ದ್ವೇಷದ ಅಗ್ಗಷ್ಟಿಕೆಗೆ ಅಸಮಾಧಾನದ ತರಗು ತುಂಬುತ್ತಲೆ ಹೋಗಬೇಡ
ಕೆಂಡವಾಗು , ಸ್ವಲ್ಪ ಇದ್ದಿಲಾದರೂ ಸರಿ ಬೂದಿಯಾಗುತ್ತ ಹೋಗಬೇಡ
ಉರಿದೇನು ಫಲ ಕಾಳ್ಗಿಚ್ಚಿನಂತೆ ಸಂಕುಲದ ಉಸಿರ ನುಂಗುತ್ತ
ನೀಲಾಂಜನವಾಗಬೇಕು ಬದುಕು ಮಾಗಿ, ವಿನಾಶವಾಗುತ್ತ ಹೋಗಬೇಡ
ದೂರುವೆ ನಿನ್ನದೇ ಆಯ್ಕೆಯ ಫಲ ಉಣ್ಣುವಾಗ
ಅನುಭವ ಜೀವಿಸುವದ ಕಲಿಸುವಾಗ ಹಿಮ್ಮುಖವಾಗಿ ಚಲಿಸುತ್ತ ಹೋಗಬೇಡ
ಕಾಗೆ ಗೂಬೆಗಳು ಬದುಕಿರುವುದೇ ಅಪರಾಧವಲ್ಲ
ಸಹಬಾಳ್ವೆಯ ಪಾಠಕಲಿ ಜಗವನ್ನು ಹಳಿಯುತ್ತ ಹೋಗಬೇಡ
ಬದುಕನ್ನು ಇನ್ನಷ್ಟು ಚಂದಗಾಣಿಸಲು ನಾವು ಅವರು ಇವರು ಹುಟ್ಟಿದ್ದೇವೆ
ಪ್ರೀತಿ ಜ್ಯೋತಿ ಹೊತ್ತಿಸದೆ ಮತ ಪಂಥದ ಕಿಡಿ ಹಚ್ಚುತ್ತ ಹೋಗಬೇಡ
–ಜ್ಯೋತಿ ಬಸವರಾಜ ,ಶಹಾಪುರ
ಉತ್ತಮ ಸಂದೇಶ ಗಝಲ್ ಮೂಲಕ ಪಡಿಮೂಡಿಸಿರುವ ರೀತಿ ಚೆನ್ನಾಗಿ ಬಂದಿದೆ.ಅಭಿನಂದನೆಗಳು ಮೇಡಂ.
Superb. ಸುಂದರವಾದ ಬದುಕಿನ ಪಾಠ
ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ
ಉತ್ತಮ ಗಜಲ್
ಜೀವನ ಪಾಠವನ್ನು ಬೋಧಿಸುವ ಸೊಗಸಾದ ಗಜಲ್.