ಮೊದಲ ಶಾಲೆಯ ನೆನೆಯುತ್ತಾ…
“ಅಮ್ಮ ಫೋನ್ ಕೊಡು,ಆನ್ಲೈನ್ ಕ್ಲಾಸ್ ಶುರುವಾಗುತ್ತೆ”ಎಂದ ಮಗಳ ಕೈಗೆ ಫೋನ್ ನೀಡಿ,”ಚೆನ್ನಾಗಿ ನೋಡ್ಕೋ,ಮತ್ತೆ ಹೋಂ ವರ್ಕ್ ಮಾಡ್ಬೇಕಾದ್ರೆ ನನ್ನ ತಲೆ ತಿನ್ಬೇಡ” ಎಂದು ಎಚ್ಚರಿಸಿ,’ ಈ ಕೊರೋನ ಮಾರಿ ಕಾಟ ಯಾವಾಗ ತಪ್ಪುತ್ತೋ,ಯಾವಾಗ ಎಲ್ಲವೂ ಸಹಜ ಸ್ಥಿತಿಗೆ ಬರುವುದೋ’ ಎಂದು ಗೊಣಗುವಾಗ ಮತ್ತೆ ಮಗಳ ರಾಗ ಶುರುವಾಯಿತು.
“ಅಮ್ಮ ನೀನು ಬಂದು ಇಲ್ಲೇ ಕೂತ್ಕೋ,ಒಬ್ಬಳೇ ಕೂತ್ರೆ ಪಾಠ ಕೇಳೋಕೆ ಕೂತ್ಕೊಂಡ ಹಾಗೆ ಆಗೋದೇ ಇಲ್ಲ” ಎಂದು ಕೇಳಿದವಳಿಗೆ ಇಲ್ಲ ಎನ್ನಲು ಮನಸು ಬಾರದೆ ಹೋಗಿ ಕೂತೆ. ಕುಳಿತು ಒಂದತ್ತೂ ನಿಮಿಷವೂ ಆಗಿರಲಿಲ್ಲ ಪಾಠದಲ್ಲಿ ಆಸಕ್ತಿಯೆ ಹೊರಟು ಹೋಯಿತು. ಎಷ್ಟೇ ಚೆನ್ನಾಗಿ ಹೇಳುತ್ತಿದ್ದರೂ ಶಾಲೆಯ, ತರಗತಿಯ ವಾತಾವರಣ,ಸಹಪಾಠಿಗಳ ಒಡನಾಟ ಎಲ್ಲಕ್ಕಿಂತ ಮಿಗಿಲಾಗಿ ಗುರುಗಳ ಜೊತೆಗಿನ ಸಂವಹನ, ವಿದ್ಯಾರ್ಥಿಗಳೊಂದಿಗಿನ ಪರಸ್ಪರ ಸಂವಾದ,ಪ್ರಶ್ನೋತ್ತರಗಳ ವಿನಿಮಯ ಇವೆಲ್ಲವೂ ಇರುವ ಒಂದು ಜೀವಂತ ತರಗತಿ ಕೋಣೆಗೆ ಈ ಏಕಮುಖ ಸಂವಾದದ ಆನ್ಲೈನ್ ಕ್ಲಾಸ್ಗಳು ಸಾಟಿಯೇ ಅನಿಸಲಾರಂಭಿಸಿತು. ಲ್ಯಾಪ್ ಟಾಪ್ ಸೌಲಭ್ಯ ಇದ್ದು ದ್ವಿಮುಖ ಸಂವಾದದ ಅವಕಾಶ ಇರುವ ಆನ್ಲೈನ್ ಕ್ಲಾಸ್ಗಳು ಸ್ವಲ್ಪ ಉತ್ತಮವಿರಬಹುದೆನೋ, ಆದರೆ ಕೇವಲ ಸ್ಮಾರ್ಟ್ ಫೋನ್ ಮತ್ತು ಟಿವಿಯ ಕ್ಲಾಸ್ ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳಿಗೆ ಈ ತರಗತಿಗಳು ಸ್ವಲ್ಪ ನೀರಸವೆ.
ಶಾಲೆಯಲ್ಲಿ ಬರಿ ಪಾಠಗಳು ಕಲಿಯುವುದೇ ಆಗಿದ್ದರೆ ಬಹುಶಃ ಮಕ್ಕಳೆಲ್ಲಾ ಶಾಲೆಗೆ ಹೋಗಲು ಮುಷ್ಕರವನ್ನೇ ಹೂಡಿ ಬಿಡುತಿದ್ದರೇನೋ. ಶಾಲೆ ಎಂದರೆ ಪಾಠದ ಜೊತೆಗೆ ಆಟ, ಸ್ನೇಹಿತರ ಒಡನಾಟ, ಪ್ರೀತಿಯ ಶಿಕ್ಷಕರ ಜೊತೆಗಿನ ಸಂವಹನ,ಹಾಡು ಕುಣಿತ, ತರಲೆ ತುಂಟತನ ಕೊಡುವ ಮುದ, ವಾರ್ಷಿಕೋತ್ಸವದ ಹೊಸ ಕಾರ್ಯಕ್ರಮಗಳ ನಿರೀಕ್ಷೆ,ಪ್ರವಾಸ ಎಲ್ಲಿ ಹೋಗಬಹುದು ಎನ್ನುವ ಕುತೂಹಲ, ಹುಟ್ಟಿದ ಹಬ್ಬಕ್ಕೆ ಚಾಕೊಲೇಟ್ ಹಂಚುವ ಸಂಭ್ರಮ,ಶಾಲೆಗೆ ಕರೆದೊಯ್ಯುವ ಆಟೋ, ವ್ಯಾನ್ ಮಾಮಂದಿರೊಂದಿಗಿನ ಹರಟೆ ಇತ್ಯಾದಿ ಇತ್ಯಾದಿಗಳೆಲ್ಲ ಸೇರಿ ಆಗಿರುವ ಒಂದು ಜೀವಂತ ವ್ಯವಸ್ಥೆ. ಶಾಲೆ ಖಾಸಗಿಯಾಗಿರಲಿ ಇಲ್ಲವೇ ಸರ್ಕಾರಿಯಾಗಿರಲಿ ಮೇಲಿನವುಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸ್ವಲ್ಪ ಆಡಂಬರದ ಕಟ್ಟಡ, ವೇಷ ಭೂಷಣಗಳು ಕಂಡು ಬರಬಹುದು ಅದರಾಚೆ ಮಕ್ಕಳ ಮನಸ್ಥಿತಿಗಳಲ್ಲಿ ಅಂತಹ ವ್ಯತ್ಯಾಸ ಏನೂ ಕಾಣಿಸುವುದಿಲ್ಲ.
ಶಾಲೆ ಯಾವುದೇ ಇರಲಿ,ಭೌತಿಕ ಸೌಲಭ್ಯಗಳು ಏನೇ ಇರಲಿ ಗುರುವಿನ ಸ್ಥಾನವನ್ನು ಯಾವುದೇ ಯಂತ್ರ,ಕಂಪ್ಯೂಟರ್,ಸ್ಮಾರ್ಟ್ ಫೋನ್ ತುಂಬಲು ಸಾಧ್ಯವೇ ಇಲ್ಲ.ಉನ್ನತ ತರಗತಿಗಳಲ್ಲಿ ಪ್ರೌಢರಾಗಿರುವ ಮಕ್ಕಳು ಇವೆಲ್ಲವುಗಳ ಬಳಸಿಕೊಂಡು ಸ್ವಯಂಕಲಿಕೆ ಮಾಡಬಹುದೇನೋ, ಆದರೆ ಪ್ರಾಥಮಿಕ ಹಂತದಲ್ಲಿ ಗುರುವಿನ ಮಾನವೀಯ ಸ್ಪರ್ಶವಿಲ್ಲದ ಕಲಿಕೆ ನನ್ನ ಪ್ರಕಾರವಂತು ಅಪೂರ್ಣವೇ ಸರಿ.ಪ್ರಾಥಮಿಕ ಹಂತದಲ್ಲಿ ಮಕ್ಕಳ ಮನಸಿನಲ್ಲಿ ಉಳಿಯುವ ಗುರುಗಳನ್ನು ಅವರು ಜೀವನ ಪೂರ್ತಿ ನೆನೆಯುತ್ತಾರೆ. ಯಾರನ್ನೇ ಆಗಲಿ ನಿಮ್ಮ ಪ್ರೀತಿಯ ಮೇಷ್ಟ್ರು ಟೀಚರ್ ಯಾರು ಅಂತ ಕೇಳಿ ನೋಡಿ ಥಟ್ ಎಂದು ಮೊದಲು ಬರುವುದು ಅವರ ಪ್ರೈಮರಿ ಸ್ಕೂಲ್ ಟೀಚರ್ಗಳ ಹೆಸರೇ. ನನಗಂತೂ ನನ್ನ ಹದಿನಾರು ವರ್ಷಗಳ ಶಾಲಾ ಕಾಲೇಜು ಜೀವನದಲ್ಲಿ ಹಲವಾರು ಆದರ್ಶ ,ಉತ್ತಮ ಗುರುಗಳು ಸಿಕ್ಕಿರುವುದು ನನ್ನ ಅದೃಷ್ಟ. ಅದರಲ್ಲೂ ನಾನು ಮೊದಲು ನೆನೆಯುವುದು ನನ್ನ ಮೊದಲ
ಗುರುಗಳಾದ ಶ್ರೀ ಶಿವರಾಂ ಸರ್ ಅವರನ್ನೇ.
ನಾನು ಶಾಲೆಗೆ ಸೇರುವ ಕಾಲದಲ್ಲಿ ಶಾಲೆ ಎಂದರೆ ಸರ್ಕಾರಿ ಶಾಲೆಯೇ. ಅಲ್ಲದೆ ನಾವಿದ್ದ ಊರು ಭದ್ರಾವತಿ ಒಂದು ಸಣ್ಣ ಪಟ್ಟಣವಾಗಿದ್ದು, ಕಾನ್ವೆಂಟ್ಗಳ ಸಂಖ್ಯೆ ಬಹಳ ಕಡಿಮೆ ಇತ್ತು. ಜೊತೆಗೆ ಕಾನ್ವೆಂಟ್ ಗಳಿಗೆ ಸೇರೋದು ಶ್ರೀಮಂತರ ಮಕ್ಕಳು ಮಾತ್ರ ಅನ್ನುವ ಮನೋಭಾವ ಬೇರೆ. ಅಲ್ಲದೇ ಕನ್ನಡ ಲೇಖಕ ರಾಗಿದ್ದ ನಮ್ಮಪ್ಪನಿಗೆ ಮಕ್ಕಳು ಪ್ರಾರಂಭದ ಕಲಿಕೆ ಕನ್ನಡದಲ್ಲೇ ಕಲಿಯಲಿ ಅನ್ನುವ ಆಸೆ. ಹಾಗಾಗಿ ನಾನು ಮತ್ತೆ ನನ್ನಣ್ಣ ಸೇರಿದ್ದು ನಮ್ಮ ಮನೆಯ ಎದುರಲ್ಲೇ ಇದ್ದ ಒಂದೇ ಒಂದು ದೊಡ್ಡ ಕೋಣೆಯ, ಒಬ್ಬರೇ ಒಬ್ಬ ಶಿಕ್ಷಕರಿದ್ದ, ಒಂದರಿಂದ ಮೂರನೇ ತರಗತಿಯವರೆಗೆ ಮಾತ್ರ ಕಲಿಸಲಾಗುತ್ತಿದ್ದ ಒಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ. ಮನೆಗೆ ತುಂಬಾ ಹತ್ತಿರವಿದ್ದ ಆ ಶಾಲೆಯ ಕಿಟಕಿಯಿಂದ ನಮ್ಮ ಮನೆ ಬಾಗಿಲು ಕಾಣುತ್ತಿತ್ತು. ಜೊತೆಗೆ ಸ್ವಲ್ಪ ಜಗುಲಿ ಮೇಲೆ ನಿಂತು ಕತ್ತು ಎತ್ತರಿಸಿ ನೋಡಿದರೆ ನಾವು ಮಣೆಯ ಮೇಲೆ ಕುಳಿತಿರುವುದು ನಮ್ಮಮ್ಮನಿಗೆ ಕಾಣುತಿತ್ತು. ಹಾಗಾಗಿ ಚಿಕ್ಕ ಮಕ್ಕಳು ಹೋಗಿ ಬರಲು ತುಂಬಾ ಸುಲಭವಾಗಿದೆ ಅನ್ನೋ ಕಾರಣಕ್ಕೆ ಆ ಶಾಲೆಗೆ ಸೇರಿಸಿದರು.
ನಮ್ಮಮ್ಮ ಹಾಗೂ ಅಪ್ಪನಿಗೆ ನಾವು ಒಟ್ಟು ಮೂರು ಜನ ಮಕ್ಕಳು ನಾನು ನನ್ನಣ್ಣ ಮತ್ತು ತಮ್ಮ. ಮೂರು ಜನ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟವೆಂದು ನನ್ನನ್ನು ಒಂದೆರಡು ವರ್ಷ ನಮ್ಮೂರಿನಲ್ಲಿ ನಮ್ಮಜ್ಜಿ ಮನೆಯಲ್ಲಿ ಬಿಟ್ಟಿದ್ದರು. ನನಗೆ ಐದು ವರ್ಷ ತುಂಬಿದ ಬಳಿಕ ಒಂದು ಜೂನ್ ತಿಂಗಳಿನಲ್ಲಿ ಮನೆಗೆ ಕರೆದು ಕೊಂಡು ಬಂದರು. ನಮ್ಮಣ್ಣಾ ಆಗಲೇ ಶಾಲೆಗೆ ಸೇರಿ ಮೂರನೇ ತರಗತಿಯಲ್ಲಿದ್ದ. ಆದರೆ ನನಗೆ ಊರಿನಿಂದ ಬಂದ ಹೊಸತರಲ್ಲಿ ಅಪ್ಪ ,ಅಮ್ಮ, ಅಣ್ಣ ,ತಮ್ಮ ಎಲ್ಲ ಹೊಸಬರೇ ಅನ್ನಿಸುತ್ತಿದ್ದರು. ಶಾಲೆ ಅಂದರೇನು ಗೊತ್ತೇ ಇರಲಿಲ್ಲ. ನಮ್ಮಣ್ಣ ಶಾಲೆಗೆ ಹೋಗುವುದನ್ನು ನೋಡಿದ್ದು ಇಲ್ಲ.
ಹೀಗಿರುವಾಗ ಊರಿನಿಂದ ಬಂದ ಮಾರನೇ ದಿನವೇ, ನಮ್ಮಮ್ಮ ಬೆಳ ಬೆಳಗ್ಗೆ ನನಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ಹಾಕಿ, ಚೆನ್ನಾಗಿ ರೆಡಿ ಮಾಡಿ ನನ್ನ ಹಾಗೂ ಅಣ್ಣನ ಕೈ ಹಿಡಿದುಕೊಂಡು ಮನೆಯ ಎದುರಿಗೆ ಇದ್ದ ಶಾಲೆಗೆ ಕರೆದುಕೊಂಡು ಹೋಗಿ, ಆಗಲೇ ಸಾಕಷ್ಟು ಪರಿಚಯವಿದ್ದ ಮೇಷ್ಟ್ರಿಗೆ ನನ್ನ ಪರಿಚಯಿಸಿ ದಾಖಲಾತಿ ಮಾಡಿ,ನಂತರ ನನ್ನನ್ನು ಮಣೆಯ ಮೇಲೆ ಕೂರಿಸಿ ಹೊರಟು ಹೋದರು.
ಅಲ್ಲಿಯವರೆಗೆ ಸುಮ್ಮನೆ ಅಮ್ಮನ ಜೊತೆ ಎಲ್ಲೋ ಬಂದಿದ್ದೇನೆ ಅಂದುಕೊಂಡಿದ್ದ ನನಗೆ ಅಮ್ಮ ಇದ್ದಕ್ಕಿದ್ದಂತೆ ಬಿಟ್ಟು ಹೋಗಿದ್ದು ನೋಡಿ ಅಳುವೇ ಬಂದು ಬಿಟ್ಟಿತ್ತು. ನನ್ನ ಹಾಗೆ ಹೊಸದಾಗಿ ಒಂದನೇ ತರಗತಿಗೆ ಸೇರಿದ್ದವರಲ್ಲಿ ಹಲವರು ಬಿಕ್ಕಳಿಸುತ್ತಲೋ, ದುಸುಗರೆಯುತ್ತಲೋ, ಇಲ್ಲವೇ ಮೌನವಾಗಿ ಅಳು ನುಂಗುತ್ತಲೋ ಕುಳಿತಿದ್ದರು.ಅಣ್ಣ ಮನು ಎಲ್ಲಿ ಎಂದು ಹುಡುಕಿದರೆ ಅವನಾಗಲೆ ತನ್ನ ಪುಸ್ತಕ ಪೆನ್ಸಿಲ್ ತೆಗೆದು ಪಾಠ ಬರೆಯುತ್ತ ಕೂತಿದ್ದ. ಇನ್ನು ನಮ್ಮ ಮೇಷ್ಟ್ರು ಮಕ್ಕಳನ್ನೆಲ್ಲ ತರಗತಿಗಳಿಗೆ ಅನುಗುಣವಾಗಿ ಮೂರು ಬೇರೆ ಬೇರೆ ಗುಂಪು ಗಳಲ್ಲಿ ಕೂರಿಸಿ ಎರಡು ಮೂರನೇ ತರಗತಿಗಳ ಮಕ್ಕಳಿಗೆ ಏನೋ ಬರೆಯಲು ಹೇಳಿ ನಂತರ ಒಂದನೇ ತರಗತಿ ಮಕ್ಕಳ ಪರಿಚಯಿಸಿ ಕೊಳ್ಳಲು ತೊಡಗಿದರು.
ಆಗಲೇ ಅವರು ನನ್ನ ಗಮನಕ್ಕೆ ಬಂದಿದ್ದು. ಅವರು ಆಗಲೇ ನಿವೃತ್ತಿಯ ಹತ್ತಿರ ಬಂದಿದ್ದು, ಎತ್ತರವಾಗಿ, ನಸುಗಪ್ಪಗೆ, ಬಕ್ಕತಲೆಯ, ನಗುಮೊಗದ, ಕಚ್ಚೆ ಪಂಚೆ ಜುಬ್ಬಾ ಧರಿಸಿದ್ದ, ಕನ್ನಡಕ ಧಾರಿಯಾದ ಅವರು ನನಗಂತೂ ನಮ್ಮ ಊರಿನ ಯಾರೋ ಒಬ್ಬ ತಾತನಂತೆಯೇ ಅನಿಸಿಬಿಟ್ಟರು. ಪರಿಚಯ ಮಾಡಿಕೊಳ್ಳುವ ನನ್ನ ಸರದಿ ಬಂದಾಗ “ನೀನು ಮನು ತಂಗಿಯಲ್ಲವ ಪುಟ್ಟಿ, ಏನು ನಿನ್ನ ಹೆಸರು” ಎಂದಾಗ,ನಾನು ಒಂದರೆಕ್ಷಣ ಅವರ ಮುಖವನ್ನೇ ನೋಡಿ ನಂತರ “ತಾತ ನಾನು ಮನೆಗೆ ಹೋಗ್ಬೇಕು, ಅಮ್ಮನ್ನ ಹತ್ರ ಹೋಗ್ಬೇಕು” ಎಂದು ಗಟ್ಟಿಯಾಗಿ ಅಳಲು ಪ್ರಾರಂಭಿಸಿದಾಗ ಉಳಿದ ಎಲ್ಲಾ ಮಕ್ಕಳು “ತಾತ” ಅನ್ನೋ ಪದ ಕೇಳಿ ಗೊಳ್ ಎಂದು ನಗಲು ಪ್ರಾರಂಭಿಸಿದರು.
ಮೇಷ್ಟ್ರು ತಾವೂ ನಗುತ್ತ “ತಾತ ಅಲ್ಲ ಮರಿ, ಸಾರ್ ಅನ್ಬೇಕು, ನಾನು ನಿಮ್ಮ ಮೇಷ್ಟ್ರು” ಅನ್ನುತ್ತಾ,”ಬಾ ಇಲ್ಲಿ,ನೀನು ಜಾಣ ಮರಿ ಅಲ್ವಾ,ಚೆನ್ನಾಗಿ ಓದು ಬರಹ ಕಲಿ ಬೇಕಲ್ವಾ” ಅನ್ನುತ್ತಾ, ತಮ್ಮ ಟೇಬಲ್ ಹತ್ತಿರ ನಿಲ್ಲಿಸಿಕೊಂಡು “ನೋಡು ನಾನು ಬರೆದ ಹಾಗೆ
ಬರೀಬೇಕು” ಅನ್ನುತ್ತಾ ನನ್ನಣ್ಣನ ಬಳಿ ನನ್ನ ಸ್ಲೇಟ್ ತರಿಸಿ ಕೊಂಡು “ಅ” ಅಕ್ಷರ ಬರೆದು ನಂತರ ನನ್ನ ಕೈ ಹಿಡಿದು ತಿದ್ದಿಸಿದರು. ಹಾಗೆ ಶುರುವಾದ ಕಲಿಕೆ ದಿನ ಕಳೆದಂತೆಲ್ಲ ಇಷ್ಟ ವಾಗುತ್ತಾ ಹೋಯಿತು. ಅಕ್ಷರಗಳನ್ನ ಮೊದಲು ಕಲಿಸುವಾಗ ಕನ್ನಡ ಅಕ್ಷರಗಳಲ್ಲಿ ಚಿತ್ರ ವಿಚಿತ್ರ ಚಿತ್ರಗಳನ್ನ ಮಾಡಲು ತೋರಿಸಿ ಕೊಟ್ಟು ಬಲು ಬೇಗ ನಮಗೆ ಕನ್ನಡ ವರ್ಣ ಮಾಲೆಯ ಪರಿಚಯ ಮಾಡಿಸಿಬಿಟ್ಟರು. ಇ ಅಕ್ಷರದ ಇಲಿ, ಬ ಅಕ್ಷರದ ಬಾತು, ಊ ಅಕ್ಷರದ ಹಾವು ಎಲ್ಲಾ ಇನ್ನೂ ನೆನಪಿವೆ.
ಶಾಲೆ ಒಂದೇ ಒಂದು ರೂಮಿನ,ಮಕ್ಕಳಿಗೆ ಕೂರಲು ಮಣೆಗಳಿದ್ದ, ಪೀಠೋಪಕರಣ ಅಂದ್ರೆ ಕೇವಲ ಒಂದು ಟೇಬಲ್, ಒಂದು ಕುರ್ಚಿ, ಒಂದು ಅಲ್ಮೇರ ಮಾತ್ರವಿದ್ದ ,ಆದರೆ ಗೋಡೆಯ ಮೂರು ಬದಿ ಮೂರು ತರಗತಿಗಳಿಗಾಗಿ ಮೂರು ಕಪ್ಪು ಹಲಗೆಗಳಿದ್ದ ಒಂದು ಚಿಕ್ಕ ಸರಳ ಶಾಲೆ. ತಮ್ಮ ತಮ್ಮ ತರಗತಿಗಳಿಗೆ ಅಂತ ಇದ್ದ ಕಪ್ಪು ಹಲಗೆ ಇರುವ ಗೋಡೆ ಕಡೆ ಆಯಾ ತರಗತಿ ಮಕ್ಕಳು ಮುಖ ಹಾಕಿ ಕುಳಿತು ಕೊಳ್ಳಬೇಕಿತ್ತು. ಮೇಷ್ಟ್ರು ಸರದಿಯಂತೆ ಪ್ರತಿ ತರಗತಿಯ ಕರಿಹಲಗೆ ಬಳಿ ನಿಂತು ಕಲಿಸುತಿದ್ದರು. ಚಿಕ್ಕ ತರಗತಿಗಳು, ಕಡಿಮೆ ಮಕ್ಕಳು, ಹಾಗಾಗಿ ಪ್ರತಿಯೋರ್ವ ವಿದ್ಯಾರ್ಥಿಗೂ ಗಮನ ಕೊಡಲು ಸಾಧ್ಯವಾಗುತಿತ್ತು. ಇನ್ನು ನಮ್ಮ ತಾತ ಮೇಷ್ಟ್ರು ಮುಖ ಗಂಟು ಹಾಕಿಕೊಂಡದ್ದು, ಮಕ್ಕಳಿಗೆ ಬೈದಿದ್ದು, ಹೊಡೆದಿದ್ದದ್ದು ಕಡಿಮೆಯೇ.
ಶಾಲೆಯಲ್ಲಿ ಒಬ್ಬರೇ ಮೇಷ್ಟ್ರು ಎಲ್ಲಾ ವಿಷಯಗಳ ಕಲಿಸುವುದರ ಜೊತೆಗೆ ಸಹ ಪಠ್ಯದ ಎಲ್ಲಾ ಚಟುವಟಿಕೆಗಳನ್ನು ಅವರೇ ಹೇಳಿಕೊಡಬೇಕು. ಹಾಗಾಗಿ ನಮ್ಮ ಮೇಷ್ಟ್ರು ಒಬ್ಬ ಸಕಲ ಕಲಾವಲ್ಲಭ ಅಂದರೆ ತಪ್ಪಾಗದು. ಚಿತ್ರ ಬರೆಯುವುದು,ರಂಗೋಲಿ ಹಾಕುವುದು, ಪ್ರಾರ್ಥನೆ ಹೇಳುವುದು,ಶನಿವಾರದ ಮಾಸ್ ಪಿ.ಟಿ ಎಲ್ಲವನ್ನೂ ಅವರಿಗೆ ತಿಳಿದ ಮಟ್ಟಿಗೆ ಚೆನ್ನಾಗಿಯೇ ಹೇಳಿಕೊಟ್ಟರು. ಪ್ರತಿ ಶನಿವಾರ ಕಡ್ಡಾಯವಾಗಿ ಮಕ್ಕಳ ಉಗುರು, ಹಲ್ಲು ತಲೆಗೂದಲ ಪರೀಕ್ಷೆ ನಡೆಯುತಿತ್ತು .ಉಗುರು ಕತ್ತರಿಸದವರು ಮೇಷ್ಟ್ರು ಹತ್ತಿರ ಬರುವಷ್ಟರಲ್ಲಿ ಹಲ್ಲಲ್ಲೇ ಕಟ್ ಕಟ್ ಎಂದು ಕತ್ತರಿಸಿ ಕೊಂಡ್ರು ಮೇಷ್ಟ್ರಿಗೆ ಗೊತ್ತಾಗಿ ಬಿಡುತ್ತಿತ್ತು. ಅವರಿಗೆ ಸರಿಯಾಗಿ ಉಗುರು ಗಿಣ್ಣಿಗೆ ಏಟು ಬೀಳುತ್ತಿತ್ತು.
ಹಾಗಂತ ನಮ್ಮ ಮೇಷ್ಟ್ರು ವಿಪರೀತ ಶಿಸ್ತಿನವರೂ ಏನೂ ಆಗಿರಲಿಲ್ಲ.ಬೆಳಗಿನ ಅವಧಿಯಲ್ಲಿ ಪಾಠ ಎಲ್ಲಾ ಮುಗಿಸಿ ಮಧ್ಯಾಹ್ನದ ಅವಧಿಯಲ್ಲಿ ಮಗ್ಗಿ ಹೇಳಿಸುವುದು,ಕಥೆ ಹೇಳಿಸುವುದೂ, ಹಾಡು ಹೇಳಿಸುವುದು ಮಾಡಿಸುತ್ತಿದ್ದರು.ನಮ್ಮ ಪುಸ್ತಕ ಸ್ಲೇಟ್ಗಳನ್ನೂ ತಿದ್ದುವಾಗ ನಾವೆಲ್ಲಾ ಅವರ ಟೇಬಲ್ ಸುತ್ತವೇ ನಿಂತಿರುತಿದ್ದೆವು .ಆಗ ಮೇಷ್ಟ್ರ ಹತ್ತಿರ ಹೇಳದೇ ಇದ್ದ ವಿಷಯಗಳೇ ಇಲ್ಲ. ಮನೆಯಲ್ಲಿ ಮಾಡಿದ್ದ ಅಡಿಗೆಯಿಂದ ಹಿಡಿದು, ಮನೆಗೆ ಬಂದಿದ್ದ ನೆಂಟರು, ಮಾಡಿದ ಹಬ್ಬ ಹರಿದಿನಗಳು, ಸಾಕಿರೋ ಪ್ರಾಣಿಗಳು, ಆಡಿರೋ ಆಟಗಳು,ಎಲ್ಲದರ ವರದಿ ತಾಳ್ಮೆಯಿಂದ ನಸುನಗುತ್ತಾ ಕೇಳಿಸಿ ಕೊಳ್ಳುವಾಗ,’ ನಾವು ಚಿಕ್ಕವರು ನಮ್ಮ ಮಾತಿಗೇನು ಬೆಲೆ ಕೊಡುವುದು’ ಅನ್ನೋ ಉದಾಸೀನ ತೋರದೆ ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಮಧ್ಯೆ ಮಧ್ಯೆ ಏನಾದರೂ ಕೆದಕಿ ಮಕ್ಕಳನ್ನು ಕಿಚಾಯಿಸುತ್ತ ಇರುತಿದ್ದ ಮೇಷ್ಟ್ರಿಗೆ ತಮ್ಮ ಎಲ್ಲಾ ವಿದ್ಯಾರ್ಥಿಗಳ ಮನೆಯವರ ಪರಿಚಯ ಚೆನ್ನಾಗಿಯೇ ಆಗಿ ಹೋಗುತ್ತಿತ್ತು.
ನಾವು ಮಕ್ಕಳು ಚಿಕ್ಕವರಾಗಿದ್ದರೂ ನಮ್ಮ ಕುಚೇಷ್ಟೆಗಳಿಗೇನು ಕಮ್ಮಿ ಇರಲಿಲ್ಲ. ಹಾಗೆ ಇದ್ದವರಲ್ಲಿ ರಾಮ ಲಕ್ಷ್ಮಣ ಎಂಬ ಇಬ್ಬರು ಅವಳಿ ಮಕ್ಕಳಿಗೆ ತಂದೆ ಇಲ್ಲದೆ ಕೇವಲ ತಾಯಿ ಮಾತ್ರ ಇದ್ದು, ಆ ಅಮ್ಮ ಪಾಪ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದು, ಮಕ್ಕಳ ಕಡೆ ಗಮನ ಕೊಡಲು ಅಷ್ಟು ಸಮಯ ಸಾಲದೆ ಅವರಿಬ್ಬರೂ ಕಲಿಕೆಯಲ್ಲಿ ಸ್ವಲ್ಪ ಹಿಂದೆಯೇ. ಆದರೆ ಅಸಾಧ್ಯ ಕಿತಾಪತಿ ಮಕ್ಕಳು. ಒಂದು ದಿನ ಬೆಳಿಗ್ಗೆ ಎಂದಿನಂತೆ ಮೇಷ್ಟ್ರು ಬೆಳಿಗ್ಗೆ ಹಾಜರಿ ಕರೆದ ಬಳಿಕ “ಎಲ್ರೂ ನಿಮ್ ಪುಸ್ತಕ ತೆಗೀರಿ” ಎಂದಾಗ, ಎಲ್ಲಾ ಮಕ್ಕಳು ತಮ್ಮ ತಮ್ಮ ಕನ್ನಡ ಪುಸ್ತಕ ತೆಗೆದು ಕೂತರೂ ಇವರಿಬ್ಬರೂ ಸುಮ್ಮನೆ ಇದ್ದಿದ್ದು ನೋಡಿ “ಎಲ್ರೋ ನಿಮ್ಮ ಪುಸ್ತಕ” ಎಂದರೆ ಏನೂ ಮಾತನಾಡದೆ ಸುಮ್ಮನೆ ಇದ್ದರು. ಸಾಕಷ್ಟು ಪುಸಲಾಯಿಸಿದ ಬಳಿಕ ರಾಮ ಮೆಲ್ಲನೆ “ಅದು ನಮ್ಮಮ್ಮ ಬುಕ್ಕು ಒಲೆಗೆ ಹಾಕೋಕೆ ಹೇಳಿದ್ಲು ಅದಕ್ಕೆ ಹಾಕ್ದೋ” ಎಂದಾಗ ಮೇಷ್ಟ್ರಿಗೆ ಅಚ್ಚರಿಯೋ ಅಚ್ಚರಿ. ನಂತರ ಸಮಾಧಾನ ತಂದುಕೊಂಡು “ನಾಳೆ ನಿಮ್ಮಮ್ಮನನ್ನು ಶಾಲೆಗೆ ಕರೆದುಕೊಂಡು ಬನ್ನಿ” ಎಂದು ಅವರ ಬಳಿ ಹೇಳಿ ಕಳಿಸಿದರು.
ಮಾರನೇ ದಿನ ಶಾಲೆಗೆ ಬಂದ ಅವರಮ್ಮನನ್ನು ವಿಷಯವೇನೆಂದು ಕೇಳಿದಾಗ ಆ ಹೆಂಗಸು ತಲೆ ತಲೆ ಚಚ್ಚಿಕೊಳ್ಳುತ್ತ “ಅಯ್ಯೋ ಮೇಷ್ಟ್ರೇ ಮೊನ್ನೆ ಸಾಯಂಕಾಲ ನಾನು ಪುಸ್ತಕ ತೆಗೆದು ಓದಿಕೊಳ್ರಿ ಅಂತ ಎಷ್ಟು ಹೇಳಿದ್ರೂ ಕೇಳದೆ ಬರಿ ಆಟವಾಡಿಕೊಂಡಿದ್ದರು. ನನಗೂ ಹೇಳಿ ಹೇಳಿ ಸಾಕಾಗಿ ಓದದಿದ್ದ ಮೇಲೆ ಪುಸ್ತಕ ಯಾಕೆ ನಿಮಗೆ, ತೆಗೆದು ಒಲೆಗೆ ಹಾಕಿ ಅಂತ ಬೈದು ಅಡಿಗೆ ಮಾಡೋಕ್ಕೆ ಹೋದೆ. ಇವು ಯಾವ ಮಾಯದಲ್ಲಿ ನೀರೋಲೆಗೆ ಪುಸ್ತಕ ಹಾಕಿದ್ವೋ ಗೊತ್ತಿಲ್ಲ” ಅಂತ ಕಣ್ಣೀರುಗರೆಯುತ್ತನಿಂತಳು. ಆ ಹೆಂಗಸಿಗೆ ಸಮಾಧಾನ ಹೇಳಿ ಕಳಿಸಿ, ಬಳಿಕ ರಾಮಲಕ್ಷ್ಮಣರನ್ನು ಹತ್ತಿರ ಕರೆದು ಚೆನ್ನಾಗಿ ಕಿವಿ ಹಿಂಡಿ ಬುದ್ಧಿ ಹೇಳಿ ಆಮೇಲೆ ಅವರಿಗೆ ಬೇರೆ ಪುಸ್ತಕ ದೊರಕಿಸಿ ಕೊಟ್ಟಿದ್ದರು.
ಇನ್ನೊಬ್ಬ ಹುಡುಗ ಅಜ್ಜಿ ಮನೆಯಲ್ಲಿದ್ದು ಓದಲು ಬಂದಿದ್ದವನು ಒಂದೆರಡು ದಿನ ಒಂದನೇ ತರಗತಿಯಲ್ಲಿ ಕೂತಿದ್ದವನು ನಂತರ ಇದ್ದಕ್ಕಿದ್ದಂತೆ ಒಂದು ದಿನ ಮಧ್ಯಾಹ್ನ ಮೇಷ್ಟ್ರು ಕಣ್ಣು ತಪ್ಪಿಸಿ ಎದ್ದು ಮನೆಗೆ ಓಡಿ ಹೋಗಿಬಿಟ್ಟ. ಮೇಷ್ಟ್ರು ಫೈಲ್ ಆಗಿ ಆಗಿ ಮೂರನೇ ತರಗತಿಗೆ ಮೂರು ವರ್ಷಗಳಿಂದ ಮಣ್ಣು ಹೊರುತಿದ್ದ ಇಬ್ಬರು ದೊಡ್ಡ ಹುಡುಗರನ್ನು ಅವನ ಹಿಂದೆಯೇ ಕರೆದುಕೊಂಡು ಬರಲು ಕಳಿಸಿದರು. ಅವರಿಬ್ಬರೂ ಆ ಹುಡುಗನ ಕರೆಯಲು ಹೋದಾಗ ಅವ್ರಜ್ಜನೂ ಜೊತೆಗೆ ಬಂದು “ಏನ್ ಮಾಡೋದು ಮೇಷ್ಟ್ರೇ” ಬಡ್ಡಿವು ಬರಿ ಬರ್ಕೊಂಡು ಕೂತಿರ್ ತವೆ, ಯಾವೂ ಮಾತಾಡ್ ಸಕ್ಕಿಲ್ಲ, ಅದುಕ್ಕೆ ಕುರಿನಾರ ಹೊಲದ ತಕ್ಕೆ ಬುಟ್ಕೊಂಡ್ ಹೋಗಾನ ಅಂತ ಬಂದೆ” ಅಂದ್ಕೊಂಡು ಬಂದ್ ಬಿಟ್ಟವನೆ. ಇದು ಅವ್ರ ಹಳ್ಳಿಯಲ್ಲ ಅಂತ ಅವನಿಗೆ ಇನ್ನೂ ಗೊತ್ತಾಗಿಲ್ಲ” ಅಂತ ನಕ್ಕರು. ಅಂತೂ ಆ ಹುಡುಗ ಹೆಚ್ಚು ದಿನ ನಮ್ಮ ಶಾಲೆಯಲ್ಲಿ ನಿಲ್ಲದೆ ತನ್ನ ಹಳ್ಳಿಗೆ ಮರಳಿ ಹೊರಟು ಹೋದ.
ಕಲಿಯಲು ಹುಷಾರಿದ್ದ ನಾನು ಬಹು ಬೇಗ ಮೇಷ್ಟ್ರ ಪಟ್ಟ ಶಿಷ್ಯೆಯಾಗಿ ಮೂರನೇ ತರಗತಿಗೆ ಬಂದಾಗ ಕ್ಲಾಸ್ ಮಾನಿಟರ್ ಕೂಡ ಆಗಿಬಿಟ್ಟೆ. ಬೋರ್ಡ್ ವರೆಸುವುದು,ತಿದ್ದಲು ಪುಸ್ತಕ ಸ್ಲೇಟ್ ಗಳನ್ನು ಕಲೆ ಹಾಕಿ ಟೇಬಲ್ ಮೇಲೆ ಇಡುವುದು, ಗಲಾಟೆ ಮಾಡೋ ಮಕ್ಕಳ ಹೆಸರು ಬರೆಯುವುದು ಇತ್ಯಾದಿ ಬೇರೆ ವಿದ್ಯಾರ್ಥಿಗಳಿಗಿರದ ಕೆಲವು ವಿಶೇಷ ಸೌಲಭ್ಯ ಗಳು ನನಗಿದ್ದವು. ಅವುಗಳಲ್ಲಿ ನನಗೆ ಅತ್ಯಂತ ಪ್ರಿಯವಾದ್ದು ಒಂದು ಮರದ ಅಲ್ಮೆರ ತುಂಬಾ ಇದ್ದ ಮಕ್ಕಳ ಕಥೆಗಳ ಪುಸ್ತಕಗಳು ಓದಲು ಸಿಕ್ಕಿದ್ದು.ಮೇಷ್ಟ್ರು ಕೊಟ್ಟಹಾಗೆಲ್ಲಾ ಓದಿ ಮುಗಿಸಿ ಮಾರನೇ ದಿನ ತರಗತಿಯಲ್ಲಿ ಕಥೆ ಹೇಳಬೇಕಾಗಿತ್ತು. ಓದುವ ಹುಚ್ಚು ಶುರುವಾಗಿದ್ದೇ ಆಗ.
ಆದರೆ ಆಗ ಸಹಪಾಠಿಗಳ ಹೊಟ್ಟೆಕಿಚ್ಚಿಗೂ ನಾ ಪಾತ್ರಳಾಗಬೇಕಾಯಿತು . ಅದರಲ್ಲೂ ನನ್ನ ಮೇಲೆ ಚಾಡಿ ಹೇಳುವುದರಲ್ಲಿ ಅನಿಲ ಸುನೀಲ ಎನ್ನುವ ಇಬ್ಬರು ಅಣ್ಣ ತಮ್ಮಂದಿರು ಯಾವಾಗಲೂ ಮುಂದು. ಆಗ ಪ್ರತಿದಿನ ಮಧ್ಯಾಹ್ನ ಮೊದಲ ತರಗತಿಯಲ್ಲಿ ಮಗ್ಗಿ ಕಡ್ಡಾಯವಾಗಿ ಸ್ಲೇಟ್ನಲ್ಲಿ ಬರೆದು ತೋರಿಸಬೇಕಿತ್ತು. ನಾನು ಬೇಗ ಬೇಗ ಬರೆದು ಕುಳಿತೆ. ನನ್ನ ಪಕ್ಕ ಕುಳಿತಿದ್ದ ಅನಿಲ ತನ್ನ ಸ್ಲೇಟ್ ವರೆಸುವವನಂತೆ ಮಾಡುತ್ತಲೆ ನನ್ನ ಮಗ್ಗಿ ತಪ್ಪಾಯಿತು ಕಣೇ.ಮತ್ತೆ ಬರೀಬೇಕು, ನೀನು ಬರೆದು ಬಿಟ್ಟಿದ್ದಿ, ನಿನ್ನ ನೋಡಿ ನನ್ನ ಸ್ಲೇಟ್ ನೋಡಿದ್ರೆ ಮೇಷ್ಟ್ರು ಇನ್ನೂ ಬರೆದಿಲ್ಲ. ಅಂತಾರೆ, ಹೊಡಿತಾರೆ ಕಣೇ, ನೀನು ವರೆಸಿಬಿಟ್ಟು ಮತ್ತೆ ಬರಿಯೆ ಆಗ ಇಬ್ರೂ ಒಟ್ಟಿಗೆ ಬರೆದ ಹಾಗೆ ಆಗುತ್ತೆ. ನಂಗೆ ಏಟು ಬೀಳೊಲ್ಲಾ” ಅಂದಿದ್ದಕ್ಕೆ ನನಗೆ ಪಾಪ ಅನ್ನಿಸಿ “ಆಗ್ಲೀ ಕಣೋ” ಅಂತ ಹೇಳಿ ನಾನು ಬರೆದಿದ್ದು ಅಳಿಸುವವರೆಗೆ ಸುಮ್ಮನಿದ್ದ ಆತ ನಂತರ “ಟಣ” ಅನ್ನುತ್ತಾ ತನ್ನ ಸ್ಲೇಟ್ ನ ಇನ್ನೊಂದು ಬದಿ ತೋರಿಸಿದರೆ ಅಲ್ಲಿ ಆತನ ಮಗ್ಗಿ ಇದೆ!
ನನಗೆ ಅಳು ಸಿಟ್ಟು ಎರಡೂ ಒಟ್ಟಿಗೆ ಉಕ್ಕಿ ಬಂದು ಅವನ ಬೆನ್ನಿಗೆ ಒಂದು ಗುದ್ದಿದರೂ ಇನ್ನೂ ಹಲ್ಲು ಕಿರಿಯುತ್ತಲೆ ಇದ್ದ ಅವನು ” ಮೇಷ್ಟ್ರು ಕರೀತೀನಿ” ಅಂತ ಬೇರೆ ಹೆದರಿಸಿದ.”ಇರಲಿ ಬಿಡು,ಮತ್ತೆ ಬೇಗ ಬೇಗ ಬರೀತಿನಿ”ಅಂದು ಕೊಂಡು,ಮೇಷ್ಟ್ರು ಎಲ್ಲಾ ಮಕ್ಕಳ ಮಗ್ಗಿ ನೋಡಿ ತಿದ್ದಿ ನನ್ನ ಕರೆಯುವಷ್ಟರಲ್ಲಿ ಬರೆದು ಮುಗಿಸಿದೆ. ನನ್ನ ಮತ್ತು ಅನಿಲನನ್ನು ಒಟ್ಟಿಗೆ ಕರೆದ ಮೇಷ್ಟ್ರು ನನ್ನ ಮಗ್ಗಿ ನೋಡಿ ಸರಿಯಿದೆ ಎಂದು ಹೇಳಿ ನಂತರ ಅನಿಲನ ಸ್ಲೇಟ್ ನೋಡಿದವರು “ನಿಂಗೆ ಎಷ್ಟು ಸರಿ ಹೇಳ್ಕೊಡದಪ್ಪ, ಬರೀ ತಪ್ಪು, ಮತ್ತೆ ಬರಿ, ಬರೆದ ಮೇಲೆ ಇವಳಿಗೆ ತೋರಿಸು, ನೀನೇ ಅವನ ಮಗ್ಗಿ ತಿದ್ದು ಬಿಡಪ್ಪ” ಎಂದಾಗ ಅನಿಲನ ಮುಖ ನೋಡಬೇಕಿತ್ತು.
ಶಾಲೆಯಲ್ಲಿ ಪಾಠ ಮುಗಿದ ಮೇಲೆ ಹೋಂವರ್ಕ್ ಅಂತಾ ಏನೂ ಇರುತ್ತಿರಲಿಲ್ಲ, ಮನೆಗೆ ಹೋದ ಮೇಲೆ ಬ್ಯಾಗ್ ಎಸೆದು ಆಟ ಆಡಲು ಹೊರ ಹೋದರೆ ಇನ್ನು ಮನೆ ಸೇರುತ್ತಿದ್ದು ಚೆನ್ನಾಗಿ ಕತ್ತಲಾದ ಮೇಲೆಯೇ. ಹಾಗಂತ ಹೇಳಿ ನಮ್ಮ ಶಾಲೆಯಲ್ಲಿ ಓದಲು ಬರೆಯಲು ಬರದೆ ಇದ್ದವರು ಬಹಳ ಕಡಿಮೆಯೇ ಎಲ್ಲೋ ಒಬ್ಬರು ಇಬ್ಬರು ಮಾತ್ರ ವರ್ಷದಲ್ಲಿ ಫೈಲ್ ಆಗುತಿದ್ದರು. ನನಗೆ ನೆನಪಿರುವಂತೆ ಮೂರನೇ ಕ್ಲಾಸ್ ಮುಗಿಯುವಷ್ಟರಲ್ಲಿ ನಾನು ನಮ್ಮಣ್ಣ ಚೆನ್ನಾಗಿ ಪತ್ರಿಕೆ ಗಳನ್ನು,ಅಪ್ಪನ ಲೈಬ್ರರಿಯಲ್ಲಿದ್ದ ಎಷ್ಟೋ ಕಥೆ ಪುಸ್ತಕಗಳನ್ನು ಓದಲು ಕಲಿತಿದ್ದೆವು. ಊರಿಗೆ ಕಾಗದ ಬರೆಯುವುದು,ಮನೆಯ ರೇಷನ್ ಪಟ್ಟಿ, ಅಪ್ಪನ ಲೇಖನಗಳ ಹಸ್ತ ಪ್ರತಿ ತಯಾರಿಸುವುದು ಎಲ್ಲಾ ಸರಾಗವಾಗಿ ಮಾಡುತ್ತಿದ್ದೆವು. “ಅದರ ಕ್ರೆಡಿಟ್ ಎಲ್ಲ ನಮ್ಮ ಮೇಷ್ಟ್ರಿಗೆ ಸೇರಬೇಕು” ಅಂತ ನಮ್ಮಪ್ಪ ಯಾವಾಗಲೂ ಹೇಳೋರು.
ವರ್ಷದಲ್ಲೊಮ್ಮೇ ಟೂರ್ ಅಂತೂ ಕಡ್ಡಾಯ ಕರೆದು ಕೊಂಡು ಹೋಗುತ್ತಿದ್ದರು.ಟೂರ್ ಅಂದ್ರೆ ದೊಡ್ಡ ಪ್ರವಾಸಿ ತಾಣಗಳಲ್ಲ, ಭದ್ರಾವತಿಯ ಆಸುಪಾಸು ಇದ್ದ ಚಿಕ್ಕ ಚಿಕ್ಕ ಪ್ರೇಕ್ಷಣೀಯ ಸ್ಥಳಗಳು.ಪಾರ್ಕುಗಳು,ಹೊಯ್ಸಳ ಶೈಲಿಯ ನರಸಿಂಹ ದೇವಸ್ಥಾನ, ಭದ್ರಾ ಜಲಾಶಯ,ತುಂಗಾ ಭದ್ರಾ ಸಂಗಮದ ಕೂಡ್ಲಿ,ಭದ್ರಗಿರಿ ದೇವಸ್ಥಾನ, ಇಂಥವೇ ಸುಲಭವಾಗಿ ಬಸ್ನಲ್ಲೆ ಹೋಗಿ ಬರಬಹುದಾದ, ಪೋಷಕರಿಗೂ ಹೊರೆ ಅನ್ನಿಸದ ಚಿಕ್ಕ ಚಿಕ್ಕ ಟೂರ್ ಗಳು. ಇನ್ನು ರಾಷ್ಟ್ರೀಯ ಹಬ್ಬಗಳಲ್ಲಿ ಶಾಲೆಯಲ್ಲಿ ದ್ವಜ ಸ್ಥಂಬ ಇರದ ಕಾರಣ ಅಲ್ಲೇ ಹತ್ತಿರದಲ್ಲಿದ್ದ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮನ್ನೆಲ್ಲ ನಡೆಸಿ ಕೊಂಡು ಹೋಗಿ, ದ್ವಜಾರೋಹಣ, ಪಥ ಸಂಚಲನ ಎಲ್ಲಾ ತೋರಿಸಿ ಕೊಂಡು ಬರುತ್ತಿದ್ದರು.ರಸ್ತೆಯಲ್ಲಿ ನಡೆದು ಕೊಂಡು ಹೋಗುವಾಗ ಎಲ್ಲರೂ ಸಾಲಾಗಿ ನಡೀಬೇಕು, ರಸ್ತೆ ದಾಟುವಾಗ ಎಡ ಬಲ ನೋಡಿ ಹೇಗೆ ದಾಟಬೇಕು ಎಲ್ಲ ಶಿಸ್ತಿನಿಂದ ಹೇಳಿಕೊಟ್ಟು ಕರೆದುಕೊಂಡು ಹೋಗಿ ಬರೋರು.
ಶಾಲೆಯ ಇನ್ನೊಂದು ದೊಡ್ಡ ಸಂಭ್ರಮ ಎಂದರೆ ವರ್ಷದ ಕೊನೆಯ ದೊಡ್ಡ ಪರೀಕ್ಷೆಗೆ ಮುಂಚೆ ನಡೆಸುತ್ತಿದ್ದ ಶಾರದಾ ಪೂಜೆ. ಅವತ್ತು ಇದ್ದ ಒಂದು ಕೋಣೆಯನ್ನೆ ಚೆನ್ನಾಗಿ ಗುಡಿಸಿ ಒರೆಸಿ ನಮ್ಮ ಪುಸ್ತಕಗಳನ್ನೇ ಅಚ್ಚುಕಟ್ಟಾಗಿ ವೇದಿಕೆ ಹಾಗೆ ಜೋಡಿಸಿ, ಶಾರದಮ್ಮನ ಪಟ ಇಟ್ಟು, ಹೂ ಹಣ್ಣು ಗಳಿಂದ ಅಲಂಕರಿಸಿ ಶ್ರದ್ದೆಯಿಂದ ಪೂಜೆ ಮಾಡೋರು.ಚರ್ಪು ಅಂತ ಮನೆಯಿಂದಲೇ ಪುಳಿಯೋಗರೆ, ಕಡ್ಲೆ ಹಿಟ್ಟು, ಕರಬೂಜಾದ ರಸಾಯನ ಎಲ್ಲಾ ಮಕ್ಕಳಿಗೂ ಮಾಡಿ ತರೋರು. ಇನ್ನು ಪರೀಕ್ಷೆ ಮುಗಿಸಿ ಏಪ್ರಿಲ್ 10 ರಂದು ಫಲಿತಾಂಶ ಘೋಷಿಸಿ,ರಜೆ ಘೋಷಿಸಿ ಶಾಲೆಗೆ ಬೀಗ ಹಾಕುವ ಮುನ್ನ, ಎಲ್ಲಾ ಮಕ್ಕಳು ಹೋದ ಮೇಲೆ ಗುಟ್ಟಾಗಿ ನನ್ನೊಬ್ಬಳನ್ನೆ ಕರೆದು “ನೋಡು ಮರಿ,ರಜೆಯಲ್ಲಿ ಇದೆಲ್ಲ ಪುಸ್ತಕ ನೀನು ಓದಬೇಕು “ಅಂತ ಹೇಳಿ ಅಮರ ಚಿತ್ರ ಕಥೆಗಳ ಒಂದು ದೊಡ್ಡ ಕಟ್ಟನ್ನೆ ಕೈಗಿಟ್ಟ ನಮ್ಮ ತಾತ ಮೇಷ್ಟ್ರನ್ನು ನಾ ಮರೆಯಲಾದೀತೆ.
ಮೂರನೇ ಕ್ಲಾಸ್ ವರೆಗೆ ಮಾತ್ರ ಇದ್ದ ಆ ಶಾಲೆಯನ್ನು ಮೂರನೇ ಕ್ಲಾಸು ಪಾಸಾದ ನಂತರ ಬಿಟ್ಟು ಬೇರೆ ಶಾಲೆ ಸೇರಿದರೂ, ಮನೆ ಬಾಗಿಲಲ್ಲೇ ಇದ್ದ ಶಾಲೆಯಾದ್ದರಿಂದ ಮೇಷ್ಟ್ರು ಆಗಾಗ ಕಾಣಸಿಗೋರು. ಆದರೆ ನಾನು ಆ ಶಾಲೆ ಬಿಟ್ಟ ಒಂದೆರಡು ವರ್ಷಗಳಲ್ಲೇ ಮೇಷ್ಟ್ರು ನಿವೃತ್ತರಾದ್ದರಿಂದ ಅವರ ಸಂಪರ್ಕ ತಪ್ಪಿಹೋಯಿತು. ನಂತರ ಎಷ್ಟೋ ವರ್ಷಗಳ ಬಳಿಕ ನಾವು ಹೊಸದಾಗಿ ಸೇರಿದ ಕ್ವಾರ್ಟರ್ಸ್ ಮನೆಯ ಸಾಲಿನ ಕೊನೆಯ ಮನೆ ಅವರದು ಎಂದು ಗೊತ್ತಾದಾಗ ಆದ ಕುಶಿ ಅಷ್ಟಿ ಷ್ಟಲ್ಲ.ಒಮ್ಮೆ ಅಪ್ಪನ ಜೊತೆ ಹೋಗಿ ಮಾತನಾಡಿಸಿದಾಗ ಅವರಿಗೆ ಆಗಲೇ ಸಾಕಷ್ಟು ವಯಸ್ಸಾಗಿತ್ತು. ವಯೋಸಹಜ ಮರೆವಿನ ಕಾರಣ ಅವರಿಗೆ ನನ್ನ ನೆನಪು ಆಗದೇ ಇದ್ದರೂ ಬಹಳ ವಿಶ್ವಾಸದಿಂದ ಮಾತನಾಡಿಸಿ, ನನ್ನ ತಲೆ ಮೇಲೆ ಕೈ ಇರಿಸಿ ಹರಸಿ ಕಳಿಸಿ ಕೊಟ್ಟರು.
ಈಗ ನಾನು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ನಮ್ಮ ಮೇಷ್ಟ್ರು ಮಕ್ಕಳೊಂದಿಗೆ ಹೊಂದಿದ್ದಂತಹ ಆತ್ಮೀಯ ಬಾಂಧವ್ಯ,ಸಂಪರ್ಕ ಸಾಧಿಸಲು ನನ್ನಿಂದ ಸಾಧ್ಯವಾದರೆ ನಾನು ಶಿಕ್ಷಕಿಯಾದದ್ದು ಸಾರ್ಥಕ ಅಂದುಕೊಳ್ಳುತ್ತೇನೆ.
-ಸಮತಾ.ಆರ್
ಸುಂದರ ಸಕಾಲಿಕ ಬರಹ ಸಮತಾ
Very beautiful
Lekhana thumba chennagide
ಪ್ರಸ್ತುತ ಸಂದರ್ಭವೂ ಸೇರಿ ಬಾಲ್ಯದ ಪುನರ್ ಮನನ ಆಯಿತು. ಲೇಖನ ಓದಿ ನಮ್ಮ ಬಾಲ್ಯ, ಪ್ರಾಥಮಿಕ ಶಿಕ್ಷಣ, ಗುರು ಸೇವೆ, ನೆನಪಾಯಿತು.
ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ ಸಮತಾ.
Awesome Samathaji
Super
Ee baraha namma shala dinagalannu nenapisitu thank you
ಸಮತಾಜೀ ಅಮೋಘ ಬರವಣಿಗೆ..ತಮ್ಮ ಬರಹದ ಶೈಲಿ ಓದುಗರನ್ನು ಮನಸೂರೆ ಗೊಳಿಸುವಲ್ಲಿ ಯಶಸ್ವೀ ಯಾಗಿದೆ ಎಂಬಲ್ಲಿ ಎರಡು ಮಾತಿಲ್ಲ…keep it up…
ತಮ್ಮ ಬರಹದ ಸಿಹಿಯನ್ನು ಹೀಗೆ ಉಣಬಡಿಸಿ ನಮ್ಮ ಮನವನ್ನು ಸಂತೃಷ್ಟ್ ಗೊಳಿಸಿ…
ಇತಿ ತಮ್ಮ ಸಹಪಾಠಿ…
ಮೀರಾ ಜಾನ್
ನನಗೆ ಮೊದಲು ಅಕ್ಷರ ಕಲಿಸಿದ ಪೊನ್ನಮ್ಮ ಟೀಚರ್, ಹಾಗು ಎಲ್ಲ ಟೀಚರ್ಸ್ ನೆನಪಿಗೆ ಬಂತು ಸಮತಾ ಮೇಡಮ್. ನಿಮ್ಮ ಬಾಲ್ಯದ ನೆನಪುಗಳನ್ನು ಅಕ್ಷರಗಳಾಗಿ ಪೋಣಿಸಿ ಅರ್ಥಗರ್ಭಿತವಾದ ನಿಮ್ಮ ಬರಹಕ್ಕೆ ನಾನು ಚಿರಋಣಿ.
Good article Samatha keep writing
Very well written Samatha, keep it up.
ಸುಂದರ ನೆನಪುಗಳ ಸರಮಾಲೆ. ಮೊಬೈಲ್, ಟಿವಿ ಗಳಲ್ಲಿ ನಡೆಯುವ ಆನ್ಲೈನ್ ಕ್ಲಾಸ್ ಗಳನ್ನು ಮಕ್ಕಳು ಇಷ್ಟ ಪಡ್ತಿಲ್ಲ. ಸ್ವಲ್ಪ ಹೊತ್ತು ನೋಡಿ ಎದ್ದು ಹೋಗ್ತಾರೆ. ನೀವು ಹೇಳಿದ ಹಾಗೆ ಶಾಲೆಗಳಲ್ಲಿ ಪಾಠ ಮಾತ್ರವಲ್ಲದೆ ಪಠ್ಯೇತರ ಚಟುವಟಿಕಗಳೇ ಮಕ್ಕಳ ಮನಸ್ಸನ್ನು ಸೆಳೆಯುವುದು.
Thank you madam.. you have been reading all my articles and appreciating…such encouragement is needed for a new writer like me
Very nice
ಬರಹ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂದಿನ ಮಕ್ಕಳಿಗೆ ಇಂತಹ ಅನುಭವ ಇರುವುದಿಲ್ಲ. ಅನುಭವವಿರಲಿ, ಇಂತಹ ಲೇಖನ ಓದುವ ಹವ್ಯಾಸ ಹಾಗು ಆಸಕ್ತಿಯೂ ಇರುವುದಿಲ್ಲ. ದಯವಿಟ್ಟು ಕನ್ನಡದ ಲೇಖನ ದೊಂದಿಗೆ, ವೈಜ್ಞಾನಿಕ ಲೇಖನಗಳು ಬರುವಂತಾಗಲಿ.
Vry nice article Samatha
SUPER ಬರಹ
ನಮ್ಮೆಲ್ಲರ ಬಾಲ್ಯವನ್ನು ನೆನಪಿಸುವ ಬರಹ ತುಂಬಾ ಚೆನ್ನಾಗಿದೆ.. ಸವಿ ನೆನಪಲ್ಲಿ ಕಳೆದುಹೋಗುವಂತೆನಿಸಿತು…
Thank you madam
Very beautiful article. Thank you for bringing back the memories of childhood. Hat’s off to your style of delivering the memories and experiences. Keep it up. Sorry for reading lately
Wonderful article
Thank you all