ನಿಮ್ಮ ಹೋಲುವರಿಹರೇ ಈ ಜಗದಲಿ?

Share Button

ಕೆಲವು ವರ್ಷಗಳ ಹಿಂದಿನ ಘಟನೆ. ನನ್ನ ಯಜಮಾನರ ಜೊತೆ ಹೋಟೆಲ್ಲಿಗೆ ಹೋಗಿದ್ದೆ. ತಿಂಡಿ-ಕಾಫಿ ಸೇವನೆಯಾದ ನಂತರ ಹೋಟೆಲ್ಲಿನ ಹೊರಗೆ ಬಂದು ನಿಂತಿದ್ದೆ. ಯಜಮಾನರಿನ್ನೂ ಬಿಲ್ ಮೊತ್ತವನ್ನು ಪಾವತಿಸುತ್ತಿದ್ದರು. ಆಗ ಓರ್ವ ವ್ಯಕ್ತಿ ಮುಗುಳ್ನಗುತ್ತಾ ನನ್ನ  ಹತ್ತಿರ ಬಂದು “ಓ, ಟೀಚರ್ ನಮಸ್ಕಾರ” ಅನ್ನುತ್ತಾ ವಂದಿಸಿದಾಗ ನಾನೂ ಪ್ರತಿವಂದಿಸಿದೆ. ಆದರೆ ಎಷ್ಟು ನೆನಪಿಸಿದರೂ ಆ ವ್ಯಕ್ತಿ ಯಾರೆಂದು ನನ್ನ ನೆನಪಿಗೆ ಬರಲಿಲ್ಲ.  ಆದರೂ ಮನಸ್ಸಿನೊಳಗೆ ನನ್ನನ್ನು ಟೀಚರ್ ಅಂತ ಅನ್ನುವ ಈ ವ್ಯಕ್ತಿ ಯಾರಪ್ಪಾ ಅಂತ ಸಂಶಯ ಬಂದಿತ್ತು. ಕಾಲೇಜಿನ ವಿದ್ಯಾರ್ಥಿಗಳೇನಿದ್ದರೂ ಮೇಡಂ ಅಥವಾ ಮ್ಯಾಮ್ ಅಂತ ಕರೆಯುವುದು ರೂಢಿಯಾಗಿತ್ತು. “ಏನು, ಟೀಚರಿಗೆ ಪರಿಚಯ ಸಿಗಲಿಲ್ಲ ಅನಿಸುತ್ತದೆ. ನಾನು ಎರಡು ತಿಂಗಳ ಹಿಂದೆ ನಿಮ್ಮ ಶಾಲೆಗೆ ಬಂದಿದ್ದೆ” ಅಂದಾಗ ನಾನಿನ್ನೂ ತಬ್ಬಿಬ್ಬು. “ಶಾಲೆಗಾ?” ತಡವರಿಸಿದ ನನ್ನನ್ನು ಕಂಡ ಆ ವ್ಯಕ್ತಿ ಶಾಲೆಯ ಹೆಸರೊಂದನ್ನು ಹೇಳಿ “ನೀವು ಆ ಶಾಲೆಯ ಟೀಚರ್ ಅಲ್ವಾ?” ಅಂತ ಪ್ರಶ್ನಿಸಿದಾಗ ಅಲ್ಲವೆಂದು ತಲೆಯಲ್ಲಾಡಿಸಿದೆ. “ಓಹ್. ಆ ಟೀಚರ್ ನೋಡಲು ಥೇಟ್ ನಿಮ್ಮ ತರಹವೇ ಇದ್ದಾರೆ. ಅವರೇ ಅಂತ ತಿಳಿದುಕೊಂಡು ಮಾತನಾಡಿಸಿದೆ. ದಯವಿಟ್ಟು ತಪ್ಪು ತಿಳಿಯಬೇಡಿ” ಅನ್ನುತ್ತಾ ಹೊರಟು ಹೋದರು. 

ನನಗೆ ರೀತಿಯ ಅನುಭವವಾಗಿದ್ದು ಒಂದು ಸಲವಲ್ಲಹಲವು ಬಾರಿ ಆಗಿದೆ.   ಇನ್ನೊಂದು ಸಲ ಪೇಟೆಯಲ್ಲಿ ಸಿಕ್ಕ ಅಪರಿಚಿತರೊಬ್ಬರು ಆತ್ಮೀಯವಾಗಿ ನಗುತ್ತಾಈರ್ ಏಪೋ ಬೆಂಗಳೂರುಡ್ದ್ ಬತ್ತಿನ? ಈರ್ ಒರ್ತಿಯೇ ಬತ್ತಿನನ? ಭಾವೆ ಬೈಜೆರಾ? (ನೀವು ಯಾವಾಗ ಬೆಂಗಳೂರಿಂದ ಬಂದಿದ್ದು? ನೀವು ಒಬ್ಬರೇ ಬಂದಿದ್ದಾ? ಭಾವ ಬರಲಿಲ್ವಾ?”) ಅಂತ ಪ್ರಶ್ನಿಸಿದಾಗ ಅಸಾಮಿ ನನ್ನನ್ನು ತಮ್ಮ ಸಂಬಂಧದವರು ಅಂತ ತಿಳಿದುಕೊಂಡು ಮಾತನಾಡಿದ್ದಾರೆ ಅನ್ನುವುದು ಖಾತರಿಯಾಗಿತ್ತು. ಅದಕ್ಕೆ ಮೌನಕ್ಕೆ ಶರಣಾಗಿದ್ದೆ. ಆಗ ವ್ಯಕ್ತಿ ನೋಡಿದ ನೋಟದಲ್ಲಿಇವಳಿಗೆ ತುಂಬಾ ಗತ್ತು ಕಾಣುತ್ತದೆ. ಮಾತನಾಡಿಸಿದರೂ ಮಾತನಾಡುವುದಿಲ್ಲಅನ್ನುವ ಭಾವ ವ್ಯಕ್ತವಾಗಿತ್ತು. ನಾನು ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಅನೇಕ ಅನುಭವಗಳಾಗಿತ್ತು. “ನೀವು ಚಿತ್ರದುರ್ಗದವರಾ?”, “ನಿಮ್ಮ ಊರು ಬೆಳ್ಳಾರೆಯಾ?”, “ನೀವು ಉಡುಪಿಯ ಕಾಲೇಜಿನಲ್ಲಿ ಓದಿದ್ದಾ?”, ಅಂತೆಲ್ಲಾ ಪ್ರಶ್ನಿಸಿದವರು ಇದ್ದರು. ನನ್ನನ್ನು ಹೋಲುವ ಇಷ್ಟೊಂದು ಜನರಿರುವರೇ ಅನ್ನುವ ಅಚ್ಚರಿ ಮನದಲ್ಲಿ ಮೂಡಿದ್ದಂತೂ ನಿಜ. ಇದೇ ವಿಷಯವನ್ನು ನನ್ನ ಸಹಪಾಠಿಯೊಬ್ಬಳ ಬಳಿ ಹೇಳಿಕೊಂಡಿದ್ದೆ. “ಅಯ್ಯೋ ಪೆದ್ದಿ. ಎಲ್ಲರೂ ಹೇಳಿದ್ದನ್ನು ಸತ್ಯ ಅಂತ ನಂಬಬೇಡ. ಹುಡುಗಿಯರನ್ನು ಪರಿಚಯಿಸಿಕೊಂಡು ತಮ್ಮತ್ತ ಸೆಳೆದುಕೊಳ್ಳಲು ಹುಡುಗರು ಅನುಸರಿಸುವ ತಂತ್ರಗಾರಿಕೆಯಲ್ಲಿ ಇದೂ ಒಂದುಅನ್ನುವ ಅವಳ ಉತ್ತರ ಕೇಳಿ ನಾನು ದಂಗಾಗಿದ್ದೆ.

ಆದರೂ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಸೇರಿದ ನಂತರ ನನ್ನ ಮುಖ ಚಹರೆ ಹೋಲುವ ನಾಲ್ಕೈದು ವಿದ್ಯಾರ್ಥಿನಿಯರನ್ನು ಕಂಡಿದ್ದೇನೆ. ಇನ್ನೊಬ್ಬ ವಿದ್ಯಾರ್ಥಿಯಂತೂ (ನೆರೆಯ ಕೇರಳ ರಾಜ್ಯದವನು) ನನ್ನ ಸಣ್ಣ ತಮ್ಮನನ್ನು ಹೋಲುತ್ತಿದ್ದ. ಅವನ ನಡೆ ನುಡಿ, ವರ್ಚಸ್ಸು, ಬುದ್ಧಿವಂತಿಕೆ ಎಲ್ಲವೂ ನನ್ನ ತಮ್ಮನಂತೆಯೇ ಇತ್ತು. ಕಾಲೇಜಿನ ಕಛೇರಿ ಸಿಬ್ಬಂದಿಯೊಬ್ಬರು ಸಚಿನ್ ತೆಂಡುಲ್ಕರ್ ಅವರನ್ನು ಹೋಲುತ್ತಿದ್ದರು. ಇನ್ನೋರ್ವ ವಿದ್ಯಾರ್ಥಿ ಪಾಕಿಸ್ಥಾನದ ಕ್ರಿಕೆಟ್ ಆಟಗಾರ ಶೋಯಿಬ್ ಅಕ್ತರನನ್ನು ಹೋಲುತ್ತಿದ್ದನು. ಒಬ್ಬರಂತೆ ಇನ್ನೊಬ್ಬರಿರುವುದು ಅಚ್ಚರಿಯ ವಿಷಯವೇನಲ್ಲ. ಒಂದೇ ರೀತಿ ಹೋಲುವವರು ಜಗತ್ತಿನಲ್ಲಿ ಏಳು ಜನರು ಇರುವರೆಂಬ ಒಂದು ನಂಬಿಕೆ ಇದೆ. ಕೆಲವೊಮ್ಮೆ ಮಾತಿಗೆ ಇಂಬು ಕೊಡುವಂತಹ ಘಟನೆಗಳು ನಮ್ಮ ಸುತ್ತ ಮುತ್ತ ನಡೆಯುತ್ತಲೇ ಇರುತ್ತವೆ.

ಸಾಂದರ್ಭಿಕ ಚಿತ್ರ: ಅಂತರ್ಜಾಲ ಕೃಪೆ

ವರ್ಣತಂತುಗಳೇ ಕಾರಣವಾಗಿ ಅಪ್ಪನನ್ನೇ ಹೋಲುವ ಮಗ, ತಾಯಿಯನ್ನೇ ಹೋಲುವ ಮಗಳು, ಒಂದೇ ರೀತಿ ಇರುವ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಇವೆಲ್ಲವೂ ಸಾಮಾನ್ಯ. ಒಡಹುಟ್ಟಿದವರಲ್ಲಿ ಹೋಲಿಕೆಗಳಿರುವುದರಲ್ಲಿ ಅಚ್ಚರಿ ಏನಿಲ್ಲಹಾಗೆಯೇ ಅವಳಿ, ತ್ರಿವಳಿ ಮಕ್ಕಳಲ್ಲಿ ಕೂಡಾ ಸಮರೂಪಿಗಳು ಇರುವುದು ಎಲ್ಲರಿಗೂ ತಿಳಿದ ವಿಷಯವೇ. ಸಮರೂಪ ಅವಳಿಗಳಾಗಿ ಜನಿಸುವುದು ಅವರಿಗೆ ಪ್ರಕೃತಿ ನೀಡಿದ ಒಂದು ವಿಶೇಷ ವರ

ಆದರೆ ಸಂಬಂಧವೇ ಇಲ್ಲದೆ, ಒಬ್ಬರನ್ನೊಬ್ಬರು ಹೋಲುವ ಅನೇಕ ನಿದರ್ಶನಗಳು ಕಂಡು ಬರುತ್ತವೆ. ಇಲ್ಲಿ ಮುಖ ಚಹರೆಯ ಪರಸ್ಪರ ಹೋಲಿಕೆಯೇ ಮಾನದಂಡವಾಗಿಬಿಡುತ್ತದೆ. ಖ್ಯಾತ ಸಿನೆಮಾ ನಟರನ್ನು/ ಕ್ರಿಕೆಟ್ ಆಟಗಾರರನ್ನು/ರಾಜಕಾರಣಿಗಳನ್ನು ಹೋಲುವವರು ಅವರದೇ ರೀತಿಯಲ್ಲಿ ತಮ್ಮ ಕೂದಲು ವಿನ್ಯಾಸ ಮಾಡಿಸಿಕೊಂಡು, ಅವರ ರೀತಿಯಲ್ಲಿಯೇ ವೇಷಭೂಷಣ ಮಾಡಿ, ಅವರದೇ ಶೈಲಿಯಲ್ಲಿ ಮಾತನಾಡಿ ಅವರನ್ನೇ ಅನುಕರಿಸುತ್ತಾರೆ.  ಅದನ್ನೇ ಬಂಡವಾಳವನ್ನಾಗಿಸಿಕೊಂಡು ಜನಾಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ಹೊಟ್ಟೆ ಹೊರೆಯಲು ಸಹಾ ತಂತ್ರವನ್ನೇ ಬಳಸಿಕೊಂಡ ಜನರೂ ಇದ್ದಾರೆ.  

ನಮ್ಮ ಪ್ರಧಾನಮಂತ್ರಿಯವರನ್ನೇ ಹೋಲುವ ಸದಾನಂದ ನಾಯಕ್ ಅನ್ನುವವರು ಉಡುಪಿಯಲ್ಲಿಯೇ ಇದ್ದಾರೆ. ಹಲವು ಸಭೆ ಸಮಾರಂಭಗಳಲ್ಲಿ ಜನಾಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಕನ್ನಡದ ವರನಟ ಡಾ ರಾಜ್ ಕುಮಾರರನ್ನೇ ಹೋಲುವ ಕೆಲವರು ಅವರ ನಡೆ, ನುಡಿ, ಹಾಡುವ ಶೈಲಿ, ನಟನೆ ಮೈಗೂಡಿಸಿಕೊಂಡು ಜೂನಿಯರ್ ರಾಜ್ ಕುಮಾರ್ ಅನ್ನುವ ಬಿರುದಿನೊಂದಿಗೆ ಪ್ರಸಿದ್ಧಿಗೆ ಬಂದಿದ್ದಾರೆಡಾ.ರಾಜ್ಕುಮಾರ್ಅವರ ತದ್ರೂಪಿನಂತಿರುವ  ಅಶೋಕ್ಬಸ್ತಿ ಅನ್ನುವವರನ್ನು ಕಂಡು  ಸ್ವತಃ ಡಾ.ರಾಜ್ಅವರಿಗೆ ಅಚ್ಚರಿಯಾಗಿತ್ತಂತೆ. “ಥೇಟ್ ನನ್ನ ತರಾನೇ ಇದ್ದೀಯ. ನಮ್ಮಿಬ್ಬರಲ್ಲಿ ಯಾರು ರಾಜ್ ಕುಮಾರ್ ಅಂತ ಗೊತ್ತಾಗ್ತಿಲ್ಲಅನ್ನುತ್ತಾ ಅಶೋಕ್ ಗಸ್ತಿಯವರ ಮೂಗು, ಹುಬ್ಬು, ಗಲ್ಲ ಮುಟ್ಟಿ ಸಂಭ್ರಮಿಸಿದ್ದರಂತೆ ಡಾ. ರಾಜ್ ಕುಮಾರ್ಹಾಗೆಯೇ ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಉಪೇಂದ್ರ, ಜೂನಿಯರ್ ರವಿಚಂದ್ರನ್, ಜೂನಿಯರ್ ಶಂಕರ್ ನಾಗ್,…. ನಮ್ಮ ಮಧ್ಯೆ ಇದ್ದಾರೆ. ಇನ್ನು ಕೆಲವರಿದ್ದಾರೆಖ್ಯಾತ ಗಾಯಕರದೇ ಶೈಲಿಯಲ್ಲಿಯೇ ಅವರ ರೀತಿಯ ಸ್ವರದಲ್ಲಿ ಹಾಡಿ, ಜನರನ್ನು ರಂಜಿಸುವವರು

ಎಷ್ಟೋ ಚಲನಚಿತ್ರಗಳಿಗೆ ವಸ್ತುವಾದ ವಿಷಯ ತದ್ರೂಪಿಗಳದು. ಅವಳಿಗಳು, ಕ್ಲೋನಿಂಗ್ ಅವಳಿಗಳು, ಹಾಗೇ ಒಬ್ಬರನ್ನೊಬ್ಬರು ಹೋಲುವ ತದ್ರೂಪಿಗಳನ್ನು ಬಳಸಿಕೊಂಡು ಅನೇಕ ಚಲನಚಿತ್ರಗಳು ತೆರೆಗೆ ಬಂದಿವೆ..   ಕಳೆದುಕೊಂಡ ಮಗನನ್ನೋ ಅಥವಾ ಮಗಳನ್ನೋ ಹೋಲುವವರು ಸಿಕ್ಕಿದಾಗ, ಅವರಿಗೆ ಪ್ರೀತಿ ಧಾರೆ ಎರೆದವರೂ, ಅಗಲಿದ ಒಡಹುಟ್ಟಿದವರನ್ನು ಹೋಲುವವರು ಸಿಕ್ಕಿದಾಗ ಅವರನ್ನೇ ಆಣ್ಣ/ಅಕ್ಕ/ತಮ್ಮ/ತಂಗಿಯಾಗಿ ಸ್ವೀಕರಿಸಿದ ಅದೆಷ್ಟೋ ನಿದರ್ಶನಗಳಿವೆ. ಒಟ್ಟಿನಲ್ಲಿ ಒಬ್ಬರ ಮುಖ ಚಹರೆಯನ್ನು ಹೋಲುವ ಕೆಲವರಿರುವುದು ಸೃಷ್ಟಿಯ ಅದ್ಭುತವೇ ಸರಿ. ನಿಮಗೂ ಇಂತಹ ಅನುಭವಗಳಾಗಿವೆಯೇ? ನಿಮ್ಮ ಹೋಲುವರಿಹರೇ ಜಗದಲಿ?

-ಡಾ.ಕೃಷ್ಣಪ್ರಭಾ. ಎಂ., ಮಂಗಳೂರು

   

19 Responses

  1. ASHA nooji says:

    ಸುಪರ್ ಬರಹ .ಪ್ರಭ ಎಷ್ಟೋಜನರು ನನ್ನಲ್ಲಿ ನಿಮ್ಮಲ್ಲಿ ಕೇಳಿದಹ‍ಾಗೆನೇಕೇಳಿದರು .facebookali kuuda mathanadisuvaru ಹೌದು 7ಜನರಿರುವರೆಂದು ಹೇಳುವುದು ಸತ್ಯ ನಮ್ಮಮನೆಗೆ ಕೆಲಸದವಬಂದು ಹೇಳಿದ ನೀವು ನಿನ್ನೆ ಮಂಗಳೂರಿಗೆ ಪೋತಾರತ್ತ endu

    • Krishnaprabha says:

      ನಿಮಗೂ ಅಂತಹ ಅನುಭವ ಆಗಿದೆ ಹಾಗಾದರೆ..
      ಮೆಚ್ಚುಗೆ ವ್ಯಕ್ತಪಡಿಸಿದ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  2. Savithri bhat says:

    ಬಹಳ ಚೆನ್ನಾದ ಬರಹ. ನಿಮ್ಮ ಅನುಭವ, ಓದಿ ನನಗೂ ಒಮ್ಮೆ ಆದ ಅನುಭವ ನೆನಪಾಯಿತು.

    • Krishnaprabha says:

      ಓಹ್… ಹೌದಾ? ಪ್ರತಿಕ್ರಿಯೆಗೆ ಧನ್ಯವಾದಗಳು

  3. ರಾಜ್ ಶೇಖರ ಕೆ.ಸಿ. says:

    ಅಯ್ಯೋ ಮೇಡಮ್ ನಾನು ಕೂಡ ನಿಮ್ಮ ತಂಗಿಯನ್ನು ನೀವೇ ಅಂತ ಹಲವು ವರ್ಷ ತಿಲ್ಕೋಂಡಿದ್ದೆ, ಅಮೇಲೆ ಕಾರ್ street ಕಾಲೇಜಗೆ ಬಂದ ಮೇಲೆ ಅವರು ನೀವಲ್ಲ ನೀವು ಅವರಲ್ಲ ಅಂತ ತಿಳಿಯಿತು.

    • Krishnaprabha says:

      ನಾನವಳಲ್ಲ ಅಂತ ಕೊನೆಗೂ ಗೊತ್ತಾಯಿತಲ್ಲ….!
      ಪ್ರತಿಕ್ರಿಯೆಗೆ ಧನ್ಯವಾದಗಳು

  4. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ ಬರಹ, ಹೌದು ನಾನೂ ಕೆಲವರು ಒಂದೇ ತರದ ಹೋಲಿಕೆ ಇರುವವರನ್ನು ನೋಡಿದ್ದೇನೆ. ನಾನು ಕಾಲೇಜಿಗೆ ಹೋಗುತಿದ್ದ ದಿನಗಳಲ್ಲಿ ಒಬ್ಬ ಬಸ್ ಕಂಡಕ್ಟರ್ ಇದ್ದ, ಅವನು ನೋಡಲಿಕ್ಕೆ ಡಿಟ್ಟೋ ಫಿಲಂ ಆಕ್ಟರ್ ರವಿಚಂದ್ರನ್ ತರ ಇದ್ದ. ನಾವೆಲ್ಲಾ ಅವನನ್ನು ರವಿಚಂದ್ರನ್ ಅಂತಾನೇ ಕರೆಯುತ್ತಿದ್ದೆವು ಕೂಡಾ.

    • Krishnaprabha says:

      ಎಲ್ಲರ ನೆನಪಿನ ಬುತ್ತಿಯಲ್ಲೂ ಇಂತಹ ಅನುಭವಗಳು ಇರುವ ವಿಷಯ ತಿಳಿದು ಖುಷಿಯಾಯಿತು…ಚಂದದ ಪ್ರತಿಕ್ರಿಯೆಗೆ ಮನದಾಳದ ಧನ್ಯವಾದಗಳು ನಯನಾ

  5. ಹರ್ಷಿತಾ says:

    ಸುಂದರ ಬರಹ ಮೇಡಂ,..ನಾನು ಆಯುರ್ವೇದ ಪದವಿ ಕಲಿಯುತ್ತಿದ್ದಾಗ ,ತರಗತಿಯಲ್ಲಲಿ ಸುಮಾರಾಗಿ ನನ್ನನ್ನೇ ಹೋಲುವ ಇಬ್ಬರು ಸಹಪಾಠಿಗಳಿದ್ದರು. ನಮ್ಮ ಗುರುಗಳೊಬ್ಬರು ನಮಗೆ ತ್ರೀ ಸಿಸ್ಟರ್ಸ್ ಎಂದೇ ಕರೆಯುತ್ತಿದ್ದರು..

    • Krishnaprabha says:

      ಮೂರು ಜನರು ಒಂದೇ ತರಗತಿಯಲ್ಲಿ… ಅದೂ ಆಯುರ್ವೇದ ಕಾಲೇಜಿನಲ್ಲಿ….
      ಲೇಖನ ಮೆಚ್ಚಿದ ನಿಮಗೆ ಧನ್ಯವಾದಗಳು

  6. Anonymous says:

    ಹೌದು ಕೃಷ್ಣಪ್ರಭ.ನನಗೂ ಅನುಭವ ಆಗಿದೆ.ಎಲ್ಲರಿಗೂ ಆಗಿರ್ತದೆ.ಆದರೆ ಆ ಅನುಭವವನ್ನು ನಿಮ್ಮಷ್ಟು ಚಂದವಾಗಿ ಬರೆಯುವವರು ಯಾರೂ ಇಲ್ಲ.ಸೂಪರಾಗಿದೆ .ನಮ್ಮಲ್ಲಿ ಒಬ್ರು ‌ಕ್ಯಾಟರಿಂಗ್ನವರು ಬರ್ತಿದ್ರು.ಅವರನ್ನು ನಾವು ಸಿನೀಮಾ ನಟ “ಸುದೀಪ್” ಹೆಸರಲ್ಲೇ ಕರಿತಿದ್ವಿ.
    ಮತ್ತೊಂದು ವಿಷ್ಯ,ನನಗೂ ನಿಮ್ಮಫೊಟೋ ಫಸ್ಟ್ ನೋಡಿದಾಗ ಯಾರೋ ತುಂಬ ಫೆಮಿಲಿಯರ್ ಅನ್ನೋ ಫೀಲಿಂಗ್ ಆಗಿದ್ದಂತೂ ಸುಳ್ಳಲ್ಲ.

    • Krishnaprabha says:

      ಓಹ್… ಜೂನಿಯರ್ ಸುದೀಪ್….ಪ್ರೀತಿಯ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು

  7. Hema says:

    ಚೆಂದದ ಬರಹ..

    • Krishnaprabha says:

      ನಿಮ್ಮ ನಿರಂತರ ಪ್ರೋತ್ಸಾಹವೇ ಬರಹಗಳನ್ನು ಬರೆಯಲು ಸ್ಪೂರ್ತಿ. ಧನ್ಯವಾದಗಳು ಅಕ್ಕ

  8. Krishnaprabha says:

    ನನ್ನ ಸಹೋದ್ಯೋಗಿ ಡಾ. ನಾಗವೇಣಿ ಅವರ ಪ್ರತಿಕ್ರಿಯೆ

    ಚಂದ ಬಂದಿದೆ ಮೇಡಂ. ದ್ವಿತೀಯ ಮಹಾ ಯುದ್ಧದ ಸಂದರ್ಭದಲ್ಲಿ ಇದೇ ಅವಕಾಶವನ್ನು ಬಳಸಿಕೊಂಡು ಮಿತ್ರರಾಷ್ಟ್ರಗಳು ಜರ್ಮನಿಯನ್ನು ಸೋಲಿಸಿದ್ದು.
    ಸೇನಾ ದಂಡನಾಯಕನ್ನು ಹೋಲುವ ಸೈನಿಕನನ್ನು ಉಪಯೋಗಿಸಿ ದಾರಿತಪ್ಪಿಸುವ ತಂತ್ರ ಬಳಸಿಕೊಂಡದ್ದು.

  9. ಶಂಕರಿ ಶರ್ಮ says:

    ಸೊಗಸಾದ ಬರಹ. ಪ್ರತಿಯೊಬ್ಬರಿಗೂ ಇಂತಹ ಅನುಭವ ಆಗ್ತಾ ಇರ್ತದೆ. ನೀವು ಅವರ ಅಕ್ಕನಾ..ಅವರ ಸೊಸೆಯಾ,..ಇವರ ತಂಗಿಯಾ..ಇತ್ಯಾದಿ.. ಇತ್ಯಾದಿ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: