ಗೊಬ್ಬರದ ಗುಂಡಿಯಲ್ಲಿ ಅಳಿಯದೇವರು!!
ದೀಪಾವಳಿ ಹಬ್ಬದ ಸಂದರ್ಭವೊಂದರಲ್ಲಿ ನನ್ನ ಗೆಳತಿಯೊಬ್ಬಳು ತಮ್ಮ ದೊಡ್ಡಪ್ಪನ ತೋಟದ ಮನೆಗೆ ನನ್ನನ್ನು ಆಹ್ವಾನಿಸಿದ್ದಳು. ಅದು ನನ್ನ ಗೆಳತಿಯ ಅಕ್ಕನಿಗೆ ವಿವಾಹವಾದ ನಂತರ ಬಂದಿದ್ದ ಮೊದಲ ದೀಪಾವಳಿಯೂ ಆಗಿತ್ತು. ಹೊಸ ಅಳಿಯದೇವರೂ ಮಾವನ ಮನೆಗೆ ಬಂದಿದ್ದರು. ಇದು ನಡೆದದ್ದು ಸುಮಾರು ನಲವತ್ತೈದು ವರ್ಷಗಳ ಹಿಂದೆ. ಆಗಿನ ಕಾಲಕ್ಕೇ ಅಳಿಯ ವಿದೇಶದಲ್ಲಿ ನೌಕರಿ ಮಾಡುತ್ತಿದ್ದರು. ಇನ್ನು ಕೇಳಬೇಕೇ ಅವರಿಗೆ ರಾಜೋಪಚಾರ. ನನ್ನ ಗೆಳತಿಯ ದೊಡ್ಡಪ್ಪ ತಮ್ಮಲ್ಲಿದ್ದ ಆಳುಮಗನ ಕೈಯಲ್ಲಿ ಅಳಿಯನಿಗೆ ಅಭ್ಯಂಜನಕ್ಕಾಗಿ ಎಣ್ಣೆ ಒತ್ತಿಸಿ ಬಿಸಿಯಾದ ನೀರಿನಲ್ಲಿ ನೀರೆರೆಸಿದರು. ಬೆಳಗಿನ ಉಪಾಹಾರವೂ ಭರ್ಜರಿಯಾಗಿತ್ತು.
ದೊಡ್ಡಪ್ಪನವರಿಗೆ ಏನೋ ಕರೆಬಂದು ಹೊರಗೆ ಹೋದರು. ಅವರು ಹಿಂದಿರುಗಿ ಬರಲು ಸಾಕಷ್ಟು ಸಮಯವಾಗಿತ್ತು. ಬಂದಾಗ ಮನೆಯ ಮುಂದಿನ ಜಗುಲಿಯಲ್ಲಿ ಕುಳಿತಿದ್ದ ಅಳಿಯ ಕಾಣಲಿಲ್ಲ. ಎಲ್ಲೋ ಮನೆಯ ಒಳಗಿರಬೇಕೆಂದು ಅವರ ಹೆಸರಿಡಿದು ಕೂಗುತ್ತಾ ಒಳಹೋದರು. ನಾನೂ ಹಬ್ಬದ ತಯಾರಿಯಲ್ಲಿ ಗೆಳತಿಯ ಮನೆಯವರೊಡನೆ ಕೈಜೋಡಿಸಿದ್ದೆ. ಆದರೆ ಒಳಗಡೆ ಅಳಿಯನನ್ನು ಕಾಣದೇ ಅವರು ಎಲ್ಲಿಹೋದರೆಂದು ವಿಚಾರಿಸಿದರು. ಎಲ್ಲಾ ಕೊಠಡಿಗಳನ್ನೂ ನೋಡಿದ್ದಾಯ್ತು ಎಲ್ಲಿಯೂ ಇಲ್ಲ. ಹೊಸದಾದ ಜಾಗ, ಎಲ್ಲಿ ಹೋಗಿರಬಹುದೆಂದು ಸುತ್ತಮುತ್ತ ಹುಡುಕಾಡತೊಡಗಿದೆವು.
ಅಷ್ಟರಲ್ಲಿ ಮನೆಯ ಹತ್ತಿರದಲ್ಲಿಯೇ ಇದ್ದ ತೋಟದ ಕಡೆಯಿಂದ ಆಳುಮಗನೊಬ್ಬ ಓಡುತ್ತಾ ಬಂದ. ಬಂದವನೇ ಅಯ್ಯಾ ಚಿಕ್ಕ ಯಜಮಾನರು ನೀವು ಆ ಕಡೆ ಹೋಗುತ್ತಿದ್ದಂತೆ ನನ್ನನ್ನು ಕರೆದು ತೋಟ ತೋರಿಸು ಬಾ ಎಂದು ಕರೆದರು. ನಾನು ಸರಿಯೆಂದು ಅವರನ್ನು ಕರೆದುಕೊಂಡು ಹೋದೆ. ದಾರಿಯಲ್ಲಿ ನಾನು ಮುಂದೆ ಮುಂದೆ ಅವರು ಹಿಂದೆ ಹಿಂದೆ ಮಾತನಾಡುತ್ತಾ ಪ್ರತಿಯೊಂದನ್ನೂ ಹೇಳುತ್ತಾ ಹೋಗುತ್ತಿದ್ದೆ. ಒಮ್ಮಿಂದೊಮ್ಮೆಲೇ ಅವರ ಮಾತಿನ ಸದ್ದೇ ಕೇಳಿಸಲಿಲ್ಲ. ಹಿಂತಿರುಗಿ ನೋಡಿದರೆ ಚಿಕ್ಕ ಯಜಮಾನರು ಮಂಗಮಾಯವಾಗಿದ್ದರು. ನಾನೂ ತೋಟದಲ್ಲೆಲ್ಲಾ ಬಾರಾಡಿಬಿಟ್ಟೆ. ಎಲ್ಲಿ ಹೋದರೋ ತಿಳಿಯಲಿಲ್ಲ. ಕೂಗಿದರೂ ಅವರಿಂದ ಉತ್ತರವೂ ಬರಲಿಲ್ಲ. ನನಗೆ ಭಯವಾಗಿ ಓಡಿಬಂದೆ ಅಯ್ಯಾ ಎಂದು ಕೈ ಬಾಯಿಯನ್ನು ವಿಚಿತ್ರವಾಗಿ ಆಡಿಸಿದ.
ಎಲ್ಲರಿಗೂ ಗಾಭರಿಯಾಗಿ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ತೋಟದ ಮೂಲೆಮೂಲೆಯಲ್ಲಿ ಹುಡುಕತೊಡಗಿದೆವು. ಎಲ್ಲೋ ಒಂದು ಮೂಲೆಯಲ್ಲಿಂದ ಚಪ್ಪಾಳೆ ತಟ್ಟುವ ಸದ್ದು ಕೇಳಿಬಂತು. ಅಲ್ಲಿಗೆ ಓಡಿನೋಡಿದೆವು. ಇತ್ತೀಚೆಗಷ್ಟೇ ಖಾಲಿಮಾಡಿದ್ದ ಗೊಬ್ಬರದ ಗುಂಡಿಯೊಂದರಿಂದ ಚಪ್ಪಾಳೆ ಕೇಳಿಬಂತು. ಪಾಪ ಆಳುಮಗನೊಡನೆ ಮಾತನಾಡುತ್ತಾ ಎತ್ತಲೋ ನೋಡಿಕೊಂಡು ಕಾಲಿಟ್ಟು ಜಾರಿ ಅದರೊಳಗೆ ಅಳಿಯದೇವರು ಬಿದ್ದಿದ್ದರು. ಆಳವಾಗಿದ್ದ ಕಾರಣ ಮೇಲಕ್ಕೆ ಬರಲಾಗದೇ ಅಲ್ಲಿಯೇ ನಿಂತಿದ್ದರು. ತಕ್ಷಣ ಇಬ್ಬರು ಅಳುಮಕ್ಕಳನ್ನು ಕರೆಸಿ ಅವರನ್ನು ಅನಾಮತ್ತಾಗಿ ಮೇಲಕ್ಕೆತಿಸ್ತಿದರು. ಅಳಿಯನಿಗೆ ಮತ್ತೊಮ್ಮೆ ಅಭ್ಯಂಜನವಾಯಿತು. ಇದೊಂದು ನಾನು ಕಂಡ ದೀಪಾವಳಿಯ ಮರೆಯಲಾಗದ ಅನುಭವವಾಗಿ ನೆನಪಿನಲ್ಲುಳಿದಿದೆ.
ಈಗಲೂ ದೀಪಾವಳಿ ಹಬ್ಬ ಬಂದಾಗಲೆಲ್ಲ ಆ ಪ್ರಸಂಗ ನೆನಪಾಗಿ ನಗುಬರುತ್ತದೆ. ಯಾವುದೇ ಹೊಸ ಜಾಗಕ್ಕೆ ಹೋದಾಗ ಹಿಂದುಮುಂದು ಸರಿಯಾಗಿ ನೋಡಿಕೊಂಡು ನಡೆಯಬೇಕೆಂಬ ತಿಳುವಳಿಕೆಯೂ ಮೂಡಿತು.
ಒಂದು ಚುಟುಕ: ಪಟಾಕಿಯ ಕರಾಮತ್ತು.
ಮುದ್ದಿಸು ನನ್ನ ಬಾಯಿಗೆ ಬೆಂಕಿಯ ಕಿಡಿಯನ್ನಿತ್ತು
ತೋರಿಸುವೆನು ನನ್ನೊಡಲಿನಲ್ಲಿನ ಸಂಪತ್ತು
ದೂರದಲ್ಲಿ ನಿಂತು ನೋಡುತ್ತಿರು ಗಮ್ಮತ್ತು
ಹತ್ತಿರ ಬಂದರೆ ನಿನಗೆ ಆದೀತು ಆಪತ್ತು.
-ಬಿ.ಆರ್.ನಾಗರತ್ನ, ಮೈಸೂರು.
ಚೆನ್ನಾಗಿದೆ
ದೀಪಾವಳಿಯ ನೆನಪು ಚೆನ್ನಾಗಿತ್ತು
ತಿಳಿ ಹಾಸ್ಯದಿಂದ ಕೂಡಿದ ಬರಹ.
ತಿಳಿ ಹಾಸ್ಯದ ಜೊತೆ ಚಂದದ ಬರಹ…
ಸಾಹಿತ್ಯ ಸಹೃದಯರಿಗೆ ಧನ್ಯವಾದಗಳು.
ನಾನು ಬರೆದ ಲೇಖನದ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ತಿಳಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
ಸುಂದರ ಹಾಸ್ಯ ಪ್ರಸಂಗ
ಸೊಗಸಾಗದ ನಿರೂಪಣೆ..ತಿಳಿಹಾಸ್ಯದ ನಗುವಿನಲ್ಲಿ ತೇಲಾಡಿಸಿತು.
ಪಾಪ, ಅಳಿಯ ದೇವರಿಗೆ ಹೀಗಾಗ ಬಾರದಿತ್ತು..
ಲಲಿತ ಪ್ರಬಂಧ ಸೊಗಸಾದ ಲಾಲಿತ್ಯದಿಂದ ಕೂಡಿದೆ.