ಒಲವ ತೇರು
ಒಲವ ತೇರನು ಏರಿ ಹಾಡುವ
ಚೆಲುವ ಬಾಳಿನ ರಾಗವ
ಅಲರು ಕಂಪಿನ ವನದಿ ಕೇಳುವ
ಉಲಿವ ಕೊಗಿಲೆ ಗಾನವ||
ಮಧುರ ಕಾವ್ಯಕೆ ನವಿಲ ನರ್ತನ
ಮುದವು ಮೊಗೆವ ಸಿಂಚನ
ಹೃದಯ ಬೆಸೆದ ಪ್ರೇಮ ಮಿಲನ
ಪದಪು ಜಿನುಗಿದ ಸೇಚನ||
ಕನಸು ಕಾಣುತ ಬಾಳಪಯಣವ
ಮನವ ಸೇರಿಸಿ ನಡೆಯುವ
ಮುನಿಸು ತೋರದೆ ಗುರಿಯ ಸೇರುವ
ಮನಸು ಬೆಸೆಯುವ ಬಂಧವ||
ಭಾವಯಾನದಿ ತೇಲಿ ಸಾಗುವ
ಜೀವನೌಕೆಯ ನೇರುವ
ನೋವು ನಲಿವಿನ ಪ್ರೇಮಬಂಧವ
ಹೂವಿನಂದದಿ ಬೆಸೆಯುವ||
-ಪದ್ಮಾ ಆಚಾರ್ಯ, ಪುತ್ತೂರು
ಒಲವ ತೇರು, ಸಾಗಿದ ಪರಿ ಸೊಗಸಾಗಿದೆ.
ಭಾವಯಾನದಿ ಜೀವನ ನೌಕೆಯು ತೇಲಿ ಸಾಗುವ ಪರಿ ತುಂಬಾ ಸೊಗಸಾಗಿದೆ. ಚಂದದ ಕವನ..ಅಭಿನಂದನೆಗಳು ಪದ್ಮಾ ಮೇಡಂ.