ಬಕಾಸುರನ ಮರಿಮಕ್ಕಳು
ಕುರುಡ ಧೃತರಾಷ್ಟ್ರ ಪಾಂಡವರ ಪ್ರಗತಿಗೆ ಮತ್ಸರ ತಾಳಿ ಅರಗಿನ ಮನೆಯಲ್ಲಿ ಸುಡಿಸಲು ಯತ್ನಿಸಿದ್ದು ತಿಳಿದಿದೆ. ಪಾಂಡವರು ಅಲ್ಲಿಂದ ಹೇಗೋ ಪಾರಾಗಿ ಏಕಚಕ್ರನಗರಕ್ಕೆ ಬಂದು ಭಿಕ್ಷೆ ಬೇಡಿ ತಂದದ್ದನ್ನು ಅವರಮ್ಮನಿಗೆ ಕೊಟ್ಟರೆ ‘ಅರ್ಧಪಾಲು ವೃಕೋದರಂಗೆ’. ಆದರೆ ವೃಕೋದರನಿಗೋ ಅದು ಏನೇನೂ ಸಾಲದೆ ಸದಾ ಕಾಲ ಅವನಿಗೆ ಅರೆಹೊಟ್ಟೆಯೇ ಆಗಿದ್ದಾಗ ಬಕಾಸುರನಿಗಾಗಿ ಕಳಿಸಿದ್ದ ರಾಶಿ ಆಹಾರವನ್ನು ತಿಂದನೆಂದರೆ ಸೋಜಿಗ ಎನಿಸುವುದೇ??
ಹರಿಹರಕ್ಕೆ ಬಂದಮೇಲೆ ಅಲ್ಲಿಯ ಜೋಳದ ರೊಟ್ಟಿ, ನಮ್ಮನ್ನು ಬಹಳ ಆಕರ್ಷಿಸಿತು. ಬಕ್ರಿ ಜತೆಗೆ ತುಂಬಿದ ಬದನೆಕಾಯಿ ಗುರೆಳ್ಳು ಚಟ್ನಿಪುಡಿ, ಕಾಳುಪಲ್ಯ ಜೊತೆಗೆ ತಾಜಾಮೆಂತ್ಯದ ಸೊಪ್ಪು, ಮೂಲಂಗಿ ಸೊಪ್ಪು ಹೆಸ್ರುಬೇಳೆ ಕೋಸಂಬ್ರಿ, ಹಸಿ ಮೂಲಂಗಿ, ಈರುಳ್ಳಿ, ಸೌತೆಕಾಯಿ, ಗಟ್ಟಿ ಮೊಸರು ಇವನ್ನು ಸ್ನೇಹಿತರ ಮನೆಲಿ ಮೊದಲಿಗೆ ತಿಂದು ಆಹಾ! ಅದರ ರುಚಿಗೆ ಮಾರು ಹೋಗಿದ್ದೆ. ಆದ್ರೆ ರೊಟ್ಟಿ ನಮ್ಮನ್ನ ಬಲವಾಗಿ ತಟ್ಟಲಿಲ್ಲ. ಯಾಕೆಂದ್ರೆ ಭಕ್ರಿ ಬಡಿಯೋದನ್ನ ಕಲಿಯಲು ಸಾಧ್ಯವೇ ಆಗಲಿಲ್ಲ. ಈಗ್ಲೂ ಜೋಳದ ರೊಟ್ಟಿ ಅಂದ್ರೆ ಬಾಯಲ್ಲಿ ನೀರ್ ಬರುತ್ತೆ ಆದ್ರೆ ಮಾಡಿ ತಿಂದು ತೃಪ್ತಿಪಡುವಷ್ಟು ಆ ಕಲೆಯನ್ನು ರೂಢಿಸಿಕೊಳ್ಳುವುದಕ್ಕೆ ಆಗಿಯೇ ಇಲ್ಲ. ಇನ್ನು ಚಪಾತಿ ಸಹ ಆಗಲೋ ಈಗಲೋ ಅಷ್ಟೆ. ಯಾಕೆಂದ್ರೆ ನಾವು ಅನ್ನದ ನಾಡಿನಿಂದ ಬಂದವರು. ನಮ್ಮದು ಆ ಅನ್ನಗತ ಪ್ರಾಣ.
ಪದವಿ ಮುಗಿದು ಕಿರ್ಲೋಸ್ಕರ್ ಇಂಗ್ಲೀಷ್ ಸ್ಕೂಲ್ನಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಎರಡು ವರ್ಷ ಆಗಿತ್ತು. ನಮ್ಮಕ್ಕ ಕನ್ನಡ ಮೀಡಿಯಮ್ಮಲ್ಲಿ ನನಗಿಂತ ಮೊದಲೇ ಟೀಚರ್ ಆಗಿದ್ಲು. ನಮ್ಮಕ್ಕನ ಸಹೋದ್ಯೋಗಿಗಳೆಲ್ಲ ಸೇರಿ ಬಿಜಾಪುರ, ಬಾದಾಮಿ, ಐಹೊಳೆ, ಪಟ್ಟದಕಲ್ಲು ಆಕಡೆ ಒಂದು ಪ್ರವಾಸದ ಯೋಜನೆ ಮಾಡಿದರು. “ನೀವು ಬನ್ನಿ ರತ್ನ ಹಾಡು ಗೀಡು ಹೇಳ್ತಾ ಪ್ರಯಾಣ ಮಾಡೋಕೆ ಚೆನ್ನಾಗಿರುತ್ತೆ” ಎಂದು ಕರೆದರು. ಸರಿ. ನಾನು ನಮ್ಮಕ್ಕ ವಿಜಯಾ, ಇರೆಗಾರ್ ಮೇಷ್ಟ್ರು, ಕೇಶವಮೂರ್ತಿ, ಶ್ರೀಪಾದ ಭಟ್ರು, ಸಾವಿತ್ರಿ ಮೇಡಮ್, ಚಂಪಾವತಿ ಬಾಪಟ್ ಹೀಗೆ ಒಂದು ಹತ್ತುಜನರ ಗುಂಪು ಪ್ರವಾಸ ಸನ್ನದ್ಧರಾಗಿ ಟ್ರೈನು ಹತ್ತಿದೆವು. ರಾತ್ರಿ ಪವಡಿಸಿ ಬೆಳಿಗ್ಗೆ ಎದ್ದು ಕಾಫಿ ಟೀ ಕುಡಿದರು. ನನ್ನದು ಕಾಫಿ ಟೀ ಕುಡಿಯದ ಸನ್ಯಾಸ. ತಂದಿದ್ದ ತಟ್ಟೆಗಳಿಗೆ ಎರೆಡೆರಡು ಚಪಾತಿ ಚಟ್ನಿಪುಡಿ ಹಾಕಿಕೊಂಡು ತಿಂದು ನಾಶ್ತಾ ಮುಗಿಸಿ ತಟ್ಟೆ ತೊಳೆದುಕೊಂಡು ಬಂದೆವು.
ಹರಟೆ ಹೊಡೆದು ಸಾಕಾಗಿ ಮೊದಲ ದಿನದ ಉಮೇದು ಬಹಳ ಜೋರಾಗಿದ್ದುದರಿಂದ, ನಮ್ಮ ಖಂಜಿರ,ತಾಳ, ಗೆಜ್ಜೆ ಎಲ್ಲಾ ಹೊರ ತೆಗೆದು ಬಾರಿಸುತ್ತಾ ದಂಡಿಯಾಗಿ ಬರುತ್ತಿದ್ದ ಜನಪದಗೀತೆಗಳನ್ನು ಇಹಲೋಕದ ಪರಿವೆ ಮರೆತು ಕೆಲವರು ಹಾಡತೊಡಗಿದೆವು. ಉಳಿದವರು ಹೊರಗೆ ನೋಡುತ್ತಿದ್ದರು. ನಮ್ಮ ಗಾಯನಕ್ಕೆ ಎಚ್ಚರಾದುದು ಠಣ್ ಠಣ್ ಠಣ್ ಎಂಬ ಶಬ್ದದಿಂದ. ನೋಡಿದರೆ ಒಳಗಿಡುವುದು ಮರೆತದ್ದ ತಟ್ಟೆಗೆ ಕಾಸುಗಳು ಬೀಳುತ್ತಿದ್ದವು. ನಮ್ಮ ಉಳಿದ ಸಹೋದ್ಯೋಗಿಗಳು ಫಕಫಕನೆ ನಗುತ್ತಾ ಹಾಡ್ಕೋತಾ ಬೋಗಿಲಿ ಓಡಾಡಿದರೆ ಟ್ರೈನ್ ಚಾರ್ಜು ಸಂಪಾದಿಸ್ಕೊಬಹುದು ಅಂದರು. ಅಪಮಾನಕ್ಕೆ ಹಾಡು ಕಂಠದೊಳಗೇ ಹುಗಿದುಹೋಗಿ, ಖಂಜಿರ ತಾಳಗಳು ಕಿಟ್ಬ್ಯಾಗ್ನಲ್ಲಿ ಮುಖಮುಚ್ಚಿಕೊಂಡವು.
ಮನೆಯಿಂದಲೇ ಒಂದಿಷ್ಟು ರೊಟ್ಟಿ ಚಪಾತಿ ಚಟ್ನಿಪುಡಿ, ರೈಲ್ ಚೊಂಬು ಗಾಜಿನ ಬಾಟಲಲ್ಲಿ ನೀರು ತುಂಬಿಕೊಂಡಿದ್ದೆವು. ಸೊರಗಿದ್ದ ನಮ್ಮ ಬಕ್ಕಣಕ್ಕೆ ಹೊಂದುವ ಲಾಡ್ಜಿಂಗ್ ಅಥವಾ ಛತ್ರದಲ್ಲೇ ಉಳಿದುಕೊಂಡು ಹುಬ್ಬಳ್ಳಿ, ಧಾರವಾಡ, ಐಹೊಳೆ ಪಟ್ಟದಕಲ್ಲು ಬಾದಾಮಿ ಇಲ್ಲೆಲ್ಲಾ ಅಲೆದೆವು. ನಮ್ಮ ಕಾಲೇ ನಮಗೆ ಜಟಕಾ. ನಮ್ಮ ಉತ್ಸಾಹವೇ ಕುದುರೆ. ಆಟೋದ ಮಾಯೆ ಇನ್ನೂ ಮುಸುಕಿರದ ಕಾಲ. ಆದರೆ ಪ್ರಾಯದ ಕಸುವಿನ ನಮಗೆ ಇವ್ಯಾವೂ ಅಷ್ಟು ಭಾದಿಸುತ್ತಿರಲಿಲ್ಲ. ಕಟ್ಟಿಕೊಂಡು ಹೋಗಿದ್ದ ಚಪಾತಿ ರೊಟ್ಟಿ ಚಟ್ನಿಪುಡಿಗಳಲ್ಲೇ ನಾಲ್ಕೈದು ದಿನ ದೂಡಿದೆವು. ಅಷ್ಟೊತ್ತಿಗಾಗಲೇ ನಾಲಿಗೆ ಸಂಪು ಹೂಡಿ “ನಾನೊಲ್ಲೆ ನಾನೊಲ್ಲೆ” ಎನ್ನುತ್ತಿತ್ತು. ಅನ್ನಕ್ಕಾಗಿ ಹಪಹಪಿಸುತ್ತಿತ್ತು. ರೊಟ್ಟಿ ಚಪಾತಿ ಗಂಟು ಖಾಲಿಯಾದಾಗ ನಮಗೊಂಥರಾ ಸಂತೋಷ. ಅಷ್ಟು ಹೊತ್ತಿಗೆ ವಿಜಾಪುರ ಮುಟ್ಟಿದ್ದೆವು. ಇನ್ನು ಪ್ರವಾಸ ಹೊರಟಿದ್ದು ಬೇಸಿಗೆ ರಜವಾದ್ದರಿಂದ ಪ್ರತಿದಿನ ಉರಿಬಿಸಿಲ ವಿಹಾರವೇ. ಗೋಲಗುಂಬಜ್ ಇತ್ಯಾದಿ ನೋಡಿ ದಣಿದ ಕಾಲುಗಳನ್ನೆಳೆದುಕೊಂಡು ಬಹಳ ನಿರೀಕ್ಷೆಯಿಂದಲೇ ಒಂದು ಸಾಧಾರಣ ಹೋಟೆಲ್ಗೆ ನುಗ್ಗಿದೆವು. ಅಲ್ಲಿಯೂ ಮೊದಲು ಚಪಾತಿಯೇ ಬರಬೇಕೇ?? ಆನಂತರವಾದರೂ ಅನ್ನ ಹುಳಿ ಸಾರು ಸಿಗುತ್ತೆ ಅಂದ್ಕೊಂಡ್ರೆ ಕೊಟ್ಟಿದ್ದು ಒಂದು ಸಣ್ಣ ಬಟ್ಟಲು ಅನ್ನ ತುಸು ಮೊಸರು. ಹೊಟ್ಟೆ ತುಂಬಿದರೂ ದುಮುಗುಡುವ ಅತೃಪ್ತಿಯಿಂದಲೇ ದುಡ್ಡು ತೆತ್ತು ಹೊರಬಂದೆವು.
ಮುಂದೆ ಕಾರವಾರದಲ್ಲಿ ಇಳಿದಾಗ ರಾತ್ರಿ ಹತ್ತು ದಾಟಿತ್ತು. “ಮೀನು ವೆಜಿಟೇರಿಯನ್ ಅಲ್ಲವಾ”? ಎನ್ನುವ ಕರಾವಳಿಯ ಈ ಊರಿನಲ್ಲಿ ಮೀನಿರದ ವೆಜಿಟೇರಿಯನ್ ಹೋಟೆಲ್ಗಾಗಿ ವಿಚಾರಿಸುತ್ತಾ ಅಲೆದಲೆದು ಅಂತೂ ಇಂತೂ ಒಂದನ್ನು ಪತ್ತೆ ಮಾಡಿ ಖುಷಿಯಿಂದ ಎದುರು ನಿಂತರೆ ನಮ್ಮನ್ನು ಸ್ವಾಗತಿಸಿದ್ದು ತೊಳೆಸಿಕೊಂಡು ಕಳಕಳಿಸುತ್ತಿದ್ದ ಖುರ್ಚಿ ಮೇಜುಗಳು ಮತ್ತು ಬೋರಲು ಹಾಕಿಸಿಕೊಂಡಿದ್ದ ದೊಡ್ಡ ದೊಡ್ಡ ಪಾತ್ರೆಗಳು. “ತಿನ್ನಲು ಏನೂ ಸಿಗದಿದ್ದರೇನಂತೆ ಉಪವಾಸದ ಒಂದಿಷ್ಟು ಪುಣ್ಯವನ್ನಾದರೂ ನಮ್ಮ ಅಕೌಂಟಿಗೆ ಸೇರಿಸಪ್ಪಾ ಶಿವನೇ” ಎಂದು ಬೇಡಿಕೊಂಡು ಪುಣ್ಯಾತ್ಮ ಲಾಡ್ಜಿಂಗ್ನವನೊಬ್ಬ ಕೊಟ್ಟ ರೂಮುಗಳಲ್ಲಿ ಗಂಟು ಮೂಟೆ ಸಮೇತ ಮಲಗಿದೆವು.
ಮಾರನೆಯ ದಿನ ತುಂಬಾ ನಿರೀಕ್ಷೆಯಿಂದ ಸೇರಿದ್ದು ಗೋಕರ್ಣ. ಯಾಕೆಂದರೆ ನಮ್ಮ ಸಹೋದ್ಯೋಗಿ ಚಂಪಾವತಿ, ತಮ್ಮ ಸೋದರಮಾವ ವಾಮನರಾವ್ ಬಾಪಟ್ ಎನ್ನುವವರ ಮನೆಯಲ್ಲಿ ತಿಂಡಿ ಊಟ ಎರಡಕ್ಕೂ ವ್ಯವಸ್ಥೆ ಮಾಡಲು ಹೇಳಿದ್ದರು. ಬೆಳಿಗ್ಗೆ ಸ್ನಾನ ಮುಗಿಸಿ ನಾವು ಕಾತರಿಸಿದ್ದು ತಿಂಡಿಗಾಗಿ. ಆದರೆ ಮೊದಲು ಮಹಾಬಲೇಶ್ವರನ ದರ್ಶನ ಮಾಡಿಬಿಡೋಣ ಎಂದು ವಾಮನರಾವ್ ದೇವಸ್ಥಾನಕ್ಕೆ ಕರೆದುಕೊಂಡು ಹೋದರು. ಇನ್ನೇನು ಮಾಡೋದು! “ಸಿವ್ನೇ ಕಾಪಾಡಪ್ಪಾ” ಎಂದು ದಿಂಡುಗಡೆದು ಎಲ್ಲಾ ದೇವರ ದರ್ಶನ ಮಾಡುವಾಗ್ಲೂ ಗಮನವೆಲ್ಲಾ…… ಬೇಡ.ಬಿಡಿ.
ವಾಪಸ್ಸಾಗಿ ಅವರ ಮನೆ ಹೊಕ್ಕಾಗ ಸಾಲಾಗಿ ಇಟ್ಟ ಬಾಳೆಲೆ, ನೀರಿನ ಲೋಟ ನಮಗಾಗಿ ಶಿಸ್ತಿನಿಂದ ಕಾಯುತ್ತಿದ್ದವು. ಉಪ್ಪಿಟ್ಟು ಚಟ್ನಿ ಅವರೇ ಬಡಿಸಿ ಬಡಿಸಿ ಕೈ ಸೋಲುವವರೆಗೂ ತಿಂದು ಉದರ ಬ್ರಹ್ಮನನ್ನು ತೃಪ್ತಿ ಪಡಿಸಿದರೂ ಮುಂದಿನ ಊಟಕ್ಕೂ ನಾಲಿಗೆ ಹೊಟ್ಟೆ ಎರಡೂ ಕಾತರಿಸುತ್ತಿದ್ದವು.
ಗೋಕರ್ಣದ ಪೇಟೆ, ಸಮುದ್ರದ ದಂಡೆ ಎಲ್ಲಾ ಸುತ್ತಿಕೊಂಡು ಬರುವ ಹೊತ್ತಿಗೆ ಬಿಸಿಲು ಬ್ರಹ್ಮರಾಕ್ಷಸನಾಗಿ, ಹೊಟ್ಟೆ ಹಸಿದ ತೋಳನಂತಾಗಿತ್ತು. ಹಿತ್ತಿಲಿಗೆ ಹೋಗಿ ಕೈಕಾಲು ತೊಳೆದುಕೊಂಡು ಊಟದ ಮನೆಗೆ ಬಂದೆವು. ಕುಡಿ ಬಾಳೆಲೆಯ ಎಡತುದಿಯಲ್ಲಿ ಉಪ್ಪು ಅದರ ಪಕ್ಕ ಮಿಡಿ ಉಪ್ಪಿನ ಕಾಯಿ, ಮಾವಿನಕಾಯಿ ಚಟ್ನಿ, ಒಂದು ಪಲ್ಯ ನೋಡಿದ ತಕ್ಷಣ ಕೆರಳಿದ ರಸನೆ ನಮ್ಮ ಮರ್ಯದೆ ಕಳೆಯದಂತೆ ತುಟಿ ಹಲ್ಲಿನ ಬಿಗಿ ಸೆರೆಯಲ್ಲಿ ದೂಡಿ ಎಲೆಯ ಮುಂದೆ ಕುಳಿತೆವು. ಶುರುವಾಯಿತು ನೋಡಿ ಮೊದಲು ತಂಬೂಳಿ, ಆನಂತರ ಮಿಡಿ ಉಪ್ಪಿನಕಾಯಿ ರಸ ಎಣ್ಣೆ, ಮಾವಿನಕಾಯಿ ಚಟ್ನಿ ಎಣ್ಣೆ, ಸರದಿಯ ಮೇಲೆ, ಸರದಿ ಮೀರಿ ಮತ್ತೆ ಮತ್ತೆ ನಮ್ಮ ಎಲೆಯ ಕಡೆ ಹರಿದು ಬರುತ್ತಲೇ ಇದ್ದವು. ಒಬ್ಬೊಬ್ಬರೂ ಒಂದೊಂದನ್ನೂ ಅದೆಷ್ಟು ಸಲ ಕಲೆಸಿಕೊಂಡು ತಿಂದೆವೋ ಎಣಿಸುವುದು ಆ ಸಾವಿರ ಜಿಹ್ವೆಯ ಆದಿಶೇಷನಿಗೂ ಸಾಧ್ಯವಿರಲಿಲ್ಲ.
“ಬದನೆ ಕಾಯಿ ಹುಳಿ ಇದೆ” ಎಂದರು. ತುಂಬಿತೇನೋ ಎನಿಸುತ್ತಿದ್ದ ಹೊಟ್ಟೆ ತಕ್ಷಣ “ಇನ್ನೂ ಜಾಗವಿದೆ ಹಾಕು ಹಾಕು” ಎಂದರೆ, ನಾಲಿಗೆ ಮತ್ತೆ ಕೆರಳಿ “ಸವಿಯಲು ಸಿದ್ಧವಾಗಿದ್ದೇನೆ ಬರಲಿ ಬರಲಿ” ಎಂದು ಹಾರೈಸಿತು. ಧಾರಾಳವಾಗಿ ತೆಂಗಿನಕಾಯಿ ತಿರುವಿ ಹಾಕಿದ ಹುಳಿ. ಸ್ವರ್ಗದ ಸುಧೇಯೇ?! ಛೀ! ಈ ಹುಳಿಯ ಮುಂದೆ ನಿವಾಳಿಸಿ ಎಸೆಯಬೇಕು. ಮತ್ತೊಂದು ಸುತ್ತಿನ ಕೈ ಬಾಯ್ಗಳ ಪೈಪೋಟಿ ಶುರುವಾಯಿತು. ಕಡೆಯಲ್ಲಿ ಕೊತ್ತಂಬರಿ ಸೊಪ್ಪು ಒಗ್ಗರಣೆ ಹಾಕಿದ್ದ ಮಜ್ಜಿಗೆಯನ್ನ ತಿಂದು. ತೃಪ್ತಿಯಿಂದ ತೇಗಿ, ಸ್ವರ್ಗದೊಳಗೀ ಊಟ ದೊರೆವುದೇನು. ಈಗ ಹೇಳಿ ಅವತ್ತು ನಾವು ಬಕಾಸುರನ ಮರಿಮಕ್ಕಳಂತಾಗಿದ್ದು ಸುಳ್ಳೇನು??
-ರತ್ನ , ಬೆಂಗಳೂರು
ಹಸಿದಾಗಲೇ ಊಟದ ಮಹತ್ವ ಅರಿವಾಗುವುದು
ನಿಮ್ಮ ಹಾಸ್ಯಪ್ರಜ್ಞೆ ಸೂಪರ್….ಚೆಂದದ ಬರಹ.
ಕೇರಳ ಕಡೆಗೆ ಹೋದಾಗ ಸಸ್ಯಾಹಾರಿ ಹೋಟೇಲ್ ಸಿಗದೆ ಒದ್ದಾಡಿದ್ದು ನೆನಪಿಗೆ ಬಂತು. ತಿಳಿ ಹಾಸ್ಯ ಭರಿತ ಸೊಗಸಾದ ಲೇಖನ.