ಪುಸ್ತಕ-ನೋಟ

ಪುಸ್ತಕ ಪರಿಚಯ: ಹಿಮಾಲಯದ ಸನ್ನಿಧಿಯಲ್ಲಿ (ಪ್ರವಾಸ ಕಥನ)

Share Button

ಲೇಖಕಿ:- ರುಕ್ಮಿಣಿ ಮಾಲಾ
ಪ್ರಕಾಶಕರು:- ಗೀತಾಂಜಲಿ ಪಬ್ಲಿಕೇಷನ್ಸ್
ಪುಸ್ತಕದ ಬೆಲೆ :- 150 /-

ಪ್ರವಾಸ, ಚಾರಣ ಮನಸ್ಸಿಗೆ ಮುದ ನೀಡುವ ಸಂಗತಿಗಳು. ಇದು ನಮ್ಮ ದಿನನಿತ್ಯದ ಬದುಕಲ್ಲಿ ಒಂದು ಮಹತ್ತರವಾದ ಬದಲಾವಣೆಯನ್ನು ತಂದು ಉತ್ಸಾಹ ತುಂಬುವಂತಹ ವಿಚಾರವೂ ಹೌದು. ಈ ಪುಸ್ತಕಕ್ಕೆ ಎ.ಪಿ ಮಾಲತಿ ಅವರು ಬರೆದಿರುವ ಮುನ್ನುಡಿಯಲ್ಲಿ ರುಕ್ಮಿಣಿ ಮಾಲಾ ಅವರ ಸರಳ, ಸುಂದರ, ಸಾಹಸಮಯ ಪ್ರವೃತ್ತಿ ಪರಿಚಯವಾಗುತ್ತದೆ. ಪ್ರವಾಸದ ವಿಚಾರದಲ್ಲಿ ಅವರಿಗಿರುವ ಉತ್ಸಾಹ ಎಷ್ಟೆಂಬುದು ಅರಿವಾಗುತ್ತದೆ. ಜೊತೆಗೆ ಎಲ್ಲರಿಗೂ ತನ್ನಿಂದಾಗುವ ಸಹಾಯ ಹಸ್ತ ಚಾಚುವ ಪ್ರವೃತ್ತಿಯ ಪರಿಚಯವನ್ನು ಇಲ್ಲಿ ಕಾಣಬಹುದು.

ಕನಸಿನ ಲೋಕ ಇದ್ದ ಹಾಗೆ ಇದೆ ಇಲ್ಲಿ ಬರುವ ಸ್ಥಳಗಳು. ಇಲ್ಲಿ ಅರ್ಥವಾಗುವ ಒಂದು ಮುಖ್ಯ ವಿಚಾರ ಏನೆಂದರೆ ಪ್ರವಾಸ ಹೊರಡಲು ಬಹು ಮುಖ್ಯವಾಗಿ ಇರಬೇಕಾದದ್ದು ನಮ್ಮಲ್ಲಿ ಸಹನೆ ಹಾಗೂ ಹೊಂದಾಣಿಕೆಯ ಗುಣ.

ಮಾನಸ ಸರೋವರವನ್ನು ಇಲ್ಲಿ ಸುಂದರವಾಗಿ ಪದಗಳಲ್ಲಿ ಸೆರೆ ಹಿಡಿಯಲಾಗಿದೆ. ಇಲ್ಲಿ ನಮೂದಿಸಲ್ಪಟ್ಟ ಘಟನೆಗಳನ್ನು ಓದುವಾಗ ಎಲ್ಲರೊಡನೆ ಬೆರೆತು ಸಂತಸ ಪಡುವ ರುಕ್ಮಿಣಿ ಮಾಲಾ ಅವರ ವ್ಯಕ್ತಿತ್ವ ಬಹಳ ಇಷ್ಟವಾಗುತ್ತದೆ. ಕೈಲಾಸ ಪರ್ವತಕ್ಕೆ ಚಾರಣ ಶುರು. ನಡೆಯಲು ಕಷ್ಟಪಡುವ ಲೇಖಕಿ ತನ್ನ ಗಂಡ ಆಯಾಸದ ಯಾವ ಲಕ್ಷಣವನ್ನೂ ತೋರಗೊಡದೆ ಸಾಗುವುದನ್ನು ಕಂಡು ಆಶ್ಚರ್ಯ ಪಡುತ್ತಾರೆ. ಆದರೆ ಸಹ ಯಾತ್ರಿಕರೊಂದಿಗೆ ಅವರು ಏದುಸಿರು ಬರುತ್ತದೆ ಅಂತ ಹೇಳುವುದನ್ನು ಕೇಳಿ ಖುಷಿಪಟ್ಟುಕೊಂಡೇ ಅನ್ನುವ ಒಂದು ಹಾಸ್ಯ ಸನ್ನಿವೇಶ ನಗು ತರಿಸುತ್ತದೆ.

ಹಿಮಪಾತವಾಗುವ ಒಂದು ದೃಶ್ಯ. ಇದರ ವಿವರಣೆ ಓದುವಾಗ ಸಿನಿಮಾದಲ್ಲಿ ಕಂಡಂತೆ ದೃಶ್ಯಗಳು ಕಣ್ಣ ಮುಂದೆ ಬರುತ್ತವೆ. ಆದರೆ ಈ ಯಾತ್ರೆ ಕೈಗೊಳ್ಳಲು ಸದೃಢ ಆರೋಗ್ಯ ಬಹಳ ಮುಖ್ಯ ಅನ್ನುವುದು ಅರ್ಥವಾಗುತ್ತದೆ. ಪ್ರವಾಸ ಹೊರಟ ಮೇಲೆ ಅಲ್ಲಿನ ಎಲ್ಲಾ ಪರಿಸ್ಥಿತಿಗಳಿಗೂ ಹೊಂದಿಕೊಂಡು ಹೋಗುವುದು ಬಹಳ ಮುಖ್ಯ. ಪ್ರವಾಸ ಹೊರಟಾಗ ಸಾಮಾನ್ಯವಾಗಿ ಹೋಗುವವರು ಯಾವ ಎಲ್ಲ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಬೇಕಿದೆ ಅನ್ನೋದನ್ನು ಲೇಖಕಿ ಬಹಳ ಚೆನ್ನಾಗಿ ಹೇಳಿದ್ದಾರೆ ಇಲ್ಲಿ . ತಾಳ್ಮೆ ಇಲ್ಲಿ ಬಹಳ ಮುಖ್ಯ.

ನೇಪಾಳದ ಸ್ಥೂಲ ಪರಿಚಯದಲ್ಲಿ ರುಕ್ಮಿಣಿಮಾಲಾ ಅವರು ಅಲ್ಲಿಯ ಅವ್ಯವಸ್ಥೆಯ ಆಗರ ಗಳ ಬಗ್ಗೆ ಒಂದೆಡೆ ಉಲ್ಲೇಖಿಸಿದ್ದಾರೆ. ಇದೇ ವಿಚಾರವನ್ನು ಸಂತೋಷ್ ಮೆಹಂದಳೆಯವರ ಕೂಡ “ಇಷ್ಟು ವರ್ಷಗಳ ನಂತರವೂ ಅದೇ ಪರಿಸ್ಥಿತಿ ಮುಂದುವರಿದಿದೆ” ಅಂತ ಇತ್ತೀಚೆಗೆ ಒಂದೆಡೆ ಬರೆದಿದ್ದರು. ಇದರ ಅರ್ಥ ಕಾಲ ಎಷ್ಟೇ ಮುಂದುವರಿದಿದ್ದರೂ ಕೆಲವೆಡೆ ಯಾವ ಬದಲಾವಣೆಗಳೂ ಆಗದೇ ಎಲ್ಲವೂ ಇದ್ದ ಹಾಗೆಯೇ ಇರುತ್ತದೆ ಅನ್ನುವುದು. ಇಂತಹ ಪರಿಸ್ಥಿತಿಗೆ ಕಾರಣಗಳು ಹಲವು ಇರಬಹುದು. ನೇಪಾಳ, ಚಾರ್ಧಾಮ್ ಪ್ರವಾಸ ಮಾಡಬೇಕು ಎಂದು ಇದ್ದವರಿಗೆ ಈ ಪುಸ್ತಕದಲ್ಲಿ ಹಲವಾರು ಮಾಹಿತಿಗಳು ಲಭ್ಯ.

ರುಕ್ಮಿಣಿ ಮಾಲಾ ಅವರಿಗೆ ಹಿಮಾಲಯದ ಪ್ರವಾಸದಲ್ಲಿ ಆದ ಅನುಭವಗಳ ಹಾಗೂ ಸಾಕಷ್ಟು ಮಾಹಿತಿಗಳಿಂದ ಕೂಡಿದ ಪ್ರವಾಸ ಕಥನ “ಹಿಮಾಲಯದ ಸನ್ನಿಧಿಯಲ್ಲಿ”. ಓದಿ ಮುಗಿಸುವ ಹೊತ್ತಿಗೆ ಮನಸ್ಸಲ್ಲಿ ಪ್ರವಾಸ ಕೈಗೊಳ್ಳುವ ಇಚ್ಛೆ ಖಂಡಿತ ಮೂಡುತ್ತದೆ.

-ನಯನ ಬಜಕೂಡ್ಲು.
 

3 Comments on “ಪುಸ್ತಕ ಪರಿಚಯ: ಹಿಮಾಲಯದ ಸನ್ನಿಧಿಯಲ್ಲಿ (ಪ್ರವಾಸ ಕಥನ)

  1. ಪ್ರವಾಸ ಕಥನದ ವಿಮರ್ಶೆಯನ್ನು ಸಮರ್ಥವಾಗಿ ಪ್ರಸ್ತುತ ಪಡಿಸಿರುವಿರಿ …ಧನ್ಯವಾದಗಳು..ನಯನ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *