ಪುಸ್ತಕ-ನೋಟ

ಕಾದಂಬರಿ ‘ಜುಗಾರಿ ಕ್ರಾಸ್’, ಲೇಖಕರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ.

Share Button

ಜುಗಾರಿ ಕ್ರಾಸ್:
ಜುಗಾರಿ ಎಂಬ ಪದಕ್ಕೆ ನಿಘಂಟಿನ ಅರ್ಥ ಜೂಜು ಎಂದು. ಒಂದು ಕಾಡಿನ ನಡುವೆ ರಾಜ್ಯದ ನಾಲ್ಕು ದಿಕ್ಕಿಗೆ ಹೋಗುವ ರಸ್ತೆಗಳು ಒಂದು ಚೌಕದಲ್ಲಿ ಕೂಡುತ್ತವೆ. ಇಲ್ಲಿ ಕಾಡಿನೊಳಗಿಂದ ಯಾರಾದರೂ ನಿರ್ಬಂಧಿತ ವಸ್ತುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಕದ್ದು ಸಾಗಿಸದಂತೆ ತಡೆಯಲು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಇರುವ ಜಾಗ. ಇದಕ್ಕೆ ಏನೋ ಕಾರಣದಿಂದ ಜುಗಾರಿ ಕ್ರಾಸ್ ಎಂಬ ಹೆಸರಿಟ್ಟಿದ್ದಾರೆ. ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಎಂದಮೇಲೆ ಇಲ್ಲಿ ದಿನ ಪೂರ್ತಿ ಕಾವಲಿರುವ ಫಾರೆಸ್ಟರ್ ಮತ್ತು ಒಬ್ಬ ಗಾರ್ಡ್ ಕೂಡ ನೇಮಕವಾಗಿದ್ದಾರೆ. ಇಲ್ಲಿ ಕೂಡುವ ಎಲ್ಲ ದಾರಿಗಳಿಗೂ ಅಡ್ಡಲಾಗಿ ಒಂದೊಂದು ಗಳುವನ್ನಿಟ್ಟು ಅದಕ್ಕೆ ಕೆಂಪು ಲಾಟೀನನ್ನು ತಗಲುಹಾಕಲಾಗಿದೆ. ಇದರ ಮೂಲಕ ಸಾಗಿ ಹೋಗುವ ಎಲ್ಲ ವಾಹನಗಳನ್ನೂ ನಿಯಂತ್ರಿಸುತ್ತಾರೆ. ಫಾರೆಸ್ಟರ್ ಇಕ್ಬಾಲ್ ಸಾಹೇಬರು ಈ ಚೆಕ್‌ಪೋಸ್ಟಿಗೆ ನಿಯೋಜಿಸಿಕೊಳ್ಳಲು ಸರ್ಕಾರದ ಇಲಾಖೆಯ ಮೇಲಧಿಕಾರಿಗಳಿಗೆ ಅರವತ್ತು ಸಾವಿರ ಕೊಟ್ಟಿದ್ದಾರೆ. ಅಂದಮೇಲೆ ಇಲ್ಲಿ ವರಮಾನ ಉತ್ಪತ್ತಿ ಮಾಡಿಕೊಳ್ಳಲು ಅವಕಾಶವಿರಲೇಬೇಕು. ಇವರೂ, ಗಾರ್ಡ್ ಗುರಪ್ಪನು ಚೆಕ್‌ಪೋಸ್ಟ್ ಮೂಲಕ ಹಾದುಹೋಗುವ ಗಾಡಿಗಳು, ವಾಹನಗಳನ್ನು ಚೆಕ್ ಮಾಡುತ್ತಾರೆ. ನಿರ್ಬಂಧಿತ ವಸ್ತುಗಳಿದ್ದರೆ ಅವನ್ನು ತಡೆದು ನಿಲ್ಲಿಸಲು ಇವರಿಗೆ ಅಧಿಕಾರವಿದೆ. ಏನೂ ಇಲ್ಲದಿದ್ದರೂ ಸರಿ ಕಟ್ಟಾರೋಫ್ ಹಾಕಿ ಅವರಿಂದ ನಾಲ್ಕಾರು ರೂಪಾಯಿಗಳನ್ನು ಪಡೆದೇ ಮುಂದಕ್ಕೆ ಬಿಡುತ್ತಿದ್ದರು. ಇದು ಪದ್ಧತಿಯೇ ಆಗಿತ್ತು. ಕೆಲವು ಖದೀಮರುಗಳು ತಿಂಗಳಿಗೆ ಇಂತಿಷ್ಟೆಂದು ಇವರಿಗೆ ಮಾಮೂಲಿ ಲಂಚಕೊಟ್ಟು ರಾಜಾರೋಷವಾಗಿ ಓಡಾಡುತ್ತಿದ್ದುದೂ ಉಂಟು. ಹೀಗೆ ಸಂಗ್ರಹಿಸಿದ ಲಂಚದ ಹಣದಲ್ಲಿ ಮೇಲಧಿಕಾರಿಗಳಿಗೂ ಪ್ರತಿತಿಂಗಳು ಒಂದು ಭಾಗ ತಲುಪುತ್ತಿತ್ತು. ಇದು ನಮ್ಮ ಸರ್ಕಾರದ ಇಲಾಖೆಯಲ್ಲಿ ಆಡಳಿತದ ಅಲಿಖಿತ ನಿಯಮ. ನಮ್ಮ ಭ್ರಷ್ಟ ವ್ಯವಸ್ಥೆಯ ಮಾದರಿ.

ಈ ಜುಗಾರಿಕ್ರಾಸ್ ಮುಖಾಂತರ ಸಾಗುವ ವೈವಿಧ್ಯಮಯ ಕಾಳದಂಧೆಕೋರರ ವೃತ್ತಿಗಳಿಂದ ಈ ಹೆಸರು ಬಂದಿರಬಹುದು. ಇವರೆಲ್ಲ ಒಂದೇ ತೆರನಾದವರಲ್ಲ. ಇಲ್ಲಿ ಗಂಧದಮರ, ಸಾಗುವಾನಿ ಸಾಗಿಸುವ ಕಾಡುಗಳ್ಳರು, ಮಾದಕ ವಸ್ತುಗಳನ್ನು ಸಾಗಿಸುವ ಖದೀಮರು, ಇಂತಹವರಿಂದ ಕಮೀಷನ್ ಪಡೆದು ವಸ್ತುಗಳನ್ನು ಗೊತ್ತಾದ ಕಡೆಗೆ ತಲುಪಿಸುವ ಏಜೆಂಟರುಗಳು, ಕೃಷಿ ಉತ್ಪನ್ನಗಳನ್ನು ಮಾರಿ ಊರಿಗೆ ಹಿಂದಿರುಗುವವರ ಜೇಬು ಕತ್ತರಿಸುವ ಪಿಕ್‌ಪಾಕೆಟರುಗಳು, ಹೊರನೋಟಕ್ಕೆ ಸಭ್ಯವ್ಯಕ್ತಿಗಳ ಪೋಸಿನಲ್ಲಿ ಕಳ್ಳನೋಟು ದಂಧೆಯವರು, ಇವರಿಗೆಲ್ಲ ಸಹಾಯಕರಾಗಿದ್ದು ಸಮಯ ಬಂದರೆ ಕೊಲೆಮಾಡಲೂ ಹೇಸದ ಗೂಂಡಾಗಳು, ಎಲ್ಲರೂ ಇದ್ದಾರೆ. ಇಂತಹವರ ನಡುವೆ ತಮ್ಮಷ್ಟಕ್ಕೆ ತಾವು ಬದುಕು ನಡೆಸುವ ಮುಗ್ಧರೂ ಇದ್ದಾರೆ. ಇವೆಲ್ಲ ಕಾಳದಂಧೆಗಳಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದು ಸಮೀಪದಲ್ಲೇ ಹರಿಯುತ್ತಿರುವ ದೋಣಿಹೊಳೆ ಮತ್ತದರ ಉಪನದಿಗಳ ಕೊಳ್ಳಗಳಲ್ಲೆಲ್ಲೋ ಸಿಗುತ್ತವೆ ಎನ್ನಲಾದ ಕೆಂಪುಕಲ್ಲುಗಳು. ಇವುಗಳಿಗೆ ರತ್ನದ ಬೆಲೆಯಿದೆ. ಇದನ್ನು ಶೋಧಿಸಿ ತಂದು ಸಾಣೆಹಿಡಿಸಿ ಅತ್ಯಂತ ದುಬಾರಿ ಬೆಲೆಗೆ ಮಾರುತ್ತಾರೆಂಬ ಸುದ್ಧಿಯೂ ಕೇಳಿಬರುತ್ತಿತ್ತು. ಹೀಗೆ ಶೋಧಿಸಲು ಹೋದವರಾರೂ ಹಿಂದಿರುಗಿಲ್ಲವಂತೆ. ಸಿಕ್ಕಿರುವ ಕೆಲವು ಹಳೆಯ ದಾಖಲೆಗಳಿಂದ ತಿಳಿದುಬಂದಿದ್ದು ಇಂಗ್ಲಿಷಿನವರ ಕಾಲದಿಂದಲೂ ಇಂತಹ ಹುಚ್ಚು ಹತ್ತಿಸಿಕೊಂಡು ಕೆಂಪು ಕಲ್ಲಿನ ಹಿಂದೆ ಹೋದವರಿದ್ದರಂತೆ. ಹೀಗಾಗಿ ಇಲ್ಲಿ ವೈವಿಧ್ಯಮಯ ಕಾಳದಂಧೆಗಳವರು ದಿಢೀರ್ ಶ್ರೀಮಂತರಾಗುವ ಆಸೆಯಿಂದ ಎಲ್ಲ ಕಡೆಗಳಲ್ಲೂ ತಮ್ಮ ಜಾಲವನ್ನು ಹರಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಒಬ್ಬ ಅಮಾಯಕ ರೈತ ಮತ್ತವನ ಹೆಂಡತಿ ತಾವು ಬೆಳೆದ ಅರವತ್ತು ಕೆ,ಜಿ. ಏಲಕ್ಕಿಯನ್ನು ಜುಗಾರಿಕ್ರಾಸಿನಿಂದ ಬಸ್ಸಿನಲ್ಲಿ ಕೊಂಡೊಯ್ದು ದೇವಪುರದ ಪೇಟೆಯಲ್ಲಿ ಮಾರಿ ಮತ್ತೆ ಹಿಂದಕ್ಕೆ ತಲುಪುವ ಇಪ್ಪತ್ನಾಲ್ಕು ಗಂಟೆಗಳಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮ ವಿವರಣೆಗಳೊಂದಿಗೆ ಒಂದು ಕುತೂಹಲಕಾರಿ ಕಥೆಯಾಗಿ ಲೇಖಕ ತೇಜಸ್ವಿಯವರು ಹೆಣೆದಿದ್ದಾರೆ.

ಕಥೆಯ ನಿರೂಪಣೆಯ ಜೊತೆಜೊತೆಗೆ ಲೇಖಕರು ಗ್ರಾಮೀಣ ಜನರ ಬದುಕು ಆಧುನೀಕತೆಯೆಂಬ ಆಕ್ರಮಣದಿಂದ ಹೇಗೆ ಛಿದ್ರವಾಗಿದೆ. ಕೃಷಿಯಾಧಾರಿತ ಕಸುಬುಗಳು ಪ್ರಕೃತಿಯ ವೈಪರೀತ್ಯ, ಮತ್ತು ಮಾನವ ನಿರ್ಮಿತ ಕಾಳದಂಧೆಗಳ ಸೆಳೆತದಿಂದ ಹೇಗೆ ಸೊರಗಿವೆ. ಅರಣ್ಯ ಸಂಪತ್ತು ಹೇಗೆ ವ್ಯವಸ್ಥಿತವಾಗಿ ಲೂಟಿಯಾಗುತ್ತಿದೆ ಮತ್ತು ಕಾಡು ಹೇಗೆ ಕಳ್ಳ ವ್ಯವಹಾರಗಳಿಗೆ ಆಶ್ರಯತಾಣವಾಗಿದೆ. ಇಂತಹ ಕಾಳ ದಂಧೆಕೋರರುಗಳು ಸಶಕ್ತರಾಗಿ ಸರ್ಕಾರದ ಆಡಳಿತ ವ್ಯವಸ್ಥೆಯನ್ನೇ ನಿಯಂತ್ರಿಸುವಷ್ಟು ಬಲವಾಗಿದ್ದಾರೆ ಎಂಬುದನ್ನು ಅನಾವರಣಗೊಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯವನ್ನು, ವ್ಯವಸ್ಥೆಯನ್ನು ರಕ್ಷಿಸಲು ಏನುಮಾಡಬಹುದೆಂಬ ಚಿಂತನೆಗೆ ಪ್ರಜ್ಞಾವಂತರನ್ನು ಹಚ್ಚುವ ಪ್ರಯತ್ನವನ್ನು ಮಾಡಿದ್ದಾರೆ.

ಮೇದರಹಳ್ಳಿ ಗ್ರಾಮದಲ್ಲಿ ಬಿದಿರನ್ನು ಆಶ್ರಯಿಸಿ ಬದುಕಿದ್ದ ಜನರ ಬದುಕು ಅರವತ್ತು ವರ್ಷಕ್ಕೊಮ್ಮೆ ಆವರಿಸುವ ಬಿದಿರಕ್ಕಿ ರೋಗದಿಂದ ನಾಶವಾದರೆ, ಪ್ಲಾಸ್ಟಿಕ್ ವಸ್ತುಗಳು ಹೇರಳವಾಗಿ ಪೇಟೆಗೆ ಧಾಳಿಯಿಟ್ಟು ಬಿದಿರಿನಿಂದ ಹೆಣೆದ ವಸ್ತುಗಳನ್ನು ಕೇಳುವವರೇ ಇಲ್ಲದಂತಾಗಿಸಿದೆ. ಇಡೀ ಗ್ರಾಮವೇ ಇದರಿಂದ ಹಾಳಾಗಿದೆ.

ಸಮೀಪದ ದೇವಪುರ ಎಂಬಲ್ಲಿ ಮೊಟ್ಟಮೊದಲಿಗೆ ಟೆಲಿಫೋನ್ ಸಂಪರ್ಕ ಬಂದ ಮೇಲೆ ಜನರು ಇದರ ಮೂಲಕ ಸಟ್ಟಾ, ಮಟ್ಕಾ, ನ್ಯೂಯಾರ್ಕ್ ಕಾಟನ್ ಮುಂತಾದ ಅಂಕಿಗಳ ಮೇಲೆ ದುಡ್ಡು ಕಟ್ಟುವ ಜೂಜುಗಳ ಹಿಂದೆಬಿದ್ದು ಶ್ರೀಮಂತರಾಗುವ ಭ್ರಮೆಯಲ್ಲಿ ಇದ್ದುದೆಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರ ಮೂಲ ಕಸುಬಾದ ಕೃಷಿಯು ಇದರಿಂದಾಗಿ ಸೊರಗಿಹೋಗಿದೆ. ಮುಂಬಯಿ ಮುಂತಾದ ಉತ್ತರ ಭಾರತದಿಂದ ಕೆಲವು ವ್ಯಾಪಾರಿಗಳು ಇಲ್ಲಿಗೆ ಆಗಮಿಸಿ ಅನೇಕ ಕಳ್ಳ ವ್ಯಾಪಾರಗಳನ್ನು ನಡೆಸುವ ಕೇಂದ್ರ ವ್ಯಕ್ತಿಗಳಾಗಿದ್ದಾರೆ. ಆದರೂ ಇನ್ನೂ ಅಲ್ಲಲ್ಲಿ ಉಳಿದುಕೊಂಡಿರುವ ಒಂದು ವೃತ್ತಿಯೆಂದರೆ ಏಲಕ್ಕಿ ಬೆಳೆ ಮತ್ತು ಇಲ್ಲಿನ ಮಾರುಕಟ್ಟೆ. ಏಲಕ್ಕಿ ಬೆಳೆದ ರೈತರು ಗ್ರಾಮಾಂತರ ಪ್ರದೇಶಗಳಿಂದ ದೇವಪುರದ ಮಂಡಿಗಳಿಗೆ ತಂದು ಮಾರಿ ವ್ಯವಹಾರ ಮಾಡುತ್ತಾರೆ. ಈಗ ಅವರು ಮಾರಿದ್ದಕ್ಕೆ ನೇರವಾಗಿ ಮಂಡಿಯವರಿಂದಲೇ ಸಿಗುತ್ತಿದ್ದಂತೆ ಹಣ ಕೂಡ ನೇರವಾಗಿ ಸಿಗದು. ಖರೀದಿದಾರರು ನೀಡಿದ ಚೆಕ್ಕನ್ನು ಬ್ಯಾಂಕ್ ಸಮಯದ ನಂತರವೂ ಕ್ಯಾಶ್ ಮಾಡಿಕೊಡುವ ಏಜೆಂಟರಿದ್ದಾರೆ. ಅವನ ಹಿಂದೆ ವಂಚಕರ ಜಾಲವೇ ಇದೆ. ಸಿಕ್ಕ ಹಣವನ್ನು ಸುರಕ್ಷಿತವಾಗಿ ತೆಗೆದುಕೊಂಡು ಮನೆ ಮುಟ್ಟಿದರೆ ಪುಣ್ಯವೆನ್ನುವಷ್ಟು ಅಪಾಯಕಾರಿಯಾಗಿದೆ ಈ ಜಾಲ. ಇದಲ್ಲದೆ ದೇವಪುರದಲ್ಲಿ ಮಾದಕ ವಸ್ತುಗಳ ವಿನಿಮಯ, ಕಳ್ಳ ನೋಟುಗಳ ದಂಧೆಗಳೂ ನಡೆಯುತ್ತವೆ. ಇವರೆಲ್ಲರೂ ಸ್ಥಿತ್ಯಂತರಗೊಂಡ ಬದುಕಿನ ಅವಿಭಾಜ್ಯ ಅಂಗವಾಗಿದ್ದಾರೆ.

ಈ ಕಥೆಯಲ್ಲಿ ಮುಖ್ಯ ಪಾತ್ರಧಾರಿಗಳಾದವರು ಸುರೇಶ, ಅವನ ಪತ್ನಿ ಗೌರಿ. ನಂತರ ಇವರೊಟ್ಟಿಗೆ ಸೇರ್ಪಡೆಯಾಗುವ ಸುರೇಶನ ಕಾಲೇಜು ಗೆಳೆಯ ರಾಜಪ್ಪ. ಸುರೇಶ ಕನ್ನಡ ಸಾಹಿತ್ಯದಲ್ಲಿ ಎಂ.ಎ., ಪದವೀಧರ. ಅವನಿಗೆ ಕಾಲೇಜು ದಿನಗಳಲ್ಲೇ ಗಂಟಿಬಿದ್ದು ಅವನನ್ನೇ ಗುರುವೆಂದು ಒಪ್ಪಿಕೊಂಡಿದ್ದ ಬಾಟನಿ ಲೆಕ್ಚರರ್ ಗಂಗೂಲಿ. ಗಂಗೂಲಿ ಕಮೂನಿಷ್ಟ್ ಸಿದ್ಧಾಂತದ ಮಾವೋ ಸಾಹಿತ್ಯ, ಕ್ರಾಂತಿಕಾರಿಗಳ ಜೀವನಚರಿತ್ರೆಗಳನ್ನು ಓದಿ ತಲೆಗೆಡಿಸಿಕೊಂಡಿದ್ದ. ಭಾರತದಲ್ಲಿಯೂ ಒಂದು ದಿನ ಕ್ರಾಂತಿಯಾಗುತ್ತೆ ಎಂದು ಬಲವಾಗಿ ನಂಬಿದ್ದವನು. ತನ್ನ ಶಿಷ್ಯಂದಿರೆಲ್ಲರಿಗೂ ಇದನ್ನೇ ಬೋಧಿಸುತ್ತಾ ಕನಸುಕಾಣುತ್ತಿದ್ದ. ಬಹಳ ಹಿಂದೆಯೇ ಸುರೇಶನ ತಂದೆ ಮಲಯಾ ದೇಶದಲ್ಲಿ ರಬ್ಬರ್ ಪ್ಲಾಂಟೇಷನ್ ಮಾಡಿ ಸಾಕಷ್ಟು ಹಣವಂತನಾಗಿದ್ದ. ಅಲ್ಲಿ ಕ್ರಾಂತಿ ನಡೆದು ಎಲ್ಲ ಭಾರತೀಯರನ್ನೂ ಓಡಿಸಿದಾಗ ತನ್ನ ಆಸ್ತಿಪಾಸ್ತಿಗಳನ್ನು ಮಾರಿಕೊಂಡು ಗಂಟಿನ ಸಮೇತ ಬೆಂಗಳೂರಿಗೆ ಬಂದು ನೆಲೆಸಿದ್ದರು. ಸುರೇಶನು ಗಂಗೂಲಿಯ ಮಾತು ಕೇಳಿಕೊಂಡು ಕ್ರಾಂತಿಕಾರಿಯಾಗುವ ಹುಚ್ಚು ಹತ್ತಿಸಿಕೊಂಡಿದ್ದನ್ನು ಗಮನಿಸಿ ಬೇಸರಪಟ್ಟು ಅವನಿಗೆ ಅವನ ಪಾಲು ತೆಗೆದುಕೊಂಡು ಬದುಕನ್ನು ರೂಪಿಸಿಕೋ ಎಂದು ಹೇಳಿ ಕೈ ತೊಳೆದುಕೊಳ್ಳುವ ಹಂತ ತಲುಪಿದ್ದರು.

ಅಷ್ಟುಹೊತ್ತಿಗೆ ಭಾರತದ ಪ್ರಧಾನಮಂತ್ರಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿಯನ್ನು ಜಾರಿಗೆ ತಂದು ಸರ್ಕಾರದ ವಿರುದ್ಧ ದನಿಯೆತ್ತುವವರೆಲ್ಲರನ್ನೂ ಜೈಲಿಗೆ ಹಾಕಿಸಿದರು. ಆಗ ಗಂಗೂಲಿಯಂತಹ ಪುಸ್ತಕದ ಹುಲಿಗಳು ಇದ್ದಲ್ಲೇ ತೆಪ್ಪಗಾದರು. ಸುರೇಶ ಬೋಧಕ ವೃತ್ತಿ ಬೇಡವೆಂದು ತಂದೆಯಂತೆಯೇ ರಬ್ಬರ್ ಪ್ಲಾಂಟೇಶನ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ವಿಠ್ಠಲರೈ ಎಂಬುವವರ ಕೈಕೆಳಗೆ ಮ್ಯಾನೇಜರಾಗಿ ಕೆಲಸಕ್ಕೆ ಸೇರಿಕೊಂಡನು. ವಿಠ್ಠಲರೈರವರ ಮಗಳು ಗೌರಿ ಮಂಗಳೂರಿನಲ್ಲಿ ಮೈಕ್ರೋಬಯಾಲಜಿ ಓದುತ್ತಿದ್ದಳು. ಅವಳೊಮ್ಮೆ ಊರಿಗೆ ಬಂದವಳು ಮತ್ತೆ ಓದು ಮುಂದುವರೆಸಲು ಹೋಗದೇ ಅಲ್ಲಿಯೇ ಉಳಿದುಬಿಟ್ಟಳು. ಅವಳು ಸುರೇಶನನ್ನು ಇಷ್ಟಪಟ್ಟು ಮದುವೆಯಾದಳು. ಮದುವೆಯಾದ ಮಗನು ಈಗಲಾದರೂ ಒಂದು ನೆಲೆಯಲ್ಲಿ ನಿಲ್ಲಲಿ ಎಂದು ಸುರೆಶನ ತಂದೆ ಅವನ ಪಾಲೆಂದು ಹತ್ತುಲಕ್ಷ ರೂಪಾಯಿಗಳನ್ನು ಕೊಟ್ಟು ರಬ್ಬರ್ ತೋಟ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವಂತೆ ಸಲಹೆ ನೀಡಿದರು. ಆದರೆ ಸುರೇಶನ ರೀತಿಯೇ ಬೇರೆ. ತೋಟಕ್ಕಾಗಿ ಕಾಡಿನ ಜಾಗವನ್ನೇನೋ ಖರೀದಿಸಿದನು. ಲೋಕಜ್ಞಾನವಿಲ್ಲದೆ ಪ್ರಾಯೋಗಿಕ ಬೇಸಾಯ ಮಾಡಲು ತೊಡಗಿದನು. ರಬ್ಬರ್ ಗಿಡವೊಂದನ್ನು ಬಿಟ್ಟು ದಿನಕ್ಕೊಂದು ಯೋಜನೆ ಹಾಕಿಕೊಂಡು ಕೃಷಿಯಲ್ಲಿ ತೊಡಗಿದನು. ಯಾವ ಪ್ರಯೋಗವೂ ಅವನ ಕೈ ಹಿಡಿಯದೇ ಅಪ್ಪ ಕೊಟ್ಟ ಹಣದಲ್ಲಿ ಉಳಿದಿದ್ದೆಲ್ಲವೂ ಖಾಲಿಯಾಯಿತು. ಕೊನೆಗೆ ಆ ಸ್ಥಳದಲ್ಲಿ ಪರಂಪರಾಗತವಾಗಿ ಹಾಕಿದಲ್ಲಿ ಬೆಳೆಯುತ್ತಿದ್ದ ಏಲಕ್ಕಿ ಬೆಳೆಯೇ ಅವನಿಗೆ ಜೀವನಾಧಾರವಾಯಿತು.

ಕಥೆ ಪ್ರಾರಂಭವಾಗುವ ಹೊತ್ತಿಗೆ ಸುರೇಶ, ಗೌರಿಯರು ತಾವು ಬೆಳೆದಿದ್ದ ಸುಮಾರು ಅರವತ್ತು ಕೆ.ಜಿ. ಏಲಕ್ಕಿಯನ್ನು ಎರಡು ಮೂಟೆಗಳಲ್ಲಿ ಹೊತ್ತುತಂದು ದೇವಪುರದ ಮಂಡಿಯಲ್ಲಿ ಬಿಕರಿ ಮಾಡಿ ಸ್ವಲ್ಪ ಸಾಮಾನುಗಳನ್ನು ಪೇಟೆಯಲ್ಲಿ ಖರೀದಿಸಲಿಕ್ಕಾಗಿ ಹೊರಟಿದ್ದರು. ಬಸ್ಸಿಗಾಗಿ ಜುಗಾರಿಕ್ರಾಸಿನ ಬಳಿ ಕಾಯುತ್ತಿದ್ದರು. ಅದೇ ಸಮಯಕ್ಕೆ ಮಾದಕ ವಸ್ತುಗಳನ್ನು ಸಾಗಿಸುವ ಖದೀಮರು ದೌಲತ್‌ರಾಮ್ ಮತ್ತು ಕುಟ್ಟಿ ಎಂಬುವರು ಕೇರಳದ ಒಂದೂರಿನಲ್ಲಿ ಕದ್ದುತಂದಿದ್ದ ಕಾರೊಂದರಲ್ಲಿ ಅತ್ತ ಕಡೆಗೆ ಬಂದರು. ಪೋಲೀಸಿನವರ ಸುಳುವು ಸಿಕ್ಕಿದ್ದರಿಂದ ಕಾಡಿನೊಳಗೇ ಕದ್ದಿದ್ದ ಕಾರನ್ನು ಕೈಬಿಟ್ಟು ಪ್ಯಾಕೆಟ್ಟಿನಲ್ಲಿದ್ದ ಗುಪ್ತ ವಸ್ತುವನ್ನು ಹಿಡಿದು ಸಾಮಾನ್ಯರಂತೆ ಜುಗಾರಿ ಕ್ರಾಸಿನ ಬಳಿ ಬಸ್ಸಿಗೆ ಕಾಯಲು ಬಂದರು. ಮೊದಲೇ ಹೊಟ್ಟೆ ತುಂಬಿಕೊಂಡು ಬಂದ ಖುದ್ದೂಸ್ ಎಕ್ಸ್ಪ್ರೆಸ್ ಬಸ್ಸಿನಲ್ಲಿ ಹೇಗೋ ಎಲ್ಲರೂ ತುರುಕಿಕೊಂಡು ದೇವಪುರದತ್ತ ಹೊರಟರು. ದಾರಿಯಲ್ಲಿ ಹಲವು ಬಾರಿ ಹಿಂದೆ ಮುಂದೆ ಸುತ್ತಾಡಿದ ಪೋಲೀಸಿನವರ ಜೀಪುಗಳನ್ನು ಗಮನಿಸಿದ ದೌಲತ್‌ರಾಮ್, ಕುಟ್ಟಿ ಅವರು ತಮ್ಮನ್ನೇ ಹುಡುಕುತ್ತಿರಬಹುದು ಎಂದು ಸಂದೇಹಿಸಿ ಉಪಾಯವಾಗಿ ಸುರೇಶನ ಏಲಕ್ಕಿ ಮೂಟೆಯೊಳಕ್ಕೆ ತಮ್ಮ ಕೈಯಲ್ಲಿದ್ದ ಪ್ಯಾಕೇಟನ್ನು ತುರುಕಿ ನಿರಾಳವಾದರು. ಚೆಕ್ ಮಾಡಿದರೂ ತಮ್ಮ ಬಳಿ ಏನೂ ಸಿಗದಿದ್ದುದರಿಂದ ಪೋಲೀಸಿನವರಿಂದ ಯಾವ ಅಪಾಯವೂ ಇರುವುದಿಲ್ಲವೆಂದು ಆಲೋಚಿಸಿದರು. ದೇವಪುರದಲ್ಲಿ ಇಳಿದ ನಂತರ ಮೂಟೆಯೊಳಗಿನಿಂದ ಪ್ಯಾಕೆಟ್ಟನ್ನು ಎತ್ತಿಕೊಂಡು ತಾವು ತಲುಪಿಸಬೇಕಾದ ಕಡೆ ತಲುಪಿಸುವುದು ಅವರ ಸಂಚಾಗಿತ್ತು. ಅವರ ಈ ಕೆಲಸಕ್ಕೆ ನಿಗದಿಪಡಿಸಲಾಗಿದ್ದ ಇಪ್ಪತ್ತು ಸಾವಿರ ಕಮೀಷನ್ ಪಡೆಯುವುದು ಅವರ ಗುರಿಯಾಗಿತ್ತು. ಪ್ಯಾಕೇಟಿನ್ನಲ್ಲೇನಿದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ತಿಳಿಯಲು ಪ್ರಯತ್ನಿಸುವುದು ಅಪಾಯಕಾರಿಯಾಗಿತ್ತು. ಹೇಳಿದಷ್ಟನ್ನು ಮಾಡುವುದು ಅವರ ಡ್ಯೂಟಿಯಾಗಿತ್ತು. ದೇವಪುರ ಬಂದಾಗ ಬಾಗಿಲ ಬಳಿ ಪೋಲೀಸಿನವರು ಗಾಡಿಯನ್ನು ಚೆಕ್ ಮಾಡುತ್ತಿದ್ದರು.

ಅದರಿಂದ ತಮಗೇನೂ ತಿಳಿಯದವರಂತೆ ಬಸ್ಸಿನಿಂದಿಳಿದು ಸ್ವಲ್ಪ ದೂರದಲ್ಲಿ ತಾವು ಗುರುತಿಟ್ಟುಕೊಂಡಿದ್ದ ಅಮಾಫೋಸ್ ಗೊಬ್ಬರದ ಚೀಲವನ್ನು ಗಮನಿಸುತ್ತಿದ್ದರು. ಅನಿರೀಕ್ಷಿತ ಘಟನೆಯೊಂದು ನಡೆದು ಸುರೇಶ ಗೌರಿಯರು ಇವರ ಕೈಗೆ ಸಿಗದೆ ಮುಂದೆ ನಡೆದುಬಿಟ್ಟರು. ನಂತರ ಪೇಟೆ ಬೀದಿಯಲ್ಲಿ ನಡೆಯುವ ಒಂದೊಂದು ಘಟನೆಯೂ ಅತ್ಯಂತ ಕುತೂಹಲ ಹುಟ್ಟಿಸುತ್ತವೆ. ಅವರಿಗೆ ಮೊದಲು ಕಂಡವನು ಅಬ್ಬೂಸ್ ಅಲಿ, ಏಲಕ್ಕಿ ಸಣ್ಣ ವ್ಯಾಪಾರಿ, ನಂತರ ಅವನ ನೆರವಿನಿಂದಲೇ ಮೂಟೆಯನ್ನು ಹುಚ್ಚೇಗೌಡರ ಮಂಡಿಗೆ ತರುತ್ತಾರೆ. ಅಲ್ಲಿ ಏಲಕ್ಕಿ ಹರಾಜಾಗುತ್ತದೆ. ಆ ದಿನ ರೇಟ್ ಅತಿ ಹೆಚ್ಚಾಗಿದ್ದುದರಿಂದ ಹೆಚ್ಚು ಹಣದ ನಿರೀಕ್ಷೆಯಲ್ಲಿ ಸುರೇಶ, ಗೌರಿಯರು ಸಂತಸದಲ್ಲಿರುತ್ತಾರೆ. ಹರಾಜು ಕೂಗಿದವನು ಕೈಲಾಶ್ ಬಾರಿನ ಮ್ಯಾನೇಜರ್ ಕುನ್ನಿ. ಎಲ್ಲರಿಗಿಂತ ಹೆಚ್ಚು ಕೆ.ಜಿ.ಗೆ ಸಾವಿರ ರೂಪಾಯಿ ಕೂಗುತ್ತಾನೆ. ಅರವತ್ತು ಕಿ.ಜಿ.ಗೆ ಅರವತ್ತು ಸಾವಿರ ಮೊತ್ತವನ್ನು ತನ್ನ ಬಾರಿನಲ್ಲಿ ಕಾಯುತ್ತಿರುವ ಮಾರವಾಡಿ ಗಿರಾಕಿಯಿಂದ ಕೊಡಿಸುವುದಾಗಿ ಸುರೇಶ ಗೌರಿಯರನ್ನು ಕುನ್ನಿ ಕರೆದೊಯ್ಯುತ್ತಾನೆ. ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಖದೀಮರು ದೌಲತ್‌ರಾಮ್, ಕುಟ್ಟಿ ಇವರನ್ನು ಹುಡುಕುತ್ತಲೇ ಇರುತ್ತಾರೆ. ಅವರಿಗೆ ಶಾಸ್ತ್ರಿ ಎಂಬ ಲಾಟರಿ ಟಿಕೆಟ್ ಮಾರಾಟಗಾರನಿಂದ ಇಪ್ಪತ್ತುಸಾವಿರ ಬಟವಾಡೆಯಾಗಬೇಕಿತ್ತು. ಆದರೆ ತಲುಪಬೇಕಾದ ಜಾಗಕ್ಕೆ ಪ್ಯಾಕೆಟ್ ತಲುಪಲಿಲ್ಲವಾದ್ದರಿಂದ ಶಾಸ್ತ್ರಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಅಲ್ಲಿಂದ ಆ ಖದೀಮರು ಸುರೇಶನನ್ನು ಹುಡುಕಿ ಅವನು ಪಡೆದುಕೊಂಡಿರಬಹುದಾದ ಅರವತ್ತು ಸಾವಿರ ಹಣವನ್ನು ಕಿತ್ತುಕೊಳ್ಳುವ ಪ್ಲಾನ್ ಹಾಕುತ್ತಾರೆ.

ಇದ್ಯಾವುದರ ಪರಿವೆಯೇ ಇಲ್ಲದ ಸುರೇಶ ಗೌರಿಯರು ತಮ್ಮ ಪಾಡಿಗೆ ಮಾರವಾಡಿ ಗ್ರಾಹಕ ಕರೆದುಕೊಂಡು ಹೋದ ಜೂಯಲರಿ ಅಂಗಡಿ ತಲುಪುತ್ತಾರೆ. ಅಲ್ಲಿ ಇವರಿಗೆ ಏಲಕ್ಕಿ ಕೊಂಡವನು ಜೀವನ್‌ಲಾಲನಿಂದ ಏಲಕ್ಕಿಯ ಹಣಕ್ಕೆ ಚೆಕ್ ಬರೆಸಿ ಕೊಡುತ್ತಾನೆ. ಬ್ಯಾಂಕಿನ ಟೈಂ ಮುಗಿದಿದ್ದರಿಂದ ತಮ್ಮ ಏಜೆಂಟನ ಬಳಿಯಲ್ಲಿ ಕ್ಯಾಶ್ ಪಡೆದುಕೊಳ್ಳುವಂತೆ ಸೂಚನೆ ನೀಡುತ್ತಾನೆ. ಏಜೆಂಟ್ ‘ಮನ್ಮಥ ಬೀಡ ಶಾಪ್’ ಪ್ರೊಪ್ರೈಟರ್ ಶೇಷಪ್ಪ. ಅವನಂತೂ ಹೊರನೋಟಕ್ಕೆ ಬೀಡಾ ಮಾರುವವನಾದರೂ ಒಳಗೆ ಹಲವಾರು ರೀತಿಯ ದಂಧೆಗಳಲ್ಲಿ ಎತ್ತಿದಕೈಯವನು. ಅವನು ಒಳಕೋಣೆಯಲ್ಲಿ ಇವರಿಗೆ ಚೆಕ್ ನೋಡಿ ಹಣ ಕೊಡುತ್ತಾನೆ. ಈ ವಿದ್ಯಾವಂತ ಮೂರ್ಖರು ಚೆಕ್ಕಿನಲ್ಲಿ ಎಷ್ಟು ಬರೆದಿತ್ತು, ಅವನು ಎಷ್ಟು ಹಣ ಕೊಟ್ಟನೆಂಬುದನ್ನೂ ಪರಿಶೀಲಿಸದೇ ಅದನ್ನು ಪ್ಲಾಸ್ಟಿಕ್ಕಿನ ಚೀಲವೊಂದರಲ್ಲಿಟ್ಟುಕೊಂಡು ಹೊರಟರು. ಆದರೂ ಶೇಷಪ್ಪನು ಇವರಿಬ್ಬರನ್ನೂ ಇಬ್ಬರು ಸಂಶಯಾಸ್ಪದ ವ್ಯಕ್ತಿಗಳು ಹಿಂಬಾಲಿಸಿ ಬೆಂಬತ್ತಿರುವರೆಂಬ ಎಚ್ಚರಿಕೆ ನೀಡುತ್ತಾನೆ. ಆಗ ಶುರುವಾಗುತ್ತೆ ಇವರಿಬ್ಬರಿಗೆ ಆತಂಕ. ಹೋಟೆಲೊಂದರಲ್ಲಿ ತಿಂಡಿತಿನ್ನಲು ಕುಳಿತಾಗ ಫ್ಯಾಮಿಲಿ ರೂಮಿನಲ್ಲಿ ಕುತೂಹಲಕ್ಕಾಗಿ ಕೈಯಲ್ಲಿದ್ದ ಹಣವನ್ನು ಗೌರಿ ಎಣಿಸುತ್ತಾಳೆ. ಅವಳಿಗೆ ಅದು ತಾವು ನಿರೀಕ್ಷಿಸಿದ ಐವತ್ತೆಂಟು ಸಾವಿರಗಳಿಗೆ ಬದಲಾಗಿ ಅದರ ಮೂರರಷ್ಟು ಅಂದರೆ ಒಂದೂವರೆ ಲಕ್ಷಕ್ಕೂ ಹೆಚ್ಚಾಗಿರುವುದು ಕಂಡುಬಂದು ಭಯವಾಗುತ್ತದೆ. ಮತ್ತೆ ವಿಚಾರಿಸೋಣವೆಂದು ಶೇಷಪ್ಪನ ಅಂಗಡಿಗೆ ಬರುವಷ್ಟರಲ್ಲಿ ಶೇಷಪ್ಪನಿಗೆ ಯಾರೋ ಚಾಕು ಹಾಕಿದರೆಂಬ ಸುದ್ಧಿಯೊಡನೆ ಜನಸಂದಡಿಯಿರುತ್ತದೆ.

ಭಯವಾಗಿ ಏನನ್ನೂ ವಿಚಾರಿಸದೇ ಆಗಲೇ ಸಂಜೆಯಾಗಿದ್ದುದರಿಂದ ಬೇಗನೇ ಮನೆ ಸೇರಿಕೊಳ್ಳೋಣವೆಂದು ನಿರ್ಧರಿಸುತ್ತಾರೆ. ಕೊನೆಯ ಬಸ್ಸಾದುದರಿಂದಲೂ, ಮಳೆಹನಿಗಳು ಪ್ರಾರಂಭವಾಗಿದ್ದರಿಂದಲೂ ಅದನ್ನು ಬಿಟ್ಟು ರೈಲು ಹತ್ತಿ ಪ್ರಯಾಣ ಬೆಳೆಸುತ್ತಾರೆ. ಮೊದಲು ಹೆಚ್ಚು ಜನರಿಲ್ಲದ್ದು ಕಂಡು ಸ್ವಲ್ಪ ನೆಮ್ಮದಿಯಾಗುತ್ತಾರೆ. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಅದೇ ರೈಲಿಗೆ ಸುರೇಶನ ಕಾಲೇಜು ಗೆಳೆಯ ರಾಜಪ್ಪ ಹತ್ತುತ್ತಾನೆ. ಮಧ್ಯಾನ್ಹವೇ ಭೇಟಿಯಾಗಿದ್ದ ಅವನು ತಾನೊಬ್ಬ ಸಂಶೋಧಕನಾಗಿದ್ದು ಒಂದು ಪುರಾತನ ಗ್ರಂಥವೊಂದರ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವುದಾಗಿ, ಅದಕ್ಕಾಗಿ ಅವನು ಒಂದೂಕಾಲು ಲಕ್ಷ ರೂಪಾಯಿಯ ಕರಾರಿನ ಮೇಲೆ ಕೆಲಸ ಒಪ್ಪಿಕೊಂಡಿದ್ದು ಮೂಲಪ್ರತಿಯಲ್ಲಿ ಕಾಣಿಸದಾದ ಕೆಲವು ಪುಟಗಳ ತಲಾಷಿನಲ್ಲಿರುವುದಾಗಿ ತಿಳಿಸಿರುತ್ತಾನೆ. ಅಲ್ಲಿ ಗೆಳೆಯರ ನಡುವೆ ಗುರುರಾಜನೆಂಬ ಕವಿಯ ಜೈನಗ್ರಂಥ “ಉತ್ತುಂಗ ರಾಜನ ಕಥೆ”ಯ ಬಗ್ಗೆ ಮಾತುಕತೆ ಪ್ರಾರಂಭವಾಗುತ್ತದೆ. ಸಾಹಿತ್ಯದ ಅಭ್ಯಾಸಿಯಾದ ಸುರೇಶನಿಗೆ ಆ ಗ್ರಂಥದ ಕೆಲವು ಪದ್ಯಗಳನ್ನು ಓದುತ್ತಿದ್ದಂತೆಯೇ ಅದೊಂದು ದ್ವಂದಾರ್ಥದಿಂದ ಕೂಡಿದ ಕಾವ್ಯವಾಗಿದ್ದು, ಹೇಳುವ ಕಥೆ ರಾಜನಿಗೆ ಸಂಬಂಧಿಸಿದಂತೆ ತೋರಿದರೂ ಅದೊಂದು ಅಪೂರ್ವ ನಿಧಿಯ ಶೋಧದ ಗುಟ್ಟುಗಳನ್ನು ತಿಳಿಸುವಂತಿದೆ ಎನ್ನಿಸುತ್ತದೆ. ಆಗ ರಾಜಪ್ಪ ಗ್ರಂಥವನ್ನು ಯಾರಾದರೂ ಕೊಂಡು ಒಂದೂವರೆ ಲಕ್ಷ ರೂಪಾಯಿ ಕೊಟ್ಟುಬಿಟ್ಟರೆ ಅದರ ಸಂಶೋಧನೆಯನ್ನೇ ಕೈಬಿಡುವುದಾಗಿ ಹೇಳಿಕೊಳ್ಳುತ್ತಾನೆ. ಇದರಿಂದ ಉತ್ತೇಜಿತನಾದ ಸುರೇಶ ಅದರ ಬೆಲೆ ಇನ್ನೂ ಹೆಚ್ಚಿಗೆ ಎಂದು ಪತ್ನಿಗೆ ಹೇಳುತ್ತಾನೆ. ಅವಳು ಹಿಂದುಮುಂದು ಯೋಚಿಸದೇ ತನ್ನ ಕೈಯಲ್ಲಿದ್ದ ಒಂದೂವರೆ ಲಕ್ಷ ರೂಪಾಯಿಗಳನ್ನು ರಾಜಪ್ಪನಿಗೆ ಕೊಟ್ಟು ಗ್ರಂಥವನ್ನು ಕೊಳ್ಳುತ್ತಾಳೆ. ಅದನ್ನು ತನ್ನ ಪ್ಲಾಸ್ಟಿಕ್ ಚೀಲದಲ್ಲಿರಿಸಿಕೊಂಡು ನಿರಾಳವಾಗಿ ನಿದ್ರೆ ಮಾಡಿಬಿಡುತ್ತಾಳೆ.

ಸುರೇಶನ ಗ್ರಹಚಾರ, ಅವನನ್ನು ಬೆನ್ನತ್ತಿಬಂದ ಖದೀಮರು ದೌಲತ್‌ರಾಮ್ ಮತ್ತು ಕುಟ್ಟಿ ಕುಮರಿ ಸ್ಟೇಷನ್ನಿನಲ್ಲಿ ಇವರು ಕುಳಿತಿದ್ದ ಬೋಗಿಯೊಳಕ್ಕೆ ಬರುತ್ತಾರೆ. ಅವರು ಇವನನ್ನೇ ಗಮನಿಸುತ್ತಿರುತ್ತಾರೆ. ಅವರಿಂದ ಅಪಾಯ ಖಚಿತವೆಂದು ತಪ್ಪಿಸಿಕೊಳ್ಳುವ ಉಪಾಯಮಾಡುತ್ತಾನೆ. ರೈಲು ಬಿರುಮಲೆ ಸುರಂಗದೊಳಗೆ ಪ್ರವೇಶಿದಾಗ ಸಂಪೂರ್ಣ ಕತ್ತಲೆಯಾವರಿಸುತ್ತದೆ. ಆಗಲೇ ಸರಿಯಾದ ಸಮಯವೆಂದು ಹೆಂಡತಿ ಗೌರಿಗೂ ಸೂಕ್ಷ್ಮವಾಗಿ ಅಪಾಯದ ಬಗ್ಗೆ ಎಚ್ಚರಿಸಿ ರೈಲು ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಿರುವಾಗಲೇ ಬಾಗಿಲಿನಿಂದ ಧುಮುಕಿಬಿಡುತ್ತಾರೆ. ಅಂತಹ ಪೆಟ್ಟೇನೂ ಆಗದಿದ್ದರೂ ಬಟ್ಟೆ ಬರೆಯೆಲ್ಲಾ ಕೆಸರು ಮೆತ್ತಿಕೊಂಡಿರುತ್ತದೆ. ಹೇಗೋ ಸುರಂಗ ದಾಟಿದರೆ ಮರ‍್ನಾಲ್ಕು ಮೈಲಿ ದೂರದಲ್ಲಿ ‘ಅಂಬಳ’ ಸೇರಬಹುದು. ಅಲ್ಲಿಂದ ಊರಿಗೆ ಬಸ್ಸು ಹಿಡಿಯ ಬಹುದೆಂದು ಆಲೋಚಿಸಿ ನಡೆಯುತ್ತಿರುವಾಗ ಸುರಂಗದೊಳಗೇ ಇದ್ದ ಕುಂಟರಾಮನು ಇವರನ್ನು ಕಲೆಯುತ್ತಾನೆ. ಅವನು ಕೆಂಪು ಕಲ್ಲಿನ ಶೋಧದ ರಹಸ್ಯ ಕಥೆಯನ್ನು ಹೇಳಿ ಅದರಿಂದಲೇ ರತ್ನಪರೀಕ್ಷಕ ರಾಮಪ್ರಸಾದನಾಗಿದ್ದ ತನಗೆ ಈ ದುರವಸ್ಥೆ ಒದಗಿದ್ದು ಎಂದು ರೋಚಕವಾದ ತನ್ನ ವೃತ್ತಾಂತವನ್ನು ಹೇಳುತ್ತಾನೆ. ಅವನು ಹೇಳಿದ ಪ್ರಸಂಗಕ್ಕೂ ರಾಜಪ್ಪ ಕೊಟ್ಟ ಪುರಾತನ ಗ್ರಂಥಕ್ಕೂ ಸಾಮ್ಯವಿರುವುದನ್ನು ಸುರೇಶ ಗಮನಿಸುತ್ತಾನೆ. ಆಗ ತಮ್ಮಲ್ಲಿದ್ದ ಗ್ರಂಥದ ಬೆಲೆ ಕೋಟ್ಯಾಂತರ ಆಗಬಹುದೆಂದು ಕಲ್ಪಿಸಿಕೊಳ್ಳುತ್ತಾನೆ. ಅಂತೂ ಸುರಂಗದಿಂದ ಪಾರಾಗಿ ಬಯಲಿಗೆ ಬಂದವರು ಅಂಬಳ ಸೇರಬೇಕಾದರೆ ದಾಟಬೇಕಾದ ಕಮಾನು ಸೇತುವೆ ಹತ್ತಿರುತ್ತಾರೆ.

ಅಷ್ಟರಲ್ಲಿ ಯಾರೋ ಆಟೋದಲ್ಲಿ ಬಂದು ಇವರನ್ನು ಹಾದು ನಿಲ್ಲಿಸುತ್ತಾರೆ. ಇಳಿದವರು ಇವರ ಬೆನ್ನತ್ತಿದ ಖದೀಮರುಗಳಾದ ದೌಲತ್‌ರಾಮ್ ಮತ್ತು ಕುಟ್ಟಿ. ಬಂದೊಡನೆ ಇವರನ್ನು ಅರವತ್ತು ಸಾವಿರವೆಲ್ಲಿದೆ? ಎಂದು ಪ್ರಶ್ನಿಸುತ್ತಾರೆ. ಅವರು ಬಂದದ್ದು ದುಡ್ಡು ಕಿತ್ತುಕೊಳ್ಳಲು ಎಂಬುದು ಖಚಿತವಾಗಿ ಸತ್ಯವನ್ನೇ ಹೇಳಿ ತಮ್ಮ ದುಡ್ಡೆಲ್ಲವನ್ನೂ ಕೊಟ್ಟು ಖರೀದಿಸಿದ ಹಳೆಯ ಗ್ರಂಥವಿದ್ದ ಪ್ಲಾಸ್ಟಿಕ್ ಕವರ್ ತೋರುತ್ತಾಳೆ ಗೌರಿ. ಅವರು ಪಟಕ್ಕನೆ ಅದನ್ನು ಕಿತ್ತುಕೊಂಡು ಅದರಲ್ಲಿದ್ದ ಹಾಳೆಗಳನ್ನು ಸೇತುವೆಯ ಕೆಳಕ್ಕೆ ಎಸೆಯುತ್ತಾರೆ. ಚೂರಿ ತೆಗೆದು ಬೆದರಿಸಿ ದುಡ್ಡನ್ನು ಬಚ್ಚಿಟ್ಟ ಜಾಗದಿಂದ ತೆಗೆದು ಕೊಡುವಂತೆ ಒತ್ತಾಯಿಸುತ್ತಾರೆ. ಅದೃಷ್ಟಕ್ಕೆ ದೂರದಿಂದ ಯಾವುದೋ ವಾಹನ ಬರುತ್ತಿರುವ ಶಬ್ದ ಕೇಳಿಸಿ ಖದೀಮರು ಕಾಲುಕೀಳುತ್ತಾರೆ. ಜೀವವುಳಿಸಿಕೊಂಡ ನೆಮ್ಮದಿಯಲ್ಲಿ ಸಾಗುತ್ತಿರುವಾಗ ಆಟೋದಲ್ಲಿ ಬಂದವನು ಇವರ ಗೆಳೆಯ ರಾಜಪ್ಪ. ಅವನಿಗೆ ಗ್ರಂಥವನ್ನು ಖದೀಮರು ಹಾಳುಮಾಡಿದ್ದ ವಿಷಯವನ್ನು ಹೇಳಿದಾಗ ಆತ ರಹಸ್ಯವೊಂದನ್ನು ಬಯಲು ಮಾಡುತ್ತಾನೆ. ಅವನು ಗ್ರಂಥಕ್ಕಾಗಿ ಬರಲಿಲ್ಲ. ಅವರಿಂದ ಪಡೆದ ಹಣವನ್ನು ಅವರಿಗೆ ಹಿಂದಿರುಗಿಸಲು ಬಂದೆನೆಂದು ಹೇಳುತ್ತಾನೆ. ವೃತ್ತಿಯಿಂದ ಅವನೊಬ್ಬ ಖಾಸಗಿ ಪತ್ತೇದಾರನೆಂದು, ಏಜೆಂಟ್ ಶೇಷಪ್ಪನ ಮಾತಿನಂತೆ ಸುರೇಶ, ಗೌರಿಯರನ್ನು ಸುರಕ್ಷಿತವಾಗಿ ಊರು ಸೇರಿಸುವ ಜವಾಬ್ದಾರಿ ಹೊತ್ತು ಅವರಿರುವಲ್ಲಿಗೆ ಬಂದೆನೆಂದು ಹೇಳುವನು. ಆಗ ಅವರಿಬ್ಬರೂ ಬೆಳಗಿನಿಂದ ನಡೆದುದೆಲ್ಲವನ್ನೂ ತಿಳಿಸಿ ತಮ್ಮ ಪ್ರಾಣ ತೆಗೆಯಲು ಖದೀಮರಿಬ್ಬರು ಬೆನ್ನಟ್ಟಿ ಬಂದಿದ್ದನ್ನೂ ಹೇಳುತ್ತಾರೆ. ರಾಜಪ್ಪ ಅವರಿಂದ ಪಡೆದಿದ್ದ ಒಂದೂವರೆ ಲಕ್ಷ ರೂಪಾಯಿಗಳನ್ನು ಹಿಂದಿರುಗಿಸಿ ಅಷ್ಟು ಹೊತ್ತಿಗಾಗಲೇ ಕಳ್ಳ ದಂಧೆಕೋರರೆಲ್ಲರೂ ಪೋಲೀಸಿನವರ ಅತಿಥಿಗಳಾಗಿರುತ್ತಾರೆ, ಅವರನ್ನೆಲ್ಲ ಗುರುತಿಸಿ ಬಂಧಿಸುವ ಸಲುವಾಗಿಯೇ ಅವನು ಬಂದದ್ದು ಎಂದು ಹೇಳಿದಾಗ ಇಬ್ಬರಿಗೂ ನಿರಾತಂಕವಾಗುತ್ತದೆ. ಮಿತ್ರರಿಬ್ಬರೂ ಪುರಾತನ ಗ್ರಂಥದಲ್ಲಿದ್ದ ಸುಳುಹು, ಕುಂಟರಾಮನು ಹೇಳಿದ ಪ್ರಸಂಗ ಎಲ್ಲವನ್ನೂ ತಾಳೆಹಾಕಿ ನಿಜವಾಗಿಯೂ ನಿಧಿಯಿದೆ. ಅದನ್ನು ತಾವೇ ಯಾರ ನೆರವು ಪಡೆಯದೇ ಪತ್ತೆ ಮಾಡೋಣ ಎಂದು ಮನಸ್ಸಿನಲ್ಲೇ ಆಲೋಚಿಸಿ ಬಸ್ಸಿಗಾಗಿ ಕಾಯುತ್ತಾರೆ. ಖುದ್ದೂಸ್ ಎಕ್ಸ್ಪ್ರೆಸ್ ಅಲ್ಲಿಗೆ ಬಂದಾಗ ಹತ್ತಿ ಕುಳಿತು ಜುಗಾರಿ ಕ್ರಾಸಿಗೆ ಟಿಕೆಟ್ ಕೊಳ್ಳುತ್ತಾರೆ.

ಕಥೆಯ ನಿರೂಪಣಾ ಶೈಲಿ ಅತ್ಯಂತ ಕುತೂಹಲಕಾರಿಯಾಗಿದೆ. ಹೆಜ್ಜೆಹೆಜ್ಜೆಗೂ ಓದುಗರ ಆಸಕ್ತಿಯನ್ನು ಕೆರಳಿಸುತ್ತದೆ. ಸಂಪೂರ್ಣ ಓದಿ ಮುಗಿಸಿದಾಗ ಸುಖಾಂತ್ಯದ ತೃಪ್ತಿಯೊಂದಿಗೆ ಆಧುನೀಕತೆಯ ಹೆಸರಿನಲ್ಲಿ ಹಾಳಾದ ಗ್ರಾಮೀಣ ಬದುಕು, ಮಣ್ಣುಗೂಡಿದ ಕುಲಕಸುಬುಗಳು, ಹೆಚ್ಚಿದ ಧನದಾಹದಿಂದ ಹುಟ್ಟಿಕೊಂಡ ವಾಮಮಾರ್ಗಗಳು, ದುಸ್ಥಿತಿಯಲ್ಲಿರುವ ನಮ್ಮ ಆಡಳಿತ ವ್ಯವಸ್ಥೆ, ಹದಗೆಟ್ಟ ನೈತಿಕತೆಯ ಬಗ್ಗೆ ಆಕ್ರೋಶವೂ ಹುಟ್ಟುತ್ತದೆ. ಇಂತಹ ಪಿಡುಗುಗಳ ವಿರುದ್ಧ ಸಾರ್ವಜನಿಕರ ಕಣ್ತೆರೆಯಿಸುವಂತಹ ಸಾರ್ಥಕ ಕೃತಿ ರಚಿಸಿದ ಪೂರ್ಣಚಂದ್ರ ತೇಜಸ್ವಿಯವರಿಗೊಂದು ಅಭಿನಂದನೆ ಸಲ್ಲಲೇಬೇಕು.

 ಬಿ.ಆರ್.ನಾಗರತ್ನ, ಮೈಸೂರು

11 Comments on “ಕಾದಂಬರಿ ‘ಜುಗಾರಿ ಕ್ರಾಸ್’, ಲೇಖಕರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ.

  1. ಸುಂದರವಾದ ಹಾಗೂ ವಿಸ್ತೃತ ವಾದ ಪುಸ್ತಕ ಪರಿಚಯ.

  2. ಜುಗಾರಿ ಕ್ರಾಸ್ ಮತ್ತೆ ಒಮ್ಮೆ ಓದಿದಂತಾಯಿತು.ತುಂಬಾ ಚೆನ್ನಾಗಿ ಪರಿಚಯಿಸಿದ್ದೀರ. ಅಭಿನಂದನೆಗಳು.

  3. ಅತ್ಯಂತ ಸಮಂಜಸವಾದ ಪುಸ್ತಕ ಪರಿಚಯ ಇದಾಗಿದೆ. ಒದೊಂದು ಸಾಲೂ ಕಾದಂಬರಿ ಓದಿಲ್ಲದವರಿಗೆ ಓದಲು ಪ್ರೇರೇಪಿಸುತ್ತದೆ.

  4. ಮುಕ್ತಾ ಮೇಡಂ ಹೇಳಿದಂತೆ ಮತ್ತೊಮ್ಮೆ ಓದಿದಂತಾಯಿತು. ಹಾಳು ಜಂಜಡದಲ್ಲಿ ಓದಿದ್ದೆಲ್ಲಾ ಮರೆತು ಹೋಗುತ್ತಿದೆ
    ವಯಸೂ ಅದಕೆ ಸಾಥ್‌ ನೀಡುತ್ತಿದೆ. ಅಂತಹುದರಲ್ಲಿ ನಿಮ್ಮ ಬರೆಹ ಕಣ್ಣಿಗೆ ಬಿತ್ತು.

    ಕತೆಗಳನ್ನು ಬರೆಯುತ್ತಿದ್ದವರು ಈ ಸಲ ಪುಸ್ತಕ ವಿಮರ್ಶೆ ಮತ್ತು ವಿವರವಾದ ವ್ಯಾಖ್ಯಾನ ಮಾಡಿದ್ದನ್ನು ಕಂಡು
    ಪೂರ್ಣ ಓದಿದೆ. ಚೆನ್ನಾಗಿದೆ ಮೇಡಂ, ಧನ್ಯವಾದಗಳು

    1. ಹಾ..ಮಂಜು ಸಾರ್ ನಮ್ಮ ಓದುಗರ ವೇದಿಕೆಯಲ್ಲಿ ಚರ್ಚೆ ಮಾಡಿದ ಪುಸ್ತಕ ಗಳಲ್ಲಿ ನನಗೆ ಆಪ್ತ ವಾದ ಪುಸ್ತಕವನ್ನು ಅವಲೋಕನ ಮಾಡಿ ಬರಯುವ ಪ್ರವೃತ್ತಿ ಇದೆ ಹಾಗೆ ಬರದುದನ್ನು ಕಳಿಸಿ ದ್ದೇ..ಹಾಕಿದ್ದಾರೆ.. ಅದನ್ನು ಓದಿ ಪ್ರತಿಕ್ರಿಯೆ ನೀಡಿದ ನಿಮಗೆ ಧನ್ಯವಾದಗಳು.

  5. ಪ್ರಸಿದ್ಧ ಲೇಖಕರ ಪ್ರಬುದ್ಧ ಕಾದಂಬರಿಯ ವಿಸ್ತೃತ ವಿಮರ್ಶಾತ್ಮಕ ಲೇಖನವು ಬಹಳ ಚೆನ್ನಾಗಿ ಮೂಡಿಬಂದಿದೆ…ನಾಗರತ್ನ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *