ವಿಶೇಷ ಸೌಲಭ್ಯದೊಂದಿಗೆ ಮುಜುಂಗಾವು ವಿದ್ಯಾಪೀಠ {ಪರಿಚಯ}
ತಮ್ಮ ಮಕ್ಕಳು ಬಾಳಿಗೊಂದು ನಂಬಿಕೆಯಾಗಿ,ಬದುಕಿಗೊಂದು ನಂದಾದೀಪವಾಗಿ ಬೆಳಗಬೇಕು.ಅದಕ್ಕಾಗಿ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬುದೇ ಎಲ್ಲಾ ತಂದೆ-ತಾಯಿಯರ ಮನೋಭೂಮಿಕೆ. ಶಿಕ್ಷಣ ಸಂಸ್ಥೆಗಳಿಂದು ಬೇಕಾದಷ್ಟು ತಲೆಯೆತ್ತಿ ನಿಂತಿವೆ. ಅವುಗಳಲ್ಲಿ ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಆಯಾಯ ಮಟ್ಟಕ್ಕೆ ತಕ್ಕಂತೆ ,ಆಧುನಿಕ ತಂತ್ರಜ್ಞಾನದೊಂದಿಗೆ; ಸಂಸ್ಕೃತಿ- ಸಂಸ್ಕಾರಯುತ ಶಿಕ್ಷಣ ನೀಡಿ ತಯಾರುಗೊಳಿಸುವ ವಿದ್ಯಾಸಂಸ್ಥೆಗಳು ಬೆರಳೆಣಿಕೆಯಷ್ಟು ಎನ್ನಬಹುದು. ಈ ನಿಟ್ಟಿನಲ್ಲಿ ಮುಜುಂಗಾವು ಶ್ರೀಭಾರತೀವಿದ್ಯಾಪೀಠವು ಗಮನ ಸೆಳೆಯುತ್ತದೆ.
ವಿಶೇಷತೆಗಳು--ಇಲ್ಲಿ ಎಲ್.ಕೆ.ಜಿ ಯಿಂದ ಎಸ್.ಎಸ್.ಎಲ್.ಸಿ. ತನಕ ಆಂಗ್ಲ ಮಾಧ್ಯಮವನ್ನು ಅಳವಡಿಸಿಕೊಳ್ಳುವುದರ ಜೊತೆಗೆ; ಮಕ್ಕಳಲ್ಲಿ ಆತ್ಮವಿಶ್ವಾಸವನ್ನೂ ನಮ್ಮ ಸಂಸ್ಕೃತಿ-ಸಂಸ್ಕಾರವನ್ನೂ ಅವರೊಳಗೆ ಸುಪ್ತವಾಗಿರುವ ಇತರ ಚಟುವಟಿಕೆಗಳನ್ನೂ ಬುದ್ಧಿ ವಿಕಾಸಕ್ಕೆಡೆಮಾಡಿ ,ಆಯಾಯ ಮಕ್ಕಳ ಅಭಿರುಚಿಗೆ ತಕ್ಕಂತೆ ,ಅವರಿಗೆ ಹೊರೆಯಾಗದಂತೆ ತುಂಬಲಾಗುತ್ತದೆ.
ಪ್ರಾರ್ಥನೆ– ಪ್ರತಿದಿನ ಬೆಳಗ್ಗೆ ಮಕ್ಕಳೆಲ್ಲ ಸಾಮೂಹಿಕವಾಗಿ ಒಂಭತ್ತೂವರೆಯಿಂದ ಹತ್ತು ಗಂಟೆಯತನಕ ದೀಪಸ್ತುತಿ,ಗುರುವಂದನೆ,ಸರಸ್ವತಿ ಸ್ತುತಿ,ವಂದೇಮಾತರಮ್ ,ಎರಡು ನಿಮಿಷಗಳ ಧ್ಯಾನ, ಇವುಗಳ ಜೊತೆಗೆ ; ಸೋಮವಾರ ಲಿಂಗಾಷ್ಠಕ,ಮಂಗಳವಾರ ಗಣೇಶಪಂಚರತ್ನ, ಬುಧವಾರ ತೋಟಕಾಷ್ಠಕ,ಗುರುವಾರ ಭಗವದ್ಗೀತೆ, ಶುಕ್ರವಾರ ಮಹಾಲಕ್ಷ್ಮಿಯಷ್ಟಕ, ಹೀಗೆ ಪ್ರಾರ್ಥನೆಯಲ್ಲಿ ಆಧ್ಯಾತ್ಮಿಕ ವೈವಿದ್ಯತೆಗಳಿದ್ದು ಮಕ್ಕಳಿಗೆ ಅವುಗಳೆಲ್ಲದರ ಕಂಠಪಾಠವಾಗಲು ಸಹಕಾರಿಯಾಗಿದೆ.ಎಳೆಯರಲ್ಲಿ ಸಂಸ್ಕಾರದ ಬೀಜಬಿತ್ತುವುದರಲ್ಲಿ ಇದೊಂದು ಸೋಪಾನವಾಗಿದೆ. ಪ್ರಾರ್ಥನೆ ಮುಗಿದ ಬಳಿಕ; ಅಂದಿನ ವಿಶೇಷ ವಾರ್ತಾವಾಚನ. ಮುಂದೆ ಆಯಾಯ ದಿನದಲ್ಲಿ ಹುಟ್ಟುಹಬ್ಬದ ಮಕ್ಕಳಿಗೆ ಶಾಲಾ ಮುಖ್ಯ ಶಿಕ್ಷಕರಿಂದ ಶುಭ ಆಶೀರ್ವಚನ, ಜೊತೆಗೆ;||ಜನ್ಮದಿನಮಿದಂ ಐಪ್ರಿಯಾ ಸಖೇ ಶಂತನೋತುತೇ ಸರ್ವದಾಮುದಮ್|| ಸಂಸ್ಕೃತ ಶ್ಲೋಕದೊಂದಿಗೆ ಸಾಮೂಹಿಕ ಶುಭಾಶಯ. ಮದ್ಯಾಹ್ನ ಊಟದ ಹೊತ್ತಿಗೆ ಸಿಹಿ ಹಂಚುವಿಕೆ ನೆರವೇರುತ್ತದೆ. ಮುಂದೆ ಹತ್ತು ಗಂಟೆಗೆ ಪಾಠದ ತರಗತಿಗಳು ಆರಂಭ. ಮಧ್ಯಾಹ್ನ 12-45 ರಿಂದ 1-45 ರ ತನಕ ಊಟದ ಹೊತ್ತು. ಶಾಲಾಮಕ್ಕಳಿಗೆ ಹಾಗೂ ಶಿಕ್ಷಕ ವರ್ಗದವರಿಗೆ ಶಾಲೆಯಲ್ಲೇ ತಯಾರಿಸುವ ಬಿಸಿಯೂಟ. ಊಟದ ಹೊತ್ತಿನಲ್ಲಿ ಅನ್ನಪೂರ್ಣೆಯ ಸ್ತುತಿಯ ಬಳಿಕವೇ ಭೋಜನ ಆರಂಭ.
ಶಿಕ್ಷಣ ವಿಶೇಷತೆ– ಉತ್ತಮ ಮಟ್ಟದ ವಿದ್ಯಾಭ್ಯಾಸವನ್ನೊದಗಿಸುವುದಕ್ಕಾಗಿ “ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲ್” ( N.I.O.S)ನ ಮಾನ್ಯತೆಯೊಂದಿಗೆ ಅದೇ ಪಠ್ಯಕ್ರಮದಲ್ಲಿ ಮುಂದುವರಿಯುತ್ತದೆ.L.K.G ಹಾಗೂ U.K.G ಮಕ್ಕಳಿಗೆ ಪ್ರಾಥಮಿಕ ಹಂತದ ಮಾತೃರೂಪಿತ ಆಪ್ತತೆಯಲ್ಲಿ ಕನ್ನಡದೊಂದಿಗೆ ಆಂಗ್ಲ ಅಕ್ಷರ ಪರಿಚಯ. ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ. ವಿ.ಸ್ಯಾಟ್ ಮೂಲಕ ಉಪಗ್ರಹ ಆಧಾರಿತ ಶಿಕ್ಷಣ, ದೃಶ್ಯ-ಶ್ರವ್ಯಸಾಧನ ಸಹಿತ ತರಗತಿಗಳು.ಎರಡನೇ ತರಗತಿಯಿಂದ ಸಂಸ್ಕೃತ, ಮೂರನೆ ತರಗತಿಯಿಂದ ಹಿಂದಿ, ಸೆಟಲೈಟ್ ಕ್ಲಾಸು, ಯೋಗ ಮತ್ತು ಧ್ಯಾನ ತರಗತಿಗಳು, ಕರಾಟೆ ,ಯಕ್ಷಗಾನ ತರಬೇತಿ, ಸಂಕಲಿತ ಶಿಕ್ಷಣಕ್ಕಾಗಿ ಟ್ಯಾಬ್ -ಲ್ಯಾಬ್ ವ್ಯವಸ್ಥೆ ,ಸುಸಜ್ಜಿತ ವಿನ್ಯಾಸ ಪ್ರಯೋಗಾಲಯ ಹತ್ತನೇ ತರಗತಿಗೆ ಶಾಲಾವತಿಯಿಂದಲೇ ವಿಶೇಷ ಕೋಚಿಂಗ್ ವ್ಯವಸ್ಥೆಯಿದೆ.
ಯೋಗ ಮತ್ತು ಧ್ಯಾನ ತರಗತಿಗಳು ,ಡ್ರಾಯಿಂಗ್ ತರಗತಿ, ಅಪೇಕ್ಷಿತರಿಗೆ ಕರಾಟೆಯಿದೆ. ಶಿಕ್ಷಣಕ್ಕೆ ಸಂಬಂಧ ಪಟ್ಟ ಹಾಗೂ ಎಲ್ಲಾ ಸಾಹಿತ್ಯ ವೈವಿದ್ಯತೆಗಳಿರುವ ಹನ್ನೆರಡು ಸಾವಿರಕ್ಕೂ ಮಿಕ್ಕಿ ಪುಸ್ತಕಗಳಿರುವ ಸುಸಜ್ಜಿತವಾದ ಗ್ರಂಥಾಲಯ, ಕ್ರೀಡಾನುಕೂಲವಿರುವ ವಿಶಾಲ ಆಟದ ಮೈದಾನ, ಇವುಗಳೆಲ್ಲದರ ಪ್ರಯೋಜನವನ್ನು ಮಕ್ಕಳು ಪಡೆಯಬಹುದಾಗಿದೆ. ಹಾಗೆಯೇ ಶಾಲಾ ವಾಹನ ಸೌಲಭ್ಯವೂ ಇದೆ.
ಸಾಂಸ್ಕೃತಿಕ+ರಾಷ್ಟ್ರೀಯ
ಹಬ್ಬಗಳನ್ನು ಸಾಮೂಹಿಕವಾಗಿ ಅಭ್ಯಾಗತರನ್ನು ಆಮಂತ್ರಿಸಿ ಆಚರಿಸುವುದು ರೂಢಿ. ಇವುಗಳಲ್ಲಿ ಗಣೇಶ ಚತುರ್ಥಿ, ನೂಲಹುಣ್ಣಿಮೆ, ಶ್ರೀ ಕೃಷ್ಣಾಷ್ಟಮಿ, ಶಾರದಾ ಪೂಜೆ, ವ್ಯಾಸಪೂರ್ಣಿಮೆ, ಹಾಗೂ ಸ್ವಾತಂತ್ರ್ಯ ದಿನಾಚರಣೆ,ಗಾಂಧೀಜಯಂತಿ, ಮಕ್ಕಳ ದಿನಾಚರಣೆ, ಓಣಂ ಮೊದಲಾದ ರಾಷ್ಟ್ರೀಯ ಹಬ್ಬಗಳನ್ನೂ ಆಚರಿಸುವುದಲ್ಲದೆ; ಮಕ್ಕಳಿಂದ ಮಕ್ಕಳಿಗಾಗಿ ಪ್ರತಿ ತಿಂಗಳಕೊನೆಗೆ ಪ್ರತಿಭಾಭಾರತಿ ಹಾಗೂ ಜ್ಞಾನದೀಪ್ತಿ ಸಾಹಿತ್ಯ ಪ್ರಕಾರ ಕಾರ್ಯಕ್ರಮ ನಡೆಸುವರೆ ಪ್ರೋತ್ಸಾಹ ನೀಡಲಾಗುವುದು. ಸ್ಕೌಟ್ ಮತ್ತು ಗೈಡ್ ಕಾರ್ಯಾಗಾರದ ಸೌಲಭ್ಯವನ್ನೂ ನೀಡಲಾಗುವುದು. ಈ ನಿಟ್ಟಿನಲ್ಲಿ , 2018 ಜನವರಿಯಲ್ಲಿ ಕಾಸರಗೋಡು ಜಿಲ್ಲಾ ಮಿನಿಕ್ಯಾಂಪುರಿಯನ್ನು ನಮ್ಮ ವಿದ್ಯಾಲಯದಲ್ಲಿ ನೆರವೇರಿಸಿ; 33 ಶಾಲೆಯ ಸ್ಕೌಟ್+ಗೈಡ್ ವಿದ್ಯಾರ್ಥಿಗಳು ಭಾಗವಹಿಸಿ , ಸ್ಪರ್ಧಾವೇದಿಕೆಯಲ್ಲಿ ನಮ್ಮ ವಿದ್ಯಾಲಯದ ಮಕ್ಕಳು ಸಮಗ್ರ ಬಹುಮಾನವನ್ನು ಗಳಿಸಿದ್ದು ಹೆಮ್ಮೆಯೆನಿಸಿದೆ.
ವಾರ್ಷಿಕೋತ್ಸವ--ವರ್ಧಂತಿ ಉತ್ಸವಕ್ಕೆ ಪೂರ್ವಭಾವಿಯಾಗಿ ಮಕ್ಕಳಿಗೆ ಕೆಲವು ಸಾಹಿತ್ಯ, ಸಾಂಸ್ಕೃತಿಕ ಸ್ಪರ್ಧಾವೇದಿಕೆಗಳೂ ಆಟೋಟಕ್ಕೆ ಹೊಂದಿಕೊಂಡು ‘ಪಥಸಂಚಲನ’ ನಡೆಸಲಾಗುವುದು. ಆಟೋಟಗಳಲ್ಲಿ ಜ್ಯೂನಿಯರ್ ಹಾಗೂ ಸೀನಿಯರ್ ವಿಭಾಗ ಮಾಡಿಕೊಂಡು ಸಾದಾರಣ ಎಲ್ಲಾ ತರದ ಸ್ಪರ್ಧೆಗಳನ್ನು ಅಳವಡಿಸಲಾಗುತ್ತದೆ. ಸಾಹಿತ್ಯ ವಿಭಾಗದಲ್ಲಿ ಪ್ರಬಂಧ, ಕತೆ,ಕವನ, ನೆನಪಿನಶಕ್ತಿಕ್ರೀಡೆ, ರಸಪ್ರಶ್ನೆ, ಡ್ರಾಯಿಂಗ್, ಜಾನಪದಹಾಡು ಹಾಗೂ ರಂಗೋಲಿ ಮುಂತಾದುವುಗಳಿವೆ. ಅಲ್ಲದೆ ಇತರ ಚಟುವಟಿಕೆಗಳಾದ ಸಾಹಿತ್ಯ, ಚಿತ್ರಕಲೆ ಇವುಗಳ ಕ್ರೋಡೀಕರಣವೇ ವಾರ್ಷಿಕೋತ್ಸವದಲ್ಲಿ ಬಿಡುಗಡೆಯಾಗುವ ಮಕ್ಕಳ ಹೊತ್ತಗೆ ‘ಬೆಳಕು’ ಪುಸ್ತಕ.
ಪರಮಪೂಜ್ಯ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯವೂ ಭವ್ಯವೂ ಆದ ಕನಸಿನಕೂಸಾದ ಈ ವಿದ್ಯಾಪೀಠವು- 2001 ರಲ್ಲಿ ಎಲ್.ಕೆ.ಜಿ. ತರಗತಿಯಿಂದ ಆರಂಭಗೊಂಡಿತು. ಅದು ಮುಂದುವರಿಯುತ್ತಾ 2019-20 ರ ತನಕವೂ S.S.L .C ತಂಡ ಪಬ್ಲಿಕ್ ಪರೀಕ್ಷೆಯಲ್ಲಿ 100% ಅಂಕದೊಂದಿಗೆ ತೇರ್ಗಡೆಯಾಗಿರುತ್ತಾರೆ ಎಂಬುದು ಹೆಮ್ಮೆಯ ವಿಚಾರ. 2020-21 ರ ಸಾಲಿನಲ್ಲಿ ಕೊರೋನಾ ಹಾವಳಿಯಿಂದಾಗಿ ಎಲ್ಲಾ ಶಿಕ್ಷಣ ಕ್ಷೇತ್ರದಂತೆ ನಮ್ಮ ಶಾಲೆಯೂ ಸ್ಥಗಿತಗೊಂಡಿದ್ದು online ಮೂಲಕ ಈಗ ಎಲ್ಲಾ ತರಗತಿಗಳ ಪಾಠಮಾಡಲಾಗುತ್ತಿದೆ.
ಇಲ್ಲಿ ಶಿಕ್ಷಣ ಹೊಂದಿರುವ ಪೂರ್ವ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮುಂದೆ ಅವರಿಗೆ ಅಭಿರುಚಿಯುಳ್ಳ ವಿಷಯಗಳನ್ನು ಆಯ್ಕೆಮಾಡಿಕೊಂಡು ಕಾಲೇಜು ಶಿಕ್ಷಣದಲ್ಲೂ ಅತ್ಯಧಿಕ ಅಂಕದೊಂದಿಗೆ ಉತ್ತೀರ್ಣರಾಗಿ ಮುಂದೆ ಇಂಜಿನಿಯರುಗಳಾಗಿ, ಅಧ್ಯಾಪಕ, ಪ್ರಾಧ್ಯಾಪಕರಾಗಿ, ಕಂಪೆನಿಯ ಉದ್ಯೋಗಿಗಳಾಗಿ ಮುಂದಿನ ಜೀವನಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ ಎಂಬುದು ಹೆಮ್ಮೆಯ ವಿಚಾರ.
‘ನಮ್ಮ ಶಿಕ್ಷಕರು ನಮ್ಮ ತಂದೆ-ತಾಯಿಗಿಂತಲೂ ಮಿಗಿಲು.ಅವರೇ ನಮ್ಮ ಆಪ್ತರು’ ಎಂಬ ಭಾವನೆ ಇಲ್ಲಿ ಕಲಿಯುವ ಮಕ್ಕಳಲ್ಲಿ ಮೂಡುತ್ತದೆ. ಈ ಶಾಲೆಗೆ ಬರುವ ಪ್ರತಿಯೊಬ್ಬ ಮಗುವನ್ನೂ ಆಪ್ತತೆಯಿಂದ ಮಾತನಾಡಿಸಿ, ಅವರಲ್ಲಿರುವ ಲೋಪದೋಷಗಳನ್ನು ಗಮನಿಸಿ, ತಿಳಿಹೇಳಿ ಆತ್ಮವಿಶ್ವಾಸ ಮೂಡುವಂತೆ ಮಾಡುವುದರಲ್ಲಿ ಶಿಕ್ಷಕವೃಂದ ಸಫಲರಾಗುತ್ತಾರೆ.ಎಲ್ಲರನ್ನೂ ಬೇಧ ಭಾವವಿಲ್ಲದೆ ಮುಂದೆ ತರುವ ನಿಟ್ಟಿನಲ್ಲಿ ಆಸ್ಥೆವಹಿಸುವ ಆಡಳಿತ ಮಂಡಳಿಯ, ರಕ್ಷಕ-ಶಿಕ್ಷಕ ಸಂಘದ ಸಂಪೂರ್ಣ ಸಹಕಾರವಿದೆ.
ವಿದ್ಯೆಯಲ್ಲಿ, ಬುದ್ಧಿಯಲ್ಲಿ ಹಿಂದುಳಿದವರನ್ನೂ ಹಾಗೂ ಸಮಾಜದ ಎಲ್ಲಾ ಸಮುದಾಯದ ಮಕ್ಕಳನ್ನೂ ಬರಮಾಡಿಕೊಳ್ಳಬೇಕೆಂದು ನಮ್ಮ ಶ್ರೀಸಂಸ್ಥಾನದವರ ಆದೇಶದಂತೆ ಇಲ್ಲಿ ವ್ಯವಹರಿಸಲಾಗುತ್ತದೆ. ಒಂದು ನಾಡಿನ ಸಂಪತ್ತೆಂದರೆ ಆ ನಾಡಿನ ಮಕ್ಕಳು. ಮುಂದಿನ ಪ್ರಜೆಗಳು. ನಮ್ಮ ಶ್ರೀಗುರುಗಳು ಶಾಲಾ ಪ್ರಾರಂಭದ ಹಂತದಿಂದಲೇ ಆಶೀರ್ವಾದ ಮಂತ್ರಾಕ್ಷತೆ ಅನುಗ್ರಹಿಸಿ ಹೇಳಿದ್ದೇನೆಂದರೆ; “ಎಲ್ಲಾ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ಸ್ಥಳ ಕಾದಿರಿಸುತ್ತಾರೆ. ಆದರೆ ಕಲಿಕೆಯಲ್ಲಿ ಹಿಂದಿರುವವರು ಎಲ್ಲಿಗೆ ಹೋಗಬೇಕು?. ಅವರು ಮುಂದೆ ಬರುವುದು ಬೇಡವೇ!?.ನಾವು ಅಂತಹ ಮಕ್ಕಳಿಗೂ ಅವಕಾಶ ನೀಡಿ, ಮುಂದೆ ತರಬೇಕಾಗಿದೆ”. ಎಂದಿದ್ದರು. ಸದ್ರಿ ಶ್ರೀಗುರುಗಳ ಅಪೇಕ್ಷೆಯಂತೆ ಬುದ್ಧಿವಂತ ಮಕ್ಕಳಿಗೆ ಮಾತ್ರ ಅವಕಾಶವನ್ನೀಯದೆ,ಕಲಿಕೆಯಲ್ಲಿ ಹಿಂದಿರುವವರನ್ನೂ ಬುದ್ಧಿವಂತರನ್ನಾಗಿ ಮಾಡುವ ದೊಡ್ಡಗುಣ ಈ ಶಾಲೆಗಿದೆ.
~~ಲೇ-ವಿಜಯಾಸುಬ್ರಹ್ಮಣ್ಯ. ಗ್ರಂಥ ಪಾಲಿಕೆ, ಮುಜುಂಗಾವು ವಿದ್ಯಾಪೀಠ.
ವ್ಯವಹರಿಸಬೇಕಾದವರು.
ಆಡಳಿತಾಧಿಕಾರಿ-ಶ್ರೀಯುತ ಶ್ಯಾಂಭಟ್ ದರ್ಭೆಮಾರ್ಗ.
ಮೊ:9446283049.
~~~
ಶಾಲೆಯ ವಿಳಾಸಃ- ಶ್ರೀಭಾರತೀವಿದ್ಯಾಪೀಠ,ಮುಜುಂಗಾವು,
ಅಂಚೆಃ ಎಡನಾಡು, ಕಾಸರಗೋಡು ಜಿಲ್ಲೆ -671321.
ಚೆನ್ನಾಗಿದೆ. ಈ ಲೇಖನ ಶಾಲೆಯ ಬಗ್ಗೆ ಮಾಹಿತಿ ನೀಡುವ ಮೂಲಕ ಅಗತ್ಯ ಇರುವವರಿಗೆ ಉಪಯೋಗವಾಗಬಲ್ಲುದು
ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠವು ಪ್ರಗತಿ ಪಥದಲ್ಲಿ ಮುನ್ನಡೆಯಲಿ. ಹರೇ ರಾಮ
ವಿದ್ಯಾಪೀಠದ ಸಂಪೂರ್ಣ ಮಾಹಿತಿ ಒಳಗೊಂಡ ಉತ್ತಮ ಲೇಖನ.ಈ ಎಲ್ಲಾ ಸೌಲಭ್ರಗಳ ಜೊತೆ ಸಂಸ್ಕಾರ ಸಂಸ್ಕೃತಿ ಯನ್ನು ಹೊಂದುವ ಭಾಗ್ಯವನ್ನು ಮಕ್ಕಳು ಪಡೆದುಕೊಳ್ಳುವಂತಾಗಲಿ.
ಹರೇ ರಾಮ
ನಾನು ನೀಡಿದ ನಮ್ಮ ಶ್ರೀ ಗುರುಗಳ ನಿರ್ದೇಶನದಂತೆ ನಡೆದು ಬರುವ ನಮ್ಮ ಮುಜುಂಗಾವು ವಿದ್ಯಾಪೀಠದ ಪರಿಚಯ ಓದಿದ ಹಾಗೂ ಇಲ್ಲಿ ಪ್ರಕಟಿಸಿದ ಹೇಮಮಾಲಾ ಅವರಿಗೂ ಹೃತ್ಪೂರ್ವಕ ಧನ್ಯವಾದಗಳು.
ಶಾಲೆಯ ಸಂಪೂರ್ಣ ಮಾಹಿತಿ ಇದರಲ್ಲಿದೆ. ಮಕ್ಕಳ ರಕ್ಷಾ ಕರ್ತ್ತರು ಇದು ಗಮನಿಸಿ ತಮ್ಮ ಮಕ್ಕಳ ಜವಾಬ್ದಾರಿ ಇಲ್ಲಿಗೆ ನೀಡಿದರೆ ಗುರು ಸರಸ್ವತೀಯರ ಅನುಗ್ರಹ ಪಡೆಯಲು ಸಾಧ್ಯವಿದೆ. ಹರೇ ರಾಮ
Good information about Bharathi Vidhya Peetha Mujungavu. Suggest responsible parents shall entrust their children’s education in full trust on the safe hands of the school for their career and good culture build up. Hare Rama
ತಮ್ಮ ವಿದ್ಯಾಲಯದ ಬಗೆಗೆ ಸಮಗ್ರ ಮಾಹಿತಿ ಹೊತ್ತ ಲೇಖನ ಚೆನ್ನಾಗಿದೆ ವಿಜಯಕ್ಕ