೆ ಬಂದಿದ್ದಾಗ ಬಸವೇಶ್ವರ ಖಾನಾವಳಿಯ ಜವಾರಿ ಊಟವನ್ನು ನಾನೂ ಸವಿದಿದ್ದೇನೆ..ಹಾಗೆಯೇ ಸಿದ್ಧಾರೂಢ ಮಠಕ್ಕೂ ಭೇಟಿ ಕೊಟ್ಟಿದ್ದೇನೆ.. ಬರಹ ಇಷ್ಟವಾಯಿತು

    • Anonymous says:

      ಭಾಳ ಖುಷಿ ಆತ್ರಿ ಬರ್ತಾ ಇರ್ರಿ ಆಗಾಗ ನಮ್ ಹುಬ್ಬಳ್ಳಿ ಗ
      ಶರಣು ರೀ ನಿಮ್ ಅಭಿಮಾನಕ್ಕ

  4. ಶಂಕರಿ ಶರ್ಮ, ಪುತ್ತೂರು says:

    ಭಾರೀ ಖುಷಿ ಐತ್ರೀ..ನಿಮ್ಮ ಆಡು ಭಾಷಾ ಸೊಗಡು. ಮಠ, ಮಂದಿರ, ಸುತ್ತಾಡ್ಸಿ ಊಟಾನೂ ಕೊಟ್ರಲ್ರೀ ಮೇಡಂ..ಬಹಳ ಚಲೋ ಐತೆ ನಿಮ್ ಬರವಣಿಗಿ..ನಮಸ್ಕಾರ್ರೀ..

  5. Dharmanna dhanni says:

    ಹುಬ್ಬಳ್ಳಿ ಬರಹ ಚೆನ್ನಾಗಿತ್ತು. ಆದರೆ ಹುಬ್ಬಳ್ಳಿಯಲ್ಲಿ 1937 ರಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಆರಂಭಗೊಂಡಿತು.ಈ ಕುರಿತು ಬರೆಯಲಿಲ್ಲ ಇದನ್ನು ಸೆರಿಸಿರಿ…

  6. ಮಹಾಂತೇಶ ಹದಲಿ says:

    ತುಂಬಾ ಉಪಯುಕ್ತವಾದ ವಿಷಯ ಮತ್ತು ಮಾಹಿತಿ ಸಿಕ್ಕಿದೆ ರಿ.ಸಖತ್ತಾಗಿ ಬರದಿದೀರಿ.

  7. ಮಹಾಂತೇಶ ಹದಲಿ says:

    Nice ri madam.. Super writing,really informed About hubli

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: