ನಾಗರ ಪಂಚಮಿ ನಾಡಿಗೆ ದೊಡ್ಡದು….
ಶ್ರಾವಣ ಬಂತೆಂದರೆ ಹಿಂದೂಗಳಲ್ಲಿ ಒಂದೊಂದೇ ಹಬ್ಬಗಳು ಪ್ರಾರಂಭಗೊಳ್ಳುತ್ತವೆ.ಈ ನಿಟ್ಟಿನಲ್ಲಿ ನಾಗರಪಂಚಮಿ ಮೊದಲನೆಯದು.ಈ ಬಾರಿ ಇದೇ ಜುಲೈ 25 ಕ್ಕೆ ನಾಗರಪಂಚಮಿ. ಹಿಂದೂಗಳು ನಾಗಾರಾಧಕರು. ಏಕೆಂದರೆ ನಾಗನು ಸುಬ್ರಹ್ಮಣ್ಯ ಸ್ವಾಮಿಯ ಅನನ್ಯ ಸ್ವರೂಪ. ಗಣೇಶನ ಉದರ ಬಂಧವೂ ಹೌದು.ಶಿವನ ಕಂಠಾಭರಣ. ವಿಷ್ಣುವಿನ ತಲ್ಪ!ಶೇಷಶಯನನಲ್ಲವೇ?. ಕನ್ಯಾಕುಮಾರಿಯಿಂದ ಗೋಕರ್ಣದವರೆಗಿನ ಪರಶುರಾಮ ಕ್ಷೇತ್ರವನ್ನು ಹಿಂದಿನವರು ’ನಾಗಖಂಡ’ ಎಂದೂ ಹೇಳುತ್ತಿದ್ದರಂತೆ. ಯಾಕೆಂದರೆ..,ಈ ಭಾಗದಲ್ಲಿ ಅಲ್ಲಲ್ಲಿ ನಾಗಬನಗಳನ್ನು ಕಾಣಬಹುದಾಗಿದೆ. ಉತ್ತರಕರ್ನಾಟಕದಲ್ಲಿ ನಾಗರಪಂಚಮಿಯನ್ನು ಹೆಣ್ಣುಮಕ್ಕಳ ಹಬ್ಬವೆಂದೇ ಕರೆಯಲಾಗುತ್ತಿದೆ. ಇದಕ್ಕೊಂದು ಜನಪದ ಕಥೆಯೂ ಇದೆ.
ಪುರಾತನಕಾಲದಲ್ಲಿ ರೈತನೊಬ್ಬ ಹೊಲ ಉಳುತ್ತಿದ್ದಾಗ; ನೇಗಿಲಮೊನೆಗೆ ತಾಗಿ ನಾಗರಹಾವಿನ ನಾಲ್ಕೈದು ಮರಿಗಳು ಸತ್ತುಹೋದುವಂತೆ!.ಇದರಿಂದ ಸಿಟ್ಟಿಗೆದ್ದ ತಾಯಿ ನಾಗರಹಾವು ರೈತನ ಮನೆಗೆ ಬಂದು ಆತನನ್ನೂ ಆತನ ಹೆಂಡತಿಮಕ್ಕಳನ್ನೂ ಕಚ್ಚಿಕೊಂದು ಹಾಕಿತಂತೆ.ಅಷ್ಟುಮಾತ್ರವಲ್ಲದೆ ಮದುವೆಯಾಗಿ ಗಂಡನಮನೆ ಸೇರಿದ ರೈತನ ಮಗಳನ್ನೂ ಹುಡುಕಿಕೊಂಡು ಆಕೆ ಇರುವಲ್ಲಿಗೆ ಹೋದಾಗ ;ಆ ಮಗಳು ಮಣ್ಣಿನಿಂದ ನಾಗರಪ್ರತಿಮೆಯನ್ನುಮಾಡಿ ಅದಕ್ಕೆ ಭಕ್ತಿಯಿಂದ ಹಾಲೆರೆಯುತ್ತಿರುವುದನ್ನು ಕಂಡಿತು!.ಇದನ್ನು ನೋಡಿದ ತಾಯಿ ನಾಗರಹಾವಿನ ರೋಷ ಸ್ವಲ್ಪ ಮಟ್ಟಿಗೆ ಇಳಿಯಿತು. ಆದರೂ ರೈತನ ಮಗಳಲ್ಲಿ “ನಿನ್ನ ಜನಕ ನನ್ನ ಮರಿಗಳನ್ನೆಲ್ಲಾ ಕೊಂದದ್ದಕ್ಕಾಗಿ ಆ ಮನೆಯವರನ್ನೆಲ್ಲಾ ಕಚ್ಚಿ ಕೊಂದುಹಾಕಿದೆ” ಎಂದು ಹೇಳಿದಾಗ ;ರೈತನ ಮಗಳು ತವರಿನವರನ್ನೆಲ್ಲ ಕಳೆದುಕೊಂಡ ದುಃಖದಿಂದ ಅತ್ತು ಹೊರಳಾಡಿ,ಕಾಡಿ-ಬೇಡಿ ತನ್ನವರನ್ನೆಲ್ಲ ಬದುಕಿಸಿಕೊಡಬೇಕೆಂದು ಗೋಗರೆಯುತ್ತಾಳೆ!. ಆಕೆಯ ದೈನ್ಯತೆಗೆ ಕರಗಿದ ತಾಯಿ ನಾಗರ; ವಾಪಾಸು ರೈತನಮನೆಗೆ ಬಂದು ತಾನುಕಚ್ಚಿದ ವಿಷವನ್ನೆಲ್ಲ ಹೀರಿ ಅವರನ್ನು ಬದುಕಿಸುತ್ತದೆ!.ಸತ್ತುಹೋದ ತವರಿನವರನ್ನೆಲ್ಲ ಮಗಳು ನಾಗಪೂಜೆಮಾಡಿ ಬದುಕಿಸಿದ್ದರಿಂದ; ಈ ಹಬ್ಬಕ್ಕೆ ಹೆಣ್ಣುಮಕ್ಕಳನ್ನು ತವರಿಗೆ ಆಹ್ವಾನಿಸುವುದು ರೂಢಿಯಾಯ್ತು ಎನ್ನಲಾಗುತ್ತದೆ. ಐತಿಹ್ಯವೇನೇ ಇದ್ದರೂ ಉತ್ತರ ಕರ್ನಾಟಕದಲ್ಲಿ ’ಪಂಚಮಿ’ ಹಬ್ಬಕ್ಕೆ ಹೆಣ್ಣು ಮಗಳಂದಿರನ್ನು ತವರಿಗೆ ಕರೆಸುವುದು ಅವರು ವಿಶೇಷವಾಗಿ ನಾಗನಿಗೆ ಹಾಲೆರೆಯುವುದು ಇಂದಿಗೂ ಪ್ರಚಲಿತವಾಗಿದೆ. ತುಳುನಾಡಿನಲ್ಲಿ ಹೆಣ್ಣುಮಗಳು ಆಟಿಯಲ್ಲಿ ಒಂದು ದಿನವಾದರೂ ತವರಿನಲ್ಲಿ ಉಳಿದು ಬರಬೇಕೆಂಬ ನಂಬಿಕೆಯಿರುವುದು ಇದಕ್ಕೊಂದು ಕೊಂಡಿ!.
ಆಶ್ಲೇಷಬಲಿ:–ರಾಹುವಿಗೆ ಸರ್ಪ ಅಧಿದೇವತೆ.ಆದ್ದರಿಂದ ಯಾವುದೇ ಜಾತಕದಲ್ಲಿ ರಾಹುದೆಶೆಯಿದ್ದರೆ;ದೋಷ ನಿವಾರಣೆಗಾಗಿ ಆಶ್ಲೇಷಬಲಿ,ನಾಗಾರಾಧನೆ,ಸುಬ್ರಹ್ಮಣ್ಯ ಸೇವೆಗಳನ್ನು ಹೇಳುತ್ತಾರೆ. ಆಶ್ಲೇಷ ನಿತ್ಯನಕ್ಷತ್ರದಂದು ರಾತ್ರಿ ಮನೆಗಳಲ್ಲಿ ಆಶ್ಲೇಷಬಲಿ ಮಾಡುವುದು ರೂಢಿ. ಪೂಜೆಗೆ ಹಾಕಿದ ಮಂಡಲದಮೇಲೆ ಎಳೆ ತೆಂಗಿನಗರಿಗಳಿಂದ ಮಾಡಿದ ನಾನಾರೀತಿಯ ಸರ್ಪಗಳನ್ನು ಮಾಡಿ ನೇತಾಡಿಸುವುದನ್ನು ನೋಡಿದ್ದೇನೆ!. ಕುಂದಾಪುರ-ಉಡುಪಿಜಿಲ್ಲೆಯ ಕೆಲವು ಕಡೆ ನಾಗಪಾತ್ರಿಗಳೆಂಬ ಪುರೋಹಿತರು; ನಾಗಮಂಡಲ ರಚಿಸಿ ಸಿಂಗಾರ ಗುಚ್ಚಗಳನ್ನು ಹಿಡಿದುಕೊಂಡು ನರ್ತಿಸುತ್ತಾರೆ.ನಾಗವಾಸಿಸುವ ಹುತ್ತದ ಮೃತ್ತಿಕೆ ಚರ್ಮವ್ಯಾಧಿಗೆ ಔಷಧವೆಂಬ ನಂಬಿಕೆಯೂ ಇದೆ.ಇದಕ್ಕೆ ದೃಷ್ಟಾಂತವೇ ದಕ್ಷಿಣಕನ್ನಡ ಸುಳ್ಯತಾಲೂಕಿನಲ್ಲಿರುವ ಕುಕ್ಕೆ ಸುಬ್ರಹ್ಮಣ್ಯಕ್ಷೇತ್ರದಲ್ಲಿರುವ ಮೃತ್ತಿಕೆಯು ಬಹಳ ಮಹತ್ವ ಪಡೆದಿದೆ. ಅಂತೂ ಯಾವುದೇ ರೀತಿಯಿರಲಿ, ನಿಸರ್ಗಪ್ರೀತಿಯನ್ನು ಜಾಗ್ರತಗೊಳಿಸುವ ಹಬ್ಬವಿದು!.
ಆಹಾ ಘಮಘಮಃ- ನಾಗರಪಂಚಮಿಯಂದು ಸಂಪಿಗೆಹೂ,ಕೇದಗೆ,ಅರಸಿನಎಲೆ ವಿಶೇಷ. ಈ ಎಲ್ಲವುಗಳಲ್ಲಿ ಘಮಘಮ ಎನ್ನುವ ಸಾಮ್ಯತೆಯಾದರೂ ಒಂದಕ್ಕಿಂತ ಒಂದು ಭಿನ್ನ ಸುವಾಸನೆಯವು.ಬಾನಿನ ಪ್ರೀತಿಯ ಮಳೆಗೆ ಹಸಿರುಹೊದ್ದ ಪ್ರಕೃತಿಯಲ್ಲಿ ವಿಶೇಷ ನರುಗಂಪು ಸೂಸುವ ಸಂಪಿಗೆ, ಗಾಢಗಮಲಿನ ಕೇದಗೆ ಎಂದರೆ ನಾಗದೇವನಿಗೂ ಬಲುಪ್ರಿಯವಂತೆ!. ಹಾಗಾಗಿ ಪಂಚಮಿಯಂದು ಭಕ್ತರು ಹುಡುಹುಡುಕಿ ಈ ಹೂವುಗಳನ್ನು ಕಲೆಹಾಕಿ ಸಮರ್ಪಿಸುತ್ತಾರೆ.ಇನ್ನು ಅರಸಿನ ಎಲೆಗೆ ಈ ದಿನ ಭಾರೀ ಬೇಡಿಕೆ!. ಅರಸಿನ ಎಲೆಗೆ ಔಷಧಿಯ ಗುಣವೂ ಇದೆ.ಪ್ರತಿದಿನ ದೋಸೆಹುಯ್ಯುವ ಕರಾವಳಿಯವರಾದರೂ ಅಂದು ಅರಸಿನಎಲೆಯಲ್ಲಿ ಬೆಲ್ಲ+ಕಾಯಿ ಗೆಣಸಲೆ ಮಾಡುವವರೆ!!.ನಯವಾದ ಅಕ್ಕಿಹಿಟ್ಟನ್ನು ಅರಸಿನಎಲೆಗೆ ಸವರಿ,ಅದರೆಮೇಲೆ ಕಾಯಿಬೆಲ್ಲ ಮಿಶ್ರಣವನ್ನು ಹರಡಿ ಮಡಚಿಟ್ಟು ಇಡ್ಲಿ ಪಾತ್ರೆಯಲ್ಲಿ ಉಗಿಯಲ್ಲಿ ಬೇಯಿಸಿದರೆ;ಅದರ ಸುವಾಸನೆ,ರುಚಿ ಅಹಾಹ..!!!.
ನಕ್ಷತ್ರ ಆಕಾಶದಲ್ಲಿದೆಃ–ಪಾಡ್ಯ-ಯುಗಾದಿಪಾಡ್ಯ,ಬಿದಿಗೆ-ಸೋಮನ ಬಿದಿಗೆ,ತದಿಗೆ-ಅಕ್ಷತ್ತದಿಗೆ, ಚೌತಿ-ವಿನಾಯಕಚೌತಿ, ಪಂಚಮಿ-ನಾಗರಪಂಚಮಿ ಹೀಗೆ 15-16 ತಿಥಿಗಳ ಹೆಸರುಗಳೂ ಅವುಗಳ ವಿಶೇಷತೆಯೂ ಅಲ್ಲದೆ ನಿತ್ಯ ನಕ್ಷತ್ರದ ಹೆಸರುಗಳು, ಚಾಂದ್ರಮಾನ,ಸೌರಮಾನ ತಿಂಗಳುಗಳ ಹೆಸರುಗಳು, ಋತುಗಳು,ಅಯನಗಳು,ಪಕ್ಷಗಳು,ಯೋಗ,ಕರಣ ಹೀಗೆ ಇದೆಲ್ಲವನ್ನೂ ಮಗ್ಗಿಯ ಕೋಷ್ಟಕದ ಜತೆಗೆ ನಮಗೆ ನಾಲ್ಕ್ಯೈದು ವರ್ಷಪ್ರಾಯದಲ್ಲಿ ಅಪ್ಪ-ಅಮ್ಮ ಬಾಯಿಪಾಠ ಮಾಡಿಸುತ್ತಿದ್ದರು. ಇದಕ್ಕೆ ಮೀಸಲಾಗಿದ್ದ ಸಮಯವೆಂದರೆ; ಮುಸ್ಸಂಜೆಯ ಹೊತ್ತು. ನಾನು ದೊಡ್ಡವಳಾದಂತೆ ನನ್ನ ಕಿರಿಯರಾದ ತಮ್ಮ-ತಂಗಿಯರಿಗೆ ನಾನು ಕಲಿಸಬೇಕಿತ್ತು.
ಈಗಿನ ಮಕ್ಕಳಲ್ಲಿ ಕೇಳಿದರೆ.., ನಕ್ಷತ್ರ ಆಕಾಶದಲ್ಲಿದೆ!, ತಿಥಿ ವರ್ಷಕ್ಕೊಮ್ಮೆ ಗತಿಸಿಹೋದವರದ್ದು ಮನೆಯಲ್ಲಿ ಮಾಡುತ್ತಾರೆ!.ಆಯನವನ್ನೂ ದೇವಾಲಯಗಳಲ್ಲಿ ಮಾಡುತ್ತಾರೆ!.ಪಕ್ಷ ರಾಜಕೀಯ ಧುರೀಣರಲ್ಲಿ ಕೇಳಬೇಕು!!. ಹೀಗೆ ಎಷ್ಟೋ ಮಕ್ಕಳಲ್ಲಿ ಉತ್ತರ ಸಿಗುವುದು ಸುಳ್ಳಲ್ಲ. ಮಗ್ಗಿ ಅಥವಾ ಲೆಕ್ಕಾಚಾರಕ್ಕೆ, ಕ್ಯಾಲಿಕ್ಯುಲೇಟರ್ ಮೊಬೈಲಿನಲ್ಲಿದೆ.ಇದನ್ನು ಗಮನಿಸಿದಾಗ ಹಿಂದೆ ಬಾಯಿಪಾಠ ಹೇಳುತ್ತಿದ್ದ ಮುಸ್ಸಂಜೆಯ ಆ ನೆನಪುಗಳು ಮನದ ಮೂಲೆಯಿಂದ ಈಚೆಗೆ ಬಂದು ಅಣಕವಾಡುತ್ತಿವೆ!. ಈ ಎಲ್ಲ ಕಾರಣಗಳಿಂದ ನಾಗರಪಂಚಮಿಯಂಥಹ ವಿಶೇಷ ಹಬ್ಬಗಳು ಮುಂದಿನ ಪೀಳಿಗೆಗೆ ಮಹತ್ವ ಕಳೆದುಕೊಳ್ಳುತ್ತಿವೆಯೋ ಅನಿಸುವುದು ಸ್ವಾಭಾವಿಕ.
– ವಿಜಯಾಸುಬ್ರಹ್ಮಣ್ಯ,ಕುಂಬಳೆ.
ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ವಂದನೆಗಳು.
ಚೆನ್ನಾದ ನಿರೂಪಣೆ. ದಕ್ಷಿಣದ ಬಯಲು ಸೀಮೆಯವರಿಗೆ ನಾಗರಪಂಚಮಿ ವಿಶೇಷವಾದ ಹಬ್ಬವೇನಲ್ಲ. ಆದರೂ ಆ ಹಬ್ಬದ ಕುರಿತ ಹಾಡು, ಆಚರಣೆ ತಿಳಿದು ಖುಷಿಯಾಯಿತು…
ಚೆನ್ನಾಗಿದೆ ಲೇಖನ. ರೈತನ ಕುಟುಂಬ ಸತ್ತು ಬದುಕಿದ ಕಥೆ ಯನ್ನು ಮೊದಲ ಬಾರಿ ಕೇಳಿದ್ದು.
ಈ ಹಬ್ಬದ ಹಿನ್ನೆಲೆಯಾಗಿ ರೈತನ ಕುಟುಂಬ ಸತ್ತು ಬದುಕಿದ ಕಥೆ ಈಗಷ್ಟೆ ಗೊತ್ತಾಯಿತು. ಚೆಂದದ ನಿರೂಪಣೆ.
ನಾಗರಪಂಚಮಿ ಹಬ್ಬದ ಪೌರಾಣಿಕ ಹಿನ್ನೆಲೆ ಗೂತಿತ್ತು ಜಾನಪದ ಕಥೆ ಗೊತ್ತಿರಲಿಲ್ಲ ತಿಳಿಸಿ ದಕ್ಕೆ ವಂದನೆಗಳು ಮೇಡಂ.
ಮೊದಲ ಬಾರಿಗೆ ಈ ಕಥೆ ಓದಿದ್ದು… ಚೆನ್ನಾಗಿ ಬರೆದಿದ್ದೀರಿ ಅಕ್ಕ
ನಾಗರ ಪಂಚಮಿಯ ಮಹತ್ವ ಹಾಗೂ ಐತಿಹ್ಯವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು.
ಓದಿ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಹಾರ್ದಿಕ ವಂದನೆಗಳು.
ತಮ್ಮ ಲೇಖನ ಓದುತ್ತಿದ್ದಂತೇ ಅರಸಿನ ಎಲೆಯ ಗೆಣಸಲೆ ಪರಿಮಳ ಮೂಗಿಗೆ ಬಡಿಯಿತು..ಅಷ್ಟು ಚೆನ್ನಾಗಿದೆ ಲೇಖನ! ಪೂರಕ ಕಥೆ ಇನ್ನೂ ಚೆನ್ನಾಗಿದೆ.. ಧನ್ಯವಾದಗಳು ವಿಜಯಕ್ಕ.
ಧನ್ಯವಾದಗಳು ಶಂಕರಿ ಅಕ್ಕಾ.
ನಾಗ ಮತ್ತು ಸರ್ಪ ಎರಡು ಬೇರೆ ಬೇರೆ..ಭಗವದ್ಗೀತೆ ಯ ೧೦ ನೇ ಅಧ್ಯಾಯ ನೋಡಿ
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ