ಪರಶು ಬೀಸಿ ಭೂಮಿ ಸೃಷ್ಟಿಸಿದ ಪರಶುರಾಮ
ಮಹರ್ಷಿಯೊಬ್ಬ ಒಂದು ಸಂದರ್ಭದಲ್ಲಿ ಯಾವುದೋ ಕಾರಣಕ್ಕೆ ತನ್ನ ಹೆಂಡತಿಯ ಮೇಲೆ ಮೇಲೆ ಸಿಟ್ಟಾದ, ಆ ಕೋಪ ಎಷ್ಟಿತ್ತೆಂದರೆ ಆಕೆಯ ಶಿರಚ್ಛೇದನವ್ನ್ನು ಮಾಡಲು ತನ್ನ ಐದಾರು ಮಕ್ಕಳಿಗೂ ಆಜ್ಞಾಪಿಸುತ್ತಾನೆ. ಯಾವ ಕಟುಕನಾದರೂ ತನ್ನ ಹೆತ್ತತಾಯಿಯ ತಲೆ ಕಡಿಯುವುದಕ್ಕೆ ಒಪ್ಪಿಯಾನೇ? ಅಂತದದ್ದರಲ್ಲಿ ಸಚ್ಚಾರಿತ್ರ್ಯ ಮಕ್ಕಳು ಒಪ್ಪುತ್ತಾರೆಯೇ ? ಎಂದು ನಾವೆಲ್ಲ ಊಹಿಸಬಹುದು. ಊಹೆ ನಿಜ. ನಾಲ್ವರು ಪುತ್ರರೂ ಒಪ್ಪುವುದಿಲ್ಲ. ಕಟ್ಟ ಕಡೆಗೆ ಕೊನೆಯ ಅಪ್ಪನ ಆಜ್ಞೆಯನ್ನು ಶಿರಸಾವಹಿಸಿ ಪರಿಪಾಲಿಸಿದ. ಕೊನೆಗೆ ತನ್ನ ನಿವೇದನೆಯನ್ನೂ ಅಪ್ಪನ ಮುಂದಿಟ್ಟ. ಈ ಮಹರ್ಷಿ ಯಾರು ಯಾವ ಸಂದರ್ಭದಲ್ಲಿ ಹೆಂಡತಿಯ ತಲೆ ಕಡಿಯಲು ತಾಕೀತು ಮಾಡಿದ? ತಾಯಿಯ ತಲೆ ಉರುಳಿಸಿ ಅಪ್ಪನ ಆಜ್ಞೆ ಪೂರೈಸಿದವನಾರು ? ಕೊನೆಗೆ ತನ್ನ ಪ್ರಾರ್ಥನೆಯನ್ನು ಹೇಗೆ ಮುಂದಿಟ್ಟ ಎಂಬುದನ್ನು ಅರಿಯೋಣ.
ಮಹಾವಿಷ್ಣುವಿನ ದಶಾವತಾರಗಳಲ್ಲಿ ಪರಶುರಾಮನೂ ಒಬ್ಬ, ಅವತಾರ ಪುರುಷ ಭೃಗುವಂಶದ ಜಮದಗ್ನಿಯ ಮಗನೇ ಪರಶುರಾಮ, ಈತನ ತಾಯಿ ಪ್ರಸೇನಜಿತ್ ಎಂಬ ರಾಜನ ಮಗಳಾದ ರೇಣುಕೆ. ಪರಶುರಾಮನಿಗೆ ರುಮಣ್ವಂತ, ಸುಷೇಣ, ವಸು ಮತ್ತು ವಿಶ್ವಾವಸು ಎಂಬ ನಾಲ್ವರು ಸಹೋದರರು. ಕಾರ್ತಿವೀರ್ಯನೆಂಬ ರಾಜನು ಒಮ್ಮೆ ಬೇಟೆಯಾಡುತ್ತಾ ತನ್ನ ಪರಿವಾರ ಸಮೇತ ಕಾಡಿಗೆ ಬಂದವನು ಜಮದಗ್ನಿಯ ಆಶ್ರಮದತ್ತ ಬಂದ. ಆಶ್ರಮಕ್ಕೆ ಬಂದ ರಾಜನಿಗೂ ರಾಜನ ಪರಿವಾರದವರಿಗೂ ಜಮದಗ್ನಿಯು ತನ್ನ ‘ಧೇನು’ವಿನ ಸಹಾಯದಿಂದ ತೃಪ್ತಿಯಾಗುವಷ್ಟು ಉಣಬಡಿಸಿದ, ಕೇಳಿದ್ದನ್ನು ಕೊಡುವ ಧೇನು ತನ್ನ ಮನೆಯಲ್ಲಿರಬೇಕೆಂದು ರಾಜ ಕೇಳಿದ. ಆದರೆ ಮುನಿ ಕೊಡಲು ಒಪ್ಪಲಿಲ್ಲ. ಕುಪಿತಗೊಂಡ ಅವನು ಅದನ್ನು ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋದ. ಈ ವಿಷಯವನ್ನರಿತ ಪರಶುರಾಮ ‘ಧೇನು’ ವನ್ನು ವಾಪಾಸು ಪಡೆಯಲು ರಾಜನೊಂದಿಗೆ ಯುದ್ಧಕ್ಕೆ ಹೋದ. ಯುದ್ಧದಲ್ಲಿ ಕಾರ್ತಿವೀರ್ಯನನ್ನು ಸೋಲಿಸಿದ.
ಹೀಗಿರಲು ಒಂದು ದಿನ ರೇಣುಕೆ, ಸ್ನಾನಕ್ಕೆಂದು ಹೊಳೆಗೆ ಹೋಗಿದ್ದಳು. ಅಲ್ಲಿ ಚಿತ್ರರಥನೆಂಬ ಗಂಧರ್ವರಾಜನು ತನ್ನ ಸ್ತ್ರೀಯೊಂದಿಗೆ ಜಲಕ್ರೀಡೆಯಾಡುವುದನ್ನು ನೋಡಿ ರೇಣುಕೆ ಕಾಮವಿಕಾರವುಳ್ಳವಳಾದಳು. ಯಾಗ ಮಾಡುತ್ತಿದ್ದ ಮಹರ್ಷಿ, ತನ್ನ ಮಡದಿ ಎಷ್ಟು ಹೊತ್ತಾದರೂ ಮನೆಗೆ ಮರಳಿ ಬಾರದಿರುವುದನ್ನು ಗಮನಿಸಿದ. ತನ್ನದಿವ್ಯದೃಷ್ಟಿಯಿಂದ ಬಾರದಿರುವ ಕಾರಣವನ್ನೂ ಅರಿತ, ಮನದಲ್ಲೇ ಕೋಪಾವಿಷ್ಠನಾದ ಮುನಿ ಕೆರಳಿ ಕೆಂಡವಾದ. ಸ್ವಲ್ಪ ಹೊತ್ತಿನ ಮೇಲೆ ರೇಣುಕೆ ಮನೆಗೆ ಬಂದಳು. ಪತ್ನಿಯನ್ನು ಕಂಡ ಮಹರ್ಷಿ ತನ್ನ ನಾಲ್ವರು ಮಕ್ಕಳಿಗೂ ತಾಯಿಯ ತಲೆಯನ್ನು ಕಡಿಯುವಂತೆ ಆಜ್ಞಾಪಿಸಿದ. ನಾಲ್ವರು ಮಕ್ಕಳೂ ಹೆತ್ತಮ್ಮನ ಶಿರಚ್ಛೇದನ ಮಾಡಲು ಒಪ್ಪಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಮುನಿ ಪತ್ನಿಯ ಮುಖ ವಿಕಾರವಾಗುವಂತೆ ಮಂತ್ರ ಪ್ರೋಕ್ಷಣೆ ಮಾಡಿದ, ಮಕ್ಕಳ ಬಾಯಿಯಿಂದ ಮಾತು ಹೊರಡದಂತೆ ಮಂತ್ರಿಸಿದ ಜಲವನ್ನು ಅವರ ಮೇಲೆ ಪ್ರೋಕ್ಷಿಸಿದ, ನೋಡುತ್ತಿದ್ದಂತೆ ರೇಣುಕೆ ವಿಕಾರ ರೂಪ ತಾಳಿ ಗುರುತೇ ಸಿಗದಂತಾದಳು, ಮಕ್ಕಳಾದ ರುಮಣ್ವಂತ, ಸುಷೇಣ, ವಸು, ವಿಶ್ವಾವಸು ನಾಲ್ವರೂ ಮೂಕರಾದರು! ಇಷ್ಟೊತ್ತಿಗಾಗಲೇ ಪರಶುರಾಮ ಧೇನುವಿನ ಸಹಿತ ಹಿಂತಿರುಗಿದ. ಮನೆಗೆ ಬಂದಾಗ ಏನೋ ವಿಶೇಷ ನಡೆದಿದೆ ಎಂದು ಸಂಶಯ ಬಂದು ಅಣ್ಣಂದಿರಲ್ಲಿ ಕೇಳಿದ. ಅವರು ನಾಲ್ವರೂ ಮಾತು ಹೊರಡಿಸದೆ ಸುಮ್ಮನೆ ನೋಡುತ್ತಾ ನಿಂತರು.
ಅಷ್ಟರಲ್ಲಿ ಜಮದಗ್ನಿಯೇ ‘ವಿಷಯವೇನೆಂದು ನಾನು ಹೇಳುತ್ತೇನೆ. ಮೊದಲು ಈ ದುಷ್ಟೆಯ ಶಿರಚ್ಛೇದನ ಮಾಡು’ ಎಂದ. ಅರಿಯಲಿಲ್ಲ. ವಿಕಾರ ರೂಪದ ಹೆಣ್ಣನ್ನೊಮ್ಮೆ,ಅಣ್ಣಂದಿರನ್ನೊಮ್ಮೆ ನೋಡಿದ. ಅಮ್ಮನ ಗುರುತು ಮಗನಿಗೆ ಸಿಗಲಿಲ್ಲ! ಯಾರೀಕೆ? ಊಹೂಂ ಇನ್ನೂ ತಿಳಿಯಲಿಲ್ಲ. ‘ನೋಡುವುದೇನು ಹೇಳಿದಷ್ಟು ಮಾಡು’ ಆಜ್ಞಾಪಿಸಿದ ತಂದೆ. ಯಾರೇ ಆಗಿರಲಿ ಪಿತೃವಾಕ್ಯ ಪರಿಪಾಲನೆ ಮಗನಾದ ನನ್ನ ಕರ್ತವ್ಯವಲ್ಲವೆ? ಸಕಾರಣವಿಲ್ಲದೆ ತಂದೆ ಈ ರೀತಿ ಹೇಳಲಾರರು. ಸರಿ… ಹಿಂದು ಮುಂದು ನೋಡದೆ ಪರಶುರಾಮ ಖಡ್ಗದಿಂದ ಆ ಹೆಣ್ಣಿನ ತಲೆ ಕಡಿದೇ ಬಿಟ್ಟ, ಕಡಿದ ಮೇಲೆ ತಿಳಿಯಿತು, ತಾನು ಕಡಿದುದು ಬೇರಾರನ್ನೂ ಅಲ್ಲ. ತನಗೆ ಜನ್ಮ ನೀಡಿದ ಜನ್ಮದಾತೆಯ ಶಿರವನ್ನೆಂದು!. ಭಯಾಶ್ಚರ್ಯಗಳಿಂದ ತಂದೆಯ ಮುಖವನ್ನೇ ನೋಡಿದ. ಮಗ ಪಿತೃವಾಕ್ಯ ಪರಿಪಾಲನೆ ಮಾಡಿದುದಕ್ಕಾಗಿ ಪಿತನಿಗೆ ಸಂತೋಷವಾಯಿತು. ಉಳಿದ ನಾಲ್ಕು ಮಕ್ಕಳು ತನ್ನಾಜ್ಞೆ ಪಾಲಿಸಲಿಲ್ಲ! ‘ಮೂರು ವರಗಳನ್ನು ಕೊಡುತ್ತೇನೆ ಕೇಳಿಕೋ’ ಎಂದ ಜಮದಗ್ನಿ. ಪರಶುರಾಮ ಮೊದಲು ‘ನನ್ನ ಹೆತ್ತಮ್ಮ ಬದುಕಿ ಬರಬೇಕು’ ಎಂದು ಕೇಳಿದ. ಸರಿ, ತುಂಡರಿಸಲ್ಪಟ್ಟ ರುಂಡವನ್ನು ಮುಂಡಕ್ಕೆ ಜೋಡಿಸಲು ಸೂಚಿಸಿ ಮಂತ್ರ ಪುರಷ್ಕರಣೆ ಮಾಡಿದ ಜಮದಗ್ನಿ, ಆಶ್ಚರ್ಯ!! ರೇಣುಕೆ ನಿದ್ದೆಯಿಂದ ಎಚ್ಚರಗೊಂಡವಳಂತೆ ಎದ್ದು ನಿಲ್ಲುತ್ತಾಳೆ. ಎರಡನೆಯ ವರವಾಗಿ ಅಣ್ಣಂದಿರಿಗೆ ಮಾತು ಬರುವಂತಾಗಬೇಕೆಂದು ಕೇಳಿಕೊಳ್ಳುತ್ತಾನೆ. ಸರಿ ಹಾಗೆಯೇ ಆಯಿತು. ಇನ್ನು ಇಂತಹ ಮುಂಗೋಪ ಬಿಡಬೇಕೆಂದು ಮೂರನೆಯ ವರವಾಗಿ ಜನ್ಮದಾತನೊಡನೆ ಪರಶುರಾಮ ಕೇಳಿಕೊಳ್ಳುತ್ತಾನೆ. ಮಗನ ಬೇಡಿಕೆಗಳನ್ನು ಜಮದಗ್ನಿ ಈಡೇರಿಸುತ್ತಾನೆ.
ತಾಯಿಯನ್ನು ಕೊಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ಪರಶುರಾಮ ಭೂಪ್ರದಕ್ಷಿಣೆ ಕೈಗೊಳ್ಳುತ್ತಾನೆ. ಇದೇ ಸಮಯಕ್ಕೆ ಬಂದ ಕಾರ್ತಿವೀರ್ಯನ ಮಕ್ಕಳು ಜಮದಗ್ನಿಯನ್ನು ಕೊಲ್ಲುತ್ತಾರೆ. ತನ್ನ ತಂದೆಯನ್ನು ಕೊಂದ ಸೇಡನ್ನು ತೀರಿಸುವುದಕ್ಕಾಗಿ ಪರಶುರಾಮನು ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ನಾಶ ಮಾಡುತ್ತಾನೆ. ಈ ದೋಷ ಪರಿಹಾರಕ್ಕಾಗಿ ಅಶ್ವಮೇಧ ಯಾಗವನ್ನು ಮಾಡಿ ರಾಜ್ಯಗಳನ್ನು ಕಶ್ಯಪನಿಗೆ ದಾನ ಮಾಡುತ್ತಾನೆ. ಮುಂದೆ ಪರಶುರಾಮನಿಗೆ ಬ್ರಾಹ್ಮಣರಿಗೆ ಭೂಮಿ ದಾನ ಮಾಡಬೇಕೆಂಬ ಮನಸ್ಸುಂಟಾಗುತ್ತದೆ. ಅದಕ್ಕಾಗಿ ನೆಲ ಕರುಣಿಸಬೇಕೆಂದು ಸಮುದ್ರರಾಜನಲ್ಲಿ ಬಿನ್ನವಿಸಿಕೊಳ್ಳುತ್ತಾನೆ. ‘ಸಮುದ್ರ ಕಿನಾರೆಯಲ್ಲಿ ನಿಂದು ನಿನ್ನ ಕೊಡಲಿಯನ್ನು ಬೀಸಿ ಒಗೆ, ಕೊಡಲಿ ಬಿದ್ದಷ್ಟು ದೂರಕ್ಕೆ ಹಿಂದೆ ಸರಿಯುತ್ತೇನೆ‘ ಎಂದ ಸಮುದ್ರರಾಜನ ಮಾತಿನಂತೆ ಕನ್ಯಾಕುಮಾರಿಯಿಂದ ಗೋಕರ್ಣದ ತನಕ ಸಮುದ್ರ ಹಿಂದೆ ಸರಿದು ಭೂಮಿ ಸೃಷ್ಟಿಯಾಗುತ್ತದೆ, ಈ ಭೂಮಿಯನ್ನು ಪರಶುರಾಮ ಬ್ರಾಹ್ಮಣರಿಗೆ ಕೊಡುತ್ತಾನೆ. ಇದು ಪರಶುರಾಮ ಕ್ಷೇತ್ರವೆಂದು ಈಗಲೂ ಕರೆಯುತ್ತಾರೆ.
ದ್ರೋಣನಿಗೆ, ಕರ್ಣನಿಗೆ ಬಿಲ್ಲು ವಿದ್ಯೆ ಕಲಿಸಿದ ಕೀರ್ತಿ ಪರಶುರಾಮನಿಗೆ ಸಲ್ಲುತ್ತದೆ. ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ಬಿಲ್ಲು ವಿದ್ಯೆ ಕಲಿತುದಕ್ಕಾಗಿ ಕರ್ಣನು ಪರಶುರಾಮನ ಶಾಪಕ್ಕೆ ಗುರಿಯಾಗುತ್ತಾನೆ.
ಶ್ರೀರಾಮನಿಂದ ಪರಶುರಾಮನ ಗರ್ವಭಂಗವಾಯಿತು. ಪರಶುರಾಮನಿಗೆ ಶಿವನು ಪರಶು(ಕೊಡಲಿ)ವನ್ನು ಕರುಣಿಸಿದರೆ ದೇವಿಯ ದಿವ್ಯಾಸ್ತ್ರಗಳನ್ನು ದಯಪಾಲಿಸಿದ್ದಳು, ಪರಶುರಾಮನು ಮಹೇಂದ್ರ ಪರ್ವತದಲ್ಲಿ ಈಗಲೂ ತಪಸ್ಸು ಮಾಡುತ್ತಿದ್ದಾನೆ ಎಂಬ ನಂಬಿಕೆಯಿದೆ.
-ವಿಜಯಾ ಸುಬ್ರಹ್ಮಣ್ಯ. ಕುಂಬಳೆ
ಈ ಕಥೆ ನಂಬ ಬಹುದೆ…. ರೆಣುಕಾ ಬುದ್ಧನ ಧಮ್ಮ ಪ್ರಚಾರ ಮಾಡುತ್ತಾ ಬರುತ್ತಾಳೆ ಎಂಬ ಐತಿಹಾಸಿಕ ಹಿನ್ನೆಲೆ ಇದೆಯಲ್ಲ…
ಚೆನ್ನಾಗಿದೆ
ಪರಶುರಾಮ ಸೃಷ್ಟಿ.. ನಮ್ಮ ಭೂಮಿ.. ಚಂದದ ಕಥಾನಿರೂಪಣೆ. ಧನ್ಯವಾದಗಳು ವಿಜಯಕ್ಕ.
ಪರಶುರಾಮ,ಜಮದಗ್ನಿ ಮಹರ್ಷಿಗಳ ಕಥೆ ಹಿಂದೆ ಯಾವಾಗಲೋ ಓದಿದ ನೆನಪು. ಈಗ ಪುನಃ ಓದಿ ಕುಶಿ ಆಯಿತು.ಸುಂದರ ನಿರೂಪಣೆ