ಭೂಲೋಕದ ಕಲ್ಪವೃಕ್ಷ..!
ಬಹು ಆಹಾರಪ್ರಿಯರಾದ ನಾವು ತೆಂಗಿನಕಾಯಿ ಹಾಲು ಹಾಕದ ಪಾಯಸವನ್ನು ಊಹಿಸುವುದು ಸ್ವಲ್ಪ ಕಷ್ಟ. ತೆಂಗಿನಕಾಯಿ ರುಬ್ಬಿ ಹಾಕಿ ಮಾಡುವ ನೂರಾರು ವೈವಿಧ್ಯಮಯ ಅಡುಗೆಗಳ ಸವಿರುಚಿ ಉಂಡ ನಾಲಿಗೆಯು ಬೇರೆ ತರಹದ ಅಡಿಗೆಗೆ ಒಗ್ಗಿಕೊಳ್ಳಲಾರದು. ತೆಂಗು ಬಳಸಿ ತಯಾರಿಸುವ ಯಾವುದೇ ತರಕಾರಿಯ ಸಾಂಬಾರ್, ಮಜ್ಜಿಗೆಹುಳಿ, ಪಲ್ಯ, ವಿವಿಧ ಎಲೆಗಳ ತಂಬುಳಿ, ಹಣ್ಣುಗಳ ಸಾಸಿವೆ, ಹೀಗೆ ಒಂದೇ ಎರಡೇ? ತಾಜಾ ತೆಂಗಿನ ಹಾಲನ್ನು ಸೇರಿಸಿ ತಯಾರಿಸುವ ಘಮಘಮಿಸುವ ಬಗೆ ಬಗೆಯ ರುಚಿಕರ ಪಾಯಸಗಳಂತೂ ಮದುವೆ ಸಮಾರಂಭ, ಔತಣ ಕೂಟಗಳ ಕಳೆಯನ್ನು ಹೆಚ್ಚಿಸಿ, ಅತಿಥಿಗಳ ಜಿಹ್ವೆಯನ್ನು ತಣಿಸುವುದರಲ್ಲಿ ಸಂಶಯವಿಲ್ಲ. ದಿನನಿತ್ಯದ ತಿಂಡಿಗಳಲ್ಲಿ ನಮ್ಮೆಲ್ಲರ ಆಪದ್ಬಾಂಧವನೆನಿಸಿಕೊಂಡಿರುವ; ಶ್ರೀಕೃಷ್ಣ ಸುದಾಮರ ಅನನ್ಯ ಸ್ನೇಹದ ಕುರುಹೆಂದೇ ಹೆಸರುವಾಸಿಯಾದ, ಇಂದಿಗೂ ನನ್ನ ಅಚ್ಚುಮೆಚ್ಚಿನ ಅವಲಕ್ಕಿಯ ಬಿಟ್ಟಿರದ ಸಂಗಾತಿಯೇ ಈ ತೆಂಗು. ಚಿಕ್ಕಂದಿನಲ್ಲಿ ಮೈಲುಗಟ್ಟಲೆ ನಡೆದು ಶಾಲೆಯಿಂದ ಮನೆಗೆ ಹಸಿದು ತಲಪುವಾಗ; ತಾಜಾ ಹಸಿಕೊಬ್ಬರಿ ತುರಿ ಮತ್ತು ಉಪ್ಪಿನೊಂದಿಗೆ ಅವಲಕ್ಕಿಯನ್ನು ಸೇರಿಸಿ, ಚೆನ್ನಾಗಿ ಕಲಸಿದ ಸಾದಾ ತಿಂಡಿಯೊಂದು ಕ್ಷಣಮಾತ್ರದಲ್ಲಿ ತಯಾರಾಗಿ ಕೈಸೇರುತ್ತಿತ್ತು, ದಿನಾಲೂ.. ಆಹಾ..ಸ್ವರ್ಗಕ್ಕೆ ಮೂರೇ ಗೇಣು! ದಿನಾ ತಿಂದರೂ ಯಾವತ್ತೂ ಅದರ ಬಗ್ಗೆ ಬೇಸರ ಬಂದದ್ದೇ ಇಲ್ಲ.. ಹಾಗಿದೆ ಅದರ ಕರಾಮತ್ತು! ನೂರಾರು ತರಹದ ತಿಂಡಿಗಳ ತಯಾರಿಕೆಗಳಲ್ಲಿ ಕೊಬ್ಬರಿಯದೇ ಅಗ್ರಸ್ಥಾನ ಎನ್ನಬಹುದು. ನಮ್ಮೆಲ್ಲರ ಅಡುಗೆಮನೆಯ ರಾಜನಾಗಿ ಮೆರೆಯುತ್ತಿರುವ ಈ ತೆಂಗಿನ ಖಾದ್ಯಗಳ ರುಚಿಗೆ, ಸವಿಗಂಪಿಗೆ ಮನಸೋಲದವರೇ ಇಲ್ಲ. ನಮ್ಮ ದಕ್ಷಿಣಭಾರತದಲ್ಲಿ ಉಪಯೋಗಿಸಲ್ಪಡುವ, ಸಮಶೀತೋಷ್ಣವಲಯದ ಕರಾವಳಿಗಳಲ್ಲಿ ಸಮೃದ್ಧವಾಗಿ ಬೆಳೆಯುವ ತೆಂಗು ಕಲ್ಪವೃಕ್ಷವೆಂದೇ ಕರೆಯಲ್ಪಡುತ್ತದೆ.
ನಮ್ಮ ನೆರೆ ರಾಜ್ಯ ಕೇರಳದ ಹೆಸರಿನೊಂದಿಗೇ ಬೆಸೆಯಲ್ಪಟ್ಟ ಹಿರಿಮೆ ಗರಿಮೆ ತೆಂಗಿಗಿದೆ. ಕೇರಳೀಯರ ಮಾತೃಭಾಷೆ ಮಲೆಯಾಳದಲ್ಲಿ, ‘ಕೇರ’ ಎಂದರೆ ತೆಂಗಿನಮರ ಹಾಗೂ ‘ಅಲಂ’ ಎಂದರೆ ನಾಡು ಎಂದರ್ಥ. ಕೇರ+ಅಲಂ= ಕೇರಲಂ(ಕೇರಳಂ) ಎಂಬ ಈ ಹೆಸರು ಬಹಳ ವರ್ಷಗಳಿಂದ ಯಾವುದೇ ಸ್ಥಿತ್ಯಂತರಗಳಿಗೆ ಒಳಪಡದೆ ಉಳಿದಿರುವುದು ಅದರ ಹಿರಿಮೆ.. ಯಾಕೆಂದರೆ, ತೆಂಗಿನ ಬೆಳೆಯಲ್ಲಿ ಕೇರಳವು ದೇಶಕ್ಕೇ ಮೊದಲ ಸ್ಥಾನದಲ್ಲಿದೆ. ಅಲ್ಲಿಯ ಜನರಿಗೆ ಅದು ಅಮೃತ ಸಮಾನ! ತೆಂಗಿನೆಣ್ಣೆಯ ಉಪಯೋಗದಲ್ಲೂ ಅವರೇ ಮೊದಲಿಗರು. ಗಂಡು, ಹೆಣ್ಣು, ಮಕ್ಕಳು ಎಂಬ ಭೇದವಿಲ್ಲದೆ ಎಲ್ಲರೂ ದಿನನಿತ್ಯ ತೈಲಾಂಭ್ಯಂಜನ ಮಾಡುವುದು ಅವರ ಜೀವನದ ಅವಿಭಾಜ್ಯ ಅಂಗವಾಗಿದೆ.. ಆದ್ದರಿಂದಲೇ ಕೇರಳಿಗರು ಸದಾ ಆರೋಗ್ಯವಂತರು.
ಬಲಿತ ತೆಂಗಿನಕಾಯಿ ಮಾತ್ರವಲ್ಲದೆ, ಅದರ ಎಳೆಯ ಕಾಯಿ ಸೀಯಾಳದ ನೀರು ಅತ್ಯುತ್ತಮ ಆರೋಗ್ಯಕರ ಪೇಯವೂ ಹೌದು. ಕಡಿಮೆ ಕೆಲೊರಿಯ, ಪೊಟೇಶಿಯಂನಂತಹ ಖನಿಜಾಂಶಯುಕ್ತ, ನೈಸರ್ಗಿಕ ಕಿಣ್ವ ಹೊಂದಿರುವರುವ ಅಮೃತ ಸಮಾನ ಅದ್ಭುತ ಪಾನೀಯವಾಗಿದೆ ಇದು. ನಿಶ್ಶಕ್ತರಿಗೆ, ಗರ್ಭಿಣಿಯರಿಗೆ, ರೋಗಿಗಳಿಗೆ ಹೀಗೆ ಎಲ್ಲರಿಗೂ ಸೀಯಾಳದ ತಾಜಾ ನೀರು ಅತ್ಯಂತ ಆರೋಗ್ಯಕರ.
ಇನ್ನು, ಪೋಷಣಾಂಶಗಳ ಬೃಹತ್ ಭಂಡಾರವಾಗಿದೆ..ನಮ್ಮ ಒಣಕೊಬ್ಬರಿ! ದಿನವೊಂದಕ್ಕೆ ಒಂದು ಸಣ್ಣ ತುಂಡು ಒಣಕೊಬ್ಬರಿಯ ಸೇವನೆಯು ನಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಅದರಲ್ಲಿರುವ ಕಬ್ಬಿಣದಂಶವು ರಕ್ತಹೀನತೆಯನ್ನು ತಡೆಯುತ್ತದೆ. ಅದರಲ್ಲಿರುವ ಒಳ್ಳೆಯ ಕೊಲೆಸ್ಟ್ರಾಲ್ ಶರೀರವನ್ನು ಸುಸ್ಥಿತಿಯಲ್ಲಿರುವುದಲ್ಲದೆ, ತಾಮ್ರದಂಶವು ಮೂಳೆಯನ್ನು ಬಲಪಡಿಸುವುದು. ಇದು ಒಳ್ಳೆಯ ನಾರಿನಂಶದಿಂದ ಕೂಡಿರುವುದರಿಂದ ಮಲಬದ್ಧತೆಯನ್ನು ತಡೆಯುತ್ತದೆ. ಇದರಲ್ಲಿರುವ ಸೆಲೆನಿಯಂ, ಥೈರೋಯ್ಡ್ ತೊಂದರೆಯನ್ನು ತಡೆಗಟ್ಟುತ್ತದೆಯಲ್ಲದೆ. ಒಣಕೊಬ್ಬರಿಯ ನಿಯಮಿತ ಸೇವನೆಯು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನುಸುಸ್ಥಿಯಲ್ಲಿರಿಸುತ್ತದೆ.
ತೆಂಗಿನಕಾಯಿಯ ನೀರು, ತಿರುಳು ಮಾತ್ರ ಉಪಯುಕ್ತವಲ್ಲ.. ಅದರ ಗೆರಟೆಯಿಂದ ತಯಾರಿಸುವ ವಿವಿಧ ರೀತಿಯ ಆಭರಣಗಳು, ಕಲಾಕೃತಿಗಳು ಕೂಡಾ ಮಾರುಕಟ್ಟೆಯಲ್ಲಿ ಲಭ್ಯ! ನೇಯ್ದ ತೆಂಗಿನ ಗರಿಯು ಗುಡಿಸಲ ಮೇಲಿನ ಛಾವಣಿಯಾಗಿ ಮಾತ್ರವಲ್ಲದೆ ಅಲಂಕಾರಿಕವಾಗಿಯೂ ಉಪಯೋಗಿಸಲ್ಪಡುತ್ತದೆ. ತೆಂಗಿನಕಾಯಿ ಸಿಪ್ಪೆಯಿಂದ ತಯಾರಿಸುವ ಹುರಿಹಗ್ಗಗಳಂತೂ ಒಂದುಕಾಲದಲ್ಲಿ ಬಹಳ ಜನಪ್ರಿಯ. ಈಗ ಪ್ಲಾಸ್ಟಿಕ್ ಬಳಕೆಯಿಂದಾಗಿ, ಅದು ಹಿನ್ನೆಲೆಗೆ ಸರಿಯುವ ಅಪಾಯದಲ್ಲಿದೆ. ತೆಂಗಿನಮರವು ಗಟ್ಟಿಯಾಗಿರುವುದರಿಂದ ಮೋಪುಗಳಾಗಿ ಉಪಯೋಗವಾಗುತ್ತದೆ. ತೆಂಗಿನ ಎಲ್ಲಾ ಭಾಗಗಳೂ ಉಪಯೋಗವಾಗುವುದರಿಂದ ಇದನ್ನು ಕಲ್ಪವೃಕ್ಷವೆನ್ನಲು ಹೆಮ್ಮೆಯೆನಿಸುತ್ತದೆ.
ಇಂತಹ ಅದ್ಭುತ ಬಹೂಪಯೋಗಿ ತೆಂಗನ್ನು ವಿಶ್ವ ಮಟ್ಟದಲ್ಲಿ ಗುರುತಿಸಿರುವುದು, ಅದಕ್ಕೆ ಸಂದ ಗೌರವ ಎಂದುಕೊಳ್ಳಬಹುದು. ಜಾಗತಿಕ ನೆಲೆಯಲ್ಲಿ ಜನರಿಗೆ ತೆಂಗಿನಕಾಯಿ ಬಗ್ಗೆ ತಿಳುವಳಿಕೆ ಮೂಡಿಸಿ ಅದರ ಉಪಯುಕ್ತತೆ ಬಗ್ಗೆ ಮಾಹಿತಿಗಳನ್ನು ಒದಗಿಸುವುದಕ್ಕೋಸುಗ ವರ್ಷದಲ್ಲೊಂದು ದಿನವನ್ನು ‘ವಿಶ್ವತೆಂಗಿನಕಾಯಿ ದಿನ’ವನ್ನಾಗಿ ಘೋಷಿಸಲಾಯಿತು..ಅದುವೇ, ಸೆಪ್ಟೆಂಬರ 2ನೇ ತಾರೀಕು. ಈ ದಿನದಂದು ತೆಂಗು ಮತ್ತು ಅದರ ಬಹೂಪಯೋಗಿ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಮಾರುಕಟ್ಟೆ ಲಭ್ಯತೆಗೆ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದೂ ಅಲ್ಲದೆ, ವೈವಿಧ್ಯಮಯ ತಳಿಗಳ ತೆಂಗಿನಕಾಯಿಗಳನ್ನು ಅಭಿವೃದ್ಧಿಪಡಿಸುವುದೂ ಮುಖ್ಯವಾಗಿದೆ. ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಮುಂಬೈ ಮತ್ತು ಕೊಂಕಣ ಕರಾವಳಿಯ ಹಿಂದೂ ಪಂಗಡದ ಮೀನುಗಾರರು, ಶ್ರಾವಣಮಾಸದಲ್ಲಿ ಬರುವ ಹುಣ್ಣಿಮೆಯಂದು, ತೆಂಗಿನಕಾಯಿ ಜೊತೆಗೆ ಅಕ್ಕಿ, ಹೂ, ಹಣ್ಣುಗಳಿಂದ ಸಮುದ್ರರಾಜನನ್ನು ಪೂಜಿಸಿ ‘ನಾರಿಯಲ್ ಪೂರ್ಣಿಮ’ವನ್ನು ಸಂಭ್ರಮದಿಂದ ಆಚರಿಸಿ, ಸಾಗರದಾಳದ ಅವರ ದುಡಿಮೆ ಫಲಕಾರಿಯಾಗುವಂತೆ ಪ್ರಾರ್ಥಿಸುವರು. ನಮ್ಮಲ್ಲಿ ಇಂದಿಗೂ ಯಾವುದೇ ಶುಭಾಶುಭ ಕಾರ್ಯಗಳಲ್ಲಿ ತೆಂಗಿನಕಾಯಿಯ ಸ್ಥಾನ ಬಹು ಪೂಜನೀಯ ಮತ್ತು ಮಹತ್ತರದ್ದು.
ಜಗತ್ತಿನಲ್ಲಿ, ಇಂಡೋನೇಶ್ಯವು ತೆಂಗಿನಕಾಯಿ ಬೆಳೆಯುವಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ, ಫಿಲಿಫೈನ್ಸ್ ಎರಡನೇ ಸ್ಥಾನದಲ್ಲಿದೆ. ನಮ್ಮ ದೇಶವು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಏಶ್ಯ-ಫೆಸಿಫಿಕ್ ದೇಶಗಳಲ್ಲಿ ತೆಂಗಿನಕಾಯಿಯ ಸ್ಥಾನ ಔನ್ನತ್ಯಕ್ಕಾಗಿ ಮಂಡಳಿಗಳನ್ನು ರಚಿಸಿ ಜಾಗತಿಕ ಮಟ್ಟದಲ್ಲಿ ಅದರ ಸುಧಾರಣೆಗಳತ್ತ ಗಮನಕೊಡುತ್ತಿರುವುದು ಶ್ಲಾಘನೀಯ.
ತೆಂಗಿನಕಾಯಿಯ ಸಕಲ ಉತ್ಪನ್ನಗಳೂ ನಮ್ಮ ದೇಹದ ಶಕ್ತಿ, ಆರೋಗ್ಯ, ಆಯುಸ್ಸು ವರ್ಧನೆಗೆ ಬಹು ಪೂರಕವೆಂಬುದನ್ನು ಮನದಟ್ಟು ಮಾಡಿಕೊಂಡು, ಸಮರ್ಪಕವಾಗಿ ಅವುಗಳ ಬಳಸಿ ನಾವೆಲ್ಲರೂ ಸದಾ ಆರೋಗ್ಯ ಸಂಪನ್ನರಾಗಿರೋಣ, ಏನಂತೀರಿ..??
-ಶಂಕರಿ ಶರ್ಮ, ಪುತ್ತೂರು.
ಇಂಗು ತೆಂಗು ಇದ್ದರೆ ಮಂಗನಂತೋರೂ ಅಡಿಗೆ ಮಾಡುತ್ತಾರೆ ಎನ್ನುವ ಮಾತು ಇದೆ. ಆದರೆ ಅದನ್ನು ಬಳಸುವ ಪರಿಜ್ಞಾನ ವೂ ಇರಬೇಕು ಎಂಬ ಮಾತನ್ನೂ ನಮ್ಮ ಹಿರಿಯರು ಸೇರಿಸುತ್ತಿದ್ದರು. ಅಂಥಹ ತೆಂಗಿನ ಬಗ್ಗೆ ಚೂಕ್ಕದಾದ ಮಾಹಿತಿ.ಅಭಿನಂದನೆಗಳು ಮೇಡಂ.
ಸುಪರು ಬರಹ Akkooo
Very nice.
ತೆಂಗು ಹಾಗೂ ಹಿಂಗು ಇದ್ದರೆ ಮಂಗನೂ ಕೂಡಾ ರುಚಿಕರವಾದ ಅಡುಗೆ ಮಾಡಬಹುದು ಎಂಬ ಮಾತೇ ಇದೆಯಲ್ಲವೇ? ತೆಂಗಿನಕಾಯಿ ಇಲ್ಲದೆ ಹೋದರೆ ಕೈ ಕಟ್ಟಿ ಹಾಕಿದ ಅನುಭವವಾಗುವುದು.
ಲೇಖನವನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಸಹೃದಯೀ ಓದುಗ ಬಂಧುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಬಹಳ ಉತ್ತಮ ಲೇಖನ..ಮಾಹಿತಿ ಪೂರ್ಣ ಲೇಖನ
Nice ☺️