ಲಹರಿ

ಅಮ್ಮ ಮತ್ತು ಒಂದು ತುಪ್ಪದ ಪ್ರಸಂಗ

Share Button

ಕೋಪ ಹಾಗೆಲ್ಲ ಬರದವರಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ನೆನೆದರೆ ಅಮ್ಮ ನೆನಪಾಗುತ್ತಾಳೆ. ನಮ್ಮ ಹಟ್ಟಿಯಲ್ಲಿ ನಾಲ್ಕೈದು ಕರಾವಿನ ದನಗಳಿದ್ದು ಮನೆಯ ಅಗತ್ಯಕ್ಕೆ ಸಾಕಾಗಿ ಮಿಕ್ಕಿದ್ದ ಹಾಲು ತುಪ್ಪ ನೆರೆಕರೆಯಲ್ಲಿ ಅಗತ್ಯವಿದ್ದವರಿಗೆ ಮಾರಾಟ ಮಾಡಿದರೆ ಬಂದ ಹಣದಿಂದ ಹಿಂಡಿ ಕೊಂಡುಕೊಳ್ಳುವ ರೂಢಿ ಇತ್ತು. ಕಾಯಿಲೆ ಕಸಾಲೆಗಳ ತುರ್ತು‌ಅಗತ್ಯಕ್ಕೆ ಬಡವರು ಬಂದರೆ ಅವರಿಗೆ ಉದರಿಯಾಗಿ ಹಾಲು, ತುಪ್ಪ ,ಮಜ್ಜಿಗೆ ಇತ್ಯಾದಿಗಳನ್ನು ಕೊಡುವ ಕ್ರಮವೂ ಇತ್ತು.ನಮ್ಮ ಮನೆಯ ತುಪ್ಪ, ಮಜ್ಜಿಗೆಗಳಿಗೆ ನೆರೆಕರೆಯಲ್ಲಿ ಒಳ್ಳೆಯ ಹೆಸರಿತ್ತು. ವಿಶೇಷ ಸಮಾರಂಭಗಳಲ್ಲಿ ಅವುಗಳ ಅಗತ್ಯ ಇದ್ದೇ ಇರುತ್ತದಲ್ಲ.ಆಗೆಲ್ಲ ಆದ್ಯತೆ ನಮ್ಮ ಮನೆಯ ಈ ಉತ್ಪನ್ನಗಳಿಗೆ ಆಗಿತ್ತು.

ಹೀಗೆ ಒಮ್ಮೆ ಹತ್ತಿರದ ಊರಿನ ಒಬ್ಬಾತ ಬಂದು ತನ್ನ ಮನೆಯ ಯಾವುದೋ ಸಮಾರಂಭಕ್ಕಾಗಿ ದನದ ತುಪ್ಪವನ್ನು ಕೊಂಡುಕೊಂಡು ಹೋಗಿದ್ದ. ಕೆಲವು ದಿನಗಳ ಬಳಿಕ ಆತ ಒಂದು ಬಾಟಲು ತುಪ್ಪದೊಂದಿಗೆ ಪ್ರತ್ಯಕ್ಷನಾಗಿದ್ದ. ನೇರವಾಗಿ ಆ ಬಾಟಲನ್ನು ಕುಕ್ಕಿದವನೇ ಈ ತುಪ್ಪ ಶುದ್ಧತುಪ್ಪ ಅಲ್ಲವೆಂದೂ ಹಾಗಾಗಿ ಅದನ್ನ ಹಿಂದೆ ತೆಗೆದುಕೊಂಡು ಹಣವನ್ನು ವಾಪಸ್ ನೀಡಬೇಕೆಂದೂ ಗಟ್ಟಿಯಾಗಿ ಒದರತೊಡಗಿದ. ಅಜ್ಜ , ಅಪ್ಪ, ದೊಡ್ಡಪ್ಪ ಎಲ್ಲ ಬಂದು ಸೇರಿದರು. ನಮ್ಮ ಮನೆಯ ಇತಿಹಾಸದಲ್ಲಿ ಅದುವರೆಗೆ ಅಂತಹದೊಂದು ಪ್ರಸಂಗ ಎದುರಾಗಿರಲಿಲ್ಲ.ಅಷ್ಟರಲ್ಲಿ ಅಮ್ಮ ಒಳಗಿನಿಂದ ಬಂದವಳೇ ವಿಷಯ ತಿಳಿದು ಬಾಟಲಿಯನ್ನು ದುರುಗುಟ್ಟಿ ನೋಡಿ ರೌದ್ರಾವತಾರವನ್ನು ತಾಳಿ- ‘ನೀನು ತಂದಿರುವ ತುಪ್ಪ ನಮ್ಮ ಮನೆಯಿಂದ ಕೊಟ್ಟ ತುಪ್ಪ ಖಂಡಿತ ಅಲ್ಲ. ಅದನ್ನ ಎಲ್ಲಿಂದ ತಂದೆಯೋ ಅಲ್ಲಿ ಕೊಂಡುಹೋಗಿ ಕೊಡು. ಇದು ನಮ್ಮ ಮನೆಯ ತುಪ್ಪ ಅಲ್ಲವೇ ಅಲ್ಲ. ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಿಯೇನು.’ ಎಂದು ಅಬ್ಬರಿಸಿದಳು. ಅಮ್ಮನ ಪ್ರಾಮಾಣಿಕತೆಗೆ ಎದುರಾದ ಸವಾಲನ್ನು ಅಮ್ಮನೇ ಎದುರಿಸಿದ ಬಗೆ ಅದು. ಅಂದು ಮನೆಯ ಗಂಡಸರು ಮಾತಾಡಿದ್ದು ಕಡಿಮೆಯೇ. ಅಮ್ಮನ ಆ ಸಾತ್ವಿಕ ಸಿಟ್ಟಿಗೆ ಆತ ಮಣಿಯಲೇ ಬೇಕಾಯ್ತು. ಆತ ಬಾಟಲಿಯೊಂದಿಗೆ ಹಿಂದೆ ಹೋಗುವಾಗ ಅಮ್ಮ ಗದ್ಗದಿತಳಾಗಿ ಹೇಳಿದ ಮಾತು- ‘ಇನ್ನು ಮುಂದೆ ಹಾಲು ತುಪ್ಪಕ್ಕಾಗಿ ಈ ಮನೆಗೆ ಬರಬೇಡ.’ ಈ ಮಾತನ್ನು ಹೇಳಬೇಕಾಗಿ ಬಂದುದಕ್ಕೆ ಆಕೆ ಪಟ್ಟ ಸಂಕಟ ಅಷ್ಟಿಷ್ಟಲ್ಲ.

ಅಮ್ಮನಿಗೆ ದನದ ಹಾಲು ತುಪ್ಪದ ಕೆಲಸವೆಂದರೆ ಅದೊಂದು ರಿಚುವಲ್ . ಗೋವಿಗೆ ನಮಿಸಿ ಹಾಲನ್ನು ಕರೆದು ಬರುವಾಗ ತುಳುನಾಡಿನ ಸ್ಥಳೀಯ ನಂಬಿಕೆಯಂತೆ ಒಂದು ಎಲೆಯಲ್ಲಿ ಗುಳಿಗನಿಗೆ ಹಾಲನ್ನು ಇರಿಸಿ ತುಳಸಿಕಟ್ಟೆಗೆ ಬಲವಂದು ತುಳಸಿಗೂ ತುಸು ಹಾಲು ಹೊಯ್ದು ದೇವರಕೋಣೆಯಲ್ಲಿ ತಂದಿರಿಸಿದರೆ ಮತ್ತೆ ಅದನ್ನು ಕಾಸುವ ಪ್ರಕ್ರಿಯೆ. ಮಣ್ಣಿನ ಪಾತ್ರೆಯಲ್ಲಿ ಹಾಲನ್ನು ಸುರಿದು ಒಲೆಯನ್ನು ಶುಚಿಗೊಳಿಸಿ ಅದಕ್ಕೆಂದೇ ಮೀಸಲಾದ ಸೌಟಿನಲ್ಲಿ ಆಗಾಗ ತೊಳಸುತ್ತಾ ಕುದಿದು ಉಕ್ಕುತ್ತಿರುವಾಗ ಸ್ವಲ್ಪವೇ ನೀರು ಸಿಂಪಡಿಸಿ ಬಳಿಕ ಉರಿಯನ್ನು ಸಣ್ಣಮಾಡಿ ಒಲೆಯ ಬಾಗಿಲಿಗೆ ಒಂದಿಷ್ಟು ಭತ್ತದ ಉಮಿಯನ್ನು ಸುರುವಿ ಹಾಗೇ ಆ ಉಮಿಯ ಹದ ಬೆಂಕಿಯಲ್ಲಿ ಕೆನೆಗಟ್ಟಲು ಬಿಡುವುದು ಅದರ ರೀತಿ. ಮತ್ತೆ ಬೆಳಗ್ಗೆ ದೇವರ ಕೋಣೆಯಲ್ಲೇ ನಡೆಯುತ್ತಿದ್ದ ಮೊಸರು ಕಡೆಯುವ ಪ್ರಕ್ರಿಯೆ. ಅಲ್ಲೆ ಮೂಲೆಯಲ್ಲೇ ಹೂತ ಕಡೆಗೋಲು ಕಂಬದೆದುರು ಕೂತರೆ ಉದಯ ರಾಗಗಳನ್ನು ಹೇಳುತ್ತ ಶ್ರದ್ಧೆಯಿಂದ ಆ ಕೆಲಸವನ್ನು ಒಪ್ಪಕೆ ಮಾಡಿ ಮುಗಿಸುತ್ತಿದ್ದಳು.ಹಳೆಯ ಮಜ್ಜಿಗೆಯ ಹುಳಿನೀರನ್ನು ತೆಗೆದು ಅದಕ್ಕೆ ಹೊಸಮಜ್ಜಿಗೆಯ ಸ್ವಲ್ಪ ಭಾಗವನ್ನು ಸೇರಿಸಿ ಮಜ್ಜಿಗೆ ಹುಳಿವಾಸನೆ ಬರದಂತೆ , ಅದು ಕೆಡದಂತೆ ಜೋಪಾನ ಮಾಡುವ ಆ ಕ್ರಿಯೆ ಪಾರಂಪರಿಕವಾಗಿ ತಾಯಂದಿರಿಗೆ ಕರಗತವಾಗುತ್ತಿತ್ತು.ಫ್ರಿಜ್ ಎಲ್ಲ ಇಲ್ಲದ ಆ ಕಾಲದಲ್ಲಿ ಮಜ್ಜಿಗೆಯ ತಾಜಾ ಪರಿಮಳ ಸಿಗಬೇಕೆಂದರೆ ಈ ವಿಷಯದಲ್ಲಿ ಶ್ರದ್ಧೆ ಅಗತ್ಯವೇ ಇತ್ತು.

ಹೀಗೆ ಮಜ್ಜಿಗೆಯಲ್ಲಿ ಪ್ರತಿದಿನ ಶೇಖರಿಸಿಟ್ಟ ಬೆಣ್ಣೆ ಒಂದಿಷ್ಟು ಮೊತ್ತವಾದಾಗ ಆ ಬೆಣ್ಣೆಯನ್ನು ಉರುಳಿಯಲ್ಲಿ ಹಾಕಿ ಏಳು ಬಾರಿ ಶುದ್ಧ ನೀರಿನಲ್ಲಿ ತೊಳೆದು ಮಜ್ಜಿಗೆಯ ಅಂಶವನ್ನೆಲ್ಲ ತೆಗೆದು ಶುಚಿಗೊಳಿಸಿದ ಒಲೆಯ ಮೇಲೆ ಕಾಸಲಿಟ್ಟರೆ ಮನೆಯೆಲ್ಲ ಕಂಪು ಆವರಿಸುತ್ತಿತ್ತು. ಉರಿಸಣ್ಣಮಾಡಿ ಹದ ಪಾಕಕ್ಕೆ ಕಾದು ಮತ್ತೆ ಆರಿದ ಮೇಲೆ ಸೋಸಿ ಪಾತ್ರೆಯಲ್ಲಿ ತೆಗೆದಿಟ್ಟರೆ ಅದು ಮರಳು ಮರಳು ತುಪ್ಪವಾಗಿ ಮುಚ್ಚಳ ತೆಗೆದರೆ ಸಾಕು ಪರಿಮಳ ಘಮ್ಮೆಂದು ಆವರಿಸಿಕೊಳ್ಳುತ್ತಿತ್ತು. ಹಾಲು ಮಜ್ಜಿಗೆ , ತುಪ್ಪದ ಪಾತ್ರೆಗಳನ್ನು ಅಷ್ಠೇ ಶ್ರದ್ಧೆಯಿಂದ ಪ್ರತ್ಯೇಕವಾಗಿ ತೊಳೆದು ಬಿಸಿಲಿಗೆ ( ಮಳೆಗಾಲದಲ್ಲಿ ಒಲೆಕಟ್ಟೆಯಲ್ಲಿ) ಒಣಗಿಸಿ ಚೊಕ್ಕಟವಾಗಿ ಇಟ್ಟುಕೊಳ್ಳುವುದೂ ಈ ಎಲ್ಲ ಕಲಾಪಗಳ ಭಾಗವೇ. ಹಾಗಾಗಿಯೇ ಇಷ್ಟು ಶ್ರದ್ಧೆಯಿಂದ ತನ್ನ ಕೆಲಸವನ್ನು ಮಾಡುತ್ತಿದ್ದ ಅಮ್ಮನಿಗೆ ಆ ಘಟನೆ ತುಂಬ ಕೋಪವನ್ನೂ ಸಂಕಟವನ್ನೂ ತಂದಿತ್ತು. ಅಮ್ಮ ಇಲ್ಲವಾಗಿ ಇಷ್ಟು ವರ್ಷಗಳು ಕಳೆದ ಬಳಿಕವೂ ಅವಳ ಆ ಕೋಪದ ಮತ್ತು ಸಂಕಟದ ಮೋರೆ, ಅದರ ಜೊತೆಗೆ ಅವಳ ಕಾಯಕದ ಶ್ರದ್ಧೆ ನೆನಪಿಗೆ ಬಂದು ಮನಸ್ಸನ್ನು ತುಂಬುತ್ತದೆ.

-ಡಾ.ಮಹೇಶ್ವರಿ. ಯು, ಕಾಸರಗೋಡು

 

14 Comments on “ಅಮ್ಮ ಮತ್ತು ಒಂದು ತುಪ್ಪದ ಪ್ರಸಂಗ

  1. ಹೌದು, ಪ್ರಾಮಾಣಿಕರಿಗೆ ಮೋಸದ ಆರೋಪವನ್ನು ಖಂಡಿತಾ ಸಹಿಸಲಾಗಲ್ಲ. ಚೆನ್ನಾಗಿದೆ ಲೇಖನ

  2. ಅಜ್ಜಿ ,ಅಮ್ಮ ನಮಗೆ ಚಿಕ್ಕದಿರುವಾಗ ಹಾಲುಮಜ್ಜಿಗೆ ಇಡುವ ಹಲಗೆಯನ್ನು ಮುಟ್ಟಲೂ
    ಬಿಡುತ್ತಿರಲಿಲ್ಲ. ಅವರಿಗೆ ಅವೆಲ್ಲ ಪವಿತ್ರ. ಸಾತ್ವಿಕರ ಕೋಪ ತುಂಬ ಅಪರೂಪದ್ದು..ಪರಿಣಾಮಕಾರಿ.ನನ್ನ ಬಾಲ್ಯದ ಹಳ್ಳಿ ಮನೆ ,ಸಂಪ್ರದಾಯಗಳು ನೆನಪುಮಾಡಿಸಿದಿರಿ.ಧನ್ಯವಾದಗಳು.

  3. ನಿಮ್ಮ ಲೇಖನ ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು…ಹುಳಿ ಮಜ್ಜಿಗೆ ಕೊಂಡುಹೋಗಲೆಂದು ನಮ್ಮ ಮನೆಗೆ ಬರುವವರಿದ್ದರು. ಈಗಲೂ ಬರುತ್ತಾರೆ

  4. ನಿಮ್ಮ ಲೇಖನ ಓದಿ ನನಗೂ ನನ್ನ ಅಜ್ಜಿಯ ನೆನಪಾಯಿತು.ನಾನ್ ಎಳುವಾಗಲೇ ಅಜ್ಜಿಯ ಮೊಸರು ಕಡೇವ ಧ್ವನಿ,ಜೊತೆಯಲ್ಲಿ ಉದಯ ರಾಗ “ರಂಗ ನಾಯಕ ರಾಜೀವ ಲೋಚನ” ಎಂದು ಕೇಳುತ್ತಿತ್ತು. ನಿಮ್ಮ ಲೇಖನ ಓದಿ ಬಹಳ ಕುಶಿ ಆಯಿತು ಮೇಡಂ.

  5. ಮೊದಲನೆಯದಾಗಿ ಈ ಗ್ರೂಪಲ್ಲಿ ಉಳೋಡಿ ಮಹೇಶ್ವರಿಯನ್ನು ಕಂಡು ಸಂತೋಷವಾದುದರ ಜೊತೆಗೆ ಅವರ ಅಮ್ಮನ ಸಾತ್ವಿಕ ರೂಪವೂ ಬಿಂಬಿತವಾಯ್ತು.ನನ್ನ ಅಜ್ಜಿ, ನನ್ನಮ್ಮ ಇವರೆಲ್ಲರ ಹಾಲಿನ ಉತ್ಪನ್ನಗಳೂ ನೆನಪಿಗೆ ಬಂದುವು.

  6. ಮರೆತ ಸುಂದರ ಪ್ರಪಂಚವನ್ನು ನೆನಪಿಸುವಂತಹ ಬರಹ. ಇವತ್ತು ಕಡಗೋಲಿನ ಜಾಗ ಮಿಕ್ಸಿ ಆವರಿಸಿಕೊಂಡಿದೆ, ಆದರೂ ಮನದ ಮೂಲೆಯಲ್ಲೊಂದು ಕಡೆ ಹಳೆಯ ಮೊಸರು ಕಡೆಯುವ ಪದ್ಧತಿಯ ನೆನಪು ಇನ್ನೂ ಹಸಿರಾಗಿದೆ.

  7. ಲೇಖನ ಓದುತ್ತಾ ಬಾಲ್ಯದಲ್ಲಿ ನಮ್ಮ ಮೂಲಮನೆಯಲ್ಲಿ ನಾನು ಕಂಡ ದೃಶ್ಯಗಳು ನೆನಪಿಗೆ ಬಂದವು…ಕೊಟ್ಟಿಗೆ ತುಂಬಾ ದನಕರುಗಳು, ಅಜ್ಜಿ,ಅಮ್ಮ ಮಜ್ಜಿಗೆ ಕಡೆಯುವುದು, ತುಪ್ಪದ ತಯಾರಿ….ಮೊದಲಾದವುಗಳು….ಧನ್ಯವಾದಗಳು ಮೇಡಂ

  8. ಓದಿ ಮನಸಿಗೆ ಹಿತವಾಯಿತು. ಮೊಸರು ತಡೆಯುವ ಗೂಟ, ಮೊಸರು ಬೆಣ್ಣೆ ಪಾತ್ರೆ ಕಟ್ಟಿ ತೂಕಲು ಬಳ್ಳಿ.. ಈಗಲೂ ನೆನಪಾಗ್ತಿದೆ.ಯಾರೂ ತಿಳಿಯದಂತೆ ಅದರಿಂದ ಬೆಣ್ಣೆ ತಿನ್ನುತ್ತಿದ್ದ ಮಕ್ಕಳ ಸೈನ್ಯ ನಮ್ಮದು. ಪತ್ತೆ ಹಿಡಿದು ಪರಂಚುತ್ತಾ ಇದ್ದ ಅಜ್ಜಿ, ಕಂಡೂ ಕಾಣದಂತಿದ್ದ ಅಮ್ಮ.. ನೆನಪು ಹಸಿರು. ಧನ್ಯವಾದಗಳು ಮೇಡಂ

  9. ಅಹಾ…ಎಂತಹಾ ಆಪ್ತ ಬರಹ…ಮನಸ್ಸು ಬಾಲ್ಯಕ್ಕೆ ಹೋಗಿ, ಕಡೆಗೋಲಿನಲ್ಲಿ ಮೊಸರು ಕಡೆಯುತ್ತಿದ್ದ ಅಜ್ಜಿಯನ್ನು ಮಾತಾಡಿಸಿ ಬಂತು.

  10. ಚಂದದಬರಹ ಬಾಲ್ಯದನೆನಪಿಗೆ ಕೊಂಡೊಯ್ಯದಿರಿ ನಮ್ಮನ್ನೆಲ್ಲ ,ಧನ್ಯವಾದಗಳು ಅಕ್ಕ

  11. ಓದಿದ ಮತ್ತು ಪ್ರತಿಕ್ರಿಯೆ ನೀಡಿದ ಸುರಹೊನ್ನೆ ಬಳಗದ ಎಲ್ಲರಿಗೂ ನನ್ನ ಧನ್ಯವಾದಗಳು.

  12. ಸುಂದರ ಬರಹ. ಗತಕಾಲದ ನೆನಪಿನಲ್ಲಿ ತೇಲಿ ಹೋಗುವಂತಾಯಿತು..ಧನ್ಯವಾದಗಳು.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *