ಕವಿತೆ
1
ಹತ್ತು ನಿಮಿಷದಲೊಂದು ಕವಿತೆಯ ಹೆತ್ತು
ಮಾತೆಯಾಗುವ ಮಾತೆ ಬೇಡ
ನವಮಾಸ ತುಂಬಿ ಹಡೆಯಲಿ ಕೂಸು
ಹೊರದನಿಯ ದಾರಿಯಲಿ ಹೆಕ್ಕ ಸಿಕ್ಕಿದ ಚೂರು
ಒಳದನಿಯ ತಮ್ಮಟೆಯ ಬಡಿದು ಬಡಿದು
ಕಣ್ಣುಕಿವಿಗಳು ಎಲ್ಲ ಏಕ ಇಂದ್ರಿಯವಾಗಿ
ಹೊರದನಿಯ ಬಿಡಿಚೂರು ಒಳದನಿಯ ಶಿಶುವಾಗಿ
ಅಂಗಾಂಗ ತುಂಬಿ ಜೀವರಸವಾಡಿ
ಪ್ರಾಣವಾಯುವ ಹೀರಿ ಹೊರಲೋಕ ಸಾರಿ
ನೋವದಾರಿಯ ಬಗೆದು ನಗೆಯ ಬೀರಿ
ಹಡೆದ ತಾಯಿಯ ಮೊಗದಿ ಬೆವರ ಕೋಡಿ!
2
ಚಿಪ್ಪಿನೊಳಗೆ ಚುಪ್ಪೆಂದು ಕಣ್ಮುಚ್ಚಿ ಕೂತರೆ ಕವಿತೆ
ಒಳಗ ಕಾಣುವ ಕಣ್ಣು ತೆರೆದುಕೊಂಡರೆ ಕವಿತೆ
ಬೆರಗಸೆರಗನು ಹಿಡಿದು ಜೀಕಿದರೆ ಕವಿತೆ
ಹುಂಬಮನಸಿನ ಆಳಕನ್ನಡಿ ಕವಿತೆ
ಮೌನಸೀಮೆಯ ಒಡಲುಬಿರಿದರೆ ಕವಿತೆ?
ಚಿಂತೆ ಚಿಕ್ಕಮ್ಮನ ಹೃದಯಪುಷ್ಪವೆ ಕವಿತೆ
ಅಳಲ ತಾಯ ಹಿರಿಮಗಳೆ ಕವಿತೆ
ಏಳೇಳು ಕವಿತೆ ಹುಟ್ಟುನಂಟಿನ ಕವಿತೆ
ಸಾವು ಹೊಂಚುವ ಹದ್ದುಸದ್ದಡಗಿಸಿದ ಕವಿತೆ
-ಮಹೇಶ್ವರಿ.ಯು
ಸೂಪರ್ ಮೇಡಂ
ತುಂಬಾ ಚೆನ್ನಾಗಿದೆ ಮೇಡಂ.ಇವತ್ತು ಎಲ್ಲಾ ಕವಿಗಳಿಗೂ ಅರ್ಜೆಂಟ್ ಭಾವಕ್ಕೆ ಜೀವ ತುಂಬುವ ವರೆಗೆ ಕಾಯಲು ಪುರುಸೊತ್ತಿಲ್ಲ.ಮೊಟ್ಟೆಯಿಡುವ ಮೊದಲೇ ಮರಿಯಾಗಬೇಕು.ಅದಕ್ಕೆ ಮುಕ್ಕಾಲು ಪಾಲು ಕವಿತೆಗಳೂ ಮನ ತಟ್ಟುವುದಿಲ್ಲ.
ಎಲ್ಲೆಲ್ಲಿ, ಹೇಗೆ ಹೇಗೆ ಕವಿತೆ ಹುಟ್ಟಿಕೊಳ್ಳುತ್ತದೆ ಅನ್ನುವುದನ್ನು ಇಲ್ಲಿ ಕಾಣಬಹುದು. Nice
ಪರೋಕ್ಷವಾಗಿ ಉಲ್ಲೇಖಿಸಿದ ಕಿವಿಮಾತಿನೊಂದಿಗೆ ಕವನ ಚೆನ್ನಾಗಿದೆ.ಮಹೇಶ್ವರಿ ಮೇಡಮ್.
ಅಳಲ ತಾಯ ಹಿರಿಮಗಳು ಕವಿತೆ……..ಸೂಪರ್ ಮೇಡಂ…
ಆರಂಭದ ಸೊಬಗು ಅಂತ್ಯದಲ್ಲಿ ಹಿಮ್ಮೆಟ್ಟಿ ಹೋದಂತೆ
ಒಟ್ಟಿನಲ್ಲಿ ಸೌಂದರ್ಯ ಇದೆ
ಎಲ್ಲರಿಗೂ ಧನ್ಯವಾದಗಳು.
ಕವಿತೆ ಬರೆಯುವ ಕಷ್ಟದ ಬಗ್ಗೆ ಸೊಗಸಾದ ಕವಿತೆ!