‘ತೆರೆದಂತೆ ಹಾದಿ’ ಪುಸ್ತಕ ಪರಿಚಯ
ಪುಸ್ತಕ : ತೆರೆದಂತೆ ಹಾದಿ
ಲೇಖಕರು: ಜಯಶ್ರೀ ಕದ್ರಿ
ಪ್ರಕಾಶನ:ಕೃತಿ ಆಶಯ ಪಬ್ಲಿಕೇಶನ್
ಬೆಲೆ:150
ಸುಧಾ ಮೂರ್ತಿಯವರ ‘ಯಶಸ್ವಿ’ ಕಾದಂಬರಿ ಮತ್ತು ಮಿಷನ್ ಮಂಗಲ್ ಸಿನಿಮಾ ನೋಡಿದೆ. ಅದರಲ್ಲೇನು ವಿಶೇಷ, ಸಾಮ್ಯತೆ ಎಂದು ಕೇಳುವೀರೇನೋ? ನನಗೆ ಮಹಿಳೆಯರು ತಮ್ಮ ಕಾರ್ಯಕ್ಷೇತ್ರದಲ್ಲಿ, ಅಲ್ಲದೇ ಹೌಸ್ ವೈಫ್ ಆದರೂ ಮನೆಯಲ್ಲಿ ಮಾಡುವ ತ್ಯಾಗ,ಕಾಯಕವೇ ಕೈಲಾಸವೆಂದು ತಮ್ಮ ಗುರಿಯತ್ತ ಸಾಗಲು ಪಡುವ ಶ್ರಮ ನಮಗೆ ಎದ್ದು ಕಾಣುತ್ತದೆ. ಹಲವಾರು ವರ್ಷಗಳಿಂದ ಮಹಿಳೆಯರು ಸಮಾನತೆ ಪಡೆಯಲು ಪಟ್ಟ ಕಷ್ಟ,ಬಾಲ್ಯವಿವಾಹ, ಸತಿ ಪದ್ಧತಿ ಹೀಗೆ ಹಲವಾರು ಶತಮಾನಗಳಿಂದ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಷೇಧಿಸಲಾಗಿದೆಯಾದರೂ,ಇನ್ನೂ ಗಾಂಧಿಯವರ ರಾಮ ರಾಜ್ಯದ ಕನಸಿನಂತೆ ರಾತ್ರಿ ಸಮಯದಲ್ಲಿ ಒಬ್ಬಳೇ ಮಹಿಳೆ,ಓಡಾಡಲು ಸಾಧ್ಯವೇ?
ಈ ಸದ್ಯ ಜಯಶ್ರೀ ಬಿ.ಕದ್ರಿಯವರ ‘ತೆರೆದಂತೆ ಹಾದಿ’ ಓದಿದೆ. ಈ ಸಂಕಲನದಲ್ಲಿ ಸುಮಾರು 55 ಲೇಖನಗಳಿವೆ. ಅವರ ಬರಹದ ವಸ್ತುವಿಷಯಗಳು ಯಾವುದೇ ಇರಲಿ ಅವರ ಲೇಖನಗಳ ಕೇಂದ್ರಬಿಂದು ಮಹಿಳೆಯೇ. ಅವರ ಅಂತಃಕರಣ ಮಿಡಿಯುವುದು ಸದ್ದಿಲ್ಲದೆ ಅಡಗಿ ಹೋಗುವ ಹೆಣ್ಣುಮಕ್ಕಳ ಮುಖ ದನಿಗಳ ಸಮಾಜದ ಮಧ್ಯಮವರ್ಗದವರ, ಅಸಹಾಯಕರ ಒಳ ಧ್ವನಿಗಳಿಗೆ. ಈ ಕಾರಣಗಳಿಗಾಗಿಯೇ ಲೇಖನಗಳು ನಮ್ಮನ್ನು ತಟ್ಟುತ್ತವೆ ಮತ್ತು ಓದುವಂತೆ ಪ್ರೇರೇಪಿಸುತ್ತವೆ ಎಂದು ಸ್ಮಿತಾ ಅಮೃತರಾಜರವರು ಈ ಕೃತಿಯ ಕುರಿತು ನಲ್ನುಡಿಯಲ್ಲಿ ಬರೆದಿದ್ದಾರೆ.
ಕಾಲೇಜಿನಲ್ಲಿ ಎಷ್ಟು ಜನರ ತಮ್ಮ ಪತ್ನಿಯರು ಕೆಲಸಕ್ಕೆ ಹೋಗಬೇಕೆಂದು ಬಯಸುತ್ತೀರಿ ಎಂದಾಗ ಮುಕ್ಕಾಲು ಪಾಲು ವಿದ್ಯಾರ್ಥಿಗಳು ಪತ್ನಿಯರು ಮನೆಯಲ್ಲಿದ್ದುಕೊಂಡು ಸಂಸಾರ ನಿಭಾಯಿಸಬೇಕೆಂದು ಅಭಿಪ್ರಾಯಪಟ್ಟರು ಎಂದು ಹೇಳುತ್ತಾ ಬೇಸರಪಡುವ ಲೇಖಕರು, ಅವರನ್ನು ನಿಮ್ಮಂತೆ ವಿದ್ಯಾರ್ಥಿನಿಯರು ಕಷ್ಟಪಟ್ಟು ಓದಿ ಅವರ ಪ್ರತಿಭೆ ಚಪಾತಿ ಲಟ್ಟಿಸುವುದರಲ್ಲಿ, ಧಾರವಾಹಿ ನೋಡುವುದರಲ್ಲಿ ಕಳೆಯಬೇಕೆಂದಾಗ ಬೇಸರವಾಗುವುದಿಲ್ಲವೇ ಎಂದು ಕೂಡ ಕೇಳುತ್ತಾರೆ.
ಎಸೆಸೆಲ್ಸಿ, ಪಿಯುಸಿಯಲ್ಲಿ 90 ಶೇಕಡಾಗಳಿಸುವ ಹೆಣ್ಣುಮಕ್ಕಳು ಮದುವೆಯಾಗುತ್ತಲೇ ಮಾಯವಾಗುತ್ತಾರೆ ಎಂದು ದುಃಖ ವ್ಯಕ್ತಪಡಿಸುವ ಲೇಖಕರು ಇದರಲ್ಲಿ ‘ಮದುವೆಯೇ ಹೆಣ್ಣಿನ ಜೀವನದ ಗುರಿಿ’ ಎಂಬಂತೆ ವರ್ತಿಸುವ ಮಾಧ್ಯಮಗಳ ಕೈವಾಡವಿರಬಹುದು, ಎಂಬ ಸಂಶಯ ವ್ಯಕ್ತಪಡಿಸುತ್ತಾರೆ. ಚಲನಚಿತ್ರಗಳಲ್ಲಿ ಹೀರೋ ತಾನು ಮನೆಗೆ ಬಂದಾಗ ಬಿಸಿಬಿಸಿ ಅಡುಗೆ ಮಾಡುವ, ಗಾಗ್ರಾ ಚೋಲಿಯಂತಹ ಭಾರತೀಯ ಉಡುಗೆ ತೊಟ್ಟವರಿಗೆ ಮಾತ್ರವೇ ದಕ್ಕುತ್ತಾನೆ. ಬೋಲ್ಡ್ ಆಗಿರುವ, ಪಟಪಟನೆ ಮಾತನಾಡುವ ಹುಡುಗಿಯರು ಚಲ್ಲುಚಲ್ಲಾಗಿರುವವರೆಂದೂ, ಮೌನಗೌರಿಯಂತೆ ತಮ್ಮ ಅಭಿಪ್ರಾಯವನ್ನು ಹೇಳದೆ ಅದುಮಿಟ್ಟುಕೊಳ್ಳುವವರು ಆದರ್ಶಮಯಿ ಎಂದು ಪ್ರತಿಬಿಂಬಿಸಲಾಗುತ್ತದೆ ಎಂದು ಹೇಳುವ ಲೇಖಕರು, ಸರ್ವ ಕಾಲದಲ್ಲೂ ಮೌನವೇ ಬಂಗಾರವಲ್ಲವೆಂದು ಎತ್ತಿ ಹೇಳುತ್ತ, ಗಂಡು ಹೆಣ್ಣು ಸಮಾನವೆನ್ನುವ ಈ ಕಾಲದಲ್ಲಿ ಪಟಪಟನೆ ಮಾತನಾಡುವುದು ತಪ್ಪಲ್ಲ ಎನ್ನುತ್ತಾರೆ.
ಇಕ್ಕಟ್ಟಾದ ಮನೆಗಳ ಎದುರು ಕೂಡ ಇರುವ ರಂಗೋಲಿ, ಹಬ್ಬ ಹರಿದಿನಗಳನ್ನು ಆಚರಿಸುವ ಜೀವನಪ್ರೀತಿ, ಹೊಟ್ಟೆ ಬಟ್ಟೆ ಕಟ್ಟಿ ಆದರೂ ತಮ್ಮ ಮಕ್ಕಳನ್ನು ಓದಿಸುವ ಮಧ್ಯಮವರ್ಗದವರ ಛಲ ಬಹುಶಃ ಇದೇ ಭಾರತದ ಭವಿಷ್ಯದ ಭರವಸೆ ಇರಬೇಕು ಎನ್ನುವ ಲೇಖಕರು, ಮನೆ ಸಣ್ಣದಾದರೂ ಮನಸು ದೊಡ್ಡದು ಎನ್ನುವಂತೆ, ಸಣ್ಣ ಆಸೆಗೆ ಒತ್ತು ನೀಡಿ ಇದ್ದುದರಲ್ಲೇ ತೃಪ್ತಿಯಿಂದ ಜೀವನ ನಡೆಸುವ ಪ್ರೀತಿಯೇ ದೊಡ್ಡದು.
ಗಾರೆ ಕೆಲಸ ಮಾಡುವ ಹೆಣ್ಣಿರಲಿ, ಕಾರ್ಪೊರೇಟ್ ವಲಯದ ಉನ್ನತ ಹುದ್ದೆಯ ಹೆಣ್ಣಿರಲಿ ಲೈಂಗಿಕ ದೌರ್ಜನ್ಯಗಳಿಂದ ಆಕೆಗೆ ಮುಕ್ತಿ ಇಲ್ಲದಿರುವುದು ಡೆಮಾಕ್ರಸಿಯ ವಿಪರ್ಯಾಸವೆಂದು ಹೇಳುತ್ತಾ ಹೆಣ್ಣಿಗೆ ರಾತ್ರಿ ಹೊತ್ತಲ್ಲ, ಬೆಳಗ್ಗಿನ ಹೊತ್ತಲ್ಲೂ ಸುರಕ್ಷತೆಯಿಲ್ಲದಿರುವುದನ್ನು ನಾವು ಕಾಣಬಹುದು ಎಂಬುದನ್ನು ತೋರಿಸುತ್ತಾರೆ. ರಕ್ಷಕರಾದವರೆ ಭಕ್ಷಕರಾದರೆ ನಮ್ಮ ಗತಿಯೇನು ಅಲ್ಲವೇ? ಮನೆಗೆಲಸ ಎನ್ನುವುದು ಸಿಂದಾಬಾದ್ ನಂತೆ ಹೆಣ್ಣಿನ ಹೆಗಲೇರಿರುವ ಪೆಡಂಭೂತ, ಅದಕ್ಕೆ ರಿಟೈರ್ಮೆಂಟ್ ಅನ್ನೋದಿಲ್ಲ,ಪ್ರಾವಿಡೆಂಟ್ ಫಂಡ್ ಇತ್ಯಾದಿಗಳು ಇಲ್ಲ.ಆದರೂ ಹೆಣ್ಣು ಮನೆಕೆಲಸಕ್ಕಾಗಿ, ಕುಟುಂಬಕ್ಕಾಗಿ ತ್ಯಾಗ ಮಾಡುತ್ತಲೇ ಸಾಗಬೇಕಾಗಿರುವುದು ವಿಪರ್ಯಾಸವೆನ್ನುವ ಲೇಖಕರು, ಹೆಣ್ಣು ಗಂಡು ಸಮಾನವಾಗಿ ದುಡಿಯುವಂತೆ, ಸಮಾನವಾಗಿ ಮನೆ ಕೆಲಸವನ್ನು ಹಂಚಿಕೊಂಡು ಮಾಡಬೇಕು ಎನ್ನುತ್ತಾರೆ.
ಸ್ತ್ರೀಯರ ಬರಹಗಳು ಕಳಪೆ ಗುಣಮಟ್ಟದ್ದು, ಅಡುಗೆಮನೆ ಸಾಹಿತ್ಯವೆಂದು ಕರೆಯಲ್ಪಡುತ್ತದೆ ಅಡುಗೆಮನೆ, ಕಾರ್ಯಕ್ಷೇತ್ರಗಳನ್ನು ಹೊರತುಪಡಿಸಿ ಇನ್ನೇನು ತಾನೆ ಬರೆಯಲು ಸಾಧ್ಯ. ಪುರುಷ ಸಾಹಿತಿಗಳು ತಿಂಗಳುಗಟ್ಟಲೆ ರಿಸರ್ಚ್ ಮಾಡುತ್ತಾರಂತೆ. ಅದೇ ಒಂದು ಮಹಿಳಾ ಸಾಹಿತಿಗೆ ತನ್ನ ಸಂಸಾರವನ್ನು ಬಿಟ್ಟು, ದೇಶದ ಇತರ ಭಾಗಗಳನ್ನೆಲ್ಲ ಸಂಚರಿಸುವ ಸ್ವಾತಂತ್ರ್ಯ, ಅನುಕೂಲಗಳು ದೇಶದಲ್ಲಿ ಸದ್ಯಕ್ಕೆ ಇಲ್ಲ. ಗಂಡು ಹೆಣ್ಣು ಇಬ್ಬರೂ ದುಡಿಯುವ ಈ ಕಾಲದಲ್ಲಿ ಎಷ್ಟೋ ಮಹಿಳೆಯರು ತನಗೆ ಬರಬೇಕಾದ ಪ್ರಮೋಷನ್ಗೆ ವಿದೇಶ ಪ್ರವಾಸಗಳನ್ನು ಮಕ್ಕಳು ಚಿಕ್ಕವರೆಂದು ಬಿಟ್ಟು ಬಿಡುತ್ತಾರೆ. ಮನೆಕೆಲಸಗಳನ್ನು ಹಂಚಿಕೊಳ್ಳುವುದು,ಮಕ್ಕಳನ್ನು ನೋಡಿಕೊಳ್ಳುವುದು ಹೇಗೆ ಮನೆ ಮಂದಿಯ ಸಹಕಾರದಲ್ಲಿ ಸಹಕಾರ ಸಿಕ್ಕರೆ ಸರಿ ಇಲ್ಲವಾದಲ್ಲಿ ಎರಡೂ ಕಡೆ ದುಡಿದು, ವಯಸ್ಸಿಗೆ ಮೀರಿದ ವೈರಾಗ್ಯ ಬಂದರೂ ಆಶ್ಚರ್ಯವಿಲ್ಲವೆಂದು ಹೇಳುತ್ತ ಸ್ತ್ರೀಯರ ಸಾಹಿತ್ಯದಲ್ಲೂ ಹುರುಳಿದೆ, ಅವರ ಭಾವನೆಗಳು, ಸಮಸ್ಯೆಯನ್ನು ಎತ್ತಿ ಹೇಳುತ್ತ ಮನೆಯವರ ಸಹಕಾರವಿದ್ದರೆ ಎರಡೂ ಕಡೆ ನಿಭಾಯಿಸುತ್ತ ಏನನ್ನಾದರೂ ಸಾಧಿಸಬಲ್ಲ ಮಹಿಳೆಯರ ಶಕ್ತಿಯನ್ನು ಒತ್ತಿ ಹೇಳುತ್ತಾರೆ.
ಸೈಬರ್ ಕೆಫೆಗಳಿಗೆ ಹೋಗಿ ಕಾಲ ಕಳೆಯುತ್ತ, ಫೇಸ್ಬುಕ್ಕಿನಲ್ಲಿ ಗಂಟೆಗಟ್ಟಲೆ ಸಮಯ ವಹಿಸುತ್ತಾ, ಏಕಾಗ್ರತೆಯನ್ನು ಕಳೆದುಕೊಳ್ಳುವ ಎಳೆ ಮಕ್ಕಳನ್ನು ಅದರಿಂದ ದೂರವಿಡಬೇಕಾದುದು ತಂದೆ-ತಾಯಿಯರ ಕರ್ತವ್ಯ ಎಂದು ಎಚ್ಚರಿಸುತ್ತಾರೆ. ಅತಿಯಾದರೆ ಅಮೃತವೂ ವಿಷದಂತೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂಟರ್ನೆಟ್, ಫೇಸ್‌ಬುಕ್ ಇತ್ಯಾದಿಗಳು ಅಗತ್ಯವಾಗಿದ್ದು ಸರಿಯಾಗಿ ಬಳಸಿದರೆ ಮಾತ್ರ ಅದರ ಉಪಯೋಗ, ಇಲ್ಲದಿರೆ ಅಪಾಯ ತಪ್ಪಿದಲ್ಲ. ಮೊದಮೊದಲು ಮನೋರಂಜನೆಗೆಂದು ಬಳಸುವ ತಂತ್ರಜ್ಞಾನ ಗೀಳಾಗಿ ಪರಿಣಮಿಸುವ ಸಂಭವವೂ ಇರುವುದರಿಂದ ಎಚ್ಚರಿಕೆಯಿಂದ ಬೇಕಾದಷ್ಟು ಮಾತ್ರ ಬಳಸಬೇಕು.
ಭಾಷಣ ಡಿಬೇಟ್ ಗಳಲ್ಲಿ ಪ್ರಥಮ ಬಹುಮಾನ ಗಳಿಸುವ ಹುಡುಗಿ, ಮನೆಯ ನೆಂಟರ ನಡುವೆ ಫಂಕ್ಷನ್ ಗಳಲ್ಲಿ, ಉಸಿರೆತ್ತದೆ ಸುಮ್ಮನಿರಬೇಕು. ಮೀಟಿಂಗ್ ಗಳಲ್ಲಿ, ಗ್ರೂಪ್ ಡಿಸ್ಕಶನಗಳಲ್ಲಿ ಸಮರ್ಥವಾಗಿ ವಾದ ಮಂಡಿಸಬೇಕಾದ ಮಹಿಳೆ ತನಗೆ ಅನ್ಯಾಯವಾಗುತ್ತಿದ್ದರೂ, ಕೌಟುಂಬಿಕ ವಲಯದಲ್ಲಿ ತಗ್ಗಿಬಗ್ಗಿ ನಡೆಯಬೇಕು, ಎಂದು ಹೇಳುವ ಲೇಖಕರು, ‘ಮನೆಯಲ್ಲಿ ಇಲಿ,ಹೊರಗೆ ಹುಲಿಯಂತೆ’ ಮಹಿಳೆಯರು ಕಚೇರಿಯಲ್ಲಿ ದುಡಿದು ಗಳಿಸುತ್ತ,ಮನೆಯಲ್ಲಿ ಉಳಿದವರು ಹೇಳಿದಂತೆ ಕೇಳೀ,ಅದರಂತೆ ನಡೆಯುತ್ತ ಸಾಗಬೇಕು ಎನ್ನುತ್ತದೆ ಸಮಾಜ. ಅಸಮಾನತೆಯಿದ್ದರೂ ಧ್ವನಿಯೆತ್ತದೇ ಮಹಿಳೆಯರು ಸುಮ್ಮನಿರಬೇಕಾಗಿದೆಯೆಂದು ಮರಗುತ್ತಾರೆ.
ನಮ್ಮಲ್ಲಿರುವ ಸೌಭಾಗ್ಯಗಳನ್ನು ನಾವು ಲೆಕ್ಕಕ್ಕೆ ತೆಗೆದುಕೊಳ್ಳದಿರುವುದು ಕೈ ಕಾಲು,ಕಣ್ಣು,ಆರೋಗ್ಯ ಎಲ್ಲವೂ ಸಮರ್ಪಕವಾಗಿ ಇರುವಾಗ ನಮಗದರ ಬೆಲೆಯ ಅರಿವಿಲ್ಲ. ನಮ್ಮ ಹೈಟು,ವೇಟು,ಬಣ್ಣ ಸೌಂದರ್ಯ ಎಲ್ಲವನ್ನು ಅವರಿವರ ಜೊತೆ ಕಂಪೇರ್ ಮಾಡಿ ಸಣ್ಣದಾಗಿಸಿ ಕೊಳ್ಳುವುದೇ ನಮ್ಮ ಪ್ರಮುಖ ಹಾಬಿ ಎಂದು ಹೇಳುತ್ತಾ ಲೇಖಕರು “ಹಾಸಿಗೆ ಇರುವಷ್ಟೇ ಕಾಲು ಚಾಚು” ಎಂದು ಹಿರಿಯರು ಹೇಳಿದ ಮಾತನ್ನು ನೆನಪಿಸುತ್ತ, ಇದ್ದುದರಲ್ಲಿಯೇ ತೃಪ್ತಿ ಪಡುತ್ತಾ “ದೂರದ ಬೆಟ್ಟ ನುಣ್ಣಗೆ” ಎಂದು ಭಾವಿಸದೆ ” ಇರುವುದೆಲ್ಲವ ಬಿಟ್ಟು ಇರದಿದ್ದರ ಕಡೆಗೆ ತುಡಿಯುವುದೇ ಜೀವನ” ಎಂಬುದನ್ನು ಎತ್ತಿ ತೋರಿಸಿದ್ದಾರೆ.
ಇಂದಿನ ಯುವಜನತೆ ಮುಂದಿನ ಪ್ರಜೆಗಳು ಯುವಶಕ್ತಿಯ ಸಾಧ್ಯತೆಗಳು ಅಪಾರವಾಗಿರುವಾಗ, ಇಂದಿನ ಯುವಜನತೆಯೇ ಮುಂದೆ ದೇಶವನ್ನು ನಡೆಸಬೇಕಾಗಿದೆ. “ಏಳಿರಿ,ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಸ್ವಾಮಿ ವಿವೇಕಾನಂದರು ಕರೆಕೊಟ್ಟಿರುವ ದೇಶ ನಮ್ಮದಲ್ಲವೇ? ಗಂಡು, ಹೆಣ್ಣು ಎಂಬ ಭೇದ ಮರೆತು ಎಲ್ಲರಿಗೂ ಸಮಾನ ಶಿಕ್ಷಣ, ಅವಕಾಶ ಒದಗಿಸುತ್ತ, ಯುವ ಶಕ್ತಿಯ ಸದುಪಯೋಗ ಪಡೆಯುತ್ತ ಸಾಗೋಣ ಎನ್ನುವ ಸಾರವನ್ನು ಈ ಪುಸ್ತಕ ನೀಡುತ್ತ ಸಾಗುತ್ತದೆ. ಎಲ್ಲರಿಗೂ ಉಪಯುಕ್ತ ಮಾಹಿತಿ ನೀಡುತ್ತ, ಬದಲಾಗುತ್ತಿರುವ ಈ ಜಗಕ್ಕೆ ತೆರೆದುಕೊಳ್ಳುತ್ತ, ಸಾಗಲಿ ಎಂದು ‘ತೆರೆದಂತೆ ಹಾದಿ’ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಒಮ್ಮೆ ಓದಿ ನೋಡಿ, ಅರಿವು ಎಂಬ ಬೆಳಕಿನ ಹಾದಿ ನಿಮಗೂ ತೆರೆಯುವುದರಲ್ಲಿ ಸಂಶಯವಿಲ್ಲ.
-ಸಾವಿತ್ರಿ ಶ್ಯಾನಭಾಗ್
ತುಂಬಾ ಚೆನ್ನಾಗಿದೆ ಪುಸ್ತಕ ಪರಿಚಯ. ತೆರೆದಂತೆ ಹಾದಿ, ಸುಂದರವಾದ ಲೇಖನ ಮಾಲೆ.
Thank you Nayana Madam . Thank you Savitri Shanbhog for this beautiful write up.
ನಾನೂ ಓದಿರುವೆ ಈ ಪುಸ್ತಕ. ಸಂಗ್ರಹ ಯೋಗ್ಯ ಪುಸ್ತಕ
ಬಹಳ ಸೊಗಸಾದ ಪುಸ್ತಕದ ಪರಿಚಯವು ಅಷ್ಟೇ ಚೆನ್ನಾಗಿ ಮೂಡಿ ಬಂದಿದೆ.. ಧನ್ಯವಾದಗಳು.