ಅತ್ಯಂತ ಅಪಾಯಕಾರಿ -ಮೇಕ್ಲಾಂಗ್ ರೈಲ್ವೆ ಮಾರುಕಟ್ಟೆ
ಬ್ಯಾಂಕಾಕ್ ನಿಂದ ಪಶ್ಚಿಮಕ್ಕೆ ಸುಮಾರು ಮೂವತ್ತೇಳು ಮೈಲಿ ದೂರದಲ್ಲಿಥೈಲ್ಯಾಂಡಿನ ಸಮುತ್ ಸಾಂಗ್‌ಕ್ರಾಮ್ ಮೇಕ್ಲಾಂಗ್ ರೈಲ್ವೆ ಮಾರುಕಟ್ಟೆಇದೆ. ಇದು ಏಷ್ಯಾದ ಬೇರಾವುದೇ ದೊಡ್ಡ ಕಟ್ಟಡ ರಹಿತ ಮಾರುಕಟ್ಟೆಯಂತೆಯೇ ಕಾಣುತ್ತದೆ. ಉಷ್ಣವಲಯದ ಹಣ್ಣುಗಳು ಮತ್ತು ತರಕಾರಿಗಳು, ಲಿಚಿ(ಮಜ್ಜಿಗೆ ಹಣ್ಣು), ದುರಿಯನ್ (ಮುಳ್ಳು ಹಲಸು), ಕಣ್ಣಿಗೆರಾಚುವಂತೆ ಜೋಡಿಸಿರುವ ಬಣ್ಣದ ಮಾವುಗಳು, ವಿವಿಧ ಒಣ ಮಸಾಲೆ ಪದಾರ್ಥಗಳು, ಗಿಡ ಮೂಲಿಕೆಗಳು, ತಾಜಾ ಸಮುದ್ರದ ಆಹಾರಗಳು ಹಾಗೂ ಸ್ಥಳೀಯವಾಗಿ ಬಹುಜನಾಸಕ್ತಿಯ ಆಹಾರಗಳು ಈ ಮಾರುಕಟ್ಟೆಯಲ್ಲಿ ಲಭ್ಯವಿದೆ. ಜನ ಸಾಮಾನ್ಯರು ತಮ್ಮ ದಿನದ ಅವಶ್ಯಕತೆಗೆ ಬೇಕಿರುವ ಪದಾರ್ಥಗಳನ್ನು ಇಲ್ಲಿ ಖರೀದಿಸಬಹುದು.
ಈ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ಸೂರ್ಯತಾಪದಿಂದ ರಕ್ಷಿಸಿಕೊಳ್ಳಲು ಛತ್ರಿಗಳನ್ನು ಅಥವ ಮೇಲ್ಮರೆಯನ್ನು ಉಪಯೋಗಿಸುವುದು ಸಾಮಾನ್ಯ.ಈ ಛತ್ರಿಗಳು ಮತ್ತು ಮೇಲ್ಮರೆಗಳು ಅಡಿಯಲ್ಲಿ ಗಮನಿಸಿದರೆ, ರೈಲ್ವೆ ಹಳಿ ಕಾಣುತ್ತದೆ. ವ್ಯಾಪಾರಿಗಳು ತಮ್ಮ ಉತ್ಪನ್ನಗಳನ್ನು ಹಾಗೂ ತರಕಾರಿಗಳ ಬುಟ್ಟಿಯನ್ನು ಹಳಿಯ ಪಕ್ಕದಲ್ಲಿ ಹಾಗೂ ಹಳಿಗಳ ಮದ್ಯೆ ಸ್ಥಳ ವಿಂಗಡಿಸಿಕೊಂಡು ಜೋಡಿಸಿಟ್ಟಿರುತ್ತಾರೆ. ಖರೀದಿದಾರರು, ಅಲ್ಲಿನ ಹಳಿಗಳು ರೈಲುಓಡಾಟದ ಹಳಿಗಳಾದ ಕಾರಣ, ಜೀವ ಬಿಗಿಹಿಡಿದುಕೊಂಡು, ಅದರ ಅಕ್ಕಪಕ್ಕದಲ್ಲೇ ಸಾಮಾನು ಸರಂಜಾಮುಗಳನ್ನು ಖರೀದಿಸಬೇಕಾಗುತ್ತದೆ.
ಕಿವಿಗಡಚಿಕ್ಕುವ ಸೈರನ್ ಮೂಲಕ ರೈಲು ಬರುವ ಮುನ್ಸೂಚನೆ ಬರುತ್ತಿದ್ದಂತೆ, ಇಡೀ ಮಾರುಕಟ್ಟೆ ಕ್ಷಣ ಮಾತ್ರದಲ್ಲಿ ರೂಪಾಂತರಗೊಂಡು ಕಣ್ಮರೆಯಾಗುತ್ತದೆ. ನೆರಳಿಗೆ ಹರಡಿದ್ದ ಛತ್ರಿಗಳು, ಮೇಲ್ಮರೆಗಳು ಕ್ಷಣಮಾತ್ರದಲ್ಲಿ ಇಲ್ಲವಾಗುತ್ತದೆ.ರೈಲ್ವೆ ಹಳಿಯ ಪಕ್ಕದಲ್ಲಿ ಹಾಗೂ ಹಳಿಗಳ ಮಧ್ಯೆಜೋಡಿಸಿದ್ದ ಉತ್ಪನ್ನಗಳು, ತರಕಾರಿ ಬುಟ್ಟಿಗಳು ಕಣ್ಣೆವೆಯಿಕ್ಕುವುದರಲ್ಲಿ ಮಾಯವಾಗಿಬಿಡುತ್ತದೆ.ಖಾಲಿ ಹಳಿಗಳ ಮೇಲೆ ರೈಲು ಅನಾಯಾಸವಾಗಿ ಸರಾಗವಾಗಿ ಸಾಗಿ ಮುಂದೆ ಹೊರಟು ಹೋಗುತ್ತದೆ. ಆ ಕಡೆಯಿಂದ ಈ ತುದಿಯವರೆಗೂ ರೈಲು ಸಂಚರಿಸುವಾಗ ಮಾರುಕಟ್ಟೆ ಸ್ಥಗಿತವಾಗಿರುತ್ತದೆ. ಬಹುತೇಕ ವ್ಯಾಪಾರಿಗಳು ತಮ್ಮ ತಮ್ಮ ಮೇಲ್ಮರೆ ಹಾಗೂ ಛತ್ರಿಗಳ ಆಸರೆಯ ಕಂಬಗಳನ್ನು ಬಲವಾಗಿ ಹಿಂದಕ್ಕೆಎಳೆದು ಹಿಡಿಯುವಕಾರಣದಿಂದ, ವ್ಯಾಪಾರ ಮಾಡಲಾಗುವುದಿಲ್ಲ. ಅವರಎಲ್ಲಾ ಗಮನವು ಬರುತ್ತಿರುವ ರೈಲಿನ ಮೇಲೆ ಹಾಗೂ ತಮ್ಮ ಉತ್ಪನ್ನಗಳು ಸುರಕ್ಷತೆಯ ಕಡೆ ನೆಟ್ಟಿರುತ್ತದೆ. ಅದಕ್ಕಾಗಿ ಆ ಸಮಯದಲ್ಲಿ ಯಾವುದೇ ವ್ಯಾಪಾರ ವಾಹಿವಾಟು ಮಾಡದೆ ಸ್ಥಬ್ದಗೊಳಿಸುತ್ತಾರೆ.
ಈ ಹಳಿಗಳ ಮೇಲೆ ಸಂಚರಿಸುವ ರೈಲು ಸುಮಾರು ಗಂಟೆಗೆ ಹದಿನೈದು ಮೈಲಿ ವೇಗದಲ್ಲಿ ಚಲಿಸುತ್ತದೆ. ರೈಲು ಈ ಮಾರ್ಗದಲ್ಲಿ ಹಾದು ಹೋಗುವಾಗ ಕೆಲವೊಂದು ಕಡೆ ಇದರ ಬೋಗಿಗಳಿಗೆ ಹಣ್ಣುಗಳು, ತರಕಾರಿಗಳು ಎಲ್ಲವನ್ನೂ ಸವರಿಕೊಂಡು ಹೋಗುತ್ತದೆ. ರೈಲು ಮುಂದಕ್ಕೆ ಹೋದ ಕೆಲಗಳಿಗೆಯಲ್ಲೇ, ವ್ಯಾಪಾರಸ್ಥರು, ಎಷ್ಟು ವೇಗವಾಗಿ ತಮ್ಮ ಸಾಮಾನು ಸರಂಜಾಮುಗಳನ್ನು ಸುರಕ್ಷಿತವಾಗಿಸಿಕೊಂಡರೋ ಅಷ್ಟೇ ವೇಗದಲ್ಲಿ ಪುನರ್ ಸ್ಥಾಪಿಸಿ, ವ್ಯಾಪಾರ ಶುರುಮಾಡುತ್ತಾರೆ. ನಾಲ್ಕೈದು ನಿಮಿಷದ ಹಿಂದೆ ಏನೂ ಅಗಿಲ್ಲವೇನೋ ಎಂಬ ರೀತಿಯ ವರ್ತನೆ ಅವರಲ್ಲಿ ಕಂಡು ಬರುತ್ತದೆ.
ಅನಾದಿ ಕಾಲದಿಂದಲೂ, ತಲೆಮಾರುಗಳ ಕಾಲದಿಮದಲೂ ಈ ಜಾಗದಲ್ಲ್ಲಿ ಮಾರುಕಟ್ಟೆ ನಡೆದುಕೊಂಡು ಬಂದ ದಾಖಲೆಗಳಿವೆ. ಹೀಗಿದ್ದರೂ, 1905 ರಲ್ಲಿ ಈ ಮಾರುಕಟ್ಟೆಯ ಮದ್ಯೆರೈಲು ಹಳಿ ಹಾಕಲಾಯಿತು.ಇದರಿಂದ ಏನೂ ವ್ಯತ್ಯಾಸವಾಗೇ ಇಲ್ಲ ಎಂಬಂತೆ ವ್ಯಾಪಾರಸ್ಥರು ರೈಲು ಹಳಿಗಳ ನಡುವೆಯೇ ತಮ್ಮ ವ್ಯಾಪಾರವನ್ನು ಮುಂದುವರೆಸಿದ್ದಾರೆ. ಥೈಲ್ಯಾಂಡಿನ ಜನ ಈ ಸ್ಥಳವನ್ನು ತಲಾಡ್‌ರಾಮ್ ಹೂಪ್ ಮಾರ್ಕೆಟ್ ಎನ್ನುತ್ತಾರೆ. ಅಂದಲ್ಲಿ ಆಂಗ್ಲ ಭಾಷೆಯಲ್ಲಿ ಅಂಬ್ರೆಲಾ ಪುಲ್ಡೌನ್ ಮಾರ್ಕೆಟ್ ಎಂತಲೂ , ಕನ್ನಡದಲ್ಲಿ ಛತ್ರಿಯನ್ನು ಕೆಳೆಗಿಳಿಸುವ ಮಾರುಕಟ್ಟೆ ಎಂತಲೂಅರ್ಥ.
ಈ ಹಳಿಯಲ್ಲಿ ರೈಲು ಬಾನ್ ಲಾಮ್ ರೈಲ್ವೇ ನಿಲ್ದಾಣದಿಂದ (ಸಮುತ್ ಸಾಂಗ್‌ಕ್ರಾಮ್) ಮೇಕ್ಲಾಂಗ್ ನಿಲ್ದಾಣದವರೆಗೂ ಪ್ರತಿದಿನ ಏಳು ಬಾರಿ, ವಾರದ ಏಳು ದಿನವೂ ಸಂಚರಿಸುತ್ತದೆ.ರೈಲು ಬರುವ ಪ್ರತಿಬಾರಿಯೂ ಇಲ್ಲಿ ಮಾರುಕಟ್ಟೆ ಸ್ಥಗಿತವಾಗಿ ಮತ್ತೆ ಪುರಾರಂಭಗೊಳ್ಳುತ್ತದೆ. ಇಷ್ಟೆಲ್ಲಾ ಆದರೂ ಅಲ್ಲಿನ ಜನರಲ್ಲಾಗಲಿ ವ್ಯಾಪರಸ್ಥರಲ್ಲಾಗಲಿ ಗೊಣಗಾಟವಿಲ್ಲ. ಅವರೆಲ್ಲಾ ಇದಕ್ಕೆ ಒಗ್ಗಿ ಹೋಗಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮಾತ್ರ ಇದು ವಿಚಿತ್ರವಾಗಿ ಕಾಣುತ್ತದೆ. ಜೀವ ಭಯ ಸಹ ಕಾಡದೇ ಇರುವುದಿಲ್ಲ.
-ಕೆ.ವಿ.ಶಶಿಧರ
ಬಹಳ ಬಾರಿ ಬೇರೆಬೇರೆ ಪತ್ರಿಕೆಗಳಲ್ಲಿ ಈ ಮಾರುಕಟ್ಟೆ ಬಗ್ಗೆ ಓದಿದ್ದೆ. ನಿಮ್ಮ ಬರಹ ಚೆನ್ನಾಗಿದೆ.
DhanyavadagaLu
ಹೀಗೊಂದು ವಿಚಾರ ಹೊಸದು. ಇಂಟೆರೆಸ್ಟಿಂಗ್
ವಿಸ್ಮಯಕಾರಿ ವಿಚಾರ. ಅಷ್ಟು ಕಷ್ಟಪಟ್ಟು ಅಲ್ಲಿಯೇ ಯಾಕೆ ಮಾರಬೇಕು? ಮಾರುಕಟ್ಟೆಯನ್ನು ಸ್ಥಳಾಂತರಿಸಬಹುದಲ್ಲಾ ಅನಿಸಿತು.
Nija. modalanindalu alle maarukatte ittalla. adakke alle munduvresuddare.
dhanyavadagalu
ಬಹು ಕುತೂಹಲ, ವಿಸ್ಮಯಕಾರಿ ಮಾರುಕಟ್ಟೆ! ಜೀವದ ಹಂಗು ತೊರೆದು ಜೀವನೋಪಾಯ ಕಂಡುಕೊಂಡ ಈ ಮಂದಿ ನಿಜವಾಗಿಯೂ ಸಾಹಸಿಗರೇ ಸರಿ! ಉತ್ತಮ ಬರಹ.