ಗುರುಪರಂಪರೆಯನ್ನು ಗೌರವಿಸೋಣ
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ”– ಎಂದು ಪುರಂದರದಾಸರು ಹೇಳಿದ್ದಾರೆ. ಈ ಮಾತು ಎಂದೆಂದಿಗೂ ಸಹ ಸತ್ಯ. ಜೊತೆಗೆ ಎಂದಿಗೂ ಕೂಡ ಜನಜನಿತ ಮಾತು ಇದಾಗಿದೆ. ಗುರು- ಗುರಿ ಎರಡು ಇದ್ದರೆ ನಾವು ಹಾಕಿಕೊಂಡ ಮಾರ್ಗದಲ್ಲಿ ಸುಲಲಿತವಾಗಿ ಸೇರಿ ಯಶಸ್ಸು ಪಡೆಯಬಹುದಾಗಿದೆ.
ಸಂಸ್ಕೃತದಲ್ಲಿ ಎಂದರೆ “ಗು” ಎಂದರೆ ಅಂಧಕಾರ… “ರು” ಎಂದರೆ ಬೆಳಕು ಎನ್ನುವಂತಾಗಿದೆ. ಇದರಿಂದ ಅಂಧಕಾರದಲ್ಲಿ ಮುಳುಗಿ ರುವವರನ್ನು ಬೆಳಕಿನೆಡೆಗೆ ಕರೆತಂದು ದಾರಿತೋರಿಸುವ ವರು. ತಮ್ಮ ಜ್ಞಾನದ, ತಿಳುವಳಿಕೆಯ ಬೆಳಕಿನ ಮೂಲಕ ಸರಿದಾರಿಗೆ ತಂದು ಸಮಾಜದಲ್ಲಿ ಒಂದು ಸ್ಥಾನವನ್ನು ಕಲ್ಪಿಸುವ ನಿಟ್ಟಿನಲ್ಲಿ ಇವರು ಬಹಳ ಪ್ರಮುಖ ಪಾತ್ರ ವಹಿಸುತ್ತಾರೆ.
ಇನ್ನೊಂದು ಮುಖ್ಯವಾದ ಗಮನಿಸಬೇಕಾದ ಅಂಶವೆಂದರೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿರುವುದು. ಸರ್ವಪಲ್ಲಿ ರಾಧಾಕೃಷ್ಣ ರವರಿಗೆ ಶಿಕ್ಷಣ ವ್ಯವಸ್ಥೆ ಬಗ್ಗೆ ಗೌರವ, ಎಲ್ಲಿಲ್ಲದ ಪ್ರೀತಿ. ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಒಬ್ಬ ಶಿಕ್ಷಣ ತಜ್ಞರಾಗಿ ಅವರು ಒಂದು ಕ್ರಾಂತಿಯನ್ನೇ ಎಬ್ಬಿಸಿದ್ದಾರೆ. ಇದರ ಸವಿನೆನಪಿಗಾಗಿ ಅವರ ಜನ್ಮದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ಇಂತಹ ಮಹಾನ್ ವ್ಯಕ್ತಿಯು ನಿಜಕ್ಕೂ ಎಲ್ಲರಿಗೂ ಮಾದರಿ.
ಇನ್ನೊಂದು ವಿಷಯ ಅಂದರೆ ನನಗೆ ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆ ಎಂದೊಡನೆ ನನಗೆ ಖಂಡಿತ ಬಾಲ್ಯದ ದಿನಗಳ ಸವಿ ಸವಿ ನೆನಪು ಬರುತ್ತದೆ!. ಏಕೆಂದರೆ ಶಿಕ್ಷಕರ ದಿನಾಚರಣೆಯು ಇನ್ನೂ ಒಂದು ವಾರ ಇರುವಾಗಲೇ ರಾಧಾಕೃಷ್ಣನ್ ರವರ ಭಾವಚಿತ್ರ ತೆಗೆದುಕೊಳ್ಳುತ್ತಾ ಇದ್ದೆವು. ಚಿಕ್ಕದಾದ ಪೋಸ್ಟರ್ ಭಾವಚಿತ್ರ ಕೊಳ್ಳಬೇಕಾಗಿತ್ತು. ನಾನು ಸಂಗ್ರಹಿಸಿದ ಹಣದಿಂದ ನಾಲ್ಕು, ಐದು ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದೆ. ಅದನ್ನು ನೋಟ್ಬುಕ್ ಗಳಿಗೆ ಅಂಟಿಸಿ ಕೊಳ್ಳುತ್ತಿದ್ದೆ. ಕೆಲವು ಪೋಸ್ಟ್ಗಳನ್ನು ಒಂದುಕಡೆ ಇಡುತ್ತಿದ್ದೆ. ಏನೋ ಒಂದು ರೀತಿಯಲ್ಲಿ ಖುಷಿ!. ಶಿಕ್ಷಕರ ದಿನಾಚರಣೆಯಂದು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕೊಳ್ಳುತ್ತಿದ್ದರು. ಏಕಪಾತ್ರಭಿನಯ ಹಾಡುಗಳನ್ನು ಹಾಡುವುದು ನಂತರ ಚಾಕಲೇಟ್ ವಿತರಣೆ ಇಷ್ಟೇ ಕಾರ್ಯಕ್ರಮಗಳು ಆದರೂ ಏನೋ ಒಂದು ರೀತಿಯ ದೊಡ್ಡ ಸಮಾರಂಭದ ರೀತಿಯಲ್ಲಿ ಭಾಸವಾಗುತ್ತಿತ್ತು. ಇವೆಲ್ಲ ನನ್ನ ಕಣ್ಣ ಮುಂದೆ ಹಾದು ಹೋದವು.
ನಾವು ಚಿಕ್ಕವರಿದ್ದಾಗ ಗುರುಗಳಿಗೆ ಕೊಡುತ್ತಿದ್ದ ಗೌರವವೇ ಬೇರೆ. ಶಾಲೆ ಮುಗಿದ ತಕ್ಷಣ ಸಂಜೆ ಮನೆಯಲ್ಲೂ ಸಹ ಪಾಠಮಾಡುತ್ತಿದ್ದರು. ಅಲ್ಲಿಗೂ ಸಹ ನಮ್ಮ ತಂದೆ-ತಾಯಿಗಳು ತಪ್ಪದೇ ಕಳಿಸುತ್ತಿದ್ದರು. ಅಲ್ಲಿ ಬರೀ ಪಠ್ಯ ಸಂಬಂಧಿ ವಿಷಯಗಳ ಜೊತೆಗೆ ಅನೇಕ ಪಠ್ಯೇತರ ಚಟುವಟಿಕೆಗಳನ್ನು ಸಹ ಮಾಡಿಸುತ್ತಿದ್ದರು. ಈಗಲೂ ನೆನಪಿದೆ, ಪ್ರಾಥಮಿಕ ಹಂತದಲ್ಲಿ ಅಣ್ಣಯ್ಯ ಮಾಸ್ಟರ್ ರವರು ಕಾಪಿರೈಟಿಂಗ್ ಕನ್ನಡ, ಇಂಗ್ಲಿಷ್, ಹಿಂದಿ ಈ ಮೂರು ಭಾಷೆಯಲ್ಲಿ ಹೆಚ್ಚೆಚ್ಚು ಬರೆಸುತ್ತಿದ್ದರು. ಇದರ ಫಲವಾಗಿ ಇಂದಿಗೂ ಸಹ ನಾನು ಈ ಮೂರು ಭಾಷೆಗಳನ್ನು ದುಂಡಾಗಿ ಬರೆಯುತ್ತೇನೆ. ನಂತರದಲ್ಲಿ ನರಸಿಂಹಮೂರ್ತಿಗಳು, ಕಾಲೇಜು ಹಂತಗಳಲ್ಲಿ ಹಲವರು, ಸಹ ನಮಗೆ ಇಂಗ್ಲಿಷ್, ಕನ್ನಡ ಪದ್ಯಗಳನ್ನು ಯಾವ ರೀತಿಯಲ್ಲಿ ಓದಬೇಕು ಎಂದು ಹೇಳಿಕೊಡುತ್ತಿದ್ದರು.
ನಮ್ಮ ತಂದೆಯೂ ಸಹ ಶಿಕ್ಷಕರಾಗಿದ್ದರಿಂದ ನನಗೂ ಸಹ ಒಂದುವರೆ ವರ್ಷದವರೆಗೆ ಗುರುಗಳು. ನಮ್ಮ ತಂದೆ ವೀರಭದ್ರಯ್ಯ ನವರು ದಿನಾಲೂ ಸಹ ಬದುಕಿನ ಮೌಲ್ಯಗಳ ಬಗ್ಗೆ, ಜೀವನ ಕೌಶಲ್ಯದ ಬಗ್ಗೆ ತಿಳಿಸುತ್ತಿದ್ದರು. ಮನೆಗೆ ನೆಂಟರಿಷ್ಟರು ಬಂದರೆ ಅವರನ್ನು ಹೇಗೆ ಮಾತನಾಡಿಸಬೇಕು, ನೆರೆಹೊರೆಯವರ ಜೊತೆಯಲ್ಲಿ ಬೆರೆಯುವ ಬಗ್ಗೆ, ಹೀಗೆ ಎಲ್ಲವನ್ನೂ ಸಹ ಹೇಳಿದ್ದರ ಫಲವಾಗಿ ಕೆಲವು ಸಂಸ್ಕಾರಗಳನ್ನು ಕಲಿಸಿದ್ದಾರೆ. ಇವೆಲ್ಲವನ್ನೂ ನಾನು ನನ್ನ ಜೀವನದಲ್ಲಿ ಅಳವಡಿಸಿಕೊಂಡು, ನನ್ನ ಮಕ್ಕಳಿಗೆ ಮತ್ತು ಇತರ ಮಕ್ಕಳಿಗೂ ಸಹ ತಿಳಿಸುತ್ತಿದ್ದೇನೆ.
ನಾನು ಪ್ರೌಢಶಾಲೆ ಮುಗಿಸಿ, ಕಾಲೇಜು ಹಂತ ದಾಟಿದ ನಂತರದಲ್ಲಿ ಪ್ರಾರಂಭದಿಂದಲೂ ಸಹ ಆಕಾಶವಾಣಿಯು ಸಹ ನನಗೆ ದೊಡ್ಡ ಗುರು ಇದ್ದಂತೆ. ಅದು ನನಗರಿವಿಲ್ಲದೆ ಅಂದಿನಿಂದ ಇಂದಿನವರೆಗೂ ಸಹ ದಿನಾಲೂ ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯದ ಕಾರ್ಯಕ್ರಮಗಳ ಮೂಲಕ ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದೆ. ಆಕಾಶವಾಣಿಯ ಮೂಲಕ ಅನೇಕ ಸ್ನೇಹಿತರು ಪರಿಚಯವಾದರೂ ಅವರಿಂದಲೂ ಸಹ ನಾನು ಒಂದಲ್ಲ ಒಂದು ರೀತಿಯಲ್ಲಿ ಅವರ ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ.
ಇನ್ನೂ ನನಗೆ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ಪತ್ರಿಕೆಗಳು ಸಹ ನನಗೆ ಗುರುಗಳೇ ಈ ಮೂಲಕ ನನಗನಿಸಿದ್ದನ್ನು ಬರೆದಾಗ ಪ್ರೋತ್ಸಾಹದ ರೀತಿಯಲ್ಲಿ ಅವು ಪ್ರಕಟಿಸಿ ನನ್ನನ್ನು ಬೆಳೆಸುತ್ತಿವೆ. ಹೀಗೆ ಆಕಾಶವಾಣಿ ಮತ್ತು ಪತ್ರಿಕೆಗಳ ಮೂಲಕ ಒಂದು ರೀತಿಯಲ್ಲಿ ಹಲವು ಗುರುಗಳ ದರ್ಶನವಾಗಿದೆ.
ಗುರುವೇ ನಮಃ ಎನ್ನುತ್ತಿದ್ದ ಕಾಲದಲ್ಲಿ ಈಗ ಗುರು ಏನ್ ಮಹಾ? ಎನ್ನುವ ವಿದ್ಯಾರ್ಥಿಗಳು ಸಹ ಇದ್ದಾರೆ ಎಂದರೆ ಅಚ್ಚರಿಪಡಬೇಕಾಗಿಲ್ಲ!. ಈಗ ಕಾಲ ಬದಲಾಗಿದೆ. ವಿದ್ಯಾರ್ಥಿಗಳಲ್ಲಿ ಗುರುವಿನ ಬಗೆಗಿನ ಭಯ-ಭಕ್ತಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ ಎನ್ನಲೇಬೇಕು. ಸ್ಪರ್ಧಾ ಪ್ರಪಂಚದಲ್ಲಿ, ನಾಗಾಲೋಟದ ಬದುಕಿನಲ್ಲಿ, ಎಲ್ಲವೂ ತನ್ನತನವನ್ನು ಕಳೆದುಕೊಳ್ಳುತ್ತಿವೆ.
ಆಗಿನ ಕಾಲದ ಗುರುಶಿಷ್ಯರ ಪರಂಪರೆ ಈಗಿನ ಕಾಲದ ಗುರುಶಿಷ್ಯರ ಪರಂಪರೆ ಗೆ ಅಜಗಜಾಂತರ ವ್ಯತ್ಯಾಸ ಇದ್ದೇ ಇದೆ. ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಯಾಂತ್ರಿಕವಾಗುತ್ತಿದೆ. ಈಗಿನ ವಿದ್ಯಾರ್ಥಿಗಳನ್ನು ನಾವು ಹೇಗೆ ತಯಾರು ಮಾಡುತ್ತಿದ್ದೇವೆ ಎಂದರೆ ಕೇವಲ ಅಂಕಗಳಿಕೆಗೆ ಮಾತ್ರ ಮೀಸಲು ಇಡುತ್ತಿದ್ದೇವೆ. ಅವರಿಗೆ ಬದುಕಿನ ವಿವಿಧ ಮಜಲುಗಳನ್ನು, ವ್ಯವಹಾರ ಜ್ಞಾನವನ್ನು ಕಲಿಸುತ್ತಿಲ್ಲ. ಇದರಿಂದಾಗಿ ಅವರು ಅಂಕ ಗಳಿಸುವ ಯಂತ್ರದಂತೆ ಕೆಲಸ ಮಾಡುತ್ತಿದ್ದಾರೆ!. ಅವರಿಗೆ ತಾಳ್ಮೆ, ಜವಾಬ್ದಾರಿ ಎನ್ನುವುದೇ ಇರುವುದಿಲ್ಲ. ತಂದೆ-ತಾಯಿಗಳು ಸಾಲಸೋಲ ಮಾಡಿ ಅಥವಾ ಕೆಲಸದಲ್ಲಿ ಇದ್ದುಕೊಂಡು ನನಗಂತೂ ವಿದ್ಯಾ ಹತ್ತಲಿಲ್ಲ ನನ್ನ ಮಕ್ಕಳಾದರೂ ಓದಿ ಮುಂದೆ ಬರಲಿ ಎಂದು ವಿದ್ಯಾರ್ಥಿಗಳಿಗೆ ಹಲವು ಸೌಕರ್ಯಗಳನ್ನು ಒದಗಿಸಿಕೊಡುತ್ತಾರೆ. ಇವೆಲ್ಲ ಜವಾಬ್ದಾರಿ ವಿದ್ಯಾರ್ಥಿಗಳಿಗೆ ಇರುವುದಿಲ್ಲ.ತಂದೆ-ತಾಯಿಗಳು ಪಡುವ ಕಷ್ಟವು ಸಹ ಅವರಿಗೆ ಗೊತ್ತಾಗುವುದಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಸ್ಕೂಟರ್, ಮೊಬೈಲ್, ಟಿವಿ, ಗೆಳೆಯರ ಹೊರಗಡೆ ಸಹವಾಸ- ಮಾದಕ ವಸ್ತುಗಳ ವ್ಯಸನಿಗಳಾಗಿರುತ್ತಾರೆ. ಇವೆಲ್ಲದರ ಫಲವಾಗಿ ವಿದ್ಯಾರ್ಥಿಗಳನ್ನು ಕಂಟ್ರೋಲ್ ಮಾಡುವುದೇ ಒಂದು ಸಾಹಸ!.
ಪ್ರಾಚೀನ ಕಾಲದ ಗುರುಗಳನ್ನು ವಿಶೇಷತೆಯಿಂದ ನೆನಪಿಸಿಕೊಳ್ಳಲೇಬೇಕಾದ ದ್ದಾಗಿದೆ. ಹಿಂದೆ ಗುರುಗಳು ಶಿಕ್ಷಕರನ್ನು ತಮ್ಮ ಬಳಿ ಹಲವು ವರ್ಷಗಳವರೆಗೆ ಇಟ್ಟುಕೊಂಡು ವಿದ್ಯೆಯನ್ನು ಸಂಪೂರ್ಣವಾಗಿ ಧಾರೆಯೆರೆದು ಒಂದಲ್ಲ ಒಂದು ರೀತಿಯಲ್ಲಿ ಮಾರ್ಗದರ್ಶನವನ್ನು ನೀಡುತ್ತಿದ್ದರು. ಶಿಷ್ಯರು ಸಹ ಅಷ್ಟೇ ಪ್ರತಿಯಾಗಿ ಅವರನ್ನು ಅರ್ಥ ಮಾಡಿಕೊಂಡು ಅವರು ಹೇಳುವ ಪಾಠಗಳನ್ನು ತಮ್ಮ ಜೀವನದಲ್ಲಿ, ತಮ್ಮ ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡು ಸಾರ್ಥಕ ಪಡಿಸಿಕೊಳ್ಳುತ್ತಿದ್ದರು. ಇಂದಿಗೂ ಸಹ ಹಳೆಯ-ವಿದ್ಯಾರ್ಥಿಗಳು ಹಳೆಯ ಗುರುಗಳನ್ನು ಕಂಡರೆ ಎಲ್ಲಿಲ್ಲದ ಭಕ್ತಿ ಇದ್ದೇ ಇದೆ.
ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಅಭಿನಾಭಾವ ಸಂಬಂಧ ಒಂದು ರೀತಿಯಲ್ಲಿ ಸುಮಧುರವಾಗಿ ಇರಬೇಕಾದದ್ದು.ಈಗಿನ ಶಿಕ್ಷಕರು ಕೂಡ ಹಿಂದೆಂದಿಗಿಂತ ತಮ್ಮ ಪಾಠಮಾಡುವ ಶೈಲಿಯನ್ನು ಸಹ ಬದಲಾಯಿಸಿಕೊಂಡಿದ್ದಾರೆ. ಹೆಚ್ಚು ಅಧ್ಯಯನ ಮಾಡುವ ಶಿಕ್ಷಕರು ಜೊತೆಗೆ ಹಲವು ಸ್ಪರ್ಧಾ ಪರೀಕ್ಷೆಗಳ ಮೂಲಕ ಶಿಕ್ಷಕ ವೃತ್ತಿಗೆ ಹೆಚ್ಚು ಹೆಚ್ಚು ಬರುತ್ತಿದ್ದಾರೆ. ಇದರಿಂದಾಗಿ ಅವರಲ್ಲಿನ ಜ್ಞಾನದರಿವು ಇಂದಿನ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಹೆಚ್ಚು ನೆರವಾಗುತ್ತದೆ. ವಿದ್ಯಾರ್ಥಿಗಳು ಸಹ ತಮ್ಮ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಾ ಗಮನ ಹರಿಸುತ್ತಿದ್ದಾರೆ. ಜೊತೆಗೆ ಈಗಿನ ಶಿಕ್ಷಣ ವ್ಯವಸ್ಥೆಯೂ ಸಹ ಹಿಂದೆಂದಿಗಿಂತ ಬಹಳಷ್ಟು ಸುಧಾರಿಸಿದೆ.
ಗುರು ಎಂದರೆ ನಮಗೆ ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಪಾಠ-ಪ್ರವಚನ ಮಾಡುವ ಗುರುಗಳ ಜೊತೆಗೆ, ಒಂದಕ್ಷರ ಕಲಿಸಿದಾತ ಸಹ ಗುರುವೇ ಆಗಿದ್ದಾನೆ. ಒಂದು ನದಿ ತನ್ನ ಉಗಮ ಸ್ಥಳದಿಂದ, ಸಮುದ್ರ ಸೇರುವವರೆಗೂ ಇಕ್ಕೆಡೆಗಳಲ್ಲಿ ತಾನು ಸಾಗುವ ಮಾರ್ಗದುದ್ದಕ್ಕೂ ಸಹ ಹಲವು ಪ್ರವಾಸಿ ತಾಣಗಳು, ಹಳ್ಳಿಗಳು, ನಗರಗಳು, ಕಾನನದ ನಡುವೆ, ಹೊಲಗದ್ದೆಗಳಿಗೆ ನೀರುಣಿಸುತ್ತಾ, ಎಲ್ಲರಿಗೂ ಕುಡಿಯುವ ನೀರಿನ ದಾಹ ತಣಿಸುತ್ತ, ಒಂದಲ್ಲೊಂದು ರೀತಿಯಲ್ಲಿ ತನ್ನ ಸಾರ್ಥಕ ಪಡೆದುಕೊಳ್ಳುತ್ತದೆ. ಅದೇ ರೀತಿ ಒಬ್ಬ ಮನುಷ್ಯ ತನ್ನ ಹುಟ್ಟಿದಾಗಿನಿಂದ ಸಾಯುವವರೆಗೂ ಸಹ ಪ್ರತಿ ಹೆಜ್ಜೆಯಲ್ಲಿ, ಪ್ರತೀಕ್ಷಣದಲ್ಲಿ, ವರ್ಷ ವರ್ಷವೂ ಸಹ ಒಂದಲ್ಲ ಒಂದು ರೀತಿಯಲ್ಲಿ ಗುರುವಿನ ಪರಂಪರೆಯ ಜೊತೆಗೆ ಇದ್ದೇ ಇರುತ್ತಾನೆ. ಹುಟ್ಟಿದಾಕ್ಷಣ ತಾಯಿಯೇ ಮೊದಲ ಗುರು.
ಹೀಗೆ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಒಂದಲ್ಲ ಒಂದು ಸಮಯ ಸಂದರ್ಭಗಳಲ್ಲಿ ಗುರುವಿನ ಮಹತ್ತರವಾದ ಪಾತ್ರ ಇದ್ದೇ ಇರುತ್ತದೆ. ಅಂತಹ ಎಲ್ಲಾ ಗುರುಗಳನ್ನು ನಾವು ದಿನಾಲು ನೆನೆಸಿಕೊಳ್ಳಬೇಕು. ಹೇಗೆ ಸರ್ವಜ್ಞ ಎಲ್ಲರಿಂದಲೂ ಒಂದೊಂದು ಅಕ್ಷರಗಳನ್ನು, ವಿಷಯಗಳನ್ನು ಕಲಿತು ಜ್ಞಾನದ ವಿಷಯದಲ್ಲಿ ಮೇರು ಪರ್ವತವೇ ಆಗಿದ್ದ.
ಸೆಪ್ಟಂಬರ್ 5 ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ ನನ್ನ ಜೀವನದಲ್ಲಿ ಬಂದು ಹೋಗಿರುವ, ಮುಂದೆ ಬರಲಿರುವ ಪ್ರತಿಯೊಬ್ಬ ಗುರುಗಳಿಗೂ ಸಹ ಹೃದಯಾಂತರಾಳದ ಹೃತ್ಪೂರ್ವಕ ವಂದನೆಗಳನ್ನು, ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗುರುಗಳು ಆದವರು ಸಹ ವಿದ್ಯಾರ್ಥಿಗಳನ್ನು ಮತ್ತು ಅವರ ಅಂತರಂಗವನ್ನು ಪ್ರವೇಶಿಸಿ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಆಗ ಕೊಡು-ಕೊಳ್ಳುವಿಕೆಯಿಂದಾಗಿ ವಿದ್ಯಾರ್ಥಿ ಮತ್ತು ಗುರುಗಳ ಬಾಂಧವ್ಯ ಸುಮಧುರವಾಗಿರುತ್ತದೆ.
ಒಟ್ಟಿನಲ್ಲಿ ನಮ್ಮ ಮೇಲೆ ಗುರುಗಳು ವಿಧವಿಧವಾದ ಸಂಸ್ಕಾರ ಕಲಿಸಿ, ನಮ್ಮನ್ನು ಸಮಾಜದಲ್ಲಿ ಏಕರೂಪವಾಗಿ ಸಾಗಲು ನೆರವಾಗುತ್ತಾರೆ. ತಂದೆ ತಾಯಿ ಮೊದಲ ಗುರು. ಇವರ ಮನಸ್ಸನ್ನು ನಾವು ಎಂದು ನೋಯಿಸಬಾರದು. ನಮ್ಮ ಜೀವನದಲ್ಲಿ ಯಾರನ್ನು ನಾವು ಮರೆಯಬಾರದು ನಮಗೆ ಅನೇಕ ವಿಷಯಗಳನ್ನು ಕಲಿಸಿ ನಮ್ಮ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರುವ/ ವಾಗುತ್ತಿರುವ, ಪ್ರತಿಯೊಬ್ಬ ಗುರುಗಳಿಗೂ ಮತ್ತೊಮ್ಮೆ ವಂದನೆಗಳು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಉತ್ತಮ ಬರಹ ಅಭಿನಂದನೆಗಳು ಸಾರ್
ಸೂಪರ್ ಸರ್, ತಿಳಿ ಹಾಸ್ಯದಿಂದ ಕೂಡಿದ ಗುರುವಿನ ಮಹತ್ವವನ್ನು ಸಾರುವ ಲೇಖನ.
Very nice article
ಸರ್, ಬರಹ ನಿಮ್ಮ ಹಾಗೆಯೇ ಮೃದುವಾಗಿದೆ ಹಾಗೆಯೇ ನೈಜವಾಗಿದೆ..
ಜೀವನದುದ್ದಕ್ಕೂ ಅಸಂಖ್ಯ ಮೂಲಗಳಿಂದ ಕಲಿಕೆ ಸಾಗುತ್ತಿರುವ ಬಗೆಯ ಬಗೆಗಿನ ಸಕಾಲಿಕ ಬರಹದ ಮೂಲಕ ಗುರುನಮನ ಚೆನ್ನಾಗಿ ಮೂಡಿಬಂದಿದೆ.
ಗುರುವಿನ ಮಹತ್ವದ ಬಗ್ಗೆ ತಿಳಿಸುವ ಪ್ರಯತ್ನಕ್ಕೆ ಅಭಿನಂದನೆಗಳು
Super….. ಇಂದಿನ ಯುವ ಪೀಳಿಗೆಗೆ ಶಿಕ್ಷಕರ ಬಗ್ಗೆ ತಿಳಿ ಹೇಳಿರುವ ಈ ನಿಮ್ಮ ಬರಹ ಸೊಗಸಾಗಿದೆ.