ಸೋಹಂ… ವಿಧಿ-ವಿಧಾನ..

Share Button

ಜೂನ್ 21 ರಂದು  ಆರನೆಯ ಅಂತರರಾಷ್ಟ್ರೀಯ ಯೋಗ ದಿನ ಸಂಪನ್ನಗೊಂಡಿತು. ಇದು ವಿಶ್ವದ ಹಬ್ಬ. ಸುಮಾರು 177 ಅಥವಾ ಅದಕಿಂತಲೂ ಹೆಚ್ಚು ರಾಷ್ಟ್ರಗಳು ಯೋಗದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಯೋಗದೊಂದಿಗೆ, ಯೋಗದ ವಿಚಾರಗಳೊಂದಿಗೆ ಆಚರಿಸುತ್ತಿವೆ..

ಭಾರತ ಸಂಜಾತ ಪದ್ದತಿ ಯೊಂದು ಹೀಗೆ ವಿಶ್ವಮಟ್ಟದಲ್ಲಿ ಗುರುತಿಸಲ್ಪಡುವುದು, ಜಗನ್ಮಾನ್ಯವಾಗುವುದು ಭಾರತೀಯರಾದ ನಮ್ಮೆಲ್ಲರ ಹೆಮ್ಮೆ. ಭಾರತೀಯ ಪರಂಪರೆಯಲ್ಲಿ ಸುಮಾರು 6000 ವರ್ಷಗಳಷ್ಟು ಹಿಂದೆಯೇ ಇಂತಹದೊಂದು ಮನೋ ಭೌತಿಕ, ಅಧ್ಯಾತ್ಮಿಕ ಆಚರಣೆ ರೂಢಿಯಲ್ಲಿತ್ತು ಎನ್ನುವುದಾದರೆ ಭಾರತೀಯರ ಜ್ಞಾನದ ಔನ್ನತ್ಯವನ್ನು ಈಗಿನವರಾದ ನಾವು ಊಹಿಸುವುದೂ ಅಸಾಧ್ಯ.

ಯೋಗವನ್ನು ಐದನೇಯ ವೇದವೆಂತಲೂ,ಅದು ಕ್ರಿಯೆಯಲ್ಲ, ಜೀವನಕ್ರಮವೆಂತಲೂ ಅತ್ಯಂತ ಸ್ಪಷ್ಟವಾಗಿ ನಮ್ಮ ಪೂರ್ವಿಕರು ಹೇಳಿದ್ದಾರೆ. ಕ್ರಿಪೂ ಮೂರನೇ ಶತಮಾನದ ಪತಂಜಲಿ ಋಷಿಗಳು ಯೋಗದ ಪಿತಾಮಹ. ಅವರು ಹಾಕಿಕೊಟ್ಟ ಅಷ್ಟಾಂಗ ಯೋಗದ ಪರಿಕಲ್ಪನೆ ಇಂದಿಗೂ ಅದೇ ಬಗೆಯಲ್ಲಿ ಅಸ್ತಿತ್ವದಲ್ಲಿರುವುದು ಅದರ ಪ್ರಖರತೆಗೆ, ಸ್ಪಷ್ಟತೆಗೆ ನಿದರ್ಶನ ಮಾತ್ರವಲ್ಲದೇ ಯೋಗ ಒಂದು ಸಾರ್ವಕಾಲಿಕ ಸತ್ಯ ಅನ್ನುವುದು ಕೂಡ ತಿಳುವಳಿಕೆಗೆ ಬರುತ್ತದೆ.

ಯೋಗದಿನವೆನುವುದು ಮೊದಲಿಂದಲೂ ಪದ್ದತಿಯಲಿದ್ದರೂ ಇದಕೊಂದು ಆಕಾರ, ರೂಪು ಕೊಟ್ಟವರು ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು. ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವದ ಕುರಿತು ತಿಳುವಳಿಕೆ ಮೂಡಿಸಿ ಜಗತ್ತು ಯೋಗದ ಮೂಲಕ ಒಂದಾಗುವುದಕೆ, ಯೋಗದಿನ ಜಗತ್ತಿನ ಹಬ್ಬವಾಗುವುದಕ್ಕೆ ಕಾರಣರಾದವರು ಮೋದಿ.

ಇನ್ನೂ ಜೂನ್ ಇಪ್ಪತ್ತೊಂದೇ ಯಾಕೆ ಯೋಗದಿನ ಎನುವುದಕ್ಕೆ ಉತ್ತರ ಆ ದಿನ ವರ್ಷದ ಅತ್ಯಂತ ದೀರ್ಘ ಹಗಲನ್ನು ಹೊಂದಿದೆ, ದೀರ್ಘಕಾಲ ಬೆಳಕನ್ನು ಪಡೆಯುವ ಈ ದಿನ ಶಕ್ತಿ ಮತ್ತು ಜ್ಞಾನ ಸಂಗಮವಾಗುವ ದಿನವೆಂತಲೂ ಸಾಮನ್ಯರ ತಿಳುವಳಿಕೆಗೆ ಒದಗುತ್ತದೆ.   ಅದಲ್ಲದೆ ‘ಪರಮಾತ್ಮನಾದ ಶಿವ ಯೋಗದ ಆದಿಗುರು’. ಶಿವನು ಈ ದಿನ ಯೋಗವನ್ನು ಮಾನವ ಜನಾಂಗಕ್ಕೆ ಬೋಧಿಸಿದನೆಂದು ಪ್ರತೀತಿಯಿದೆ.

ಪ್ರಸ್ತುತ ದಿನಗಳಲ್ಲಿ ಯೋಗ ಪ್ರಚಲಿತವಾಗುತ್ತಿರುವ ವೇಗ ಗಮನಿಸಿದರೆ ಅಷ್ಟಾಂಗ ಯೋಗದ ಕುರಿತು ಬಹುತೇಕ ಎಲ್ಲರಿಗೂ ಅರಿವಿರುತ್ತದೆ.ಯಮ,ನಿಯಮ,ಆಸನ,ಪ್ರಾಣಾಯಾಮ, ಪ್ರತ್ಯಾಹಾರ,ಧಾರಣ,ಧ್ಯಾನ,ಸಮಾಧಿ ಈ ಎಂಟು ವಿಧಗಳು.

ಯೋಗವೆಂದ ಕೂಡಲೇ ಆಸನದ ಪರಿಕಲ್ಪನೆ ಸಹಜ.ಆದರೆ ಯೋಗ ದೇಹಕಿಂತಲೂ ಮಿಗಿಲಾಗಿ ಮನಸ್ಸಿಗೆ ಸಂಬಂಧಿಸಿದ್ದು ಅನ್ನುವುದನ್ನ ಯೋಗದ ಉಳಿದ ಏಳು ಬಗೆಗಳು ತಿಳಿಸಿಕೊಡುತ್ತವೆ. ಆಸನದ ಜೊತೆಗೆ ಪ್ರಾಣಾಯಾಮ ಹೆಚ್ಚು ಪರಿಣಾಮಕಾರಿ.
ಪ್ರಾಣಾಯಾಮವನ್ನೂ ಧ್ಯಾನವನ್ನೂ ಒಂದು ನಿರ್ದಿಷ್ಟ ಬಗೆಯಲ್ಲಿ ಸೇರಿಸಿದಾಗ ಕೆಲವೊಂದು ಅದ್ಭುತವಾದ ಅನುಭವ ಲಭಿಸುತ್ತದೆ.
ಇದೇ’ ಕ್ರಿಯೆ’ ಸುದರ್ಶನ ಕ್ರಿಯೆ,ಸೋಹಂ ಕ್ರಿಯೆ ಬಹಳ ಜನಪ್ರಿಯ ಮತ್ತು ಸಾಮನ್ಯರೂ ಮಾಡಬಹುದಾದ ಕ್ರಿಯೆಗಳ ಬಗೆ.

‘ಸೋಹಂ’ ಎಂದರೆ ‘ನಾನೇ ಅವನು(ಅದು)’ ಎನುವ ಅರ್ಥ. ಇದು ಸೋಹಂ ನ ಅರ್ಥ ಮಾತ್ರ.ಅತ್ಯಂತ ಕ್ರಮಬದ್ದವಾಗಿ, ಸೂತ್ರಬದ್ದವಾಗಿ ಈ ಕ್ರಿಯೆಯ ಆಚರಣೆಗಳು ಹೇಳಲ್ಪಟ್ಟಿವೆಯಾದರೂ ಅತ್ಯಂತ ಸರಳವಾಗಿ ಆಚರಿಸಿ ಕೂಡ ಸೋಹಂ ಕ್ರಿಯೆಯ ಅದ್ಭುತ ಅನುಭವವನ್ನು ಪಡೆಯಬಹುದು. ಮುಖ್ಯವಾಗಿ ಬೇಕಿರುವುದು:
1. ಯೋಗ ಗುರುಗಳು
2. ಮಾನಸಿಕ ದೈಹಿಕ ಸಿದ್ದತೆ
3. ಅಗಲವಾದ ಜಮಖಾನೆ ಮತ್ತು ಮ್ಯಾಟ್.

‘ಅತ್ಯಂತ ವೇಗದಲ್ಲಿಯೂ ಅನಿಯಮಿತ ಲಯದಲ್ಲಿಯೂ ಇರುವ ಮನಸಿನ ಭಾವ ತರಂಗಗಳನ್ನು ಒಂದು ಕ್ರಮಬದ್ದವಾದ , ಲಯಬದ್ಧವಾದ ಗತಿಗೆ ನಿಯಂತ್ರಿಸಿ ಮನಸ್ಸನ್ನು ಸ್ವರ ಹೊಮ್ಮಿಸುವ ಸದ್ದಿನೊಂದಿಗೆ ಮಿಳಿತಗೊಳಿಸಿ ಅಸ್ಪಷ್ಟವಾದ ಭಾವಗಳನ್ನು ಸ್ಪಷ್ಟವಾಗಿ ಏಕಪ್ರಕಾರವಾಗಿ ಹೊಮ್ಮಿಸುವ ಕ್ರಿಯೆಯೇ ಜಪ,ಧ್ಯಾನ ಅಥವಾ ಸೋಹಂ’ . ಸೋಹಂ ಕ್ರಿಯೆಗೆ ನಿಗದಿಯಾದ ದಿನದ ಹಿಂದಿನ ರಾತ್ರಿಯ ಊಟ ಹಗುರಾಗಿರಬೇಕು,ಹತ್ತಿಪ್ಪತ್ತು ಒಣದ್ರಾಕ್ಷಿಗಳನ್ನು ಬಿಸಿನೀರಿನೊಂದಿಗೆ ಸೇವಿಸಿ ಮಲಗಬಹುದು. ಕ್ರಿಯೆ ಆಚರಿಸುವ ದಿನ ಬ್ರಾಹ್ಮೀ ಮುಹೂರ್ತಕ್ಕೂ ಮೊದಲೇ ಎದ್ದು ಶೌಚ,ಸ್ನಾನದಿಗಳನ್ನು ಮುಗಿಸಿ ಸಡಿಲ, ತೆಳುಬಣ್ಣದ ಉಡುಗೆ ಉಟ್ಟು ಒಂದು ಲೋಟ ಬಿಸಿ ನೀರು ಕುಡಿದು ತಯಾರಿಯಾಗುವುದು.

ಮುಂದಿನದು ಗುರುವಿನ ನಿರ್ದೇಶನಕ್ಕನುಗುಣವಾಗಿ ದೇಹವನ್ನು ಸೋಹಂಗೆ ಅನುವು ಗೊಳಿಸುವುದೇ ಆಗಿದೆ.ಸೋಹಂ ಒಂದು ಲಯಬದ್ದ ಮಂತ್ರೋಚ್ಛಾರಣೆ.ಗುರುಗಳು ಏರು ಅಥವ ಇಳಿ ಸ್ವರದಲ್ಲಿ ಸೋಹಂಅನ್ನು ಉಚ್ಚಾರಿಸುವಾಗ ಅದರ  ಲಯಕ್ಕಾನುಸಾರವಾಗಿ ಉಸಿರಾಟ ನಡೆಸುವುದು. ಇದೊಂದು ಸಾಮೂಹಿಕವಾಗಿ ನಡೆಸಬೇಕಾದ ಕ್ರಿಯೆಯಾದ್ದರಿಂದ
ಆರಂಭಿಸುವ  ಮುನ್ನ ಗುರುಗಳು ಅಭ್ಯಾಸಿಗಳನ್ನು ಮಾನಸಿಕವಾಗಿ ಸಿದ್ದಪಡಿಸುತ್ತಾರೆ. ಮೊದಲಿಗೆ ದೀರ್ಘ ಉಸಿರಾಟ, ಜ್ಯೋತಿರ್ಮಂತ್ರ,ಯೋಗದ ಶ್ಲೋಕ. ನಂತರ ಸೋಹಂ‌ ಅನ್ನು ನಾನು ಯಶಸ್ವಿಯಾಗಿ ಮಾಡುತ್ತೇನೆಂದೂ, ಅದರಿಂದಾಗುವ ಆರೋಗ್ಯ ಲಾಭಗಳಿಗಾಗಿ ಪಂಚಭೂತಗಳಿಗೆ ಋಣಿಯಾಗುವೆನೆಂದೂ ಆಟೋಸಜೆಶನ್ (ಮನೋನಿರ್ದೇಶನ) ಮಾಡಿಸುತ್ತಾರೆ.

ನಂತರದಲ್ಲಿ ವಾರ್ಮ್ ಅಪ್.
ದೇಹವನ್ನು ಸಡಿಲಗೊಳಿಸುವ ಸಲುವಾಗಿ ನಿಂತಲ್ಲಿಯೇ ನಡೆಯುವ,ಓಡುವ, ಜಿಗಿಯುವ ,ಹಿಂದೆ ಮುಂದೆ  ಬಗ್ಗುವ, ತುದಿಬೆರಳಿನವರೆಗೂ ರಕ್ತ ಪ್ರವಹಿಸುವ ಹಾಗೆ  ಈ ವಾರ್ಮ್ ಆಪ್ ಅಭ್ಯಾಸಗಳು ನಡೆಯುತ್ತವೆ.

ನಂತರದಲ್ಲಿ ಸೂರ್ಯನಾಡಿ,ಚಂದ್ರನಾಡಿಯೊಂದಿಗೆ ನಾಡಿಶುದ್ದಿ ಪ್ರಣಾಯಾಮಗಳನ್ನು ಮಾಡುತ್ತಲೇ ಹಿನ್ನೆಲೆಯಲ್ಲಿ ನಾನು ಯಾರು, ಯಾಕಿಲ್ಲಿದ್ದೀನಿ,ಉದ್ದೇಶವೇನು,ಪ್ರಕೃತಿಗೆ ಪೂರಕವಾಗಿ ಹೇಗಿರಬೇಕು ಎನುವುದನ್ನ ಕೇಳಿಸುತ್ತ ದೇಹವನ್ನು ಸಹಜ ಸ್ಥಿತಿಗೆ ತರುವುದು.

ಈಗ ಗುರುಗಳಿಂದ ಸೋಹಂ ಮಂತ್ರೋಚ್ಛಾರಣೆ.
ಸೋಹಂ ಎನುವ ಗುರುವಿನ ಧ್ವನಿಯ ಲಯಕ್ಕಾನುಸಾರವಾಗಿ ಉಸಿರಾಟದ ವೇಗವನ್ನು ಅನುವುಗೊಳಿಸುವುದು.
ಸೋಹಂ ಎಂದಾಗ ಸಹಜ
ಸೋಂ ಎಂದಾಗ ರಭಸ
ಸೋ —– ಹಂ ಎನುವಾಗ ನಿ — ಧಾ– ನ
ಸುಮಾರು ಮುಕ್ಕಾಲು ಗಂಟೆಯವರೆಗೆ ಈ ನಿಯಂತ್ರಿತ ಉಸಿರಾಟವನ್ನು ಮಾಡಿದ ನಂತರ ಸಹಜ ಉಸಿರಾಟ ಮಾಡುವಾಗ ಸೋಹಂ ನ ‌ಮಹತ್ವವನ್ನು ಹಿನ್ನೆಲೆಯಲ್ಲಿ ಕೇಳಿಸುತ್ತಾರೆ.
ಪ್ರತಿ ಚಕ್ರವನ್ನೂ ಗಮನಿಸುವಂತೆ ,ಹೊರಗಣ್ಣು‌ಮುಚ್ಚಿ ಒಳಗಣ್ಣು ತೆರೆದಿರುವಂತೆ‌ ನಮಗೆ ನಾವೇ ನಿರ್ದೇಶನ ಕೊಟ್ಟುಕೊಳುವ ಸಮಯ.  ‘ನಾನು ಈ ಕ್ರಿಯೆಯ ಮೂಲಕ ಜಗದಿಂದ ಸಕಲ ಧನಾತ್ಮಕ ಅಂಶಗಳನ್ನೂ ಪಡೆದಿದ್ದೇನೆಂಬ ಭಾವ ಹೊಂದುವುದು.’

ಅದಾದ ನಂತರದಲ್ಲಿ ಶವಾಸನ.
ಸೋಹಂ ಕ್ರಿಯೆಯ ನಿಜವಾದ ಅದ್ಭುತ ಘಟಿಸುವುದು ಈ ಸಂಧರ್ಭದಲ್ಲಿ. ಶವಾಸನದ‌ ಐದಾರು‌ ನಿಮಿಷಗಳ ನಂತರ ದೇಹ ನೆಲದಿಂದ ಸುಮಾರು ಅರ್ದ ಅಡಿ‌ ಮೇಲಕ್ಕೇರಿದ ಅನುಭವ ಅತ್ಯಂತ ಸ್ಪಷ್ಟವಾಗಿ ಆಗುತ್ತದೆ.! ಕೆಲವೇ ಸೆಕೆಂಡುಗಳ ಈ ಅನುಭವ ಅತ್ಯಂತ ವಿಶೇಷ!! ಅವನೇ ನಾನು ಎನುವ ಭಾವವೂ ನಮ್ಮ ಒಳಗೆ ದೃಢವಾಗುತ್ತದೆ.

ಇದೆಲ್ಲವೂ ಪದಗಳಿಗೆ ನಿಲುಕದ ಅನುಭವವಾದರೂ ಒಮ್ಮೆಯಾದರೂ ಯೋಗಸಕ್ತರೂ ಈ ಕ್ರಿಯೆಯಲ್ಲಿ ಪಾಲ್ಗೊಂಡು ದೇಹ ಮತ್ತು ಮನಸ್ಸನ್ನು ಶುದ್ದಿಗೊಳಿಸಿಕೊಳ್ಳಲು ಪ್ರೇರೇಪಿಸುವುದು ಬರಹದ ಉದ್ದೇಶ.

‘ವಿನಾ ದೈನೇನ ಜೀವನಂ ಅನಾಯಾಸ ಮರಣಂ’ ಎನುವ ಯೋಗದ ಮೂಲ ಉದ್ದೇಶ ಇಂತಹ ಕ್ರಿಯೆಗಳಲ್ಲಿ ಭಾಗವಹಿಸುವುದರಿಂದ ಖಂಡಿತವಾಗಿ ಸಾಧ್ಯವಾಗುವುದು. ಮತ್ತೇಕೆ ತಡ..ಸೋಹಂ ನಡೆದುಹೋಗಲಿ..
ಸೋ ___ಹಂ….ನಿ ಧಾ ನವಾಗಿ..

-ನಂದಿನಿ ವಿಶ್ವನಾಥ ಹೆದ್ದುರ್ಗ.
 

4 Responses

  1. ನಯನ ಬಜಕೂಡ್ಲು says:

    ಯೋಗ, ಪ್ರಾಣಾಯಾಮಗಳು ಮುಖ್ಯವಾಗಿ ಮಾನಸಿಕ ಸಮತೋಲನ ಹಾಗೂ ನೆಮ್ಮದಿಯನ್ನು ಕಾಪಾಡುವಲ್ಲಿ ಸಹಕಾರಿ. ಯೋಗದಿನಾಚರಣೆ ಯ ಹಿನ್ನಲೆ, ಮಹತ್ವ

  2. ASHA nooji‍್Q says:

    ಸುಪರ್

  3. ಶಂಕರಿ ಶರ್ಮ says:

    ಸೊಗಸಾದ ಸಕಾಲಿಕ ಬರಹ. ಯೋಗದ ಉಪಯೋಗಗಳು, ಮಾಡುವ ವಿಧಾನ, ಎಲ್ಲವನ್ನೂ ಒಳಗೊಂಡ ಲೇಖನ ಸರಳ ರೋಗಗಳನ್ನು ಮಾಡುವಂತೆ ಪ್ರೇರೇಪಿಸುವುದರಲ್ಲಿ ಸಂಶಯವಿಲ್ಲ… ಧನ್ಯವಾದಗಳು.

  4. Hema says:

    ಉತ್ತಮ ಮಾಹಿತಿ. ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: