ವಿದಾಯ

Share Button

 

ಮಧ್ಯಾಹ್ನದ ಊಟವಾದ ನಂತರ ಹಾಗೇ ಸೋಫಾದಲ್ಲಿ ಒರಗಿ ಪೇಪರ್ ಓದುತ್ತಿದ್ದೆ. ಸ್ವಲ್ಪಜೊಂಪು ಬಂದಂತಾಗುತ್ತಿತ್ತು. ಆದರೂ ಕಷ್ಟಪಟ್ಟು ನನ್ನ ಆಸಕ್ತಿಯ ವಾರದ ಕಥೆಯನ್ನು ಓದುತ್ತಿದ್ದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಧ್ವನಿ ಬಂದಂತಾಯ್ತು. ‘ಅಮ್ಮಾ ಇದೇನು ಮಾಡಿಬಿಟ್ಟಿರಿ? ನೀವು ಮಾಡಿದ್ದು ಸರಿಯಾ? ಈ ಮನೆಯಲ್ಲಿ ಇಪ್ಪತ್ತೆರಡು ವರ್ಷಗಳಿಂದ ಕುಟುಂಬದ ಒಬ್ಬ ಸದಸ್ಯನಂತಾಗಿದ್ದ ನನ್ನನ್ನು ಇದ್ದಕ್ಕಿದ್ದಂತೆ ಮನೆಯಿಂದ ಹೊರಹಾಕಿದ್ದೀರಿ. ನಿಮಗೆ ಬೇಸರವಾದಾಗಲೆಲ್ಲ ನಿಮ್ಮ ಆತ್ಮೀಯರೊಡನೆ ಹರಟಲು, ದೂರದಲ್ಲಿದ್ದ ನಿಮ್ಮ ಮನೆಯವರು, ಬಂಧುಗಳ ಸುದ್ಧಿಗಳನ್ನು ನಿಮಗಾಗಿ ಹೊತ್ತುತರುತ್ತಿದ್ದೆ. ನಿಮ್ಮ ದುಃಖದುಮ್ಮಾನಗಳನ್ನು ಹಂಚಿಕೊಳ್ಳಲು ನಾನು ಸಾಧನವಾಗಿದ್ದೆ. ಬೇರೆ ಊರಿನಲ್ಲಿದ್ದ ನಿಮ್ಮ ಪತಿ, ಮಕ್ಕಳು ಮಾತನಾಡಲಿಲ್ಲವಲ್ಲಾ ಬಹಳ ಸಮಯವಾಯಿತು ಎಂದು ಜಾತಕಪಕ್ಷಿಯಂತೆ ಕಾಯುತ್ತಿರುವಾಗಲೆಲ್ಲ ನಿಮಗೆ ಸಂತಸದ ಸುದ್ಧಿಯನ್ನು ಬೇಗನೆ ತಿಳಿಸಲು ನಾನೂ ಕಾತುರತೆಯಿಂದ ಕಾಯುತ್ತಿದ್ದೆ. ಅವೆಲ್ಲ ದಿನಗಳನ್ನು, ಸಂದರ್ಭಗಳನ್ನು ನೀವು ಮರೆತು ಬಿಟ್ಟರೇನು?’ ಧ್ದನಿ ಬರುತ್ತಿದ್ದುದು ಇತ್ತೀಚೆಗೆ ಸ್ಥಗಿತಗೊಳಿಸಲಾಗಿದ್ದ ನಮ್ಮ ಲ್ಯಾಂಡ್ಲೈನ್ ಟೆಲಿಫೋನ್ ಯಂತ್ರದಿಂದ.

ಸಾಕು..ಸಾಕುಮಾಡು ಕಂದಾ, ನೀನು ಹೇಳಿದ್ದೆಲ್ಲಾ ನೂರಕ್ಕೆನೂರು ಸತ್ಯ. ಆದರೇನು ಮಾಡಲಿ ನಿಮ್ಮ ದೂರಸಂಪರ್ಕ ಕಛೇರಿಯವರು ನಮ್ಮ ಮನೆಗೆ ನಿನ್ನನ್ನು ಕಳಿಸಿಕೊಡುವಾಗ ತೋರುವ ಮುತುವರ್ಜಿಯನ್ನು ಆನಂತರದ ದಿನಗಳಲ್ಲಿ ತೋರುವುದಿಲ್ಲ. ತಿಂಗಳಲ್ಲಿ ಹಲವಾರು ದಿನಗಳಲ್ಲಿ ನಿನ್ನ ಸದ್ದೇ ಇರುತ್ತಿರಲಿಲ್ಲ. ಕುಟ್ಟಿತಟ್ಟಿದರೂ ಪ್ರಯೋಜನವಾಗುತ್ತಿರಲಿಲ್ಲ. ದೂರು ದಾಖಲಿಸಿದರೆ ಆಕಡೆಯಿಂದ ಓ! ಆ ಏರಿಯಾನ? ಅಲ್ಲಿ ಸುತ್ತಮುತ್ತ ಏನೋ ಕೇಬಲ್ ಕಾಮಗಾರಿ ನಡೆದಿದೆ. ಅವರೇನಾದರೂ ಅಗೆದುಬಿಟ್ಟು ನಮ್ಮ ಲೈನು ಖರಾಬಾಗಿರಬಹುದು. ಅಲ್ಲಿ ರಿಪೇರಿಯಾದ ಮೇಲೆ ತಕ್ಷಣ ಸರಿಹೋಗುತ್ತದೆ. ಸ್ವಲ್ಪ ಪ್ಲೀಸ್ ಅಡ್ಜಸ್ಟ್ ಮಾಡಿಕೊಳ್ಳಿ. ಎಂಬ ಉತ್ತರ ಸಿದ್ಧ. ಇನ್ನು ತಿಂಗಳ ಬಿಲ್ಲಿನಲ್ಲಿ ಮಾತ್ರ ದೊಡ್ಡಮೊತ್ತ. ನಾವು ಉಪಯೋಗಿಸಿದ್ದು ಸ್ವಲ್ಪವೇ ಆದರೂ ತಿಂಗಳಬಾಡಿಗೆ ನಗರಪ್ರದೇಶಕ್ಕೆ 240 ರೂ. ಒಟ್ಟು ಮೊತ್ತದ ಮೇಲೆ ಈಗಂತೂ ಜಿ.ಎಸ್.ಟಿ. ಜಡಿದು ಹೊರಲಾರದಷ್ಟು ಹೊರೆ. ಉಪಯೋಗಕ್ಕಿಂತ ಕಟ್ಟುವ ಹಣವೇ ತುಂಬ ಜಾಸ್ತಿ. ಇದನ್ನು ಹಲವಾರು ತಿಂಗಳು ಅನುಭವಿಸಿ ಈಗ ಅನಿವಾರ್ಯವಾಗಿ ನಿನಗೆ ವಿದಾಯ ಹೇಳಲು ತೀರ್ಮಾನಿಸಲಾಯಿತು. ಬೇಸರಮಾಡಿಕೊಳ್ಳಬೇಡ ನಿನ್ನ ಧ್ವನಿ ನಿಂತಿದ್ದರೂ ಯಂತ್ರವನ್ನು ಜೋಪಾನವಾಗಿ ಪ್ರೀತಿಯಿಂದ ನನ್ನ ಮನೆಯಲ್ಲಿ ಇರಿಸಿಕೊಂಡಿದ್ದೇನೆ. ಏಕೆಂದರೆ ದೂರಸಂಪರ್ಕ ಇಲಾಖೆಯವರು ನೀಡಿದ್ದ ಫೋನ್ ಯಂತ್ರದಲ್ಲಿ ಹಲವು ನಂಬರ್‌ಗಳು ಕೆಲಸ ನಿರ್ವಹಿಸುತ್ತಿರಲಿಲ್ಲ. ಹಾಗಾಗಿ ನಾನೇ ಅಂಗಡಿಯಿಂದ ಹಣಕೊಟ್ಟು ಸುಂದರವಾಗಿರುವ ನಿನ್ನನ್ನು ಕೊಂಡು ತಂದೆವು. ಆದ್ದರಿಂದ ನಿನ್ನ ಮೇಲೆ ನನ್ನ ಮಮತೆ ಕಡಿಮೆಯಾಗಿಲ್ಲ ನೊಂದುಕೊಳ್ಳಬೇಡ.

ಇನ್ನೊಂದು ವಿಷಯ ನಿನ್ನ ವಂಶದವರೇ ಆದ ಕುಡಿಗಳನ್ನು ಕೊಂಡುತಂದು ನಾವಿಬ್ಬರೂ ಬಳಸುತ್ತಿದ್ದೇವೆ. ಅವು ನಿನಗಿಂತ ಚುರುಕಾಗಿವೆ ಮತ್ತು ನಾನಾ ಆಕಾರಗಳಲ್ಲಿ, ಬಣ್ಣಗಳಲ್ಲಿ, ಗಾತ್ರಗಳಲ್ಲಿ ಪೇಟೆಯಲ್ಲಿ ದೊರಕುತ್ತವೆ. ವ್ಯತ್ಯಾಸ ಇಷ್ಟೆ ನೀನು ಶಾಶ್ವತವಾಗಿ ಮನೆಯಲ್ಲಿರುತ್ತಿದ್ದೆ. ಈಗ ಬಂದಿರುವ ನಿನ್ನ ವಂಶದ ಕುಡಿಗಳು ಜೇಬಿನಲ್ಲೇ ಕುಳಿತು ಹೋದೆಡೆಯಲ್ಲೆಲ್ಲಾ ಸಂಚರಿಸುತ್ತವೆ. ಅಲ್ಲದೆ ಅವುಗಳಿಂದ ಮಾತನಾಡುವುದರ ಜೊತೆಗೆ ಇನ್ನೂ ಏನೇನೋ ವಿನಿಮಯ ಮಾಡಿಕೊಳ್ಳಬಹುದು. ಅಂಗೈನಲ್ಲೇ ವಿಶ್ವವನ್ನೇ ತೋರಿಸಬಲ್ಲ ಜಾಣ್ಮೆಯನ್ನು ಹೊಂದಿದ್ದಾರೆ. ವಿಜ್ಞಾನದ ಪ್ರಗತಿಯ ಮುಂದೆ ನಾವೆಷ್ಟರವರು. ಕಾಲಕ್ಕೆ ತಕ್ಕಂತೆ ನಾವೂ ಹೊಂದಿಕೊಳ್ಳಲೇ ಬೇಕಲ್ವಾ. ಅದಕ್ಕಾಗಿ ನಾವೂ ಮೊಬೈಲ್ ಎಂಬ ಹೊಸ ಯಂತ್ರದ ಜೊತೆಗೆ ರಾಜಿಯಾಗಿದ್ದೇವೆ. ಇದು ಅನಿವಾರ್ಯವಾಯ್ತು. ಹೀಗೇ ಮುಂದಿನ ದಿನಗಳಲ್ಲಿ ಇನ್ನೇನೇನು ಬರುವುದೋ ತಿಳಿಯದು. ಜೊತೆಗೆ ಸೆಂಟಿಮೆಂಟಲ್ಲಾಗಿ ನಿನ್ನನ್ನೂ ಉಳಿಸಿಕೊಂಡು ಹೊಸದನ್ನೂ ತಂದು ನಿಭಾಯಿಸಬೇಕಾದರೆ ನಮ್ಮ ಆರ್ಥಿಕ ಸಂಪನ್ಮೂಲಗಳನ್ನೂ ಗಮನಿಸಿಕೊಳ್ಳಬೇಕು. ಆದ್ದರಿಂದ ಇದು ವಿದಾಯವಲ್ಲ ಇದೊಂದು ಸಣ್ಣ ಬದಲಾವಣೆಯಷ್ಟೇ. ನೋಡು ನಿನ್ನ ತಮ್ಮನ ರಿಂಗ್‌ಟೋನ್ ಬರುತ್ತಿದೆ. ಯಾರೋ ಕರೆಯುತ್ತಿದ್ದಾರೆ. ಬರುತ್ತೇನೆ ಬೈ ಬೈ.

-ಬಿ.ಆರ್.ನಾಗರತ್ನ, ಮೈಸೂರು

9 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಬರಹ. ತೆರೆಮರೆಗೆ ಸರಿಯುತ್ತಿರುವ ವಸ್ತುಗಳಲ್ಲಿ ದೂರವಾಣಿಯೂ ಒಂದು.

  2. Hema says:

    ಚೆಂದದ ಬರಹ…ಇದು ಬಹುತೇಕ ಎಲ್ಲರ ಮನೆಯ ಕಥೆಯೂ ಆಗಿದೆ..

  3. Prema swamy says:

    ಚೆನ್ನಾಗಿದೆ ನಿಮ್ಮ ಅನುಭವದ ಮಾತುಗಳು ತುಂಬಾ ಚೆನ್ನಾಗಿರುತ್ತದೆ, ಈ ವಸ್ತುಗಳಂತೆ ನಾವು ಸಹ ಹಿಂದೆ ಸರಿಯುತ್ತ ಇದ್ದೆವು ಏನೋ

  4. Suma vasanth says:

    B.R.Nagarathna ravare Vidaya bahala chennagi moodi bandide.idu sathya.egina mobile bandu dooravaniyannu mareyuvanthagide.adre adara upakarana innu halavara maneyalli ide.adre adara jothe esto jana indigu phone idla endu helluva paddathi hogilla.nijavada mathanne vyaktha padisidiri.danyavadagalu

  5. Suma vasanth says:

    Nagarathna ravare Vidaya bahala chennagi moodi bandide.nijavanne thilisiddiri.sumaru jana indigu mobile nalli mathanadida mele idla phone antha helthare.correct agi helidiri

  6. ಶಂಕರಿ ಶರ್ಮ says:

    ಹೌದು..ದೂರವಾಣಿ ಇಲಾಖೆಯಲ್ಲಿ ಸುದೀರ್ಘ ವೃತ್ತಿಯ ಬಳಿಕ ನಿವೃತ್ತಿಯಲ್ಲಿರುವ ನನಗೂ ಇದೇ ನೋವು… ನನ್ನ ಕೈಯಾರೆ ಇದಕ್ಕೆ ವಿದಾಯ ಹೇಳಬೇಕಾಗುತ್ತದೆಯೋ ಏನೋ ಎಂದು! ಸದ್ಯಕ್ಕೆ ಆರೋಗ್ಯವಾಗಿರುವ ನನ್ನ ದೂರವಾಣಿ ಟ್ರಿನ್..ಟ್ರನ್ ಅನ್ನುತ್ತಿದೆ..ನೆಮ್ಮದಿಯಾಗಿರುವೆ..ಸಧ್ಯಕ್ಕೆ.

  7. ಹೊಸ ಹೊಸ ಆವಿಷ್ಕಾರಗಳಿಗೆ ಒಗ್ಗಿಕೊಳ್ಳುವ ಮನೋಭಾವ ಬೆಳಿಸಿ ಕೊಳ್ಳಬೇಕು ಎನ್ನುವ ತಾತ್ಪರ್ಯ ಉಳ್ಳ ಕತೆ,ಚೆನ್ನಾಗಿ ಮೂಡಿ ಬಂದಿದೆ

  8. ಮಾಲತಿ says:

    ತುಂಬಾ ಚೆನ್ನಾಗಿ ಬರೆದಿದ್ದೀರಿ. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಕೊಂಡು ಹೋಗೊ ಹಾಗೆ, ಹೊಸದು ಬಂದಾಗ ಹಳೆಯದನ್ನ ಕೈ ಬಿಡಬೇಕಾಗುತ್ತದೆ. ಇದು ಜಗದ ನಿಯಮ.

  9. ಹೊಸತನಕೆ ಹೊಂದಿಕೊಳ್ಳುವ ಬರದಲ್ಲಿ ಹಳತು ಮಾಯಾವಾಗುದು ಅರಿವಿಗೆ ಬರುವುದಿಲ್ಲ.
    ಒಳ್ಳೆಯ ವಿಷಯದ ಆಯ್ಕೆ ಚಂದದ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: