ಬಾಂಧವ್ಯ…ಮನಸಿನ ಕಾವ್ಯ
ಚುಮುಚುಮು ಮುಂಜಾನೆ, ಏಳುವಾಗಲೇ ಜಿಟಿಜಿಟಿ ಹನಿಯುತ್ತಿದ್ದ ಮಳೆ, ಆದರೂ ಈ ಮುಂಜಾವಿನಲ್ಲಿ ಒಂದು ರಮಣೀಯ ಸೊಬಗು. ಎದ್ದು, ಹಲ್ಲು ಉಜ್ಜಿ, ಬಚ್ಚಲ ಒಲೆಗೆ ಉರಿ ಹಾಕಿ, ನಿತ್ಯದ ಯೋಗಾಸನ, ಪ್ರಾಣಾಯಾಮ ಮುಗಿಸಿ ಒಲೆ ಉರಿಸಿ (ಬೆಳಕಿನ ಗಂಜಿ ಊಟದ ತಯಾರಿ), ಅನ್ನಕ್ಕಿಟ್ಟು ಹಟ್ಟಿ ಕಡೆಗೆ ಹೊರಟೆ ದನದ ಹಾಲು ಹಿಂಡಲು. ಹಟ್ಟಿಯ ಬಾಗಿಲಲ್ಲಿ ನಿಂತು ನೋಡುತ್ತೇನೆ ಕರು (ಗಂಡುಕರು) ಹಗ್ಗವನ್ನು ಬಿಚ್ಚಿಕೊಂಡು (ಅವನೇ ಸ್ವತಃ ಹಾಕಿದ ಉರುಳನ್ನು ಕಚ್ಚಿ ಎಳೆದು ಬಿಚ್ಚಿಕೊಂಡಿದ್ದ) ಬದಿಗೆ ಇರಿಸಿದ್ದ ಹಸಿಹುಲ್ಲು, ಒಣಹುಲ್ಲು ಎಲ್ಲವನ್ನೂ ಬೇಕಾಬಿಟ್ಟಿ ಎಳೆದು ಹಾಕಿ ಅದರ ಮೇಲೆ ಗಂಜಲ ಸೆಗಣಿ ಹಾಕಿ ನೋಡುತ್ತಾ ನಿಂತಿದ್ದ. ಬೆಳಗ್ಗೆಯೇ ಅಲ್ಲಿನ ಅವ್ಯವಸ್ಥೆಯ ಆಗರ ಕಂಡು ಸಿಟ್ಟು ನೆತ್ತಿಗೇರಿತು. ಅದೇ ಸಿಟ್ಟಿನಲ್ಲಿ ಎರಡೇಟು ಹಾಕಿದೆ ಅವನಿಗೆ ಬರೀ ಕೈಯಲ್ಲಿ. ಯಾವಾಗಲೂ ಹಾಲು ಹಿಂಡಿ ಆದ ನಂತರ ಅವನ ಅಮ್ಮನ ಪಕ್ಕ ಕಟ್ಟಿ ಬರುವುದು. ಆದರೆ ಆ ದಿನ ಅಮ್ಮನ ಬಳಿ ಕಟ್ಟಲಿಲ್ಲ. ದೂರ ಅವನ ಜಾಗದಲ್ಲೇ ಕಟ್ಟಿ ಬಂದೆ. ಎಂಟು ಗಂಟೆ ಹೊತ್ತಿಗೆ ಯಜಮಾನರು ದನವನ್ನು ಹಾಗೂ ಕರುವನ್ನು ಯಾವಾಗಲೂ ನಮ್ಮ ಕಾಂಪೌಂಡ್ ಒಳಗೆ ಖಾಲಿ ಜಾಗದಲ್ಲಿ ಕಾಲು ಆಡಲಿ ಅಂತ ಕಟ್ಟಿ ಬರುವುದು ಅಭ್ಯಾಸ. ಹಾಗೆಯೇ ಆ ದಿನವೂ ಕಟ್ಟಲು ಹೋದಾಗ ಅಮ್ಮ ಮಗ ಇಬ್ಬರೂ ಸಿಟ್ಟಿನಲ್ಲಿದ್ದರಂತೆ ಯಾವಾಗಿನ ಆಟ ಹುಡುಗಾಟಗಳನ್ನು ಆಡದೆ ಸಿಟ್ಟಿನಿಂದ ಬುಸುಗುಟ್ಟುತಿದ್ದುದನ್ನು ಕಂಡು ಯಜಮಾನರು ಏನಾಯಿತೆಂದು ವಿಚಾರಿಸಿದರು. ನಾನು ನಡೆದ ಘಟನೆಯನ್ನು ಹೇಳಿದೆ.
ಮರುದಿನ ಎಲ್ಲವೂ ಎಂದಿನಂತೆಯೇ ಸಹಜವಾಗಿತ್ತು. ಹಾಲು ಕರೆದು ಆದ ನಂತರ ಅಮ್ಮ ಮಗ ಇಬ್ಬರನ್ನು ಜೊತೆಗೆ ಬಿಟ್ಟು ಬಂದಿದ್ದೇ. ಅಂದೇಕೋ ನಾನು ಅವರಿಬ್ಬರ ಒಡನಾಟವನ್ನು ತುಸು ಹೆಚ್ಚೇ ಗಮನ ಕೊಟ್ಟು ನೋಡಿದೆ. ಆಹಾ….. ಎಂತಹ ಸುಂದರ ದೃಶ್ಯ. ಪ್ರಕೃತಿಯ ಮಡಿಲಲ್ಲಿ ಅದೆಷ್ಟೊಂದು ಕೌತುಕಗಳು ಅಡಗಿದೆ ಅನ್ನಿಸಿತು ಆ ಕ್ಷಣ. ಅಮ್ಮ ಕರುವಿನ ಕಿವಿ ನೆಕ್ಕುವುದು, ಮೈಯನ್ನು, ತಲೆಯನ್ನು ನಾಲಿಗೆಯಲ್ಲಿ ನೇವರಿಸುವುದು ಮಾಡುತ್ತಿದ್ದಳು. ಆ ಅಮ್ಮ -ಮಗನ ಪ್ರೀತಿ ವಾತ್ಸಲ್ಯವನ್ನು ವಿವರಿಸಲು ಪದಗಳು ಸಾಲದಾಗಿದೆ. ಅಮ್ಮ ಕರುವಿನ ಮೈಯನ್ನು ತಲೆಯನ್ನು ನಾಲಿಗೆಯಲ್ಲಿ ನೇವರಿಸುವುದು ಮಾಡುತ್ತಿದ್ದಳು. ಆ ಮಗನ ತುಂಟಾಟಗಳು ಏನೂ ಕಮ್ಮಿ ಇರಲಿಲ್ಲ. ಅಮ್ಮನ ಹಿಂದೆ ಮುಂದೆ ಕಿವಿ ನಿಮಿರಿಸಿ ಜಿಗಿದಾಡುತ್ತಿದ್ದ. ಎಷ್ಟು ಅದ್ಭುತ ದೃಶ್ಯ…. ಬಹುಶಃ ದಿನವೂ ಅವರಿಬ್ಬರ ನಡುವೆ ಇದೇ ಆಟ, ಮಮತೆ, ಪ್ರೀತಿ, ಮಾತೃ ಪ್ರೇಮ, ವಾತ್ಸಲ್ಯ ನಡೆದಿರುತ್ತಿತ್ತು.
ನಾವು ಇಷ್ಟೊಂದು ತಿಳಿವಳಿಕೆ ಇರುವ ಮನುಷ್ಯರು ಎಷ್ಟೊಂದು ದುರಾದೃಷ್ಟವಂತರು. ಇಂತಹ ಅಮೂಲ್ಯ ಪ್ರೀತಿ ವಾತ್ಸಲ್ಯಗಳನ್ನು ಮನಸ್ಸು ಬಿಚ್ಚಿ ಹಂಚಿಕೊಳ್ಳುವ ಅವಕಾಶವಿದ್ದರೂ ಬಿಗುಮಾನ, ದರ್ಪ ಎಂಬ ಅಂಧಕಾರ ತುಂಬಿದ ಸೋಗು ಹಾಕಿಯೇ ಬದುಕನ್ನು ವ್ಯರ್ಥವಾಗಿ ಕಳೆಯುತ್ತೇವೆ. ನಮ್ಮ ಸುತ್ತಲೂ ನಾವೇ ಪ್ರತಿಷ್ಠೆ ಅಂತಸ್ತಿನ ಬೇಲಿ ಹಾಕಿ ಕುಳಿತು ಬಿಡುತ್ತೇವೆ. ಇವೆಲ್ಲವೂ ಏತಕ್ಕಾಗಿ, ಯಾವ ಸಾಧನೆಗಾಗಿ ಗೊತ್ತಿಲ್ಲ. ನಾವೆಲ್ಲರೂ ಬಹಳ ಬುದ್ಧಿವಂತರು ಆದರೂ….. ಬದುಕು ಅನಿಶ್ಚಿತ ಅನ್ನುವ ಸತ್ಯವನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಎಲ್ಲರೊಡನೆ ಕಾದಾಟ, ಹೊಡೆದಾಟ, ಹಣ, ಆಸ್ತಿ, ಅಂತಸ್ತನ್ನು ಮತ್ತೆ ಮತ್ತೆ ಬಾಚಿ ಬಾಚಿ ರಾಶಿ ಹಾಕಿಕೊಳ್ಳುತ್ತೇವೆ.ಇವೆಲ್ಲದರ ನಡುವೆ ಕಳೆದುಕೊಳ್ಳುವುದು ಏನನ್ನು…. ಮಾನಸಿಕ ನೆಮ್ಮದಿಯನ್ನು. ಸಂಪತ್ತು ಎಷ್ಟಿದ್ದರೂ ಅದು ನೆಮ್ಮದಿಯನ್ನು ಕೊಡದು. ಇರುವುದನ್ನು ಇನ್ನೊಬ್ಬರಿಗೆ ಹಂಚಿ ತಾನು ತಿಂದಾಗ ಅಲ್ಲಿ ನಿಜವಾದ ನೆಮ್ಮದಿ ನೆಲೆಸುತ್ತದೆ. ಪರಸ್ಪರ ಸೌಹಾರ್ದತೆ ಬೆಳೆಯುತ್ತದೆ.
– ನಯನ ಬಜಕೂಡ್ಲು
ಚೆನ್ನಾಗಿದೆ
ಧನ್ಯವಾದಗಳು
ಖಂಡಿತ ನಿಜ, ಬದುಕು ಪ್ರೀತಿಯ ಸ್ಪರ್ಶದಲ್ಲೇ ಅರಳುವುದು… ಸೊಗಸಾದ ಲೇಖನ…
ಮೇಡಂ ಜಿ
ಚಂದದಬರಹ . .ನಯನ
Thank you madam
ಮುಗ್ಧ ಮನಸ್ಸಿನ ಅಭಿವ್ಯಕ್ತಿ..ಇಷ್ಟವಾಯಿತು
ಧನ್ಯವಾದಗಳು ಹೇಮಕ್ಕ
ಬಾಂಧವ್ಯವೆಂಬುದು ಮನದಾಳದ ಮಮತೆಯ ಸೇತು..ಅದು ಯಾವುದೇ ಜೀವಿ ಇರಲಿ.ಮನೆಯ ಪಕ್ಕದಲ್ಲಿ ಗೂಡಿಕಟ್ಟಿ, ಮರಿ ಇಡುವಷ್ಟೂ ಕಾಲ ಆ ಪುಟ್ಟ ಕುಟುಂಬದ ಬಾಂಧವ್ಯ ಬೆಸೆದು; ಗೂಡು ಖಾಲಿಯಾದಾಗ ಮನಸ್ಸಿಗೆ ನೋವು ಸಹಜ. ಹಾಗೆಯೇ ಇನ್ನೆಷ್ಟೋ…
ನಯನ ಮೇಡಂ, ತಮ್ಮ ಸಹಜ ಸುಂದರ ಬರಹದಲ್ಲಿ ಈ ಬಾಂಧವ್ಯದ ಸವಿಯನ್ನು ಉಣಿಸಿದ್ದಾರೆ..ಧನ್ಯವಾದಗಳು.