ಹೀಗೊಂದು ಮೈ ಹೆಪ್ಪುಗಟ್ಟಿಸಿದ ಅನುಭವ
ನಾವು ಮುಂಬಯಿಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡು ಎರಡು ವರ್ಷಗಳಾಗಿತ್ತಷ್ಟೆ. ಅಂದರೆ 95 ನೆಯ ಇಸವಿ. ಮಕ್ಕಳಿನ್ನೂ ಚಿಕ್ಕವರು. ನನ್ನ ಪತಿಗೋ ಪ್ರವಾಸದ ವಿಪರೀತ ಖಯಾಲಿ. ಕಾಲಿಗೆ ಚಕ್ರ ಕಟ್ಟಿಕೊಂಡು ಹುಟ್ಟಿದ್ದ ಮನುಷ್ಯ….
ಬಹಳ ಮುಂಚೆಯೇ ಅಚ್ಚುಕಟ್ಟಾಗಿ ಪ್ರವಾಸದ ನಕ್ಷೆ ತಯಾರಿಸಿ, ಎಲ್ಲಿಯೂ ಯಾವ ತರಹದ ಅನಾನುಕೂಲವೂ ಆಗದಂತೆ, ಆಯಾಸವಾಗದಂತೆ, ಹೆಂಡತಿ ಮಕ್ಕಳ ಮೈ ನೋಯದಂತೆ, ಕೂದಲೂ ಕೊಂಕದಂತೆ, ಸುಖ ಪ್ರಯಾಣದ ಅಂಗವಾಗಿ ಬಸ್/ಟ್ರೈನಿನಲ್ಲಿ ಮುಂಗಡ ಸೀಟು ಕಾದಿರಿಸಿ, ವಾಸ್ತವ್ಯಕ್ಕೆ ಲಾಡ್ಜಿಂಗ್ ಬುಕ್ ಮಾಡಿ, ಇಡೀ ಪ್ರವಾಸದ ಕರಾರುವಾಕ್ಕಾದ ರೂಪುರೇಷೆ ತಯಾರಿಸಿಕೊಂಡು, ಪ್ರವಾಸವನ್ನು ಜಬರ್ದಸ್ತಾಗಿ ಮುಗಿಸಿಕೊಂಡು ಹಿಗ್ಗಿನಿಂದ ಬರುವ —–ಛೇ! ಛೇ! ಛೇ! ಇಂತಹ ಯಾವ ಕೆಟ್ಟ ಅಭ್ಯಾಸಗಳೂ ಪತಿರಾಯರಿಗೆ ಇರಲಿಲ್ಲ. ನಾಲ್ಕೈದು ದಿನ ರಜದ ಸಂದರ್ಭ ಇದೆ ಅಂದ್ರೆ ಸಾಕು *ಹೊರಟ್ಯಾ ಜೋಗಿ ಅಂದರೆ ಸುತ್ತು ಮುಂಡಾಸು* ಎಂಬ ಗಾದೆಯಂತೆ ಬಟ್ಟೆ ಬರೆ ಕಟ್ಕೊಂಡು ನಮ್ಮನ್ನೂ ಹೊರಡಿಸಿಕೊಂಡು ಮನೆ ಬಿಟ್ಟಾಗಿರುತ್ತಿತ್ತು. ಎಲ್ಲಿಗೆ ಹೋಗ್ತಿದೀವಿ? ಯಾರಿಗ್ಗೊತ್ತು? ನಮಗಿರಲಿ, ಊಹೂಂ. ಎಷ್ಟೋ ಸಲ ನನ್ನ ಪತಿಗೂ ಗೊತ್ತಿರುತ್ತಿರಲಿಲ್ಲ. ಮನೆಯಿಂದ ಸೀದಾ ಬಸ್ಟಾಂಡಿಗೆ ಹೋಗಿ ಯಾವ ಕಡೆಗೆ ಹೋಗುವ ಬಸ್ನಲ್ಲಿ ಸೀಟು ಸಿಗುತ್ತಿತ್ತೋ ಅದನ್ನು ಹತ್ತಿ ಹೊರಟ್ರಾಯ್ತು ಅಷ್ಟೆ.. ಮುಂದೆ ಹೋಗ್ತಾ ಹೋಗ್ತಾ ಹಾಗೇ ಮುಂದಿನ ಊರಿನ ಪ್ಲಾನ್ ಮಾಡಿದ್ರಾಯ್ತಲ್ವೇ? ಹಾಗೇ ಯಾವ ಲಾಡ್ಜಿಂಗ್ನಲ್ಲಿ ರೂಮ್ ಸಿಗುತ್ತೋ ಅಲ್ಲಿ ಉಳಿದುಕೊಂಡ್ರಾಯ್ತಪ್ಪ. ಬದುಕಿನ ಪ್ರಯಾಣವೇ ಅನಿಶ್ಚಿತ. ಇನ್ನು ನಮ್ಮ ಪುಟಗೋಸಿ ಪ್ರವಾಸಕ್ಕೆ ಯಾಕೆ ಸುದೀರ್ಘ ಮುಂಗಡದ ತಯಾರಿ. ಭಗವಂತ ಬುದ್ಧಿ ಕೊಡ್ತಾ ಹೋದಂಗೆ ನಾವೂ ಹೋಗ್ತಾ ಇರೋದು. ರಜಾ ಮುಗಿಯೋದ್ರೊಳ್ಗೆ ಊರಿಗೆ ವಾಪಸ್ಸಾದ್ರೆ ಸಾಕಲ್ವೇ? ಇದು ಅವರ ಸಿಂಪಲ್ ಸಿದ್ಧಾಂತ. ಹೀಗಾಗಿ ಆಗಾಗ್ಗೆ ಈ ತರಹ ಗೊತ್ತು ಗುರಿ ಇಲ್ದೇನೆ ಯಶಸ್ವಿಯಾಗಿ ಸಾಕಷ್ಟು ಸುತ್ತುತ್ತಾ ಇದ್ವಿ. ಯಾವ ತಕರಾರೂ ಇಲ್ಲದೆ ನಮಗೂ ಈ ತರಹದ ಪ್ರವಾಸ ಅಭ್ಯಾಸವಾಗಿ ಬಿಟ್ಟಿತ್ತು.
ಹೀಗೊಮ್ಮೆ ನಮ್ಮ ಖಯಾಲಿ ಮನಸುಖರಾಯನ ಜೊತೆ ಗಂಟು ಮೂಟೆ ಸಮೇತ ಸೀದಾ ಬಸ್ಟಾಂಡ್ ತಲುಪಿದೆವು. ಅಲ್ಲಿ ಮಧುರೈ ಅಂತ ತೋರಿಸ್ತಿದ್ದ ಬಸ್ಸಿನಲ್ಲಿ ಜಾಗಾನೂ ಖಾಲಿ ಇರೋದು ತಿಳಿದು, ಅಲ್ಲಿಗೇ ಹೋದ್ರಾಯ್ತು ಅಂತ ತಕ್ಷಣ ಕಿಟಕಿಯ ಮೂಲಕ ಒಂದು ಉದ್ದನೆಯ ಸೀಟಿನ ಮೇಲೆ ಕರ್ಚೀಫ್ ಎಸೆದು, ಸೀಟು ರಿಸರ್ವ್ ಮಾಡಿಕೊಂಡು, ಬೇರೆಯವರು ನಮ್ಮ ಸೀಟನ್ನು ‘ಅತಿಕ್ರಮಿಸುವ’ ಮುಂಚೆ ದಬದಬನೆ ಹತ್ತಿ ಸೀಟು ಹಿಡಿದು ಕೂತಿದ್ದಾಯ್ತು. ಒಲಿಂಪಿಕ್ನಲ್ಲಿ ಪದಕ ಗೆದ್ದೋರಿಗಿಂತ ನಮ್ಮ ಖುಷಿ ಸಂಭ್ರಮವೇನು ಕಡಿಮೆಯೇ.
ಭಗವಂತ ದಾರಿ ತೋರಿಸ್ತಾ ಹೋದಂತೆ ಮಧುರೆ, ತಂಜಾವೂರು, ಇತ್ಯಾದಿ ರಸ್ತೆಯಲ್ಲಿ ಆ ಕಡೆ ಈಕಡೆ ಸಿಕ್ಕುತ್ತಿದ್ದ ಊರುಗಳನ್ನೆಲ್ಲಾ ನೋಡ್ಕೋತಾ, ಅಲ್ಲಲ್ಲಿಯ ಕ್ಷೇತ್ರ ದೇವತೆಗಳಿಗೆಲ್ಲಾ ಅಡ್ಡಬೀಳ್ತಾ ಬಂದು ಕುಂಭಕೋಣಂ ತಲುಪಿದೆವು. ಅಲ್ಲಿಯೂ ನಮ್ಮಪ್ಪ ಶಿವಪ್ಪನಿಗೆ ಅಡ್ಡಬಿದ್ದು ಕಂಡ ಕಂಡ ದೇವಸ್ಥಾನವನ್ನೆಲ್ಲಾ ಹೊಕ್ಕು, ಒಂದಿಷ್ಟು ಊರು ಸುತ್ತಿಬಂದು ಅದೇ ದಿನ ಇಳಿಹೊತ್ತಿನ ಸುಮಾರಿಗೆ ಲಾಡ್ಜ್ ರೂಮ್ ಖಾಲಿ ಮಾಡಿ ಬೆಂಗಳೂರಿಗೆ ವಾಪಸ್ಸಾಗಲು ಕುಂಭಕೋಣಂನ ಬಸ್ ನಿಲ್ದಾಣಕ್ಕೆ ಬಂದರೆ ಬೆಂಗಳೂರಿನ ಕಡೆ ಹೋಗೋ ಒಂದೇ ಒಂದು ಬಸ್ಸೂ ಆ ಹೊತ್ನಲ್ಲಿ ಇರಬೇಡ್ವೇ!. ಏನು ಮಾಡೋದು ಅಂತ ಅಲ್ಲೆ ಇದ್ದವರನ್ನು ವಿಚಾರಿಸಿದಾಗ “ಇಲ್ಲಿಂದ ಸೀದಾ ಪನರೊಟ್ಟಿ ಅನ್ನೋ ಊರಿಗೆ ಹೋಗಿಬಿಡಿ. ಅಲ್ಲಿ ಬೆಂಗಳೂರಿಗೆ ಹೋಗೋ ಬೇಕಾದಷ್ಟು ಬಸ್ಸು ಸಿಗುತ್ವೆ” ಅಂತ ಸಲೀಸಾಗಿ ಹೇಳಿದ್ರು. ಇನ್ನೇಕೆ ತಡ ಜೈ ಅಂತ ಒಂದು ಬಸ್ ಹತ್ತಿ ಪನರೊಟ್ಟಿಗೆ ಬಂದಿಳಿದಾಗ ರಾತ್ರಿ ಒಂಭತ್ತೂ ಮುಕ್ಕಾಲು. ಆದರೆ ಅಲ್ಲಿಂದ ಬೆಂಗಳೂರಿನ ಕಡೆಗೆ ಬೆಳಗಿನ ಜಾವ 5 ಗಂಟೆಯವರೆಗೆ ಯಾವ ಬಸ್ಸೂ ಇರಲಿಲ್ಲ!.
ಇನ್ನೇನು ಮಾಡೊಕಾಗುತ್ತೆ?? ರಾತ್ರಿಯಿಡೀ ಬಸ್ಟಾಂಡ್ನಲ್ಲಿ ಕಳೆಯೋಕೆ ಆಗುತ್ಯೇ? ಯಾವ್ದಾದ್ರು ಲಾಡ್ಜ್ ನಲ್ಲಿ ಒಂದು ರೂಮ್ ಹಿಡಿದರಾಯಿತು ಅಂತ ಹತ್ರ ಪತ್ರ ಇದ್ದ ಯಾವ ಲಾಡ್ಜಿಂಗಿಗೆ ಹೋದ್ರೂ ಯಾರೂ ಬಾಗಿಲೇ ತೆಗಿಲಿಲ್ಲ. ಯಾಕಪ್ಪಾ ಅಂದ್ರೆ ಕೆಲವು ದಿನಗಳಹಿಂದೆ ಅಪರಾತ್ರಿಲಿ ಬಂದವರು ಯಾರೊ ಒಂದು ಲಾಡ್ಜಿಂಗ್ನಲ್ಲಿ ಯಾರದ್ದೊ ಕೊಲೆ ಮಾಡಿ ಹೋಗಿದ್ದರಂತೆ. “ನಾವು ಸಂಸಾರಸ್ಥರು. ಚಿಕ್ಕ ಮಕ್ಕಳಿದ್ದಾರೆ, ನಮ್ಮ ಹತ್ತಿರ ಯಾವುದೇ ಆಯುಧಗಳಿಲ್ಲ. ಬೇಕಾದ್ರೆ ನಮ್ಮ ಸಾಮಾನನ್ನೆಲ್ಲ ಪರೀಕ್ಷಿಸಿ ನೋಡಿ” ಅಂತ ನಮ್ಮ ಯಾವುದೇಅಹವಾಲನ್ನು ಕೇಳಲು ಅಥವಾ ನಮ್ಮ ದೀನ ಅಸಹಾಯಕ ಪರಿಸ್ಥಿತಿ, ಹ್ಯಾಪು ಮೋರೆ ಕಂಡು ಅಯ್ಯೋ ಪಾಪ ಅಂತ ಮರುಗಿ ಕರುಣೆಯಿಂದ ಮನಸ್ಸು ಬದಲಾಯಿಸಲು ಯಾವುದಾದರೂ ಲಾಡ್ಜಿಂಗಿನ ಮಾಲಿಕರೋ ಮ್ಯಾನೇಜರ್ರೋ ಬಾಗಿಲು ತೆರೆದು ಹೊರಗೆ ಬಂದು ನಮ್ಮನ್ನು ನೋಡಿದ್ರೆ ತಾನೆ. ಲಾಡ್ಜಿಂದ ಲಾಡ್ಜಿಗೆ ಅಲೆದಿದ್ದಷ್ಟೇ ಬಂತು. ಬೇರೆ ದಾರಿ ಕಾಣದೆ ಗಂಟು ಮೂಟೆ ಸಮೇತ ಪನರೋಟಿ ಬಸ್ಟಾಂಡಿಗೇ ವಾಪಸ್ಸಾದ್ವಿ. ಅದಾಗಲೇ ಅದೂ ಬಿಕೋ ಬಿಕೋ ಅಂತ ಖಾಲಿ ಹೊಡೀತಿತ್ತು. ಗಂಟೆ ರಾತ್ರಿ ಹನ್ನೊಂದು ದಾಟಿತ್ತು. ನೀನೇ ಅನ್ನೋರಿಲ್ಲ. ನಮಗೂ ದಿಕ್ಕು ತೋಚದ ಗಂಭೀರ ಪರಿಸ್ಥಿತಿ.
ಅಷ್ಟೊತ್ತಿಗೆ ಎಲ್ಲಿಂದಲೋ ಒಂದು ಬಸ್ ಬಂದು ಜನ ತುಪತುಪನೆ ಇಳಿದು ಬಿರಬಿರನೆ ತಮ್ಮ ಮನೆಕಡೆ ನಡೆದುಬಿಟ್ಟರು. ಕಂಡಕ್ಟರ್ ಡ್ರೈವರ್ ಕೂಡ ಬಸ್ಸಿನ ದೀಪ ಆರಿಸಿ ಹೊರಡುವವರಿದ್ದರು. ತಕ್ಷಣ ನಾವು ಹೋಗಿ ನಮ್ಮ ಅಸಹಾಯ ಪರಿಸ್ಥಿತಿ ವಿವರಿಸಿ ಆ ಬಸ್ಸಿನಲ್ಲಿ ಬೆಳಗಿನ ಜಾವದ ತನಕ ಇರಲು ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡೆವು. ಮೊದಲಿಗೆ ನಿರಾಕರಿಸಿದವರು ಆಮೇಲೆ ಬಹಳ ಉದಾರ ಮನಸ್ಸಿನಿಂದ ಅನುಮತಿಕೊಟ್ಟು ಹೊರಟು ಹೋದರು. ಬಸ್ಟಾಂಡಿನಲ್ಲಿ ಒಂದೇ ಒಂದು ಮಿಣುಕು ದೀಪ ಅಷ್ಟೆ.
ನಮ್ಮ ಆ ರಾತ್ರಿಯ ವಾಸ್ತವ್ಯದ ಆ ದಿವ್ಯ ಬಸ್ಸನ್ನೇರಿ ಮೊದಲಿಗೆ ಒಬ್ಬೊಬ್ಬರು ಒಂದೊಂದು ಸೀಟಿನಲ್ಲಿ ಮಲಗಲೆಳಸಿದೆವು. ಚಿಕ್ಕ ಮಕ್ಕಳು ಸೀಟಿನಿಂದ ಬಿದ್ದು ಬಿಟ್ಟಾರೆನಿಸಿ ಭಯವಾಗಿ ಇಬ್ಬರನ್ನೂ ನನ್ನ ಸೀಟಿಗೇ ಕರೆದು ಒಂದೊಂದು ಕೈಲಿ ತಬ್ಬಿಹಿಡಿದು ಕುಳಿತೆ. ಮಕ್ಕಳು ಹಾಗೇ ಮುದುರಿಕೊಂಡರು. ನಮ್ಮವರು ಮತ್ತೊಂದು ಸೀಟಿನಲ್ಲಿ ಜಾಗರಣೆಯಲ್ಲಿ ಕಾವಲಿಗೆ ಕುಳಿತರು. ಸಧ್ಯ ರಾತ್ರಿಗೇನೋ ಒಂದು ವ್ಯವಸ್ಥೆ ಆಯಿತಲ್ಲ ಎಂದು ಇದ್ದುದರಲ್ಲೆ ಸ್ವಲ್ಪ ಸಮಾಧಾನ ಪಟ್ಟುಕೊಳ್ಳುವುದರೊಳಗೇ ಶುರುವಾಯಿತು ನೋಡಿ ಸೊಳ್ಳೆಗಳ ಭೈರವ ನರ್ತನದ, ರಣ ಕಹಳೆಯ ಭೀಕರ ಅವ್ಯಾಹತ ದಾಳಿ. ಇದುವರೆವಿಗೂ ನಮ್ಮೊಂದಿಗೆ ಕಮಕ್ ಕಿಮಕ್ ಅನ್ನದೆ ಎಲ್ಲವುದಕ್ಕೂ ಹೊಂದಿಕೊಂಡಿದ್ದ ಮಕ್ಕಳು ಅಕ್ಷೋಹಿಣಿ ಸಂಖ್ಯೆಯ ಸೊಳ್ಳೆಗಳು ಏಕಕಾಲದಲ್ಲಿ ರಕ್ತಹೀರತೊಡಗಿದಾಗ ಕಂಗಾಲಾಗಿ, ತಾಳಲಾಗದೆ ಅಳತೊಡಗಿದರು. ತಕ್ಷಣ ಕಿಟ್ ಬ್ಯಾಗಿನಲ್ಲಿದ್ದ ತೆಳ್ಳನೆಯ ಪಂಚೆ ತೆಗೆದು ಅದನ್ನು ಮಕ್ಕಳಿಗೆ ಹೊದಿಸಿ ನಾನೂ ಕೈ ಮೇಲೆ ಹೊದ್ದುಕೊಂಡೆ. ಸೊಳ್ಳೆಗಳ ಬೃಹದ್ ಸೈನ್ಯ ಕ್ಯಾರೇ ಅನ್ನಲಿಲ್ಲ. ಹಿಂಡು ಹಿಂಡಾಗಿ ಮೈಮೇಲೆ ದಂಡುಗಟ್ಟಿ ದಾಳಿಮಾಡುತ್ತಿದ್ದ ಆ ರಕ್ತ ಪಿಪಾಸುಗಳಿಂದ ಮೂವರನ್ನು ರಕ್ಷಿಸುವ ಸಾಮರ್ಥ್ಯ ಆ ಒಂದು ಬಡಪಾಯಿ ಪಂಚೆಗೆಲ್ಲಿ ಸಾಧ್ಯವಿತ್ತು. ಮತ್ಯಾವ ಆಯುಧ ನಮ್ಮ ಬಳಿಯಿತ್ತು. ನಿರಾಯುಧರೂ, ಅಸಹಾಯಕರೂ ಆದ ನಮ್ಮಮೇಲೆ ಅವುಗಳು ರಾಕ್ಷಸ ಕ್ರೌರ್ಯದ ಅಟ್ಟಹಾಸದಿಂದ ಎರಗುತ್ತಲೇ ಇದ್ದವು. ಕ್ಷಣವೊಂದು ಹನ್ನೆರಡು ಯುಗವಾಗಿ ತೃಣಕಿಂತ ಕಡೆಯಾಗಿ ಸಹಿಸಲಾಗದ ಮಶಕಗಳ ನಿರ್ದಯ ಕ್ರೌರ್ಯದಿಂದ ತತ್ತರಿಸಿ, ಓಹ್! ಬದುಕಿನಲ್ಲಿ ಹೀಗೂ ಒಂದು ಪರೀಕ್ಷೆಯ ಸಂದರ್ಭ ಬರುವುದುಂಟೇ ಎಂದು ಸೋತು ಅಸಹಾಯಕರಾಗಿ ಈ ನರಕದಿಂದ ಬಿಡುಗಡೆ ತರುವ ರಕ್ಷಕ ಬಸ್ಸಿಗಾಗಿ, ಬೇಡತೊಡಗಿದೆವು. ಕಾಯತೊಡಗಿದೆವು. ಈ ನರಕ ಯಾತನೆಗೆ ಅಂತ್ಯವೇ ಕಾಣದೇನೋ ಅನ್ನುವಂತಹ ಸುದೀರ್ಘ ನಿರೀಕ್ಷೆಯ ನಂತರ ತಾರಕನಂತೆ ಬಸ್ ಬಂದಿತು. ಬಿಡುಗಡೆಯ ನಿಟ್ಟುಸಿರಿನೊಂದಿಗೆ ಸಂತಸದಿಂದ ಆ ಬಸ್ ಏರಿದೆವು. ನಾವೂ ಸೇರಿ ಬಸ್ಸಿನಲ್ಲಿ ಹತ್ತು ಹದಿನೈದು ಜನ ಅಷ್ಟೆ. ಮುಂದು ಮುಂದಿನ ಊರುಗಳಲ್ಲಿ ಜನ ಹತ್ತುತ್ತಾರಲ್ಲ ಎಂದುಕೊಂಡೆ.
ಟಾರಿನ ಹೆಸರೂ ಅರಿಯದೆ ಮೈ ಚಾಚಿ ಹಾಯಾಗಿ ಮಲಗಿದ್ದ ಆ ಕೆಟ್ಟ ರಸ್ತೆಯ ಮೇಲೆ ಡೊಂಕುಡೊಂಕಾಗಿ ಕುಣಿಯುತ್ತಾ ಸಾಗುತ್ತಿದ್ದ ಬಸ್ಸಿನ ಹೆಡ್ ಲೈಟಿನ ಬೆಳಕು ಬಿಟ್ಟು ಉಳಿದೆಲ್ಲಾ ಕಡೆ ಗವ್ವೆನ್ನುವ ರಾಕ್ಷಸ ಕತ್ತಲೆ. ಇನ್ನೇನು ಬೆಳಕಾಗುತ್ತದಲ್ಲ ಎಂಬ ಒಂದಿಷ್ಟು ಭರವಸೆಯ ನಿರಾಳ ಭಾವದಲ್ಲಿದ್ದಾಗಲೇ ಬಸ್ಸು ಗಕ್ಕನೆ ನಿಂತಿತು. ನಿದ್ರೆಗೆ ಜಾರುತ್ತಿದ್ದವಳು ಚಕ್ಕನೆ ಕಣ್ತೆರೆದಾಗ ಬಸ್ಸಿನ ಹೆಡ್ಲೈಟ್ ಬೆಳಕಲ್ಲಿ ಕಾಣಿಸಿದ ದೃಶ್ಯ ಮೈಯಲ್ಲಿ ನಡುಕ ತಂದಿತು. ಹಿಮ ಎರಚಿದಂತಾಗಿ ಮೈ ಮರಗಟ್ಟಿ ಹೋಯಿತು.
ಒಂದು ಎಂಟು ಹತ್ತುಜನ ಬಲವಂತವಾಗಿ ಬಸ್ ನಿಲ್ಲಿಸಿದ್ದಾರೆ. ಬಸ್, ಮುಂದೆ ಚಲಿಸಲಾಗದಂತೆ ರಸ್ತೆಗೆ ಅಡ್ಡಲಾಗಿಟ್ಟುವುದು ಕಲ್ಲುಗಳೇ! ಹಾಗಾದರೆ ಇವರು ಪ್ರಯಾಣಿಕರಲ್ಲ. ದರೋಡೆಕೋರರೇ! ಕಳ್ಳರೇ! ಭೀತಿಯಿಂದ ಕೈಕಾಲು ನಡುಗತೊಡಗಿತು. ಒಡವೆ ಹಣ ದೋಚಿದರೂ ಪರವಾಗಿಲ್ಲ. ಪ್ರಾಣಕ್ಕೆ ಹಾನಿ ಮಾಡದಿದ್ದರೆ ಸಾಕು ದೇವರೇ ಎಂದು ಆರ್ತಳಾಗಿ ಬೇಡತೊಡಗಿದೆ. ರಾತ್ರಿ ಇಡೀ ನರಕ ಅನುಭವಿಸಿದ್ದ ಮಕ್ಕಳಿಬ್ಬರೂ ಅಮ್ಮನ ಅಕ್ಕಪಕ್ಕ ತನಿ ನಿದ್ರೆಗೆ ಜಾರಿದ್ದರು. ಹಿಂದಿನ ಸೀಟಿನಲ್ಲಿದ್ದ ಪತಿಗೂ ಜೋಂಪು ಹತ್ತಿತ್ತೇ?. ಉಳಿದವರಿಗೂ ಬೆಳಗಿನ ಜಾವದ ನಿದ್ರೆಯೇ??? ದೀಪವಾರಿಸಿದ್ದ ಬಸ್ಸಿನಲ್ಲಿ ಏನೂ ಕಾಣುತ್ತಿರಲಿಲ್ಲ. ಹುಚ್ಚುಭಯ. ದಿಕ್ಕು ತೋಚದ ಭೀತಿ. ಮಧ್ಯರಾತ್ರಿಯ ಬಸ್ಸುಗಳನ್ನು, ರೈಲುಗಳನ್ನು ಹೀಗೇ ನಿಲ್ಲಿಸಿ, ಪ್ರತಿಭಟಿಸಿದ ಪ್ರಯಾಣಿಕರ ತಲೆ ಒಡೆದು ದೋಚಿದ ಸುದ್ದಿಗಳು ನೆನಪಾಗಿ ಇನ್ನೂ ಭೀಕರ ಭಯದಿಂದ ಕೈಕಾಲು ನಡುಗತೊಡಗಿತು.
ಡ್ರೈವರ್ ತಕ್ಷಣ ಬಸ್ಸಿನ ದೀಪ ಹಾಕಿದ. ಕಂಡಕ್ಟರ್ ಮುಂದೆ ಬಂದ. ಕೂಗಾಡುತ್ತ ಆ ಗುಂಪು ರಭಸದಿಂದ ಬಸ್ಸಿಗೆ ನುಗ್ಗಿತು. ನನ್ನ ಜೀವ ಬಾಯಿಗೆ ಬಂದಿತ್ತು. ಎದೆ ಭೀಕರ ನಗಾರಿಯಾಗಿತ್ತು. ಧ್ವನಿ ಶವವಾಗಿ ಹೋಗಿತ್ತು. ಮಕ್ಕಳನ್ನು ರಕ್ಷಿಸುವಂತೆ ಇನ್ನಷ್ಟು ಬಿಗಿಯಾಗಿ ಅಪ್ಪಿಕೊಂಡೆ……..ಬಸ್ಸಿನಲ್ಲಿದ್ದವರಲ್ಲಿ ನಾನೊಬ್ಬಳೇ ಹೆಂಗಸು. ನುಗ್ಗಿದವರ ಕಣ್ಣಿಗೆ ಬೀಳದಿರುತ್ತೇನೆಯೇ? ಬೇರೆಯವರ ಬಳಿ ಹೋಗುತ್ತಿದ್ದವರೂ ನನ್ನ ಬಳಿಯೇ ಧಾವಿಸಿಬಂದು……….ಮುಗೀತು ನನ್ನ ಕತೆ ………..ಎಂದುಕೊಳ್ಳುವ ಹೊತ್ತಿಗೆ….
*ಯಾಪಿ ನೂ ಯರ್ ಸಿಸ್ಟರ್, ಯಾಪಿ ನೂ ಯರ್ ಸಿಸ್ಟರ್* ಎನ್ನುತ್ತಾ, ಒಬ್ಬೊಬ್ಬನೂ ಕಿವಿಯವರೆಗೂ ಕಿಸಿಯುತ್ತಾ, ಪೈಪೋಟಿಯ ಮೇಲೆ ನನ್ನ ಕೈ ಕುಲುಕಿದ್ದೂ ಕುಲುಕಿದ್ದೇ, ಅಷ್ಟೇ ಅಲ್ಲದೆ ಕಾಬಾಳೆ ಹೂ, ಚೆಂಡು ಹೂ, ಮತ್ಯಾಯಾವುದೊ ಕಾಡು ಹೂ, ಪೆಪ್ಪರಮಿಂಟು, ರ‌್ಯಾಪರ್ ಇಲ್ಲದ ಚಾಕೊಲೇಟ್ ಹೀಗೇನೇನೊ ಕೈಗೆ ತುರುಕಿ, ಉಳಿದವರಿಗೂ *ಯಾಪಿ ನೂ ಯರ್* ಹೇಳಿ ಬಂದಂತೆಯೇ ಸರ ಸರ ಬಸ್ಸಿನಿಂದಿಳಿದು ಕತ್ತಲಲ್ಲಿ ಮಾಯವಾಗಿಬಿಟ್ಟರು.
ಅಂದು 1996 ರ ಜನೆವರಿ 1ರ ಮುಂಜಾವು ಎಂದು ಆಗ ನೆನಪಾಯಿತು.
-ರತ್ನ ಮೂರ್ತಿ, ಬೆಂಗಳೂರು
ಲೇಖನ ಓದುತ್ತಿದದಂತೆ ಭಯದಿಂದ ರೋಮಾಂಚನ ವಾಗುತ್ತಾ ಮುಗಿಯುವಾಗ ಆತಂಕ ವೆಲ್ಲ ಕರಗಿ ಮುಗುಳ್ನಗೆ ತೇಲಿತು..ನಿರೂಪಣೆ ಸೂಪರ್
ಧನ್ಯವಾದಗಳು
Very interesting
ಚಂದದ ಬರಹ
ಸುಪರ್ಬ್. ಮುಂದೇನಾಯಿತು ಅನ್ನುವ ಕುತೂಹಲವನ್ನು ಹೆಚ್ಚಿಸುತ್ತಲೇ ಓದಿಸಿಕೊಂಡು ಹೋಯಿತು ಲೇಖನ.
ಯಬ್ಬ ನನಗೂಓದುವಾಗ ನಡುಕವಾಯಿತುಏನೂ .ಆಗಿಲ್ಲತಾನೇ
ಸುಪರ್
ವಾಹ್… ಓದುತ್ತಾ ನಿಮ್ಮಂತೆಯೇ ನಾನೂ ಹೆದರಿ ದಿಗ್ಮೂಢಳಾದೆ…ದೇವಾ..ಇನ್ನೇನು ಗತಿ ಎಂದು!!…ಆಹಾ ಕೊನೆಗಂತೂ ನಗೆ ತಡೆಯಲಾಗಲಿಲ್ಲ… ಸೂಪರ್ ಬರಹ ಮೇಡಂ..!!..ಇದೇ ಅಲ್ಲವೇ ಹಗ್ಗ ಹಾವಾಗಿ ಕಾಣುವುದು??
ನಿಮ್ಮ ಹಾಸ್ಯ ಪ್ರಜ್ಞೆ ಸೂಪರ್
Fine
ಈ ಬರಹವನ್ನು ಓದುವಾಗ ಮೈ ನವಿರೇಳುತ್ತಿದೆ..ಹಾಸ್ಯಭರಿತ ನಿರೂಪಣೆ ಇಷ್ಟವಾಯಿತು..