ಮಕ್ಕಳ ಸ್ಕೂಲು ಮನೇಲಲ್ವೇ…
ಒಂದು ಬೇಸಗೆ ರಜಾದಿನದಲ್ಲಿ ನಡೆದ ಘಟನೆ. ಸಂಜೆ ಸುಮಾರು 6.30 ರ ಸಮಯ. ಒಳಗೆ ಯಾವುದೋ ಕೆಲಸದಲ್ಲಿ ತೊಡಗಿದ್ದೆ. ಮನೆಯ ಮುಂದೆ ಬೀದಿಯಲ್ಲಿ ಮಕ್ಕಳು ಆಟವಾಡುತ್ತಿದ್ದರು. ಇದ್ದಕ್ಕಿದ್ದಂತೆ ನನಗೆ ಠಳ್ ಎಂಬ ಶಬ್ಧ ಮುಂದುಗಡೆಯ ರೂಮಿನಿಂದ ಕೇಳಿಬಂತು. ಏನಾಯಿತೆಂದು ಹೊರಬಂದ ನನಗೆ ವೆರಾಂಡಾದ ಕಿಟಕಿಯ ಗಾಜು ಸೀಳಿಬಿಟ್ಟಿದ್ದು ಕಾಣ ಸಿತು. ಇದು ಹೇಗಾಯಿತೆಂದು ಬಗ್ಗಿ ನೋಡುವಷ್ಟರಲ್ಲಿ ನಾಲ್ಕಾರು ಹುಡುಗರು ಬಿದ್ದಂಬೀಳ ಓಡಿಹೋದರು. ವಿಷಯ ಅರ್ಥವಾಯಿತು. ನಾನು ಕೇಳಿದರೂ ಏನೂ ಪ್ರಯೋಜನವಿಲ್ಲವೆಂದು ಒಡೆದ ಗಾಜು ಕೆಳಕ್ಕೆ ಬೀಳದಂತೆ ಏನು ಮಾಡಬೇಕೆಂದು ಯೋಚಿಸಿದೆ. ಇದನ್ನು ರಿಪೇರಿ ಮಾಡಲು ಕಾರ್ಪೆಂಟರ್ ಬರಬೇಕಾದರೆ ನಾಳೆಯೇ. ಅಲ್ಲಿವರೆಗೆ ಒಳಭಾಗಕ್ಕೊಂದು ಪೇಪರ್ ಕೊಟ್ಟು ಗಮ್‌ಟೇಪಿನಿಂದ ಅಂಟಿಸೋಣವೆಂದು ಪರಿಕರಗಳನ್ನು ತರಲು ಒಳಗಿನ ಕೊಠಡಿಗೆ ತೆರಳಿದೆ.
ಅಷ್ಟರಲ್ಲಿ ಹೊರಗಿನಿಂದ ಯಾರೋ ಆಂಟಿ ಎಂದು ಕರೆದ ಹಾಗಾಯ್ತು. ತಿರುಗಿ ನೋಡಿದೆ. ಸುಮಾರು 4-5 ವರ್ಷದ ಒಬ್ಬ ಪುಟ್ಟ ಹುಡುಗ ಗೇಟಿನ ಬಳಿ ನಿಂತಿದ್ದ. ಅವನನ್ನು ಬಾ ಮರಿ, ಒಳಕ್ಕೆ ಬಾ ಎಂದು ಕರೆದು ಮುಂದಿನ ಬಾಗಿಲು ತೆರೆದೆ. ಅಂಜುತ್ತಲೇ ಅವನು ಒಳಬಂದ. ಮತ್ತೆ ಆಂಟಿ ಎಂದ. ಏನು ಮರೀ? ಎಂದು ಕೇಳಿದೆ. ‘ಮತ್ತೇ ಮತ್ತೇ ನಿಮ್ಮ ಕಿಟಕಿ ಗಾಜನ್ನು ನಾನೇ ಒಡೆದದ್ದು. ಸಾರಿ ಆಂಟಿ, ಆಟ ಆಡುತ್ತಿರುವಾಗ ಸಂದೀಪಣ್ಣ ನನಗೆ ಕಲ್ಲಲ್ಲಿ ಹೊಡೆಯೋಕೆ ಬಂದ. ಆಗ ನಾನೂ ಅವನಿಗೆ ಕಲ್ಲಿನಿಂದ ಹೊಡೆದೆ. ಅದು ತಪ್ಪಿ ನಿಮ್ಮ ಕಿಟಕಿಗೆ ಬಡಿಯಿತು. ಗಾಜು ಒಡೆಯಿತು’ ಎಂದ. ಅವನ ಅಳುಮುಖ ನೋಡಿ ನಾನು ಹೋಗಲಿ ಬಿಡಪ್ಪಾ, ನೀನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡೆಯಲ್ಲಾ ಅಷ್ಟು ಸಾಕು. ಗುಡ್ ಬಾಯ್, ಇನ್ಮೇಲೆ ಎಚ್ಚರಿಕೆಯಿಂದಿರು. ಹೀಗೆ ಕಲ್ಲಾಟ ಆಡಬೇಡಿ ಎಂದೆ. ಆದರೂ ಆ ಹುಡುಗ ಹಿಂದಿರುಗಿ ಹೋಗದೇ ತಲೆ ತಗ್ಗಿಸಿ ಅಲ್ಲೇ ನಿಂತಿದ್ದ. ಏಕೋ ಮರಿ ನಿಂತಿದ್ದೀಯೆ? ಎಂದು ಕೇಳಿದೆ. ಅವನು ಮಮ್ಮಿ ಹೇಳಿದರು ಹೊಸದಾಗಿ ಗಾಜು ಹಾಕಿಸಲು ತುಂಬ ದುಡ್ಡು ಬೇಕಂತೆ. ಆದ್ದರಿಂದ ಇದನ್ನು ತೊಗೊಳ್ಳಿ ಆಂಟಿ ಎಂದು ಒಂದು ಪುಟ್ಟ ಗೋಲಕದ ಡಬ್ಬವನ್ನು ಮುಂದಿಡಿದ. ಇದರಲ್ಲಿ ಎಷ್ಟಿದೆಯೋ ನನಗ್ಗೊತ್ತಿಲ್ಲ. ರಿಪೇರಿಗೆ ಸಾಕಾಗಲಿಲ್ಲವೆಂದರೆ ಮತ್ತೆ ಕೂಡಿಸಿಟ್ಟು ತಂದು ಕೊಡುತ್ತೇನೆ ಎಂದುತ್ತರಿಸಿದ. ನನಗೆ ಏನು ಹೇಳಬೇಕೋ ತಿಳಿಯದಾಯಿತು. ಅದನ್ನು ನಾನು ತೆಗೆದುಕೊಳ್ಳಲಿಲ್ಲ. ಅವನು ಆಂಟಿ, ಇದನ್ನು ನೀವು ತೊಗೊಳ್ಳಿಲ್ಲಾ ಅಂದರೆ ನನ್ನನ್ನು ಮಮ್ಮಿ ಬಯ್ತಾರೆ. ಪ್ಲೀಸ್ ತೊಗೊಳ್ಳಿ ಎಂದು ಕೈ ಮುಂದುಮಾಡಿದ. ಅಷ್ಟರಲ್ಲಿ ಹೊರಗಡೆ ನಿಂತಿದ್ದರೆಂದು ಕಾಣುತ್ತದೆ ಅವರ ತಾಯಿ ‘ತೊಗೊಳ್ಳಿ ಮೇಡಂ, ತಪ್ಪು ಮಾಡಿದ್ದಾನಲ್ಲಾ ಅದಕ್ಕೋಸ್ಕರ ಅವನೇ ದಂಡ ತೆರಬೇಕು’ ಎಂದು ಕಣ್ಣುಸನ್ನೆ ಮಾಡಿದರು. ನನಗರ್ಥವಾಯಿತು. ಆಕೆಯತ್ತ ಪ್ರಶ್ನಾರ್ಥಕವಾಗಿ ನೋಡಿದೆ. ಆಕೆ ನಾವು ಎರಡು ದಿನದ ಹಿಂದೆಯಷ್ಟೇ ಈ ಬೀದಿಯ ಮೂರನೆಯ ಮನೆಗೆ ಹೊಸದಾಗಿ ಬಂದಿದ್ದೇವೆ. ನನ್ನ ಮಗ ಹುಡುಗರೊಂದಿಗೆ ಆಟವಾಡುತ್ತಿದ್ದಾಗ ನಾನು ಎದುರು ಮನೆಯವರ ಹತ್ತಿರ ಮಾತನಾಡುತ್ತಾ ನಿಂತಿದ್ದೆ. ಮಕ್ಕಳು ಹೊಂದಿಕೊಂಡು ಅಟವಾಡುತ್ತಿದ್ದರು. ಒಮ್ಮೆಲೇ ಜಗಳವಾಡಲು ಪ್ರಾರಂಭಿಸಿದರು. ನಾನು ಬೇಗನೆ ಬಂದು ಅವರನ್ನು ಸಮಾಧಾನಪಡಿಸಬೇಕೆಂದು ಬರುವಷ್ಟರಲ್ಲಿ ಇಷ್ಟೆಲ್ಲ ನಡೆದುಹೋಯಿತು. ಅದಕ್ಕೇ ಅವನನ್ನೇ ನಿಮ್ಮ ಹತ್ತಿರಕ್ಕೆ ಕಳುಹಿಸಿದೆ ಎಂದರು.
ನಮ್ಮಿಬ್ಬರನ್ನೂ ನೋಡುತ್ತಾ ಗೋಲಕದ ಡಬ್ಬವನ್ನು ಎದೆಗಾನಿಸಿಕೊಂಡು ನಿಂತಿದ್ದ ಹುಡುಗನಿಗೆ ‘ಹೋಗು ಮರಿ, ಮನೆಗೆ ಹೋಗಿ ಕೈಕಾಲು ತೊಳೆದುಕೊಂಡು ಓದಿಕೋ ಹೋಗು. ಇವತ್ತು ಗಾಜಿಗೆ ಬಿತ್ತು. ಅದನ್ನು ಮತ್ತೆ ಹಾಕಿಸಿಕೊಳ್ಳಬಹುದು. ಆದರೆ ಕಲ್ಲು ಕಣ್ಣಿ ಗೇನಾದರೂ ಬಿದ್ದಿದ್ದರೆ ಏನು ಗತಿ. ಈ ಸಾರಿ ನಿನ್ನನ್ನು ಕ್ಷಮಿಸಿದ್ದೇನೆ. ನಿನ್ನ ಗೋಲಕವನ್ನು ಹಿಂದಕ್ಕೆ ತೆಗೆದುಕೊಂಡು ಮನೆಗೆ ಹೋಗು’ ಎಂದು ನಸುನಕ್ಕೆ. ಆಗ ಅವನು ತನ್ನ ಬಟ್ಟಲು ಗಣ್ಣುಗಳನ್ನು ಅರಳಿಸುತ್ತಾ ‘ಹಾಗಾದರೆ ನಿಮಗೆ ದುಡ್ಡು ಕೊಡುವುದು ಬೇಡವೇ?’ ಎಂದು ಕೇಳಿದ. ನಾನು ತಲೆಯಲ್ಲಾಡಿಸಿದ್ದನ್ನು ಕಂಡು ಮಮ್ಮೀ, ಆಂಟಿಗೆ ದುಡ್ಡು ಬೇಡವಂತೆ. ಮನೆಗೆ ತೊಗೊಂಡು ಹೋಗಲಾ? ಇನ್ನು ಮುಂದೆ ಯಾವಾಗಲೂ ಇಂಥಹ ತುಂಟಾಟ ಆಡೋಲ್ಲ. ಪ್ಲೀಸ್ ಮಮ್ಮೀ ಎಂದ .
ಆತನ ತಾಯಿ ‘ಆಯ್ತು ನೀನು ಮನೆಗೆ ಹೋಗು ನಾನು ಒಂದೈದು ನಿಮಿಷ ಬಿಟ್ಟು ಬರುತ್ತೇನೆ’ ಎಂದು ನನ್ನ ಜೊತೆ ಮಾತನಾಡುತ್ತಾ ನಿಂತರು. ಈಗೇನು ಮಾಡುತ್ತೀರಿ? ನಿಮ್ಮ ಮನೆಯಲ್ಲಿ ಗಮ್‌ಟೇಪ್ ಇದೆಯೇ? ಇಲ್ಲವೆಂದರೆ ನಮ್ಮ ಮನೆಯಲ್ಲಿದೆ ಕಳಿಸಲೇ? ಎಂದು ಒಳಗೆ ಬಂದರು. ನಾನು ಒಳಗಿನಿಂದ ಟೇಪನ್ನು ತಂದಾಗ ಗಾಜನ್ನು ಬೀಳದಂತೆ ಅಂಟಿಸಲು ಸಹಾಯ ಮಾಡಿದರು. ಆಕೆಯನ್ನು ಬೀಳ್ಕೊಟ್ಟು ಒಳಗೆ ಬರುತ್ತಾ ಹಿಂದಿನದನ್ನು ನೆನಪಿಸಿಕೊಂಡೆ. ಇನ್ನು ನನ್ನ ಮನೆಯವರಿಂದ ಏನುಮಾತು ಕೇಳಬೇಕೋ ಎಂದುಕೊಂಡೆ.
ಕೆಲವು ತಿಂಗಳುಗಳ ಹಿಂದೆ ನಮ್ಮ ವೆರಾಂಡಾದ ಕಿಟಕಿಯ ಗಾಜನ್ನು ಮತ್ತೊಬ್ಬ ಹುಡುಗ ಒಡೆದಿದ್ದ ಘಟನೆ ನೆನಪಿಗೆ ಬಂತು. ಅವನು ನನ್ನ ಕೈಗೆ ಸಿಕ್ಕಿಬಿದ್ದಿದ್ದ. ನಾನು ಅವನನ್ನು ಹಿಡಿದು ಪ್ರಶ್ನೆ ಮಾಡುತ್ತಿದ್ದೆ. ಈ ಸುದ್ಧಿಯನ್ನು ತಿಳಿದ ಅವರ ತಾಯಿ ನಮ್ಮ ಮನೆಗೆ ಬಂದಿದ್ದರು. ಹಿಂದೆ ಮುಂದೆ ವಿಚಾರಿಸದೇ ‘ಏನ್ರೀ? ನಾವೇ ಮನೆಯಲ್ಲಿ ನಮ್ಮ ಮಗನನ್ನು ಒಮ್ಮೆಯೂ ಗದರಿಸುವುದಿಲ್ಲ. ಅಂತಹುದರಲ್ಲಿ ನೀವು ಮಹಾ ಸಾವಿರಾರು ರೂಪಾಯಿ ಲುಕ್ಸಾನು ಆದವರ ಹಾಗೆ ಅವನನ್ನು ಬೆದರಿಸುತ್ತಿದ್ದೀರಿ. ಅದರ ಖರ್ಚೆಷ್ಟೂ ಅಂತ ಹೇಳ್ರೀ. ನಿಮ್ಮ ಮುಖದಮೇಲೆ ಬಿಸಾಕ್ತೀನಿ. ಏಯ್ ಬಾರೋ, ಈ ಬಿಕನಾಸಿಗಳ ಮನೆಮುಂದೆ ಯಾಕೋ ಆಡೋಕೆ ಬಂದೆ’ ಎನ್ನುತ್ತಾ ನನಗೆ ಮಾತನಾಡಲಿಕ್ಕೆ ಅವಕಾಶವನ್ನೂ ಕೊಡದೆ ಮಗನನ್ನು ಎಳೆದುಕೊಂಡು ಹೋಗಿದ್ದರು ಆ ಮಹಾತಾಯಿ.
ಇಬ್ಬರೂ ತಾಯಂದಿರೇ. ಅವರಿಬ್ಬರ ನಡವಳಿಕೆಯಲ್ಲಿ ಎಷ್ಟು ವ್ಯತ್ಯಾಸ ! ಆಗ ನನಗೆ ನೆನಪಾಗಿತ್ತು ಕೈಲಾಸಂ ರವರ ಮಾತು ಮಕ್ಕಳ ಸ್ಕೂಲು ಮನೇಲಲ್ವೇ !
-ಬಿ.ಆರ್.ನಾಗರತ್ನ. ಮೈಸೂರು
ಕುರುಡ ಆನೇನಾ ಮುಟ್ಟಿ ನೋಡಿದಂಗೆ ಒಬ್ಬೊಬ್ಬರಿಗೆ ಒಂದೊಂದು ಮನೋಧರ್ಮ,
ಸುಂದರ ಬರಹ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ಮಕ್ಕಳನ್ನು ಯಾವತ್ತೂ ಚಿಕ್ಕ ಪ್ರಾಯದಲ್ಲೇ ತಿದ್ದಬೇಕು. ಅದನ್ನು ಬಿಟ್ಟು ಅವರು ಮಾಡಿದ ತಪ್ಪುಗಳನ್ನೇ ಸಮರ್ಥಿಸಿದರೆ ಅವರನ್ನು ಕೆಟ್ಟ ದಾರಿಗೆ ಪೋಷಕರೇ ಎಳೆದಂತಾಗುತ್ತದೆ.
Very nice and meaningful nagarathna
ಸುಂದರ ಬರಹ
ಮಕ್ಕಳನ್ನು ಮನೆಯಲ್ಲಿ ತಿದ್ದದೆಹೋದರೆ ಕೆಟ್ಟ Dari thuliyouvaru
ಎಲ್ಲರ ಮನಸ್ಸು ಒಂದೇ ಇರಲ್ಲ
ಚಿಕ್ಕ ವಯಸ್ಸಿನಲ್ಲಿ ತಾಯಿ ಕಲಿಸಿದ ನೀತಿ ಪಾಠ ಮುಂದೆಂದು ಜೀವನದಲ್ಲಿ ಹಾದಿ ತಪ್ಪಲು ಸಾಧ್ಯವಿಲ್ಲ. ಉತ್ತಮ ನೀತಿ ಕಥೆ. ಭಲೆ! ನಾಗರತ್ನರವರೆ
ಘಟನೆಯ ನಿರೂಪಣೆ ಚೆನ್ನಾಗಿದೆ. ತಮಾಷೆಗಾಗಿ ಒಂದು ಕಿಡಿ: ಮಕ್ಕಳಿಸ್ಕೂಲ್ ಮನೇಲಲ್ವೇ? ಹೌದು ಪ್ರಶ್ನೆ ಯಾರ ಮನೆಯಲ್ಲಿ?
ನಿರೂಪಣೆ ಚೆನ್ನಾಗಿದೆ. ಆದರೆ ಪ್ರಶ್ನೆ, ಸ್ಕೂಲ್ ಯಾರ ಮನೆಯಲ್ಲಿ?
ಮಕ್ಕಳನ್ನು ತಿದ್ದಿ ಬೆಳೆಸಬೇಕಾದ ತಾಯಿಯರಲ್ಲೇ ದೋಷ, ದರ್ಪವಿದ್ದರೆ ಆ ಮಕ್ಕಳಿಗೆ ಒಳ್ಳೆಯ ನಡವಳಿಕೆ ಹೇಗೆ ತಾನೆ ಬರುತ್ತದೆ. ಲೇಖನ ಚೆನ್ನಾಗಿದೆ.
ವಾವ್… ಅರ್ಥಪೂರ್ಣ ಲೇಖನ. ತಮ್ಮ ಮಕ್ಕಳು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿ ತುಂಬಾ ಹೆತ್ತವರಲ್ಲಿ ಕಡಿಮೆ ಆಗುತ್ತಿದೆ.
ನನ್ನ ಲೇಖನ ಓದಿ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡವರಿಗೆಲ್ಲಾ ನನ್ನ ಧನ್ಯವಾದಗಳು.
ಚಿಕ್ಕಂದಿನಲ್ಲೇ ಮಕ್ಕಳನ್ನು ತಿದ್ದುವುದು ಅತೀ ಮುಖ್ಯ. ತದ್ವಿರುದ್ಧ ನಡತೆಯ ಅಮ್ಮಂದಿರಿಂದ ಸರಿಯಾದ ಪಾಠ ಕಲಿಯುವಂತಾಯ್ತು ಅಲ್ವೇ? ಸೊಗಸಾದ ಸಕಾಲಿಕ ಲೇಖನ..ಧನ್ಯವಾದಗಳು.
ಸತ್ಯ ಘಟನೆಯಲ್ಲಿ ಇಬ್ಬರು ತಾಯಂದಿರ ನಡವಳಿಕೆಯನ್ನು ಮನಮುಟ್ಟುವಂತೆ ನಿರೂಪಿಸಿದ್ದೀರ.ಧನ್ಯವಾದಗಳು.
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎಂದು ಬರಹದ ಮೂಲಕ ತೋರಿಸಿದ್ದೀರಿ