ಪುಸ್ತಕ ಪರಿಚಯ: ‘ವಿಜ್ಞಾನ ಪಥ’

Share Button


ದೈನಂದಿನ ಜೀವನದಲ್ಲಿ ನಾವು ಹಾಡೊಂದನ್ನು ಗುನುಗುತ್ತೇವೆ, ರೇಡಿಯೋ, ಟಿ ವಿ ಎಂದೆಲ್ಲ ಮಾತುಗಳನ್ನು ಕೇಳುತ್ತೇವೆ, ಸೀರಿಯಲ್, ಸಿನೆಮಾ ಹೀಗೆ ಮಾತುಗಳನ್ನು ಹಾವಭಾವ ಸಹಿತ ನೋಡುತ್ತೇವೆ. ಚಿತ್ರಕಲೆ, ಸಂಗೀತ, ನೃತ್ಯ ಎಂದೆಲ್ಲ, ಒಟ್ಟಾರೆ ಹೇಳುವುದಿದ್ದರೆ ಸಂಸ್ಕೃತಿ, ಸಾಹಿತ್ಯ, ಕಲೆ ಇತ್ಯಾದಿ ಭಾಷೆಯ ಮೂಲಕ ಸಂವಹನವನ್ನೂ ಮುಖ್ಯವಾಗಿ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ವಿಷಯ ವಿಚಾರಗಳನ್ನು, ಚರ್ಚೆಗಳನ್ನು, ಜೀವನದ ಸಂದಿಗ್ಧಗಳು, ಅವುಗಳಿಗೆ ಉತ್ತರ ಕಂಡುಕೊಳ್ಳುವ ಕತೆಗಳನ್ನು, ಕನಸು ಕನವರಿಕೆಗಳನ್ನು ತಾತ್ವಿಕವಾಗಿ ಒಂದು ನೆಲೆಗೆ ತಂದುಕೊಳ್ಳಲು ಹಪಹಪಿಸುವ ಕವಿತೆಗಳನ್ನು, ಸಂಭಾಷಣೆ, ಕಾಸ್ಟ್ಯೂಮ್, ವೇಷಭೂಷಣ ಎಂದೆಲ್ಲ ಆಸ್ವಾದಿಸುತ್ತಿರುತ್ತೇವೆ. ಇವೆಲ್ಲದರ ಜೊತೆಗೆ ನಮ್ಮ ‘ದೈನಿಕ’, ಮಿಕ್ಸಿಯಲ್ಲಿ ಹಿಟ್ಟು ರುಬ್ಬುವುದು, ಫ಼್ರಿಜ್ಜಿನಲ್ಲಿ ತರಕಾರಿ ಇಡುವುದರಿಂದ ಹಿಡಿದು ಬೈಕು, ಕಾರು, ಬಸ್ಸು ಎಂದೆಲ್ಲ ಕಚೇರಿಗೆ ದೌಡಾಯಿಸಿ ಫ಼್ಯಾನು ಎಸಿ ರೂಮ್ ಗಳಲ್ಲಿ ಕುಳಿತು ಕಂಪ್ಯೂಟರ್ ಮುಂದೆ ಕೆಲಸ ಮಾಡುವುದು, ಇವೆಲ್ಲ ಅತಿ ಸಹಜವೇನೋ ಎಂಬಂತೆ ನಡೆಯುತ್ತಿರುತ್ತವೆ.

ಈ ಸಲಕರಣೆಗಳ ಹಿಂದಿನ ಪರಿಶ್ರಮವನ್ನು, ಇವುಗಳನ್ನು ಕಂಡುಹುಡುಕಲು ಕಾರಣರಾದ ವಿಜ್ಞಾನಿಗಳನ್ನು, ಅವರ ಸಿದ್ಧಾಂತಗಳನ್ನು, ಅವರು ಲ್ಯಾಬ್, ಪ್ರಯೋಗ, ಪರೀಕ್ಷೆ ಎಂದು ಕಳೆದಿರಬಹುದಾದ ಸಂಭವನೀಯತೆಯನ್ನು ನಾವು ಯೋಚಿಸಿ ಕೂಡ ಇರುವುದಿಲ್ಲ. ಇದಕ್ಕೆ ಕಾರಣ ದೈನಂದಿನ ಜೀವನದಲ್ಲಿ ವಿಜ್ಞಾನ ಜನಪ್ರಿಯವಾಗಿ ಇರದೆ ಇರುವುದು.ಡಾರ್ವಿನ್, ನ್ಯೂಟನ್ ಹೀಗೆ ಕೆಲವು ವಿಜ್ಞಾನಿಗಳನ್ನು ಹೊರತು ಪಡಿಸಿದರೆ ನಮಗೆ ವಿಜ್ಞಾನಿಗಳ ಬಗ್ಗೆ ಅರಿವಿರುವುದು ಕಡಿಮೆ. ಮಹಾತ್ಮಾ ಗಾಂಧಿ, ಅಂಬೇಡ್ಕರ್, ರಾಮಕೃಷ್ಣ, ಪೈಗಂಬರ್, ಜೀಸಸ್ ಎಂದೆಲ್ಲ ಮಹನೀಯರ ಬಗ್ಗೆ ಪುಸ್ತಕಗಳು ಹಳ್ಳಿ ಮನೆಗಳಲ್ಲಿ ಕೂಡ ಇರುತ್ತವೆ. ಅದೇ ವಿಜ್ಞಾನಿಗಳ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ಇರುವುದು ಕಡಿಮೆ.

ಈ ನಿಟ್ಟಿನಲ್ಲಿ ಡಾ.ಬಡೆಕ್ಕಿಲ ಶ್ರೀಧರ ಭಟ್ ಅವರ ‘ವಿಜ್ಞಾನ ಪಥ’ ಕೃತಿ ಒಂದು ವಿಶಿಷ್ಟ ಪ್ರಯತ್ನ. ವಿಜ್ಞಾನವನ್ನು ಸರಳವಾಗಿ, ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯಬೇಕಾಗಿರುವುದು ಈಗಿನ ಅಗತ್ಯ. ನಾವು ಈಗ ಬದುಕುತ್ತಿರುವ ‘ಹೈಪರ್ ರಿಯಲ್’, ಪೋಸ್ಟ್ ಮಾಡರ್ನ್’ ಬದುಕನ್ನು ಸರಿಯಾಗಿ ಪರಿಭಾವಿಸಲು, ಜಾಗತಿಕವಾಗಿ ಉಳಿದ ದೇಶಗಳೊಂದಿಗೆ ಸ್ಪರ್ಧಿಸುತ್ತಲೇ ದೇಶೀಯತೆಯನ್ನು ಉಳಿಸಿಕೊಳ್ಳಲು ಒಂದು ರೀತಿಯ ವೈಜ್ಞಾನಿಕ ಮನೋಭಾವ ಅಗತ್ಯವಿದೆ. ಹಾಗೆ ನೋಡುವುದಿದ್ದರೆ ಪ್ರಜಾಪ್ರಭುತ್ವದ ಉಗಮಕ್ಕೆ ಡಾರ್ವಿನ್ ನ ವಿಕಾಸ ವಾದದ ನಂತರದ ವೈಚಾರಿಕ ಚಿಂತನೆಯೇ ಕಾರಣವಾಗಿತ್ತು . ವಿಜ್ಞಾನದಲ್ಲಿ ಪ್ರಮುಖವಾಗಿರುವ ಸತ್ಯಾನ್ವೇಷಣೆ, ತಾರ್ಕಿಕತೆ, ಪ್ರಯೋಗಗಳನ್ನು ನಡೆಸುವಾಗಿನ ನಿರಂತರ ಪ್ರಯತ್ನ, ಸಹನಶೀಲತೆ ಇವೆಲ್ಲ ನಮಗೆ ಪ್ರೇರಣೆಯಾಗಬೇಕು. ವಿಜ್ಞಾನದಿಂದಾಗಿಯೇ ನಮ್ಮ ಜೀವನ ಸರಳವಾಗಿದೆ, ಸುಖಕರವಾಗಿದೆ, ಅದ್ಭುತವೂ ಆಗಿದೆ.

ವೈಜ್ಞಾನಿಕ ಸಿನೆಮಾಗಳಲ್ಲಿ ಕಂಡು ಬರುವ ‘ಥ್ರಿಲ್’ ಬೇರೆ, ವಿಜ್ಞಾನದ ಸೋಜಿಗ, ಸಂವೇದನೆಗಳನ್ನು ತಮ್ಮ ತಪಸ್ಸಿನಿಂದ ಕಂಡು ಹಿಡಿದ, ‘ಹೊಸಪಥ ದರ್ಶನದ’ ಹರಿಕಾರರ ಜೀವನದ ಹೊಳಹುಗಳೇ ಬೇರೆ. ವಿಜ್ಞಾನದ ಆವಿಷ್ಕಾರಗಳ ನೈತಿಕ ಮಿತಿಗಳು, ರಾಜಕೀಯವಾಗಿ ಅವುಗಳನ್ನು ಬಳಸಿಕೊಳ್ಳುವಿಕೆ, ಇವೆಲ್ಲವನ್ನೂ ಮೀರಿದ್ದು ವಿಜ್ಞಾನದ ಶುದ್ಧತೆ.  ವಿಜ್ಞಾನಿಗಳು, ಅವರ ಸಾಧನೆ, ಶ್ರಮದಿಂದಲೇ ನಾವಿಂದು ಸುಖವಾಗಿ ಬಾಳುತಿದ್ದೇವೆ. ಅದೂ ಅಲ್ಲದೆ ವಿಜ್ಞಾನವೆನ್ನುವುದು ದೇಶ ಕಾಲಾತೀತವಾಗಿದ್ದು ಅವರ ಸಂಶೋಧನೆಗಳ ಪ್ರಯೋಜನವನ್ನು ಇಡೀ ಮನುಕುಲವೇ ಪಡೆಯುತ್ತದೆ. ಹೀಗಾಗಿಯೇ ಲೇಖಕರ ಅಭಿಪ್ರಾಯದಂತೆ ಅವರು ವಿಶ್ವ ಮಾನವರು. ಮೊದಲೇ ಹೇಳಿದಂತೆ ಡಾ.ಶ್ರೀಧರ ಭಟ್ ಅವರ ಸಂಶೋಧನಾ ಪ್ರಜ್ಞೆ, ಜೀವನಾನುಭವ, ರಾಜಕೀಯ, ಧಾರ್ಮಿಕ ವಿಷಯಗಳ ಅವಗಾಹನೆ, ಅವರ ಜೀವನ ದೃಷ್ಟಿ ಇವೆಲ್ಲವೂ ಈ ಲೇಖನಗಳಲ್ಲಿ ಆಗಿಂದಾಗ ಕಂಡು ಬರುತ್ತವೆ.

‘ತರಂಗ’ ವಾರ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ಪ್ರಕಟವಾಗುತಿದ್ದ ತಮ್ಮ ಲೇಖನಗಳನ್ನು ಎರಡು ಸಂಪುಟಗಳಲ್ಲಿ ಅವರು ನೀಡಿದ್ದಾರೆ. ಸ್ವತ: ರಸಾಯನ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ. ಶ್ರೀಧರ ಭಟ್ ಅವರ ತಿಳುವಳಿಕೆ, ಅದನ್ನು ಸರಳವಾಗಿ ವಿವರಿಸುವ ಕಲೆ ಈ ಬರಹಗಳಲ್ಲಿ ಮೇಲ್ನೋಟಕ್ಕೆ ಕಂಡುಬರುವ ಅಂಶ. ಮಾಹಿತಿಗಳನ್ನು ಕನ್ನಡದ ‘ನೇಟಿವಿಟಿ’ಗೆ ಒಗ್ಗುವಂತೆ ಬರೆದಿರುವುದೂ ಇನ್ನೊಂದು ವಿಶಿಷ್ಟತೆ.

ಮೊದಲ ಕೃತಿ ವೇದ ಕಾಲದಿಂದ ಹಿಡಿದು 19 ನೇ ಶತಮಾನದ ಕೊನೆಯ ವರೆಗಿನ ವಿಜ್ಞಾನಿಗಳ ಬಗ್ಗೆ ಇದೆ. ಎರಡನೆಯ ಕೃತಿ 20 ನೇ ಶತಮಾನದ ಆದಿಯಿಂದ ಹಿಡಿದು 21 ನೇ ಶತಮಾನದ ಸ್ಟೀಫನ್ ಹಾಕಿಂಗ್ ವರೆಗೆ ಇದೆ. ಈಜಿಪ್ಟಿನ ನಾಗರಿಕತೆ, ಮೆಸಪೊಟೋಪಿಯಾ ನಾಗರಿಕತೆ, ಭಾರತದ ಸಿಂಧೂ ನಾಗರಿಕತೆಗಳಲ್ಲಿ ವಿಜ್ಞಾನದ ಬೆಳವಣಿಗೆ ಆಗಿದ್ದು ಅರಿಸ್ಟಾಟಲ್, ಗೆಲಿಲಿಯೋ, ವೈದ್ಯ ಸುಶ್ರುತ, ಋಷಿ ಕಣಾದ, ಚರಕ ಮಹರ್ಷಿ, ಆರ್ಯಭಟ, ಭಾಸ್ಕರಾಚಾರ್ಯ, ಕೆಪ್ಲರ್, ಕೊಪರ್ನಿಕಸ್, ಎಂದೆಲ್ಲ ವಿಜ್ಞಾನವೂ ರೋಚಕ ಎಂದು ಈ ಕೃತಿಯನ್ನು ಓದುವಾಗ ಅರಿವಾಗುತ್ತದೆ.

ಪ್ರಾಚೀನ ಕಾಲದಿಂದ ‘ಜ್ಞಾನೋದಯ ಯುಗ’, ಕೈಗಾರಿಕಾ ಕ್ರಾಂತಿ, ತದ ನಂತರದ ಕೃಷಿ ಸಂಸ್ಕೃತಿಯ ಪಲ್ಲಟ ಇವೆಲ್ಲಕ್ಕೆ ವೈಜ್ಞಾನಿಕ ಕ್ರಾಂತಿಯೇ ಕಾರಣ ಎಂದು ಲೇಖಕರು ಸರಿಯಾಗಿಯೇ ಗುರುತಿಸಿದ್ದಾರೆ. ಈ ಪುಸ್ತಕಕ್ಕೆ ಮುನ್ನುಡಿ ಬರೆದ ಡಾ.ಬಿ.ಸುರೇಂದ್ರ ರಾವ್ ಅವರ ಮಾತುಗಳು, ಡಾ.ಪಾದೇಕಲ್ ವಿಷ್ಣು ಭಟ್ ಅವರ ಅವಲೋಕನಗಳು ಕೃತಿಯ ಮೌಲಿಕತೆಯನ್ನು ಹೆಚ್ಚಿಸಿವೆ. ಲೇಖಕರು ಗಮನಿಸಿದಂತೆ ವಿಜ್ಞಾನದ ‘ಅನ್ವಯಿಕತೆ’ , ಉಪಯುಕ್ತತೆ, ಲಾಭಗಳನ್ನೇ ಪರಿಗಣಿಸುತ್ತ ವಿಜ್ಞಾನದ ಸೊಬಗು, ಅಚ್ಚರಿಯನ್ನು ಕಳೆದುಕೊಳ್ಳುತ್ತಿರುವ ವಿಷಯ ಗಂಭೀರವೇ ಆಗಿದೆ.

ಬಡೆಕ್ಕಿಲ ಶ್ರೀಧರ ಭಟ್ ಅವರು ಸ್ವತ: ಪಿ ಎಚ್ ಡಿ ಗಳಿಸಿದ ಸಂಶೋಧಕರಾಗಿರುವುದರಿಂದ ಅವರು ವಿಜ್ಞಾನ ಮತ್ತು ತತ್ವ ಶಾಸ್ತ್ರ ಎರಡೂ ಯಾವ ರೀತಿ ಸತ್ಯಾನ್ವೇಷಣೆಯ ಗುರಿ ಹೊಂದಿದೆ ಎಂದು ಚಾರಿತ್ರಿಕ ಆಯಾಮಗಳು, ವೇದೋಪನಿಷತ್ತುಗಳಿಂದ ಹಿಡಿದು ಆಧುನಿಕ ಜಗತ್ತಿನ ವಿಜ್ಞಾನಿಗಳು ವಿಶ್ವಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಚಿಂತಿಸಿ, ವಿಶ್ಲೇಷಿಸಿ ಬರೆದಿದ್ದಾರೆ. ವಿಜ್ಞಾನಿಗಳ ಬಗ್ಗೆ ಜನ ಸಾಮಾನ್ಯರಿಗೆ ಇರುವ ‘ಮಿಥ್’ಗಳನ್ನು ಒಡೆಯುವ ಕೆಲಸವೂ ಇಲ್ಲಿ ನಡೆದು ಅವರೂ ನಮ್ಮ ಹಾಗೆಯೇ ಸಂಸಾರ, ಮನೆ, ಮಕ್ಕಳು, ಸರಸ ವಿರಸ ಎಂದೆಲ್ಲ ಅವರ ಜೀವನ ಶೈಲಿಯನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿರುವುದು ಇಲ್ಲಿನ ಬರಹಗಳ ವೈಶಿಷ್ಟ್ಯ.

ಎರಡು ಸಂಚಿಕೆಗಳಾಗಿ ‘ವಿಜ್ಞಾನ ಪಥ’ ಮೂಡಿ ಬಂದಿದೆ. ಮೊದಲನೆಯ ಪುಸ್ತಕದಲ್ಲಿ 25 ಲೇಖನಗಳಿದ್ದು, ಎರಡನೆಯ ಸಂಚಿಕಯಲ್ಲೂ 25 ಲೇಖನಗಳಿವೆ. ಇನ್ನು ಈ ಲೇಖನಗಳಿಗೆ ಸಾಹಿತ್ಯಿಕ ಮೌಲ್ಯವೂ ಇದೆ. ಉದಾಹರಣೆಗೆ ಮೊತ್ತ ಮೊದಲನೆಯ ಲೇಖನದಲ್ಲಿ ‘ಸುಶ್ರುತ’ನ ಬಗ್ಗೆ ಒಂದು ನಾಟಕೀಯ ಘಟನೆಯನ್ನು ನಿರೂಪಿಸಿ, ಸುಶ್ರುತರ ಅದ್ಭುತ ಶಸ್ತ್ರಚಿಕಿತ್ಸಾ ವಿಧಾನವನ್ನು, ವೈದ್ಯಗುರುವಾಗಿ ಅವರ ಕೊಡುಗೆಯನ್ನು ,ಅಂತೆಯೇ ಅವರ ಪುಸ್ತಕ ಅರೆಬಿಕ್ ಭಾಷೆಗೆ ‘ಕಿತಾಬ್- ಎ- ಸುಶ್ರುತ’ ಎಂಬ ಹೆಸರಿನಲ್ಲಿ ಕ್ರಿ. ಶ. 8 ನೇ ಶತಮಾನದಲ್ಲಿ ಅನುವಾದವಾದುದನ್ನು ನಮ್ಮ ದೇಶದ ಬಗ್ಗೆ ಹೆಮ್ಮೆ ಬರುವಂತೆ ವಿವರಿಸುತ್ತಾರೆ. ಈ ಎಲ್ಲ ಲೇಖನಗಳು ಒಂದು ಕಥನದ ಶೈಲಿಯಲ್ಲಿ ರಸವತ್ತಾಗಿದ್ದು ವಿಶಿಷ್ಟವಾಗಿವೆ. ಚರಕ, ಅರಿಸ್ಟಾಟಲ್, ಆರ್ಕಿಮಿಡಿಸ್, ಆರ್ಯಭಟ ಹಾಗೂ ಇನ್ನಿತರ ಭಾರತೀಯ ವಿಜ್ಞಾನಿಗಳ ನಡುವೆ ಒಂದು ರೀತಿಯ ಸಮೀಕರಣ ಕಂಡುಕೊಳ್ಳುವ ಪ್ರಯತ್ನವೂ ಇಲ್ಲಿದೆ. ವಿಜ್ಞಾನಿಗಳ ಶ್ರೇಷ್ಠತೆಯನ್ನು ಮನದಟ್ಟಾಗಿಸಲು ಪುಟ್ಟ ಪುಟ್ಟ ಕತೆಗಳು, ಚರಿತ್ರೆಯ ಅಂಶಗಳು, ಭಾರತೀಯತೆಯ ಬಗ್ಗೆ ಅಭಿಮಾನ..ಹೀಗೆಲ್ಲ. ಖಗೋಳ ಶಾಸ್ತ್ರದ ವಿಸ್ಮಯಗಳು, ರಸ ವಿದ್ಯೆಯ ರೋಚಕತೆ, ನ್ಯೂಟನ್ ರ ಬುದ್ಧಿಮತ್ತೆ, ಡಾವಿಂಚಿಯ ಕಲೆ, ಸ್ವಾಧ್ಯಾಯಿ ಬೆಂಜನಿನ್ ಫ಼್ರಾಂಕ್ಲಿನ್, ಗಿಲೊಟಿನ್ ಗೆ ಬಲಿಯಾದ ಅಂಟೋನಿ ಲವಾಜಿಯೇ, ಹಲವು ಆಧುನಿಕ ಆವಿಷ್ಕಾರಗಳಿಗೆ ಮುನ್ನುಡಿ ಬರೆದ ಹಂಫ್ರಿ ಡೇವಿ, ಮೈಕೆಲ್ ಫ಼್ಯಾರಡೆ, ಚಾರ್ಲ್ಸ್ ಡಾರ್ವಿನ್, ಗ್ರೆಗೊರಿ ಮೆಂಡೆಲ್, ಕೊನೆಯದಾಗಿ ಡೈನಮೈಟ್ ನ ಜನಕ, ಅಲ್ಫ್ರೆಡ್ ನೊಬೆಲ್ ಅವರೊಂದಿಗೆ ಮೊದಲನೆಯ ಕೃತಿ ಮುಗಿಯುತ್ತದೆ.

‘ವಿಜ್ಞಾನ ಪಥ’ದ ಎರಡನೆಯ ಸಂಚಿಕೆಯಲ್ಲಿರುವ ವಿಜ್ಞಾನಿಗಳ ಹೆಸರುಗಳು ನಮಗೆಲ್ಲ ಬಹುತೇಕ ಪರಿಚಿತವಾದವವುಗಳು. ‘ಆವರ್ತನ ಪಟ್ಟಿ’ ರಚಿಸಿದ ಮೆಂಡಲೀಫ಼್, ಎಕ್ಸ್ ರೇ ಕಂಡುಹುಡುಕಿದ ರೋನ್ಟ್ಜನ್, ಮನುಕುಲಕ್ಕೆ ವಿದ್ಯುತ್ತಿನ ಬೆಳಕು ನೀಡಿದ ಥಾಮಸ್ ಆಲ್ವಾ ಎಡಿಸನ್, ಟೆಲಿಫೋನ್ ನ ದನಿಗೆ ಕಿವಿಯಾಗಲು ಅನುವು ಮಾಡಿಕೊಟ್ಟ ಗ್ರಹಾಂಬೆಲ್,.. ಹೀಗೆ. ಗ್ರಹಾಂ ಬೆಲ್ ಅವರ ಕನಸಿನ ಕೂಸು ‘ಫೋಟೋ ಫೋನ್’ ಆಗಿತ್ತೆಂಬ ಇಂಟರೆಸ್ಟಿಂಗ್ ವಿಚಾರವೂ ತಿಳಿಯಿತು. ಲೇಖಕರು ಹೇಳುವಂತೆ ‘ವಿಡಿಯೋ ಚಾಟಿಂಗ್’ ನಮ್ಮ ಅಂಗೈಯಲ್ಲೇ ಸ್ಮಾರ್ಟ್ ಫೋನಿನಲ್ಲಿ ನಾವು ಮಾಡುತ್ತಿಲ್ಲವೇ?

ಮ್ಯಾಕ್ಸ್ ಪ್ಲಾಂಕ್ ಅವರ ಕ್ವಾಂಟಂ ಥಿಯರಿ, ನಮ್ಮದೇ ದೇಶದ ಜಗದೀಶ್ ಚಂದ್ರ ಬೋಸ್, ಅಚಾರ್ಯ ಪ್ರಫ಼ುಲ್ಲ ಚಂದ್ರರು, ಬಾನಿನಲ್ಲಿ ಹಕ್ಕಿಯಂತೆ ಹಾರುವ ಕನಸಿಗೆ ರೆಕ್ಕೆ ಕೊಟ್ಟ ರೈಟ್ ಸಹೋದರರು, ಧೀಮಂತ ಮಹಿಳಾ ವಿಜ್ಞಾನಿ ಮೇರಿ ಕ್ಯೂರಿ, ಅರ್ನೆಸ್ಟ್ ರುಧರ್ ಫ಼ರ್ಡ್, ಮಾರ್ಕೋನಿ, ಅಲ್ಬರ್ಟ್ ಐನ್ ಸ್ಟೈನ್, ಜೀವ ಕೋಟಿಯನ್ನು ರಕ್ಷಿಸಿದ ಪೆನ್ಸಿಲಿನ್ ಜನಕ ಅಲೆಗ್ಸಾಂಡರ್ ಫ಼್ಲೆಮಿಂಗ್, ಶ್ರೀನಿವಾಸ ರಾಮಾನುಜಂ, ಸರ್ ಸಿ ವಿ ರಾಮನ್, ಈಗ ವ್ಯಾಪಕ ಚರ್ಚೆಯಲ್ಲಿರುವ ‘ದೇವ ಕಣ’ದ ಬಗ್ಗೆ ಸಂಶೋಧನಾ ಅಡಿಪಾಯ ಹಾಕಿದ ಸತ್ಯೇಂದ್ರ ನಾಥ್ ಬೋಸ್, ತಳಿ ಇಂಜಿನಿಯರಿಂಗ್ ಗೆ ತಳಹದಿ ಹಾಕಿದ ಹರ ಗೋವಿಂದ ಖೊರಾನ, ನಮ್ಮೆಲ್ಲರ ನೆಚ್ಚಿನ ರಾಷ್ರಪತಿಯಾಗಿದ್ದ ‘ಕ್ಷಿಪಣಿ ತಜ್ಞ’ ಎ ಪಿ ಜೆ ಅಬ್ದುಲ್ ಕಲಾಮ್, ವಿಜ್ಞಾನ ಕ್ಷೇತ್ರದ ದಂತ ಕತೆ ಸ್ಟೀಫನ್ ಹಾಕಿಂಗ್, ಹೀಗೆ ‘ವಿಜ್ಞಾನ ಪಥ’ದ ಎರಡನೆಯ ಪುಸ್ತಕ ನವ್ಯ ಹಾಗೂ ನವ್ಯೋತ್ತರ ಯುಗದ ಸಾಮಾಜಿಕ, ಸಾಂಸ್ಕೃತಿಕ ಆಗುಹೋಗುಗಳ ಬಗ್ಗೆ, ಎರಡು ಜಾಗತಿಕ ಮಹಾಯುದ್ಧಗಳ ಸಂದರ್ಭದಲ್ಲಿನ ಕ್ರೌರ್ಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ.

ಈ ಬರಹಗಳ ಹೆಚ್ಚುಗಾರಿಕೆ ಇರುವುದು ಇಲ್ಲಿ ಕಂಡುಬರುವ ಬರಹಗಳಲ್ಲಿನ ಆಳವಾದ ಅಧ್ಯಯನ, ಶ್ರದ್ಧೆ, ನಿಷ್ಠೆ ಹಾಗೂ ಚರಿತ್ರೆಯ ಹಿನ್ನೆಲೆಯಲ್ಲಿ ವಿಜ್ಞಾನಿಗಳ ಜೀವನವನ್ನು ಗ್ರಹಿಸಿದ ಬಗೆ. ವಿಜ್ಞಾನಿಗಳ ಗ್ಯಾಲಕ್ಸಿ ವಿಜ್ಞಾನಿಗಳ ಜೀವನವನ್ನು ಗ್ರಹಿಸಿದ ಬಗೆ. ವೇದ ಕಾಲದಿಂದ ಹರಿದು ಬಂದ ವಿಜ್ಞಾನ ಗಂಗೆಯನ್ನೇ, ವಿಜ್ಞಾನಿಗಳ ಗ್ಯಾಲಕ್ಸಿ ಅಥವಾ ‘ಕ್ಷೀರ ಪಥ’ ವನ್ನೇ, ‘ವಿಜ್ಞಾನ ಪಥ’ ನಮಗೆ ನೀಡುತ್ತದೆ. ಕನ್ನಡದ ವಿಜ್ಞಾನ ಲೇಖಕರುಗಳಾದ ನಾಗೇಶ್ ಹೆಗಡೆ, ರೋಹಿತ್ ಚಕ್ರತೀರ್ಥ, ಸಂತೋಷ್ ಕುಮಾರ್ ಮೆಹಂದಳೆ ಇವರ ಸಾಲಿನಲ್ಲಿ ಬಡೆಕ್ಕಿಲ ಶ್ರೀಧರ ಭಟ್ ಅವರ ಕೃತಿಗಳೂ ಇನ್ನಷ್ಟು ಕೊಡುಗೆ ನೀಡುವಂತಾಗಲಿ ಎಂದು ಹಾರೈಕೆ.

-ಜಯಶ್ರೀ ಬಿ ಕದ್ರಿ.

9 Responses

  1. Hema says:

    ಅಪರೂಪದ ವೈಜ್ಞಾನಿಕ ಮಾಹಿತಿಯುಳ್ಳ, ಚೆಂದದ ನಿರೂಪಣೆಯ ಪುಸ್ತಕಗಳಿವು. ಜಯಶ್ರೀ ಅವರ ಪುಸ್ತಕ ಪರಿಚಯ ಸೊಗಸಾಗಿದೆ. ಅಭಿನಂದನೆಗಳು.

  2. ಪುಸ್ತಕ, “ವಿಜ್ಞಾನ ಪಥ” ಎರಡೂ ಸಂಪುಟಗಳನ್ನು ಓದಿ, ಆಳವಾಗಿ ಪುಸ್ತಕದೊಳಗಿನ ಅಕ್ಷರ ಅಕ್ಷರಗಳನ್ನು ಸೂಕ್ಷ್ಮವಾಗಿ ಅವಲೋಕನ ಮಾಡಿ, ಪ್ರೌಢ ವಿಮರಶಾತ್ಮಕವಾಗಿ ಬರೆದ ಒಂದು ‘ ಪುಸ್ತಕ ಪರಿಚಯ ‘ ನೀಡಿದ ಡಾl ಜಯಶ್ರೀ ಅವರಿಗೆ ಲೇಖಕನ ಹೃತ್ಪೂರ್ವಕ ಧನ್ಯವಾದಗಳು.
    ಶ್ರೀಧರ ಭಟ್ ಬಡೆಕ್ಕಿಲ.

  3. .ಮಹೇಶ್ವರಿ.ಯು says:

    ಪುಸ್ತಕದ ಅವಲೋಕನವನ್ನು ಚೆನ್ನಾಗಿ ಮಾಡಿದ ಜಯಶ್ರೀಗೆ ಅಭಿನಂದನೆಗಳು.ಪುಸ್ತಕ ಓದಲು ಒಂದು ಪ್ರೇರಣೆ ಸಿಗುವಂತೆ ನಿರೂಪಣೆ ಇದೆ. ಇಂತಹ ಪುಸ್ತಕಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ಹೆತ್ತವರು/ ಹಿರಿಯರು ನೀಡಬೇಕು.ಅಧ್ಯಾಪಕರೂ ಈ ಬಗ್ಗೆ ಮಾಹಿತಿಯನ್ನು ಒದಗಿಸಬೇಕು.

  4. Thanks alot Maheshawari Madam.

  5. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ ಪುಸ್ತಕ ಪರಿಚಯ. ಪುಸ್ತಕದೊಳಗಿರುವ ವಿಚಾರಗಳ ಕುರಿತೊಂದು ಇಣುಕು ನೋಟ. ಇದು ಪುಸ್ತಕವನ್ನು ಖರೀದಿಸುವಲ್ಲಿ ಬಹಳ ಸಹಕಾರಿ.

  6. ASHA nooji says:

    ಸುಪರ್‍ ಜಯ .ಬರಹ

  7. ಶಂಕರಿ ಶರ್ಮ says:

    ವಿಜ್ಞಾನ ಪಥ ಪುಸ್ತಕಗಳ ಬಿಡುಗಡೆಗೆ ಮುನ್ನ ಪುತ್ತೂರು ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಪಾಂಚಜನ್ಯ ದಲ್ಲಿ ಪ್ರತೀ ಮಂಗಳವಾದಂದು ಸರ್ ಅವರ ಈ ವಿಜ್ಞಾನ ಲೇಖನಗಳ ವಾಚನವನ್ನು ತಪ್ಪದೆ ಕೇಳುವವಳು ನಾನು.. ಅಪರೂಪದ, ಅತ್ಯಂತ ಪ್ರೌಢ ವಿಜ್ಞಾನ ಲೇಖನಗಳಲ್ಲೊಂದಾದ ಈ ಕೃತಿಗಳ ಬಗೆಗಿನ ವಿಮರ್ಶಾತ್ಮಕ ಬರಹವು ಕೂಡಾ ಜಯಶ್ರೀಯವರಿಂದ ಅಮೋಘವಾಗಿ ಮೂಡಿಬಂದಿದೆ. ಸರ್ ಹಾಗೂ ಜಯಶ್ರೀಯವರಿಗೆ ಅಭಿನಂದನೆಗಳು.

  8. Savithri bhat says:

    ಜಯಶ್ರೀ ಅವರ ಪುಸ್ತಕ ವಿಮರ್ಶೆ ಬಹಳ ಚೆನ್ನಾಗಿ ಮೂಡಿ ಬಂದಿದೆ

Leave a Reply to Dr. B.Shridhara Bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: