ನೆನಪು 20: ಭಾವಗೀತೆಗಳ ಭಾವಪೂರ್ಣ ಗಾಯಕ ಸುಬ್ಬಣ್ಣ ಹಾಗೂ ಕೆ ಎಸ್ ನ
ಮನೆಗೆ ಬಂದೊಡನೆ ಮನೆಯ ಎಲ್ಲರೊಡನೆ ಲವಲವಿಕೆಯಿಂದ ಮಾತನಾಡುತ್ತಿದ್ದರು. ನಮ್ಮ ತಾಯಿಯವರ ಒಡನೆ ಹೆಚ್ಚು ಆತ್ಮೀಯತೆ ಇರಲು ಕಾರಣ ಇಬ್ಬರೂ ಶಿವಮೊಗ್ಗದವರಾಗಿದ್ದುದು. “ಕಾಫಿ ತೆಗೆದುಕೊಳ್ಳುತ್ತೀರಾ ಸುಬ್ಬಣ್ಣ” ಎಂದು ನಮ್ಮ ತಾಯಿ ಕೇಳಿದರೆ “ಕೊಡಿ, ವೆಂಕಮ್ಮನವರೆ ನೀವು ಕೊಡದಿದ್ದರೆ ನಾನೇ ಕೇಳಿ ಪಡೆಯುತ್ತಿದ್ದೆ” ಎನ್ನುತ್ತಿದ್ದರು. ಸಾಹಿತ್ಯ ಕ್ಷೇತ್ರದ ಆಗುಹೋಗುಗಳ ಬಗ್ಗೆ ನಮ್ಮ ತಂದೆಯವರ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿ, “ಕವಿಗಳೆ, ಆಕಾಶವಾಣಿಯ ನವಸುಮ ಕಾರ್ಯಕ್ರಮಕ್ಕೆ ನಿಮ್ಮ ಈ ಹಾಡು ಮಾಡುತ್ತಿದ್ದೇನೆ. ಹಾಡಿ ತೋರಿಸಲೆ” ಎನ್ನುತ್ತಿದ್ದರು. ನಮ್ಮ ತಂದೆ ಕೈಸನ್ನೆಯಿಂದಲೇ ಅನುಮತಿ ನೀಡಿದಾಗ ಯಾವುದೇ ವಾದ್ಯಗಳ ಅಬ್ಬರವಿಲ್ಲದೆ, ಕೇವಲ ಚಿಟಿಕೆ ಸದ್ದಿನೊಂದಿಗೆ, ಕಣ್ಣು ಮುಚ್ಚಿ ಹಾಡಲು ಆರಂಭಿಸುತ್ತಿದ್ದರು.(ಹಾಗೆ ಕಣ್ಣು ಮುಚ್ಚಿ ಹಾಡುವುದು ಅವರ ನಿತ್ಯದ ಅಭ್ಯಾಸ. ಅದು ಗಾಯಕನಿಗೆ ಏಕಾಗ್ರತೆ ತರುವುದೆಂದು ನಂಬಿದ್ದರು) “ಚೆಂಗುಲಾಬಿಯ ನಡುವೆ ನಾನಿನ್ನ ಕಂಡೆ” ಪಯಣಿಸುವ ವೇಳೆಯಲಿ” ಇಂಥ ಮಧುರ ಭಾವಗೀತೆಗಳನ್ನು ಅವರ ಕಂಠದಿಂದಲೇ ನಮ್ಮ ಮನೆಯಲ್ಲೇ ಕೇಳುವ ಭಾಗ್ಯ ನಮ್ಮದಾಗಿತ್ತು.
ಸುಬ್ಬಣ್ಣ ಅವರಿಗೆ ಮುಖ್ಯಮಂತ್ರಿಯವರ ವಿವೇಚನಾಧಿಕಾರದಲ್ಲಿ ಬನಶಂಕರಿ ಎರಡನೇ ಹಂತದಲ್ಲಿ ನಿವೇಶನ ದೊರಕಿ, ಅಲ್ಲಿ ಮನೆಕಟ್ಟಿ ವಾಸವಾದರು. ನಾವೂ ಬಾಡಿಗೆ ಮನೆಯಲ್ಲಿ ಇದ್ದ ಸಂಗತಿ ಬಲ್ಲ ಅವರು ನಮ್ಮ ತಂದೆಯವರಿಂದ ಬಲವಂತವಾಗಿ ಅರ್ಜಿ ಬರೆಸಿಕೊಂಡು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೆ ತಲುಪಿಸಿದರು. ಅಷ್ಟಕ್ಕೆ ಬಿಡದೆ ಸತತವಾಗಿ ಅನುಸರಣೆ ಮಾಡಿ ಸ್ವತಃ ಮುಖ್ಯಮಂತ್ರಿಯವರೇ ಬಿ ಡಿ ಎ ಗೆ ಆದೇಶ ನೀಡಿ,ಅದರ ಪ್ರತಿ ನಮ್ಮತಂದೆಯವರಿಗೆ ಬರುವಲ್ಲಿ ಶ್ರಮ ವಹಿಸಿದರು. ಆದರೂ ನೌಕರಶಾಹಿಯ ಧೋರಣೆಯಿಂದ ನಿವೇಶನ ಕೈಸೇರಲು ಎರಡು ವರುಷ ಬೇಕಾಯಿತು. ನಿವೇಶನ ನೋಂದಣಿ ಸಂದರ್ಭ ದಲ್ಲಿ , ಆದಾಯ ತೆರಿಗೆ ಬೇಬಾಕಿ ಪತ್ರ ಬೇಕಾಯಿತು.ನಮ್ಮ ತಂದೆಯವರ PAN ಸಂಖ್ಯೆಯನ್ನೇ ಹೊಂದಿರಲಿಲ್ಲ. ಸುಬ್ಬಣ್ಣ ಅವರಿಗೆ ಪೋನ್ ಮಾಡಿ ‘ಏನು ಮಾಡೋದು ಸುಬ್ಬಣ್ಣ?ನಾನೆಲ್ಲಿಂದ ತರಲಿ ಎಂದು ಗಾಭರಿಯಿಂದ ಕೇಳಿದಾಗ. “ನೀವು ಯಾವ ಮಹಾ ಟಾಟಾ,ಬಿರ್ಲಾ? ಬಿಡಿ ಅದು ನನ್ನ ಕೆಲಸ “ ಎನ್ನುತ್ತ ಎರಡು ದಿನದಲ್ಲಿ ವರಮಾನ ತೆರಿಗೆ ಇಲಾಖೆಯಿಂದ ಪತ್ರ ತಂದುಕೊಟ್ಟರು.
ಬರೀ ನಿವೇಶನ ಇದ್ದರೆ ಸಾಲದು,ಮನೆ ಕಟ್ಟಿ ಕವಿಗಳು ಅಲ್ಲಿ ನೆಮ್ಮದಿಯಿಂದ ವಾಸಿಸಬೇಕು ,ಇದು ನೀನು ಮಾತ್ರ ಮಾಡಲು ಸಾಧ್ಯಎಂದು ನನಗೆ ಪ್ರೇರಣೆ ನೀಡಿದರು. ಆ ಪುಟ್ಟಮನೆ ಕಾವ್ಯಶ್ರೀ ಪೂರ್ಣವಾಗಿ ನಾವು ವಾಸಿಸುವಂತಾದಾಗ ಸಂತಸ, ತೃಪ್ತಿ ವ್ಯಕ್ತಪಡಿಸಿದರು. ಸುಬ್ಬಣ್ಣ ಅವರದ್ದು ಎಂದೂ ತೋರಿಕೆಯ ಅನುಕೂಲಸಿಂಧು ಭೇಟಿಯಾಗಿರಲಿಲ್ಲ. ಅದು ಅಪ್ಪಟ ಅಭಿಮಾನದ ಸ್ನೇಹ . ನಮ್ಮ ತಂದೆ ತಾಯಿಗಳು ಕಾಲವಾದ ನಂತರವೂ ಅವರು ಅದೇ ಆತ್ಮೀಯತೆ ಮುಂದುವರೆಸಿಕೊಂಡು ಬಂದಿರುವುದು ನಮ್ಮ ಭಾಗ್ಯ.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=30261
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)
ವಾರದಿಂದ ವಾರಕ್ಕೆ ಮೂಡಿ ಬರುತ್ತಿರುವ ಕೆ. ಎಸ್. ನ ಕುರಿತಾದ ಸರಣಿ ಲೇಖನ ಕವಿಯ ಪ್ರತಿ ಆತ್ಮೀಯ ಭಾವವನ್ನು ಹೆಚ್ಚಿಸುತ್ತ ಸಾಗುತ್ತಿದೆ. ಎಂತೆಂತಹ ಅದ್ಭುತ ಪ್ರತಿಭೆ ಗಳಿಗೆ ಖ್ಯಾತ ಕವಿಯ ಒಡನಾಟ…..
ಹಿರಿಯ ಕವಿಗಳ ಒಡನಾಟ ಹೊಂದಿದ್ದ ಹಲವಾರು ಮಹನೀಯರ ಪುಟ್ಟ ಪರಿಚಯ ನಮಗೂ ಲಭಿಸುತ್ತಿರುವುದು ನಮ್ಮ ಅದೃಷ್ಟ.