ಕೊರೊನ ನಿಮಿತ್ತ
ಲಾಕ್ ಡೌನನ್ನು ಉಲ್ಲಂಘಿಸಿ ಸುದಿನ ಸೂರ್ಯೋದಯಕೆ
ಸುಪ್ರಭಾತವ ಉಲುಹುವ ಹಕ್ಕಿಗಳ ಹಿಂಡು
ಏನೂ ಆಗಿಲ್ಲ, ದೇವರಿದ್ದಾನೆ, ಎಲ್ಲವೂ ಸರಿಯಾಗಿದೆ ಎಂಬಂತೆ
ಹಕ್ಕಿಗೂಡಲ್ಲಿ ಮೊಳಗುವ ಹೊಸ ಸಂಸಾರಗೀತೆ
ಮರಿಗಳಿಗೆ ಮೊಲೆಯೂಡುತ್ತ ತಣ್ಣಗೆ ಮುಲುಕುವ ಬೆಕ್ಕು
ವಠಾರ ಸ್ವಚ್ಛಗೊಳಿಸುವ ಸಹಜ ಕಾಯಕನಿರತ ಕಾಗೆ ಬಳಗ
ವಸಂತಾಗಮನಕೆ ಪಲ್ಲವಿಯ ಹಾಡಿ ಪುಳಕಗೊಳ್ಳುವ ಗೋಸಂಪಗೆಯ ತೇರು
ಹಲವು ಮಕ್ಕಳ ತಾಯಿ ಹಲಸು ಮೈತುಂಬ ಮುಳ್ಳುಗಳ ಹೊತ್ತೂ
ಹಸಿದ ಮಂದಿಗೆ ಉದರ ತಣಿಸುವ ಸಂಕಲ್ಪಹೊತ್ತು.
ಕಾಲೆರಡರಿಂದ ಬುವಿಯ ಮೆಟ್ಟಿನಡೆವ ಈ ಜನರೆಂಬ ಜನಕೆ ಮಾತ್ರ
ಮುಖಮೂತಿ ಮುಚ್ಚಿ ಉಗುಳಲಾಗದೆ ಉಸಿರಾಡಲಾಗದೆ
ಹಾಡಹಗಲಲ್ಲೆ ದು:ಸ್ವಪ್ನಬಿದ್ದು ತತ್ತರ!
ಹತ್ತಿರವಿದ್ದೂ ದೂರನಿಲ್ಲುವ ಮಂದಿ
ದೂರ ಪಾಲಿಸಿ ಹತ್ತಿರವಾಗುವ ಪಾಠ
ಕಲಿಯಬೇಕಲ್ಲ!
-ಮಹೇಶ್ವರಿ. ಯು
ಲೋಕಕ್ಕೆ ಕಂಟಕ ಬಂದರೂ ಪ್ರಾಣಿ+ಪಕ್ಷಿಗಳು ಎದುರಿಸಿ ಬದುಕುವ ನಿತ್ಯ ನಿಜ ಮಾತು…
ಮನುಷ್ಯ ಕೈಯ್ಯಾರೆ ತಂದು ಕೊಂಡ ಪರಿಸ್ಥಿತಿ, ಎಲ್ಲವನ್ನೂ ಅನುಭವಿಸಬೇಕಾಗಿದೆ
ಮಾನವನ ದುರಾಸೆ ತಂದ ಈ ಕಷ್ಟವು ಅವನಿಗೆ ಬುದ್ಧಿ ಕಲಿಸಬಹುದೇನೋ..ಕಾದುನೋಡಬೇಕಿದೆ.
ಮನುಷ್ಯ ಪ್ರಕೃತಿ ಗೆ ಮಾಡಿದ ತೊಂದರೆಗಳಿಂದಾಗಿ ಮೈ ಕೊಡವಿಕೊಳ್ಳುವಳು