ನೆನಪೆಂಬ ಅಚ್ಚರಿ

Share Button

ಅಜ್ಜನ ಮನೆಯಲ್ಲಿದ್ದುಕೊಂಡು ಒಂದನೆಯ ಹಾಗೂ ಎರಡನೆಯ ತರಗತಿ ಕಲಿತ ನನಗೆ ಆ ನೆನಪಿನ್ನೂ ನಿತ್ಯನೂತನ. ಅದೊಂದು ದಿನ, ಎರಡನೆಯ ತರಗತಿಯಲ್ಲಿ ಓದುತ್ತಿದ್ದ ನಾನೂ ನನ್ನ ಮಾವನ ಮಗನೂ ಶಾಲೆ ಬಿಟ್ಟ ನಂತರ ಮನೆಯ ಕಡೆಗೆ ಹೊರಟಿದ್ದೆವು. ಆಕಾಶದ ತುಂಬೆಲ್ಲಾ ಮೋಡಗಳು ದಟ್ಟೈಸಿತ್ತು. ನಾವು ಆ ದಿನ ಗೊರಬು/ಕೊಡೆ ಕೊಂಡು ಹೋಗಿರಲಿಲ್ಲ. ಅದಕ್ಕೆ ವೇಗವಾಗಿ ಹೆಜ್ಜೆ ಹಾಕುತ್ತಿದ್ದೆವು. ಇನ್ನೇನು ಮಳೆ ಶುರುವಾಗಿಯೇ ಬಿಟ್ಟಿತು ಅನಿಸುವಷ್ಟರಲ್ಲಿ, ಮಕ್ಕಳು ಒದ್ದೆ ಆಗಬಾರದೆಂದು ನನ್ನ ಮಾವ ಕೊಡೆ ಹಿಡಿದುಕೊಂಡು ಎದುರಿನಿಂದ ಬರುತ್ತಿದ್ದರು. ಅವರನ್ನು ಕಂಡ ಖುಷಿಯಲ್ಲಿ ಕೊಡೆ ತೆಗೆದುಕೊಳ್ಳಲೆಂದು ಮಾವನ ಬಳಿಗೆ ಓಡುವಾಗ ಕಾಲು ಜಾರಿ ಬಿದ್ದು ಹಣೆಗೆ ಆಳವಾದ ಪೆಟ್ಟಾಗಿ ರಕ್ತ ಸುರಿಯಲು ಪ್ರಾರಂಭವಾಯಿತು. ಆಗ ಅರೆಕ್ಷಣವೂ ಯೋಚಿಸದೆ, ತಾವು ತಲೆಗೆ ಕಟ್ಟಿಕೊಂಡಿದ್ದ ಒಳ್ಳೆಯ ಚಂದದ ಶಾಲನ್ನು(ಮುಂಡಾಸನ್ನು) ಬಿಚ್ಚಿ ನನ್ನ ಹಣೆಗೆ ಕಟ್ಟಿ, ರಕ್ತ ಹರಿಯುವುದನ್ನು ನಿಲ್ಲಿಸಿದ ಮಾವನ ಆ ಕ್ಷಣದ ನೆನಪು ನನ್ನ ಮನಸ್ಸಿನಲ್ಲಿ ಈಗಲೂ ( 1977ರಲ್ಲಿ ನಡೆದದ್ದು ) ಅಚ್ಚಳಿಯದೆ ನಿಂತಿದೆ.

ನೆನಪು ಅಂದರೇನು? ನೆನಪು ಉಳಿಯುವುದು ಹೇಗೆ? ನೆನಪಿಗೆ ಬರುವುದು ಹೇಗೆ? ಪಂಚೇಂದ್ರಿಯಗಳ ಮೂಲಕ ಗ್ರಹಿಸಿದ ವಿಷಯಗಳು ನೆನಪಾಗಿ ಉಳಿಯಲು ಮಾನದಂಡವೇನು?…ಹೀಗೆಲ್ಲಾ ನಮಗೆ ನಾವೇ ಪ್ರಶ್ನೆ ಮಾಡಿಕೊಂಡರೂ  ಸುಲಭಮಾತುಗಳಲ್ಲಿ ಉತ್ತರಿಸಲು ಕಷ್ಟಸಾಧ್ಯ. ಜೀವನದ ಪ್ರತಿಯೊಂದು ಕ್ಷಣವೂ ನಾವು ಅನುಭವಿಸುವ ಅಂದರೆ ನೋಡುವ, ಕೇಳುವ, ತಿನ್ನುವ, ಮುಟ್ಟುವ ಹಾಗೆಯೇ  ಆಘ್ರಾಣಿಸುವ ಮಾಹಿತಿಗಳಿಗೆ ಲೆಕ್ಕವಿಟ್ಟವರಾರು? ಅನಾಯಾಸವಾಗಿ ಈ ಮಾಹಿತಿಗಳು ಮೆದುಳಿಗೆ ರವಾನೆಯಾದರೂ ಎಲ್ಲಾ ಮಾಹಿತಿಗಳು ಅಲ್ಲಿ ಖಾಯಂ ಆಗಿ ಉಳಿಯುವುದಿಲ್ಲ. ಹಾಗಾದರೆ ಖಾಯಂ ಆಗಿ ಮೆದುಳಲ್ಲಿ ಉಳಿಯಬೇಕಾದರೆ ಆ ಅನುಭವಗಳು ಹೇಗಿರಬೇಕು? ಗಹನವಾದ ಪ್ರಶ್ನೆಗಳು. ಈ ನೆನಪೆಂಬ ಅಚ್ಚರಿಯ ಬಗ್ಗೆ ನನಗೆ ತೋಚಿದ ಕೆಲವು ವಿಚಾರಗಳಿವು.

ನನಗೆ ಹಾಡುಗಳನ್ನು ಕೇಳುವುದೆಂದರೆ ಇಷ್ಟ, ಹಾಡುವುದೂ ಇಷ್ಟವೇ. ಇಡೀ ದಿನ ಹಾಡು ಕೇಳಿದರೂ, ಸಾಕು ಎಂದೆನಿಸುವುದಿಲ್ಲ. ಬೇರೆ ಯಾವ ಜವಾಬ್ದಾರಿಗಳೂ ಇರಬಾರದು ಅಷ್ಟೇ.   ನನಗೊಂದು ಅಭ್ಯಾಸವಿದೆ. ಯಾರಾದರೂ ಒಬ್ಬರು ನಮ್ಮ ಪರಿಚಿತ ಹಾಡುಗಾರರ ಹಾಡನ್ನು ಪ್ರಥಮ ಬಾರಿಗೆ ಕೇಳಿದಾಗ ಆ ಹಾಡು ತುಂಬಾ ಇಷ್ಟವಾಯಿತು ಎಂದಿಟ್ಟುಕೊಳ್ಳೋಣ. ಹಾಡಿದವರ ಮುಖವೂ, ಆ ದಿನ ಅವರು ಹಾಡಿದ ಹಾಡೂ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿದುಬಿಡುತ್ತದೆ. ಮುಂದೊಂದು ದಿನ ಅದೇ ವ್ಯಕ್ತಿ ಎಲ್ಲಿಯಾದರೂ ಸಿಕ್ಕಿದಾಗ, ಆ ಹಾಡು ಕೇಳಿದ್ದು ನೆನಪಿಗೆ ಬರುತ್ತದೆ. ಹಾಗೆಂದು ಪ್ರಸಿದ್ಧ ಗಾಯಕರನ್ನು ಆ ರೀತಿ ನೆನಪಿಟ್ಟುಕೊಳ್ಳುವುದಿಲ್ಲ.

ಹತ್ತನೆಯ ತರಗತಿಯಲ್ಲಿರುವಾಗ ಒಂದು ದಿನದ ಶೈಕ್ಷಣಿಕ ಪ್ರವಾಸಕ್ಕೆ ಹೋದಾಗಿನ ಸಂದರ್ಭದಲ್ಲಿ ಬೆಳಗ್ಗಿನ ಉಪಾಹಾರಕ್ಕೆ ಹೋಟೆಲೊಂದರಲ್ಲಿ ತಿಂದ ನೀರುಳ್ಳಿ ದೋಸೆಯ ರುಚಿಗೆ ಸರಿಸಾಟಿಯಾದ ನೀರುಳ್ಳಿ ದೋಸೆ ನನಗಿನ್ನೂ ಸಿಕ್ಕಿಲ್ಲ. ಯಾವುದಾದರೂ ವಿವಾಹ ಯಾ ಇನ್ನಿತರ ಸಮಾರಂಭಕ್ಕೆ ಹೋದಾಗ ಅಲ್ಲಿಯ ಭೋಜನ ಮನಸ್ಸಿಗೆ ತುಂಬಾ ಇಷ್ಟವಾದರೆ ಅದು ನೆನಪಾಗಿ ಉಳಿದುಬಿಡುತ್ತದೆ.

ನನಗೆ ಕತ್ತಲಲ್ಲಿ ಹೋಗಲು ಅಂತಹ ಭಯವೇನಿಲ್ಲ. ಒಮ್ಮೆ ಹೀಗೆ ಬೆಳಕಿಲ್ಲದೆ ಮನೆಯ ಹೊರಗೆ ಹೋದಾಗ ಹಾವಿನ ಮೇಲೆ ತುಳಿದ ಆ ಅನುಭವ ಹಾವುಗಳನ್ನು ಕಂಡಾಗಲೆಲ್ಲಾ ಮರುಕಳಿಸುತ್ತದೆ. ದೇಹದ ಯಾವುದೇ ಅಂಗವು ಅನುಭವಿಸಿರುವ ವಿಪರೀತ ನೋವಿನ ತೀವ್ರತೆಯ (ನನ್ನ ಪ್ರಕಾರ ಅತ್ಯಂತ ಹೆಚ್ಚು ಎಂದು ನಾವು ಪರಿಗಣಿಸಿರುವ)ನೆನಪು ಮಾಸುವುದಿಲ್ಲ. ಮುಂದೆ ಅದೇ ಅಂಗಕ್ಕೆ ಅಂತಹದೇ ನೋವು ಭಾಧಿಸಿದರೆ ಗೊತ್ತಿಲ್ಲದಂತೆ ಮೊದಲು ಅನುಭವಿಸಿದ ನೋವಿನ ಮಧ್ಯೆ ಒಂದು ತುಲನೆ ಏರ್ಪಡುತ್ತದೆ. ಮೊದಲಿಗಿಂತ ಜೋರಿನದಾಗಿದ್ದರೆ, ಆ ನೋವು ಕೂಡಾ ನೆನಪಿನ ಕೋಶಕ್ಕೆ ರವಾನೆಯಾಗುತ್ತದೆ.

ಮೂಗಿನ ವಾಸನೆ ಗ್ರಹಿಸುವ ಶಕ್ತಿಯಿಂದಾಗಿ, ಮೂಗಿನ ಮೂಲಕ ಗ್ರಹಿಸಿದ ವಿಷಯಗಳು ಕೂಡಾ ನೆನಪಿಗೆ ಸೇರುತ್ತವೆ. ಒಳ್ಳೆಯ ಪರಿಮಳ(ಸುವಾಸನೆ), ಕೆಟ್ಟ ಪರಿಮಳ(ದುರ್ವಾಸನೆ), ಗಾಢ ಸುವಾಸನೆ/ದುರ್ವಾಸನೆ,……ಹೀಗೆ ತರಹೇವಾರಿ ವಾಸನೆಗಳ ಮಾಹಿತಿ ಮೆದುಳಿಗೆ ರವಾನೆಯಾಗುತ್ತಿದೆ. ವಿಧ ವಿಧದ ಹೂವು, ಹಣ್ಣು, ತರಕಾರಿ, ಬೇಳೆ ಕಾಳುಗಳು, ವಿವಿಧ ಪ್ರಾಣಿಗಳ ಮೈಯ ವಾಸನೆ,…ಎಲ್ಲವೂ ಮೆದುಳಿನಲ್ಲಿ ಶೇಖರವಾಗುತ್ತವೆ. ಅದೇ ತರಹದ ವಾಸನೆಯನ್ನು ಮತ್ತೊಮ್ಮೆ ಗ್ರಹಿಸಿದಾಗ, ಇದರದ್ದೇ ವಾಸನೆ ಅಂತ ಖಚಿತವಾಗಿ ಹೇಳಬೇಕಾದರೆ ಆ ಮಾಹಿತಿ ನೆನಪಲ್ಲಿ ಇರಲೇ ಬೇಕು.

PC: Internet

ಪಂಚೇಂದ್ರಿಯಗಳ ಮೂಲಕ ಗ್ರಹಿಸಿದ ವಿಷಯಗಳೆಲ್ಲವೂ ಗಾಢ ನೆನಪಲ್ಲಿ ಉಳಿಯುವುದು ಯಾವಾಗ? ಗ್ರಹಿಸಿದ ವಿಷಯಗಳು ಮನಸ್ಸಿಗೆ ಅತೀವ ಖುಷಿ ಕೊಟ್ಟಿದ್ದರೆ ಅಥವಾ ಅತೀವ ನೋವು ಕೊಟ್ಟಿದ್ದರೆ ಅದು ನೆನಪಿನಲ್ಲಿ ಉಳಿಯುವುದು. ಹಾಗಾಗಿ ಅಲ್ಲಿ ಎರಡು ಮಿತಿಗಳು, ಕೆಳ ಮಿತಿ (Lower limit ), ಮತ್ತು ಮೇಲಿನ ಮಿತಿ (Upper limit). ಜೀವನದ ಪ್ರತಿಕ್ಷಣವೂ ಪಡೆಯುವ ಅಥವಾ ಗ್ರಹಿಸುವ ವಿಷಯಗಳು ಈ ಎರಡು ಮಿತಿಗಳ ಮಧ್ಯೆ ಇದ್ದಾಗ, ಆ ವಿಷಯಗಳು ನೆನಪಲ್ಲಿ ಗಾಢವಾಗಿ ಉಳಿಯುವುದಿಲ್ಲ. ಇಲ್ಲಿಯ ತನಕ ಅನುಭವಿಸಿದ ಅನುಭವಗಳಿಂದ ಭಿನ್ನವಾಗಿದ್ದಾಗ ಮಾತ್ರ ಮಿತಿಯ ಮಟ್ಟ ಏರಿಳಿತವಾಗುತ್ತದೆ. ಇಷ್ಟರ ತನಕ ಗ್ರಹಿಸದ ಹೊಸ ವಿಷಯಗಳು ಅರಿವಿಗೆ ಬಂದರೆ ಆ ವಿಷಯಗಳು ಕೂಡಾ ನೆನಪಾಗಿ ಪರಿವರ್ತಿತವಾಗಬಹುದು.

ಕೆಲವರಿಗೆ ನಿಜವಾಗಿ ಮರೆವು ಜಾಸ್ತಿ.ಇನ್ನು ಕೆಲವರಿಗೆ ಜಾಣ ಮರೆವು. ಒಂದು ವಾರದಲ್ಲಿ/ಒಂದು ತಿಂಗಳಿನಲ್ಲಿ/ಒಂದು ವರ್ಷದಲ್ಲಿ/ಸಾಧ್ಯವಾದಾಗ ಹಿಂದೆ ಕೊಡುವೆನೆಂದು ತೆಗೆದುಕೊಂಡ ಸಾಲದ ಹಣದ ನೆನಪೇ ಇಲ್ಲದ ಹಾಗೆ ವರ್ತಿಸುತ್ತಾರೆ. ತಾವು ಉಪಕಾರ ಪಡೆದುಕೊಂಡ ವಿಷಯದ ನೆನಪೇ ಇಲ್ಲದ ಹಾಗೆ ನಟಿಸುವರು. ನನ್ನ ಅಧ್ಯಾಪನ ವೃತ್ತಿಯಲ್ಲಿ ಗಮನಿಸಿದ ಇನ್ನೊಂದು ಅಂಶ. ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸಿರುತ್ತೇವೆ.  ಶಿಕ್ಷಕರನ್ನು ಜಾಸ್ತಿ ನೆನಪಿನಲ್ಲಿಟ್ಟುಕೊಳ್ಳುವುದು ಜಾಸ್ತಿ ಬೈಗುಳ ತಿಂದ ವಿದ್ಯಾರ್ಥಿಗಳೇ. ಅತ್ಯುತ್ತಮ ಅಂಕ ಪಡೆದು, ಉತ್ತಮ ಉದ್ಯೋಗ ಪಡೆದ ವಿದ್ಯಾರ್ಥಿಗಳು ಮರೆತುಬಿಡುವುದೇ ಜಾಸ್ತಿ (ಎಲ್ಲರೂ ಅಲ್ಲ).

ನೆನಪೆಂಬ ಅಚ್ಚರಿಗೆ ಸೇರ್ಪಡೆಯಾಗಲು ಬೇಕಾದ ಇನ್ನೊಂದು ಅಂಶವಿದೆ. ಕೆಲವೊಮ್ಮೆ ನಾವು ಕೇಳುವ ಅತಿ ಸುಂದರ ಶಬ್ದಗಳು, ನೋಡುವ ಸುಂದರ ದೃಶ್ಯಗಳು, ತಿಂದ ರುಚಿಯಾದ ಆಹಾರ, ಸುಕೋಮಲ ಸ್ಪರ್ಶ, ಗ್ರಹಿಸಿದ ಸುವಾಸನೆ ರೋಮಾಂಚನ ಉಂಟು ಮಾಡಬಹುದು, ಆನಂದದ ಕಣ್ಣೀರಾಗಿಸಬಹುದು, ಮನಸ್ಸನ್ನು ಆನಂದದ ಅನುಭೂತಿಯಲ್ಲಿ ತೇಲಾಡಿಸಬಲ್ಲುದು. ವೈರುಧ್ಯವೂ ಇದೆ.   ಒಂದು ಇಂದ್ರಿಯದಿಂದ ಗ್ರಹಿಸಿದ ವಿಷಯಗಳು ಇನ್ನೊಂದು ಇಂದ್ರಿಯದ ಮೂಲಕ ವ್ಯಕ್ತವಾಗಬಹುದು. ಅಂತಹ ಉತ್ಕಟ ಅನುಭವಗಳು ನೆನಪೆಂಬ ಅಚ್ಚರಿಗೆ ಸೇರ್ಪಡೆಯಾಗುತ್ತವೆ. ಬರೆದಷ್ಟು ಮುಗಿಯದ ಅನನ್ಯ ವಿಚಾರವೇ ನೆನಪೆಂಬ ಅಚ್ಚರಿ.

-ಡಾ.ಕೃಷ್ಣಪ್ರಭಾ.ಎಂ, ಮಂಗಳೂರು

12 Responses

  1. ಬಿ.ಆರ್.ನಾಗರತ್ನ says:

    ನೆನಪೆಂಬ ಅಚ್ಚರಿ ಲೇಖನ ನಮ್ಮನ್ನು ಮೆಲುಕು ಹಾಕುವಂತೆ ಇದೆ.ಅಭಿನಂದನೆಗಳು ಮೇಡಂ.

  2. sudha says:

    Nice article

  3. ಶಂಕರಿ ಶರ್ಮ, ಪುತ್ತೂರು says:

    ನೆನಪಿನ ಬಗೆಗಿನ ಲೇಖನ ಓದುವಾಗ ನನಗೂ ಅಂತಹದೇ ವಿಚಾರಗಳು ನೆನಪಿಗೆ ಬಂದುವು. ಸಾಮಾನ್ಯವೆನಿಸಿದ, ಆದರೆ ಅಷ್ಟೇ ಗಂಭೀರ ವಿಷಯದ ನಿರೂಪಣೆ ವಿಶೇಷವಾಗಿದೆ..ಧನ್ಯವಾದಗಳು.

    • KRISHNAPRABHA M says:

      ಸದಾ ಕಾಡುವ ವಿಷಯ- ಅರಿವಿಗೆ ಬರುವ ವಿಷಯಗಳು ನೆನಪುಗಳಾಗಿ ಬದಲಾಗುವ ಬಗೆಯೇ ಅನನ್ಯ. ಮೆಚ್ಚುಗೆಗೆ ಧನ್ಯವಾದಗಳು ಶಂಕರಿ ಅವರೇ

  4. ನಯನ ಬಜಕೂಡ್ಲು says:

    ಸೂಪರ್. ಬಹಳ ಸುಂದರವಾಗಿದೆ ನೆನಪಿನ ಗುಚ್ಛವನ್ನೊಳಗೊಂಡ ಬರಹ.

    • KRISHNAPRABHA M says:

      ಎಲ್ಲಾ ಬರಹಗಳನ್ನು ಮೆಚ್ಚಿ ಪ್ರೋತ್ಸಾಹಿಸುವ ನಯನಾ ಅವರಿಗೆ ಮನದಾಳದ ವಂದನೆಗಳು

  5. Santosh Shetty says:

    ನೆನಪೆಂಬ ಅಚ್ಚರಿ ಲೇಖನ ಓದಿದ ನನಗೆ ಬಾಲ್ಯದ, ಯೌವನದ ಹತ್ತು, ಹಲವಾರು ನೆನಪುಗಳು ಮತ್ತೆ ಮತ್ತೆ ಮರುಕಳಿಸಿದ ಅನುಭವ!. ಆದರೆ, ಕೆಲವೊಂದು ನೆನಪು, ಅನುಭವವಾಗಿ ಆಸ್ವಾದಿಸಬೇಕು, ಅಷ್ಟೇ.

    ಸಾಮಾನ್ಯ ವಿಷಯವನ್ನು , ನಿರೂಪಿಸಿದ ಶೈಲಿ ಚೆನ್ನಾಗಿತ್ತು, ತಮ್ಮ ಈ ಹಿಂದಿನ ಬರೆಹ ಗಳಂತೆಯೇ!

    ತಮ್ಮ ನಿರೂಪಣೆ ಗೆ ಓದುಗನನ್ನು ಕೊನೆಯ ತನಕ ಹಿಡಿತ ದಲ್ಲಿಟ್ಟು ಕೊಳ್ಳುವ ಸಾಮರ್ಥ್ಯ ವಿದೆ.

    • KRISHNAPRABHA M says:

      ಮೆಚ್ಚುಗೆಯ ಮಾತುಗಳಿಗೆ ವಂದನೆಗಳು ಸಂತೋಷ್ ಅವರಿಗೆ. ಸವಿ ನೆನಪುಗಳನ್ನು ಮೆಲುಹು ಹಾಕುವುದರಿಂದ ಕೆಲವೊಮ್ಮೆ ಮನಸ್ಸು ಉಲ್ಲಸಿತವಾಗುವುದು ನಿಜವೇ.

  6. Hema says:

    ಚೆಂದದ ಬರಹ. ಇತ್ತೀಚೆಗೆ ಕೆಲವೊಮ್ಮೆ ಹಾಸ್ಯಾಸ್ಪದವಾಗುವ ಮರೆವು..ಉದಾ: ಫ್ರಿಡ್ಜ್ ನಿಂದ ಏನನ್ನೋ ತರಲು ಅದರ ಬಳಿ ಹೋಗಿ….ಅದರ ಬಾಗಿಲು ತೆಗೆದಾಗ ಏನು ಬೇಕಾಗಿತ್ತು ಅಂತ ಮರೆತಿರುತ್ತೇನೆ!

    • KRISHNAPRABHA M says:

      ಮೆಚ್ಚುಗೆಗೆ ಧನ್ಯವಾದಗಳು. ಬಹುಶಃ ಕೆಲಸದ ಅತಿ ಒತ್ತಡ ಹಾಗೂ ಹಲವಾರು ಯೋಚನೆಗಳು ಒಟ್ಟಿಗೆ ನುಸುಳುವ ಕಾರಣ, ಆ ಕ್ಷಣದ ಮರೆವು ಸಂಭವಿಸಬಹುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: