ಕವಿನೆನಪು 11 : ಜಿ ಪಿ ರಾಜರತ್ನಂ ಹಾಗೂ ಕೆ ಎಸ್ ನ ಆತ್ಮೀಯತೆ
ಒಂದು ಕವಿಗೋಷ್ಠಿಯಲ್ಲಿ ನಮ್ಮ ತಂದೆಯವರು ಕವಿತಾವಾಚನ ಮಾಡಿದಾಗ ಜನರ ಮೇಲೆ ಅದು ಅಷ್ಟೊಂದು ಪರಿಣಾಮ ಬೀರಿರಲಿಲ್ಲ.ಇಷ್ಟೊಂದು ಒಳ್ಳೆಯ ಪದ್ಯದ ಭಾವ ಸಂವಹನವಾಗದೆ ಹೋದುದನ್ನು ಗಮನಿಸಿದ ರಾಜರತ್ನಂ ತಕ್ಷಣ ಎದ್ದು ನಿಂತು “ಇದೊಂದು ಉತ್ತಮ ಪದ್ಯ. ಇದನ್ನು ಈಗ ನಾನು ಓದುತ್ತೇನೆ. ಇಲ್ಲಿ ಬರುವ ಪದುಮ ನನ್ನ ಕವನಗಳಲ್ಲಿ ಬರುವ ಮಲ್ಲಿಯ ತಂಗಿ.” ಎನ್ನುತ್ತ ತಮ್ಮ ಕಂಚಿನ ಕಂಠದಲ್ಲಿ,ಕವನವನ್ನು ಧ್ವನಿಪೂರ್ಣವಾಗಿ ಹಾಗೂ ನಾಟಕೀಯವಾಗಿ ವಾಚಿಸಿದಾಗ, ಜನರ ಹರ್ಷ ಮುಗಿಲುಮುಟ್ಟಿತು. ಈ ಪ್ರಸಂಗವನ್ನು ನಮ್ಮ ತಂದೆಯವರು ಬಹಳ ಸಲ ನೆನಪಿಸಿಕೊಳ್ಳುತ್ತಿದ್ದರು.
ಇಂಥ ಕಾರಣದಿಂದಲೇ ಕೆ ಎಸ್ ನ ಅವರಿಗೆ ರಾಜರತ್ನಂ ಅವರ ಬಗ್ಗೆ ಒಂದು ಗೌರವಭರಿತ ಸ್ನೇಹಭಾವವಿದ್ದುದು. ಉತ್ತಮ ಕಾವ್ಯ ಯಾರೇ ಬರೆದಿರಲಿ ಅದು ಕಾವ್ಯಲೋಕದ ಸ್ವತ್ತು ಎಂದು ಪರಿಭಾವಿಸಿ, ಅದನ್ನು ತಮ್ಮದಾಗಿಸಿಕೊಂಡು ಜನರಿಗೆ ತಲುಪಿಸುವ ಈ ಸಾಹಿತ್ಯ ಪರಿಚಾರಿಕೆಯ ಗುಣ ರಾಜರತ್ನಂ ಅವರಿಗೆ ಯಾರೂ ಆಕ್ರಮಿಸಲಾಗದ ಸ್ಥಾನವೊಂದನ್ನು ತಂದುಕೊಟ್ಟಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸುವರ್ಣಾಧಿವೇಶನ ಎಂದೇ ಹೆಸರಾದ,1978ರಲ್ಲಿ ದೆಹಲಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ರಾಜರತ್ನಂ ಅವರು. ಆ ಸಮ್ಮೇಳನದಲ್ಲಿ ನಮ್ಮ ತಂದೆಯವರೂ ಭಾಗವಹಿಸಿದ್ದರು. ಬೆಂಗಳೂರು ರೈಲುನಿಲ್ದಾಣದಲ್ಲಿ ನಮ್ಮ ತಂದೆಯವರನ್ನು ನೋಡಿದೊಡನೆ ರಾಜರತ್ನಂ “ನರಸಿಂಹಸ್ವಾಮಿ ಬನ್ನಿ ಇಲ್ಲಿ “ ಎಂದು ಕರೆದು ಹಲವು ಕಾವ್ಯ ವಿಚಾರಗಳ ಬಗ್ಗೆ ಚರ್ಚಿಸಿದರು. ಭಾಷಣ ನೀಡಬೇಕಾದರೆ ಮಾಹಿತಿಗಳ ಖಚಿತತೆ, ಸಿದ್ದತೆ ಹಾಗೂ ಬದ್ಧತೆ, ಕೊಟ್ಟ ಸಮಯದ ಒಳಗೆ ಮಾತು ಮುಗಿಸುವುದು ರಾಜರತ್ನಂ ಅವರ ಕ್ರಮ ಎಲ್ಲ ಭಾಷಣಕಾರರಿಗೆ ಎಲ್ಲ ಕಾಲಕ್ಕೂ ಮಾದರಿಯಾದುದು .
ನಮ್ಮತಂದೆಯವರ ಸಂಭಾವನಾ ಗ್ರಂಥ “ಚಂದನ” ಬಿಡುಗಡೆಯಾದಾಗ ರಾಜರತ್ನಂ ಅವರು ಕೆ ಎಸ್ ನ ಕಾವ್ಯದ ವಿಶಿಷ್ಟಗಳನ್ನು ಗುರುತಿಸುವ ಒಂದು ಸೊಗಸಾದ ಅಭಿನಂದನಾ ಭಾಷಣ ಮಾಡಿದರು. ಜನ ಚಪ್ಪಾಳೆ ತಟ್ಟಿದಾಗ, ”ಚಪ್ಪಾಳೆ ಸಾಲದು, ಜೇಬಿನಿಂದ ಕಾಸು ತೆಗೆದು ಕನ್ನಡ ಪುಸ್ತಕ ಕೊಳ್ಳಬೇಕು“ ಎಂದು ನವಿರಾಗಿ ಎಚ್ಚರಿಸಿದರು.
ಒಮ್ಮೆ ರಾಜರತ್ನಂ ಹಾಗೂ ಕೆ ಎಸ್ ನ ಉಡುಪಿಯಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾತ್ರಿ ಬಸ್ಸಿನಲ್ಲಿ ಬೆಂಗಳೂರಿಗೆ ವಾಪಸು ಪ್ರಯಾಣ ಬೆಳಸಿದರು. ಬಸ್ಸು ಮಲ್ಲೇಶ್ವರಂನಲ್ಲಿ ನಿಂತಾಗ, ರಾಜರತ್ನಂ ತರಾತುರಿಯಲ್ಲಿ ಇಳಿದುಹೋದರು. ಹಾಗೆ ಹೋಗುವಾಗ ಒಂದು ಕಾಲಿಗೆ ತಮ್ಮ ಹವಾಯಿ ಚಪ್ಪಲಿಯನ್ನೂ ಮತ್ತೊಂದು ಕಾಲಿಗೆ ನಮ್ಮ ತಂದೆಯವರ ಚಪ್ಪಲಿಯನ್ನೂ ಧರಿಸಿಕೊಂಡು ಹೋದರು. ನಮ್ಮ ತಂದೆ ಮನೆಗೆ ಬಂದಾಗ ಬಾಗಿಲು ತೆರೆದ ನಾನು “ಇದೇನು ಒಂದೊಂದು ಕಾಲಿಗೆ ಒಂದೊಂದು ತರಹ ಚಪ್ಪಲಿ” ಎಂದು ಕೇಳಿದೆ.
“ಪಾಪ, ಹವಾಯಿ ಚಪ್ಪಲಿ ರಾಜರತ್ನಂ ಅವರದ್ದು. ಇಳಿಯುವ ಗಡಿಬಿಡಿಯಲ್ಲಿ ನೋಡಿಲ್ಲ” ಎಂದರು ನಮ್ಮ ತಂದೆ.
ಆ ಒಂಟಿಚಪ್ಪಲಿಯನ್ನು ಒಂದು ಪ್ರತ್ಯೇಕವಾಗಿ ಒಂದು ಕವರ್ ನಲ್ಲಿ ಇರಿಸಿದ ನಮ್ಮ ತಂದೆ ಮಲ್ಲೇಶ್ವರದ ಕಡೆ ಹೋದಾಗ ಅವರಿಗೆ ತಲುಪಿಸಿದರು. ರಾಜರತ್ನಂ ಅವರಂತೂ ಚಪ್ಪಲಿಯನ್ನು ಕೊರಿಯರ್ ನಲ್ಲಿ ಕಳುಹಿಸುವ ರೀತಿ ಪ್ಯಾಕ್ ಮಾಡಿ ಅದರ ಮೇಲೆ “ಇದು ಮಲ್ಲಿಗೆ ಕವಿಯದ್ದು” ಎಂದು ಷರಾ ಬರೆದಿದ್ದರು.
ಚಪ್ಪಲಿಗಳ ವಿನಿಮಯವಾದ ಮೇಲೆ ರಾಜರತ್ನಂ “ನರಸಿಂಹಸ್ವಾಮಿಗಳೆ ಇದಕ್ಕೆ ಇಷ್ಟೊಂದು ಅವಸರ ಅಗತ್ಯವಿತ್ತೇ” ಎಂದು ನಕ್ಕರಂತೆ.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=29325
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು )
ಸ್ವಾರಸ್ಯಕರವಾಗಿದೆ
ಧನ್ಯವಾದ
ಈ ಪ್ರಸಂಗ ಓದಿದಾಗ ನನಗೆ ನಮ್ಮ ಮಾವನವರು ಒಂದು ಕಾಲಿಗೆ ಒಂದೂಂದು ಬಣ್ಣ ಬಣ್ಣದ ಹವಾಯಿ ಚಪ್ಪಲಿ ಮೆಟ್ಟೀಕೊಂಡು ಇಡೀ ಕೆ.ಆರ್.ಎಸ್. ಸಂತೇಲಿ ಓಡಾಡಿ ಮನೆಗೆ ಬಂದು ನಮ್ಮೆಲ್ಲರ ಆತಂಕಕ್ಕೆ ಗುರಿಯಾಗಿದ್ದ ನೆನಪು ಮರುಕಳಿಸಿತು ಸಾರ್.ಚಂದದ ನೆನಪು ಬರವಣಿಗೆ.ಅಭಿನಂದನೆಗಳು ಸಾರ್.
Nice. ಕೆ. ಎಸ್ ನ ಜೊತೆ ಮೂಡಿ ಬರುತ್ತಿರುವ ಉಳಿದ ಕವಿ ದಿಗ್ಗಜರ ಪರಿಚಯವೂ ಲೇಖನ ದ ಅಂದವನ್ನು ಹೆಚ್ಚಿಸುವಂತಿದೆ
ಎಲ್ಲಾ ಸಾಹಿತ್ಯ ರತ್ನಗಳ ಬಗ್ಗೆ ತಿಳಿದುಕೊಳ್ಳುವ ಸದವಕಾಶ ನಮ್ಮದು..ಧನ್ಯವಾದಗಳು ಸರ್.