ಕವಿನೆನಪು 19: ಹೆಗ್ಗೋಡಿನ ಸಾಧಕ ಕೆ ವಿ ಸುಬ್ಬಣ್ಣ ಹಾಗೂ ಕೆ ಎಸ್ ನ
ದೂರದ ಹೆಗ್ಗೋಡಿನಲ್ಲಿ ಸಿನಿಮಾ ರಸಗ್ರಹಣ, ನಾಟಕ ರೆಪರ್ಟರಿ, ಪುಸ್ತಕ ಪ್ರಕಾಶನ ಮುಂತಾದ ರಚನಾತ್ಮಕ ಸಾಮುದಾಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ನಿಸ್ಪೃಹವಾಗಿ ತೊಡಗಿಸಿಕೊಂಡಿದ್ದ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಕೆ ವಿ ಸುಬ್ಬಣ್ಣ ಅವರೊಡನೆಯೂ ಆತ್ಮೀಯವಾದ ಸ್ನೇಹವನ್ನು ಹೊಂದಿದ್ದರು ನಮ್ಮ ತಂದೆ.
ಅವರ ಅಕ್ಷರ ಪ್ರಕಾಶನದಿಂದ ಹೊರಬರುತ್ತಿದ್ದ ಸಾಕ್ಷಿ ಸಾಹಿತ್ಯ ತ್ರೈಮಾಸಿಕ ಪತ್ರಿಕೆಯಲ್ಲಿ ತಪ್ಪದೆ ನಮ್ಮ ತಂದೆಯವರ ಕವನಗಳನ್ನು ಪ್ರಕಟಿಸುತ್ತಿದ್ದರು ಕೆ ವಿ ಸುಬ್ಬಣ್ಣ ಅವರು. ತೆರೆದ ಬಾಗಿಲು, ಮುಚ್ಚಿದ ಕಿಟಕಿ ,ಅನುಮಾನ ಇಂಥ ಕವನಗಳು ಸಾಕ್ಷಿ ಪತ್ರಿಕೆಯಲ್ಲಿ ಪ್ರಕಟವಾಗಿ ಕಾವ್ಯಾಸಕ್ತರ ಗಮನ ಸೆಳೆದಿತ್ತು. ಕವನ ಕಳಿಸುವುದು ಸ್ವಲ್ಪ ತಡವಾದರೂ ಸುಬ್ಬಣ್ಣ ಅವರಿಂದ ನಮ್ಮ ತಂದೆಯವರಿಗೆ ತಪ್ಪದೆ ನೆನಪೋಲೆ ಬರುತ್ತಿತ್ತು. ನೀಡಬೇಕಾದ ಸಂಭಾವನೆಯಲ್ಲಿ ವರುಷಕ್ಕೊಮ್ಮೆ ಚಂದಾ ಮೊತ್ತ ಕಳೆದು ಬಾಕಿಹಣಕ್ಕೆ ಚೆಕ್ ಕಳಿಸುತ್ತಿದ್ದರು. ಅವರಿಬ್ಬರ ಭೇಟಿ ಬೆಂಗಳೂರು,ಶಿವಮೊಗ್ಗ,ಮೈಸೂರು ಇಂಥ ಕಡೆ ನಡೆಯುವ ಸಮಾರಂಭ ಗಳಲ್ಲಿ ನಡೆಯುತ್ತಿತ್ತು. ಒಂದೆರಡು ಬಾರಿ ಅವರಿದ್ದ ಹೊನ್ನೇಸರಕ್ಕೂ ಹೋಗಿ ಬಂದಿದ್ದರು ನಮ್ಮತಂದೆ.
1976 ರ ಡಿಸೆಂಬರ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಬ್ಬಣ್ಣ ಅವರು ಸಿಕ್ಕಿದಾಗ ನಮ್ಮ ತಂದೆ ಕೇಳಿದ ಮೊದಲ ಪ್ರಶ್ನೆ ಅಡಿಕೆ ಇದೆಯೆ ಸುಬ್ಬಣ್ಣ ಎಂದೇ. ಆಗ ಅವರು ಇದೆ, ಇದೆ ಎನ್ನುತ್ತ ತಮ್ಮ ಕೈಚೀಲದಿಂದ ಅಡಕೆಯನ್ನು ತೆಗೆದು ನ ಮ್ಮ ತಂದೆಗೆ ಕೊಟ್ಟಿದ್ದರು . ಒಮ್ಮೆ ಸುಬ್ಬಣ್ಣ ಅವರಿಗೆ ನಮ್ಮ ತಂದೆ “ಸಾಗರದಲ್ಲಿ ಒಳ್ಳೆ ನಡಿಗೆ ಬೆತ್ತ(walking stick) ಸಿಗುತ್ತದಂತೆ ಕಳಿಸಿಕೊಡಲು ಸಾಧ್ಯವೆ ” ಎಂದು ಕೇಳಿದ್ದರು. ಅದನ್ನು ಸುಬ್ಬಣ್ಣ ಸಂತೋಷದಿಂದ ವ್ಯವಸ್ಥೆ ಮಾಡಿ ನಮ್ಮ ತಂದೆಗೆ “ನಡಿಗೆ ಬೆತ್ತವನ್ನು ಉಪ್ಪಾರಪೇಟೆ ಪೋಲಿಸ್ ಸರ್ಕಲ್ ಇನ್ಸ್‌ಪೆಕ್ಟರ್ ರವಿರಾಜ್ ಅವರು ನಿಮಗೆ ತಲುಪಿಸುತ್ತಾರೆ” ಎಂದು ಪತ್ರ ಬರೆದಿದ್ದರು. ಇನ್ಸ್‌ಪೆಕ್ಟರ್ ಅದನ್ನು ಬಟವಾಡೆಮಾಡಲು ಬೇರೆ ತಾವೇ ಸಿಬ್ಬಂದಿಗೂ ಹೇಳದೆ ತಾವೇ ಪೊಲೀಸ್ ಜೀಪ್ ನಲ್ಲಿ ನಮ್ಮ ಮನೆಗೆ ಬಂದರು. ಅಕ್ಕಪಕ್ಕದವರಿಗೆಲ್ಲ ಕುತೂಹಲ.ಇನ್ಸ್‌ಪೆಕ್ಟರ್ ನಡಿಗೆ ಬೆತ್ತ ಹಸ್ತಾಂತರಿಸಿ. “ನಿಮ್ಮನ್ನು ಭೇಟಿಯಾದ ಅವಕಾಶ ದೊರೆತದ್ದು ಸಂತೋಷ” ಎಂದು ಹೇಳಿ ಹೊರಟರು.
ಸರಳಜೀವಿಯಾದ ಸುಬ್ಬಣ್ಣ ನಮ್ರತೆಯ ಸಾಕಾರಮೂರ್ತಿ. ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದವರು. ಮ್ಯಾಗಸೆಸೆ ಪ್ರಶಸ್ತಿಯನ್ನು ಸ್ವೀಕರಿಸಲೂ ಅವರು ಸಿದ್ಧರಿರಲಿಲ್ಲ, ಆಪ್ತವರ್ಗದವರು ತುಂಬ ಬಲವಂತ ಮಾಡಿದಾಗ ಒಪ್ಪಿ”ಈ ಪ್ರಶಸ್ತಿ ನನಗಲ್ಲ. ಇದನ್ನು ನೀನಾಸಂ ಪರವಾಗಿ ಸ್ವೀಕರಿಸುತ್ತೇನೆ” ಎಂದಿದ್ದರು.
ನಮ್ಮ ತಂದೆಯವರು ಸುಬ್ಬಣ್ಣ ಅವರ ಆತ್ಮೀಯತೆಯನ್ನು ಸಂದರ್ಭವಾದಾಗಲೆಲ್ಲ ನೆನಪಿಸಿಕೊಳ್ಳುತ್ತಿದ್ದರು. ಸದ್ದಿಲ್ಲದ ಸಾಧಕ ಸುಬ್ಬಣ್ಣ ಅವರ ಬಗ್ಗೆ ನಮ್ಮ ತಂದೆಯವರಿಗೆ ಮೆಚ್ಚುಗೆ ಇತ್ತು..
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30170
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ಸರ್, ಇಲ್ಲಿ ಬರುವ ನಿಮ್ಮ ತಂದೆಯವರ ಕುರಿತಾದ ಪ್ರತಿಯೊಂದು ವಿಚಾರವೂ ಬಹಳ ಅಪ್ಯಾಯಮಾನ.
ಸಾಹಿತ್ಯಕ್ಷೇತ್ರದ ದಿಗ್ಗಜರ ಬಗೆಗಿನ ಭಾವಪೂರ್ಣ ಲೇಖನಗಳು ಬಹಳ ಚಿಂತನಾತ್ಮಕವಾಗಿವೆ..ಧನ್ಯವಾದಗಳು ಸರ್.