ಸಂವಾದ ಜಲಚರಗಳ ಜೊತೆ
ಬಣ್ಣಬಣ್ಣದ ಮೀನು ಇತ್ಯಾದಿ ಜಲಚರ
ಎಷ್ಟು ಸುಂದರ ನಾ ಕಂಡ ಆ ಪರಿಸರ
ಜಾತಿ ಹಲವಾದರೂ ಒಂದೆಡೆ ಬಿಡಾರ
ವಿಸ್ಮಿತಳಾದೆ ಕಂಡು ಆ ದೃಶ್ಯ ಮನೋಹರ
ಅಲ್ಲಿತ್ತು ವಿವಿಧತೆಯಲ್ಲಿ ಏಕತೆ
ಮನಸೂರೆಗೊಳಿಸಿತ್ತು ಅಲ್ಲಿಯ ಸಾಮ್ಯತೆ
ತಮ್ಮಯ ಲೋಕಕ್ಕೆ ಸ್ವಾಗತಕೋರಿ ಆರಂಭಿಸಿತು ಮಾತುಕತೆ
ನೀವಿಲ್ಲಿ ಅತಿಥಿ ನಿಮ್ಮ ಕ್ಷೇಮ ನಮ್ಮ ಆದ್ಯತೆ
ಬಾ ನಮ್ಮ ಲೋಕ ತೋರುವೆ ಎಂದೆನ್ನ ಕರೆದೊಯ್ಯಿತು
ಮನೆಗೆ ಬಂದ ಅತಿಥಿ ಸುತ್ತ ಹರಿದಾಡಿ ಸ್ನೇಹ ಬೆಳೆಸಿತು
ಅಲ್ಲಿ ಜಾತಿಯ ಜಗಳವಿಲ್ಲ ಕೋಮಿನ ಕೂಗಿಲ್ಲ
ಅಧಿಕಾರದ ಹಸಿವಿಲ್ಲ ನಾಯಕತ್ವದ ದುರಾಸೆಯ ನೆರಳಿಲ್ಲ
ನಾನೆಂಬ ಅಹಂ ಇಲ್ಲ ನಾವೆಂಬ ಉದಾತ್ತಭಾವವೇ ಎಲ್ಲ
ನೀರಿನ ಭಯವಿದ್ದ ನನಗೆ ನೀರಿಗಿಳಿಯಲು ಮನಸ್ಸು ಇಬ್ಬಂದಿ
ಧೈರ್ಯ ಮಾಡದಿದ್ದರೇ ಕಳೆದುಕೊಳ್ಳುತಿದ್ದೆ ಅಪ್ಯಾಯಮಾನ ಸಂಬಂಧಿ
ಮರಳುವ ಹೊತ್ತಾದಾಗ ಮನಸು ಮುದುಡಿತು
ಕ್ಷಣದಲ್ಲೇ ದಡದಲ್ಲಿದ್ದ ನನ್ನವರ ಪ್ರೀತಿ ಸೆಳೆಯಿತು
ಮರಳಿ ಬರುವಾಗ ಜಲಚರಕ್ಕೆ ನಮ್ಮ ಲೋಕಕ್ಕೆ ಕರೆಯೋಲೆ ಕೊಟ್ಟೆ
ಬಂದ ಉತ್ತರ ಕೇಳಿ ಆಶ್ಚರ್ಯಪಟ್ಟೆ
ನಿನ್ನ ಲೋಕದಲ್ಲಿ ಸ್ನೇಹ ಪ್ರೀತಿ ಸಮಾನತೆಯಿಲ್ಲ
ಎಲ್ಲೆಡೆ ಜಾತಿ ಪಂಗಡ ಎಂಬುದಿದೆಯಲ್ಲ
ನೀ ನನ್ನ ಲೋಕಕ್ಕೆ ಬಂದು ಕ್ಷೇಮವಾಗಿ ಹಿಂತಿರುಗುತ್ತಿರುವೆ
ನಾ ನಿನ್ನ ಲೋಕಕ್ಕೆ ಬಂದರೆ ಯಾರಿಗೋ ಆಹಾರವಾಗುವೆ
ತಿಳಿಸಿತು ವಿರೋಧಿಗಳ ನಡುವೆ ಇದ್ದು ಬದುಕು ಮಾಡು
ಪಲಾಯನವಾದ ನೀನೆಂದು ದೂರ ಮಾಡು
ನೀನೆಂದು ಒಂಟಿ ಅಲ್ಲ ನಿನಗಿಂತ ಜೊತೆ ಬೇರಿಲ್ಲ
ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು
ಹತ್ತಿರದವರೆ ಎಸೆಯುವರು ಮೊದಲ ಕಲ್ಲು
ನೆನೆ ಆ ಪುರಂದರದಾಸರ ಉಕ್ತಿ
ನಿಂದಕರಲ್ಲಿಡು ಭಕ್ತಿ
ಅವರಿದ್ದರೇ ನಿನಗೆ ದೊರಕುವುದು ಮುಕ್ತಿ
ಕಲಿಸುವರು ಹೋರಾಟದ ಯುಕ್ತಿ
ತುಂಬುವರು ಸಹನೆಯಾ ಶಕ್ತಿ
ಉಂಡೂಹೋದ ಕೊಂಡೂಹೋದ ಎಂಬ ನುಡಿ ಕೇಳಿದ್ದೆ
ಸ್ನೇಹದ ಜೊತೆ ಜೀವನದ ಪಾಠ ಕಲಿತಿದ್ದೆ
– ಲತಾಪ್ರಸಾದ್ , ಬೆಂಗಳೂರು
ತುಂಬಾ ಅರ್ಥಪೂರ್ಣ ಕವನ.ಇದರಲ್ಲಿ ಜಾತಿ ಧರ್ಮಗಳ ಆಚೆ ನಿಂತ ಜಲಚರ ಪ್ರಾಣಿಗಳು ಮಾನವೀಯ ನೆಲೆಯಲ್ಲಿ ಬದುಕುತ್ತಿವೆ. ಸುಪರ್ ಕವನ.ಧನ್ಯವಾದಗಳು
ಧನ್ಯವಾದಗಳು
ಸೊಗಸಾಗಿದೆ. ಜಗದ ಸತ್ಯವನ್ನು ವಿಭಿನ್ನ ಶೈಲಿಯಲ್ಲಿ ಅನಾವರಣ ಗೊಳಿಸಲಾಗಿದೆ.
ಸ್ವಾರ್ಥಿ ಮಾನವನ ಕೊಳಕು ಮುಖದ ಪರಿಚಯದೊಂದಿಗೆ, ನಿಸ್ವಾರ್ಥಿ, ಮುಗ್ಧ ಜಲಚರದಂತಹ ನಿಸರ್ಗ ಜೀವಿಗಳ ಕೋಮಲ ಭಾವನೆಗಳ ತೊಳಲಾಟ ಎದ್ದು ಕಾಣುವ ಸೊಗಸಾದ ಕವಿತೆ.. ಧನ್ಯವಾದಗಳು.