ಸಾವಿತ್ರಿಬಾ ಫುಲೆ-ಶಿಕ್ಷಕಿ-ಲೇಖಕಿ-ಸಾಧಕಿ
ಸಾವಿತ್ರಿಬಾ ಫುಲೆಯವರ ಹೆಸರನ್ನು ಕೇಳಿದರೇನೇ ಮೈ ರೋಮಾಂಚನವಾಗುತ್ತದೆ. ಯಾಕೆಂದರೆ ಅವರು ಶತ ಮಾನಗಳಿಂದಲೂ, ಜನರ ಮನದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ಅಕ್ಷರದವ್ವ, ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಎಂದೆ ಹೆಸರಾದವರು. ಇಂದು ನಾವೆಲ್ಲರೂ ಅವರ ದಾರಿಯಲ್ಲೇ ನಡೆದು, ಅವರ ಕನಸನ್ನು ನನಸು ಮಾಡಬೇಕಿದೆ. ಅವರು ಜನೆವರಿ 3,/1831 ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂ ಎಂಬಲ್ಲಿ ಜನಿಸಿದರು. ಆಗ ಬಾಲ್ಯ ವಿವಾಹ ಪದ್ಧತಿ ಇರುವುದರಿಂದ ಇವರ 8 ನೇ ವಯಸ್ಸಿನಲ್ಲೇ ಜ್ಯೋತಿಬಾ ಫುಲೆಯವರೊಂದಿಗೆ ಮದುವೆಯಾಯಿತು. ಆಗ ಜ್ಯೋತಿಬಾ ಫುಲೆಯವರಿಗೂ 13 ವರ್ಷ ವಯಸ್ಸು.
ಸಾವಿತ್ರಿಬಾ ಫುಲೆಯವರ ಜೀವನ ಚಕ್ರವೇ ಬದಲಾಯಿತು. ಮನೆಯೇ ಮೊದಲ ಪಾಠ ಶಾಲೆಯಾದರೆ, ಪತಿಯೇ ಮೊದಲ ಗುರುವಾದರು. ಸಾವಿತ್ರಿಬಾ ಅವರ ಜಾಣ್ಮೆಯನ್ನು ಕಂಡು ಜ್ಯೋತಿಬಾ ಫುಲೆಯವರು ಉತ್ತಮ ಶಿಕ್ಷಣ ಕೊಡಿಸುವುದರೊಂದಿಗೆ, 1846 ರಲ್ಲಿ 17 ನೇಯ ವಯಸ್ಸಿಗೆ ಶಿಕ್ಷಕಿಯ ತರಬೇತಿಯನ್ನು ಕೊಡಿಸಿದರು. ತರಬೇತಿಯಲ್ಲಿ ಜೊತೆಯಾದ ಆತ್ಮೀಯ ಗೆಳತಿ, ಫಾತಿಮಾ ಶೇಖ್ ಅವರೊಂದಿಗಿನ ಒಡನಾಟ ಧೈರ್ಯವನ್ನು ಇಮ್ಮಡಿಗೊಳಿಸಿತ್ತು. ಜೊತೆಗೆ ಜ್ಯೋತಿಬಾ ಅವರೊಂದಿಗಿನ ಜೀವನ ಮಧುರವಾಗಿತ್ತು. ಅಂದಿನ ಪರಿಸ್ಥಿತಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಸತಿಸಹಗಮನ ಪದ್ಧತಿ, ಬಾಲ್ಯ ವಿವಾಹ ಪದ್ಧತಿ ಇದನ್ನೆಲ್ಲಾ ತಡೆಗಟ್ಟಲು ಮಹಿಳೆಯರಿಗೆ ಶಿಕ್ಷಣದ ಅವಶ್ಯಕತೆ ಇದೆಯೆಂದು ತಿಳಿದು, ದಂಪತಿಗಳಿಬ್ಬರು 1848 ರಲ್ಲಿ ಪುಣೆಯ ನಾರಾಯಣ ಪೇಟೆಯ ಬಂದೇವಾಡದಲ್ಲಿ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರೆಂದು ಇತಿಹಾಸದ ಮೂಲಗಳು ಹೇಳುತ್ತವೆ. ಈ ಶಾಲೆ ಸ್ಥಾಪಿಸಿದ ಹಿನ್ನೆಲೆಯಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾದವು. ಸಾವಿತ್ರಿಬಾಯಿಯವರು ಶಾಲೆಗೆ ಹೋಗುವಾಗ ಜನರು ಬೈಯುತ್ತಿದ್ದರು, ನಿಂಧಿಸುತ್ತಿದ್ದರು, ಕೆಸರು, ಸಗಣಿಯನ್ನು ಎರಚುತ್ತಿದ್ದರು. ಇದಕ್ಕೆಲ್ಲ ಹೆದರದೇ ತಮ್ಮ ಬ್ಯಾಗಲ್ಲಿ ಒಂದು ಸೀರೆಯನ್ನು ಇಟ್ಟುಕೊಂಡು ಹೋಗುತ್ತಿದ್ದರು. ಶಾಲೆ ತಲುಪಿದ ಮೇಲೆ ಕೊಳೆಯಾದ ಸೀರೆ ತೆಗೆದು ಬೇರೊಂದು ಸೀರೆ ಉಟ್ಟು ಮಕ್ಕಳು ಬರುವುದರೊಳಗೆ ಬೋಧನೆಗೆ ಸಿದ್ಧರಾಗಿರುತ್ತಿದ್ದರು. ಜನರ ತೆಗಳಿಕೆಯನ್ನೇ ಹೂಮಾಲೆಯಂತೆ ಸ್ವೀಕರಿಸಿ, ಒಟ್ಟು 18 ಶಾಲೆಗಳನ್ನು ತೆರೆದರು. ದಂಪತಿಗಳಿಬ್ಬರೂ ಒಬ್ಬರಿಗೊಬ್ಬರು ಗೌರವಿಸುತ್ತ, ಹೆಗಲಿಗೆ ಹೆಗಲು ಕೊಟ್ಟು ಬದುಕಿದರು.
ಸಾವಿತ್ರಿಬಾಯಿಯವರ ಶಿಕ್ಷಕ ವೃತ್ತಿಗೆ ಮೆಚ್ಚಿ ಬ್ರಿಟಿಷ್ ಸರಕಾರ ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ಎಂಬ ಬಿರುದನ್ನು ಕೊಟ್ಟು ಗೌರವಿಸಿತು. ದಂಪತಿಗಳಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಮಕ್ಕಳಾಗದಿದ್ದರೂ ಜ್ಯೋತಿಬಾ ಫುಲೆಯವರು ಬೇರೆ ಮದುವೆಯಾಗಿರಲಿಲ್ಲ. ಸಾವಿತ್ರಿಬಾಯಿಯವರನ್ನು ತುಂಬಾ ಪ್ರೀತಿಸುತ್ತಿದ್ದರಂತೆ. ಮಕ್ಕಳಾಗದ ಕಾರಣ 1874 ರಲ್ಲಿ ಒಬ್ಬ ವಿಧವೆಯ ಮಗನಾದ ಯಶವಂತನೆಂಬ ಮಗುವನ್ನು ದತ್ತು ಪಡೆದರಂತೆ.
ಮಾರ್ಚ್ 10/1897 ರಲ್ಲಿ ಪ್ಲೇಗ್ ರೋಗಕ್ಕೆ ಗುರಿಯಾದ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ, ಸಾವಿತ್ರಿಬಾಯಿಯವರಿಗೂ ಸೋಂಕು ತಗುಲಿ ಮರಣ ಹೊಂದಿದರು. ಮಹಿಳೆಯರಲ್ಲಿ ವಿಶೇಷವಾದ ವ್ಯಕ್ತಿತ್ವ ಹೊಂದಿದ್ದ ಸಾವಿತ್ರಿಬಾ ಫುಲೆಯವರನ್ನು ಎಷ್ಟು ಹೊಗಳಿದರೂ ಕಡಿಮೆಯೇ. ಇವರಂತೆ ನಾವಾಗಬೇಕು. ಅನ್ಯಾಯವನ್ನು ಮೆಟ್ಟಿ ನಿಲ್ಲಬೇಕು. ಇಂದು ರಾಜ್ಯಾಧ್ಯಂತ ತಲೆ ಎತ್ತಿ ನಿಂತಿರುವ ಸಾವಿತ್ರಿಭಾ ಫುಲೆ ಶಿಕ್ಷಕಿಯರ ಸಂಘಗಳು ಕಾರ್ಯಪ್ರವೃತ್ತವಾಗಿವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
– ಮಧುಮತಿ ರಮೇಶ್ ಪಾಟೀಲ್ (ಮಲ್ಲಮ್ಮ) , ಬಳ್ಳಾರಿ.
ಮಾಹಿತಿಪೂರ್ಣ ಬರಹ
ಧನ್ಯವಾದಗಳು
ಸಾವಿತ್ರಿಬಾಯಿ ಫುಲೆಯವರ ಸಾಧನೆಯನ್ನು ಬಹಳ ಸುಂದರವಾಗಿ ನಿರೂಪಿಸಿದ್ದೀರಿ..ಧನ್ಯವಾದಗಳು
ಸಾವಿತ್ರಿಬಾ ಫುಲೆಯವರ ಬಗೆಗೆ ನಮಗೆ ತಿಳಿಯದ ಅದೆಷ್ಟೋ ವಿಷಯಗಳನ್ನು ತಮ್ಮ ಮಾಹಿತಿಪೂರ್ಣ ಲೇಖನದಿಂದ ತಿಳಿಯುವಂತಾಯಿತು. ಸಮಾಜದ ಹೆಂಗೆಳೆಯರಿಗೆ ಸ್ಫೂರ್ತಿ ರೂಪರಾಗಿದ್ದ ವಿಶೇಷ ವ್ಯಕ್ತಿತ್ವ ಅವರದು..ಧನ್ಯವಾದಗಳು.
ಚೆನ್ನಾಗಿತ್ತು ಬರಹ.