ಕಲ್ಪವೃಕ್ಷವನ್ನು ನೆನೆಯುತ್ತಾ…

Share Button

ದಕ್ಷಿಣಭಾರತದ ಹೆಚ್ಚಿನ ಅಡುಗೆಮನೆಗಳಲ್ಲಿ ಖಾಯಂ ಸ್ಥಾನ ಪಡೆದಿರುವ ತೆಂಗಿನಕಾಯಿಯ ಹಿರಿಮೆ ಬಲು ದೊಡ್ಡದು. ಬೆಳಗಿನ ಉಪಾಹಾರಗಳಾದ ಇಡ್ಲಿ, ದೋಸೆಗಳ ಜೊತೆಗೆ ಕಾಯಿಚಟ್ಣಿ ಇದ್ದರೆ ಸೊಗಸು. ಕೋಸಂಬರಿ, ಪಲ್ಯಗಳ  ರುಚಿ ಹೆಚ್ಚಿಸಲು ತೆಂಗಿನಕಾಯಿಯ  ತುರಿಯ ಅಲಂಕಾರ ಬೇಕೇ ಬೇಕು.   ಸಾಂಬಾರ್ , ಮಜ್ಜಿಗೆ ಹುಳಿ, ಕೂಟು ಇತ್ಯಾದಿ ವ್ಯಂಜನಗಳಿಗೆ ಇತರ ಮಸಾಲೆಗಳೊಂದಿಗೆ ತೆಂಗಿನಕಾಯಿ ತುರಿಯನ್ನೂ ಸೇರಿಸಿ ರುಬ್ಬಿದರೆ ಮಾತ್ರ ಅಡುಗೆ ಸಂಪನ್ನವಾಗುತ್ತದೆ. ಇನ್ನು ಹಬ್ಬಹರಿದಿನಗಳಂದು  ತಯಾರಿಸುವ ಪಾಯಸ,  ಕಾಯಿಕಡುಬು, ಪಂಚಕಜ್ಜಾಯ, ಕಾಯಿಹೋಳಿಗೆ ಮೊದಲಾದ ನೈವೇದ್ಯಗಳಿಗೂ ತೆಂಗಿನಕಾಯಿಯೇ ಮೂಲದ್ರವ್ಯ.  ನೆಂಟರಿಷ್ಟರು ಬಂದಾಗ ಸುಲಭವಾಗಿ ತಯಾರಿಸಬಹುದಾದ  ಅಚ್ಚುಮೆಚ್ಚಿನ ತಿನಿಸಾಗಿ ತೆಂಗಿನಕಾಯಿ ಬರ್ಫಿ ಹಾಗೂ  ಕೊಕೋನಟ್ ಲಡ್ಡುಗಳು   ಅಗ್ರಸ್ಥಾನದಲ್ಲಿವೆ.

ಬೇಕರಿ ತಿನಿಸುಗಳ ಕಲ್ಪನೆಯೇ ಇಲ್ಲದಿದ್ದ ನಮ್ಮ ಬಾಲ್ಯದ ದಿನಗಳಲ್ಲಿ, ಅಮ್ಮಂದಿರು ಒಂದಿಷ್ಟು ಕಾಯಿ ತುರಿಗೆ ಬೆಲ್ಲ ಬೆರೆಸಿ ಸಿಹಿ ಅವಲಕ್ಕಿ ಅಥವಾ  ಉಪ್ಪು-ಖಾರ-ಒಗ್ಗರಣೆ ಬೆರೆಸಿದ ಖಾರದ ಅವಲಕ್ಕಿ ಬೆರೆಸಿ ಕೊಡುತ್ತಿದ್ದರು.  ಅದ್ಬುತವಾದ ರುಚಿಯುಳ್ಳ ತಾಜಾ ತಿನಿಸು ಕೆಲವೇ ನಿಮಿಷದಲ್ಲಿ ಸಿದ್ಧವಾಗುತ್ತಿತ್ತು. ಆ ದಿನಗಳಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ಭೋರ್ಗರೆಯುವ ಮಳೆಗಾಲದ ದಿನಗಳಲ್ಲಿ ತರಕಾರಿ ಸಿಗದಿದ್ದರೆ  ಅಡುಗೆ ಮಾಡಲು ಚಿಂತೆ ಇರುತ್ತಿರಲಿಲ್ಲ.  ತೆಂಗಿನಕಾಯಿ ತುರಿಗೆ  ಆಯ್ಕೆಗೆ ತಕ್ಕಂತೆ ಒಣಮೆಣಸಿನಕಾಯಿ, ಹಸಿರುಮೆಣಸಿನಕಾಯಿ, ಉಪ್ಪು, ಹುಳಿ ಸೇರಿಸಿ ಗಟ್ಟಿಯಾಗಿ ರುಬ್ಬಿ ಒಗ್ಗರಣೆ ಕೊಟ್ಟರೆ ರುಚಿಯಾದ ಚಟ್ನಿ ಸಿದ್ಧ. ಲಭ್ಯತೆಗೆ ತಕ್ಕಂತೆ ಮಾವಿನಕಾಯಿ, ಶುಂಠಿ, ಈರುಳ್ಳಿ, ಕರಿಬೇವಿನಸೊಪ್ಪು, ಹೀರೆಕಾಯಿ, ಹುರಿದ ಕಡಲೇಬೇಳೆ, ಹುರುಳಿಕಾಳು  ….ಹೀಗೆ ಯಾವುದಾದರೂ ಒಂದನ್ನು ಸೇರಿಸಿದರೆ ಇನ್ನೂ ಸೊಗಸು. ಬಿಸಿಬಿಸಿ ಕುಸುಬಲಕ್ಕಿ ಗಂಜಿಯೊಂದಿಗೆ ಖಾರ ಚಟ್ನಿ, ತುಪ್ಪ ಸೇರಿಸಿ ಉಂಡರೆ ಕರಾವಳಿಗರಿಗೆ ಸ್ವರ್ಗಕ್ಕೆ ಮೂರೇ ಗೇಣು. ಹೀಗೆ ಬಹುವಿಧದ ಸಿಹಿ,ಖಾರ ಅಡುಗೆಗಳಿಗೆ ಹೊಂದಿಕೊಳ್ಳುವ ತೆಂಗಿನಕಾಯಿಂದಾಗಿ  ‘ಇಂಗು ತೆಂಗು ಇದ್ದರೆ ಮಂಗುವೂ ಅಡುಗೆ ಮಾಡುತ್ತದೆ’ ಎಂಬ ಗಾದೆ  ಸೃಷ್ಟಿಯಾಗಿರಬೇಕು.

ತೆಂಗಿನಕಾಯಿಯ ಎಳನೀರು ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ಎಳೆಯ ಮಕ್ಕಳಿಗೂ, ಅಶಕ್ತರಿಗೂ ಉತ್ತಮ ಆಹಾರ. ಬೆಳೆದ ಕಾಯಿಯು ಅಡುಗೆಗೆ ಮಾತ್ರವಲ್ಲದೆ ಹೆಚ್ಚಿನ ಧಾರ್ಮಿಕ ಆಚರಣೆಗಳಲ್ಲಿ ಹಬ್ಬಹರಿದಿನಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಹೊಸ ವಾಹನ ಖರೀದಿಸಿದಾಗ ಪೂಜೆ ಮಾಡಿ ಈಡುಗಾಯಿ ಒಡೆಯಲು ತೆಂಗಿನಕಾಯಿ ಬೇಕು. ಕೆಲವು  ಹಬ್ಬಗಳಿಗೆ ಕಲಶವನ್ನಿರಿಸಲು ಹಾಗೂ  ವಿವಿಧ ಹೋಮ-ಹವನಗಳಿಗೆ ಮೊದಲು ನೆನಪಾಗುವುದು ತೆಂಗಿನಕಾಯಿ.  ಶುಭ ಸಮಾರಂಭಗಳಲ್ಲಿ ಊಟದ ನಂತರ ಎಲ್ಲಾ ಅತಿಥಿಗಳಿಗೆ ಎಲೆ,ಅಡಿಕೆ, ತೆಂಗಿನಕಾಯಿಯ ತಾಂಬೂಲ ಕೊಡುವ ಪದ್ಧತಿ ಇದೆ.  ಸೊಗಸಾಗಿ ಚಿತ್ತಾರ ಮೂಡಿಸಿದ ಒಣಕೊಬ್ಬರಿಯನ್ನು ಅಲಂಕೃತ ಹರಿವಾಣದಲ್ಲಿ ಜೋಡಿಸುವುದು ಕೆಲವರಿಗೆ ಹವ್ಯಾಸ ಹಾಗೂ ಸಂಪ್ರದಾಯ.

ಮನೆಯಂಗಳದಲ್ಲಿ ತೆಂಗಿನ ಗರಿಯ ಚಪ್ಪರ ಹಾಕುವ  ಮೂಲಕ ಶುಭ ಸಮಾರಂಭಕ್ಕೆ ಕಳೆಕಟ್ಟುತ್ತದೆ. ಕರಾವಳಿಯ ಜಾನಪದ ಕಲೆಗಳಲ್ಲಿ ಹಾಗೂ  ಭೂತಾರಾಧನೆಯಲ್ಲಿ ಎಳೆಯ ತೆಂಗಿನ ಗರಿಗಳನ್ನು  ಜೋಡಿಸಿ ತಯಾರಿಸಿದ ಉಡುಗೆ ಹಾಗೂ ಕಿರೀಟಗಳಿಗೆ ವಿಶೇಷ ಮಾನ್ಯತೆಯಿದೆ.  ಮನೆಯನ್ನು ಕಸಗುಡಿಸಿ ಸ್ವಚ್ಛವಾಗಿಟ್ಟುಕೊಳ್ಳಲು ತೆಂಗಿನಗರಿಯ ಕಸಬರಿಕೆಯಷ್ಟು ಪರಿಸರಸ್ನೇಹಿ ವಸ್ತು ಇನ್ನೊಂದು ಸಿಗದು.  ಕೆಲವು ವರ್ಷಗಳ ಹಿಂದೆ, ಹಳ್ಳಿಗಳಲ್ಲಿ ಮನೆಯ ಸೂರಿಗೆ ಹೆಂಚು, ಕಾಂಕ್ರೀಟ್ ನ ಬದಲು  ತೆಂಗಿನ ಮಡಲನ್ನು ಹೆಣೆದು ಬಳಸುತ್ತಿದ್ದರು.ಮಳೆಗಾಲದಲ್ಲಿ ಅಂಗಳದ ಮಣ್ಣು ಕೊಚ್ಚಿಹೋಗದಂತೆ ಕಾಪಾಡಲು ಮಡಲನ್ನು ಹೊದೆಸುತ್ತಿದ್ದರು. ಒಲೆಗೆ ಉರುವಲಾಗಿಯೂ ತೆಂಗಿನ ಮರದ ವಿವಿಧ ಭಾಗಗಳು ಉಪಯೋಗವಾಗುತ್ತಿದ್ದುವು. ಆಧುನಿಕ ಆಟಿಕೆಗಳನ್ನು ಕಂಡರಿಯದ ಮಕ್ಕಳಿಗೆ ತೆಂಗಿನ ಮಡಲಿನ ಹೆಡೆಯೇ ಕ್ರಿಕೆಟ್ ಬ್ಯಾಟ್ ಆಗಿತ್ತು!

ನೆರೆಯ ರಾಜ್ಯ ಕೇರಳದ ಪ್ರಮುಖ ಆಹಾರ ಹಾಗೂ ವಾಣಿಜ್ಯ ಬೆಳೆ ತೆಂಗು. ಮಲಯಾಳಂ ಭಾಷೆಯಲ್ಲಿ ‘ಕೇರ’ಎಂದರೆ  ತೆಂಗಿನಮರ ಹಾಗೂ  ‘ಅಲಂ’ ಎಂದರೆ ನಾಡು. ಈ ರಾಜ್ಯವು ತನ್ನ ಭೂಮಿಯಲ್ಲಿ ಬಹಳಷ್ಟು ತೆಂಗಿನ ಮರಗಳನ್ನು ಹೊಂದಿರುವುದ,  ‘ಕೇರಳ’ ಎಂಬ ಹೆಸರು ಪಡೆಯಿತು. ತೆಂಗಿನ ಮರದ ಕಾಂಡ, ಗರಿ, ಕಾಯಿ, ನಾರು, ಕರಟಗಳನ್ನು ಬಳಸಿ  ತಯಾರಿಸುವ ಆಕರ್ಷಕ ಕರಕುಶಲ ಉತ್ಪನ್ನಗಳು ಕೇರಳದಲ್ಲಿ ಪ್ರಸಿದ್ಧ. ಉದಾಹರಣೆಗೆ, ಪೆನ್ ಸ್ಟ್ಯಾಂಡ್,  ಗೃಹಾಲಂಕಾರ ವಸ್ತುಗಳು,   ವಿವಿಧ ಕಲಾಕೃತಿಗಳು,  ಹುರಿಹಗ್ಗ, ಕಾಲೊರೆಸುವ ಚಾಪೆಗಳು, ಚೀಲಗಳು, ಕರಟದ   ಚಿಪ್ಪಿನ ಆಭರಣಗಳು, ಕ್ಲಿಪ್ ಗಳು ಇತ್ಯಾದಿ  ಕೇರಳದ ಅಡುಗೆಗಳಿಗೆ ತೆಂಗಿನೆಣ್ಣೆಯನ್ನೇ ಬಳಸುತ್ತಾರೆ. ತೆಂಗಿನೆಣ್ಣೆಯಲ್ಲಿ ಸಂತೃಪ್ತ  ಕೊಬ್ಬಿನ ಅಂಶ ಜಾಸ್ತಿ ಇದೆಯೆಂದೂ, ಅದು ಹೃದಯಾಘಾತವನ್ನು ಹೆಚ್ಚಿಸುತ್ತದೆಯೆಂದೂ ಇತರ ಖಾದ್ಯತೈಲ ಉತ್ಪಾದಕ ಸಂಸ್ಥೆಗಳು ಪ್ರಚಾರಮಾಡುತ್ತಿವೆ. ಇದರಲ್ಲಿ ಸತ್ಯಾಂಶಕ್ಕಿಂತಲೂ ವ್ಯಾವಹಾರಿಕ ದೃಷ್ಟಿಕೋನವೇ ಹೆಚ್ಚು ಎಂಬುದು ಇತ್ತೀಚೆಗೆ ವೇದ್ಯವಾಗುತ್ತಿದೆ. ತೆಂಗಿನೆಣ್ಣೆಯು ಚರ್ಮದ ಶುಷ್ಕತೆಯನ್ನು ಕಡಿಮೆಮಾಡುವುದರೊಂದಿಗೆ ಕೆಲವು ಸೋಂಕುಗಳನ್ನೂ ನಿವಾರಿಸುವ ಸಾಮರ್ಥ್ಯ ಹೊಂದಿದೆ. ಕೇರಳದ ಹೆಚ್ಚಿನ ಮಂದಿ ಅಡುಗೆಗೂ, ತಲೆ-ಮೈಗೆ ಹಚ್ಚಿಕೊಳ್ಳಲೂ ತೆಂಗಿನ ಎಣ್ಣೆಯನ್ನೇ ಬಳಸಿ ಆರೋಗ್ಯದಿಂದಿರುವುದು ಇದಕ್ಕೆ ಸಾಕ್ಷಿ.


ಹೀಗೆ   ತೆಂಗಿನಮರದ ಪ್ರತಿ ಭಾಗಗಳೂ, ಪ್ರತಿಹಂತದಲ್ಲಿಯೂ  ಉಪಯುಕ್ತವಾಗಿದ್ದು, ಬಯಸಿದ್ದನ್ನೆಲ್ಲ ಕೊಡುವ ಮರ ಎಂಬ ಅರ್ಥದಲ್ಲಿ  ಕಲ್ಪವೃಕ್ಷವೆಂದೂ ಕರೆಯಲ್ಪಡುತ್ತದೆ.  ಏಷ್ಯಾದ ವಿವಿಧ ದೇಶಗಳ  ಆರ್ಥಿಕ ಬೆಳವಣಿಗೆಗೆ ತೆಂಗಿನಕಾಯಿ ಬೆಳೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ  ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿ,  ಏಷ್ಯಾ-ಫೆಸಿಫಿಕ್  ದೇಶಗಳ ತೆಂಗಿನಕಾಯಿ ಸಮುದಾಯ ಮಂಡಳಿಯನ್ನು ರಚಿಸಿ, ಸೆಪ್ಟೆಂಬರ್ 2 ರಂದು ‘ವಿಶ್ವ ತೆಂಗಿನಕಾಯಿ ದಿನ’ ಎಂದು ಘೋಷಿಸಿದ್ದಾರೆ.   ಭಾರತದಲ್ಲಿ, ಮುಂಬಯಿ, ಕೊಂಕಣ ಸೀಮೆಗಳ ಸಮುದ್ರ ತೀರದಲ್ಲಿ ವಾಸಿಸುವ ಜನರು, ಶ್ರಾವಣ ಮಾಸದ ಪ್ರಥಮ ಹುಣ್ಣಿಮೆ ದಿನದಂದು, ನಾರಿಯಲ್ ಪೂರ್ಣಿಮಾ’ ಎಂಬ ಹೆಸರಿನಲ್ಲಿ ಸಮುದ್ರವನ್ನು ಪೂಜಿಸಿ ಹೂವು, ಅಕ್ಕಿ ಹಾಗೂ ತೆಂಗಿನಕಾಯಿಗಳನ್ನು ಅರ್ಪಿಸಿ ‘ತೆಂಗಿನಕಾಯಿ ದಿನ’ವನ್ನು ಆಚರಿಸುತ್ತಾರಂತೆ.

– ಹೇಮಮಾಲಾ.ಬಿ

16 Responses

  1. Satyanarayana Sagar says:

    ಎಲ್ಲರೂ ಪ್ರತಿದಿನ ಒಂದಲೊಂದು ರೀತಿಯಲ್ಲಿ ತೆಂಗಿನಕಾಯಿ ಉಪಯೋಗಿಸುತ್ತಾರೆ! ಆದರೆ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲ!? ಕಲ್ಪವ್ರಕ್ಷದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಟ್ಟಿದ್ದಕ್ಕೆ ಅಭಿನಂದನೆಗಳು.

  2. Bharathi says:

    Nice article Hemakka. Kalpavrikshada mahatvavannu yeleyeleyagi nirupisiddeeri

  3. Krishnaveni Kidoor says:

    ಸಕಾಲಿಕ ಮತ್ತು ಅಷ್ಟೇ ಅವಶ್ಯಕ ಬರಹ. ತೆಂಗು ನಮ್ಮೆಲ್ಲರ ಜೀವನಾಡಿ, ಜೀವನಾವಶ್ಯಕ. ಅಭಿನಂದನೆಗಳು .ಕೇರಳಿಗರ ಆರೋಗ್ಯದಿಂದ ಲಕಲಕಿಸುವ ತ್ವಚೆ ಮತ್ತು ಅಚ್ಚಗಪ್ಪಿನ , ಹೊಳಪಿನ ತಲೆಗೂದಲು ತೆಂಗಿನೆಣ್ಣೆಯ ಸಾಮರ್ಥ್ಯಕ್ಕೆ ಸಾಕ್ಷಿ.

  4. Udaya Shankar Puranika says:

    ಉತ್ತಮ ಲೇಖನ. ನಿಮಗೆ ಅಭಿನಂದನೆಗಳು

  5. Suneel Barkur says:

    ತೆಂಗಿನೆಣ್ಣೆಯ ಕುರಿತು ವ್ಯವಸ್ಥಿತ ಅಪಪ್ರಚಾರ ಶುರುವಾಗಿರುವ ಸಮಯದಲ್ಲಿ ಈ ಲೇಖನ ಹೆಚ್ಚು ಪ್ರಸ್ತುತ.

  6. Vijayalaxmi Patwardhan says:

    ನಾರಳೀ ಪೂರ್ಣಿಮಾದಂದು “ನಾರಳೀ ಭಾತ್ ” ಮಾಡಿ ದೇವರಿಗೆ ಅರ್ಪಿಸುವ ಕ್ರಮವೂಇದೆ.ಲೇಖನ ಓದಿದೆ ಚೆನ್ನಾಗಿದೆ.ತೆಂಗಿನಕಾಯಿಯ ದಿನ ಒಂದು ಇದೆ ಎಂದು ತಿಳಿದಂತಾಯ್ತು.

  7. Pushpa Nagathihalli says:

    ತೆಂಗಿನ ಬಗ್ಗೆ ಸೂಕ್ತ ಲೇಖನ.ನಮ್ಮಕಡೆ ತೆಂಗಿನ ಕಾಯಿಗಳೇ ಜೀವನಕ್ಕೆ ಆಧಾರ.ನಮಗಂತೂ ಅದು ಕಲ್ಪವೃಕ್ಷವೆ

  8. ಸಾವಿತ್ರಿ ಭಟ್ says:

    ಕಲ್ಪವೃಕ್ಷ ದ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರಿ..ನಿನ್ನೆಯ ಉದಯವಾಣಿ ಯಲ್ಲೂ ಓದಿದೆ.ಅಭಿನಂದನೆಗಳು..

  9. Hema says:

    ಬರಹವನ್ನು ಓದಿದ, ಮೆಚ್ಚಿದ, ಪ್ರತಿಕ್ರಿಸಿದ ಎಲ್ಲರಿಗೂ ಧನ್ಯವಾದಗಳು …

  10. shankari says:

    ಸಕಾಲಿಕ ಸುಂದರ ಬರಹ

  11. ಬಿ.ಆರ್.ನಾಗರತ್ನ says:

    ಒಳ್ಳೆಯ ಮಹತ್ವಪೂರ್ಣ ಮಾಹಿತಿ ಯುಳ್ಳ ಬರಹ ಅಭಿನಂದನೆಗಳು ಹೇಮಾ

  12. Samatha.R says:

    ಮಾಹಿತಿ ಪೂರ್ಣ ಚಂದದ ಬರಹ

  13. ಕಾಳಿಹುಂಡಿ ಶಿವಕುಮಾರ್, ಮೈಸೂರು. says:

    ಮಹತ್ವಪೂರ್ಣವಾದ ಲೇಖನ ಬರೆದಿದ್ದೀರಿ. ಸರಾಗವಾಗಿ ಓದಿಸಿಕೊಂಡು ಹೋಯಿತು.. ನಿಮಗೆ ವಿಶೇಷ ಅಭಿನಂದನೆಗಳು. ಇಂತಹ ಲೇಖನಗಳು ತಮ್ಮ ಲೇಖನಿಯಿಂದ ಮತ್ತಷ್ಟು ಹರಿದುಬರಲಿ.

  14. ASHA nooji says:

    ಚಂದದ ಬರಹ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: