ಕವಿ ಕೆ.ಎಸ್.ನ ನೆನಪು 4: ಪುತಿನ ಹಾಗೂ ಕೆ ಎಸ್ ನ 

Share Button

ಕವಿ.ಕೆ.ಎಸ್.ನರಸಿಂಹಸ್ವಾಮಿ

ಪುತಿನ ಹಾಗೂ ಕೆ ಎಸ್ ನ ;ಭಿನ್ನಕಾವ್ಯಮಾರ್ಗದ ಆತ್ಮೀಯರು

ಭಿನ್ನಕಾವ್ಯಮಾರ್ಗವನ್ನು ಅನುಸರಿಸುತ್ತಿದ್ದರೂ ನಮ್ಮ ತಂದೆ ಹಾಗೂ ಪುತಿನ ಆತ್ಮೀಯ ಸ್ನೇಹವನ್ನು ಹೊಂದಿದ್ದರು.ಇಬ್ಬರಲ್ಲೂ ಒಂದು ವಿಷಯದಲ್ಲಿ ಸಾಮ್ಯತೆ ಇತ್ತು.ಅದೆಂದರೆ  ಇಬ್ಬರೂ ಅಕಡೆಮಿಕ್  ವಲಯದಿಂದಾಚೆ ರೂಪುಗೊಂಡ ಕವಿಗಳು.ಪುತಿನರವರು ಸೈನ್ಯದಲ್ಲಿ ಉದ್ಯೋಗದಲ್ಲಿದ್ದರೆ ,ನಮ್ಮತಂದೆ ಹೌಸಿಂಗ್ ಬೋರ್ಡ್ ನಲ್ಲಿ ಇದ್ದವರು.

ಇಬ್ಬರೂ ಸಮಾರಂಭಗಳಲ್ಲಿ ಅಲ್ಲದೆ ಖಾಸಗಿಯಾಗಿ ಅಪರರೂಪಕ್ಕಾದರೂ ಭೇಟಿಯಾಗುತ್ತಿದ್ದರು.ನಾವು ಜಯನಗರದ ನಾಲ್ಕನೆಯ ಟಿ ಬ್ಲಾಕ್ ನಲ್ಲಿ ವಾಸವಾಗಿದ್ದಾಗ ಅವರ ಮನೆ ಜಯನಗರ ನಾಲ್ಕನೆಯ ಬ್ಲಾಕ್ ನ ಹನ್ನೊಂದನೆಯ ಮುಖ್ಯ ರಸ್ತೆಯಲ್ಲಿ ನಮ್ಮ ಮನೆಯ ಸಮೀಪವೇ ಇತ್ತು.

ಒಮ್ಮೆ ಪುತಿನ ,ಗೊರೂರು ಹಾಗೂ ನಮ್ಮ ತಂದೆ ಮೂವರು ಮೇಲುಕೋಟೆಗೆ ಪ್ರವಾಸ ಹೋಗಿದ್ದನ್ನೂ,ಅಲ್ಲಿ ಬೆಟ್ಟದ ಮೇಲೆ ಗೊರೂರರು ಅಡುಗೆ ಮಾಡಿ ಬಡಿಸಿದ್ದ ಆತ್ಮೀಯ ಪ್ರಸಂಗವನ್ನೂ ನಮ್ಮ ತಂದೆ ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು.

ಒಮ್ಮೆ  ಪುತಿನ ಅವರು ಯಾರ ಬಳಿಯೋ “ಎಷ್ಟು ದಿವಸ  ಈ ಕವಿ ಹೆಂಡತಿಯ ವಿಚಾರವನ್ನೇ ಕಾವ್ಯದ ವಸ್ತು ಮಾಡಿಕೊಳ್ಳುತ್ತಾರಂತೆ. ಸ್ವಲ್ಪ ಬೇರೆ ವಿಷಯ ಗಮನಿಸಬಾರದೆ ? “ ಎಂದರಂತೆ. ಮೈಸೂರ ಮಲ್ಲಿಗೆಯ ಪ್ರಭಾವದಿಂದ ನಮ್ಮ ತಂದೆ ಹೊರಬರಲೆಂಬುದು ಪುತಿನ ಅವರ ಮಾತಿನ ಇಂಗಿತವಾಗಿತ್ತು ಎಂದು ತೋರುತ್ತದೆ. ಅದೇ ವ್ಯಕ್ತಿ ನಮ್ಮ ತಂದೆಯವರ ಹತ್ತಿರ ಬಂದು ಈ ವಿಷಯ ತಿಳಿಸಿದಾಗ “ಸರಿ,ಸರಿ ಈ ನರಸಿಂಹಚಾರರಿಗೆ ಕಿವಿ ಮಂದ ಎಂದುಕೊಂಡಿದ್ದೆ.ಮೂಗೂ ಸರಿ ಇಲ್ಲ ಎಂದು ಈಗ ಗೊತ್ತಾಯಿತು” . ಎಂದು ಪ್ರತಿಕ್ರಿಯಿಸಿದರಂತೆ ಕೆ ಎಸ್ ನ . ಮೈಸೂರ ಮಲ್ಲಿಗೆ ಇಡೀ ನಾಡಿಗೆ ಹಬ್ಬಿರುವಾಗ  ಇವರೇಕೆ ಹೀಗೆ ಎಂಬ ಭಾವನೆ ಇತ್ತೇನೊ!

ಆದರೆ ಪುತಿನ ದೀಪಲಕ್ಷ್ಮಿ ,ಹಂಸದಮಯಂತಿ ಮುಂತಾದ ಗೀತರೂಪಕಗಳು ರೇಡಿಯೋದಲ್ಲಿ ಪ್ರಸಾರವಾದಾಗ ಅವರ  ರಚನೆಯಲ್ಲಿನ ಗೇಯಗುಣವನ್ನು ಮನಸಾರೆ ಮೆಚ್ಚಿಕೊಂಡಿದ್ದರು ಕೆ ಎಸ್ ನ .

ಒಮ್ಮೆ ಇದ್ದಕ್ಕಿದ್ದಂತೆ ಬಾಕಿನ (ಪುತಿನ ರ ಸಮಗ್ರ ಕಾವ್ಯವನ್ನು ಪ್ರಕಟಣೆ ಮಾಡಿದ  ಸಾಹಸಿ )ಅವರನ್ನು ”ಅಯ್ಯಾ ಬಾಲಕೃಷ್ಣ , ನರಸಿಂಹಸ್ವಾಮಿ ಮನೆಗೆ ಒಂದು ದಿನ ಊಟಕ್ಕೆ ಹೋಗಬೇಕಲ್ಲಯ್ಯ,ಅವರ ಅನುಕೂಲ ಕೇಳಯ್ಯ “ಎಂದರಂತೆ.

ಬಾಕಿನ ಅವರು ಪುತಿನ ಅವರ ಇಂಗಿತವನ್ನು ನಮ್ಮ ತಂದೆಯವರಿಗೆ ತಿಳಿಸಿದಾಗ “ಅಗತ್ಯವಾಗಿ.ಆಗಲಿ ಅದಕ್ಕಿಂತ ಸಂತೋಷವಾದ ಸಂಗತಿ ಬೇರೆ ಯಾವುದಿದೆ.?ಈ ಭಾನುವಾರವೇ ಬರಲಿ,ಅವತ್ತು ಪಂಚಾಂಗದ ಪ್ರಕಾರ ನನ್ನ ಹುಟ್ಟುಹಬ್ಬ .ಅವರನ್ನು ಕರೆದುಕೊಂಡು ಬರುವ ಜವಾಬ್ದಾರಿ ನಿನ್ನದು “ಎಂದು ಬಾಕಿನ ಅವರಿಗೆ ತಿಳಿಸಿದರು.

ಯಾರ  ಆದೇಶಕ್ಕೂ ಕಾಯದೆ ಮನೆಯವರೆಲ್ಲ ಅಂದು ಮನೆಯಲ್ಲೇ ಇರಲು ತೀರ್ಮಾನಿಸಿದೆವು.

ಬಾಕಿನ  ಅವರು ಆ ದಿನ ತಮ್ಮ ಮೋಟಾರ್ ಬೈಕ್ ಅನ್ನು ಪುತಿನ ಅವರ ಮನೆಯ ಮುಂದೆ ನಿಲ್ಲಿಸಿ ಒಂದು ಆಟೋ ತರಲು ಹೊರಟಾಗ ಪುತಿನ “ಆಟೋ ಗೀಟೊ ಏನೂ ಬೇಡ,ನಡಿ ಬೈಕ್ ನಲ್ಲೇ “ಎಂದರಂತೆ .ಬಾಕಿನ ಅವರಿಗೆ ಈ ವಯಸ್ಸಿನಲ್ಲಿ ಹಿರಿಯರನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುವುದು ಹೇಗೆ ಎಂಬ ಅಳುಕು.ಅದನ್ನು ಗ್ರಹಿಸಿದ ಪುತಿನ ಅವರು” ನಡಿಯಯ್ಯ ಏನೂ ಆಗಲ್ಲ.ನಾನೂ ಮಿಲಿಟರಿನಲ್ಲಿ ಇದ್ದೋನು .” ಎನ್ನುತ್ತ ತಮ್ಮ ವಾಕಿಂಗ್ ಸ್ಟಿಕ್ ಸಮೇತ ಬೈಕ್ ಹತ್ತಿಯೇ ಬಿಟ್ಟರಂತೆ.

ಆಗಲೇ 86 ವರುಷ ಆಗಿದ್ದ ಪುತಿನ ಬೈಕ್ ನಲ್ಲಿ  ಬಂದದ್ದನ್ನು ಕಂಡು ನಮಗೆಲ್ಲರಿಗೂ ಆಶ್ಛರ್ಯ.

ಕವಿ.ಪು.ತಿ.ನರಸಿಂಹಾಚಾರ್

ಮನೆಯೊಳಗೆ ಬಂದು ಎಲ್ಲರನ್ನೂ ಪರಿಚಯ ಮಾಡಿಕೊಂಡರು.ನಮ್ಮ ತಾಯಿಯವರ ಹತ್ತಿರ ಮಾಡಿದ್ದ ಅಡುಗೆಯ ವಿವರ ತಿಳಿದುಕೊಂಡರು.

ಎಲ್ಲರೂ ಪುತಿನ ಅವರ ಪಂಕ್ತಿಯಲ್ಲೇ ಕೂತು ಊಟ ಮಾಡಿದೆವು.ಲೋಕಾಭಿರಾಮವಾಗಿ ಸರಸ ಸಂಭಾಷಣೆ ನಡೆಸುತ್ತ ತಮಗೆ ಬೇಕಾದುದನ್ನು ಹಿತ,ಮಿತವಾಗಿ ಹಾಕಿಸಿಕೊಂಡು ಸಂತಸದಿಂದ ಸವಿದರು.ಆ ಅವಧಿಯಲ್ಲಿ ಅವರು ತಮ್ಮ ಕಾವ್ಯಕ್ಕೆ  ಮತ್ತು ವಿಶೇಷವಾಗಿ ಹಳಗನ್ನಡ ,ಸಂಸ್ಕೃತಭೂಯಿಷ್ಟ ಕನ್ನಡಕ್ಕೆ ವಿರಾಮ ನೀಡಿದ್ದರು.ಅಂದು ಮನೆಯ ಹಿರಿಯಣ್ಣನಂತೆ ಎಲ್ಲರನ್ನೂ ಅವರು ಹರಸಿ ಹೊ ರಟದ್ದು ಇನ್ನೂ ನನ್ನ  ಮನದಲ್ಲಿ ಹಸಿರಾಗಿದೆ.

ನನ್ನ ಮದುವೆಯಲ್ಲೂ ಅವರು ಆಗಮಿಸಿ ನಮ್ಮಿಬ್ಬರನೂ ಆಶೀರ್ವದಿಸಿ ತಮ್ಮ ರಸಸರಸ್ವತಿ ಕೃತಿಯನ್ನು ಕೊಡುಗೆಯಾಗಿ ನೀಡಿದ್ದರು.

ನಮ್ಮ ತಂದೆಯವರೊಡನೆ ಆತ್ಮೀಯ ಬಾಂಧವ್ಯ ಹೊಂದಿದ್ದ ಸಹೃದಯರು ಪುತಿನ.

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=28562

-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ, ನಿವೃತ್ತ ಉಪ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು )

(ಮುಂದುವರಿಯುವುದು….)

6 Responses

  1. km vasundhara says:

    ನಿಮ್ಮ ಬರಹವನ್ನು ಅವಶ್ಯವಾಗಿ ಪುಸ್ತಕ ರೂಪದಲ್ಲಿ ತರಬೇಕು. ಕನ್ನಡದ ಸಹೃದಯರಿಗೆ ಹಿರಿಯ ಸಾಹಿತಿಗಳ ನಡೆನುಡಿ ಪರಿಚಯವಾಗಬೇಕು…

    • Hema says:

      ಹೌದು.ನನ್ನದೂ ಇದೇ ಅಭಿಪ್ರಾಯ.ಲೇಖನ ಸರಣಿ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ.

  2. ನಯನ ಬಜಕೂಡ್ಲು says:

    Sir , no words. ಅಷ್ಟು ಚೆನ್ನಾಗಿದೆ. ವಸುಂದರಾ ಮೇಡಂ ಹಾಗೂ ಹೇಮಕ್ಕ ಹೇಳಿದ ಮಾತುಗಳು ಹಾಗೂ ಅಭಿಪ್ರಾಯವೇ ನನ್ನದೂ ಕೂಡಾ. ಈ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರೆ ಮುಂದಿನ ತಲೆಮಾರಿಗೂ ಇಂತಹ ಅಪರೂಪದ ವಿಚಾರಗಳು ತಿಳಿಯಲು ಸಹಾಯಕ

  3. knmahabala says:

    ಧನ್ಯವಾದಗಳು
    .ಪುಸ್ತಕ ಪ್ರಕಟಣೆ ಮನಸ್ಸಿನಲ್ಲಿದೆ.ನೋಡೋಣ

  4. Krishnaprabha says:

    ಹೆಸರಾಂತ ಸಾಹಿತಿಗಳ ಮಕ್ಕಳಿಗೆ ಸಿಗುವ ಯೋಗ ಹಾಗೂ ಭಾಗ್ಯ… ಲೇಖನ ಸರಣಿ ಚೆನ್ನಾಗಿ ಮೂಡಿ ಬರುತ್ತಿದೆ

  5. ಶಂಕರಿ ಶರ್ಮ says:

    ತುಂಬಾ ಚೆನ್ನಾಗಿ ಮೂಡಿ ಬರುತ್ತಿರುವ ಈ ಸರಣಿ, ಪುಸ್ತಕ ರೂಪದಲ್ಲಿ ಆದಷ್ಟು ಬೇಗ ಜನ ಮನ ತಲಪಲಿ ಎಂಬ ಹಾರೈಕೆ ನನ್ನದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: