ಶಾಲೆ…ಮನೆ…ಪಾಠ
“ಅಮ್ಮ, ಕಳೆದ ವಾರ ಸೂರ್ಯಗ್ರಹಣ ಬಂತಲ್ಲಮ್ಮ, ನಿನ್ನೆ ಚಂದ್ರಗ್ರಹಣ ಬಂತಲ್ಲ. ಹಾಗಾದರೆ ಮೋಡಗ್ರಹಣ, ನಕ್ಷತ್ರ ಗ್ರಹಣ ಯಾವಾಗ ಬರುತ್ತಮ್ಮ?”, ಎಂದು ಮನೆಯ ಟೆರೇಸಿನಲ್ಲಿ ಬಟ್ಟೆ ಆರಿಸುತ್ತಿದ್ದ ನನ್ನನ್ನು ನನ್ನ ಪುಟ್ಟ ಮಗಳು ಆದ್ಯ ಆಕಾಶವನ್ನೇ ದಿಟ್ಟಿಸುತ್ತಾ ಕೇಳಿದಳು. “ಇಲ್ಲ ಮಗಳೇ, ನಮ್ಮ ಅನುಭವಕ್ಕೆ ಬರುವುದು ಚಂದ್ರ ಗ್ರಹಣ ಮತ್ತು ಸೂರ್ಯಗ್ರಹಣ ಮಾತ್ರ , ಮೋಡಗ್ರಹಣ, ನಕ್ಷತ್ರ ಗ್ರಹಣ ಅಂತೆಲ್ಲ ಏನಿಲ್ಲ ಪುಟ್ಟಿ” ಎಂದೆ. ಅದಕ್ಕವಳು, “ಮತ್ತೆ ಸೂರ್ಯ ಅಂದ್ರೆ ಒಂದು ನಕ್ಷತ್ರ ಅಂತ ಹೇಳಿದ್ದೆ” ಅಂದಳು. ಹೌದು. ಗ್ರಹಣದ ದಿವಸ ಅವಳಿಗೆ ಗ್ರಹಣ ಅಂದ್ರೆ ಏನು, ಹೇಗೆ ನಡೆಯುತ್ತದೆ ಎನ್ನವ ಪ್ರಕ್ರಿಯೆಯನ್ನು ಅವಳಿಗೆ ವಿವರಿಸಲು ಪ್ರಯತ್ನಿಸಿದ್ದೆ. ಅವಳಿಗೆ ಎಷ್ಟು ಅರ್ಥ ಆಯ್ತೋ! ಏನು ಉತ್ತರಿಸಲಿ ಎಂದು ಆಲೋಚಿಸುತ್ತಿದ್ದ ನನ್ನನ್ನು ಮತ್ತೆ ಪ್ರಶ್ನಿಸಿದಳು ಆದ್ಯ. “ಅಪ್ಪನ ಬಳಿ ಕೇಳು“, ಎಂದು ಇಕ್ಕಟ್ಟಿನಿಂದ ಪಾರಾಗಲು ಅಲ್ಲಿಂದ ಪಲಾಯನ ಮಾಡಿದೆ.
ಕೋವಿಡ್–19 ವಿಷಮಸ್ಥಿತಿಯಲ್ಲಿ ಮನೆಯ ಹೊರಗಡೆ ಕಾಲಿಡಲೂ ಭಯ. ಪ್ರತಿಯೊಂದು ಹೆಜ್ಜೆಯೂ ಅನುಮಾನದಿಂದಲೇ ಇಡಬೇಕಾದ ಪರಿಸ್ಥಿತಿ. ಹೀಗಿರುವಾಗ ಇನ್ನು ಮಕ್ಕಳ ಶಾಲೆಯ ಬಗ್ಗೆ ಮಾತೇ ಎತ್ತುವ ಹಾಗಿಲ್ಲ. ಆನ್ಲೈನ್ ಶಿಕ್ಷಣ ದೊಡ್ಡ ಮಕ್ಕಳಿಗೇ ಕಷ್ಟ ಎನಿಸುವಾಗ, ಪುಟ್ಟ ಪುಟ್ಟ ಮಕ್ಕಳ ಅವಸ್ಥೆಯಾದರೂ ಏನು! ಪೋಷಕರ ಒತ್ತಾಯಕ್ಕೆ ಕಂಪ್ಯೂಟರ್ ಮುಂದೆ ಕುಳಿತು ಬಲವಂತವಾಗಿ ಕಣ್ಣು ಕಿವಿ ಅರಳಿಸಿ ದೇಹವನ್ನು ಎಲ್ಲ ದಿಕ್ಕಿಗೂ ಬಳುಕಿಸುತ್ತಾ ಪಾಠ ಕೇಳುವ ಮಕ್ಕಳನ್ನು ನೋಡುವಾಗ ಖೇದವಾಗುತ್ತದೆ. ಆದರೆ ಅನಿವಾರ್ಯವಲ್ಲವೇ?
ಈ ವರ್ಷ ಆದ್ಯಳನ್ನು LKG ಗೆ ಸೇರಿಸಬೇಕಿತ್ತು. ಅಲ್ಲದೆ ಈ ವರ್ಷ ಅವಳ ಶಾಲಾ ಜೀವನದ ಪ್ರಾರಂಭದ ವರ್ಷವೂ ಆಗಿರುವುದರಿಂದ ನಾವು ನಮ್ಮ ಯೋಚನೆಯನ್ನು ಹಲವು ಬಾರಿ ತಕ್ಕಡಿಯಲ್ಲಿ ಅಳೆದು ತೂಗಿ ಮುಂದಿನ ವರ್ಷ ಯುಕೆಜಿಗೆ ಸೇರಿಸುವ ನಿರ್ಧಾರ ಮಾಡಿದೆವು. ಮನೆಯಲ್ಲೇ ಅವಳಿಗೆ ನಾನು ಅಕ್ಷರಾಭ್ಯಾಸ ಮಾಡುವುದೆಂದೂ ತೀರ್ಮಾನವಾಯ್ತು. ಅಲ್ಲಿಂದ ಆದ್ಯಳ ಶಾಲೆಮನೆ ಪಾಠ ಶುರು!
ಮನೆಯಲ್ಲೇ ತರಗತಿಯ ವಾತಾವರಣ ಸೃಷ್ಟಿಯಾಯಿತು. ಅಂತರ್ಜಾಲದ ಜಾಲತಾಣಗಳಲ್ಲಿ ಈಜಾಡಿ LKG ಯ ಪಠ್ಯಕ್ರಮ, ಕಲಿಸುವ ರೀತಿ–ನೀತಿಗಳ ಬಗ್ಗೆ ಅಧ್ಯಯನ ನಡೆಯಿತು. ಅದರ ಯೋಜನೆಯ ಟಿಪ್ಪಣಿಯೂ ತಯಾರಾಯ್ತು. ಪಠ್ಯಪುಸ್ತಕ ಹಾಗೂ ಬರೆಯುವ ಪುಸ್ತಕಗಳನ್ನು ಆನ್ಲೈನ್ ಮೂಲಕ ತರಿಸಿಯೂ ಆಯಿತು. ಪುಸ್ತಕಗಳ ಕ್ವಾರಂಟೈನ್ ಕಾಲ ಮುಗಿದ ನಂತರ ಪುಸ್ತಕಗಳಿಗೆ ಬೈಂಡ್ ಹಾಕಿ, ಲೇಬಲ್ ಹಚ್ಚುವ ಸಂಭ್ರಮ. ಇಷ್ಟೆಲ್ಲಾ ಆದ ಮೇಲೆ ಹೊಸ ಪುಸ್ತಕಗಳಲ್ಲಿ ಬರೆಯುವ ಓದುವ ತವಕ. ಸಮಯದ ನಿಗದಿ ಮಾಡಿ ಪಾಠ ಮಾಡಲು ಹೊರಟರೆ, ಮನೆಯ ಕೆಲಸಗಳೆಲ್ಲವೂ ಅಲ್ಲಲ್ಲೇ ಉಳಿದುಬಿಡುತ್ತಿದ್ದವು. ಹಾಗಾಗಿ ಮನೆಯ ಕೆಲಸದ ಜೊತೆಜೊತೆಗೆ ಶಾಲೆಯ ಚಟುವಟಿಕೆಗಳ ಪ್ರಯೋಗ ಶುರುವಾಯ್ತು.
ಅಡಿಗೆ ಮಾಡುವಾಗ ತರಕಾರಿ, ಹಣ್ಣುಗಳ ಬಗ್ಗೆ ಮಾತನಾಡುತ್ತಿದ್ದೆ, ಅವಳಿಗೆ ಒತ್ತಡ ಹಾಕದೆ, ಅವಳ ಜೊತೆ ಆಡುತ್ತಾ ಹಾಡುತ್ತಾ ಕೆಲಸವನ್ನೂ ಮಾಡತೊಡಗಿದೆ. ಅಕ್ಷರಗಳ ಬಗ್ಗೆ, ಶಬ್ದೋಚ್ಛಾರಗಳ ಬಗ್ಗೆ, ಅಂಕೆ ಸಂಖ್ಯೆಗಳ ಬಗ್ಗೆ ಕಲಿಸತೊಡಗಿದೆ. ‘ಐದು– ಒಂದು‘- ಐವತ್ತೊಂದು ಆದರೆ ‘ಐದು–ಸೊನ್ನೆ‘ – ಐವತ್ತು ಸೊನ್ನೆ ಆಗಬೇಕಲ್ಲವೇ ಎನ್ನುವುದು ಅವಳ ವಾದ. ‘ಹಾಲು ನೀರನ್ನು ಯಾಕೆ ‘ಕೆಜಿ‘ಯಲ್ಲಿಯಾಕೆ ಅಳೆಯುವುದಿಲ್ಲ? ಜೇನುತುಪ್ಪ ಕೆಜಿಯಲ್ಲೇಕೆ ಅಳೆಯುತ್ತಾರೆ?’ ಎಂಬ ಪ್ರಶ್ನೆ ಕೇಳುತ್ತಲೇ ‘ಸೂರ್ಯ ಯಾಕೆ ಬ್ರಹ್ಮಾಂಡದಲ್ಲಿರುವುದು? ನಾವೇಕೆ ಇಲ್ಲಿ?’ ಎಂದು ಬ್ರಹ್ಮಾಂಡಕ್ಕೆ ನೆಗೆದು ಇನ್ನೊಂದು ಪ್ರಶ್ನೆ ಎಸೆಯುತ್ತಾಳೆ. ಅವಳಲ್ಲಿ ಮೂಡುತ್ತಿದ್ದ ಸಹಜ ಕುತೂಹಲವನ್ನು ಸಂಭಾಳಿಸುವುದು ಒಮ್ಮೊಮ್ಮೆ ಸವಾಲಾಗಿ ಪರಿಣಮಿಸುತ್ತಿತ್ತು. ಏಕೆಂದರೆ ಮಗುವಿನ ಆಲೋಚನಾ ಮಟ್ಟಕ್ಕೆ ನಾವು ಇಳಿದು, ಮಗುವಿಗೆ ಅರ್ಥವಾಗುವಂತೆ ವಿವರಿಸುವುದು ಅಷ್ಟು ಸುಲಭವಲ್ಲ. ಆಗೆಲ್ಲ ಅನಿಸುತ್ತಿತ್ತು ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಯ ಶಿಕ್ಷಕರ ತಾಳ್ಮೆ,ಸಂಯಮ ಮೆಚ್ಚಬೇಕಾದದ್ದು ಎಂದು.
ಮೊನ್ನೆ ಹಾಗೆಯೇ ಆಯಿತು. ಮಲಗಿಸುವಾಗ ಶ್ರೀರಾಮನ ಕಥೆ ಹೇಳುತ್ತಿದ್ದೆ. ‘ತ್ರೇತಾಯುಗದಲ್ಲಿ ದಶರಥನಿಗೆ ಮೂವರು ಹೆಂಡತಿಯರಿದ್ದರು. ಕೌಸಲ್ಯೆ, ಸುಮಿತ್ರೆ ಮತ್ತು ಕೈಕೇಯಿ.’ ಎಂದು ಹೇಳುತ್ತಿದ್ದಾಗ ಅವಳು ಕೇಳಿದಳು, “ಆಗ ನಾವೆಲ್ಲ ಇರ್ಲಿಲ್ವಾ ಅಮ್ಮ?” “ಇಲ್ಲ, ಇದು ಬಹಳ ಹಿಂದಿನ ಕಾಲದ ಕಥೆ “, ಎಂದೆ. “ಆದ್ರೆ ಸುಮಿತ್ರ ಆಂಟಿ ಮಾತ್ರ ಇದ್ದದ್ದಾ ಅಮ್ಮ? ” ಕೇಳಿದಳು ಮುಗ್ಧೆ. ಸುಮಿತ್ರ ಆಂಟಿ ಎಂದರೆ ಅವಳ ಅಜ್ಜಿಮನೆಗೆ ಕೆಲಸಕ್ಕೆ ಬರುತ್ತಿದ್ದವಳು!
‘ಅಮ್ಮ, ನೆಲದಲ್ಲಿ ಟೈಲ್ಸ್ ಯಾಕೆ ಸ್ಲೀಪಿಂಗ್ ಲೈನ್ , ಸ್ಟ್ಯಾಂಡಿಂಗ್ ಲೈನ್ ಹಾಗೆ , ಚೌಕ ಚೌಕ ಇದೆ. ಸ್ಲ್ಯಾಂಟಿಂಗ್ ಲೈನ್ ಯಾಕಿಲ್ಲ?” ಎಂದು ತಾನು ಕಲಿತಿದ್ದನ್ನು ತನ್ನ ಸುತ್ತಮುತ್ತ ನೋಡುತ್ತಾಳೆ, ಗಮನಿಸುತ್ತಾಳೆ. ಇದು ಒಳ್ಳೆಯ ವಿಷಯವೇ. ಮನೆಯಲ್ಲಿರುವ ಪ್ರತಿಯೊಂದು ವಸ್ತುವಿನಲ್ಲೂ, ಆಕಾರಗಳನ್ನು ಗಮನಿಸುತ್ತಾ, ಪ್ರಶ್ನಿಸುತ್ತಾ ಕನ್ನಡ, ಇಂಗ್ಲಿಷ್ ಭಾಷಾಂತರವೂ ಮಧ್ಯೆ ಮಧ್ಯೆ ಮಾಡುವಾಗ ಮನೆಯೇ ಶಾಲೆಯಾದದ್ದು ಅರಿವಾಗುತ್ತದೆ. ಮರೆತು ಹೋದ ಹಳೆಯ ಶಿಶುಗೀತೆಗಳನ್ನು ಮಿದುಳಿಗೆ ಕೈ ಹಾಕಿ ತೆಗೆಯುವಾಗ ಅಬ್ಬಾ! ಅದೆಷ್ಟು ಕಷ್ಟ!
ಬರೀ ಪಾಠವೇ? ಅಭಿನಯ ಗೀತೆ, ಕತೆ, ಚಿಕ್ಕ ಪುಟ್ಟ ಆಟಗಳು, ಚಟುವಟಿಕೆಗಳು ಕೂಡ ನಡೆಯಬೇಕಲ್ಲವೇ? ಮನೆಯ ನೆಲದಲ್ಲಿರುವ ಚೌಕಗಳಲ್ಲಿ ಕುಂಟಾಬಿಲ್ಲೆ, ಕಪ್ಪೆ ಜಿಗಿತ ಆಟಗಳು ನಾಯಿಮರಿ, ಒಂದು ಎರಡು ಬಾಳೆಲೆ ಹರಡು, ಇತ್ಯಾದಿ ಶಿಶುಗೀತೆಗಳು, ಕಾಗೆ ಗುಬ್ಬಿ ಕತೆ, ಜಾಣ ಕಾಗೆಯಂತಹ ಕತೆಗಳು ಎಲ್ಲವುಗಳ ಹಾಜರಿಯಿಂದ ನಾನು ಕೂಡ ಮತ್ತೆ ಕಲಿಯಲು ಶುರುಮಾಡಿದ್ದು ಸುಳ್ಳಲ್ಲ. ದಿನ ನಿತ್ಯದ ಯೋಗಾಭ್ಯಾಸಕ್ಕೆ ಸಾಥ್ ಕೊಡುವ ಆದ್ಯ ತನ್ನ ಆಟದ ಬೊಂಬೆಗಳಿಗೆ ಗುರುವಾಗಿ ಕಲಿಸುತ್ತಾ ಕೈ ಕಾಲು ಮುರಿದದ್ದೂ ಸತ್ಯವೇ.
ಆದ್ಯಳಿಗೆ ಹೊಸ ಪುಸ್ತಕಗಳಲ್ಲಿ ಬರೆಯುವ ಹುಮ್ಮಸ್ಸು. ಬಣ್ಣ ಬಣ್ಣದ ಚಿತ್ರಗಳನ್ನು ನೋಡುವ ಕುತೂಹಲ. ಪುಟ ತಿರುವಿದಷ್ಟು ಮತ್ತಷ್ಟು ಹೊಸ ಚಿತ್ರಗಳು ಅವಳ ಪಾಲಿಗೆ. ಪ್ರತಿದಿನವೂ ಹೊಸದನ್ನು ತಿಳಿಯುವ ಕಾತರ, ಆತುರ. ಬಣ್ಣ ಬಣ್ಣದ ಪೆನ್ಸಿಲ್ಗಳ ಮೊನೆ ಚೂಪು ಮಾಡಿ ಅದರ ಕಸದಲ್ಲಿ ಸಾರು ಸಾಂಬಾರು ತಯಾರಿಸಿ ಬೊಂಬೆಗಳಿಗೆ ಉಣಬಡಿಸುವ ಅವಳ ಆಟಕ್ಕೆ ಬೇರೆ ಜೊತೆಗಾರರಿಲ್ಲ. ಬೇಕೆಂದೇ ತಪ್ಪು ಬರೆದು ರಬ್ಬರ್ ನಲ್ಲಿ (eraser )ಒರೆಸುವ ಆಟಕ್ಕೆ ಎಷ್ಟು ಬಾರಿ ಗದರಲಿ? ಶುಭ್ರವಾದ ಬಿಳಿಯ ಹಾಳೆಯನ್ನು ಒರೆಸಿ ಒರೆಸಿ ಹರಿಯುವಾಗ ಆಗಸದಲ್ಲಿ ಕರಿಮೋಡ ತುಂಬಿ ಮಳೆ ತಂದ ಹಾಗೆ ಕಾಣಿಸುತ್ತದೆ. ಕೊನೆಗೂ ಹತ್ತಾರು ಹರಿಕತೆಗಳು ಮುಗಿದು ದಮ್ಮಯ್ಯ ದಕ್ಕಯ್ಯಾ ಎಂದು ಬರೆದು ಮುಗಿಸುವಾಗ ಏನೋ ಮಹಾ ಸಾಧನೆ ಮಾಡಿದಂತೆ ಭಾವ!
ಆದರೂ ಆದ್ಯಳಿಗೆ ಶಾಲೆಯ ನೆನಪಾಗುತ್ತದೆ. ಪುಸ್ತಕಗಳನ್ನು ಚೀಲದಲ್ಲಿ ತುಂಬಿ, ಹೆಗಲಿಗೇರಿಸಿ ಕನ್ನಡಿಯ ಮುಂದೆ ವಯ್ಯಾರ ಮಾಡುತ್ತಾ ಒಂದಷ್ಟು ಹೊತ್ತು ಮುದ್ದು ಮೊಗದ ಹಾವಭಾವಗಳನ್ನು ಬದಲಿಸುತ್ತಾ ಕೋಣೆಯಿಂದ ಕೋಣೆಗೆ ಓಡುವ ಅವಳ ಆಟದಲ್ಲಿ ಅವಳು ಶಾಲೆಯನ್ನು “ಮಿಸ್” ಮಾಡಿಕೊಳ್ಳುವುದನ್ನು ವ್ಯಕ್ತಪಡಿಸುತ್ತಾಳೆ. ಅವಳ ಶಾಲೆಯ ಆಟದಲ್ಲಿ ಅವಳ ಜೊತೆ ಮಕ್ಕಳ ಹೆಸರುಗಳನ್ನು ತನ್ನ ಬೊಂಬೆಗಳಿಗೆ ಇಟ್ಟು‘ ಅ ಅರಸ ಆ ಆನೆ..’ ಎಂದು ನನ್ನನ್ನು ಅನುಕರಿಸುತ್ತಾಳೆ. ನಾವು ಅವಿತು ನೋಡುವುದು ಗೊತ್ತಾದಾಗ ಅವಳು ನಾಚುವ ಚಂದ ಬಣ್ಣಿಸಲಾಗದು!
“ಅಮ್ಮ, ಯಾವಾಗ lockdown ಮುಗಿಯುತ್ತದೆ? ಯಾವಾಗ ಕೊರೋನಾ ಮುಗಿಯುತ್ತದೆ? ನಾನು ಯಾವಾಗ ಶಾಲೆಗೆ ಹೋಗುವುದು?” ಎಂಬ ಅವಳ ನಿತ್ಯದ ಪ್ರಶ್ನೆ ಎಲ್ಲರ ಪ್ರಶ್ನೆಯೂ ಆಗಿರುವಾಗ ಉತ್ತರ ಯಾರು ಕೊಡಬಲ್ಲರು! ಮನೆಯೇ ಮೊದಲ ಪಾಠಶಾಲೆಯೇನೋ ಸರಿ. ಆದರೀಗ ನಂತರದ ಶಾಲೆ ಕೂಡ ಮನೆಯೊಳಗೇ ಕೂತಿದೆ. ಹಾಗೋ ಹೀಗೋ ಒಟ್ಟಿನಲ್ಲಿ ಹೇಗೋ ಶಾಲೆಮನೆ ಪಾಠದ ವ್ಯವಸ್ಥೆ ನಡೆಯುತ್ತಿದೆ!
-ಸ್ವಪ್ನ
Nice one akka
ಧನ್ಯವಾದಗಳು.
ಧನ್ಯವಾದಗಳು.
ಇವತ್ತಿನ ಪರಿಸ್ಥಿತಿ ದೇಶ, ಪರದೇಶ ಇಡೀ ವಿಶ್ವದ ವಿದ್ಯಾರ್ಥಿ ಸಮುದಾಯಕ್ಕೊಂದು ಸವಾಲೇ ಆಗಿದೆ. ಬರಹದ ತುಂಬ ಮಗುವಿನ ಮುಗ್ಧತೆ ಕಣ್ಣಿಗೆ ಕಟ್ಟುವಂತಿದೆ. Very nice.
ಧನ್ಯವಾದಗಳು.
Good one
ಧನ್ಯವಾದಗಳು.
ಬಹಳ ಚೆನ್ನಾಗಿ ಬರೆದಿರಿ
ಧನ್ಯವಾದಗಳು.
ಆದ್ಯಾಳ ಪ್ರಶ್ನೆಗಳು ನನಗೆ ಯಾವತ್ತೂ ಹೊಳೆದಿಲ್ಲವಲ್ಲ!! ಚುರುಕಾಗಿದ್ದಾಳೆ ನಮ್ಮ ಆದ್ಯ. ಉತ್ತಮ ಬರಹ. Happy that you are back to your writing world.
ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಇರಲಿ.
ಮಕ್ಕಳು ಕೇಳುವ ಮುಗ್ದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡುವುದು ಹೆತ್ತವರು ಎದುರಿಸುವ ಸವಾಲು
ನಿಜ. ಮಕ್ಕಳ ಪ್ರಶ್ನೆಗಳೇ ಹಾಗೆ.
ಧನ್ಯವಾದಗಳು.
ಮಕ್ಕಳ ಪ್ರತಿಯೊಂದು ಪ್ರಶ್ನೆಗಳು ಪ್ರತಿಯೊಂದರ ಮೇಲಿರುವ ಕುತೂಹಲವನ್ನು ತೋರಿಸುತ್ತದೆ…
ಸರಿಯಾಗಿ ಹೇಳಿದಿರಿ.
ನಿಮ್ಮ ಮುಗ್ಧ ಆದ್ಯಳ ಪ್ರಶ್ನೆಗಳು ನಿಜಕ್ಕೂ ಕುತೂಹಲಕಾರಿಯಾಗಿವೆ. ಪುಟ್ಟ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ತಿಣುಕಾಡಬೇಕಾಗುವುದೂ ಸತ್ಯ. ಇದ್ಯಾವಾಗ ಮುಗಿದು ಮೊದಲಿನಂತಾಗುವುದು ಎಂಬುದು ಅವಳಂತೆ ಎಲ್ಲರ ಪಾಲಿನ ಯಕ್ಷಪ್ರಶ್ನೆ..ಚಂದದ ಬರಹ.
ಧನ್ಯವಾದಗಳು
ಧನ್ಯವಾದಗಳು
Haha Aadhya is very intelligent I think.. nice write up swapna. Keep writing.